. ಜನರನ್ನು ಒಳಗೊಳ್ಳುವ ಅಭಿವೃದ್ಧಿ : ಅವಕಾಶಗಳು

ಈಗಾಗಲೆ ತಿಳಿಸಿರುವಂತೆ ಅಭಿವೃದ್ಧಿಯು ತನ್ನಷ್ಟಕ್ಕೆ ತಾನು ಜನರನ್ನು ಒಳಗೊಳ್ಳುವುದು ಸಾಧ್ಯವಿಲ್ಲ. ಅದಕ್ಕೆ ಅಂತಹ ಗುಣವಿರುವುದಿಲ್ಲ. ಅದು ಸಾಮಾನ್ಯವಾಗಿ ಕೆಲವು ಪ್ರಶಸ್ತ ಪ್ರದೇಶಗಳಲ್ಲಿ, ಕೆಲವು ಪ್ರತಿಷ್ಟಿತ ಸಾಮಾಜಿಕ ಗುಂಪುಗಳಲ್ಲಿ, ಮತ್ತು ಪುರುಷವರ್ಗದಲ್ಲಿ ಮಡುಗಟ್ಟಿಕೊಳ್ಳುವ ಪ್ರವೃತ್ತಿ ಹೊಂದಿರುತ್ತದೆ. ಈ ಬಗೆಯ ಪ್ರವೃತ್ತಿಯಿಂದ ಅಭಿವೃದ್ಧಿಯನ್ನು ಜನರನ್ನು ಒಳಗೊಳ್ಳುವಂತೆ ಮಾಡುವುದು ಸುಲಭವಲ್ಲ. ಇದೊಂದು ಸವಾಲು. ಈ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳ ಬೇಕಾಗುತ್ತದೆ. ಈ ಸಂಗತಿಯನ್ನು ಇಲ್ಲಿ ಚರ್ಚಿಸಲಾಗಿದೆ.

ಜನರನ್ನು ಒಳಗೊಳ್ಳುವ ಅಭಿವೃದ್ಧಿ ನೀತಿ

ಮೊಟ್ಟಮೊದಲನೆಯದಾಗಿ ಸರ್ಕಾರವು ತನ್ನ ಸದ್ಯದ ಅಭಿವೃದ್ಧಿ ನೀತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ತನ್ನ ಅಭಿವೃದ್ಧಿ ನೀತಿಯನ್ನಾಗಿ ಘೋಷಿಸಿಕೊಳ್ಳಬೇಕಾಗುತ್ತದೆ. ಕೇವಲ ಅಭಿವೃದ್ಧಿ ಮಾತ್ರ ಸರ್ಕಾರದಿಂದ ನೀತಿಯಾದರೆ ಸಾಕಾಗುವುದಿಲ್ಲ. ಅದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ನೀತಿಯಾಗಬೇಕು. ಅಂದರೆ ಸರ್ಕಾರದ ಪ್ರತಿಯೊಂದು ಅಭಿವೃದ್ಧಿ ಕಾರ್ಯತಂತ್ರ, ಕಾರ್ಯಕ್ರಮದ ಒರೆಗಲ್ಲು ‘ಅದು ಜನರನ್ನು, ಅಂದರೆ ಎಲ್ಲ ಜನವರ್ಗವನ್ನೂ, ಎಲ್ಲ ಪ್ರದೇಶಗಳನ್ನೂ ಒಳಗೊಳ್ಳುತ್ತಿದೆಯೇ’ ಎಂಬುದಾಗಿರಬೇಕು ಅಭಿವೃದ್ಧಿ ನೀತಿಯು ಜನರನ್ನು ಒಳಗೊಳ್ಳುವ ರೀತಿಯಲ್ಲಿದ್ದು ಬಿಟ್ಟರೆ ಅಲ್ಲಿ ಅದನ್ನು ಸಾಧಿಸಿಕೊಳ್ಳಲು ಅವಕಾಶ ದೊರೆಯುತ್ತದೆ.

ಹನ್ನೊಂದನೆಯ ಯೋಜನೆಯ ಗುರಿ

ಜನರನ್ನು ಒಳಗೊಳ್ಳುವ ಅಭಿವೃದ್ಧಿಯೆಂಬುದನ್ನು ಈಗ ಸರ್ಕಾರವು ಹನ್ನೊಂದನೆಯ ಯೋಜನೆಯ ಗುರಿಯನ್ನಾಗಿ ಘೋಷಿಸಿದೆ. ಇದೊಂದು ಅವಕಾಶ. ಸಮಾಜದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದ ಒಡಕುಗಳನ್ನು ಸರಿಪಡಿಸಿಕೊಳ್ಳಲು ಅಲ್ಲಿ ಅವಕಾಶವಿದೆ. ಸಮಾಜದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನೇಕ ಬಗೆಯ ಒಡಕುಗಳಿವೆ. ಅದು ಪುರುಷ – ಮಹಿಳೆಯರ ನಡುವಿನ ಅಸಮಾನತೆಯಿರಬಹುದು, ಅಥವಾ ನಗರ – ಗ್ರಾಮೀಣ ನಡುವಿನ ಒಡಕು ಇರಬಹುದು. ಕೃಷಿ – ಕೈಗಾರಿಕೆಗಳ ನಡುವಿನ ಅಂತರವಿರಬಹುದು ಅಥವಾ ಪ್ರಾದೇಶಿಕ ಅಸಮಾನತೆಯಿರಬಹುದು. ಈ ಬಗೆಯ ಅಸಮಾನತೆಗಳನ್ನು, ಅಂತರಗಳನ್ನು, ಒಡಕುಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ಕರ್ನಾಟಕವು ತನ್ನ ಅಭಿವೃದ್ಧಿ ನೀತಿಯನ್ನು ಮರುರೂಪಿಸಿಕೊಳ್ಳಬೇಕಾಗುತ್ತದೆ. ಅಭಿವೃದ್ಧಿಯೆಂಬುದನ್ನು ಕೇವಲ ವರಮಾನವನ್ನು ಹೆಚ್ಚಿಸಿಕೊಳ್ಳುವ ದಿಶೆಯಲ್ಲಿ ನಿರ್ವಹಿಸುವ ಅಗತ್ಯವಿಲ್ಲ. ಅದು ಬೇಕು. ಅದಕ್ಕಿಂತ ಅಧಿಕವಾಗಿ ಏರಿಕೆಯಾದ ವರಮಾನವು ಜನರ ಬದುಕಾಗಿ ಪರಿವರ್ತನೆಗಾಗಬೇಕು. ಅದು ಜನರ ಅಕ್ಷರವಾಗಬೇಕು. ಅದು ಜನರ ಆರೋಗ್ಯವಾಗಬೇಕು. ಜನರ ಆಹಾರ ಭದ್ರತೆಯಾಗಬೇಕು. ಆಗ ಮಾತ್ರ ಅದು ಜನರನ್ನು ಒಳಗೊಳ್ಳುವಂತಾಗುತ್ತದೆ.

ರಾಜಕೀಯ ಶಿಕ್ಷಣ

ಜನರನ್ನು ಒಳಗೊಳ್ಳುವ ಅಭಿವೃದ್ಧಿಯೆಂಬುದು ರಾಜಕೀಕರಣಗೊಳ್ಳಬೇಕು. ಅದಕ್ಕೆ ಇಲ್ಲಿ ಸಾಕ್ಷರತೆಯ ಪ್ರಮಾಣವನ್ನು ಅಧಿಕಗೊಳಿಸಬೇಕು. ಸಾಕ್ಷರತೆಯನ್ನು ಅಧಿಕಗೊಳಿಸದೆ, ಇಲ್ಲಿ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸದೆ, ಜನರನ್ನು ರಾಜಕೀಯವಾಗಿ ಸಂಘಟಿಸದೆ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡುವುದು ಸಾಧ್ಯವಿಲ್ಲ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಮುಖ್ಯ ಸಮಸ್ಯೆಯೆಂದರೆ ಅಲ್ಲಿ ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಜನರು ಅಪಾರ ಸಂಖ್ಯೆಯಲ್ಲಿದ್ದಾರೆ. ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಸಾಕ್ಷರತೆಯ ಪ್ರಮಾಣವು ಅಧಿಕವಾಗಿರಬೇಕು. ವರಮಾನದಲ್ಲಿ ದೇಶವೊಂದು ಮಹಾಶಕ್ತ ರಾಷ್ಟ್ರವಾಗಿ ಬಿಟ್ಟರೆ ಸಾಕಾಗುವುದಿಲ್ಲ. ಅಲ್ಲಿ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿರುವ ನ್ಯೂನ್ಯ ಪೋಷಣೆಯ ಸಮಸ್ಯೆಯನ್ನು ಮೊದಲು ನಿವಾರಿಸಿಕೊಳ್ಳಬೇಕು. ಕರ್ನಾಟಕದಲ್ಲಿ ಪ್ರತಿವರ್ಷ ಸರಿಸುಮಾರು 37000 ಎಳೆ ಶಿಶುಗಳು ಅಸು ನಿಗುತ್ತಿವೆ. ಅಂದರೆ ಪ್ರತಿ ದಿನ ಸುಮಾರು ನೂರು ಶಿಶುಗಳು ಸಾವನ್ನಪ್ಪುತ್ತಿವೆ. ಆದರೆ ನಮ್ಮ ಮಾಧ್ಯಮಗಳು ಒಂದಂಕಿಯಲ್ಲಿ ಸಾವನ್ನಪ್ಪುತ್ತಿರುವ ಎಚ್|ಎನ್|ನ ಲೆಕ್ಕ ಹಿಡಿಯುತ್ತವೆ. ಆದರೆ ಸಾವಿರಗಟ್ಟಲೆ ಪ್ರತಿ ವರ್ಷ ಅನವಶ್ಯಕವಾಗಿ ಸಾಯುತ್ತಿರುವ ಶಿಶುಗಳ ತಡೆಹಿಡಿಯಬಹುದಾದ ಮರಣಗಳನ್ನು ಅವು ಸುದ್ಧಿ ಮಾಡುತ್ತಿಲ್ಲ. ಹೈ.ಕ.ಪ್ರ.ದಲ್ಲಿ ಪ್ರತಿ ವರ್ಷ ಸರಿಸುಮಾರು 8000 ಶಿಶುಗಳು ತಮ್ಮ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುವುದರೊಳಗೆ ಅಸು ನೀಗುತ್ತಿವೆ. ಈ ಮಕ್ಕಳು, ಇವರ ಪಾಲಕರು ಅಭಿವೃದ್ಧಿಯಲ್ಲಿ ಪಾಲುಗಾರರಾಗುತ್ತಿಲ್ಲ. ಇದರ ಕಡೆಗೆ ನಾವು ಮೊದಲು ಗಮನ ನೀಡಬೇಕಾಗಿದೆ.

ವಿಶೇಷ ಕಾರ್ಯಕ್ರಮಗಳು

ಕೇಂದ್ರ ಸರ್ಕಾರವು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಜನರ ಬದುಕನ್ನು ಉತ್ತಮಪಡಿಸುವ ಉದ್ಧೇಶದಿಂದ ಅನೇಕ ಬೃಹತ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬಹುದಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ (ಎನ್.ಆರ್.ಎಚ್.ಎಮ್) , ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಶಾಸನ (ಎನ್.ಆರ್.ಈ.ಜಿ.ಎ) , ಸರ್ವಶಿಕ್ಷಣ ಅಭಿಯಾನ (ಎಸ್.ಎಸ್.ಎ) , ಹಿಂದುಳಿದ ಪ್ರದೇಶ ಅನುದಾನ ನಿಧಿ (ಬಿಆರ್‌ಜಿಎಫ್) ಮುಂತಾದ ಕಾರ್ಯಕ್ರಮಗಳಿವೆ. ಬಿ.ಆರ್.ಜಿ.ಎಫ್ ಯೋಜನೆಯಲ್ಲಿ ರಾಜ್ಯದ ಐದು ಜಿಲ್ಲೆಗಳು ಆಯ್ಕೆಯಾಗಿವೆ. ಅದರಲ್ಲಿ ಗುಲಬರ್ಗಾ ವಿಭಾಗದ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ಸೇರಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಅವಕಾಶವನ್ನು ಈ ಪ್ರದೇಶವು ಉಪಯುಕ್ತವಾಗಿ ಬಳಸಿಕೊಳ್ಳಬೇಕು. ಈ ಕಾರ್ಯಕ್ರಮಗಳ ಬಾಬ್ತು ನೂರಾರು ಕೋಟಿ ಹಣ ದೊರೆಯುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳುವುದು ನಮಗೆ ಸಾಧ್ಯವಾಗಬೇಕು. ಇದಕ್ಕಾಗಿ ಜನರನ್ನು ಒಳಗೊಳ್ಳುವ ಅಭಿವೃದ್ಧಿ ಕಾರ್ಯತಂತ್ರಗಳನ್ನು ರೂಪಿಸಬೇಕು. ಅದನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಅದರ ಫಲಗಳು ನಿರ್ದಿಷ್ಟ ಸಾಮಾಜಿಕ ಗುಂಪುಗಳಿಗೆ ತಲುಪುವಂತಾಗಬೇಕು.

ಪ್ರಾಥಮಿಕ ಶಿಕ್ಷಣದಲ್ಲಿ ಕ್ರಾಂತಿ

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತೆ ಮಾಡಬೇಕಾದರೆ ಅಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಾಂತಿಯಾಗಬೇಕು. ಸರ್ಕಾರವು ಇದನ್ನು ಹೈ.ಕ.ಪ್ರ.ದಲ್ಲಿ ಅಭಿಯಾನದ ರೀತಿಯಲ್ಲಿ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ 6 – 14 ವಯೋಮಾನದ ಮಕ್ಕಳಲ್ಲಿ ಯಾರೊಬ್ಬರೂ ಶಾಲೆಯಿಂದ ವಂಚತಿರಾಗಬಾರದು. ಈ ಪ್ರದೇಶದಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸುವುದಕ್ಕೆ ಬಹುಮುಖ್ಯ ಅಡ್ಡಿಯೆಂದರೆ ಬಡತನ. ಇದು ಹೊಸ ಸಂಗತಿಯೇನಲ್ಲ. ಇದು ಜಗಜ್ಜಾಹೀರಾಗಿರುವ ಸಂಗತಿ. ಇದನ್ನು ಹೇಗೆ ಸರಿ ಪಡಿಸುವುದು? ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಉತ್ತಮ ಪಡಿಸಬೇಕು. ಪ್ರಾಥಮಿಕ ಶಿ‌ಕ್ಷಣದಲ್ಲಿ ಕ್ರಾಂತಿಯನ್ನು ಸಾಧಿಸಿಕೊಳ್ಳದೆ ಉನ್ನತ ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಿಕೊಳ್ಳುವುದು ಅಸಾಧ್ಯ. ಏರಿಕೆಯಾದ ವರಮಾನವು ಜನರ ಬದುಕಾಗಿ ಪರಿವರ್ತನೆಯಾಗ ಬೇಕೆಂದರೆ ಅಲ್ಲಿ ಜನರ ಸಾಕ್ಷರತೆಯು ಉತ್ತಮವಾಗಿರಬೇಕು ಮತ್ತು ಜನರ ಶಿಕ್ಷಣದ ಮಟ್ಟ ಉನ್ನತವಾಗಿರಬೇಕು. ಅಮರ್ತ್ಯಸೆನ್ ಹೇಳುವಂತೆ ಆರ್ಥಿಕತೆಯಲ್ಲಿ ಹರಿದು ಬರುವ ಅವಕಾಶಗಳನ್ನು ದಕ್ಕಿಸಿಕೊಳ್ಳಲು, ಅಂದರೆ ಅವಕಾಶಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳಲು ಜನರ ಧಾರಣಾ ಸಾಮರ್ಥ್ಯವು ಉತ್ತಮವಾಗಿರಬೇಕು. ಈ ಧಾರಣಾ ಸಾಮರ್ಥ್ಯವನ್ನು ನಿರ್ಧರಿಸುವ ಸಂಗತಿಗಳೆಂದರೆ ಜನರ, ಅದರಲ್ಲೂ ಪರಿಶಿಷ್ಟರ, ಮಹಿಳೆಯರ, ಕೂಲಿಕಾರರ ಸಾಕ್ಷರತೆ, ಪ್ರಾಥಮಿಕ ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಲಿಂಗ ಸಮಾನತೆ ಮತ್ತು ವರಮಾನ – ಸಂಪನ್ಮೂಲಗಳ ಮೇಲಿನ ಹಕ್ಕುದಾರಿಕೆ. ಈ ಪ್ರಬಂಧದಲ್ಲಿ ತೋರಿಸಿರುವಂತೆ ಗುಲಬರ್ಗಾ ವಿಭಾಗದಲ್ಲಿ ಜನರ, ಅಂದರೆ – ಪರಿಶಿಷ್ಟರ, ಮಹಿಳೆಯರ, ಕೂಲಿಕಾರರ ಧಾರಣಾ ಸಾಮರ್ಥ್ಯವು ರಾಜ್ಯಮಟ್ಟದಲ್ಲಿನ ಜನರ ಧಾರಣಾ ಸಾಮರ್ಥ್ಯಕ್ಕಿಂತ ದುರ್ಬಲವಾಗಿದೆ. ಈ ದಿಶೆಯಲ್ಲಿ ಅಮರ್ತ್ಯಸೆನ್, ಮೆಹಬೂಬ್ ಉಲ್ ಹಕ್, ಮಾರ್ತ ನುಸುಬೌಮ್, ಜೀನ್ ಡ್ರೀಜ್, ಪಿ.ಎಸ್.ಅಪ್ಪು, ಮೇಘನಾದ್ ದೇಸಾಯಿ ಮುಂತಾದವರು ಪ್ರತಿಪಾದಿಸುತ್ತಿರುವಂತೆ ಹೈ.ಕ.ಪ್ರ.ದ ಅಭಿವೃದ್ಧಿಯು ಜನರನ್ನು ಒಳಗೊಳ್ಳುವಂತಾಗಬೇಕಾದರೆ ಅಲ್ಲಿ ಜನರ, ಅದರಲ್ಲೂ ಮಹಿಳೆಯರ ಸಾಕ್ಷರತೆ ಉತ್ತಮಗೊಳ್ಳಬೇಕು ಮತ್ತು ಈ ಪ್ರದೇಶವು ಪ್ರಾಥಮಿಕ ಶಿಕ್ಷಣದಲ್ಲಿ ಕ್ರಾಂತಿಯನ್ನು ಸಾಧಿಸಿಕೊಳ್ಳಬೇಕು. ಪ್ರಸಿದ್ಧ ಆಡಳಿತ ತಜ್ಞ ಪಿ.ಎಸ್.ಅಪ್ಪು ತನ್ನ ಇತ್ತೀಚಿಗಿನ ಒಂದು ಲೇಖನದಲ್ಲಿ (‘ದ ರೋಡ್ ಟು ಇನ್ ಕ್ಲೂಸಿವ್ ಗ್ರೋಥ್’. ದಿ ಹಿಂದು. ಸೆಪ್ಟೆಂಬರ್ 15, 2009) ಇದರ ಮಹತ್ವವನ್ನು ಹೀಗೆ ಗುರುತಿಸಿದ್ದಾರೆ.

ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಹಮ್ಮಿಕೊಳ್ಳುವ ಯಾವುದೇ ಕಾರ್ಯಕ್ರಮವಾದರೂ, ಅಲ್ಲಿ ಪ್ರತಿಷ್ಟಿತ – ಪ್ರಥಮ – ಪ್ರಧಾನ ಸ್ಥಾನ ಶಿಕ್ಷಣಕ್ಕೆ, ಅದರಲ್ಲೂ ಉತ್ತಮ ಗುಣಮಟ್ಟದ ಶಾಲಾ (ಪ್ರಾಥಮಿಕ) ಶಿಕ್ಷಣಕ್ಕೆ ದೊರೆಯಬೇಕು‘ (ಆವರಣದಲ್ಲಿನ ಮಾತುಗಳನ್ನು ಲೇಖಕ ಸೇರಿಸಿದ್ದಾನೆ) .

ಈ ಮಾತು ಹೈ.ಕ.ಪ್ರ.ಕ್ಕೆ ಅತ್ಯಂತ ಸೂಕ್ತವಾದುದಾಗಿದೆ.

ಖ್ಯಾತ ನ್ಯಾಯವಾದಿ ಮತ್ತು ಚಿಂತಕ ವಿ.ಆರ್.ಕೃಷ್ಣ ಅಯ್ಯರ್ ಹೇಳುವಂತೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಕೈಗಾರಿಕೆಗಳು ಮುಖ್ಯ, ತಂತ್ರಜ್ಞಾನ ಮತ್ತು ಸಂಶೋಧನೆ ತುಂಬಾ ಅಗತ್ಯ, ತ್ವರಿತಗತಿಯಲ್ಲಿ ಜನರಿಗೆ ನ್ಯಾಯ ಒದಗಿಸುವುದು ಆದ್ಯತೆಯ ಸಂಗತಿ. ಆದರೆ ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸಂದರ್ಭದಲ್ಲೂ ಪ್ರಾಥಮಿಕ ಶಿಕ್ಷಣವು ಅಭಿವೃದ್ಧಿಯ ದೃಷ್ಟಿಯಿಂದ ಎರಡನೆಯ ಸಂಗತಿಯಾಗಬಾರದು. ಮುಂದುವರಿದು ಅವರು ತಿಳಿಸುವುದೇನೆಂದರೆ ‘ಪ್ರಾಥಮಿಕ ಶಿಕ್ಷಣವು ಬಲ್ಲಿದರು ಹಣ ಕೊಟ್ಟು ಕೊಳ್ಳುವ ಸರಕಾಗಬಾರದು : ಅದು ಬಡವರ ಹಕ್ಕಾಗಬೇಕು‘.

ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಕೃಗ್‌ಮನ್ ಇತ್ತೀಚಿಗಿನ ತನ್ನ ಅಂಕಣವೊಂದರಲ್ಲಿ (ದಿ ಹಿಂದು . 11 – 10 – 09) ಯಾರಾದರೂ ತನ್ನನ್ನು ಅಮೆರಿಕೆಯ ಆರ್ಥಿಕ ಯಶಸ್ಸಿನ ಹಿಂದಿನ ಗುಟ್ಟನ್ನು ಒಂದು ಪದದಲ್ಲಿ ವಿವರಿಸೆಂದು ಕೇಳಿದರೆ ನಾನು ಅದು ‘ಶಿಕ್ಷಣ’ವೆಂದು ಹೇಳುತ್ತೇನೆಂದು ಬರೆದಿದ್ದಾನೆ. ಮುಂದುವರಿದು ಅಮೆರಿಕೆಯಲ್ಲಿ ನಡೆದ ‘ಪ್ರೌಢ ಶಾಲಾ ಕ್ರಾಂತಿ’ಯ ಬಗ್ಗೆ ಅವನು ಮಾತನಾಡುತ್ತಾನೆ. ಹೈ.ಕ.ಪ್ರ.ದ ಸಂದರ್ಭದಲ್ಲಿ ನಾವು ‘ಪ್ರಾಥಮಿಕ ಶಿಕ್ಷಣ ಕ್ರಾಂತಿ’ಯ ಅಗತ್ಯದ ಬಗ್ಗೆ ಮಾತನಾಡುತ್ತಿದ್ದೇವೆ.

ಆದರೆ ಥಳಥಳನೆ ಹೊಳೆಯುವ ರಸ್ತೆಗಳು, ದೊಡ್ಡದೊಡ್ಡ ಸೇತುವೆಗಳು, ಸಿಇಟಿಯಲ್ಲಿ ಮೀಸಲಾತಿ, ವಿಮಾನ ನಿಲ್ದಾಣಗಳು, ಹೈಕೋರ್ಟ ಪೀಠ ಮಾತ್ರವೇ ಅಭಿವೃದ್ಧಿಯೆಂದು ನಂಬಿರುವ ಸ್ಥಿತಿಯು ಇಂದು ನಿರ್ಮಾಣವಾಗಿ ಬಿಟ್ಟಿದೆ. ರಸ್ತೆ, ಸೇತುವೆ, ವಿಮಾನ ನಿಲ್ದಾಣ, ಸಿಇಟಿಯಲ್ಲಿ ಮೀಸಲಾತಿ, ಸಂವಿಧಾನಾತ್ಮಕ ವಿಶೇಷ ಸ್ಥಾನ, ವಿದೇಶಿ ಬಂಡವಾಳ, ಹೈಕೋರ್ಟು ಪೀಠ ಮುಂತಾದವು ಅಭಿವೃದ್ಧಿಗೆ ಬೇಕ. ಅವು ಬೇಕೇ ಬೇಕು. ಅವುಗಳನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಆದರೆ ಅವೇ ಅಭಿವೃದ್ಧಿಯಲ್ಲ. ಅದು ಜನರನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಆದರೆ ಅವೇ ಅಭಿವೃದ್ಧಿಯಲ್ಲ. ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿಯಂತೂ ಅಲ್ಲವೇ ಅಲ್ಲ. ಅವೆಲ್ಲ ಅಭಿವೃದ್ಧಿಯ ಸಾಧನಗಳು. ಅಭಿವೃದ್ಧಿಯನ್ನು, ಅದರಲ್ಲೂ, ಜನರನ್ನು ಒಳಗೊಳ್ಳುವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳಲು ಹೈ.ಕ.ಪ್ರ.ದಲ್ಲಿ ವಿಪುಲ ಅವಕಾಶಗಳಿವೆ. ಕವಿಯೊಬ್ಬ ಹೇಳುವಂತೆ ‘ಬೆಳೆಯೇನೋ ಬೇಕಾದ ಹಾಗಿದೆ, ಕುಯ್ಯುವವರು ಕಡಿಮೆ’.

ಭಾಗ – ೨

. ಜನರನ್ನು ಒಳಗೊಳ್ಳುವ ಅಭಿವೃದ್ಧಿ : ಹೈ..ಪ್ರ.ಕ್ಕೆ ನ್ಯಾಯ : ಕನ್ನಡ ವಿಶ್ವವಿದ್ಯಾಲಯದ ಪಾತ್ರ

ಕನ್ನಡ ವಿಶ್ವವಿದ್ಯಾಲಯದಲ್ಲಿನ ಅಭಿವೃದ್ಧಿ ಅಧ್ಯಯನ ವಿಭಾಗವು. ಅದು ಅಸ್ತಿತ್ವಕ್ಕೆ ಬಂದಾಗಿನಿಂದ (1996) ,ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಕುರಿತಂತೆ ವಿಶೇಷವಾಗಿ ಅಧ್ಯಯನಗಳನ್ನು ನಡೆಸಿಕೊಂಡು ಬರುತ್ತಿದೆ. ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಕುರಿತಂತೆ ಅದು ಅಧ್ಯಯನಗಳನ್ನು ನಡೆಸುವುದರ ಜೊತೆಗೆ ಅದು ಸರ್ಕಾರ, ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು ಮುಂತಾದವರ ಗಮನವನ್ನು ಸದರಿ ಪ್ರದೇಶದ ಸಮಸ್ಯೆಗಳ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಈ ದಿಶೆಯಲ್ಲಿ ವಿಭಾಗದ ವಿದ್ವಾಂಸರು ನಡೆಸಿದ ಒಂದು ಅಧ್ಯಯನ ಮತ್ತು ಪ್ರಯತ್ನದ ಫಲವಾಗಿ ಹೈ.ಕ.ಪ್ರ.ಕ್ಕೆ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಪ್ರಮುಖ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಸೂತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು 2007 – 08ರಲ್ಲಿ ತನ್ನ ಬಜೆಟ್ಟಿನಲ್ಲಿ ನಡೆಸಿದ ವ್ಯತ್ಯಯದ ಕಾರಣವಾಗಿ ಉಂಟಾಗಬಹುದಾಗಿದ್ದ ರೂ. 1309 ಕೋಟಿ ನಷ್ಟವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಡಾ. ಟಿ.ಆರ್.ಚಂದ್ರಶೇಖರ ಮತ್ತು ಅಲ್ಲಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಬಿ.ಶೇಷಾದ್ರಿ (ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ಸದಸ್ಯರು) ಅವರ ಶೈಕ್ಷಣಿಕ ಪ್ರಯತ್ನದಿಂದಾಗಿ ತಡೆಗಟ್ಟಿದ ಸಂಗತಿಯನ್ನು ಇಲ್ಲಿ ಮಂಡಿಸುವುದು ಅಪ್ರಸ್ತುತವಾಗುವುದಿಲ್ಲವೆಂದು ತಿಳಿದ್ದೇನೆ.

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ವಿವಿರ

ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯು ತೀವ್ರವಾಗಿರುವುದನ್ನು ಅನೇಕ ಅಧ್ಯಯನಗಳು ಹಾಗೂ ವರದಿಗಳು ದೃಢಪಡಿಸಿವೆ. ಈ ದಿಶೆಯಲ್ಲಿ ಸರ್ಕಾರವು 2000ರವು ನೇಮಿಸಿದ್ದ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ವಿಸ್ತೃತ ರೂಪದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಮಾಪನ ಮಾಡಿ ಅದರ ತೀವ್ರತೆಯನ್ನು ತೋರಿಸಿಕೊಟ್ಟಿತು. ಅದು ಸಮಸ್ಯೆಯನ್ನು ವಿವರವಾಗಿ ಪರಿಶೀಲಿಸಿ 2002ದಲ್ಲಿ ತನ್ನ ಸಾವಿರ ಪುಟಗಳನ್ನು ಮೀರಿದ ಬೃಹತ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಪ್ರಾದೇಶಿಕ ಅಸಮಾನತೆಯನ್ನು ಮಾಪನ ಮಾಡುವ ಉದ್ದೇಶಕ್ಕಾಗಿ ಸಮಿತಿಯು ಐದು ವಲಯಗಳಿಗೆ ಸಂಬಂಧಿಸಿದ 35 ಸೂಚಿಗಳನ್ನು ಒಳಗೊಂಡ ‘ಸಂಯುಕ್ತ ಸಮಗ್ರ ಅಭಿವೃದ್ಧಿ ಸೂಚ್ಯಂಕ’ವೆಂಬ ಮಾಪನವನ್ನು ಬಳಸಿತು. ಅದು ರಾಜ್ಯದಲ್ಲಿರುವ 175 ತಾಲ್ಲೂಕುಗಳ ಪೈಕಿ 114 ತಾಲ್ಲೂಕುಗಳು ಹಿಂದುಳಿದಿದ್ದಾವೆಂದು ಗುರುತಿಸಿತು. ಅವುಗಳಲ್ಲಿ 39 ಅತ್ಯಂತ ಹಿಂದುಳಿದಿದ್ದಾವೆಂದು, 40 ಅತಿ ಹಿಂದುಳಿದಿದ್ದಾವೆಂದು ಮತ್ತು 35 ಹಿಂದುಳಿದಿದ್ದಾವೆಂದು ವರ್ಗಿಕರಿಸಿತು. ಈ 114ರಲ್ಲಿ 35 ದಕ್ಷಿಣ ಕರ್ನಾಟಕ ಪ್ರದೇಶಕ್ಕೆ ಸೇರಿದ್ದರೆ 59 ಉತ್ತರ ಕರ್ನಾಟಕ್ಕೆ ಸೇರಿದ್ದವು. ಆದರೆ ವರ್ಗೀಕರಿಸಿದ ತಾಲ್ಲೂಕುಗಳ ನೆಲೆಯಿಂದ ಪ್ರಾದೇಶಿಕ ಅಸಮಾನತೆಯನ್ನು ನೋಡಿದರೆ ಕರ್ನಾಟಕದಲ್ಲಿ ಅದು ಎಷ್ಟೊಂದು ಗಂಭೀರವಾಗಿದೆಯೆಂಬುದು ತಿಳಿಯುತ್ತದೆ. ಬಹಳ ವಿಶಿಷ್ಟವಾದ ಸಂಗತಿಯೆಂದರೆ ಸಮಿತಿಯು ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯು ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಮಾಡುಗಟ್ಟಿಕೊಂಡಿರುವುದನ್ನು ದೃಢಪಡಿಸಿದೆ.

ಅದು ಗುರುತಿಸಿದ್ದ 114 ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯೊಂದನ್ನು ಶಿಫಾರಸ್ಸು ಮಾಡಿತ್ತು. ಇದರ ಜೊತೆಗೆ ಅದು ಅನೇಕ ಇತರೆ ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ, ಸರ್ಕಾರಗಳು ಡಾ. ಡಿ.ಎಂ. ನಂಜುಡಪ್ಪ ಸಮಿತಿ ವರದಿಯನ್ನು ಕೇವಲ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ಮೊಟಕುಗೊಳಿಸಿ ಅದರ ಉಳಿದ ಶಿಫಾರಸ್ಸುಗಳನ್ನು ಮೂಲೆಗುಂಪು ಮಾಡಿದೆ. ಉದಾಹರಣೆಗೆ ಸರ್ಕಾರವು ಮೊದಲು ತನ್ನ ಪ್ರಾದೇಶಿಕ ಅಭಿವೃದ್ಧಿ ನೀತಿಯನ್ನು ಪ್ರಕಟಿಸಬೇಕೆಂದು ಸಮಿತಿಯು ಶಿಫಾರಸ್ಸು ಮಾಡಿತ್ತು (ಅಂತಿಮ ವರದಿ : ಪುಟ : 863) . ಇದು ಸಮಿತಿಯ ಮೊಟ್ಟಮೊದಲನೆಯ ಶಿಫಾರಸ್ಸಾಗಿದೆ. ಇದರ ಬಗ್ಗೆ ಯಾವ ಸರ್ಕಾರವಾಗಲಿ ಅಥವಾ ಮಂತ್ರಿ ಮಹೋದಯರಾಗಲಿ ಇದುವರೆವಿಗೂ ಚಕಾರವೆತ್ತಿಲ್ಲ. ಅಂತಹ ನೀತಿಯೊಂದರ ಅಗತ್ಯವನ್ನು ಸರ್ಕಾರಗಳು ಮನಗಂಡಿಲ್ಲವೆಂಬುದು ಅವುಗಳ ಪ್ರಾದೇಶಿಕ ಅಸಮಾನತೆಯನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂಬುದಕ್ಕೆ ಅಪ್ಪಟ ಸಾಕ್ಷಿಯಾಗಿದೆ. ಸಮಿತಿಯು ತನ್ನ ವರದಿಯನ್ನು ಸಲ್ಲಿಸಿ ಆರು ವರ್ಷಗಳು ಕಳೆದರೂ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯನ್ನು ಸದಾ ಜಪಿಸುವ ಸರ್ಕಾರಕ್ಕೆ ‘ಪ್ರಾದೇಶಿಕ ಅಭಿವೃದ್ಧಿ ನೀತಿ’ ಯೊಂದನ್ನು ಪ್ರಕಟಿಸಬೇಕೆಂಬ ಅರಿವು ಉಂಟಾಗಿಲ್ಲ. ಈ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಟಾನದ ಮೇಲುಸ್ತುವಾರಿ ನಡೆಸಲು 2008 – 09ರಲ್ಲಿ ಶ್ರೀ ಸುಶೀಲ್ ನಮೋಶಿ ಅವರನ್ನು (ಕ್ಯಾಬಿನೆಟ್ ಸಚಿವ ಸ್ಥಾನಮಾನ) ಅದರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಸಮಿತಿ ಕೂಡ ಪ್ರಾದೇಶಿಕ ಅಭಿವೃದ್ಧಿ ನೀತಿಯ ಅಗತ್ಯದ ಬಗ್ಗೆ ಮನಗಾಣಲಿಲ್ಲ. ಇದರ ಕಾರ್ಯವೈಖರಿ ಬಗ್ಗೆ ಮುಂದೆ ಚರ್ಚಿಸಲಾಗಿದೆ.

 • ರಾಜ್ಯದ ಒಟ್ಟು 39 ಅತ್ಯಂತ ಹಿಂದುಳಿದ ತಾಲ್ಲೂಕುಗಳ ಪೈಕಿ 21, ಅಂದರೆ ಶೇ. 53.85ರಷ್ಟು ಗುಲಬರ್ಗಾ ವಿಭಾಗಕ್ಕೆ ಸೇರಿವೆ.
 • ರಾಜ್ಯದ 61 ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗಕ್ಕೆ ಸೇರಿದ ತಾಲ್ಲೂಕುಗಳ ಸಂಖ್ಯೆ ಕೇವಲ ಮೂರು (ಶೇ.4.92) .
 • ಗುಲಬರ್ಗಾ ವಿಭಾಗಕ್ಕೆ ಸೇರಿದ ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಎಲ್ಲ ತಾಲ್ಲೂಕುಗಳು ಹಿಂದಿಳಿದಿದ್ದಾವೆ. ಈ ವಿಭಾಗದಲ್ಲಿನ ಒಟ್ಟು 31 ತಾಲ್ಲೂಕುಗಳು ಪೈಕಿ 28 (ಶೇ. 90.32) ಹಿಂದುಳಿದ ತಾಲ್ಲೂಕುಗಳಾಗಿವೆ. ಅಂದರೆ ಈ ವಿಭಾಗದಲ್ಲಿನ ಒಟ್ಟು ತಾಲ್ಲೂಕುಗಳಲ್ಲಿ ಶೇ.90.32ರಷ್ಟು ತಾಲ್ಲೂಕುಗಳು ಹಿಂದುಳಿದಿದ್ದಾವೆ. ಇದಕ್ಕೆ ಪ್ರತಿಯಾಗಿ ಮೈಸೂರು ವಿಭಾಗದಲ್ಲಿನ ಒಟ್ಟು ತಾಲ್ಲೂಕುಗಳಲ್ಲಿ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಕೇವಲ ಶೇ.50 (22 ತಾಲ್ಲೂಕುಗಳು) .
 • ಉಡುಪಿ. ದಕ್ಷಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿನ ಎಲ್ಲ ತಾಲ್ಲೂಕುಗಳು (11) ಸಾಪೇಕ್ಷವಾಗಿ ಮುಂದುವರಿದ ಸ್ಥಿತಿಯಲ್ಲಿವೆ. ಆದರೆ ಉ.ಕ.ಪ್ರ.ದ ಗುಲಬರ್ಗಾ, ರಾಯಚೂರು, ಕೊಪ್ಪಳ ಮತ್ತು ವಿಜಾಪುರ ಜಿಲ್ಲೆಗಳ ಎಲ್ಲ ತಾಲ್ಲೂಕುಗಳು (24) ಹಿಂದುಳಿದ ಸ್ಥಿತಿಯಲ್ಲಿವೆ. ಅಭಿವೃದ್ಧಿ ಸಂಬಂಧಿ ಅಸಮಾನತೆಯ ‌ಪ್ರಾದೇಶಿಕ ಸ್ವರೂಪವು ಇದರಿಂದ ಸ್ಪಷ್ಟವಾಗುತ್ತದೆ. ಅಭಿವೃದ್ಧಿಯು ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ನೆಲೆಗೊಂಡಿದ್ದರೆ ದುಸ್ಥಿತಿಯು ಉತ್ತರ ಕರ್ನಾಟಕದಲ್ಲಿ ಮಡುಗಟ್ಟಿಕೊಂಡಿರುವುದನ್ನು ವರದಿಯು ಅತ್ಯಂತ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ.

ಕೋಷ್ಟಕ – 10: ಪ್ರದೇಶವಾರು ಮತ್ತು ವಿಭಾಗವಾರು ತಾಲ್ಲೂಕುಗಳು ವರ್ಗಿಕರಣ

ಕ್ರ.ಸಂ. ವಿಭಾಗಗಳು ಮತ್ತು ಜಿಲ್ಲೆಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳು (ಸಂ) ಅತ್ಯಂತ ಹಿಂದುಳಿದ ತಾಲ್ಲೂಕುಗಳು (ಸಂ) ಅತಿ ಹಿಂದುಳಿದ ತಾಲ್ಲೂಕುಗಳು (ಸಂ) ಹಿಂದುಳಿದ ತಾಲ್ಲೂಕುಗಳು (ಸಂ) ಒಟ್ಟು ತಾಲ್ಲೂಕುಗಳು (ಸಂ)
1. ಬೆಂಗಳೂರು ವಿಭಾಗ 18 (35.29) 11 (21.57) 13 (25.49) 9 (17.65) 51 (100.00)
[29.51]
[28.21] [32.50] [25.71] [29.14]
2. ಮೈಸೂರು ವಿಭಾಗ 22. (50.00) 13 (4.54) 10 (22.75) 10 (22.73) 44 (100.00)
[38.06] [5.12] [25.00] [28.57] [25.14]
3. ದ.ಕ.ಪ್ರ. 40 (42.11) 13 (13.38) 23 (24.21) 19 (20.00) 95 (100.00)
[67.57] [33.33] [57.50] [54.28] [54.29]
4. ಬೆಳಗಾವಿ ವಿಭಾಗ 18 (36.74) 5 (10.20) 12 (24.49) 14 (28.57) 49 (100.00)
[29.51] [12.82] [30.00] [40.00] [28.00]
5. ಗುಲಬರ್ಗಾ ವಿಭಾಗ 3 (9.68) 21 (67.74) 5 (16.13) 2 (6.45) 31 (100.00)
[4.92] [53.85] [12.50] [5.72] [17.71]
6. ಉ.ಕ.ಪ್ರ 21 (26.25) 26 (32.50) 17 (21.25) 16 (20.00) 80 (100.00)
[34.43] [66.67] [42.50] [45.72] [45.71]
7. ಕರ್ನಾಟಕ ರಾಜ್ಯ 61 (34.86) 39 (22.28) 40 (22.86) 35 (20.00) 175 (100.00)

ಮೂಲ: ಕರ್ನಾಟಕ ಸರ್ಕಾರ 2002. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ಅಂತಿಮ ವರದಿ.

ಟಿಪ್ಪಣಿ: ಆವರಣದಲ್ಲಿನ ಅಂಕಿಗಳು ಸಂಬಂಧಿಸಿದ ವಿಭಾಗ ಮತ್ತು ಪ್ರದೇಶಗಳ ಒಟ್ಟು ಮೊತ್ತದ ಶೇಕಡ ಪ್ರಮಾಣವನ್ನು ತೋರಿಸುತ್ತವೆ. ಚೌಕಾಕಾರದ ಆವರಣದಲ್ಲಿನ ಅಂಕಿಗಳು ಒಟ್ಟು ತಾಲ್ಲೂಕುಗಳಲ್ಲಿ ವಿಭಾಗಗಳ ಪಾಲನ್ನು ತೋರಿಸುತ್ತವೆ.

ಇದರ ವಿವರವನ್ನು ಕೋಷ್ಟಕ 10ರಲ್ಲಿ ನೀಡಲಾಗಿದೆ. ಕೋಷ್ಟಕದಲ್ಲಿ ತೋರಿಸಿರುವಂತೆ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಅತಿ ಹೆಚ್ಚಾಗಿ ಪಡೆದಿರುವ ವಿಭಾಗವೆಂದರೆ ಗುಲಬರ್ಗಾ ವಿಭಾಗ. ಅದೇ ರೀತಿಯಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳನ್ನು ಅತಿ ಕಡಿಮೆ ಪಡೆದಿರುವ ವಿಭಾಗವೆಂದರೆ ಅದೂ ಕೂಡ ಗುಲಬರ್ಗಾ ವಿಭಾಗವೇ ಆಗಿದೆ. ಇದಕ್ಕೆ ಪ್ರತಿಯಾಗಿ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಅತಿ ಕಡಿಮೆ ಪಡೆದಿರುವ ವಿಭಾಗವೆಂದರೆ ಅದು ಮೈಸೂರು ವಿಭಾಗವಾಗಿದೆ. ಆದರೆ ಅದು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳನ್ನು ಅತಿ ಹೆಚ್ಚಾಗಿ ಪಡೆದಿದೆ. ಪ್ರಾದೇಶಿಕ ಅಸಮಾನತೆಯನ್ನು ಕೇವಲ ದಕ್ಷಿಣ ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ನಡುವಿನ ಸಂಬಂಧದಲ್ಲಿ ಪರಿಗಣಿಸಿದೆ ಸಾಕಾಗುವುದಿಲ್ಲ. ಅದಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿನ ಗುಲಬರ್ಗಾ ವಿಭಾಗದಲ್ಲಿ ದುಸ್ಥಿತಿಯು ಮಡುಗಟ್ಟಿಕೊಂಡಿರುವುದನ್ನು ಕೋಷ್ಟಕ – 10 ತೋರಿಸುತ್ತದೆ.

. ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ.

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಬಹು ಮುಖ್ಯ ಶಿಫಾರಸ್ಸೆಂದರೆ ರಾಜ್ಯದ 114 ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿಯಲ್ಲಿ ರಾಜ್ಯಮಟ್ಟದ ಸರಾಸರಿಗೆ ಒಯ್ಯುವ ಗುರಿ ಹೊಂದಿರುವ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯಾಗಿದೆ. ಈ ಯೋಜನೆ ಪ್ರಕಾರ ಸರ್ಕಾರವು ಒಟ್ಟು ರೂ.31,000 ಕೋಟಿಯನ್ನು 114 ತಾಲ್ಲೂಕುಗಳ ಮೇಲೆ ಎಂಟು ವರ್ಷಗಳ ಅವಧಿಯಲ್ಲಿ ವಿನಿಯೋಗಿಸಬೇಕಾಗುತ್ತದೆ. ಒಟ್ಟು ಯೋಜನಾ ಮೊತ್ತದಲ್ಲಿ (ರೂ. 31,000 ಕೋಟಿ) ರೂ. 15000 ಕೋಟಿಯು ತಾಲ್ಲೂಕುಗಳಿಗೆ ವಾರ್ಷಿಕ ಯೋಜನೆಯ ಬಾಬ್ತು ನಿಯಮಿತವಾಗಿ ಹರಿದು ಬರುತ್ತದೆ. ಆದ್ದರಿಂದ ಉಳಿದ ರೂ. 16000 ಕೋಟಿಯನ್ನು ಸರ್ಕಾರವು ಹೆಚ್ಚುವರಿಯಾಗಿ ಹಿಂದುಳಿದ 114 ತಾಲ್ಲೂಕುಗಳ ಅಭಿವೃದ್ಧಿಗಾಗಿ ಎಂಟು ವರ್ಷಗಳ ಕಾಲಾವಧಿಯಲ್ಲಿ ವಿನಿಯೋಗಿಸಬೇಕೆಂದು ಅದು ಸಲಹೆ ನೀಡಿತ್ತು. ಇದು ಸರ್ಕಾರವು ‘ಹೆಚ್ಚುವರಿ’ಯಾಗಿ ಮಾಡಬೇಕಾಗಿರುವ ಮೊತ್ತವಾಗಿದೆ. ಈ ಅನುದಾನವನ್ನು ಜಿಲ್ಲೆ ಮತ್ತು ತಾಲ್ಲೂಕುಗಳ ನಡುವೆ ಹಂಚಲು ಅದು ಸಂಚಯಿತ ದುಸ್ಥಿತಿ ಸೂಚ್ಯಂಕವೆಂಬ ಮಾಪನವನ್ನು ರೂಪಿಸಿತ್ತು. ಈ ಸಂಚಯಿತ ದುಸ್ಥಿತಿ ಸೂಚ್ಯಂಕಗಳ ವಿವರವನ್ನು ಕೋಷ್ಟಕ – 11.1 ಮತ್ತು 11.2 ರಲ್ಲಿ ನೀಡಲಾಗಿದೆ. ಈ ಮಾಪನದ ಪ್ರಕಾರ ರಾಜ್ಯದಲ್ಲಿನ ಒಟ್ಟು ದುಸ್ಥಿತಿ ಸೂಚ್ಯಂಕ 20.26. ಇದರಲ್ಲಿ ದ.ಕ.ಪ್ರ.ದ ಪಾಲು 40ರಷ್ಟಾಗುತ್ತದೆ) . ಅದರಂತೆ ಉ.ಕ.ಪ್ರ.ಪಾಲು 12.08 (ಶೇ 59.62. ಅಂದರೆ ಇದನ್ನು ಪೂರ್ಣಾಂಕಕ್ಕೆ ಸರಿಹೊಂದಿಸಿದರೆ ಅದು ಶೇ.60ರಷ್ಟಾಗುತ್ತದೆ) . ದ.ಕ.ಪ್ರ.ದಲ್ಲಿನ ಬೆಂಗಳೂರು ವಿಭಾಗದ ದುಸ್ಥಿತಿ ಪಾಲು ಶೇ. 2626 (ಶೇ. 25) , ಮೈಸೂರು ವಿಭಾಗದ ಪಾಲು ಶೇ.13.62 (ಶೇ15) . ಇವೆರಡೂ ವಿಭಾಗಗಳು ಸೇರಿದ ದ.ಕ.ಪ್ರ.ದ ದುಸ್ಥಿತಿ ಪಾಲು ಶೇ.40. ಅದರಂತೆ ಬೆಳಗಾವಿ ವಿಭಾಗದ ಪಾಲು ಶೇ.20.33 (ಶೇ. 20) ಮತ್ತು ಗುಲಬರ್ಗಾ ವಿಭಾಗದ ಪಾಲು ಶೇ.39.78 (ಶೇ40) . ಇವೆರಡೂ ವಿಭಾಗಗಳು ಸೇರಿದ ಉ.ಕ.ಪ್ರ.ದ ದುಸ್ಥಿತಿ ಪಾಲು ಶೇ. 60.

—-

ಕೋಷ್ಟಕ – 11.1 : ಜಿಲ್ಲಾವಾರು ಸಂಚಯಿತ ದುಸ್ಥಿತಿ ಸೂಚ್ಯಂಕ : 2001 (ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳು)

ಕ್ರ.ಸಂ. ಜಿಲ್ಲೆಗಳು ಸಂಚಯಿತ ದುಸ್ಥಿತಿ ಸೂಚ್ಯಂಕ ಕ್ರ.ಸಂ ಜಿಲ್ಲೆಗಳು ದುಸ್ಥಿತಿ ಸಂಚಯಿತ ಸೂಚ್ಯಂಕ
1. ಬಳ್ಳಾರಿ 1.00 1. ಬೆಳಗಾವಿ 0.69
2. ಬೀದರ್ 1.19 2. ವಿಜಾಪುರ 1.40
3. ಗುಲಬರ್ಗಾ 3.38 3. ಬಾಗಲಕೋಟೆ 0.56
4. ರಾಯಚೂರು 1.50 4. ಧಾರವಾಡ 0.22
5. ಕೊಪ್ಪಳ 0.99 5. ಗದಗ 0.31
ಗುಲಬರ್ಗಾ ವಿಭಾಗ 8.06 6. ಹಾವೇರಿ 0.53
7. ಉತ್ತರ ಕನ್ನಡ 0.41
ಬೆಳಗಾವಿ ವಿಭಾಗ 4.12
ಉತ್ತರ ಕರ್ನಾಟಕ ಪ್ರದೇಶದ ಸಂಚಯಿತ ದುಸ್ಥಿತಿ ಸೂಚ್ಯಂಕ (8.06+4.12) 12.18

 

ಕೋಷ್ಟಕ – 11.2 : ಜಿಲ್ಲಾವಾರು ಸಂಚಯಿತ ದುಸ್ಥಿತಿ ಸೂಚ್ಯಂಕ : 2001 (ದಕ್ಷಿಣ ಕರ್ನಾಟಕ ಪ್ರದೇಶದ ಜಿಲ್ಲೆಗಳು)

ಕ್ರ.ಸಂ. ಜಿಲ್ಲೆಗಳು ಸಂಚಯಿತ ದುಸ್ಥಿತಿ ಸೂಚ್ಯಂಕ ಕ್ರ.ಸಂ. ಜಿಲ್ಲೆಗಳು ದುಸ್ಥಿತಿ ಸಂಚಯಿತ ಸೂಚ್ಯಂಕ
1. ಬೆಂಗಳೂರು (ನ) 0.10 1. ಚಿಕ್ಕಮಗಳೂರು 0.30
2. ಬೆಂಗಳೂರು (ಗ್ರಾ) 0.55 2. ದಕ್ಷಿಣ ಕ ನ್ನಡ  – –
3. ಚಿತ್ರದುರ್ಗ 0.86 3. ಉಡುಪಿ  – –
4. ದಾವಣಗೆರೆ 0.84 4. ಹಾಸನ 0.42
5. ಕೋಲಾರ 0.94 5. ಕೊಡಗು  – –
6. ಶಿವಮೊಗ್ಗ 0.26 6. ಮಂಡ್ಯ 0.66
7. ತುಮಕೂರು 1.77 7. ಮೈಸೂರು 0.77
ಬೆಂಗಳೂರು ವಿಭಾಗ 5.32 8. ಚಾಮರಾಜನಗರ 0.61
ಮೈಸೂರು ವಿಭಾಗ 2.76
ದಕ್ಷಿಣ ಕರ್ನಾಟಕ ಪ್ರದೇಶ ದುಸ್ಥಿತಿ ಸೂಚ್ಯಂಕ (5.32 + 2.76) 8.08
ಕರ್ನಾಟಕ ರಾಜ್ಯದ ಒಟ್ಟು ಸಂಚಯಿತ ದುಸ್ಥಿತಿ ಸೂಚ್ಯಂಕ (12.18 + 8.08) 20.26

ಮೂಲ : ಕರ್ನಾಟಕ ಸರ್ಕಾರ 2001 ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಅಂತಿಮ ವರದಿ.

. ಗುಲಬರ್ಗಾ ವಿಭಾಗದ ಅನುದಾನದ ಪಾಲಿನ ಲೆಕ್ಕಾಚಾರ

ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ತಾನು ಶಿಫಾರಸ್ಸು ಮಾಡಿದ್ದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಅನುದಾನವನ್ನು ವಿಭಾಗ, ಜಿಲ್ಲೆ ಮತ್ತು ತಾಲ್ಲೂಕುವಾರು ಲೆಕ್ಕಾಚಾರಕ್ಕೆ ಸೂತ್ರವೊಂದನ್ನು ನೀಡಿದೆ. ಈ ಸೂತ್ರವು ಅದು ರೂಪಿಸಿದ್ದ ‘ಸಂಚಯಿತ ದುಸ್ಥಿತಿ ಸೂಚ್ಯಂಕ’ವನ್ನು ಆಧರಿಸಿದೆ. ಕರ್ನಟಕದಲ್ಲಿನ ಜಿಲ್ಲೆಗಳ ಸಂಚಯಿತ ದುಸ್ಥಿತಿ ಸೂಚ್ಯಂಕಗಳನ್ನು ಕೋಷ್ಟಕ 11.1 ಮತ್ತು 11.2ರಲ್ಲಿ ತೋರಿಸಲಾಗಿದೆ.

ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ರೂಪಿಸಿದ್ದ ಅನುದಾನ ಹಂಚಿಕೆ ಸೂತ್ರದ ಪ್ರಕಾರ ಅನುದಾನವನ್ನು ಹೇಗೆ ಲೆಕ್ಕ ಹಾಕಬೇಕೆಂಬುದನ್ನು ಕೆಳಗೆ ವಿವರಿಸಿದೆ.

ಗುಲಬರ್ಗಾ ವಿಭಾಗದ ಅನುದಾನದ ಲೆಕ್ಕಾಚಾರದ ವಿವರವನ್ನು ನಿದರ್ಶನಾರ್ಥವಾಗಿ ಇಲ್ಲಿ ನೀಡಲಾಗಿದೆ.

 • ಗುಲಬರ್ಗಾ ವಿಭಾಗದ ಸಂಚಯಿತ ದುಸ್ಥಿತಿ ಸೂಚ್ಯಂಕ – 8.08
 • ಕರ್ನಾಟಕ ರಾಜ್ಯದ ಸಂಚಯಿತ ದುಸ್ಥಿತಿ ಸೂಚ್ಯಂಕ – 20.26
 • ರಾಜ್ಯದ ದುಸ್ಥಿತಿಯಲ್ಲಿ ಗುಲಬರ್ಗಾ ವಿಭಾಗದ ಪಾಲು – 8.08 / 20.26 x 100 = ಶೇ. 39.88 (ಶೇ. 40) .

ಇದೇ ರೀತಿಯಲ್ಲಿ ಜಿಲ್ಲೆಯ ಮತ್ತು ತಾಲ್ಲೂಕುಗಳ ಅನುದಾನದ ಪ್ರಮಾಣವನ್ನು ಕಂಡು ಹಿಡಿಯಬಹುದಾಗಿದೆ. ಉದಾಹರಣೆಗೆ ಗುಲಬರ್ಗಾ ಜಿಲ್ಲೆಯ ಅನುದಾನ

 • ಗುಲಬರ್ಗಾ ಜಿಲ್ಲೆಯ ಸಂಚಯಿತ ದುಸ್ಥಿತಿ ಸೂಚ್ಯಂಕ – 3.38.
 • ರಾಜ್ಯದ ಸಂಚಯಿತ ದುಸ್ಥಿತಿ ಸೂಚ್ಯಂಕ – 20.26.
 • ಗುಲಬರ್ಗಾ ಜಿಲ್ಲೆಯ ಅನುದಾನ – 3.38 / 20.26 x 100 = ಶೇ. 16.68.

ಇದೇ ರೀತಿಯಲ್ಲಿ ತಾಲ್ಲೂಕಿನ ಅನುದಾನವನ್ನು ಗಣನೆ ಮಾಡಬಹುದಾಗಿದೆ.

 • ಜೇವರ್ಗಿ ತಾಲ್ಲೂಕಿನ ದುಸ್ಥಿತಿ ಸೂಚ್ಯಂಕ – 0.43
 • ರಾಜ್ಯದ ಸಂಚಯಿತ ದುಸ್ಥಿತಿ ಸೂಚ್ಯಂಕ – 20.26
 • ಜೇವರ್ಗಿ ತಾಲ್ಲೂಕಿನ ಅನುದಾನ – 0.43 / 20.26 x 100 = ಶೇ. 2.12

ಅದು ಎಂಟು ವರ್ಷಕ್ಕಿರಲಿ ಅಥವಾ ಒಂದು ವರ್ಷಕ್ಕಾಗಲಿ, ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಪ್ರಕಾರ ಅನುದಾನ ಹಂಚಿದರೆ ಗುಲಬರ್ಗಾ ವಿಭಾಗಕ್ಕೆ ಶೇ 40ರಷ್ಟು ದೊರೆಯಬೇಕಾಗುತ್ತದೆ. ಈ ಸೂತ್ರದ ಪ್ರಕಾರ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯು ಅನುಷ್ಟಾನಗೊಂಡ 2007 – 08, 2009 – 10ನೆಯ ಸಾಲುಗಳಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತವನ್ನು ಇಲ್ಲಿ ಲೆಕ್ಕ ಹಾಕಿ ಕೋಷ್ಟಕ – 12ರಲ್ಲಿ ನೀಡಲಾಗಿದೆ. ಮೂರು ವರ್ಷದಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯಬೇಕಾಗಿದ್ದ ಮೊತ್ತ ರೂ.2676.80 ಕೋಟಿ.

ಕೋಷ್ಟಕ – 12 : ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನದಲ್ಲಿ ಹೈ..ಪ್ರ. ಪಾಲು : 200708 ರಿಂದ 200910

ವರ್ಷಗಳು ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಒಟ್ಟು ಅನುದಾನ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಒಟ್ಟು ಅನುದಾನದಲ್ಲಿ ಹೈ..ಪ್ರ. ಪಾಲು (ಒಟ್ಟು ಅನುದಾನದಲ್ಲಿ ಶೇ 40)
2007 – 08 ರೂ. 1571 ಕೋಟಿ ರೂ. 628.40 ಕೋಟಿ
2008 – 09 ರೂ.2547 ಕೋಟಿ ರೂ.1018.80 ಕೋಟಿ
2009 – 10 ರೂ.2574 ಕೋಟಿ ರೂ.1029.60 ಕೋಟಿ
2007 – 8ರಿಂದ 2009 – 10 ಒಟ್ಟು ರೂ. 6692 ಕೋಟಿ ರೂ. 2676.80 ಕೋಟಿ

ಮೂಲ : 1. ಕರ್ನಾಟಕ ಸರ್ಕಾರ 2002 ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ಅಂತಿಮ ವರದಿ. ಪು : 225 ಮತ್ತು 870 – 871

 1. ಕರ್ನಾಟಕ ಸರ್ಕಾರ 2007. ಆಯವ್ಯಯ 2007 – 08. ಪು : 38
 2. ಕರ್ನಾಟಕ ಸರ್ಕಾರ 2008. ಆಯವ್ಯಯ 2008 – 09 ಪು : 19
 3. ಕರ್ನಾಟಕ ಸರ್ಕಾರ 2009. ಆಯವ್ಯಯ 2009 – 10 ಪು : ೧೩