. ಹೈದರಾಬಾದ್ ಕರ್ನಾಟಕದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಸ್ವರೂಪ

ಈ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿಯು ಎಷ್ಟರ ಮಟ್ಟಿಗೆ ಜನರನ್ನು ಒಳಗೊಳ್ಳುವ ಸ್ವರೂಪದಲ್ಲಿದೆ ಎಂಬುದನ್ನು ಚರ್ಚಿಸಲಾಗಿದೆ. ಅದರ ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಸ್ವರೂಪವನ್ನು ಕರ್ನಾಟಕದ ಅಭಿವೃದ್ಧಿಯ ಸ್ವರೂಪದೊಂದಿಗೆ ಹೋಲಿಸಲಾಗಿದೆ. ಇದಕ್ಕಾಗಿ ಅನೇಕ ಸೂಚಿಗಳು, ಸೂಚ್ಯಂಕಗಳು ಮತ್ತು ಮಾಪನಗಳನ್ನು ಬಳಸಲಾಗಿದೆ.

  1. ಸಾಕ್ಷರತೆ ಮತ್ತು ಶಿಕ್ಷಣ

ಸಾಕ್ಷರತೆ ಮತ್ತು ಶಿಕ್ಷಣಗಳನ್ನು ಅಮರ್ತ್ಯಸೆನ್ ಅಭಿವೃದ್ಧಿಯ ಅಂತರ್ಗತ ಭಾಗಗಳೆಂದು ಪರಿಗಣಿಸುತ್ತಾನೆ.

[1] ಅವು ಅಭಿವೃದ್ಧಿಯ ಸಾಧನಗಳೂ ಹೌದು ಮತ್ತು ಅವು ಅಭಿವೃದ್ಧಿಯ ಅಂತರ್ಗತ ಭಾಗಗಳೂ ಹೌದು. ಅವು ಅಭಿವೃದ್ಧಿಯ ಮೌಲ್ಯಮಾಪನದ ಮಾನದಂಡಗಳು. ಸಾಂಪ್ರದಾಯಿಕ ಅಭಿವೃದ್ಧಿ ಮಾದರಿಯಲ್ಲಿ ಇವುಗಳನ್ನು ಅಭಿವೃದ್ಧಿಯ ಸಾಧನಗಳಾಗಿ ಮಾತ್ರ ಪರಿಭಾವಿಸಿಕೊಳ್ಳಲಾಗಿದೆ. ಈ ಕ್ರಮವನ್ನು ಸೆನ್ ತಿರುವು ಮುರುವು ಮಾಡಿದ್ದಾನೆ. ಅಂದ ಮೇಲೆ ಸಾಕ್ಷರತೆ ಮತ್ತು ಶಿಕ್ಷಣ ಅಭಿವೃದ್ಧಿಯ ಸೂಚಿಗಳು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿನ ಮೂರು ಸೂಚಿಗಳಲ್ಲಿ ಬಹುಮುಖ್ಯವಾದ ಸೂಚಿಯೆಂದರೆ ಸಾಕ್ಷರತೆ ಮತ್ತು ದಾಖಲಾತಿಗಳನ್ನೊಳಗೊಂಡ ಶೈಕ್ಷಣಿಕ ಸಾಧನಾ ಸಂಯುಕ್ತ ಸೂಚ್ಯಂಕ. ಕರ್ನಾಟಕದಲ್ಲಿ ಅಭಿವೃದ್ಧಿಯ ಅಂತರ್ಗತ ಭಾಗವಾಗಿರುವ ಸಾಕ್ಷರತೆಯ ಸೌಲಭ್ಯದಿಂದ ವಂಚಿತ ಜನವರ್ಗ ದೊಡ್ಡದಿದೆ.

ಇದನ್ನು ಕೋಷ್ಟಕ 1ರಲ್ಲಿ ತೋರಿಸಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ 42.57 ಲಕ್ಷ ಜನರನ್ನು ಸಾಕ್ಷರತೆಯು ಒಳಗೊಳ್ಳುತ್ತಿದ್ದರೆ ಅದರ ಹೊರಗಣದವರ ಸಂಖ್ಯೆ, ಅಂದರೆ ಅನಕ್ಷರಸ್ಥರ ಸಂಖ್ಯೆ 36.80 ಲಕ್ಷ. ಅದು ಒಳಗೊಳ್ಳುತ್ತಿರುವ 42.57 ಲಕ್ಷದಲ್ಲಿ ಪುರುಷರ ಸಂಖ್ಯೆ 26.49 ಲಕ್ಷ (ಶೇ. 65.86) ವಾದರೆ ಅದು ಒಳಗೊಳ್ಳುತ್ತಿರುವ ಮಹಿಳೆಯರ ಸಂಖ್ಯೆ 16.08 ಲಕ್ಷ (ಶೇ.41.07) . ಸಾಕ್ಷರತೆಯ ಹೊರಗಣದವರಾದ 36.80 ಲಕ್ಷ ಜನರಲ್ಲಿ ಪುರುಷರ ಸಂಖ್ಯೆ 13.73 ಲಕ್ಷದಷ್ಟಾದರೆ (ಶೇ. 34.14) ಮಹಿಳೆಯರ ಸಂಖ್ಯೆ 23.07 ಲಕ್ಷ (ಶೇ. 58.93) . ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪುರುಷರಿಗೆ ಸಂಬಂಧಿಸಿದಂತೆ ಒಟ್ಟು ಅಕ್ಷರಸ್ಥರ ಸಂಖ್ಯೆಯು (26.49 ಲಕ್ಷ) ಅನಕ್ಷರಸ್ಥರ ಸಂಖ್ಯೆಗಿಂತ ( 13.73 ಲಕ್ಷ) ಅಧಿಕವಾಗಿದೆ. ಆದರೆ ಮಹಿಳೆಯರಿಗೆ ಸಂಬಂಧಿಸಿದಂತೆ ಮಾತ್ರ ಅಕ್ಷರಸ್ಥರ ಸಂಖ್ಯೆಯು (16.08 ಲಕ್ಷ) ಅನಕ್ಷರಸ್ಥರ ಸಂಖ್ಯೆಗಿಂತ (23.07 ಲಕ್ಷ) ಕಡಿಮೆಯಿದೆ. ಅಂದರೆ ಸಾಕ್ಷರತೆಯು ಒಳಗೊಳ್ಳುತ್ತಿರುವುದರಲ್ಲಿ ಪುರುಷರ ಸಂಖ್ಯೆಯು ಅಧಿಕವಾಗಿದ್ದರೆ ಮಹಿಳೆಯರ ಸಂಖ್ಯೆಯು ಕಡಿಮೆಯಿದೆ. ಇದಕ್ಕೆ ಪ್ರತಿಯಾಗಿ ಅದು ಹೊರಗಿಟ್ಟಿರುವವರ ಸಂಖ್ಯೆಯಲ್ಲಿ ಮಾತ್ರ ಮಹಿಳೆಯರ ಪ್ರಮಾಣವು ಪುರುಷರ ಪ್ರಮಾಣಕ್ಕಿಂತ ಅಧಿಕವಾಗಿದೆ. ಈ ಕೊಷ್ಟಕದಲ್ಲಿ ಸ್ಪಷ್ಟಪಡಿಸಿರುವಂತೆ ರಾಜ್ಯಮಟ್ಟದಲ್ಲಿ ಏಳು ವರ್ಷಕ್ಕೆ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಅಕ್ಷರ ಸಂಸ್ಕೃತಿಗೆ ಒಳಪಟ್ಟವರ ಪ್ರಮಾಣ ಶೇ. 66.65 ರಷ್ಟಿದ್ದರೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಾತ್ರ ಅದರ ಪ್ರಮಾಣ ಕೇವಲ ಶೇ. 53.63. ರಾಜ್ಯಮಟ್ಟದಲ್ಲಿ ಅಭಿವೃದ್ಧಿಯು ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳುತ್ತಿದ್ದರೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅದು ಒಳಗೊಳ್ಳುವ ಪ್ರಮಾಣ ಕೆಳಮಟ್ಟದಲ್ಲಿದೆ.

ಸಾಕ್ಷರತೆಯನ್ನು ಅಭಿವೃದ್ಧಿ ಕುರಿತ ಚರ್ಚೆಯ ಮುಂಚೂಣೆಗೆ ತಂದ ಕೀರ್ತಿಯು ಅಮರ್ತ್ಯಸೆನ್‌ಗೆ ಸಲ್ಲಬೇಕು. ಅಭಿವೃದ್ಧಿಯನ್ನು ಕುರಿತ ಚರ್ಚೆಯಲ್ಲಿ ಸಾಕ್ಷರತೆಗೆ ಅವಕಾಶವೇ ಇರಲಿಲ್ಲ. ಆದರೆ ಇಂದು ಅಭಿವೃದ್ಧಿಯನ್ನು ಕುರಿತ ಚರ್ಚೆಗಳಲ್ಲಿ ಸಾಕ್ಷರತೆಯನ್ನು ಬಹು ಮುಖ್ಯ ಸಂಗತಿಯನ್ನಾಗಿ ಪರಿಗಣಿಸಲಾಗುತ್ತದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿನ ಮೂರು ಸೂಚಿಗಳಲ್ಲಿ ಸಾಕ್ಷರತೆಯು ಮುಖ್ಯವಾದ ಒಂದು ಸೂಚಿಯಾಗಿದೆ. ಸಾಕ್ಷರತೆಯಲ್ಲಿ ಹೆಚ್ಚಳವನ್ನು ಸಾಧಿಸದೆ ಮಾನವ ಅಭಿವೃದ್ಧಿಯನ್ನು ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ.

ಕೋಷ್ಟಕ – 1 : ಸಾಕ್ಷರತೆಯು ಒಳಗೊಳ್ಳುವ ಮತ್ತು ಒಳಗೊಳ್ಳದಿರುವವರ ಸಂಖ್ಯೆ : ಕರ್ನಾಟಕ ಮತ್ತು ಗುಲಬರ್ಗಾ ವಿಭಾಗ : 2001

 (ಲಕ್ಷಗಳಲ್ಲಿ)

ವಿವರಗಳು ಒಳಗಣದವರು (ಅಕ್ಷರಸ್ಥರು) ಹೊರಗಣದವರು (ಅನಕ್ಷರಸ್ಥರು)
ಗುಲಬರ್ಗಾ ವಿಭಾಗ ಕರ್ನಾಟಕ ರಾಜ್ಯ ಗುಲಬರ್ಗಾ ವಿಭಾಗ ಕರ್ನಾಟಕ ರಾಜ್ಯ
+7 ವಯೋಮಾನದ ಜನಸಂಖ್ಯೆ 42.57 304.35 36.80 152.33
 (53.63)  (66.65)  (46.37)  (33.35)
ಪುರುಷರು 26.49 176.61 13.73 55.46
 (65.86)  (76.10)  (34.14)  (23.90)
ಮಹಿಳೆಯರು 16.08 127.73 23.07 96.86
 (58.93)  (41.07)  (56.87)  (43.13)

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು ಶೇಕಡಾ ಪ್ರಮಾಣವನ್ನು ತೋರಿಸುತ್ತಿವೆ.

ಮೂಲ: ಸೆನ್ಸ್‌ಸ್ ಆಫ್ ಇಂಡಿಯಾ 2001. ಕರ್ನಾಟಕ. ಸಿರೀಸ್ 30. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್, ಕರ್ನಾಟಕ

ಅಭಿವೃದ್ಧಿಯುಯ ಒಳಗೊಳ್ಳುವ ಜನರ ಲಿಂಗ ಸಂಬಂಧಿ ಸ್ವರೂಪವನ್ನು ಪರಿಶೀಲಿಸಿದಾಗ ನಮಗೆ ಅದರ ಇನ್ನೂ ಕ್ರೂರವಾದ ಮುಖ ಕಂಡು ಬರುತ್ತದೆ. ರಾಜ್ಯಮಟ್ಟದಲ್ಲಿ ಅಭಿವೃದ್ಧಿಯು ಶೇ. 56.87 ರಷ್ಟು ಮಹಿಳೆಯರನ್ನು ಒಳಗೊಳ್ಳುತ್ತಿದ್ದರೆ ನಮ್ಮ ಪ್ರದೇಶದಲ್ಲಿ ಅದು ಕೇವಲ ಶೇ. 41.07 ರಷ್ಟು ಮಹಿಳೆಯರನ್ನು ಮಾತ್ರ ಒಳಗೊಳ್ಳುತ್ತಿದೆ. ಆದರೆ ಪುರುಷರಿಗೆ ಸಂಬಂಧಿಸಿದಂತೆ ಸಾಕ್ಷರತೆಯು ಒಳಗೊಳ್ಳುವ ಪ್ರಮಾಣ ಮಹಿಳೆಯರನ್ನು ಒಳಗೊಳ್ಳುವ ಪ್ರಮಾಣಕ್ಕಿಂತ ಅಧಿಕವಾಗಿದೆ. ಇದು ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಪ್ರಕ್ರಿಯೆಯಲ್ಲಿನ ಲಿಂಗ ಸಂಬಂಧಿ ಅಸಮಾನತೆಯನ್ನು ತೋರಿಸುತ್ತಿದೆ.

ಪ್ರಾಥಮಿಕ ಶಿಕ್ಷಣದಲ್ಲಿನ ಸ್ಥಿತಿಗತಿ

ಕೋಷ್ಟಕ – 2ರಲ್ಲಿ ಕೆಲವು ವಿಶಿಷ್ಟವಾದ ಮಾಪನಗಳನ್ನು ಅಳವಡಿಸಿಕೊಂಡು ಹೈ.ಕ.ಪ್ರ.ದಲ್ಲಿನ ದಾಖಲಾತಿಯಲ್ಲಿನ ಸಮಸ್ಯೆಗಳನ್ನು ಅನಾವರಣ ಮಾಡಲು ಪ್ರಯತ್ನಿಸಲಾಗಿದೆ. ಶಿಕ್ಷಣವು ಮಕ್ಕಳನ್ನು ಒಳಗೊಳ್ಳುವ ನೆಲೆಗಳನ್ನು ಇಲ್ಲಿ ವಿಶ್ಲೇಷಣೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವವರ ಸಂಖ್ಯೆ ಕಡಿಮೆಯಿದೆ. ಅದು ರಾಜ್ಯಮಟ್ಟದಲ್ಲಿ 2004 – 05ರಲ್ಲಿ 107.14ರಷ್ಟಿದ್ದರೆ ಹೈ.ಕ.ಪ್ರ.ದಲ್ಲಿ ಅದು ಕೇವಲ 74.29ರಷ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ ಅದು ಕನಿಷ್ಟ 60.95ರಷ್ಟಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಒಳಗಣದವರ ಪ್ರಮಾಣವು (51.26) ಹೊರಗಣದವರ ಪ್ರಮಾಣಕ್ಕೆ (48.74) ಹತ್ತಿರದಲ್ಲಿದೆ. ಎರಡೂ ಪರಸ್ಪರ ಸರಿಸುಮಾರು ಸಮನಾಗಿವೆ. ಗುಲಬರ್ಗಾ ಜಿಲ್ಲೆಯಲ್ಲೂ ಒಳಗಣದವರ ಪ್ರಮಾಣ 59.03ರಷ್ಟಿದ್ದರೆ ಹೊರಗಣದವರ ಪ್ರಮಾಣವು 40.97ರಷ್ಟಿದೆ. ಇವೆಲ್ಲ ಆತಂಕಕಾರಿಯಾದ ಸಂಗತಿಗಳು. ನೀತಿ – ನಿರೂಪಕರು ಇತ್ತ ಕಡೆಗೆ ತಕ್ಷಣ ಗಮನ ನೀಡಬೇಕಾಗುತ್ತದೆ.

ಕೋಷ್ಟಕ – ೩ ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಅದರ ಪ್ರಕಾರ 2003 – 04ರಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದ ಮಕ್ಕಳಲ್ಲಿ ಬಾಲಕಿಯರ ಪ್ರಮಾಣ ಹೈ.ಕ.ಪ್ರ.ದಲ್ಲಿ ಶೇ. 45.18ರಷ್ಟಾದರೆ ರಾಜ್ಯಮಟ್ಟದಲ್ಲಿ ಅದು ಶೇ.47.73ರಷ್ಟಿದೆ. ಇದು 2004 – 05ರಲ್ಲಿ ಕ್ರಮವಾಗಿ ಶೇ. 42.90 ಮತ್ತು ಶೇ. 46.84ರಷ್ಟಾಗಿದೆ.

ಈ ಕೋಷ್ಟಕದಲ್ಲಿ ತೋರಿಸಿರುವಂತೆ 2003 – 04ರಲ್ಲಿ ಹೈ.ಕ.ಪ್ರ.ದಲ್ಲಿ ಏಳನೆಯ ತರಗತಿಯಲ್ಲಿ ಓದುತ್ತಿದ್ದ ಮಕ್ಕಳ ಸಂಖ್ಯೆ 168594 ಮತ್ತು ಮರು ವರ್ಷ 2004 – 05ರಲ್ಲಿ ಎಂಟನೆಯ ವರ್ಷಕ್ಕೆ ದಾಖಲಾದ ಮಕ್ಕಳ ಸಂಖ್ಯೆ 117390. ಅಂದರೆ ಇಲ್ಲಿ ಶಾಲಾವಾಹಿನಿಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 51204. ರಾಜ್ಯಮಟ್ಟದಲ್ಲಿ ಇದೇ ಅವಧಿಯಲ್ಲಿ ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ನಡೆದ ಪರಿವರ್ತನೆಯಲ್ಲಿ ಶಾಲಾವಾಹಿನಿಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 173999. ಇದು ಶಾಲೆಯನ್ನು ಮಕ್ಕಳು ಮಧ್ಯದಲ್ಲಿ ಯಾವ ತರಗತಿಯ ಹಂತದಲ್ಲಿ ಬಿಟ್ಟು ಬಿಡುತ್ತಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದರ ಆಧಾರದ ಮೇಲೆ ಶಿಕ್ಷಣ ಇಲಾಖೆಯು ಸೂಕ್ತ ಕ್ರಮ ತೆಗೆದುಕೊಳ್ಳಬಹುದು. ಈ ಸಂಗತಿಯು ಶೈಕ್ಷಣಿಕ ನೀತಿಯ ದೃಷ್ಟಿಯಿಂದ ಅತ್ಯಂತ ಉಪಯುಕ್ತವಾದ ಮಾಹಿತಿಯಾಗಿದೆ. ಇಲ್ಲಿ ಅಗತ್ಯವಾದ ಸಂಗತಿಯೆಂದರೆ ಶೈಕ್ಷಣಿಕ ನೀತಿಯನ್ನು ರೂಪಿಸುವಾಗ ಪ್ರದೇಶ ನಿರ್ದಿಷ್ಟತೆಯನ್ನು ಪರಿಗಣಿಸಬೇಕಾಗುತ್ತದೆ. ಆಗ ಮಾತ್ರ ಹಿಂದುಳಿದ ಪ್ರದೇಶದಲ್ಲಿನ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸುವ ದಿಶೆಯಲ್ಲಿ ಕಾರ್ಯಪ್ರವೃತ್ತವಾಗಬಹುದು.

ಕೋಷ್ಟಕ – 2 : ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಹತ್ತನೆಯ ತರಗತಿಯಲ್ಲಿನ ಮಕ್ಕಳ ಸಂಖ್ಯೆ: 200304 ಮತ್ತು 200405

ತಾಲ್ಲೂಕುಗಳು ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ
20032004 20042005
ಬಳ್ಳಾರಿ 77.86 90.81
ಬೀದರ್ 110.05 99.48
ಗುಲಬರ್ಗಾ 70.69 59.79
ಕೊಪ್ಪಳ 60.95 62.24
ರಾಯಚೂರು 66.18 65.50
ಹೈ.ಕ.ಪ್ರ. 76.38 74.29
ಕರ್ನಾಟಕ ರಾಜ್ಯ 102.08 107.14

ಟಿಪ್ಪಣಿ : ಈ ಅಂಕಿಗಳನ್ನು 2004 ಮತ್ತು 2005ರ ಪ್ರಕ್ಷೇಪಿತ ಜನಸಂಖ್ಯೆಯನ್ನು ಆಧರಿಸಿ ಲೆಕ್ಕಹಾಕಲಾಗಿದೆ.

ಮೂಲ : 1. ಕರ್ನಾಟಕ ಸರ್ಕಾರ 2004, ತಾಲ್ಲೂಕುವಾರು ಶೈಕ್ಷಣಿಕ ಅಂಕಿಅಂಶ – 2004 ಸರ್ವ ಶಿಕ್ಷಾ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ.

  1. ಕರ್ನಾಟಕ ಸರ್ಕಾರ 2005, ತಾಲ್ಲೂಕುವಾರು ಶೈಕ್ಷಣಿಕ ಅಂಕಿಅಂಶ – 2005 ಸರ್ವ ಶಿಕ್ಷಾ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ.

ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ನಡೆಯುವ ಪರಿವರ್ತನೆಯಲ್ಲಿ ರಾಜ್ಯಮಟ್ಟದಲ್ಲಿ ಶಾಲಾವಾಹಿನಿಯಿಂದ ಹೊರಗುಳಿದ ಮಕ್ಕಳಲ್ಲಿ ಹೈ.ಕ.ಪ್ರ.ದ ಮಕ್ಕಳ ಪ್ರಮಾಣ ಶೇ.29.42. ಹೈ.ಕ.ಪ್ರ.ದಲ್ಲಿ ಈ ಪರಿವರ್ತನೆ ಹಂತದಲ್ಲಿ ಶಾಲಾವಾಹಿನಿಯಿಂದ ಹೊರಗುಳಿದ ಮಕ್ಕಳ ಪ್ರಮಾಣ ಶೇ 30.37ರಷ್ಟಾದರೆ ರಾಜ್ಯ ಮಟ್ಟದಲ್ಲಿ ಅದು ಕೇವಲ ಶೇ.17.14ರಷ್ಟಿದೆ. ಅಂದರೆ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಒಳಗೊಳ್ಳುವ ಮಕ್ಕಳ ಪ್ರಮಾಣವು ರಾಜ್ಯಮಟ್ಟಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಈ ಪ್ರದೇಶದಲ್ಲಿ 7 ರಿಂದ 8ನೆಯ ತರಗತಿಗೆ ನಡೆಯುವ ಪರಿವರ್ತನೆಯಲ್ಲಿ ಶಾಲೆ ಬಿಟ್ಟ ಬಾಲಕಿಯರ ಪ್ರಮಾಣ ಶೇ.33.89ರಷ್ಟಾದರೆ ಬಾಲಕರ ‌ಪ್ರಮಾಣ ಶೇ. 27.46. ಇದು ರಾಜ್ಯಮಟ್ಟದಲ್ಲಿ ಕ್ರಮವಾಗಿ ಶೇ. 18.68 ಮತ್ತು ಶೇ. 15.73.ರಷ್ಟಿದೆ.

ರಾಜ್ಯಮಟ್ಟದಲ್ಲಿ 1991 ರಿಂದ 2001ರ ಅವಧಿಯಲ್ಲಿ 0 – 6ವಯೋಮಾನದ ಮಕ್ಕಳ ಸಂಖ್ಯೆಯು 74.77 ಲಕ್ಷದಿಂದ 71.82 ಲಕ್ಷಕ್ಕೆ ಇಳಿದಿದೆ. ಇಲ್ಲಿ ಇಳಿಕೆಯ ಪ್ರಮಾಣ ಶೇ. 3.9.ರಷ್ಟಾಗಿದೆ. ಆದರೆ ಹೈ.ಕ.ಪ್ರ.ದಲ್ಲಿ 0 – 6 ವಯೋಮಾನದ ಮಕ್ಕಳ ಸಂಖ್ಯೆ 16.23 ಲಕ್ಷದಿಂದ 15.88 ಲಕ್ಷಕ್ಕೆ ಇಳಿದಿದೆ. ಇಲ್ಲಿ ಇಳಿಕೆಯ ಪ್ರಮಾಣ ಶೇ. 2.15ರಷ್ಟಾಗಿದೆ. ರಾಜ್ಯಮಟ್ಟದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ 0 – 6 ವಯೋಮಾನದ ಮಕ್ಕಳ ಪ್ರಮಾಣ 2001ರಲ್ಲಿ ಶೇ. 13.59ರಷ್ಟಿದ್ದರೆ ಹೈ.ಕ.ಪ್ರ.ದಲ್ಲಿ ಅದರ ಪ್ರಮಾಣ ಶೇ. 16.77 (2001) ರಷ್ಟಿದೆ.

ಕೋಷ್ಟಕ – 3 : ಏಳನೆಯ ತರಗತಿಯಿಂದ ಎಂಟನೆಯ ತರಗತಿಗೆ ಪರಿವರ್ತನೆಯ ಪ್ರಮಾಣ : 200304 ರಿಂದ 200405

ವಿವರಗಳು 200304 ಏಳನೆಯ ತರಗತಿ ದಾಖಲಾತಿ 200405 ಎಂಟನೆಯ ತರಗತಿ ದಾಖಲಾತಿ ಪರಿವರ್ತನೆಯ ಪ್ರಮಾಣ 200304 ರಿಂದ 200405
ಪು ಒಟ್ಟು ಪು ಒಟ್ಟು ಪು ಒಟ್ಟು
ಹೈ.ಕ.ಪ್ರ. 92412 76182 168594 67029 50361 117390 25385 25821 51204
 (27.46)  (33.89)  (30.37)
ಕರ್ನಾಟಕ 530565 485495 1015060 447106 393955 841061 83459 90540 173999
 (15.73)  (18.68)  (17.14)

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು 2003 – 04 ರಿಂದ 2004 – 05ರ ಅವಧಿಯಲ್ಲಿ ಉಂಟಾದ ನಷ್ಟವನ್ನು ಶೇಕಡ ಪ್ರಮಾಣದಲ್ಲಿ ತೋರಿಸುತ್ತವೆ.

ಮೂಲ : 1. ಕರ್ನಾಟಕ ಸರ್ಕಾರ. 2004 ತಾಲ್ಲೂಕುವಾರು ಶೈಕ್ಷಣಿಕ ಅಂಕಿ ಅಂಶಗಳು, ಸರ್ವಶಿಕ್ಷಾ ಅಭಿಯಾನ ಸಾರ್ವಜನಿಕ ಶಿಕ್ಷಣ ಇಲಾಖೆ.

  1. ಕರ್ನಾಟಕ ಸರ್ಕಾರ. 2005 ತಾಲ್ಲೂಕುವಾರು ಶೈಕ್ಷಣಿಕ ಅಂಕಿ ಅಂಶಗಳು, ಸರ್ವಶಿಕ್ಷಾ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ

ಇದು ಏನನ್ನು ಸೂಚಿಸುತ್ತಿದೆ? ಜನಸಂಖ್ಯೆಯ ಒತ್ತಡವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಅಧಿಕವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯಮಟ್ಟದಲ್ಲಿ 1991 ರಿಂದ 2001 ಅವಧಿಯಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ವಾರ್ಷಿಕ ಶೇ. 1.75 ರಷ್ಟಿದ್ದರೆ ಹೈ.ಕ.ಪ್ರ.ದಲ್ಲಿ ಅದು ಶೇ. 2.21ರಷ್ಟಾಗಿದೆ. ಈ ಎಲ್ಲ ಸೂಚಿಗಳು ಏನನ್ನು ಸೂಚಿಸುತ್ತಿವೆ?

ಮೊದಲನೆಯದರಲ್ಲಿ ಇಳಿಕೆಯ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಕಡಿಮೆಯಿದೆ. ಎರಡನೆಯದರಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಅಧಿಕವಾಗಿದೆ. ಮೂರನೆಯದಾಗಿ ಒಟ್ಟು ಜನಸಂಖ್ಯೆಯಲ್ಲಿ 0 – 6 ವಯೋಮಾನದ ಮಕ್ಕಳ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಅಧಿಕವಾಗಿದೆ. ಅಂದರೆ ಇಲ್ಲಿ ಜನಸಂಖ್ಯೆಯ ಒತ್ತಡವು ಹೈ.ಕ.ಪ್ರ.ದಲ್ಲಿ ರಾಜ್ಯಮಟ್ಟದಲ್ಲಿರುವುದಕ್ಕಿಂತ ಅಧಿಕವಾಗಿದೆ (ಇದಕ್ಕೆ ಸಂಬಂಧಿಸಿದಂತೆ ಸೂಕ್ಷ್ಮ ಸಂಗತಿಗಳ ವಿವರಕ್ಕೆ ಅನುಬಂಧ ಕೋಷ್ಟಕ – ೩ ನೋಡಿ) .

  1. ದುಡಿಮೆಗಾರರು ಮತ್ತು ಜನರನ್ನು ಒಳಗೊಳ್ಳುವ ಅಭಿವೃದ್ಧಿ

ಒಂದು ದೇಶ/ಪ್ರದೇಶದ ಅಭಿವೃದ್ಧಿಯನ್ನು ಅಲ್ಲಿನ ದುಡಿಮೆಗಾರರ ಸಮೂಹ ಮತ್ತು ಸ್ವರೂಪವನ್ನು ಆಧರಿಸಿ ಅರ್ಥಮಾಡಿ ಕೊಳ್ಳಬಹುದಾಗಿದೆ. ಜನರನ್ನು ಅಭಿವೃದ್ಧಿಯು ಎಷ್ಟರ ಮಟ್ಟಿಗೆ ಒಳಗೊಂಡಿದೆ ಎಂಬುದನ್ನು ಅಲ್ಲಿನ ದುಡಿಮೆಗಾರ ವರ್ಗದಲ್ಲಿ ಭೂರಹಿತ ದಿನಗೂಲಿ ದುಡಿಮೆಗಾರರು ಎಷ್ಟಿದ್ದಾರೆ ಎಂಬುದರ ಆಧಾರದಿಂದ ತಿಳಿಯಬಹುದಾಗಿದೆ. ಏಕೆಂದರೆ ಅನೇಕ ಅಧ್ಯಯನಗಳು ದೃಢಪಡಿಸಿರುವಂತೆ ನಮ್ಮ ಸಂದರ್ಭದಲ್ಲಿ ಅತಿ ಹೆಚ್ಚು ದುಸ್ಥಿತಿಯನ್ನು ಅನುಭವಿಸುತ್ತಿರುವ ವರ್ಗಗಳೆಂದರೆ ದಿನಗೂಲಿ ದುಡಿಮೆಗಾರರು, ಪರಿಶಿಷ್ಟರು ಮತ್ತು ಮಹಿಳೆಯರು. ಯಾವ ದೇಶ/ಪ್ರದೇಶದ ದುಡಿಮೆಗಾರ ವರ್ಗದಲ್ಲಿ ಭೂರಹಿತ ದುಡಿಮೆಗಾರರ ಪ್ರಮಾಣ. ಪರಿಶಿಷ್ಟರ ಪ್ರಮಾಣ ಮತ್ತು ಮಹಿಳೆಯರ ಪ್ರಮಾಣವು ಅಧಿಕವಾಗಿರುತ್ತದೋ ಅಲ್ಲಿ ದುಸ್ಥಿತಿಯು ಮತ್ತು ಹೊರಗಣದವರ ಪ್ರಮಾಣವು ಅಧಿಕವಾಗಿರುತ್ತದೆಯೆಂದು ಹೇಳಬಹುದಾಗಿದೆ.

ಕೋಷ್ಟಕ – 4 : ದುಡಿಮೆಗಾರರು ಮತ್ತು ಭೂರಹಿತ ದಿನಗೂಲಿ ದುಡಿಮೆಗಾರರು : 2001

 (ಲಕ್ಷಗಳಲ್ಲಿ)

ವಿವರಗಳು ಗುಲಬರ್ಗಾ ವಿಭಾಗ ಕರ್ನಾಟಕ ರಾಜ್ಯ
ಜನಸಂಖ್ಯೆ 95.26 528.51
ಪುರುಷರು 48.38 268.99
ಮಹಿಳೆಯರು 46.88 259.52
ಒಟ್ಟು ದುಡಿಮೆಗಾರರು 41.17 235.34
 (43.22)  (44.53)
ಒಟ್ಟು ಪುರುಷ ದುಡಿಮೆಗಾರರು 25.10 152.35
 (51.88)  (56.64)
ಒಟ್ಟು ಮಹಿಳಾ ದುಡಿಮೆಗಾರರು 16.07 82.99
 (34.28)  (31.98)
ಒಟ್ಟು ಭೂರಹಿತ ದಿನಗೂಲಿ 16.37 62.27
ದುಡಿಮೆಗಾರರು  (39.76)  (26.45)
ಭೂರಹಿತ ದಿನಗೂಲಿ ಪುರುಷ 6.37 26.20
ದುಡಿಮೆಗಾರರು  (25.37)  (17.19)
ಭೂರಹಿತ ದಿನಗೂಲಿ ಮಹಿಳಾ 10.56 36.07
ದುಡಿಮೆಗಾರರು [64.71] [43.46]

 

ಮೂಲ: ಸೆನ್ಸ್‌ಸ್ ಆಫ್ ಇಂಡಿಯಾ 2001. ಕರ್ನಾಟಕ ಸಿರೀಸ್ 30. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್. ಡೈರೆಕ್ಟರೇಟ್ ಆಫ್ ಸೆನ್ಸೆಸ್ ಆಫರೇಶನ್, ಕರ್ನಾಟಕ

ಟಿಪ್ಪಣಿ : ಗುಂಡಾಕಾರದ ಆವರಣದಲ್ಲಿರುವ ಅಂಕಿಗಳು ಒಟ್ಟು ಮೊತ್ತದಲ್ಲಿನ ಶೇಕಡಾ ಪ್ರಮಾಣವನ್ನು ತೋರಿಸಿದರೆ ಚೌಕಾಕಾರದ ಆವರಣದಲ್ಲಿನ ಅಂಕಗಳ ಒಟ್ಟು ದುಡಿಮೆಗಾರರಲ್ಲಿ ದಿನಗೂಲಿ ಗಳ ಪ್ರಮಾಣವನ್ನು ತೋರಿಸುತ್ತವೆ.

ಒಂದು ಪ್ರದೇಶದ ದುಡಿಮೆಗಾರರಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ ವರ್ಗವೆಂದರೆ ಪರಿಶಿಷ್ಟರು ಮತ್ತು ಮಹಿಳೆಯರು ಎಂಬುದು ಅನೇಕ ಅಧ್ಯಯನಗಳಲ್ಲಿ ದೃಢಪಟ್ಟಿದೆ. ಕೋಷ್ಟಕ – 4ರಲ್ಲಿ ಕರ್ನಾಟಕ ಮತ್ತು ಹೈ.ಕ.ಪ್ರ.ದಲ್ಲಿನ ದುಡಿಮೆಗಾರರ ವಿವರಗಳನ್ನು ನೀಡಲಾಗಿದೆ.

ಈ ಕೋಷ್ಟಕದಲ್ಲಿ ತೋರಿಸಿರುವಂತೆ ಒಟ್ಟು ದುಡಿಮೆಗಾರರಲ್ಲಿ ದಿನಗೂಲಿ ದುಡಿಮೆಗಾರರ ಪ್ರಮಾಣವು ರಾಜ್ಯಮಟ್ಟದಲ್ಲಿ ಶೇ. 26.45ರಷ್ಟಿದ್ದರೆ ಹೈ.ಕ.ಪ್ರ.ದಲ್ಲಿ ಅವರ ಪ್ರಮಾಣ ಶೇ.39.76ರಷ್ಟಿದೆ. ಹೈ.ಕ.ಪ್ರ.ದಲ್ಲಿನ ಒಟ್ಟು ಮಹಿಳಾ ದುಡಿಮೆಗಾರರಲ್ಲಿ ಮಹಿಳಾ ದಿನಗೂಲಿಗಳ ಪ್ರಮಾಣ ಶೇ.65.71ರಷ್ಟಿದ್ದರೆ ರಾಜ್ಯಮಟ್ಟದಲ್ಲಿನ ಒಟ್ಟು ಮಹಿಳಾ ದುಡಿಮೆಗಾರರಲ್ಲಿ ಮಹಿಳಾ ದಿನಗೂಲಿಗಳ ಪ್ರಮಾಣ ಶೇ.43.46ರಷ್ಟಿದೆ. ಅಂದರೆ ಹೈ.ಕ.ಪ್ರದಲ್ಲಿನ ದುಡಿಮೆಗಾರರಲ್ಲಿ ದಿನಗೂಲಿಗಳ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಅಧಿಕವಾಗಿದೆ. ಈಗಾಗಲೆ ತಿಳಿಸಿರುವಂತೆ ದುಡಿಮೆಗಾರರಲ್ಲಿ ಅತ್ಯಂತ ತೀವ್ರ ದುಸ್ಥಿತಿಯಲ್ಲಿರುವ ವರ್ಗವೆಂದರೆ ದಿನಗೂಲಿಗಳು. ಈ ವಿವರಗಳಿಂದ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಜನರನ್ನು ಒಳಗೊಳ್ಳುವ ಪ್ರಮಾಣವು ರಾಜ್ಯಮಟ್ಟದಲ್ಲಿನ ಪ್ರಮಾಣಕ್ಕಿಂತ ಅತ್ಯಂತ ಕಡಿಮೆಯಿದೆ ಎಂಬುದು ತಿಳಿಯುತ್ತದೆ. ಯಾವುದೇ ಆರ್ಥಿಕತೆಯಾದರೂ ಅಲ್ಲಿ ಅತ್ಯಂತ ಕಡಿಮೆ ಕೂಲಿ ಪಡೆಯುವ ವರ್ಗವೆಂದರೆ ದಿನಗೂಲಿಗಳಾಗಿರುತ್ತಾರೆ. ಅವರ ದುಡಿಮೆ ಮಾರುಕಟ್ಟೆಯು ಅಸಂಘಟಿತ, ಅನೌಪಚಾರಿಕ ಮಾರುಕಟ್ಟೆಯಾಗಿರುತ್ತದೆ. ಅಲ್ಲಿ ಅವರಿಗೆ ಯಾವುದೇ ಬಗೆಯ ಶಾಸನಾತ್ಮಕ ರಕ್ಷಣೆ ಇರುವುದಿಲ್ಲ. ಇವರು ಅಭಿವೃದ್ಧಿಯಿಂದ ಹೊರಗಿನವರಾಗಿರುತ್ತಾರೆ. ಸರ್ಕಾರದ ಅಭಿವೃದ್ಧಿ ನೀತಿಯಲ್ಲಿ ಇವರ ಹಿತಾಸಕ್ತಿಗಳು ಆದ್ಯತೆಯ ಸಂಗತಿಗಳಾಗಿರುವುದಿಲ್ಲ. ಈ ಬಗೆಯ ದುಸ್ಥಿತಿಯಿಂದ ಮಹಿಳೆಯರು ಹೆಚ್ಚಿನ ಹಿಂಸೆ ಅನುಭವಿಸುತ್ತಿರುತ್ತಾರೆ. ಏಕೆಂದರೆ ಅವರು ಹೆಚ್ಚಿನ ಸಂಖ್ಯೆಯಲ್ಲಿ ಅ ಸಂಘಟಿತ ಶ್ರಮ ಮಾರುಕಟ್ಟೆಯಲ್ಲಿ ದುಡಿಯುತ್ತಿರುತ್ತಾರೆ. ಅವರಲ್ಲಿನ ಅನಕ್ಷರತೆ, ಕೆಳಮಟ್ಟದ ಶಿಕ್ಷಣ ಮತ್ತು ಕೆಳಮಟ್ಟದ ಕುಶಲತೆ ಹಾಗೂ ಲಿಂಗಸಂಬಂಧಿ ತಾರತಮ್ಯಗಳು ಮುಂತಾದವು ಇದಕ್ಕೆ ಮುಖ್ಯ ಕಾರಣವಾಗಿರುತ್ತವೆ.

  1. ಅಭಿವೃದ್ಧಿಯ ಶಿಷ್ಟ – ಪರಿಶಿಷ್ಟ ನೆಲೆಗಳು[2]

ನಮ್ಮ ಕಳೆದ 50 ವರ್ಷಗಳ ಅನುಭವವೆಂದರೆ ಕರ್ನಾಟಕದಲ್ಲಿ ಅಭಿವೃದ್ಧಿಯು ಸಮಾಜದ ಶಿಷ್ಟ ಜನತೆಯನ್ನು ಒಳಗೊಂಡಂತೆ ಪರಿಶಿಷ್ಟ ಜನತೆಯನ್ನು (ಪ.ಜಾ. + ಪ.ಪಂ) ಒಳಗೊಳ್ಳುತ್ತಿಲ್ಲ ಎಂಬುದಾಗಿದೆ. ಈ ಬಗೆಯ ಶಿಷ್ಟ – ಪರಿಶಿಷ್ಟ ನಡುವಿನ ಬಿರುಕು ಒಂದು ದೃಷ್ಟಿಯಿಂದ ನಮ್ಮ ಪರಂಪರೆಯ ಕೊಡುಗೆಯಾಗಿದೆ. ನಮ್ಮ ಪರಂಪರೆಯಲ್ಲಿ ಶಿಷ್ಟರು ಒಳಗಣದವರಾದರೆ ಪರಿಶಿಷ್ಟರು ಹೊರಗಣದವರು. [ಇದನ್ನೇ ಬಸವಣ್ಣನು ತನ್ನ ವಚನದಲ್ಲಿ (ಲೇಖನದ ಮೊದಲಲ್ಲಿ ನೀಡಲಾಗಿದೆ) ಸೂಕ್ಷ್ಮವಾಗಿ ಟೀಕಿಸುತ್ತಿದ್ದಾನೆ]. ಇದು ನಮ್ಮ ಸಮಾಜವು ಅನುಭವಿಸುತ್ತಿರುವ ಒಂದು ವಿಕೃತಿಯಾಗಿದೆ. ಅದರಲ್ಲೂ ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಪರಿಶಿಷ್ಟರನ್ನು ಒಳಗೊಳ್ಳುತ್ತಿರುವ ಪ್ರಮಾಣವು ಅವರನ್ನು ರಾಜ್ಯಮಟ್ಟದಲ್ಲಿ ಅಭಿವೃದ್ಧಿಯು ಒಳಗೊಳ್ಳುತ್ತಿರುವ ಪ್ರಮಾಣಕ್ಕಿಂತ ಅತ್ಯಂತ ಕಡಿಮೆಯಿದೆ. ಈ ಬಗೆಯ ಸಾಮಾಜಿಕ ಅಸಮಾನತೆಯನ್ನು ನಾವು ಇಂದು ಎದುರಿಸಬೇಕಾಗಿದೆ. ಜನರನ್ನು ಅಭಿವೃದ್ಧಿಯು ಒಳಗೊಳ್ಳುವಂತೆ ಮಾಡುವುದರ ಮೂಲಕ ಸಾಮಾಜಿಕ ವಿಕೃತಿಯನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಈ ಬಗೆಯ ಸಾಮಾಜಿಕ ವಿಕೃತಿಯು ಯಾವ ಸ್ವರೂಪದಲ್ಲಿದೆ ಎಂಬುದನ್ನು ಕೋಷ್ಟಕ – 5ರಲ್ಲಿ ಅನಾವರಣ ಮಾಡಲಾಗಿದೆ.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದಾಗ ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ ಅಷ್ಟೇ ಪ್ರಮಾಣ ಅಕ್ಷರಸ್ಥರಲ್ಲಿಯೂ ಪರಿಶಿಷ್ಟರ ಪ್ರಮಾಣವಿರಬೇಕು. ಆಗ ಅದು ಜನರನ್ನು ಒಳಗೊಳ್ಳುವ ಅಭಿವೃದ್ಧಿಯಾಗುತ್ತದೆ. ಆದರೆ ಹೈ.ಕ.ಪ್ರ.ದ ಜನಸಂಖ್ಯೆಯಲ್ಲಿ ಶೇ.31.82 ಪಾಲು ಪಡೆದಿರುವ ಪರಿಶಿಷ್ಟರು ಅಕ್ಷರಸ್ಥರಲ್ಲಿ ಮಾತ್ರ ಕೇವಲ ಶೇ.23.40ರಷ್ಟು ಪಾಲು ಪಡೆದಿದ್ದಾರೆ. ಅದರಲ್ಲೂ ಪರಿಶಿಷ್ಟ ಮಹಿಳೆಯರು ಪಡೆಯುತ್ತಿರುವ ಪಾಲು ಕೇವಲ ಶೇ. 21.15. ಇಲ್ಲಿ ಪರಿಶಿಷ್ಟರಲ್ಲಿ ಅಭಿವೃದ್ಧಿಯ ಹೊರಗಣದವರೆಂದು ಮತ್ತು ಶಿಷ್ಟರನ್ನು ಅಭಿವೃದ್ಧಿಯ ಒಳಗಣದವರೆಂದು ಪರಿಗಣಿಸಬಹುದಾಗಿದೆ. ಇದು ಸಾಮಾಜಿಕ ಅಸಮಾನತೆಯ ಸೂಚಿಯಾಗಿದೆ.

ಹೈ.ಕ.ಪ್ರ.ದಲ್ಲಿನ ಒಟ್ಟು ಅಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣ ಶಿಷ್ಟರಲ್ಲಿ ಶೇ.38.88ರಷ್ಟಿದ್ದರೆ ಪರಿಶಿಷ್ಟ ಮಹಿಳೆಯರಲ್ಲಿ ಅಕ್ಷರಸ್ಥರ ಪಾಲು ಕೇವಲ ಶೇ.34.13. ರಾಜ್ಯಮಟ್ಟದಲ್ಲಿ ಒಟ್ಟು ಮಹಿಳೆಯರ ಸಂಖ್ಯೆಯಲ್ಲಿ ಪರಿಶಿಷ್ಟ ಮಹಿಳೆಯರ ಪಾಲು ಶೇ.22.86ರಷ್ಟಿದ್ದರೆ ಅಕ್ಷರಸ್ಥರಲ್ಲಿ ಅವರ ಪಾಲು ಶೇ.15.84. ಹೈ.ಕ.ಪ್ರ.ದಲ್ಲಿ ಅಭಿವೃದ್ಧಿಯು ಜನರನ್ನು ಅದರಲ್ಲೂ ಪರಿಶಿಷ್ಟರನ್ನು ಅವರು ಜನಸಂಖ್ಯೆಯಲ್ಲಿ ಪಡೆದಿರುವ ಪ್ರಮಾಣಕ್ಕನುಗುಣವಾಗಿ ಒಳಗೊಳ್ಳುತ್ತಿಲ್ಲ. ಅದರಲ್ಲೂ ಪರಿಶಿಷ್ಟ ಮಹಿಳೆಯರು ಹೆಚ್ಚಿನ ಅಸಮಾನತೆಯನ್ನು ಎದುರಿಸುತ್ತಿದ್ದಾರೆ. ಈ ಅಸಮಾನತೆಯ ತೀವ್ರತೆಯು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈ.ಕ.ಪ್ರ.ದಲ್ಲಿ ಅಧಿಕವಾಗಿದೆ. ಪ್ರಾದೇಶಿಕ ಅಸಮಾನತೆಯ ಬಗ್ಗೆ ಮಾತನಾಡುವಾಗ ನಾವು ಇಂತಹ ಸೂಕ್ಷ್ಮ ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಮಾನವ ಹಕ್ಕಿನ ಪರಿಭಾಷೆಯಲ್ಲಿ ಹೇಳುವುದಾದರೆ ಹೈ.ಕ.ಪ್ರ.ದಲ್ಲಿ ಹಕ್ಕುಗಳ ಉಲ್ಲಂಘನೆಯು ರಾಜ್ಯಮಟ್ಟದಲ್ಲಿ ನಡೆಯುತ್ತಿರುವುದಕ್ಕಿಂತ ತೀವ್ರ ಸ್ವರೂಪದಲ್ಲಿ ನಡೆದಿದೆ. ಈ ಬಗೆಯ ಉಲ್ಲಂಘನೆಯನ್ನು ತಡೆಯುವ ಬಗ್ಗೆ ನಾವು ಯೋಚಿಸಬೇಕಾಗಿದೆ. ಅಭಿವೃದ್ಧಿಯನ್ನು ಹಕ್ಕಿನ ಪರಿಭಾಷೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗಿದೆ. ಅಭಿವೃದ್ಧಿಯ ಹೊರಗಣದವರಿಗೆ ಅಭಿವೃದ್ಧಿಯಲ್ಲಿ ಪಾಲಿರುತ್ತದೆ. ಅದನ್ನು ಜನರು ಒತ್ತಾಯಿಸಬೇಕು. ಈ ಬಗೆಯ ಒತ್ತಾಯವನ್ನೇ ಮಾನವ ಹಕ್ಕುಗಳೆಂದು ಕರೆಯಲಾಗಿದೆ. ಯಾರು ಅಭಿವೃದ್ಧಿಯಲ್ಲಿ ಹೊರಗಣದವರಾಗಿದ್ದಾರೋ ಅವನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅವರ ಹಕ್ಕುಗಳನ್ನು ಪೂರೈಸಿಕೊಡಬೇಕಾದರೆ ಅವರನ್ನು ಅಭಿವೃದ್ಧಿಯು ಒಳಗು ಮಾಡುವಂತೆ ಮಾಡಬೇಕು. ಅಭಿವೃದ್ಧಿಯು ಎಲ್ಲಿಯವರೆಗೆ ಜನರನ್ನು ಒಳಗೊಳ್ಳುತ್ತಿರುವುದಿಲ್ಲವೋ ಅಲ್ಲಿಯವರೆಗೆ ಮಾನವ ಹಕ್ಕುಗಳ ಅಲ್ಲಿ ಉಲ್ಲಂಘನೆಗೆ ಗುರಿಯಾಗುತ್ತಿರುತ್ತವೆ.

ಕೋಷ್ಟಕ – 5: ಅಕ್ಷರಸ್ಥರಲ್ಲಿ ಶಿಷ್ಟ ಮತ್ತು ಪರಿಶಿಷ್ಟರ ಪ್ರಮಾಣ – 2001

 (ಲಕ್ಷಗಳಲ್ಲಿ)

ವಿವರಗಳು ಒಟ್ಟು ಜನಸಂಖ್ಯೆ ಅಕ್ಷರಸ್ಥರು
ಒಟ್ಟು ಶಿಷ್ಟ ಜನಸಂಖ್ಯೆ ಪರಿಶಿಷ್ಟ ಜನಸಂಖ್ಯೆ ಒಟ್ಟು ಶಿಷ್ಟ ಜನಸಂಖ್ಯೆ ಪರಿಶಿಷ್ಟ ಜನಸಂಖ್ಯೆ
ಹೈದರಾಬಾದ್ ಕರ್ನಾಟಕ ಪ್ರದೇಶ
ಒಟ್ಟು 95.26 64.94 30.32 42.57 32.61 9.96
 (68.18)  (31.82)  (76.60)  (23.40)
ಪುರುಷರು 48.38 33.04 15.34 26.49 19.93 6.56
 (68.30)  (31.70)  (75.23)  (24.77)
ಮಹಿಳೆಯರು 46.88 31.90 14.98 16.08 12.68 3.40
 (68.05)  (31.95)  (78.85)  (21.15)
ಕರ್ನಾಟಕ ರಾಜ್ಯ
ಒಟ್ಟು 528.50 408.24 120.26 304.35 251.87 52.48
 (77.24)  (22.76)  (82.75)  (17.25)
ಪುರುಷರು 268.99 208.04 60.9 176.61 144.36 32.25
 (77.34)  (22.66)  (81.73)  (18.27)
ಮಹಿಳೆಯರು 259.51 200.20 59.31 127.73 107.50 20.23
 (77.14)  (22.86)  (84.16)  (15.84)

ಮೂಲ: ಸೆನ್ಸ್‌ಸ್ ಆಫ್ ಇಂಡಿಯಾ 2001. ಕರ್ನಾಟಕ. ಸಿರೀಸ್ 30. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್, ಕರ್ನಾಟಕ

ಟಿಪ್ಪಣಿ: ಆವರಣದಲ್ಲಿನ ಅಂಕಿಗಳು ಒಟ್ಟು ಮೊತ್ತದಲ್ಲಿನ ಶೇಕಡಾ ಪ್ರಮಾಣವನ್ನು ತೋರಿಸುತ್ತವೆ.

[1] ಅಮರ್ತ್ಯಸೆನ್ (1999) , ಮೆಹಬೂಬ್‌ಉಲ್ ಹಕ್ (1995) , ಮಾರ್ತ ನುಸುಬೌಮ್ (2000) ಮುಂತಾದವರ ಬರಹಗಳು ಮತ್ತು ಯುಎನ್‌ಡಿಪಿಯ ಪ್ರಕಟಣೆಗಳು ವರಮಾನಕ್ಕೆ ಅಭಿವೃದ್ಧಿಯಲ್ಲಿ ಸಾಧನವಾಗಿ ಒಂದೇ ಒಂದು ಪಾತ್ರವಿರುತ್ತದೆಯೆಂದೂ, ಸಾಕ್ಷರತೆ ಮತ್ತು ಶಿಕ್ಷಣ ಹಾಗೂ ಆರೋಗ್ಯ, ಲಿಂಗ ಸಮಾನತೆ, ಆಯಾರ ಭದ್ರತೆ ಮುಂತಾದವುಗಳಿಗೆ ಅಭಿವೃದ್ಧಿಯಲ್ಲಿ ಮೂರು ಬಗೆಯ ಪಾತ್ರಗಳಿರುತ್ತವೆಯೆಂದು ಅವು ತೋರಿಸಿಕೊಟ್ಟಿವೆ. ಅವು ಯಾವುವುವೆಂದರೆ –

  1. ಸಾಕ್ಷರತೆ ಮತ್ತು ಶಿ‌ಕ್ಷಣ ಅಭಿವೃದ್ಧಿಯ ಸಾಧನವಾಗಿ ತಮ್ಮ ಪಾತ್ರ ನಿರ್ವಹಿಸುತ್ತವೆ. ಇದು ಉಪಕರಣವಾದಿ ಪಾತ್ರ (Instrumental Rolr)
  2. ಇವು ಅಭಿವೃದ್ಧಿಯ ಅಂತರ್ಗತ ಭಾಗಗಳು. ಜನರಿಗೆ ಒಂದು ಬಗೆಯ ಶಕ್ತಿಯನ್ನು, ಆತ್ಮಸೈರ್ಯವನ್ನು, ಸೌಂದರ್ಯವನ್ನು, ಪ್ರಶ್ನೆ ಮಾಡುವ ಗುಣವನ್ನು ಅವು ಒದಗಿಸಿಕೊಡುತ್ತವೆ. ಇವು ಅಂತರ್ಗತ ಪಾತ್ರ. (Constituent Elements)
  3. ಇವು ಅಭಿವೃದ್ಧಿಯ ಮೌಲ್ಯಮಾಪನದ ಮಾನದಂಡಗಳು. ಸಾಕ್ಷರತೆ, ಅರೋಗ್ಯ, ಲಿಂಗ ಸಮಾನತೆ ಮುಂತಾದ ಸಂಗತಿಗಳು ಅಭಿವೃದ್ಧಿಯ ಮಾನದಂಡಗಳು (Evaluative Measures)

ಅರಿಸ್ಟಾಟಲ್. ಇಮ್ಯಾನುಯಲ್ ಕಾಂಟ್, ಆಡಂಸ್ಮಿತ್ ಮುಂತಾದವರ ವೈಚಾರಿಕ ಪರಂಪರೆಯನ್ನು ಉಲ್ಲೇಖಿಸುತ್ತಾ ಅಮರ್ತ್ಯಸೆನ್, ಹಕ್, ನುಸುಬೌಮ್ ಅವರೆಲ್ಲಾ ವರಮಾನವು ಕೇವಲ ಉಪಕರಣವಾಗಿ ಮಾತ್ರ ಉಪಯುಕ್ತವೆಂದೂ, ಆದರೆ ಸಾಕ್ಷರತೆ, ಶಿಕ್ಷಣ, ಆರೋಗ್ಯ ಮುಂತಾದವುಗಳು ಸಾಧನವಾಗಿ ಉಪಯುಕ್ತ ಮತ್ತು ಅವು ತಮ್ಮಷ್ಟಕ್ಕೆ ತಾವು ಉಪಯುಕ್ತವೆಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇವುಗಳನ್ನು ಕೇವಲ ಸಂಪನ್ಮೂಲಗಳೆಂದು ನೋಡುವುದಕ್ಕೆ ಪ್ರತಿಯಾಗಿ ಅವುಗಳನ್ನು ಅಭಿವೃದ್ಧಿಯ ‘ಸಾಧ್ಯ’ವನ್ನಾಗಿಯೂ ನೋಡುವ ಅಗತ್ಯವಿದೆ.

[2] ನಮ್ಮ ಸಮಾಜದಲ್ಲಿ ಶಿಷ್ಟ ಮತ್ತು ಪರಿಶಿಷ್ಟ ನೆಲೆಗಳಿವೆ. ಹೀಗೆ ನಮ್ಮ ಸಮಾಜವನ್ನು ಸಂಸ್ಕೃತಿಯ ಆಧಾರದ ಮೇಲೆ ವರ್ಗೀಕರಿಸುವುದುಂಟು. (ಗ್ರೇಟ್ ಕಲ್ಚರ್ ಮತ್ತು ಲಿಟ್ಲಲ್ ಕಲ್ಚರ್ ಎಂಬ ಮಾತುಗಳು ಸಂಸ್ಕೃತಿ ಚಿಂತಕರಲ್ಲಿ ಬಳಕೆಯಲ್ಲಿವೆ) . ಇದು ನಮ್ಮ ಪರಂಪರೆಯ ಕೊಡುಗೆಯಾಗಿದೆ. ಇದು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಾಗಿದೆ. ಶಿಷ್ಟವೆನ್ನುವುದು ಉನ್ನತವಾದುದೆಂದು, ಪರಿಶಿಷ್ಟವೆನ್ನುವುದು ಅದಕ್ಕಿಂತ ಕಡಿಮೆಯಾದದ್ದೆಂದು ಹೇಳಲಾಗುತ್ತದೆ. ಶಿಷ್ಟವೆನ್ನುವುದು ಕೇಂದ್ರವಾದರೆ ಪರಿಶಿಷ್ಟವೆನ್ನುವುದು ಪರಿಧಿಯಾಗಿದೆ. ಶಿಷ್ಟವು ಮೂಲವಾದರೆ ಪರಿಶಿಷ್ಟವು ಅನುಬಂಧ. ಈ ಹಿನ್ನೆಲೆಯಲ್ಲಿ ಇವೆರಡೂ ಪರಿಭಾವನೆಯನ್ನು ಬಳಸಿಕೊಂಡು ಇಲ್ಲಿ ಅಭಿವೃದ್ಧಿಯು ಯಾರನ್ನು ಒಳಗೊಳ್ಳುತ್ತದೆ ಮತ್ತು ಅದು ಯಾರನ್ನು ಒಳಗೊಳ್ಳುವುದಿಲ್ಲ ಎಂಬುದನ್ನು ಚರ್ಚಿಸಲಾಗಿದೆ. ಶಿಷ್ಟ ಮತ್ತು ಪರಿಶಿಷ್ಟ ವರ್ಗೀಕರಣವ ಕೇವಲ ವರ್ಗೀಕರಣವಲ್ಲ. ಅವು ಮೇಲು – ಕೀಳು ಎಂಬ ಸಂಗತಿಯನ್ನು ಒಳಗೊಂಡಿರುವ ಸಂಗತಿಗಳಾಗಿವೆ. ಈ ಬಗೆಯ ವರ್ಗೀಕರಣಕ್ಕೆ ಧಾರ್ಮಿಕ ನೆಲೆಯೂ ಇದೆ. ಈ ಶಿಷ್ಟ ಮತ್ತು ಪರಿಶಿಷ್ಟವೆಂಬ ವರ್ಗೀಕರಣವು ಅಖಂಡವಾದ ಸಂಗತಿಯೇನಲ್ಲ. ಪ್ರತಿ ಗುಂಪಿನಲ್ಲೂ ಒಳವಿಭಾಗಗಳಿವೆ. ಅವುಗಳೊಳಗೆ ಪೈಪೋಟಿಯಿದೆ. ಅವುಗಳೊಳಗೆ ಏಣಿ ಶ್ರೇಣಿಗಳಿವೆ. ಇಲ್ಲಿ ಶಿಷ್ಟವೆನ್ನುವುದು ಪವಿತ್ರವೆಂದೂ, ಪರಿಶಿಷ್ಟವೆನ್ನವುದು ಅಪವಿತ್ರವೆಂದೂ ನಂಬಿಕೊಂಡು ಬರಲಾಗಿದೆ. ಪರಿಶಿಷ್ಟರೊಳಗೆ ಅಸ್ಪೃಶ್ಯರಿದ್ದಾರೆ. ಈ ಬಗೆಯ ಸಾಮಾಜಿಕ ಅನಿಷ್ಟಗಳನ್ನೆಲ್ಲಾ ಇಂದು ಸಾಂವಿಧಾನಿಕವಾಗಿ ನಿರ್ಮೂಲನ ಮಾಡಲಾಗಿದೆ. ಆದರೆ ಇವೆಲ್ಲ ಶಾಸನಗಳಿಂದ ಮಾತ್ರವೇ ಸರಿಯಾಗುವ ಸಂಗತಿಗಳಲ್ಲ. ಜನರನ್ನು ಒಳಗೊಳ್ಳುವ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಪರಂಪರೆಯ ಕೊಡುಗೆಯಾಗಿರುವ ಅಭಿವೃದ್ಧಿಯ ಕಂಟಕಗಳನ್ನು, ಸಂಕೋಲೆಗಳನ್ನು ಸಾಮಾಜಿಕ ಸಂಗತಿಗಳಾಗಿ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ.