. ಅನುದಾನ ಹಂಚಿಕೆಗೆ ಸಮಿತಿ ಸೂತ್ರ

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಬಹು ಮುಖ್ಯ ಭಾಗವೆಂದರೆ ಅದು ತಾನು ಶಿಫಾರಸ್ಸು ಮಾಡಿದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ರೂ 16000 ಕೋಟಿಯನ್ನು ಹಿಂದುಳಿದ ತಾಲ್ಲೂಕುಗಳಿಗೆ ಹಂಚುವುದಕ್ಕೆ ರೂಪಿಸಿದ ಕುತೂಹಲಕಾರಿ ಸೂತ್ರವಾಗಿದೆ. ಈ ಅನುದಾನ ಹಂಚಿಕೆಗಾಗಿಯೇ ಅದು ಸಂಚಯಿತ ದುಸ್ಥಿತಿ ಸೂಚ್ಯಂಕವನ್ನು ರೂಪಿಸಿತ್ತು. ಅನುದಾನ ಹಂಚಿಕೆಗೆ ಅದು ‘ತಾಲ್ಲೂಕ’ನ್ನು ಮೂಲ ಘಟಕವನ್ನಾಗಿ ಮಾಡಿಕೊಂಡಿದೆ. ಈ ಸೂತ್ರದ ಮೂಲಧಾತುವೇನೆಂದರೆ ಅನುದಾನವನ್ನು ತಾಲ್ಲೂಕುಗಳ ಹಿಂದುಳಿದಿರುವಿಕೆಗೆ ಅನುಗುಣವಾಗಿ ಹಂಚಬೇಕು ಎಂಬುದಾಗಿದೆ. ‘ಅಸಮಾನತೆಯಿಂದ ಕೂಡಿರುವ ಸ್ಥಿತಿಯಲ್ಲಿ ಅನುದಾನವನ್ನು ಜಿಲ್ಲೆ ಅಥವಾ ತಾಲ್ಲೂಕುಗಳ ನಡುವೆ ಸಮಾನವಾಗಿ ಹಂಚಿದರೆ, ಅಲ್ಲಿನ ಅಸಮಾನತೆಯು ಉಲ್ಬಣಗೊಳ್ಳುತ್ತದೆಯೇ ವಿನಾ ಅದು ಕಡಿಮೆ ಅಥವಾ ನಿವಾರಣೆಯಾಗುವುದಿಲ್ಲ’ ಎಂಬ ಮಾತನ್ನು ಸಮಿತಿಯು ತನ್ನ ವರದಿಯಲ್ಲಿ ಅನೇಕ ಬಾರಿ ಉಲ್ಲೇಖಿಸಿದೆ. ಈ ಸಿದ್ಧಾಂತದ ಆಧಾರದ ಮೇಲೆ ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿದೆ ಮತ್ತು ತನ್ನ ಶಿಫಾರಸ್ಸುಗಳನ್ನು ಮಾಡಿದೆ. ಇಲ್ಲಿ ‘ಅತ್ಯಂತ ಹಿಂದುಳಿದ ತಾಲ್ಲೂಕು’ ಅತ್ಯಂತ ಅಧಿಕ ಅನುದಾನವನ್ನು ಮತ್ತು ‘ಹಿಂದುಳಿದ ತಾಲ್ಲೂಕು’ ಕಡಿಮೆ ಅನುದಾನವನ್ನು ಪಡೆಯುತ್ತವೆ. ಇದಕ್ಕಿಂತ ಮುಖ್ಯವಾಗಿ ತಾಲ್ಲೂಕುಗಳು ‘ಅತ್ಯಂತ ಹಿಂದುಳಿದ ತಾಲ್ಲೂಕು’ಎಂಬ ಗುಂಪಿಗೆ ಸೇರಿದ್ದರೂ ಆ ಗುಂಪಿನಲ್ಲಿನ ಎಲ್ಲ ತಾಲ್ಲೂಕುಗಳಿಗೂ ಅನುದಾನವು ಸಮವಾಗಿರುವುದಿಲ್ಲ. ಅದು ಆಯಾ ತಾಲ್ಲೂಕುಗಳ ದುಸ್ಥಿತಿ ಸೂಚ್ಯಂಕದ ಮೌಲ್ಯವನ್ನು ಆಧರಿಸಿರುತ್ತದೆ. ಇದನ್ನು ಒಂದು ಉದಾಹರಣೆ ಮೂಲಕ ವಿವರಿಸಬಹುದು.

ದೇವದುರ್ಗ ಮತ್ತು ಕುಣಿಗಲ್ ತಾಲ್ಲೂಕುಗಳ ಅನುದಾನ

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕುಗಳು ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿ ಪ್ರಕಾರ ‘ಅತ್ಯಂತ ಹಿಂದುಳಿದ ತಾಲ್ಲೂಕುಗಳ’ ಗುಂಪಿಗೆ ಸೇರುತ್ತವೆ. ಆದರೆ ಅವುಗಳ ದುಸ್ಥಿತಿ ಸೂಚ್ಯಂಕಗಳು ಒಂದೇ ಅಲ್ಲ. ದೇವದುರ್ಗ ತಾಲ್ಲೂಕಿನ ದುಸ್ಥಿತಿ ಸೂಚ್ಯಂಕ 0.47 ರಷ್ಟಾದರೆ ಕುಣಿಗಲ್ ತಾಲ್ಲೂಕಿನ ದುಸ್ಥಿತಿ ಸೂಚ್ಯಂಕ 0.21. ಈ ಕಾರಣದಿಂದಾಗಿ ಇವೆರಡರ ಅನುದಾನ ಭಿನ್ನ ಭಿನ್ನವಾಗಿರಬೇಕಾಗುತ್ತದೆ. ರಾಜ್ಯದ ಒಟ್ಟು ದುಸ್ಥಿತಿಯಲ್ಲಿ ದೇವದುರ್ಗದ ಪಾಲು ಶೇ. 2.32 ಮತ್ತು ಕುಣಿಗಲ್ ತಾಲ್ಲೂಕಿನ ದುಸ್ಥಿತಿ ಪಾಲು ಶೇ.1.04. ಅಂದರೆ ಒಟ್ಟು ಎಂಟು ವರ್ಷದ ಅನುದಾನ ರೂ.16000 ಕೋಟಿಯಲ್ಲಿ ದೇವದುರ್ಗದ ಪಾಲು ರೂ. 371.20 ಕೋಟಿಯಾದರೆ ಕುಣಿಗಲ್‌ನ ಪಾಲು ರೂ.166.4 ಕೋಟಿಯಾಗುತ್ತದೆ. ಎರಡೂ ತಾ‌ಲ್ಲೂಕುಗಳು ‘ಅತ್ಯಂತ ಹಿಂದುಳಿದ ತಾಲ್ಲೂಕುಗಳ’ ಗುಂಪಿಗೆ ಸೇರಿದ್ದರೂ ಅವುಗಳಿಗೆ ಡಾ. ಡಿ.ಎಂ. ನಂಜುಡಪ್ಪ ಸಮಿತಿ ವರದಿಯ ಸೂತ್ರದ ಪ್ರಕಾರ ಅನುದಾನ ಸಮವಾಗಿ ದೊರೆಯುವುದಿಲ್ಲ. ಈ ಸೂತ್ರದ ಪ್ರಕಾರ ಸಾಪೇಕ್ಷವಾಗಿ ಮುಂದುವರಿದ ತಾಲ್ಲೂಕು ಗಳಿಗೆ ಅನುದಾನದ ಅವಶ್ಯಕತೆಯಿರುವುದಿಲ್ಲ. ಸಮಿತಿಯು ಅನುದಾನ ಹಂಚಲು ಅನುಕೂಲವಾಗುವಂತೆ ದುಸ್ಥಿತಿ ಸೂಚ್ಯಂಕವನ್ನು ಎಲ್ಲ ಜಿಲ್ಲೆಗಳಿಗೂ ಲೆಕ್ಕ ಹಾಕಿ ಕೊಟ್ಟಿದೆ (ನೋಡಿ: ಅಂತಿಮ ವರದಿಯ ಪುಟ ಸಂಖ್ಯೆ 870) . ಅದರ ವಿಭಾಗವಾರು ಅನುದಾನ ಹಂಚಿಕೆ ಸ್ವರೂಪ ಹೀಗಿತ್ತು :

  • ರಾಜ್ಯದ ಒಟ್ಟು ಹಿಂದುಳಿದಿರುವಕೆಯ ಸೂಚ್ಯಂಕದ ಮೌಲ್ಯ 20.26.
  • ಇದರಲ್ಲಿ ಗುಲಬರ್ಗಾ ವಿಭಾಗದ ಪಾಲು 8.08 (ಶೇ. 40) .
  • ಬೆಳಗಾವಿ ವಿಭಾಗದ ಮೊತ್ತ 4.12 (ಶೇ.20) .
  • ಬೆಂಗಳೂರು ವಿಭಾಗದ ಪಾಲು 5.32 (ಶೇ.25) .
  • ಮೈಸೂರು ವಿಭಾಗದ ಪಾಲು 2.76 (ಶೇ. 15)

ಈ ಪ್ರಮಾಣದಲ್ಲಿ ವಿಭಾಗಗಳಿಗೆ ಅನುದಾನವನ್ನು ಹಂಚಲು ಸಮಿತಿಯು ಶಿಫಾರಸ್ಸು ನೀಡಿತ್ತು. ಈ ಸಮಿತಿಯು ವಿಭಾಗವಾರು ಹಂಚಿಕೆಗಳಾಗಿ ರೂಪಿಸಿರುವ ಸೂತ್ರವನ್ನೇ ಜಿಲ್ಲಾವಾರು ಮತ್ತು ತಾಲ್ಲೂಕುವಾರು ಹಂಚಿಕೆಗೂ ಬಳಸಬಹುದಾಗಿದೆ. ಅವರು ರೂಪಿಸಿದ್ದ ಸೂತ್ರವು ಶುದ್ಧ ಪ್ರಾದೇಶಿಕವಾದುದಾಗಿತ್ತು. ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಹೆಚ್ಚುವರಿ ಅನುದಾನವಾದ ರೂ. 16000 ಕೋಟಿಯನ್ನು ಸಮಿತಿಯ ಸೂತ್ರದ ಪ್ರಕಾರ ಹಂಚಿದರೆ ಆಗ ಗುಲಬರ್ಗಾ ವಿಭಾಗಕ್ಕೆ ರೂ. 6400 ಕೋಟಿ (ಶೇ. 40) , ಬೆಳಗಾವಿ ವಿಭಾಗಕ್ಕೆ ರೂ. 3600 ಕೋಟಿ (ಶೇ.20.) , ಮೈಸೂರು ವಿಭಾಗಕ್ಕೆ ರೂ.2400 ಕೋಟಿ (ಶೇ. 15) ಮತ್ತು ಬೆಂಗಳೂರು ವಿಭಾಗಕ್ಕೆ ರೂ. 4000 ಕೋಟಿ (ಶೇ. 25) ಅನುದಾನ ದೊರೆಯುತ್ತದೆ.

. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಟಾನ

ಡಾ. ಡಿ.ಎಂ. ನಂಜುಡಪ್ಪ ಸಮಿತಿ ವರದಿಯ ಪ್ರಮುಖ ಶಿಫಾರಸ್ಸಾದ ಎಂಟು ವರ್ಷಗಳ ಅಭಿವೃದ್ಧಿ ಯೋಜನೆಯನ್ನು ಸರ್ಕಾರವು 2007 – 08ರಲ್ಲಿ ಜಾರಿಗೊಳಿಸಿ ಅದರ ಬಾಬ್ತು ಮೊದಲ ವರ್ಷಕ್ಕೆ ರೂ. 1571.50ಕೋಟಿ ಅನುದಾನ ಒದಗಿಸಿತು. ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆ ಸರ್ಕಾರವು ವಿಶೇಷ ಹೊತ್ತಿಗೆಯೊಂದನ್ನು 2007 – 08ರ ಬಜೆಟ್ಟಿನ ಭಾಗವಾಗಿ ಪ್ರಕಟಿಸಿದೆ. ಅದಕ್ಕೆ ಸಂಬಂಧಿಸಿದಂತೆ ಅದು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಈ ಯೋಜನೆಗಾಗಿ ಸರ್ಕಾರವು 2008 – 09ನೆಯ ಸಾಲಿಗಾಗಿ ರೂ 2547ಕೋಟಿ ಮೀಸಲಿರಿಸಿದ್ದರೆ 2009 – 10ನೆಯ ಸಾಲಿಗೆ ರೂ. 2574 ಕೋಟಿ ತೆಗೆದಿರಿಸಿದೆ.

ಈ ಯೋಜನೆಯನ್ನು ಅನುಷ್ಟಾನಗೊಳಿಸುವಾಗ 2007 – 08ನೆಯ ಸಾಲಿನ ಅನುದಾನ ಹಂಚಿಕೆಗೆ ಡಾ. ಡಿ.ಎಂ ನಂಜುಂಡಪ್ಪ ಸಮಿತಿ ರೂಪಸಿದ್ದ ಸೂತ್ರವನ್ನು ಬಿಟ್ಟು ಸರ್ಕಾರವು ತನ್ನದೆ ಸೂತ್ರವನ್ನು ಅನುದಾನ ಹಂಚಿಕೆಗೆ ಜಾರಿಗೊಳಿಸಿತು. ಅದರ ಪ್ರಕಾರ ಅತ್ಯಂತ ಹಿಂದಿಳಿದ 39 ತಾಲ್ಲೂಕುಗಳಿಗೆ ಶೇ. 50. ಅತಿ ಹಿಂದುಳಿದ 40 ತಾಲ್ಲೂಕುಗಳಿಗೆ ಶೇ. 30 ಮತ್ತು ಹಿಂದುಳಿದ 35 ತಾಲ್ಲೂಕುಗಳಿಗೆ ಶೇ. 20ರಂತೆ ಅನುದಾನ ದೊರೆಯುತ್ತದೆ. ಈ ಬಗ್ಗೆ ಸರ್ಕಾರವು 2007 – 08ರ ಬಜೆಟ್ಟಿನ ಭಾಗವಾಗಿ ಪ್ರಕಟಿಸಿರುವ ‘ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಚಿತ್ರಣ’ ಎಂಬ ಹೊತ್ತಿಗೆಯಲ್ಲಿನ ಪುಟ 06ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ.

‘ಅತ್ಯಂತ ಹಿಂದುಳಿದ , ಅತಿ ಹಿಂದುಳಿದ ತಾಲ್ಲೂಕುಗಳಿಗೆ ಹಣವನ್ನು ಹಂಚುವಾಗ ಕ್ರಮವಾಗಿ 50:30:20ರ ಅನುಪಾತದಂತೆ ಹಣವನ್ನು ವಿನಿಯೋಗಿಸಲಾಗುವುದು’.

ಹಣಕಾಸು ಮಂತ್ರಿಗಳಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು 2007 – 08ನೆಯ ಸಾಲಿನ ಬಜೆಟ್ಟನ್ನು ಮಂಡಿಸುವಾಗ ತಮ್ಮ ಭಾಷಣದಲ್ಲಿ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯ ಮುಖ್ಯ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಧಿಸಿದಂತೆ ಅನುದಾನ ಹಂಚಿಕೆಗೆ ಸರ್ಕಾರವು ರೂಪಿಸಿದ್ದ ಸೂತ್ರವನ್ನು ಹೀಗೆ ಹಿಡಿದಿಟ್ಟಿದ್ದಾರೆ.

‘ಅತ್ಯಂತ ಹೆಚ್ಚು ಹಿಂದುಳಿದ, ಹೆಚ್ಚು ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳಿಗೆ ಈ ಹಣವನ್ನು ಹಂಚುವಾಗ 50:30:20 ರ ಅನುಪಾತದಲ್ಲಿ ಹಣವನ್ನು ವಿನಿಯೋಗಿಸಬೇಕೆನ್ನುವ ಸಲಹೆಯನ್ನು ಸಹ ಸದನದ ಮುಂದೆ ಇಡುತ್ತಿದ್ದೇನೆ’ (ಹಣಕಾಸು ಮಂತ್ರಿ ಶ್ರಿ.ಬಿ.ಎಸ್.ಯಡಿಯೂರಪ್ಪ ಅವರ 2007 – 08ನೆಯ ಸಾಲಿನ ಬಜೆಟ್ ಭಾಷಣ : ಪುಟ : 39) .

ಸರ್ಕಾರವು 2007 – 08ನೆಯ ಸಾಲಿನ ಬಜೆಟ್ಟಿನ ಜೊತೆಯಲ್ಲಿ ಪ್ರಕಟಿಸಿರುವ ಹೊತ್ತಿಗೆಯಲ್ಲಿ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಅನುದಾನ ಹಂಚಿಕೆಗೆ ಸಮಿತಿಯು ರೂಪಿಸಿದ್ದ ‘ಸಂಚಯಿತ ದುಸ್ಥಿತಿ ಸೂಚ್ಯಂಕ’ ಆಧರಿಸಿದ ಸೂತ್ರದ ಬಗ್ಗೆ ಚಕಾರವೆತ್ತುವುದಿಲ್ಲ. ಸಮಿತಿಯ ಸೂತ್ರವನ್ನು ಬಿಟ್ಟು ಸರ್ಕಾರವು ತನ್ನದೇ ಅನುದಾನ ಹಂಚಿಕೆ ಸೂತ್ರವನ್ನು ಯಾಕೆ ಅಳವಡಿಸಿಕೊಂಡಿತು ಎಂಬುದಕ್ಕೆ ಸರ್ಕಾರವು ತಾನು ಪ್ರಕಟಿಸಿರುವ ಹೊತ್ತಿಗೆಯಲ್ಲಿ ಏನನ್ನು ಹೇಳಿಲ್ಲ ಮತ್ತು ಯಾವುದೇ ಕಾರಣ ನೀಡಿಲ್ಲ. ಈ ಸೂತ್ರದ ಬದಲಾವಣೆಯಿಂದ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ಹೆಚ್ಚು ಅನುದಾನ ದೊರೆಯುತ್ತದೆ ಎಂಬುದು ಸರ್ಕಾರದ ನಂಬಿಕೆಯಾಗಿದ್ದಿರಬೇಕು. ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಹೆಚ್ಚಾಗಿ ಹೊಂದಿರುವ ಗುಲಬರ್ಗಾ ವಿಭಾಗವು ಈ ಸರ್ಕಾರಿ ಸೂತ್ರದ ಪ್ರಕಾರ ಅತಿ ಹೆಚ್ಚು ಅನುದಾನ ಪಡೆಯುತ್ತದೆ ಎಂಬುದು ಸರ್ಕಾರದ ವಿಶ್ವಾಸವಾಗಿದ್ದಿರಬೇಕು. ಏಕೆಂದರೆ ಅಲ್ಲಿ ಒಟ್ಟು ಅನುದಾನದಲ್ಲಿ ಶೇ.50ರಷ್ಟನ್ನು ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ಮೀಸಲಿರಿಸಲಾಗಿತ್ತು. ಅದರ ಪ್ರಕಾರ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಅಧಿಕವಾಗಿ ಪಡೆದಿರುವ ಗುಲಬರ್ಗಾ ವಿಭಾಗಕ್ಕೆ ಅನುದಾನ ಅತ್ಯಧಿಕವಾಗಿ ದೊರೆಯಬೇಕಾಗಿತ್ತು. ಆದರೆ ವಾಸ್ತವಿಕವಾಗಿ ಎರಡು ಸೂತ್ರದ ಪ್ರಕಾರ ಅನುದಾನ ಹಂಚಿಕೆಯನ್ನು ತುಲನೆ ಮಾಡಿದರೆ ಸರ್ಕಾರಿ ಸೂತ್ರದ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ಗುಲಬರ್ಗಾ ವಿಭಾಗಕ್ಕೆ ಸಮಿತಿ ಸೂತ್ರದ ಪ್ರಕಾರ ಎಷ್ಟು ದೊರೆಯುತ್ತಿತ್ತೊ ಅದಕ್ಕಿಂತ ಕಡಿಮೆ ದೊರೆಯುತ್ತದೆ. ಸರ್ಕಾರಿ ಸೂತ್ರದಲ್ಲಿ 2007 – 08ರಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯುತ್ತಿದ್ದ ಮೊತ್ತ ರೂ. 499.98 ಕೋಟಿ (ಒಟ್ಟು 2007 – 08ರ ಅನುದಾನವಾದ ರೂ.1571.50 ಕೋಟಿಯಲ್ಲಿ ಗುಲಬರ್ಗಾ ವಿಭಾಗದ ಇಪ್ಪತ್ತೊಂದು ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ರೂ. 423.09 ಕೋಟಿ, ಐದು ಅತಿ ಹಿಂದುಳಿದ ತಾಲ್ಲೂಕುಗಳಿಗೆ ರೂ. 58.93 ಕೋಟಿ ಮತ್ತು ಎರಡು ಹಿಂದುಳಿದ ತಾಲ್ಲೂಕುಗಳಿಗೆ ರೂ. 17.96 ಕೋಟಿ. ಒಟ್ಟು ರೂ 499.98ಕೋಟಿ) . ಆದರೆ ಸಮಿತಿಯ ಸೂತ್ರವನ್ನು ಪಾಲಿಸಿದರೆ ಅದಕ್ಕೆ ದೊರೆಯುವ ಮೊತ್ತ ರೂ. 628.52 ಕೋಟಿ (ಇಲ್ಲಿನ 2007 – 08ನೆಯ ಸಾಲಿನ ಒಟ್ಟು ಅನುದಾನವಾದ ರೂ. 1571.50 ಕೋಟಿಯಲ್ಲಿನ ಗುಲಬರ್ಗಾ ವಿಭಾಗದ ಪಾಲು ಶೇ. 40) . ಸೂತ್ರದ ಬದಲಾವನೆಯಿಂದ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಹೆಚ್ಚಾಗಿ ಪಡೆದಿರುವ ಗುಲಬರ್ಗಾ ವಿಭಾಗಕ್ಕೆ (ಶೇ. 53.85) ಅನುಕೂಲವಾಗುವುದಕ್ಕೆ ಪ್ರತಿಯಾಗಿ ಅದು ಮೊದಲ ವರ್ಷವೇ ರೂ. 128.54 ಕೋಟಿ ಹಾನಿ ಅನುಭವಿಸಬೇಕಾಯಿತು. ಸರ್ಕಾರಿ ಸೂತ್ರದ ಪ್ರಕಾರ ಅನುದಾನವನ್ನು ಹಂಚಿದರೆ ಎಂಟು ವರ್ಷಗಳ ಅಭಿವೃದ್ಧಿ ಯೋಜನೆಯ ಒಟ್ಟು ಅನುದಾನ ರೂ.16000 ಕೋಟಿಯಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತ ರೂ. 5090.55 ಕೋಟಿಯಾದರೆ ಬೆಳಗಾವಿ ವಿಭಾಗಕ್ಕೆ ದೊರೆಯುವ ಮೊತ್ತ ರೂ. 3745.66 ಕೋಟಿ. ಅದರಂತೆ ಮೈಸೂರು ವಿಭಾಗಕ್ಕೆ ಅದರಲ್ಲಿ ದೊರೆಯುವ ಪ್ರಮಾಣ ರೂ. 2524.56 ಕೋಟಿಯಾದರೆ ಬೆಂಗಳೂರು ವಿಭಾಗಕ್ಕೆ ದೊರೆಯುವ ಮೊತ್ತ ರೂ. 4639.28 ಕೋಟಿ. ಆದರೆ ಸಮಿತಿಯ ಸೂತ್ರ ಅನುಸರಿಸಿದರೆ ರೂ. 16000 ಕೋಟಿಯಲ್ಲಿ ಎಂಟು ವರ್ಷಗಳಲ್ಲಿ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತ ರೂ. 6400 ಕೋಟಿ (ಇದನ್ನೆಲ್ಲ ಹೇಗೆ ಲೆಕ್ಕ ಹಾಕಲಾಗಿದೆ ಎಂಬುದನ್ನು ಅನುಬಂಧ ಕೋಷ್ಟಕ 2.5 ರಲ್ಲಿ ತೋರಿಸಲಾಗಿದೆ) . ಇಲ್ಲಿ ಗುಲಬರ್ಗಾ ಎಂಟು ವರ್ಷಗಳ ಅವಧಿಯಲ್ಲಿ ಉಂಟಾಗುವ ನಷ್ಟ ರೂ. 13.9.45 ಕೋಟಿ. ಇಷ್ಟು ಮೊತ್ತ ಉಳಿದ ವಿಭಾಗಗಳಿಗೆ ಸಾಗಿಬಿಡುತ್ತದೆ. ಸಮಿತಿ ಸೂತ್ರದ ಪ್ರಕಾರ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಪ್ರಮಾಣ ಶೇ. 40. ಆದರೆ ಸರ್ಕಾರದ ಸೂತ್ರದ ಪ್ರಕಾರ ಅನುದಾನವನ್ನು ಹಂಚಿದರೆ ಅದಕ್ಕೆ ಸಿಗುವ ಪ್ರಮಾಣ ಶೇ. 31.81 ಮಾತ್ರ. ಇದರ ವಿವರಗಳನ್ನು ಕೋಷ್ಟಕ – 13 ರಲ್ಲಿ ಮಂಡಿಸಲಾಗಿದೆ.

ಕೋಷ್ಟಕ13 : ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ : ಹೆಚ್ಚುವರಿ ಅನುದಾನ ರೂ. 16000 ಕೋಟಿಯ ಹಂಚಿಕೆ

ಕ್ರ.ಸಂ ವಿಭಾಗಗಳು ಮತ್ತು ಪ್ರದೇಶಗಳು ಸರ್ಕಾರಿ ಸೂತ್ರದ ಪ್ರಕಾರ ಅನುದಾನ ಹಂಚಿಕೆ ಸಮಿತಿ ಸೂತ್ರದ ಪ್ರಕಾರ ಅನುದಾನ ಹಂಚಿಕೆ ವ್ಯತ್ಯಯ
1. ಬೆಂಗಳೂರು ವಿಭಾಗ 4639.26 4000.00 +639.26
2. ಮೈಸೂರು ವಿಭಾಗ 2524.55 2400.00 +124.55
3. ದ.ಕ.ಪ್ರ. 7163.81 6400.00 +763.81
4. ಬೆಳಗಾವಿ ವಿಭಾಗ 3745.65 3200.00 +545.65
5. ಗುಲಬರ್ಗಾ ವಿಭಾಗ 5090.54 6400.00  – 1309.46
6. ಉ.ಕ.ಪ್ರ. 8836.19 9600.00  – 763.81
7. ಕರ್ನಾಟಕ 16000.00 16000.00  –

ಮೂಲ: 1. ಕರ್ನಾಟಕ ಸರ್ಕಾರ 2002. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ಅಂತಿಮ ವರದಿ

  1. ಕರ್ನಾಟಕಸರ್ಕಾರ 2007. ಡಾ. ಡಿ.ಎಂ. ನಂಜುಂಡಪ್ಪಸಮಿತಿವರದಿಶಿಫಾರಸ್ಸಾದಎಂಟುವರ್ಷದವಿಶೇಷಅಭಿವೃದ್ಧಿಯೋಜನೆಯರೂಪರೇಷೆಕೈಪಿಡಿ.

ಇಲ್ಲಿ ನಮ್ಮೆದುರು ನಿಲ್ಲುವ ಎರಡು ಪ್ರಶ್ನೆಗಳೆಂದರೆ ಸರ್ಕಾರವು ಸಮಿತಿಯ ಸೂತ್ರವನ್ನು ಕೈಬಿಟ್ಟು ತನ್ನದೇ ಸೂತ್ರವನ್ನು ಯಾಕೆ ಅಳವಡಿಸಿತು? ಎರಡನೆಯದು, ಸಮಿತಿಯು ತಾಲ್ಲೂಕುಗಳನ್ನು ಅಭಿವೃದ್ಧಿಯ ಮೂಲ ಘಟಕವನ್ನಾಗಿ ಮಾಡಿಕೊಳ್ಳುವ ಸಲಹೆ ನೀಡಿತ್ತು ಮತ್ತು ಅನುದಾನವನ್ನು ತಾಲ್ಲೂಕುವಾರು ದುಸ್ಥಿತಿ ಸೂಚ್ಯಂಕಕ್ಕೆ ಅನುಗುಣವಾಗಿ ಹಂಚಬೇಕೆಂಬ ನಿಯಮ ಮಾಡಿತ್ತು. ಈ ನಿಯಮವನ್ನು ಸರ್ಕಾರವು ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸುವಾಗ ಪಾಲಿಸಲಿಲ್ಲ. ಏಕೆ ?

ಇದು ಬಹಳ ಮುಖ್ಯವಾದ ಸಂಗತಿಯಾಗಿದೆ. ಉದಾಹರಣೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕು ಮತ್ತು ಬೆಂಗಳೂರು ವಿಭಾಗದ ಕನಕಪುರ ತಾಲ್ಲೂಕು ಎರಡು ಸಹ ‘ಅತ್ಯಂತ ಹಿಂದುಳಿದ ತಾ‌ಲ್ಲೂಕುಗಳ’ ಗುಂಪಿಗೆ ಸೇರುತ್ತವೆ. ಆದರೆ ದೇವದುರ್ಗ ತಾಲ್ಲೂಕಿನ ದುಸ್ಥಿತಿ ಸೂಚ್ಯಂಕ 0.47 ರಷ್ಟಾದರೆ ಕನಕಪುರ ತಾಲ್ಲೂಕಿನ ದುಸ್ಥಿತಿ ಸೂಚ್ಯಂಕ 0.26. ಅಂದರೆ ರಾಜ್ಯದ ಒಟ್ಟು ದುಸ್ಥಿತಿಯಲ್ಲಿ ದೇವದುರ್ಗದ ಪಾಲು ಶೇ.2.32 (0.47/20.26 x 100) ರಷ್ಟಾದರೆ ಕನಕಪುರದ ಪಾಲು ಶೇ. 1.28 (0.26/20.26 x 100) . ಅನುದಾನ ಹಂಚಿಕೆ ಬಗೆಗಿನ ಸಮಿತಿ ಸೂತ್ರವನ್ನು ಚಾಚೂ ಉಲ್ಲಂಘಿಸದೆ ಪಾಲಿಸಿದ್ದರೆ 2007 – 08ನೆಯ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ ಬಾಬ್ತು ರೂ.1571.50 ಕೋಟಿ ಅನುದಾನದಲ್ಲಿ ದೇವದುರ್ಗ ತಾಲ್ಲೂಕಿಗೆ ರೂ. 36.46 ಕೋಟಿ ಮತ್ತು ಕನಕಪುರ ತಾಲ್ಲೂಕಿಗೆ ರೂ. 20.12 ಕೋಟಿ ಅನುದಾನ ದೊರೆಯಬೇಕಾಗಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರವು ರೂಪಿಸಿರುವ ಸೂತ್ರದ ಪ್ರಕಾರ ಅನುದಾನ ಹಂಚಿದರೆ ದೇವದುರ್ಗ ಮತ್ತು ಕನಕಪುರ ಎರಡೂ ತಾಲ್ಲೂಕುಗಳಿಗೂ ಸಮವಾಗಿ ದೊರೆಯುವ ಮೊತ್ತ ರೂ. 20.14 ಕೋಟಿ (ರೂ. 1571.50 ಕೋಟಿ x 50/100 = ರೂ. 785.75 ಕೋಟಿ. ರೂ. 785.75/39 = ರೂ. 20.14 ಕೋಟಿ) . ಅನುದಾನ ಹಂಚಿಕೆ ಸೂತ್ರದ ಬದಲಾವಣೆಯಿಂದ ಅತ್ಯಂತ ಹಿಂದುಳಿದ ತಾಲ್ಲೂಕುಗಳಿಗೆ ನ್ಯಾಯಕ್ಕೆ ಬದಲಾಗಿ ಅನ್ಯಾಯವಾಗುವ ಸಂಗತಿಯನ್ನು ಸರ್ಕಾರವು ಯಾಕೆ ಮನಗಾಣಲಿಲ್ಲ ಎಂಬುದು ಇಂದಿಗೂ ರಹಸ್ಯವಾಗುಳಿದಿದೆ. ಎರಡೂ ತಾಲ್ಲೂಕುಗಳಿಗೆ ಅನುದಾನ ಸಮವಾಗಿದ್ದರೆ ಅದು ನ್ಯಾಯಯುತವಾದದಾಗುವುದಿಲ್ಲ. ಸಮಿತಿಯ ಸೂತ್ರದಲ್ಲಿ ಹೆಚ್ಚು ಅತ್ಯಂತ ಹಿಂದುಳಿದ ತಾಲ್ಲೂಕಿಗೆ, ಅಂದರೆ, ಇಲ್ಲಿ ದೇವದುರ್ಗ ತಾಲ್ಲೂಕಿಗೆ ಹೆಚ್ಚು ಅನುದಾನ (ರೂ. 36.46 ಕೋಟಿ) ಮತ್ತು ಕಡಿಮೆ ಅತ್ಯಂತ ಹಿಂದುಳಿದ ತಾಲ್ಲೂಕಿಗೆ, ಅಂದರೆ, ಕನಕಪುರ ತಾಲ್ಲೂಕಿಗೆ ಕಡಿಮೆ ಅನುದಾನ (ರೂ. 20.12 ಕೋಟಿ) ದೊರೆಯುತ್ತದೆ. ಸರ್ಕಾರವು ರೂಪಿಸಿದ್ದ ಸೂತ್ರದಲ್ಲಿ ಅನುದಾನವನ್ನು ಎಲ್ಲ ತಾಲ್ಲೂಕುಗಳಿಗೆ ಸಮಾನವಾಗಿ ಹಂಚಬೇಕಾಗುತ್ತದೆ. ಇದರಿಂದ ಹಿಂದುಳಿದ ಪ್ರದೇಶಗಳಿಗೆ, ಹಿಂದುಳಿದ ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ಅನ್ಯಾಯವಾಗುತ್ತದೆ. ಈಸಂಗತಿಯನ್ನು ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯು ತನ್ನ ವರದಿಯಲ್ಲಿ ಸ್ಪಷ್ಟವಾಗಿ ಗುರುತಿಸಿದೆ. ಸರ್ಕಾರವು ತಾನು ರೂಪಿಸಿದ್ದ ಸೂತ್ರಕ್ಕೆ ಯಾವುದೇ ಸಮರ್ಥನೆಯನ್ನು ಇದುವರೆವಿಗೂ ನೀಡಿಲ್ಲ.

. ಸಂಶೋಧನೆಯ ಪಾತ್ರ

ಈ ಬಗೆಯ ತಾರತಮ್ಯ ಮತ್ತು ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ಅನುದಾನದಲ್ಲಿದೆ. ಕಡಿತದ ಬಗ್ಗೆ ನಾನು ಮತ್ತು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ. ಬಿ.ಶೇಷಾದ್ರಿ ಕೂಡಿ ಅನುದಾನ ಸೂತ್ರದ ಬದಲಾವಣೆಯಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುವ ಅನ್ಯಾಯವನ್ನು ಲೆಕ್ಕ ಹಾಕಿ ಸಂಬಂಧಿಸಿದವರ ಗಮನಕ್ಕೆ ತರಲು ನಿರ್ಧರಿಸಿದೆವು. ಅದರಂತೆ ಇದನ್ನು ಯೋಜನಾ ಇಲಾಖೆಯ ಗಮನಕ್ಕೆ ಮೊದಲು ತಂದೆವು. ಈ ದಿಶೆಯಲ್ಲಿ ಸಾರ್ವಜನಿಕ ಒತ್ತಡವನ್ನು ರೂಪಿಸುವ ಕೆಲಸವನ್ನು ನಾವಿಬ್ಬರೂ ಮಾಡಿದೆವು.

ಈ ವಿಷಯದಲ್ಲಿ ನಾವು ಮಾಡಿದ ಮುಖ್ಯ ಕೆಲಸವೆಂದರೆ ಅನುದಾನ ಹಂಚಿಕೆ ಸೂತ್ರದ ಬದಲಾವಣೆಯಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ಹಾನಿಯನ್ನು 2007 – 08ನೆಯ ಸಾಲಿಗೆ ಸಂಬಂಧಿಸಿದಂತೆ ಲೆಕ್ಕ ಹಾಕಿ ಒಂದು ಲೇಖನವನ್ನು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟಿಸಿದೆವು (ನೋಡಿ : ಪ್ರಜಾವಾಣಿ, 21.04.2007. ಲೇಖನ : ‘ಪ್ರಾದೇಶಿಕ ಅಸಮಾನತೆ : ಸರ್ಕಾರಿ ಸೂತ್ರದ ಶೂಲ‘. ಮಧ್ಯ ಪುಟದ ಅಗ್ರ ಲೇಖನ. ಓದುಗರ ಅನುಕೂಲಕ್ಕಾಗಿ ಲೇಖನದ ಪಾಠವನ್ನು ಅನುಬಂಧ – 1 ರಲ್ಲಿ ನೀಡಲಾಗಿದೆ) .

ಎರಡನೆಯದಾಗಿ ಅನುದಾನ ಹಂಚಿಕೆ ಸೂತ್ರದ ಬದಲಾವಣೆಯಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ನಷ್ಟವನ್ನು ಕುರಿತಂತೆ ನಾನು ಗುಲಬರ್ಗಾದ ಚೆಂಬರ್ಸ್ ಆಫ್ ಕಾಮರ್ಸ್‌‌ನಲ್ಲಿ ಉಪನ್ಯಾಸವೊಂದನ್ನು ನೀಡಿದೆನು (26.05.2007) . ಈ ಸಂದರ್ಭದಲ್ಲಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು. ಅದರ ಪ್ರಜಾವಾಣಿ ವರದಿಯನ್ನು ಅನುಬಂಧ – 2ರಲ್ಲಿ ನೀಡಲಾಗಿದೆ.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆಯು 02 – 06 – 07ರಂದು ಅನುದಾನ ಹಂಚಿಕೆಯಲ್ಲಿನ ವ್ಯತ್ಯಯದ ಬಗ್ಗೆ ಸಂಪಾದಕೀಯವೊಂದನ್ನು ಬರೆದು ಅನುದಾನ ಹಂಚಿಕೆಯ ಸೂತ್ರದ ಬದಲಾವಣೆಗೆ ಕಾರಣವಾದ ಸಂಗತಿಗಳನ್ನು ಸರ್ಕಾರವು ಬಹಿರಂಗಪಡಿಸಬೇಕೆಂದು ಒತ್ತಾಯಿಸಿತು (ಪ್ರಜಾವಾಣಿಯ ಸಂಪಾದಕೀಯದ ಪಾಠವನ್ನು ಓದುಗರ ಅನುಕೂಲಕ್ಕಾಗಿ ಅನುಬಂಧ – 3ರಲ್ಲಿ ನೀಡಲಾಗಿದೆ) .

ಮೂರನೆಯದಾಗಿ ಮುಂದೆ ಗುಲಬರ್ಗಾ ವಿಭಾಗದ ಕೆಲವು ಶಾಸಕರ ಮತ್ತು ಹೋರಾಟಗಾರರ ನೆರವಿನಿಂದ ಬೆಂಗಳೂರಿನಲ್ಲಿನ ಶಾಸಕರ ಭವನದಲ್ಲಿ ಗುಲಬರ್ಗಾ ವಿಭಾಗದ ಶಾಸಕರನ್ನುದ್ದೇಶಿಸಿ ನಾನು ಮತ್ತು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಮತ್ತೊಬ್ಬ ಸದಸ್ಯರಾದ ಡಾ. ಅಬ್ದುಲ್ ಅಜೀಜ್ ಇಬ್ಬರೂ ಅನುದಾನ ಹಂಚಿಕೆ ಸೂತ್ರದ ಬದಲಾವಣೆಯ ಸಮಸ್ಯೆ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟೆವು (12.07.2007) . ಈ ಸಭೆಯಲ್ಲಿ ಭಾಗವಹಿಸಿದ್ದ ಅಂದಿನ ಗೃಹಮಂತ್ರಿ ಶ್ರೀ ಎಂ.ಪಿ.ಪ್ರಕಾಶ್ ಅವರು ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ 2007 – 08ರ ಸಾಲಿನಲ್ಲಿ ನೀಡಿರುವ ರೂ. 1571.50 ಕೋಟಿ ಹೆಚ್ಚುವರಿಯಾದುದಲ್ಲವೆಂಬ ಸತ್ಯವನ್ನು ಹೊರಹಾಕಿದರು (ಈ ಬಗ್ಗೆ ದಿನಾಂಕ 13.07.2007 ರ ದಿ – ಹಿಂದು ಪತ್ರಿಕೆಯ ಹಾಗೂ ಪ್ರಜಾವಾಣಿ ಪತ್ರಿಕೆಯ ವರದಿಗಳನ್ನು ನೋಡಬಹುದು. ಇದನ್ನು ಅನುಬಂಧ – 4ರಲ್ಲಿ ನೀಡಲಾಗಿದೆ) . ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚುವರಿಯಾದುದಲ್ಲ ಎಂಬುದಕ್ಕೆ ಮುಂದೆ ಸರ್ಕಾರದ ದಾಖಲೆಯನ್ನು ಆಧಾರವಾಗಿ ನೀಡಲಾಗಿದೆ.

ಈ ಬಗ್ಗೆ ಚರ್ಚೆಗಾಗಿ ರಾಜ್ಯ ಯೋಜನಾ ಇಲಾಖೆಯು ಒಂದು ಸಭೆಯನ್ನು ಏರ್ಪಡಿಸಿ (ದಿನಾಂಕ 13 – 09 – 07) ನಮ್ಮನ್ನು ಅಲ್ಲಿಗೆ ಚರ್ಚೆಗಾಗಿ ಆಹ್ವಾನಿಸಿತು (ಅದರ ಹಂಚಿಕೆ ಸೂತ್ರದ ಬದಲಾವಣೆಯಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುವ ಹಾನಿಯ ಬಗ್ಗೆ ಯೋಜನಾ ಸಚಿವರ ಗಮನ ಸೆಳೆಯಲಾಯಿತು. ನಮ್ಮ ವಾದವನ್ನು ಒಪ್ಪಿಕೊಂಡ ಯೋಜನಾ ಸಚಿವರು ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವ್ಯತ್ಯಯವನ್ನು ಸರಿಪಡಿಸುವುದಾಗಿ ನಮಗೆ ಭರವಸೆ ನೀಡಿದರು.

ಈ ಮಧ್ಯ ಶ್ರೀ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ – ಬಿಜೆಪಿ ಸಮ್ಮಿಶ್ರ ಸರ್ಕಾರವು ಅಧಿಕಾರವನ್ನು ಕಳೆದುಕೊಂಡಿತು. ತಾತ್ಪೂರ್ತಿಕವಾಗಿ ರಾಷ್ಟ್ರಪತಿ ಆಳ್ವಿಕೆಯು ಜಾರಿಗೆ ಬಂದಿತು. ಆಗ ನಾವು 2008 – 09ನೆಯ ಸಾಲಿನ ಬಜೆಟ್ಟಿನಲ್ಲಿ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ರೂಪಿಸಿಕೊಟ್ಟಿದ್ದ ಸೂತ್ರವನ್ನು ಅಳವಡಿಸಿಕೊಳ್ಳುವ ಅಗತ್ಯದ ಬಗ್ಗೆ ರಾಜ್ಯಪಾಲರ ಗಮನ ಸೆಳೆಯುವುದಕ್ಕಾಗಿ ಅವರಿಗೊಂದು ಮನವಿಯನ್ನು 01 – 01 – 08ರಲ್ಲಿ ಸಲ್ಲಿಸಿದೆವು (ಅದರ ಪ್ರತಿಯನ್ನು ಅನುಬಂಧ – 6ರಲ್ಲಿ ನೀಡಲಾಗಿದೆ) . ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಸರ್ಕಾರದ ಸೂತ್ರದಿಂದ ಗುಲಬರ್ಗಾ ವಿಭಾಗಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಲೆಕ್ಕಚಾರ ಹಾಕಿ ರಾಜ್ಯಪಾಲರಿಗೆ ವಿವರವನ್ನು ಒದಗಿಸಿಕೊಟ್ಟೆವು. ಅದಕ್ಕೆ ಉತ್ತರಿಸಿದ ರಾಜ್ಯಪಾಲರು ಸಂಬಂಧಿಸಿದ ಇಲಾಖೆಗೆ ಸೂಕ್ತ ಕ್ರಮವಹಿಸುವಂತೆ ಸೂಚಿಸಿ ಮನವಿಯನ್ನು ರವಾನಿಸಿರುವುದಾಗಿ ನಮಗೆ ಕಳುಹಿಸಿದ ಪತ್ರದಲ್ಲಿ ತಿಳಿಸಲಾಯಿತು (ಅನುಬಂಧ – 7) .

ಸಂಶೋಧನೆಗೆ ದೊರೆತ ಜಯ

ನಮ್ಮ ಸಂಶೋಧನೆಯ ಫಲವಾಗಿ ಮತ್ತು ಸಾರ್ವಜನಿಕ ಒತ್ತಡದ ಪರಿಣಾಮವಾಗಿ ಹೊಸದಾಗಿ ಅಧಿಕಾರಕ್ಕೆ ಬಂದ ಬಿ.ಜೆ.ಪಿ ಸರ್ಕಾರವು ಈ ಹಿಂದೆ ತಾನೇ ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯ ಮುಖ್ಯ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ಕುರಿತಂತೆ ಸರ್ಕಾರವು 2007 – 08ನೆಯ ಸಾಲಿನ ಬಜೆಟ್ಟಿನಲ್ಲಿ ಮಾಡಿದ ತಪ್ಪನ್ನು ಮನಗಂಡು 2008 – 09ರಲ್ಲಿನ ಬಜೆಟ್ಟಿನಲ್ಲಿ ಅದನ್ನು ಸರಿಪಡಿಸುವ ಕಾರ್ಯವನ್ನು ಕೈಗೊಂಡಿದೆ. ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿ ಮಮಡೆಯಾಗಿದಗದ ಅನುದಾನ ಹಂಚಿಕೆ ಸೂತ್ರವನ್ನು ಬಿಟ್ಟು ತನ್ನದೇ ಸೂತ್ರವನ್ನು ಸರ್ಕಾರವು ಅಳವಡಿಸಿಕೊಂಡಿದ್ದರಿಂದ ಅನೇಕ ಸಮಸ್ಯೆಗಳು ಉಂಟಾದವು. ಈ ವಿಕೃತಿಯನ್ನು ಸರಿಪಡಿಸಲೋಸುಗ ಸರ್ಕಾರವು 2008 – 09ನೇ ಸಾಲಿನಲ್ಲಿ ತಾನು ರೂಪಿಸಿದ್ದ ಸೂತ್ರವಾದ 50:30:20 ಅನುಪಾತವನ್ನು ಕೈಬಿಟ್ಟು ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ರೂಪಿಸಿ ಕೊಟ್ಟಿದ್ದ ಅನುದಾನ ಹಂಚಿಕೆ ಸೂತ್ರವನ್ನು ಅಳವಡಿಸಿಕೊಂಡ ಬಗ್ಗೆ 29ನೆಯ ಏಪ್ರಿಲ್, 2008ರಲ್ಲಿ ಸರ್ಕಾರವು ಆದೇಶವೊಂದನ್ನು ಹೊರಡಿಸಿತು. ಹೀಗೆ ಅನುದಾನ ಸೂತ್ರವನ್ನು ಬದಲಾಯಿಸಿದ್ದರ ಬಗ್ಗೆ ವಿವರಗಳನ್ನು ದಿನಾಂಕ 07 – 07 – 08ರ ಪತ್ರದಲ್ಲಿ ರಾಜ್ಯ ಯೋಜನಾ ಇಲಾಖೆಯು ನಮಗೆ ವಿವರಗಳನ್ನು ಒದಗಿಸಿಕೊಟ್ಟಿದೆ. (ಸದರಿ ಪತ್ರವನ್ನು ಅನುಬಂಧ – 8ರಲ್ಲಿ ನೀಡಲಾಗಿದೆ) . ಈ ಪತ್ರದ ಜೊತೆಯಲ್ಲಿ ಸರ್ಕಾರಿ ಆದೇಶದ ಪ್ರತಿಯನ್ನು ಕಳುಹಿಸಿಕೊಟ್ಟಿತು. ಈ ಆದೇಶದಲ್ಲಿ ಅನುದಾನ ಹಂಚಿಕೆ ಸೂತ್ರದ ಬದಲಾವಣೆ ಕುರಿತಂತೆ ಹೀಗೆ ಬರೆಯಲಾಗಿದೆ.

‘2007 – 08ನೆಯ ಸಾಲಿನಲ್ಲಿ ಪ್ರಕಟಿಸಿರುವ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಚಿತ್ರಣ’ ಎಂಬ ದಸ್ತಾವೇಜಿನಲ್ಲಿ ಯೋಜನೆಗೆ ಒದಗಿಸಿದ ಹಣವನ್ನು ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳಿಗೆ 50:30:20ರ ಅನುಪಾತದಲ್ಲಿ ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿತ್ತು. ಅವಿಭಾಜ್ಯ ಸ್ವರೂಪವುಳ್ಳ ಕೆಲವೊಂದು ಯೋಜನೆಗಳಿಗೆ ಸಂಪನ್ಮೂಲ ಹಂಚುವಾಗ ಇಲಾಖೆಗಳಿಗೆ ಮೇಲೆ ನಮೂದಿಸಿರುವ ಅನುಪಾತವನ್ನು ಅನುಸರಿಸಲು ಕೆಲವು ತೊಂದರೆಗಳು/ ಅಡೆತಡೆಗಳು ಉಂಟಾಗಿವೆ. ಈ ಹಿನ್ನೆಲೆಯಲ್ಲಿ ಅತ್ಯಂತ ಹಿಂದುಳಿದ, ಅತಿ ಹಿಂದುಳಿದ ಮತ್ತು ಹಿಂದುಳಿದ ತಾಲ್ಲೂಕುಗಳಿಗೆ 50:30:20ರ ಅನುಪಾತವನ್ನು ಅನುಸರಿಸುವುದು ಸಾಧ್ಯವಾಗಿರುವುದಿಲ್ಲ. ಆದುದರಿಂದ 2008 – 09ನೆಯ ಸಾಲಿನಿಂದ ಮತ್ತು ನಂತರದಿಂದ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಂಪನ್ಮೂಲ ಹಂಚುವಾಗ ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಲು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನಂತೆ ಒಟ್ಟು ಸಂಪನ್ಮೂಲವನ್ನು ರಾಜ್ಯದ ನಾಲ್ಕು ವಿಭಾಗಗಳಾದ ಗುಲಬರ್ಗಾ, ಬೆಳಗಾವಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಕ್ರಮವಾಗಿ 40:20:15:25ರ ಅನುಪಾತದಲ್ಲಿ ವಿಭಾಗಗಳ ಸಂಚಯಿತ ಸೂಚ್ಯಂಕಗಳ ಆಧಾರದಲ್ಲಿ (Cumulative Deprivation Index=CDI) ವಿತರಿಸಲು ನಿರ್ಧರಿಸಲಾಗಿದೆ’.

ಇದು ನಮ್ಮ ಪ್ರಯತ್ನಕ್ಕೆ ದೊರೆತ ಜಯವಾಗಿತ್ತು. ಈ ಜಯವು ನಾನು ಮತ್ತು ಡಾ. ಬಿ.ಶೇಷಾದ್ರಿ ಅವರು ಒಂದು ವರ್ಷ ಕಾಲ ನಡೆಸಿದ ಅವಿರತ ಸಂಶೋಧನಾತ್ಮಕ, ಹೋರಾಟಾತ್ಮಕ ಮತ್ತು ಶೈಕ್ಷಣಿಕ ಪ್ರಯತ್ನಕ್ಕೆ ದೊರೆತ ಫಲವಾಗಿದೆ. ಸಂಶೋಧನೆ ಮೂಲಕ ಸರ್ಕಾರದ ನೀತಿಗಳನ್ನು ಮತ್ತು ಕಾರ್ಯಕ್ರಮಗಳನ್ನು ಪ್ರಭಾವಿಸಬಹುದು ಮತ್ತು ಅಲ್ಲಿ ಬದಲಾವಣೆ ತರಬಹುದು ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಆದರೆ ಸರ್ಕಾರವು ತನ್ನ ಸೋಲನ್ನು ಒಪ್ಪಿಕೊಳ್ಳಲು ಕೊನೆಗೂ ಸಿದ್ಧವಿಲ್ಲವೆಂಬುದು ಮೇಲಿನ ವಿವರಣೆಯಿಂದ ತಿಳಿಯುತ್ತದೆ. ಅನುದಾನ ಹಂಚಿಕೆ ಸೂತ್ರದಲ್ಲಿನ ಬದಲಾವಣೆಗೆ ಸರ್ಕಾರವು ನೀಡಿರುವ ಕಾರಣ ಕೇವಲ ನೆಪ ಮಾತ್ರವಾಗಿದೆ. ಅದಕ್ಕೆ ತಾನು ರೂಪಿಸಿದ್ದ ಅನುದಾನ ಹಂಚಿಕೆ ಸೂತ್ರವನ್ನು ಸಮರ್ಥಿಸಿಕೊಳ್ಳುವುದು ಸಾಧ್ಯವಾಗಿಲ್ಲವಾದರೂ ‘ಜುಟ್ಟು ಮಣ್ಣಾಗಿಲ್ಲ’ವೆಂದು ಸರ್ಕಾರವು ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿದೆ. ಅಲ್ಲಿ 50:30:20 ಸೂತ್ರದ ಅನುಷ್ಟಾನಕ್ಕೆ ಯಾವ ತೊಡಕೂ ಇರಲಿಲ್ಲ. ಅಲ್ಲಿದ್ದದ್ದೂ ನಾವು ನೀಡಿದ ಅಧ್ಯಯನ ಆಧರಿತ ಪುರಾವೆ ಮತ್ತು ಸಾರ್ವಜನಿಕರಿಂದ ಸರ್ಕಾರದ ಮೇಲೆ ಉಂಟಾದ ಒತ್ತಡ. ಸರ್ಕಾರಿ ಸೂತ್ರದಿಂದ ರಾಜ್ಯದ ಅತ್ಯಂತ ಹಿಂದುಳಿದ ಗುಲಬರ್ಗಾ ವಿಭಾಗಕ್ಕೆ ಅನುದಾನ ಕಡಿಮೆ ದೊರೆಯುತ್ತದೆಯೆಂಬುದು ಅದಕ್ಕೆ ನುಂಗಲಾರದ ತುತ್ತಾಗಿತ್ತು. ಯಾವ ಲೆಕ್ಕಾಚಾರವನ್ನು ಮಾಡದೆ ಸರ್ಕಾರವು ತನ್ನ ಸೂತ್ರವನ್ನು ಪ್ರಕಟಿಸಿತ್ತು. ಅದರಿಂದ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಹೆಚ್ಚು ಅನುದಾನ ದೊರೆತಯುತ್ತದೆಯೆಂದು ಸರ್ಕಾರ ಭಾವಿಸಿತ್ತು. ಅದಕ್ಕೆ ಯಾವುದೇ ಆಧಾರವಿರಲಿಲ್ಲ. ಸರ್ಕಾರ ಸೂತ್ರದ ಪ್ರಕಾರ ಲೆಕ್ಕ ಹಾಕಿದಾಗ ಅದರ ಬಣ್ಣ ಬಯಲಾಯಿತು. ಅದರ ಬಣ್ಣವನ್ನು ನಾವು ಬಯಲು ಮಾಡಿದೆವು. ವಿವೇಚನಾ ರಹಿತವಾಗಿ ನೀತಿಯನ್ನು ಸರ್ಕಾರವು ರೂಪಿಸಿದರೆ ಏನಾಗುತ್ತದೆಯೆಂಬುದಕ್ಕೆ ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು 2007 – 08ರ ಬಜೆಟ್ಟಿನಲ್ಲಿ ನಡೆಸಿದ ಹಸ್ತಕ್ಷೇಪವೇ ಸಾಕ್ಷಿಯಾಗಿದೆ. ನಮ್ಮ ಹೋರಾಟದ ಫಲವಾಗಿ ಗುಲಬರ್ಗಾ ವಿಭಾಗಕ್ಕೆ ಅಂತೂ ಕೊನೆಗೆ ನ್ಯಾಯವನ್ನು ಒದಗಿಸಿ ಕೊಡುವುದು ನಮಗೆ ಸಾಧ್ಯವಾಯಿತು. ಏನಿಲ್ಲದಿದ್ದರೂ ಇದು ನಮಗೆ ತರಬಹುದಾದ ಸಮಧಾನವಾಗಿದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಮುಖ್ಯ ಶಿಫಾರಸ್ಸಾದ ಎಂಟು ವರ್ಷದ ಅಭಿವೃದ್ಧಿ ಯೋಜನೆಯ ಬಾಬ್ತು ಅನುದಾನವನ್ನು ಸರ್ಕಾರಿ ಸೂತ್ರದ ಪ್ರಕಾರ ಹಂಚಿದ್ದರೆ ಗುಲಬರ್ಗಾ ವಿಭಾಗಕ್ಕೆ ಎಂಟು ವರ್ಷಗಳಲ್ಲಿ (2007 – 08 ರಿಂದ 2014 – 15) ರೂ. 1309 ಕೋಟಿ ನಷ್ಟವಾಗುತ್ತಿತ್ತು. ಈ ಸಂಗತಿಯನ್ನು ಗಂಭಿರವಾಗಿ ಪರಿಗಣಿಸಿದ ನಾವು ಸರ್ಕಾರವು ತನ್ನ ಅನುದಾನ ಹಂಚಿಕೆ ಸೂತ್ರವನ್ನು ಕೈಬಿಟ್ಟು ಸಮಿತಿಯ ಸೂತ್ರವನ್ನು ಅಳವಡಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದೆವು. ಗುಲಬರ್ಗಾ ವಿಭಾಗಕ್ಕೆ ರೂ. 1309 ಕೋಟಿಯನ್ನು ನಾವು ಉಳಿಸಿಕೊಟ್ಟಿದ್ದೇವೆ. ಇದು ನಮ್ಮ ಹೆಮ್ಮೆಯ ಸಾಧನೆಯಾಗಿದೆ.

ನಮ್ಮ ಹೋರಾಟದ ಮೂಲಕ ಮತ್ತು ಅಧ್ಯಯನಗಳ ಮೂಲಕ ಸರ್ಕಾರವು ತಾನು ಮಾಡಿದ್ದ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಮಾಡಿದೆವು. ಅದರ ಪರಿಣಾಮವಾಗಿ ಒಂದು ಸಮಸ್ಯೆ ಬಗೆಹರಿಯಿತು. ಈ ಸೂತ್ರಕ್ಕೆ ಸಂಬಂಧಿಸಿದ ಬದಲಾವಣೆಯು ಸಮಸ್ಯೆಯ ಒಂದು ಭಾಗ ಮಾತ್ರವಾಗಿದೆ. ಅಲ್ಲಿ ಇನ್ನೂ ಅನೇಕ ಸಮಸ್ಯೆಗಳಿವೆ. ಅದರಲ್ಲಿ ಒಂದನ್ನು ಇಲ್ಲಿ ಚರ್ಚಿಸಬಹುದಾಗಿದೆ.

ಅನುದಾನ ಹೆಚ್ಚುವರಿಯಾದುದಲ್ಲ !

ಈ ಸರ್ಕಾರವು ತಾನು ಹೇಳುವುದೊಂದು ಮತ್ತು ಮಾಡುವುದು ಮತ್ತೊಂದು ಎಂಬುದಕ್ಕೆ ಡಾ. ಡಿ.ಎಂ. ನಂಜುಂಡಪ್ಪ ಸಮತಿಯ ಮುಖ್ಯ ಶಿಫಾರಸ್ಸಾದ ಎಂಟು ವರ್ಷದ ಅಭಿವೃದ್ಧಿ ಯೋಜನೆ ಬಾಬ್ತು ಹಣ ವಿನಿಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು 2007 – 08ನೆಯ ಸಾಲಿನ ಬಜೆಟ್ಟಿನಲ್ಲಿ ಹೀಗೆ ಹೇಳಿದೆ.

ಕಂಡಿಕೆ : 71

‘ಕರ್ನಾಟಕದಲ್ಲಿರುವ ಪ್ರಾಂತೀಯ ಅಸಮತೋಲನೆಯು ಸರ್ವರಿಗೂ ತಿಳಿದ ವಿಷಯವೇ. ಈ ಅಸಮತೋಲನೆಯನ್ನು ಹೋಗಲಾಡಿಸಲು ಸರ್ಕಾರವು ದಿವಂಗತ ಡಾ. ಡಿ.ಎಂ.ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲೊಂದು ಸಮಿತಿಯನ್ನು ರಚಿಸಿದ್ದು, ಆ ಸಮಿತಿಯು ತನ್ನ ವರದಿಯನ್ನು ನೀಡಿರುತ್ತದೆ. ಈ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ನಮ್ಮಲ್ಲಿ ಯಾರಿಗೂ ಭಿನ್ನಮತ ಇರುವುದಿಲ್ಲ. ಆದರೆ ಈವರೆಗೆ ನಾವು ಈ ವರದಿಯ ಸಲಹೆಗಳನ್ನು ಎಲ್ಲರಿಗೂ ಒಪ್ಪುವಂತೆ ವ್ಯವಸ್ಥಿತ ರೀತಿಯಲ್ಲಿ ಅನುಷ್ಟಾನ ಮಾಡಲು ಸಾಧ್ಯವಾಗಿರುವುದಿಲ್ಲ’.

ಕಂಡಿಕೆ : 72.

‘ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುತ್ತಿದ್ದೇವೆ. ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ವರದಿಯ ಪ್ರಕಾರ ಸುಮಾರು ರೂ. 15000 ಕೋಟಿ ಬಂಡವಾಳವನ್ನು ಹಿಂದುಳಿದ ಪ್ರದೇಶಗಳಲ್ಲಿ ಹೂಡುವುದರ ಜೊತೆಗೆ ಹೆಚ್ಚುವರಿಯಾಗಿ ಸುಮಾರು ರೂ. 16000 ಕೋಟಿ ಹೂಡಿಕೆಯನ್ನು ಮುಂದಿನ ಎಂಟು ವರ್ಷಗಳಲ್ಲಿ ಮಾಡಬೇಕಾಗುತ್ತದೆ. ಯಾವ ಯಾವ ಕ್ಷೇತ್ರಗಳಲ್ಲಿ ಎಷ್ಟು ಹಂಚಿಕೆಯನ್ನು ಮಾಡಬೇಕೆಂಬುದನ್ನು ಸಹ ಸಮಿತಿಯು ತಿಳಿಸಿರುತ್ತದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ನೀಡಿರುವ ಸಲಹೆಯನ್ನು ಆಧರಿಸಿ ಮುಂದಿನ ಎಂಟು ವರ್ಷದಲ್ಲಿ ಅನುಷ್ಟಾನಗೊಳಿಸಿಬಹುದಾದ ಒಂದು ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನು ತಯಾರು ಮಾಡಲು ನಾವು ಪ್ರಯತ್ನಪಟ್ಟಿರುತ್ತೇವೆ. ಹಂಚಿಕೆ ಮಾಡುವಾಗ ಶೇ. 5ರಷ್ಟು ಉಂಟಾಗಬಹುದಾದ ಹಣದುಬ್ಬರವನ್ನು ಸಹ ಪರಿಗಣಿಸಲಾಗಿದೆ. ಈ ವಿಶೇಷ ಅಭಿವೃದ್ಧಿ ಯೋಜನೆಯನ್ನು ಗೌರವಾನ್ವಿತ ಸದನದ ಮುಂದೆ ಪ್ರಸ್ತುತ ಪಡಿಸಲಾಗುವುದು’.

ಕಂಡಿಕೆ : 73

‘ಈಗ ವಿಶೇಷ ಅಭಿವೃದ್ಧಿ ಯೋಜನೆಯು ನಮಗೆ ಲಭ್ಯವಿರುವುದರಿಂದ ನಾವು ತಕ್ಷಣವೇ ಕಾರ್ಯೋನ್ಮುಖವಾಗಬೇಕಾಗಿದೆ. ಈ ಯೋಜನೆಯ ಪ್ರಕಾರ 2007 – 08ನೆಯ ಸಾಲಿನಲ್ಲಿ ನಾವು ಇತರ ಕಾರ್ಯಕ್ರಮಗಳಲ್ಲಿ ನೀಡಿರುವ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರೂ 1536 ಕೋಟಿ ಮೀಸಲಿಡಬೇಕಾಗಿದೆ. ಇದೇ ಲೆಕ್ಕಚಾರದನ್ವಯ 2007 – 08ನೆಯ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯನ್ನು ಅನುಷ್ಟಾನಗೊಳಿಸಲು ನಾನು ರೂ. 1571 ಕೋಟಿ ಹೊಂದಿಸಲು ಪ್ರಯತ್ನಿಸಿರುತ್ತೇನೆ’.

(ಹಣಕಾಸು ಮಂತ್ರಿಗಳ 2007 – 08ನೆಯ ಸಾಲಿನ ಬಜೆಟ್ ಭಾಷಣ:ಪುಟ: 37 – 38) .

ಅನುದಾನ ಹಂಚಿಕೆ ಸೂತ್ರವನ್ನೇನೋ ನಮ್ಮ ಮಧ್ಯಪ್ರವೇಶದಿಂದಾಗಿ ಸರ್ಕಾರವು ಬದಲಾಯಿಸಿತು. ಆದರೆ ಅಲ್ಲಿನ ಸಮಸ್ಯೆಗಳು ಬಗೆಹರಿದಿಲ್ಲ. ಈಗಿನ ಸಮಸ್ಯೆ ಬೇರೆಯೇ ಆಗಿದೆ. ಸರ್ಕಾರವೇನೋ ಮೊದಲಿನಿಂದಲೂ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಗೆ ಅನುದಾನವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆಯೆಂದು ಹೇಳುತ್ತಿದೆ. ಆದರೆ ವಾಸ್ತವವಾಗಿ ಅದು ಹೆಚ್ಚುವರಿಯಾದುದಲ್ಲವೆಂಬುದು ಈಗ ಸ್ಪಷ್ಟವಾಗುತ್ತಿದೆ. ಇತ್ತೀಚಿಗೆ ಸರ್ಕಾರದ ಯೋಜನಾ ಇಲಾಖೆಯು ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಗೆ ನೀಡಿದ ಅನುದಾನ ಹೆಚ್ಚುವರಿಯಲ್ಲವೆಂಬುದನ್ನು ಅಪ್ರತ್ಯಕ್ಷವಾಗಿ ಒಪ್ಪಿಕೊಂಡಿದೆ. ವಿಶೇಷ ಅಭಿವೃದ್ಧಿ ಯೋಜನೆಗೆ ನೀಡುತ್ತಿರುವ ಅನುದಾನವು ರಾಜ್ಯದ ಒಟ್ಟು ಯೋಜನಾ ವೆಚ್ಚದ ಅವಿಭಾಜ್ಯ ಭಾಗವಾಗಿದೆ. ಅಂದರೆ 2007 – 08ನೆಯ ಸಾಲಿನ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ರೂ. 1571.50 ಕೋಟಿಯು ಸದರಿ ವರ್ಷದ ರಾಜ್ಯ ಯೋಜನಾ ವೆಚ್ಚವಾದ ರೂ.17783 ಕೋಟಿಯೊಳಗಿನ ಭಾಗವಾಗಿದೆ. ಅದರಂತೆ 2008 – 09ನೆಯ ಸಾಲಿನ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ರೂ. 2547ಕೋಟಿಯೂ ಸಹ ಸದರಿ ವರ್ಷದ ರಾಜ್ಯ ಯೋಜನಾ ವೆಚ್ಚವಾದ ರೂ. 25952.84 ಕೋಟಿಯ ಭಾಗವಾಗಿದೆ. ಅದೇ ರೀತಿಯಲ್ಲಿ 2009 – 10ನೆಯ ಸಾಲಿನ ಒಟ್ಟು ಯೋಜನಾ ವೆಚ್ಚವಾದ ರೂ. 29500 ಕೋಟಿಯ ಅಂತರ್ಗತ ಭಾಗವೇ ವಿಶೇಷ ಅಭಿವೃದ್ಧಿ ಯೋಜನೆಗಾಗಿ ಮೀಸಲಿಟ್ಟಿರುವ ರೂ. 2574 ಕೋಟಿಯಾಗಿದೆ. ಇದನ್ನು ಈಗ ಸರ್ಕಾರವೇ ಒಪ್ಪಿಕೊಂಡಿದೆ. ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ತನ್ನ ವರದಿಯಲ್ಲಿ ಅತ್ಯಂತ ಸ್ಪಷ್ಟವಾಗಿ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಒಟ್ಟು ಮೊತ್ತವಾದ ರೂ. 31000 ಕೋಟಿಯಲ್ಲಿ ರೂ. 15000 ಕೋಟಿಯು ನಿಯಮಿತವಾಗಿ ಜಿಲ್ಲೆಗಳಿಗೆ ಯೋಜನೆ ಬಾಬ್ತು ಹರಿದು ಬರುತ್ತದೆ. ಆದರೆ ಉಳಿದ ರೂ. 16000 ಕೋಟಿಯನ್ನು ಸರ್ಕಾರವು ‘ಹೆಚ್ಚುವರಿ’ಯಾಗಿ ರಾಜ್ಯದ 114 ತಾಲ್ಲೂಕುಗಳಿಗೆ ವಿನಿಯೋಗಿಸಬೇಕು ಎಂಬುದನ್ನು ತಿಳಿಸಿದೆ. ಆದರೆ ಸರ್ಕಾರವು ವಿಶೇಷ ಅಭಿವೃದ್ಧಿ ಯೋಜನೆಗಾಗಿ ನೀಡುತ್ತಿರುವ ಅನುದಾನ ಹೆಚ್ಚುವರಿಯಾದುದೇ? ಉತ್ತರ ಸ್ಪಷ್ಟವಾಗಿ ‘ಅಲ್ಲ’. ಈ ಅನುದಾನವು ವಾರ್ಷಿಕ ಯೋಜನೆಯ ಅಂತರ್ಗತ ಭಾಗವಾಗಿದೆ. ಈ ಮಾತನ್ನು ಸರ್ಕಾರದ ಯೋಜನಾ ಇಲಾಖೆಯು ಈ ಬಗ್ಗೆ ಹೊರಡಿಸಿರುವ ‘ವಿಶೇಷ ಅಭಿವೃದ್ಧಿ ಯೋಜನೆ : 2008 – 09ನೆಯ ಸಾಲಿನ ಅನುಷ್ಟಾನ ಕುರಿತ ಮಾರ್ಗಸೂಚಿಗಳು’ ಎಂಬ ದಸ್ತಾವೇಜಿನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲಿನ ಒಕ್ಕಣೆ ಹೀಗಿದೆ:

‘2007 – 08ನೆಯ ಸಾಲಿನಲ್ಲಿ ರೂ. 17783 ಕೋಟಿಗಳ ಒಟ್ಟಾರೆ ರಾಜ್ಯ ಯೋಜನೆಯಡಿ ರೂ. 1571.50 ಕೋಟಿಗಳನ್ನು ವಿವಿಧ ಅಭಿವೃದ್ಧಿ ವಲಯಗಳಡಿ ವಿಶೇಷ ಅಭಿವೃದ್ಧಿ ಯೋಜನೆಗೆ ಒದಗಿಸಲಾಗಿತ್ತು’.

ಅದರ ಇಂಗ್ಲೀಷ್ ಪಾಠ ಹೀಗಿದೆ.

‘In the 2007 – 08 budget, out of a total allocation of Rs. 17783 crore, an allocation of Rs 1571.50 crore was provided across various sectors for the SDP as per guideline issued then’ (Government of Karnataka. Planning. Programme Monitoring and Statistics Department (Area Development Board Division) Subject : Guidelines for Implementation of SDP : 2008 – 09) .

ಇದಲ್ಲದೆ ಅನುದಾನ ಹಂಚಿಕೆ ಸೂತ್ರಕ್ಕೆ ಸಂಬಂಧಿಸಿದಂತೆ ಸರ್ಕಾರವು 2007 – 08ರಲ್ಲಿ ಮಾಡಿದ್ದ ವಿಕೃತಿಯನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲು ಬೆಂಗಳೂರಿನ ಶಾಸಕರ ಭವನದಲ್ಲಿ ಏರ್ಪಡಿಸಿದ್ದ ಗುಲಬರ್ಗಾ ವಿಭಾಗದ ಶಾಸಕರ ಸಭೆಯೊಂದರಲ್ಲಿ (11 ಜುಲೈ, 2007) ಅಂದಿನ ಗೃಹಮಂತ್ರಿ ಆಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರು ‘ಮಂತ್ರಿಯಾಗಿ ನಾನು ಸರ್ಕಾರವನ್ನು ಅನೇಕ ಕಾರಣಗಳಾಗಿ ಸಮರ್ಥಿಸಿ ಕೊಳ್ಳಬೇಕಾಗುತ್ತದೆ. ಆದರೆ ಹಿಂದುಳಿದ್ ಪ್ರದೇಶದ ಶಾಸಕನಾಗಿ ಹೇಳುವ ಸತ್ಯವೆಂದರೆ ಡಾ. ಡಿ.ಎಂ. ನಂಜುಂಡಪ್ಪ ವರದಿಯ ಅನುಷ್ಟಾನಕ್ಕಾಗಿ ಸರ್ಕಾರ ಯಾವುದೇ ಹೆಚ್ಚುವರಿ ಹಣ ನಿಗದಿಪಡಿಸಿಲ್ಲ. ಬಜೆಟ್ಟಿನಲ್ಲಿ (2007 – 08) ನಮೂದಿಸಿರುವ ರೂ. 1571.50 ಕೋಟಿಯು ವಾರ್ಷಿಕ ಯೋಜನಾ ಗಾತ್ರದ ಭಾಗವಷ್ಟೇ’ ಎಂದು ಹೇಳಿದ್ದಾರೆ (ಈ ಬಗ್ಗೆ ನೋಡಿ: ಪ್ರಜಾವಾಣಿ ವರದಿ. ದಿನಾಂಕ 12 ಜುಲೈ, 2007. ಅನುಬಂಧ – 4) . ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿಲ್ಲವೆಂಬುದಕ್ಕೆ ಇವುಗಳಿಗಿಂತ ಮತ್ತೇನು ಪುರಾವೆಗಳು ಬೇಕು!. ಅದು ಹೇಳುತ್ತಿರುವುದಕ್ಕೋ ಮತ್ತು ವಾಸ್ತವವಾಗಿ ಅದು ನಡೆದುಕೊಳ್ಳುತ್ತಿರುವುದಕ್ಕೂ ಸಂಬಂಧವೇ ಇಲ್ಲದಂತಾಗಿದೆ.

ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿ ಸ್ಪಷ್ಟವಾಗಿ ವಿಶೇಷ ಅಭಿವೃದ್ಧಿ ಯೋಜನೆಗೆ ತಾಲ್ಲೂಕುಗಳನ್ನು ಮೂಲ ಘಟಕಗಳನ್ನಾಗಿ ಪರಿಗಣಿಸುವ ತತ್ವವನ್ನು ಪ್ರತಿಪಾದಿಸಿದೆ. ಈ ಕಾರಣಕ್ಕೆ ಪ್ರಥಮಬಾರಿಗೆ ಅದು ಅಭಿವೃದ್ಧಿ – ದುಸ್ಥಿತಿಗಳನ್ನು ಅಳತೆ ಮಾಡಲು ತಾಲ್ಲೂಕುಗಳನ್ನು ಆಧಾರವಾಗಿಟ್ಟುಕೊಂಡು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕಗಳನ್ನು ರಾಜ್ಯದ 175 ತಾಲ್ಲೂಕುಗಳಿಗೂ ಗಣನೆ ಮಾಡಿತು. ಸಮಿತಿಯ ವರದಿಯ ಮೂಲ ತತ್ವವನ್ನು ಗಾಳಿಗೆ ತೂರಿದ ಸರ್ಕಾರವು ಸಮಿತಿಯ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಶಿಫಾರಸ್ಸಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ಸಿದ್ಧ ಪಡಿಸುವ ಮತ್ತು ಅದನ್ನು ಅನುಷ್ಟಾನಗೊಳಿಸುವ ಅಧಿಕಾರವನ್ನು ರಾಜ್ಯಮಟ್ಟದ ಇಲಾಖೆಗಳಿಗೆ ವಹಿಸಿಕೊಟ್ಟಿದೆ. ಈ ಬಗ್ಗೆ ಹಣಕಾಸು ಮಂತ್ರಿಗಳು 2007 – 08ನೆಯ ಸಾಲಿನ ಬಜೆಟ್ ಭಾಷಣದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಹೀಗೆ ನುಡಿದಿದ್ದಾರೆ.’ ಪ್ರತಿಯೊಂದು ಇಲಾಖೆಯು ಆ ಇಲಾಖೆಗೆ ಸಂಬಂಧ ಪಟ್ಟ ವಿಶೇಷ ಅಭಿವೃದ್ಧಿ ಯೋಜನೆಯ ವಾರ್ಷಿಕ ಯೋಜನೆಯನ್ನು ತಯಾರಿಸಬೇಕಾಗಿರುತ್ತದೆ’ (ಪು:39) . ಸರ್ಕಾರದ ಈ ಕ್ರಮವೂ ಎರಡು ರೀತಿಯಲ್ಲಿ ಅನಪೇಕ್ಷಣೀಯ. ಮೊದಲನೆಯದಾಗಿ ಈ ಕ್ರಮವು ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು ತನ್ನ ವರದಿಯಲ್ಲಿ ಪ್ರತಿಪಾದಿಸುವ ಮೂಲ ತತ್ವಕ್ಕೆ ವಿರುದ್ಧವಾದುದಾಗಿದೆ. ಎರಡನೆಯದಾಗಿ ಇದು ರಾಜ್ಯದಲ್ಲಿ ಆಚರಣೆಯಲ್ಲಿರುವ ವಿಕೇಂದ್ರೀಕರಣ ಸಿದ್ಧಾಂತಕ್ಕೆ ವ್ಯತಿರಿಕ್ತವಾದುದಾಗಿದೆ.

ಅನುದಾನದ ವಿನಿಯೋಜನೆ ಜಬಾಬುದಾರಿಯನ್ನು ಸರ್ಕಾರವು ರಾಜ್ಯಮಟ್ಟದ ಇಲಾಖೆಗಳಿಗೆ ವಹಿಸಿಕೊಟ್ಟಿದೆ. ಈ ವಿಶೇಷ ಅಭಿವೃದ್ಧಿ ಯೋಜನೆಯನ್ನು ತಾಲ್ಲೂಕು ಮಟ್ಟದಲ್ಲಿ ರೂಪಿಸುವ ಮತ್ತು ಅನುಷ್ಟಾಗೊಳಿಸುವ ಕೆಲಸ ಮಾಡಬೇಕದುದು ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳು. ಆದರೆ ಅವುಗಳನ್ನು ನಿರ್ಲಕ್ಷಿಸಿ ಸರ್ಕಾರವು ತಳಮಟ್ಟದಲ್ಲಿನ ಸ್ಥಿತಿಗತಿಯ ಪರಿಚಯವೇ ಇಲ್ಲದ ರಾಜ್ಯಮಟ್ಟದ ಅಧಿಕಾರಿಗಳಿಗೆ ಅದರ ಬಾಬ್ತು ಅಧಿಕಾರ ನೀಡಿರುವುದು ಅರ್ಥವಾಗುವುದಿಲ್ಲ. ಈ ಸರ್ಕಾರಕ್ಕೆ ವಿಕೇಂದ್ರೀಕರಣದ ಬಗ್ಗೆ ಯಾವುದೇ ಗೌರವ ಮತ್ತು ಬದ್ಧತೆ ಇದ್ದಂತೆ ಕಾಣುವುದಿಲ್ಲ. ಪಂಚಾಯತ್‌ರಾಜ್ ವ್ಯವಸ್ಥೆಯು ನಮ್ಮಲ್ಲಿ ಇಂದು ಕಾಲು ಮುರಿದಿಕೊಂಡು ಬಿದ್ದುಬಿಟ್ಟಿದೆ. ಅದು ಏನಾದರೂ ಜೀವಂತವಿದ್ದರೆ ಕೇವಲ ಮೈಸೂರಿನ ‘ಅಬ್ದುಲ್ ನಜಿರ್‌ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ’ಯಲ್ಲಿನ ತರಬೇತಿಗಳಲ್ಲಿ ಮತ್ತು ಅಲ್ಲಿನ ವಿಚಾರ ಸಂಕಿರಣಗಳಲ್ಲಿ ಮಾತ್ರವೆಂದು ಕಾಣುತ್ತದೆ.

ವಾಸ್ತವವಾಗಿ ಡಾ. ಡಿ.ಎಂ.ನಂಜುಂಡಪ್ಪ ಸಮಿತಿ ವರದಿಯಲ್ಲಿ ಅನುದಾನವನ್ನು ಹಂಚಲು ‘ಸಂಚಯಿತ ದುಸ್ಥಿತಿ ಸೂಚ್ಯಂಕ’ ವೆಂಬ ಮಾಪನವನ್ನು ನೀಡಲಾಗಿದೆ. ಅದರ ಪ್ರಕಾರ ಅನುದಾನವನ್ನು ಪ್ರತಿ ಜಿಲ್ಲೆ ಮತ್ತು ತಾಲ್ಲೂಕಿಗೂ ಲೆಕ್ಕ ಹಾಕಬಹುದಾಗಿದೆ. ಅಲ್ಲಿ ಸಮಿತಿಯು ಉಪಯೋಗಿಸಿರುವ 25 ಸೂಚಿಗಳಿಗೆ ಸಂಬಂಧಿಸಿದಂತೆ ಪ್ರತಿ ತಾಲ್ಲೂಕು ಯಾವ ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ ಮತ್ತು ಯಾವ ವಿಷಯದಲ್ಲಿ ಅದಕ್ಕೆ ವಿಶೇಷ ಅನುದಾನ ಅಗತ್ಯವಾಗಿದೆ ಎಂಬುದನ್ನೆಲ್ಲಾ ಲೆಕ್ಕ ಹಾಕಬಹುದಾಗಿದೆ. ಈ ಬಗೆಯ ಶ್ರಮವನ್ನು ತೆಗೆದುಕೊಳ್ಳದೆ ಮತ್ತು ಆಸಕ್ತಿಯನ್ನು ವಹಿಸದೆ ಸರ್ಕಾರವು ಅತ್ಯಂತ ನಿರ್ಲಕ್ಷ್ಯದಿಂದ ವಿಶೇಷ ಯೋಜನೆಯನ್ನು ನಿರ್ವಹಿಸುತ್ತಿದೆ. ಅದಕ್ಕಾಗಿಯೇ ನಾನು ಹೇಳಿದ್ದು ನಮ್ಮಲ್ಲಿ ಸರ್ಕಾರಗಳು ಪ್ರಾದೇಶಿಕ ಅಸಮಾನತೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ ಮತ್ತು ಈ ಬಗ್ಗೆ ಅವುಗಳಿಗೆ ಬದ್ಧತೆ ಇದ್ದಂತೆ ತೋರುವುದಿಲ್ಲ.

ಸರ್ಕಾರದ ಯೋಜನೆ ಇಲಾಖೆಯು ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಬಾಬ್ತು ಕ್ರಿಯಾ ಯೋಜನೆ ರೂಪಿಸುವ ಜವಾಬ್ದಾರಿಯನ್ನು ರಾಜ್ಯಮಟ್ಟದ ಇಲಾಖೆಗಳಿಗೆ ವಹಿಸಿಕೊಟ್ಟಿದೆ. ಇದು ಡಾ. ಡಿ.ಎಮ್.ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿಗೆ ತೀರ ವಿರುದ್ಧವಾದುದಾಗಿದೆ ಹಾಗೂ ವಿಕೇಂದ್ರಿಕರಣ ನೀತಿಗೆ ವಿರುದ್ದವಾದುದಾಗಿದೆ. ಏಕೆಂದರೆ, ಸಮಿತಿಯು ಅನುದಾನವನ್ನು ತಾಲ್ಲೂಕು ವಾರು ಹಂಚಲು ಮತ್ತು ವ್ಯಯಿಸಲು ಸೂಚನೆ ನೀಡಿದೆ. ಆದರೆ ಸರ್ಕಾರದ ಕ್ರಮವು ಸಮಿತಿ ಶಿಫಾರಸ್ಸಿಗೆ ವಿರುದ್ಧವಾದುದಾಗಿದೆ. ಸರ್ಕಾರದ ಕ್ರಮದಲ್ಲಿ ಅನುದಾನಕ್ಕೂ ತಾಲ್ಲೂಕಿಗೂ ಸಂಬಂಧವೇ ಇಲ್ಲದಂತಾಗಿದೆ. ವಾಸ್ತವದಲ್ಲಿ ಜಿಲ್ಲೆಗಳಿಗೆ ಅಂದರೆ ಜಿಲ್ಲಾ ಪಂಚಾಯಿತಿಗಳೀಗೆ ಎಂಟು ವರ್ಷಗಳ ವಿಶೇಷ ಅಭಿವೃದ್ಧಿ ಯೋಜನೆ ಬಗ್ಗೆ ಮತ್ತು ಅನುದಾನದ ಬಗ್ಗೆ ಯಾವುದೆ ಮಾಹಿತಿಯಿಲ್ಲ. ಸರ್ಕಾರವು 2007 – 08ರಲ್ಲಿ ಕೊಡಮಾಡಿದ ಅನುದಾನ ರೂ. 1571.50 ಕೋಟಿಯಲ್ಲಿ ಯಾವ ಜಿಲ್ಲೆ ಎಷ್ಟು ಹಂಚಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಈ ಸರ್ಕಾರವು ಒಪ್ಪಿಕೊಂಡಿರುವಂತೆ 2007 – 08ನೆಯ ಸಾಲಿನಲ್ಲಿನ ಅನುದಾನವಾದ ರೂ. 1571.50 ಕೋಟಿಯಲ್ಲಿ ಖರ್ಚು ಮಾಡಿರುವ ಮೊತ್ತ ಕೇವಲ ರೂ976.32 ಕೋಟಿ ಮಾತ್ರ. ಆದರೆ ಇದನ್ನು ಯಾರು ಖರ್ಚು ಮಾಡಿದ್ದಾರೆಂಬುದಕ್ಕೆ ಮತ್ತು ಯಾವ ವಲಯಗಳ ಮೇಲೆ ಮಾಡಲಾಗಿದೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ದೊರೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿಗಳಿಗೆ ಸರ್ಕಾರವು ಯಾವುದೇ ಮಾಹಿತಿ ನೀಡಿಲ್ಲ. ಎಲ್ಲವೂ ರಾಜ್ಯ ಮಟ್ಟದಲ್ಲೆ ತೀರ್ಮಾನವಾದಂತೆ ಕಾಣುತ್ತದೆ. ಈ ಬಗ್ಗೆ ಸರ್ಕಾರವು ಆಡಳಿತಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆದರೆ ಅವು ಪರಿಹರಿಸಲಾರದ ಸಮಸ್ಯೆಗಳೇನಲ್ಲ. ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಬಗ್ಗೆ ಸರ್ಕಾರವು ವಿಶ್ವಾಸ ತಾಳಬೇಕು. ಅವುಗಳಿಗೆ ಅಧಿಕಾರ ನೀಡಬೇಕು. ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಟಾನದ ಜವಾಬುದಾರಿಯನ್ನು ರಾಜ್ಯಮಟ್ಟದ ಇಲಾಖಾಧಿಕಾರಿಗಳಿಗೆ ಯಾಕೆ ವಹಿಸಿಕೊಡಬೇಕು?