ಯಾರಾದರೂ ಒಬ್ಬನನ್ನು ಹಿಡಿದು
ಚರ್ಮ ಸುಲಿಯುವುದು
ನೀವು ತಿಳಕೊಂಡಷ್ಟು ಸುಲಭವೇನಲ್ಲ.
ಅದರಲ್ಲಿಯೂ ಸರಿಯಾದ ಕಸುಬು
ಗೊತ್ತಿರದೆ ಹೋದರಂತೂ ಇನ್ನೂ ಕಷ್ಟ.

ಒಬ್ಬ ಖೈದಿಯನ್ನು ಕೊಲ್ಲುವುದು
ಕಷ್ಟವೇನಲ್ಲ; ನಿಜವಾದ ಕಷ್ಟವೆಂದರೆ
ಅವನನ್ನು ಬೆನ್ನಟ್ಟಿ ಹಿಡಿಯುವುದು.
ಆದ್ದರಿಂದಲೇ ನಮ್ಮ ಈ ಯುವಕರು
ತಮ್ಮ ತಾರುಣ್ಯದಿಂದಲೇ
ಈ ಕಲೆಯನ್ನು ಕುರಿತು
ತರಬೇತಿ ಪಡೆಯುತ್ತಾರೆ.

ಮೊದ ಮೊದಲು ಇದೇ ಬಗೆಯ ಸಣ್ಣಪುಟ್ಟ
ಸಾಹಸಕ್ಕೆ ಇಳಿಯುತ್ತಾರೆ; ಆಮೇಲೆ
ನುಗ್ಗುತ್ತಾರೆ ಅನ್ಯ ರಾಜ್ಯಗಳೊಳಗೆ,
ಎಲ್ಲಿ ಜನ ಬೇರೊಂದು ಭಾಷೆಯನ್ನಾಡುತ್ತ
ಬದುಕುತ್ತಾರೋ ಅಲ್ಲಿಗೆ.

ಖೈದಿಗಳೇ ಇಲ್ಲವಾದಲ್ಲಿ
ನಾವು ಮಾಡುವುದೇನು?
ನಮಗೆ ಬೇಕೇ ಬೇಕು ಖೈದಿಗಳು.
ಖೈದಗಳಿಲ್ಲ ಎಂದರೆ ನಮ್ಮ ದೇವರುಗಳಿಗೆ,
ಅಥವಾ ಮಹಾಪ್ರಭುಗಳಿಗೆ ಕೋಪ;
ರೇಗುತ್ತಾರೆ ನಮ್ಮ ಮೇಲೆ, ಆದ್ದರಿಂದ
ಖಂಡಿತವಾಗಿಯೂ ನಮಗೆ ಖೈದಿಗಳು ಬೇಕು.

ನಮ್ಮ ಈ ದೇವರುಗಳ ಪ್ರೀತ್ಯರ್ಥವಾಗಿ
ಕೊಲ್ಲಬೇಕಾಗುತ್ತದೆ ಈ ಖೈದಿಗಳನ್ನು.
ಸೈನಿಕರಿಂದ ಅಲ್ಲ, ಯಾರು ಅವರನ್ನು
ಸೆರೆ ಹಿಡಿದರೋ ಅವರಿಂದಲೂ ಅಲ್ಲ,
ಪುರೋಹಿತರಿಂದ.

ಮೊದಲೇ ನಿಶ್ಯಕ್ತರಾಗಿ ಪ್ರಜ್ಞೆ ತಪ್ಪಿರುವ
ಖೈದಿಯ ತಲೆಯ ಕೂದಲ ಹಿಡಿದು
ದರದರನೆ ಎಳೆದು ತರಲಾಗುತ್ತದೆ
ಮೆಟ್ಟಿಲುದ್ದಕ್ಕೂ, ಗುಡಿಯ ಗೋಪುರದ ಕಡೆಗೆ.
ಆಮೇಲೆ, ಅವನ ಎದೆಯನ್ನು
ಎರಡಾಗಿ ಸೀಳಿದ ಮೇಲೆ
ನಡುವೆ ಮಿಡಮಿಡನೆ ಮಿಡುಕುವ ಹೃದಯ
ಕಾಣುತ್ತದಲ್ಲ, ಅದಂತೂ
ತುಂಬ ಸುಂದರ ದೃಶ್ಯ.

ನೀಲಮಣಿಯಂತೆ ಉಜ್ವಲವಾಗಿ,
ಮೇಲೆ ಹೊಳೆಯುವ ಸೂರ‍್ಯ
ಇವನು ತನ್ನವನೆಂದು
ಕರೆದುಕೊಳ್ಳುತ್ತಾನೆ-ಸುಸೂತ್ರ.
ನಮಗೆ ಉಳಿಯುವುದು
ಖೈದಿಯ ಮೂಳೆ-ಚಕ್ಕಳ ಮಾತ್ರ.

– ಆಂಟೋನಿನ್ ಬಾರ್ಜೊಸಿಕ್ (ಜೆಕ್  ಭಾಷೆಯ ಕವಿ)