ಇಂತಹ ಯುದ್ಧ ಪ್ರಪಂಚದ ಚರಿತ್ರೆಯಲ್ಲೇ ನಡೆದಿರಲಿಲ್ಲ.

ಹನ್ನೊಂದು ಸಾವಿರ ಅಡಿಗಳ ಎತ್ತರಕ್ಕೆ ಟ್ಯಾಂಕ್‌ಗಳನ್ನು ಕೊಂಡೊಯ್ದು ಯುದ್ಧ ಮಾಡಬೇಕು. ಭಾರತದ ಕ್ಷೇಮ, ಭಾರತದ ಪ್ರತಿಷ್ಠೆ ತಕ್ಕಡಿಯಲ್ಲಿದ್ದವು.

ಅಗ್ನಿಪರೀಕ್ಷೆ

ಭಾರತಕ್ಕೆ ಸ್ವಾತಂತ್ಯ್ರ ಒಂದು ಎರಡೇ ತಿಂಗಳು ಕಳೆದಿತ್ತು. ಭಾರತದ ಒಂದು ಭಾಗ ಪ್ರತ್ಯೇಕವಾಗಿ ಪಾಕಿಸ್ತಾನವಾಗಿತ್ತು. ಸ್ವತಂತ್ರ ಭಾರತ ಎದುರಿಸಬೇಕಾಗಿದ್ದ ಕಷ್ಟಗಳು, ಸಮಸ್ಯೆಗಳು ಒಂದೊಂದಲ್ಲ. ಪಾಕಿಸ್ತಾನದಿಂದ ಓಡಿಬರುತ್ತಿದ್ದ ಲಕ್ಷಾಂತರ ನಿರಾಶ್ರಿತರಿಗೆ ವಸತಿ, ಆಹಾರ ಒದಗಿಸುವುದೇ ಬೆಟ್ಟದಂತಹ ಸಮಸ್ಯೆ.

ಆಗಲೇ  ಪಾಕಿಸ್ತಾನ, ಗಡಿಪ್ರಾಂತಗಳ ಜನರನ್ನು ಕಾಶ್ಮಿರದೊಳಕ್ಕೆ ನುಗ್ಗಿಸಿತು. ಕಾಶ್ಮೀರವನ್ನು ಭಾರತದ ಸೈನ್ಯ ಕಾಪಾಡಬೇಕಾಯಿತು.

ಬೆಟ್ಟಗಳಲ್ಲಿ ವಾಸವಿದ್ದು ಅನುಭವವಿದ್ದ ಶತ್ರು ಲೂಟಿಕಾರರು ಆಗಲೇ ಅನುಕೂಲವಾದ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದರು. ಚಳಿಗಾಲ, ಹನ್ನೊಂದು ಸಾವಿರ ಅಡಿ ಎತ್ತರದಲ್ಲಿ ಯುದ್ಧ ಮಾಡಬೇಕು! ನೆಲವೆಲ್ಲ ಹಿಮದಲ್ಲಿ ಮುಚ್ಚಿಹೋಗಿದೆ. ಚಳಿ ಎಷ್ಟು ಎಂದರೆ ಒಂದು ಕಪ್‌ ಟೀ ಮಾಡಲು ಐದು ಗಂಟೆಯ ಕಾಲ ನೀರನ್ನು ಕುದಿಸಬೇಕು! ಆಮ್ಲಜನಕ ಕಡಿಮೆ, ಉಸಿರಾಡುವುದೇ ಕಷ್ಟ.

ಆ ಎತ್ತರದಲ್ಲಿ ಚಳಿಯಲ್ಲಿ ಹೋರಾಡಬೇಕು. ಅಷ್ಟೇ ಅಲ್ಲ. ಟ್ಯಾಂಕ್‌ಗಳನ್ನು ಆ ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಹಿಮದ ಮೇಲೆ ಟ್ಯಾಂಕ್‌ ಜಾರುತ್ತದೆ. ಹೇರ್ ಪಿನ್‌ಗಳಂತಹ ತಿರುವುಗಳು; ಸ್ವಲ್ಪ ತಪ್ಪಿದರೆ, ಸಾವಿರಾರು ಅಡಿಗಳ ಪ್ರಪಾತಕ್ಕೆ ಉರುಳಬೇಕು.

ಭಾರತದ ಕ್ಷೇಮ, ಗೌರವ ತಕ್ಕಡಿಯಲ್ಲಿ!

ಈ ಅಗ್ನಿಪರೀಕ್ಷೆಯ ಗಳಿಗೆಯಲ್ಲಿ, ಪ್ರಪಂಚದ ಯುದ್ಧಗಳ ಇತಿಹಾಸದಲ್ಲೇ ಕೇಳಿಲ್ಲದ ಇಂತಹ ಪವಾಡವನ್ನು ಭಾರತದ ಸೈನ್ಯ ಸಾಧಿಸಿತು. ಅಷ್ಟೇ ಅಲ್ಲ, ಹದಿನಯದು ಸಾವಿರ ಅಡಿಗಳ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ಸೈನ್ಯ ಅಗತ್ಯವಾದ ಎಲ್ಲ ಓಡಾಟಗಳನ್ನು ಮಾಡಿತು. ಭಯಂಕರ ಬೆಟ್ಟಸಾಲುಗಳ ಮಧ್ಯೆ ವಿಮಾನಗಳು ಹಾರಿ ಅಗತ್ಯವಾದ ಸರಬರಾಜನ್ನೆಲ್ಲ ನಿರ್ವಹಿಸಿದವು. ಜಗತ್ತೇ ಬೆರಗಾಯಿತು. ಶತ್ರುಗಳು ಓಡಿದರು.

ಈ ಅದ್ಭುತವನ್ನು ಸೈನಿಕರು ಸಾಧಿಸಿದುದು ಜನರಲ್‌ ತಿಮ್ಮಯ್ಯನವರ ನಾಯಕತ್ವದಲ್ಲಿ.

ಬೆಡಗಿನ ಬೀಡುಯೋಧರ ತವರು

ತಿಮ್ಮಯ್ಯನವರು ಕರ್ನಾಟಕದ ಕೊಡಗು ಪ್ರದೇಶದವರು. ಕೊಡಗು ಬೆಡಗಿನ ನಾಡು, ಸೌಂದರ್ಯದ ನೆಲೆಬೀಡು. ಇಲ್ಲಿ ವಾಸಿಸುವವರು ಮುಖ್ಯವಾಗಿ ಕೊಡವರು. ಹುಟ್ಟು ವ್ಯವಸಾಯಗಾರರಾದ ಕೊಡವರು. ಹುಟ್ಟು ವ್ಯವಸಾಯಗಾರರಾದ ಕೊಡವರು ಬೆಟ್ಟಗುಡ್ಡಗಳಿರುವ ತಮ್ಮ ಪ್ರದೇಶದ ನಿಸರ್ಗಕ್ಕೆ ಅನುಗುಣವಾಗಿ ಪ್ರಾಚೀನ ಕಾಲದಿಂದಲೂ ಧನುರ್ಧಾರಿಗಳು. ಗಂಡುಮಗು ಹುಟ್ಟಿದರೆ ಸುದ್ದಿಯನ್ನು ಗುಂಡಿನೇಟೇ ಸಾರುತ್ತದೆ; ಅದರ ಕೈಗೆ ಬಿಲ್ಲು ಬಾಣಗಳನ್ನು ಕೊಟ್ಟೇ ಸ್ವಾಗತ. ಹಾಗೆಯೇ ಮರಣವೂ ಗುಂಡಿನೇಟಿನಿಂದಲೇ ತಿಳಿಸಲ್ಪಡುವುದು.

ಭಾರತದ ದಂಡನಾಯಕರಲ್ಲಿ ಮೂವರು ಕರ್ನಾಟಕದವರು, ಅವರಲ್ಲಿ ಈ ಕೊಡವ ಜನಾಂಗವು ಇಬ್ಬರನ್ನು ಕೊಟ್ಟಿದೆ; ಅವರಲ್ಲೊಬ್ಬರು ಜನರಲ್ ತಿಮ್ಮಯ್ಯ, (ಮತ್ತೊಬ್ಬರು ಜನರಲ್‌ ಕಾರಿಯಪ್ಪ)

ಬಾಲ್ಯ

ಕೊಡಗಿನ ಕೊಡಂದೇರ ಕುಟುಂಬ ಶ್ರೀಮಂತ ಕುಟುಂಬಗಳಲ್ಲೊಂದು. ಈ ಮನೆತನದ ತಿಮ್ಮಯ್ಯ ಮತ್ತು ಸೀತಮ್ಮನವರಿಗೆ ೧೯೦೬ ಮಾರ್ಚ್ ತಿಂಗಳ ೩೧ ರಂದು ಗಂಡುಮಗು ಹುಟ್ಟಿತು. ಮಗುವಿಗೆ ಸುಬ್ಬಯ್ಯ ಎಂದು ಹೆಸರಿಟ್ಟರು. ಶಾಲಾಪಟ್ಟಿಯಲ್ಲಿ ಅವನನ್ನು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯನೆಂದು ಕರೆದರು. ಹೀಗೆ ಹುಡುಗ ತಿಮ್ಮಯ್ಯ ಎಂದೇ ಎಲ್ಲರಿಗೆ ಪರಿಚಿತನಾದ.

ತಿಮ್ಮಯ್ಯ ಮತ್ತು ಸೀತಮ್ಮನವರಿಗೆ ಆರು ಜನ ಮಕ್ಕಳು-ಮೂವರು ಹುಡುಗರು, ಮೂವರು ಹುಡುಗಿಯರು. ಪೊನ್ನಪ್ಪ, ಸುಬ್ಬಯ್ಯ (ತಿಮ್ಮಯ್ಯ) ಮತ್ತು ಸೋಮಯ್ಯ. ಎಂಬ ಈ ಸಹೋದರರೆಲ್ಲ ಸೈನ್ಯಕ್ಕೆ ಸೇರಿದರು. ಹಿರಿಯವರಾದ ಪೊನ್ನಪ್ಪ ನೇತಾಜಿ ಸುಭಾಷ್‌ ಚಂದ್ರಬೋಸರ ಆಜಾದ್‌ ಹಿಂದ್‌ ಸೈನ್ಯದಲ್ಲಿ ಕರ್ನಲ್‌ ಆಗಿದ್ದರು. ಕಿರಿಯವರಾದ ಸೋಮಯ್ಯ ಮೇಜರ್ ಆಗಿ ಭಾರತ-ಪಾಕಿಸ್ತಾನ್‌ ಯುದ್ಧದಲ್ಲಿ ೧೯೪೮ರಲ್ಲಿ  ಕಾಶ್ಮೀರದಲ್ಲಿ ಮಡಿದರು.

ಅಪಮಾನ ಸಹಿಸದ ಬಾಲಕರು

ಪಾಶ್ಚಾತ್ಯ ಸಂಸ್ಕೃತಿಯಿಂದ ಆಕರ್ಷಿತವಾದ ಈ ಸಂಸಾರವು ತನ್ನ ಮಕ್ಕಳಿಗೆ ಶುದ್ಧ ಪಾಶ್ಚಾತ್ಯ ರೀತಿಯ ವಿದ್ಯಾಭ್ಯಾಸ ನೀಡಲು ಬಯಸಿತು. ಪೊನ್ನಪ್ಪ ಮತ್ತು ಮುಂದೆ ತಿಮ್ಮಯ್ಯನೆಂದು ಪರಿಚಿತನಾದ ಸುಬ್ಬಯ್ಯ ಕೂನೂರಿನ ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದರು. ಆ ಶಾಲೆಯ ವಾತಾವರಣ ಮತ್ತು ಶಿಕ್ಷಣಗಳಲ್ಲಿ ಕಟ್ಟುನಿಟ್ಟಿನ ಶಿಸ್ತು ಬೆರೆತುಹೋಗಿತ್ತು. ಶಿಸ್ತು ಎಂದುದೇ ಮನುಷ್ಯ ಜೀವನದ ಗುರಿ ಎಂಬುದನ್ನು ಅಲ್ಲಿನ ಬಿಳಿಯ ಉಪಾಧ್ಯಾಯರು ಎಳೆಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮೂಡಿಸಿದ್ದರು. ಪ್ರಾಥಮಿಕ ಶಿಕ್ಷಣ ಮುಗಿಯಿತು. ಅನಂತರ ಸಹೋದರರಿಬ್ಬರೂ ಬೆಂಗಳೂರಿನಲ್ಲಿರುವ ಅಂದಿನ ಪಾಶ್ಚಾತ್ಯ ವಿದ್ಯಾರ್ಥಿಗಳ ಪ್ರಮುಖ ವಿದ್ಯಾಪೀಠವಾದ ಬಿಷಪ್‌ಕಾಟನ್‌ ಶಾಲೆಯನ್ನು ಸೇರಿದರು.

ಅವರು ಸೇರಿದ ಮೊದಲನೆಯ ದಿನವೇ ಸಹೋದರರ ಸತ್ವವು ಬೆಳಗುವಂತಹ ಪ್ರಸಂಗ ನಡೆಯಿತು.

ಬಿಷಪ್‌ ಕಾಟನ್‌ ಶಾಲೆಗೆ ಸೇರಿಸಲ್ಪಟ್ಟ ಪ್ರಪ್ರಥಮ ಭಾರತೀಯ ಬಾಲಕರು ತಿಮ್ಮಯ್ಯ ಮತ್ತು ಅವರ ಅಣ್ಣ. ಇದು ಅಲ್ಲಿಯ ಪಾಶ್ಚಾತ್ಯ ಮತ್ತು ಆಂಗ್ಲೋ ಇಂಡಿಯನ್‌ ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಅಸೂಯೆಯನ್ನು ತಂದಿತು. ಪ್ರಿನ್ಸಿಪಾಲರ ಭೇಟಿಯ ಸಮಯ. ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಇವರತ್ತ ನೋಡಿ “ಏನು, ನೀಗ್ರೋಗಳನ್ನೂ ಇಲ್ಲಿ ಸೇರಿಸುತ್ತಾರೋ!” ಎಂದು ಮೂದಲಿಸಿದನು. ತಕ್ಷಣ ಪೊನ್ನಪ್ಪನ ಎಡಗೈಯಿಂದ ಅವನ ಕಪಾಳಕ್ಕೆ ಏಟು ಬಿತ್ತು. ಅವನ ಸಹಾಯಕ್ಕೆ ಹಲವರು ವಿದ್ಯಾರ್ಥಿಗಳು ಮುನ್ನುಗ್ಗಿದರು. ತಿಮ್ಮಯ್ಯ ಅವರನ್ನು ಉರುಳಿಸಿದನು. ಅವರ ಆತ್ಮ ಗೌರವ ಎಲ್ಲಾ ಬಿಳಿಯ ಉಪಾಧ್ಯಾಯರಲ್ಲೂ ಪ್ರಿನ್ಸಿಪಾಲರಲ್ಲೂ ಅಭಿಮಾನವನ್ನು ಹುಟ್ಟಿಸಿತು.

ಸೈನ್ಯದತ್ತ

ತಿಮ್ಮಯ್ಯನು ಬಲು ಚುರುಕಿನ ಸಾಹಸಿ ಹುಡುಗನಾಗಿದ್ದನು. ಅವನ ಅತೀವ ಆಶೆಯೆಂದರೆ ಎಂಜಿನ್‌ ಚಾಲಕನಾಗಿರುವುದು! ಹಾಕಿ, ಫುಟ್‌ಬಾಲ್‌, ಟೆನಿಸ್‌ ಆಟಗಳಲ್ಲಿ ಅವನು ಮೊದಲ ಸ್ಥಾನವನ್ನು ಪಡೆದನು. ತರಗತಿಯಲ್ಲಿ ಹೆಚ್ಚಿನ ಸ್ಥಾನವನ್ನು ಪಡೆಯದಿದ್ದರೂ ಆಟೋಟಗಳಲ್ಲಿ ತಿಮ್ಮಯ್ಯನು ಶಾಲೆಯ ವೀರ ವಿದ್ಯಾರ್ಥಿಯಾಗಿದ್ದನು. ಬ್ರಿಟಿಷ್‌ ಸೇನೆಯು ರಸ್ತೆಯಲ್ಲಿ ‘ಮಾರ್ಚ್‌ಪಾಸ್ಟ್‌’ ಮಾಡುತ್ತಿದ್ದಾಗ ತಿಮ್ಮಯ್ಯನು ಸೈಕಲ್‌ ಮೇಲೆ ಅವರನ್ನು ಹಿಂಬಾಲಿಸುತ್ತಿದ್ದನು. ತಿಮ್ಮಯ್ಯ ಸ್ಕೌಟ್‌ ಆಗಿ ತರಬೇತಿ ಪಡೆಯುತ್ತಿದ್ದ; ನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಕಲಿತುಕೊಂಡು ಬೆಳೆಸಿಕೊಂಡ. ತಿಮ್ಮಯ್ಯನು ಬಿಷಪ್‌ ಕಾಟನ್‌ ಶಾಲೆಯ ವಿದ್ಯಾಭ್ಯಾಸವನ್ನು ಮುಗಿಸುವ ಹೊತ್ತಿಗೆ ಅವನಿಗೆ ಹದಿನಾರು ವರ್ಷ. ವಯಸ್ಸಿಗೆ ಸರಿಯಾದ ಮಾಟವಾದ ಶರೀರ ಮತ್ತು ಎತ್ತರ.

ಎಳೆಯ ತಿಮ್ಮಯ್ಯನ ಮನಸ್ಸನ್ನು ಸೈನ್ಯ ಸೆಳೆಯಿತು. ಡೆಹರಾಡೂನಿನಲ್ಲಿ ಆಗ ತಾನೇ ತೆರೆಯಲ್ಪಟ್ಟಿದ್ದ ರಾಯಲ್‌ ಇಂಡಿಯನ್‌ ಮಿಲಿಟರಿ ಶಾಲೆಗೆ ಸೇರಿದನು. ಆಗಿನ ಕಾಲದಲ್ಲಿ ಸೈನ್ಯಾಧಿಕಾರಿಗಳ ಶಿಕ್ಷಣವು ಇಂಗ್ಲೆಂಡಿನ ಸ್ಯಾಂಡ್‌ಹರ್ಸ್ಟ್‌ ಎಂಬಲ್ಲಿ ನಡೆಯಬೇಕಾಗಿದ್ದಿತು. ಸೈನ್ಯದ ಮೇಲಿನ ಅಧಿಕಾರ (ಕಮಿಷನ್ಡ್‌ ಆಫೀಸರ್) ವರ್ಗಕ್ಕೆ ಸೇರುವವರನ್ನು ಕಡೆಯದಾಗಿ ಭಾರತದ ವೈಸರಾಯರೇ ಆರಿಸುತ್ತಿದ್ದರು. ಹೀಗೆ ಸೇರಬೇಕೆಂದು ಪ್ರಯತ್ನಿಸಿದವರು ಸಾವಿರಾರು ವಿದ್ಯಾರ್ಥಿಗಳು; ಆಯ್ಕೆಯಾದವರು ಕೆಲವರು ಮಾತ್ರವೇ. ತಿಮ್ಮಯ್ಯ ಆಯ್ಕೆಯಾದ.

ಸೈನ್ಯದ ಶಿಕ್ಷಣಕ್ಕಾಗಿ ತಿಮ್ಮಯ್ಯ ಇಂಗ್ಲೆಂಡಿಗೆ ಹೋದ. ಸ್ಯಾಂಡ್‌ಹರ್ಸ್ಟ್ ಕಾಲೇಜಿನಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ಎಲ್ಲ ಭಾಗಗಳ ಅಧಿಕಾರಿಗಳಿಗೂ ಸೈನ್ಯದ ಶಿಕ್ಷಣ ನೀಡುತ್ತಿದ್ದರು. ತಿಮ್ಮಯ್ಯನ ಶಿಕ್ಷಣವು ಬಲು ಉತ್ತಮ ರೀತಿಯಲ್ಲಿ ನಡೆಯಿತು. ಯುವಕ ತಿಮ್ಮಯ್ಯನೂ ಶ್ರದ್ಧೆಯಿಂದ ಚುರುಕಾಗಿ ಅಭ್ಯಾಸ ಮಾಡಿ ಅಲ್ಲಿನ ಉನ್ನತಾಧಿಕಾರಿಗಳಿಂದ ಉತ್ತಮವಾದ ಪ್ರಶಂಸೆಗಳನ್ನು ಪಡೆದು ಭಾರತಕ್ಕೆ ಹಿಂದಿರುಗಿದ.

ಸೈನ್ಯಾಧಿಕಾರಿಯಾಗಿ ಜೀವನ ಪ್ರಾರಂಭ

ಈಗ ತಿಮ್ಮಯ್ಯ ‘ಸೆಕೆಂಡ್‌ ಲೆಫ್ಟಿನೆಂಟ್‌ ತಿಮ್ಮಯ್ಯ’ ಆದರು. ಅವರು ಬೆಂಗಳೂರಿನಲ್ಲಿ ಹೈಲೆಂಡ್‌ ಲೈಟ್‌ ಇನ್‌ಫೆಂಟ್ರಿ’ ದಳಕ್ಕೆ ಸೇರಿದರು. ಇದು ಸ್ಕಾಟ್ಲೆಂಡಿನವರ ದಳ. ಅವರೂ ಕೊಡಗಿನ ಜನರಂತೆಯೇ ಬೆಟ್ಟಗುಡ್ಡಗಳ ಪ್ರದೇಶದವರು. ಆದುದರಿಂದ ತಿಮ್ಮಯ್ಯ ಈ ಪಡೆಯನ್ನು ಸೇರಿದ್ದು ಒಳ್ಳೆಯದೇ ಆಯಿತು. ಸೈನ್ಯದಲ್ಲಿ ಆಫೀಸರ್ ಆದರೂ ಪಾಶ್ಚಾತ್ಯರ ಯಾವ ಕ್ಲಬ್ಬಿನಲ್ಲೂ ಭಾರತೀಯರಿಗೆ ಪ್ರವೇಶವಿರಲಿಲ್ಲ. ಸ್ವಾತಂತ್ಯ್ರವಿಲ್ಲದ ಜನತೆಯ ಅಪಮಾನದ ಹೊರೆ ತಿಮ್ಮಯ್ಯನವರಿಗೆ ಸ್ಪಷ್ಟವಾಯಿತು.

೧೯೨೭ರಲ್ಲಿ ತಿಮ್ಮಯ್ಯನವರಿಗೆ ಹೈದರಾಬಾದ್‌ ರೆಜಿಮೆಂಟಿಗೆ ವರ್ಗವಾಯಿತು. ತಿಮ್ಮಯ್ಯ ಸೈನ್ಯದಲ್ಲಿ ಎಷ್ಟು ಜನಪ್ರಿಯತೆಯನ್ನು ಸಾಧಿಸಿದರು ಎಂದರೆ ಬೆಂಗಳೂರಿನ ಸೇನೆಯಿಂದ ಅವರಿಗೆ ವರ್ಗವಾದಾಗ ಸಿಪಾಯಿಗಳು ಅವರನ್ನು ಕುರ್ಚಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿದರು.

ಹೈದರಾಬಾದ್‌ ರೆಜಿಮೆಂಟಿನೊಂದಿಗೆ ತಿಮ್ಮಯ್ಯ ಬಾಗದಾದಿಗೆ ತೆರಳಿದರು. ಅಲ್ಲಿನ ಅಧಿಕಾರಿಗಳೊಡನೆ ಕೆಲಸ ಮಾಡುವುದು ಕಷ್ಟವೇ ಆಗಿತ್ತು. ಆದರೂ ತಿಮ್ಮಯ್ಯ ಬುದ್ಧಿವಂತಿಕೆಯಿಂದ ಅವರೊಡನೆ ಹೊಂದಿಕೊಂಡರು. ತಿಮ್ಮಯ್ಯ ಅಹೀರ್ ಜನಾಂಗದ ಸೇನೆಗೆ ನಾಯಕರಾಗಿದ್ದರು. (ಅಹೀರರು ಮೀರತ್‌ನ ಸುತ್ತಮುತ್ತ ವಾಸಿಸುತ್ತಾರೆ) ಅವರೊಡನೆ ಸರಳವಾಗಿ ಬೆರೆಯುತ್ತಿದ್ದರು. ಅವರ ಸ್ನೇಹವನ್ನೂ ಅಭಿಮಾನವನ್ನೂ ಸಂಪಾದಿಸಿ ಅವರಲ್ಲೆ ಒಬ್ಬರು ಎನ್ನುವಂತಾದರು. ತಿಮ್ಮಯ್ಯ ಅಧಿಕಾರಿಯಾಗಿದ್ದರೂ ಅವರ ಪ್ರೀತಿ ವಾತ್ಸಲ್ಯಗಳೂ ರೀತಿ ನಡೆತೆಗಳೂ ಸಾಮಾನ್ಯ ಸಿಪಾಯಿಗಳಿಗೆ ಪ್ರೀತಿಯನ್ನುಂಟು ಮಾಡುವಂತಹವು. ಅವರು ಜವಾನರ ಸೇನಾನಿ-ಸಾಮಾನ್ಯ ಸಿಪಾಯಿಗಳ ಸೇನಾನಿ ಆದರು.

ಒಂದು ವರ್ಷ ಬಾಗದಾದಿನಲ್ಲಿ ಸೇವೆಯನ್ನು ಸಲ್ಲಿಸಿ ತಿಮ್ಮಯ್ಯ ಭಾರತಕ್ಕೆ ಮರಳಿ ಬಂದರು.

ಸ್ವತಂತ್ರ ಭಾರತದ ಪ್ರಮುಖ ಸೇನಾನಿಯಾಗಿ!

ತಿಮ್ಮಯ್ಯನವರ ತುಕಡಿಗೆ ಅಲಹಾಬಾದಿಗೆ ವರ್ಗವಾಯಿತು. ಅಲಹಾಬಾದ್‌ ಅವರ ಜೀವನದಲ್ಲಿ ಒಂದು ಹೊಸ ಅಧ್ಯಾಯವನ್ನು ರೂಪಿಸಿತು. ಇಷ್ಟರಲ್ಲಿ ಭಾರತದ ಸ್ವಾತಂತ್ಯ್ರವೀರರು ಭಾರತವನ್ನು ದಾಸ್ಯದಿಂದ ವಿಮುಕ್ತಗೊಳಿಸಲು ಬ್ರಿಟಿಷ್‌ ಸರ್ಕಾರಕ್ಕೆ ಭಾರೀ ಸವಾಲನ್ನಿತ್ತಿದ್ದರು. ಬ್ರಿಟಿಷ್‌ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರಿಗೆ ಇದೊಂದು ಧರ್ಮ ಸಂಕಟದ ಕಾಲ, ಸಂಕೋಚದ ಕಾಲ. ಸೈನ್ಯದಲ್ಲಿದ್ದು ಅವರು ಬ್ರಿಟಿಷ್‌ ಸರ್ಕಾರಕ್ಕೆ ನಿಷ್ಠರಾಗಿರಬೇಕಿತ್ತು. ಆದರೆ ಅವರಲ್ಲಿ ಬಹುಮಂದಿಗೆ ತಮ್ಮ ದೇಶಕ್ಕೆ ಸ್ವಾತಂತ್ಯ್ರ ದೊರೆಯಬೇಕು ಎಂಬ ಕಳಕಳಿ ಇತ್ತು, ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಿದ್ದವರ ವಿಷಯದಲ್ಲಿ ಮಮತೆ, ಗೌರವಗಳಿದ್ದವು.

ಭಾರತದಲ್ಲಿ ಬ್ರಿಟಿಷರಿಗೆ ವಿರೋಧ ಅಗಾಧವಾಗಿ ಬೆಳೆಯುತ್ತಿತ್ತು. ಭಾರತದ ಸ್ವಾತಂತ್ಯ್ರ ಸಂಗ್ರಾಮ ನಾಯಕರಿಗೆ ಬ್ರಿಟಿಷ್‌ ಸರ್ಕಾರದಲ್ಲೂ, ಸೈನ್ಯದಲ್ಲೂ ಸೇವೆ ಸಲ್ಲಿಸುತ್ತಿದ್ದ ಭಾರತೀಯರಲ್ಲೂ ಸಂಶಯವೇ. ಸೈನ್ಯಕ್ಕೂ ಸ್ವಾತಂತ್ಯ್ರ ವೀರರಿಗೂ ಯಾವ ಸಂಬಂಧವೂ ಇರಲಿಲ್ಲ. ತಿಮ್ಮಯ್ಯ ಇದನ್ನು ಅಲಹಾಬಾದಿನಲ್ಲಿ ಅನುಭವಿಸಿದರು.

ಒಂದು ದಿನ ತಿಮ್ಮಯ್ಯನವರಿಗೆ ಅಕಸ್ಮಾತ್ತಾಗಿ ಭೇಟಿಯಾದವರೊಬ್ಬರು, “ಬ್ರಿಟಿಷ್‌ ಆಳರಸರ ಸೈನ್ಯದ ಉಡುಪು ಧರಿಸಿದ ಭಾರತೀಯರಿಗೆ ಏನೆನ್ನಿಸುತ್ತದೆ?” ಎಂದು ಕೇಳಿದರು.

ತಿಮ್ಮಯ್ಯನವರು ಇದಕ್ಕೆ ಲಘುವಾಗಿಯೇ ಉತ್ತರ ಕೊಟ್ಟರು. ಆದರೆ ಅವರನ್ನು ಪ್ರಶ್ನೆ ಕೇಳಿದಾತ, “ನಾನು ತಮಾಷೆ ಮಾಡುತ್ತಿಲ್ಲ. ಗಂಭೀರವಾಗಿಯೆ ಕೇಳುತ್ತಿದ್ದೇನೆ” ಎಂದರು. ಚರ್ಚೆ ಗಂಭೀರವಾಗಿ ಮುಂದುವರಿಯಿತು. ಪ್ರಶ್ನೆ ಕೇಳಿದ್ದಾತ ತಿಮ್ಮಯ್ಯನವರನ್ನೂ ಅವರ ಗೆಳೆಯರನ್ನೂ ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿ, ತಮ್ಮ ಪರಿಚಯದ ‘ಕಾರ್ಡ್‌’ ಕೊಟ್ಟರು.

ಅವರ ಹೆಸರನ್ನು ಓದಿ ತಿಮ್ಮಯ್ಯ ಬೆಚ್ಚಿದರು. ಆತ ಭಾರತದ ಹಿರಿಯ ನಾಯಕ ಮೋತಿಲಾಲ್‌ ನೆಹರೂ, ಜವಾಹರಲಾಲ್‌ ನೆಹರೂ ಅವರ ತಂದೆ.

ಮರುದಿನ ತಿಮ್ಮಯ್ಯನವರೂ ಅವರ ಗೆಳೆಯರೂ ತಾವು ತಾಯ್ನಾಡಿನ ಸ್ವಾತಂತ್ಯ್ರಕ್ಕೆ ಸೇವೆ ಸಲ್ಲಿಸಲು ರಾಜೀನಾಮೆ ಕೊಡುವುದಾಗಿ ಹೇಳಿದರು. ಮೋತೀಲಾಲರು ಹೇಳಿದರು: “ಬ್ರಿಟಿಷರು ಹೋದ ಮೇಲೆ ದೇಶವನ್ನು ನಾವೇ ರಕ್ಷಿಸಬೇಕಲ್ಲವೆ? ಆಗ ನಿಮ್ಮಂತಹ ಯೋಧರು ನಮಗೆ ಬೇಕು. ಸೈನ್ಯದಲ್ಲಿಯೆ ಇರಿ, ಅನುಭವ ಪಡೆಯಿತಿ.”

ಮೋತೀಲಾಲರು ತಿಮ್ಮಯ್ಯನವರಿಗೆ  “ಸ್ವತಂತ್ಯ್ರ ಭಾರತದ ಪ್ರಮುಖ ಸೇನಾನಿಯಾಗಿ” ಎಂದು ಆಶೀರ್ವದಿಸಿದರು. ಇದು ೧೯೩೦ರಲ್ಲಿ, ೧೯೫೭ ರಲ್ಲಿ ಇದು ಫಲಿಸಿತು.

ಗಡಿನಾಡಿನಲ್ಲಿ

ಅಲಹಾಬಾದಿನಿಂದ ತಿಮ್ಮಯ್ಯನವರಿಗೆ ವಾಯುವ್ಯ ಗಡಿಯ ಸಾಂಡಿಮಾನ್‌ ಕೋಟೆಗೆ ವರ್ಗವಾಯಿತು. ಗಡಿನಾಡಿನ ಜನರು ಸ್ವಾತಂತ್ಯ್ರ ಪ್ರಿಯರು ಮತ್ತು ದೃಢ ಮನಸ್ಸಿನವರು. ತಿಮ್ಮಯ್ಯನವರಿಗೆ ಅಲ್ಲಿ ಒಳ್ಳೆಯ ಅನುಭವ ದೊರೆಯಿತು. ತಿಮ್ಮಯ್ಯನವರ ಬಗ್ಗೆ ಅವರ ಕರ್ನಲ್‌ಗೆ ತುಂಬ ಅಭಿಮಾನ ಮತ್ತು ನಂಬಿಕೆ. ಸಾಮಾನ್ಯವಾಗಿ ಬ್ರಿಟಿಷ್‌ ಅಧಿಕಾರಿಗಳಿಗೆ ಭಾರತೀಯ ಅಧಿಕಾರಿಗಳ ವಿಷಯದಲ್ಲಿ ಸಂಶಯ. ಅವರಿಗೆ ಆಯುಧಗಳನ್ನಿಟ್ಟಿದ್ದ ಕೋಣೆಯ ಬೀಗದ ಕೈಯನ್ನು ಕೊಡುತ್ತಿರಲಿಲ್ಲ. ಆತ ತಿಮ್ಮಯ್ಯನವರಿಗೆ ಆಯುಧ ಕೋಣೆಯ ಬೀಗದ ಕೈಯನ್ನು ಕೊಟ್ಟು ಆಯುಧ ಸರಬರಾಜಿನ ಜವಾಬ್ದಾರಿಯನ್ನು ಕೊಟ್ಟನು. ತಿಮ್ಮಯ್ಯನವರಿಗೆ ಆಯುಧಗಳ ಶೇಖರಣೆ ಮತ್ತು ಸರಬರಾಜಿನಲ್ಲೂ ಒಳ್ಳೆಯ ಶಿಕ್ಷಣ ದೊರೆಯಿತು.

 

ಶ್ರೀ ಮೋತೀಲಾಲ್ ನೆಹರೂರೊಡನೆ ಜನರಲ್ ತಿಮ್ಮಯ್ಯ ಮತ್ತು ಗೆಳೆಯರು

ಸಾಂಡಿಮಾನ್‌ನಲ್ಲಿ ತಿಮ್ಮಯ್ಯ ಸೈನಿಕರಿಗೆ ಹಾಕಿ ಪಂದ್ಯದಲ್ಲಿ ಒಳ್ಳೆಯ ಅಭ್ಯಾಸವನ್ನಿತ್ತರು. ಸಿಖ್ಖರು ಹಾಕಿ ಆಟದಲ್ಲಿ ಮೇಲುಗೈ. ತಿಮ್ಮಯ್ಯನವರ ಹೈದರಾಬಾದ್‌ ಸೇನಾ ವಿಭಾಗ ಎಂದರೆ ಎಲ್ಲರೂ ಗೇಲಿ ಮಾಡುತ್ತಿದ್ದರು. ಹಾಕಿ ಆಟದಲ್ಲಿ ೨೦ ರಿಂದ ೩೦ ಗೋಲುಗಳಿಂದ ಹೈದರಾಬಾದ್‌ ಪಂಗಡವನ್ನು ಸೋಲಿಸಬಹುದು ಎನ್ನುತ್ತಿದ್ದರು. ಆದರೆ ಹಾಕಿ ಪಟುವಾದ ತಿಮ್ಮಯ್ಯನವರಿಗೆ ಇದನ್ನು ಸಹಿಸಲಾಗಲಿಲ್ಲ. ಅವರು ಒಳ್ಳೆಯ ಆಟಗಾರರನ್ನು ಆರಿಸಿ ಒಳ್ಳೆಯ ಶಿಸ್ತನ್ನೂ ಆಟದ ರೀತಿಯನ್ನೂ ಸ್ವತಃ ಕಲಿಸಿದರು. ಒಂದು ದಿನ ಭಾರೀ ಪಂದ್ಯವನ್ನೇರ್ಪಡಿಸಿದರು. ಹೈದರಾಬಾದ್‌ ಪಂಗಡ ಸಿಖ್ಖರನ್ನು ೩-೨ ಗೋಲುಗಳಿಂದ ಪರಾಭವಗೊಳಿಸಿತು!

ಭೂಕಂಪದ ನಗರದಲ್ಲಿ

ತಿಮ್ಮಯ್ಯ ಕ್ವೆಟ್ಟಾದಲ್ಲಿದ್ದಾಗ ೧೮ ವರ್ಷ ವಯಸ್ಸಿನ ನೀನಾ ಎಂಬ ವಧುವನ್ನು ಮದುವೆಯಾದರು.

ಕ್ವೆಟ್ಟಾದ ಭೂಕಂಪವೇ ತಿಮ್ಮಯ್ಯ ದಂಪತಿಗಳ ಮಧುಚಂದ್ರವಾಯ್ತು. ೧೯೩೫ ರಲ್ಲಿ ಕ್ವೆಟ್ಟಾ ಭಾರೀ ಭೂಕಂಪಕ್ಕೊಳಪಟ್ಟಿತು. ಇಡೀ ಪಟ್ಟಣವೇ ನಾಶವಾಯಿತು. ತಿಮ್ಮಯ್ಯನವರೂ ಅವರ ಹೆಂಡತಿಯೂ ಆಗ ಅಲ್ಲಿಯೇ ಇದ್ದರು. ಅವರು ಅಪಾರ ಸೇವೆಯನ್ನು ಸಲ್ಲಿಸಿದರು. ತಿಮ್ಮಯ್ಯನವರ ಸೈನ್ಯವೂ ಮನಃಪೂರ್ವಕ ದುಡಿಯಿತು. ನೀನಾಳ ಅಮೋಘ ಸೇವೆಗೆ ಬ್ರಿಟಿಷ್‌ ಸರ್ಕಾರವು ಮೆಚ್ಚಿ ‘ಕೈಸರ್ ಇ-ಹಿಂದ್‌’ ಬಿರುದನ್ನು ಕೊಟ್ಟಿತು. ಭೂಕಂಪದಿಂದ ನೂರಾರು ಜನ ಸತ್ತಿದ್ದರು. ಹೆಣಗಳನ್ನು ಸಾಗಿಸಿ ಅಂತ್ಯಕ್ರಿಯೆ ನಡೆಸುವುದೇ ಕಷ್ಟವಾಗಿತ್ತು. ‘ಹೈದರಾಬಾದ್‌ ಬೆಟಾಲಿಯನ್‌ನ ಬಹುಮಂದಿ ಸೈನಿಕರು ತಾವು ಮೇಲಿನ ಜಾತಿಯವರು, ಹೆಣಗಳನ್ನು ಮುಟ್ಟುವುದಿಲ್ಲ ಎಂದರು. ತುಕಡಿ ನಾಯಕರು ತಿಮ್ಮಯ್ಯ. ಅವರೇ ಹೆಣಗಳನ್ನು ಟ್ರಕ್ಕುಗಳಲ್ಲಿ ಸಾಗಿಸುವ ಕೆಲಸ ಪ್ರಾರಂಭಿಸಿದಾಗ ಇತರರೂ ನಾಚಿಕೊಂಡು ಅವರೊಡನೆ ಸೇರಿದರು.

೧೯೩೭ರಲ್ಲಿ ತಿಮ್ಮಯ್ಯ ‘ಕ್ಯಾಪ್ಟನ್‌’ ಪದವಿಗೇರಿದರು. ಕ್ವೆಟ್ಟಾದಿಂದ ಅವರಿಗೆ ಮದರಾಸ್‌ ವಿಶ್ವವಿದ್ಯಾನಿಲಯ ಟ್ರೈನಿಂಗ್‌ ಕೋರ್ ಗೆ ವರ್ಗವಾಯಿತು. ನಿಷ್ಠೆ ಮತ್ತು ಯುವಕ ಪ್ರಜ್ಞೆಯ ಮೂರ್ತಿಯೆಂದು ಪ್ರಖ್ಯಾತರಾದರು ತಿಮ್ಮಯ್ಯ.

ಎರಡನೆಯ ಮಹಾಯುದ್ಧ

ಎರಡನೆಯ ಮಹಾಯುದ್ಧವು ೧೯೩೯ ರಿಂದ ೧೯೪೫ರ ವರೆಗೆ ನಡೆಯಿತು. ಕ್ಯಾಪ್ಟನ್‌ ತಿಮ್ಮಯ್ಯ ಸಿಂಗಪುರಕ್ಕೆ ಹೋಗಬೇಕಾಯಿತು. ತಿಮ್ಮಯ್ಯನವರು ಒಂದು ಸಾಧನೆ ಇಲ್ಲಾಯಿತು.

ಒಬ್ಬ ಭಾರತೀಯ ಅಧಿಕಾರಿ ಶತ್ರುಗಳ ಗೂಢಚಾರನಾಗಿದ್ದ. ಅವನನ್ನು ಬ್ರಿಟಿಷ್‌ ಅಧಿಕಾರಿಗಳು ಭಾರತಕ್ಕೆ ಮರುಕಳುಹಿಸಿದರು. ಭಾರತೀಯ ಸೈನಿಕರು ಸಿಟ್ಟುಗೊಂಡು ಅನ್ನಾಹಾರ ಬಿಟ್ಟು ಮುಷ್ಕರ ಹೂಡಿದರು. ಅವರ ಮುಷ್ಕರವನ್ನು ನಿಲ್ಲಿಸಲು ಯಾರಿಗೂ ಸಾಧ್ಯವಾಗಲಿಲ್ಲ. ಗಡಿನಾಡಿನಲ್ಲಿ ತಿಮ್ಮಯ್ಯನವರ ಜೊತೆಗಿದ್ದ ಆಹೀರರೂ ಮುಷ್ಕರಕ್ಕೆ ಸೇರಿದ್ದರು. ತಿಮ್ಮಯ್ಯನವರು, ತಾವು ಮಾಡಿದ್ದು ತಪ್ಪು ಎಂದು ಅವರ ಮನಸ್ಸಿನಲ್ಲಿ ಮೂಡಿಸಿ ಮುಷ್ಕರವನ್ನು ಕೊನೆಗಾಣಿಸಿದರು.

ಸಿಂಗಪುರದ ಜೀವನ ತಿಮ್ಮಯ್ಯನವರಿಗೆ ಹಿಡಿಸಲಿಲ್ಲ. ಅಲ್ಲದೆ ತಮ್ಮನ್ನು ಕಂಡರೆ ಬ್ರಿಟಿಷ್‌ ಅಧಿಕಾರಿಗಳಿಗೆ ಅಸೂಯೆ ಎಂದೂ ಅವರಿಗೆ ತಿಳಿದಿತ್ತು. ಭಾರತಕ್ಕೆ ವರ್ಗ ಮಾಡಿಸಿಕೊಂಡು ಆಗ್ರಾಕ್ಕೆ ಬಂದರು.

ಯಾರಿಗೆ ಗುಂಡು ಹೊಡೆಯಲಿ?;

೧೯೪೨ನೇ ಇಸವಿ, ಭಾರತದಲ್ಲಿ ‘ಭಾರತ ಬಿಟ್ಟು ತೊಲಗಿ ‘ಕ್ರಾಂತಿಯ ಕಾಲ. ಸ್ವಾತಂತ್ಯ್ರವೀರರು ಇಡೀ ಭಾರತದಲ್ಲಿ ಕ್ರಾಂತಿ ಎಬ್ಬಿಸಿದರು. ಅವರನ್ನು ಸದೆಬಡಿಯುವುದು ಸರ್ಕಾರದ ನೀತಿಯಾಗಿತ್ತು. ಎಲ್ಲಿ ಪೊಲೀಸ್‌ ಪಡೆಗಳಿಗೆ ಅಸಾಧ್ಯವಾಯಿತೊ ಅಲ್ಲಿ ಸೇನೆಯನ್ನು ಬಳಸುತ್ತಿದ್ದರು. ಪೊಲೀಸರೆಂದರೆ ಸಿಟ್ಟೆದ್ದ ಜನರು ಸೇನೆಯೊಡನೆ ಮೈತ್ರಿಯಿಂದಿದ್ದರು.

 

ಕಾಶ್ಮೀರ ಕಾರ್ಯಾಚರಣೆಯಲ್ಲಿ ಜನರಲ್ ತಿಮ್ಮಯ್ಯ

ಕ್ಯಾಪ್ಟನ್‌ ತಿಮ್ಮಯ್ಯನವರ ಸರದಿ ಆಗ್ರಾದಲ್ಲಿ ಬಂದಿತು. ಅವರು ಜನರಿಗೆ ಬುದ್ಧಿವಾದವನ್ನು ಹೇ?ಳಿ ಚದುರಿಸುತ್ತಿದ್ದರೇ ಹೊರತು ಗುಂಡು  ಹಾರಿಸುತ್ತಿರಿಲಿಲ್ಲ. ಇದನ್ನು ಬ್ರಿಟಿಷರು ಸಹಿಸದಾದರು. “ಜನರನ್ನು ಯಾಕೆ ಗುಂಡು ಹಾರಿಸಿ ಕೊಲ್ಲುವುದಿಲ್ಲ?” ಎಂದು ಬ್ರಿಟಿಷ್‌ ಅಧಿಕಾರಿಗಳು ಕೇಳಿದರು. “ಯಾರಿಗೆ ಗುಂಡು ಹೊಡೆಯಲಿ? ನಾನು ಹೇಳಿದಾಕ್ಷಣ ಗುಂಪುಗಳು ಚದುರುತ್ತವೆ” ಎಂದು ಉತ್ತರಿಸಿದರು ತಿಮ್ಮಯ್ಯ. ಅಧಿಕಾರಿಗಳು ಕೋಪವನ್ನು ನುಂಗಿಕೊಳ್ಳಬೇಕಾಯಿತು.

ಆಗ್ರಾದಿಂದ ತಿಮ್ಮಯ್ಯ ಕ್ವೆಟ್ವಾಕ್ಕೆ ತೆರಳು ಅಲ್ಲಿ ಸ್ಟಾಫ್‌ ಕಾಲೇಜಿನಲ್ಲಿ ಶಿಕ್ಷಣ ಹೊಂದಿದರು.

ಯುದ್ಧದ ಮಡಿಲಲ್ಲಿ

ಸುಸಜ್ಜಿತಗೊಂಡ ಸೇನೆಯೊಡನೆ ತಿಮ್ಮಯ್ಯನವರೂ ಬರ್ಮಾಕ್ಕೆ ಹೊರಟರು. ಜಪಾನೀಯರು ಭಾರತದ ಪೂರ್ವಬಾಗಿಲನ್ನು ತಟ್ಟುತ್ತಿದ್ದರು. ಅರಕ್ಕಾನ್‌ನಲ್ಲಿ ತಿಮ್ಮಯ್ಯ ಪ್ರಪ್ರಥಮ ಬಾರಿಗೆ ಒಂದು ಬ್ರಿಗೇಡನ್ನು ಯುದ್ಧರಂಗಕ್ಕಿಳಿಸಿದರು. “ಇದು ನನ್ನ ಜನ್ಮದಲ್ಲಿ ಪ್ರಥಮ ಮಹತ್ಕಾರ್ಯ” ಎಂದು ಅವರು ಹೆಮ್ಮೆಗೊಂಡರು. ಅವರ ಸಾಹಸ ಮತ್ತು ಧೈರ್ಯದ ನೀತಿ-ಯುದ್ಧ ನಿರ್ವಹಣೆ ಇವನ್ನು ಸರ್ಕಾರ ಮೆಚ್ಚಿತು. ತಿಮ್ಮಯ್ಯ ‘ಬ್ರಿಗೇಡಿಯರ್’ ಪದವಿಗೆ ೧೯೪೫ ರಲ್ಲಿ ಏರಿದರು. ‘ಡಿಸ್ಟಿಂಗ್ವಿಷ್ಟ್‌ ಸರ್ವೀಸ್‌ ಆರ್ಡರ್’ ಎಂಬ ಮಹಾಬಿರುದನ್ನು ಬ್ರಿಟಿಷ್‌ ಸರ್ಕಾರವು ನೀಡಿತು. ಬ್ರಿಟನ್‌ ಮತ್ತು ಅಮೆರಿಕಗಳ ಯೋಧರು ಸಹ ಬ್ರಿಗೇಡಿಯರ್ ತಿಮ್ಮಯ್ಯನವರ ಸಾಹಸ ಮತ್ತು ಚಟುವಟಿಕೆಗಳನ್ನು ಕಂಡು ಮೆಚ್ಚಿಕೊಂಡರು. ಭಾರತೀಯ ಸೇನೆಗಳು ಸರಿಯಾಗಿ ವರ್ತಿಸುವುದಿಲ್ಲ ಎಂಬ ಪರರಾಷ್ಟ್ರ ಖಂಡನೆಯನ್ನು ಸುಳ್ಳೆಂದು ಸಾರಿ, ಭಾರತೀಯ ಸೇನೆಯನ್ನು ಸಂಘಟಿಸಿ ಸಾಮರ್ಥ್ಯವನ್ನು ಪ್ರದರ್ಶಿಸಿದ ಕೀರ್ತಿಯು ಬ್ರಿಗೇಡಿಯರ್ ತಿಮ್ಮಯ್ಯನವರದು. ಭಾರೀ ಅರಣ್ಯ ಪ್ರದೇಶದಲ್ಲಿ ತಿಮ್ಮಯ್ಯನವರ ಸೇನೆಯು ಶತ್ರುಸಂಹಾರ ಮಾಡಿ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಜಪಾನೀಯರು ವೇಗದಿಂದ ಹಿಮ್ಮೆಟ್ಟಿದರು. ಮಿತ್ರರಾಷ್ಟ್ರ ಸೇನೆಗಳು ರಂಗೂನನ್ನು ತಲುಪಿದಾಗ ತಿಮ್ಮಯ್ಯನವರು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದರು. ಆದರೆ ಅವರ ಬ್ರಿಗೇಡ್‌ ರಂಗೂನನ್ನು ಮೊದಲು ಪ್ರವೇಶಿಸಿತು. ಅವರಿಗಲ್ಲೊಂದು ಆಶ್ಚರ್ಯ ಕಾದಿತ್ತು. ತಿಮ್ಮಯ್ಯನ ಅಣ್ಣ ಕರ್ನಲ್‌ ಪೊನ್ನಪ್ಪ ಐ.ಎನ್‌.ಎ. ದಳದಲ್ಲಿದ್ದು ತಿಮ್ಮಯ್ಯನವರ ಸೇನೆಯಿಂದಲೇ ಹಿಡಿಯಲ್ಪಟ್ಟರು. ತಿಮ್ಮಯ್ಯ ರಣರಂಗಕ್ಕೆ ಹಿಂದಿರುಗುವ ಹೊತ್ತಿಗೆ ಜಪಾನೀಯರು ಶರಣಾಗತರಾಗಿದ್ದರು. ಶರಣಾಗತಿಯ ಒಪ್ಪಂದದ ಸಮಯದಲ್ಲಿ ಭಾರತದ ಸೈನ್ಯದ ಪರವಾಗಿ ತಿಮ್ಮಯ್ಯ ಭಾಗವಹಿಸಿದರು. ಜಪಾನಿನಲ್ಲಿದ್ದ ಮಿತ್ರರಾಷ್ಟ್ರಗಳ ಪರ ಒಬ್ಬ ಅಧಿಕಾರಿಯಾಗಿ ನೇಮಕವಾದರು.

ಭಾರತದ ಸ್ವಾತಂತ್ಯ್ರ ಸಮೀಪಿಸಿತು. ಸೈನ್ಯದ ಸಮಸ್ಯೆಗಳನ್ನು ಬಿಡಿಸಲು ಸರ್ಕಾರ ತಿಮ್ಮಯ್ಯನವರನ್ನು ಭಾರತಕ್ಕೆ ಕರೆಸಿತು.

ಕಾಶ್ಮೀರದ ರಕ್ಷಾಕವಚ

ಸ್ವಾತಂತ್ಯ್ರ ಪಡೆದ ಎರಡೇ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳಿಗೆ ಕಾಶ್ಮೀರದ ವಿಷಯವಾಗಿ ಯುದ್ಧ ಪ್ರಾರಂಭವಾಯಿತು. ಕಾಶ್ಮೀರದ ಮಹಾರಾಜರು ಜನರ ಮನಸ್ಸನ್ನು ಅರ್ಥಮಾಡಿಕೊಂಡು ತಮ್ಮ ರಾಜ್ಯವನ್ನು ಭಾರತಕ್ಕೆ ಸೇರಿಸುವ ಹೊತ್ತಿಗೆ ಕಾಶ್ಮೀರ ಅಪಾಯದ ದವಡೆಯಲ್ಲಿತ್ತು. ಪಾಕಿಸ್ತಾನದ ಪ್ರೋತ್ಸಾಹ, ಅದರ ಸೈನ್ಯದ ನೆರವು ಪಡೆದ ಗಡಿನಾಡಿನ ಪುಂಡರು ರಾಜ್ಯದೊಳಕ್ಕೆ ಸಾಗಿಬಂದು ಕೊಳ್ಳೆ ಹೊಡೆದರು, ಹಳ್ಳಿಗಳನ್ನು ಸುಟ್ಟರು. ಭಾರತ ಸರ್ಕಾರ ತನ್ನ ಸೇನೆಯನ್ನು ಕಾರಿಯಪ್ಪ, ಕಲ್ವಂತ್‌ಸಿಂಗ್‌ ಮತ್ತು ತಿಮ್ಮಯ್ಯನವರ ಮುಂದಾಳುತನದಲ್ಲಿ ಕಾಶ್ಮೀರಕ್ಕೆ ಕಳುಹಿಸಿತು. ಜನರಲ್ ತಿಮ್ಮಯ್ಯನವರಿಗೆ ಒಂದು ವಿಭಾಗದ ಮುಖ್ಯಾಧಿಕಾರವನ್ನು ವಹಿಸಿತು.

ಪುಸ್ತಕದ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ಅದ್ಭುತ ಸಾಧನೆಯನ್ನು ತಿಮ್ಮಯ್ಯನವರು ಕೈಗೂಡಿಸಿದ್ದು ಈ ದಿನಗಳಲ್ಲಿಯೇ. ತೀವ್ರ ಚಳಿಗಾಲ ಕೆಲವೇ ವಾರಗಳಲ್ಲಿ ಪ್ರಾರಂಭವಾಗುವುದರಲ್ಲಿತ್ತು. ಶತ್ರುಗಳು ಆ ಪ್ರದೇಶಕ್ಕೆ ಹೊಂದಿಕೊಂಡವರು, ಆಗಲೇ ಆಯಕಟ್ಟಿನ ಸ್ಥಳಗಳನ್ನು ಆಕ್ರಮಿಸಿಕೊಂಡವರು. ತಿಮ್ಮಯ್ಯನವರ ಸೈನ್ಯದಲ್ಲಿ ಗೂರ್ಖರಂತಹ ಕೆಲವರನ್ನು ಬಿಟ್ಟು ಉಳಿದವರೆಲ್ಲ ಮೈದಾನ ಪ್ರದೇಶದಿಂದ ಬಂದವರು. ಆ ಎತ್ತರದಲ್ಲಿ ಹೋರಾಡಲು ಅಗತ್ಯವಾದ ಆಮ್ಲಜನಕವಿಲ್ಲ, ಹಿಮಪ್ರದೇಶಕ್ಕೆ ಬೇಕಾದ ಬಟ್ಟೆಬರೆ ಇಲ್ಲ, ವಾಹನಗಳಿಗೆ ಆ ಎತ್ತರದಲ್ಲಿ ಬೇಕಾದ ಇಂಧನವಿಲ್ಲ. ಕೆಲವೇ ದಿನಗಳಲ್ಲಿ ಭಾರತದ ಸೈನಿಕರು ಈ ಕಷ್ಟದ ಪರಿಸ್ಥಿತಿಗೆ ಹೊಂದಿಕೊಂಡರು. ತಿಮ್ಮಯ್ಯನವರು ಹತ್ತೊಂಬತ್ತು ಸಾವಿರ ಅಡಿಗಳಿಗಿಂತ ಎತ್ತರದಲ್ಲಿ ಆಮ್ಲಜನಕವಿಲ್ಲದೆ ವಿಮಾನದಲ್ಲಿ ಹೋಗಿ ಆ ಬೆಟ್ಟಗಾಡು ಪ್ರದೇಶದಲ್ಲಿ ಭಾರತೀಯ ಸೈನಿಕರಿಗೆ ಆಹಾರ ಒದಗಿಸಬಹುದು ಎಂದು ತೋರಿಸಿಕೊಟ್ಟರು. ಭಾರತ ಸೈನ್ಯದ ಟ್ಯಾಂಕುಗಳು ಜೋಗಿಲ ಕಣಿವೆಯನ್ನು ಪ್ರವೇಶಿಸಿದಾಗ ಶತ್ರುಗಳು ಓಡಲಾರಂಭಿಸಿದರು. ಭಾರತದ ವಿಮಾನಪಡೆಯ ವಿಮಾನಗಳಿಗೆ ಮೈದಾನಪ್ರದೇಶದಲ್ಲಿ ಸಿಕ್ಕಿಕೊಂಡರು.

ಕಠಿಣ ಚಳಿಗಾಲದಲ್ಲಿ ಕಾಶ್ಮೀರದ ಎಲ್ಲಾ ಭಾಗಗಳನ್ನೂ ಸಂದರ್ಶಿಸಿ, ಯುದ್ಧ ಮಾಡಿ ಕಾಶ್ಮೀರ ಕಣಿವೆಯನ್ನು ಉಳಿಸಿಕೊಂಡ ವೀರ ತಿಮ್ಮಯ್ಯ. ಪಾಕಿಸ್ತಾನಿಗಳ ಕೈಗೆ ಬಿದ್ದಿದ್ದ ಲಡಾಖ್‌ ಪ್ರದೇಶವನ್ನು ಮತ್ತೆ ಗೆದ್ದುಕೊಂಡರು. ಕಾಶ್ಮೀರದ ಜನ ತಿಮ್ಮಯ್ಯನವರನ್ನು ವೀರನೆಂದು ಕೊಂಡಾಡಿದರು.

ಬರ್ಮಾ, ಕಾಶ್ಮೀರ ಯುದ್ಧಗಳಿಂದ ತಿಮ್ಮಯ್ಯನವರ ಖ್ಯಾತಿ ಪ್ರಪಂಚದಲ್ಲೆಲ್ಲಾ ಹಬ್ಬಿತು. ಪ್ರತಿಯೊಂದು ಸಂದರ್ಭದಲ್ಲೂ ಹೊಸ ವಿಧಾನಗಳನ್ನು ಅನುಸರಿಸಬೇಕೆಂದು ತಿಮ್ಮಯ್ಯನವರ ನಿಲುವು. ಶಿಕ್ಷಣ ಪುಸ್ತಕದಲ್ಲಿ ಬರೆದಿರುವುದು ಎಷ್ಟೋ ಬಾರಿ ಯುದ್ಧರಂಗದಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಅವರು ತಿಳಿದಿದ್ದರು. ಕಾಶ್ಮೀರದಲ್ಲಿ ತಿಮ್ಮಯ್ಯನವರ ಜನಪ್ರಿಯತೆ ಎಷ್ಟೆಂದರೆ ಕಾಶ್ಮೀರಿಗಳನ್ನು ನಿಮ್ಮನ್ನು ಯಾರು ಆಳಬೇಕು ಎಂದು ಪ್ರಶ್ನಿಸಿದಾಗ “ಜನರಲ್‌ ತಿಮ್ಯಯ್ಯ” ಎಂದವರು ಉತ್ತರಿಸಿದರಂತೆ!

ಹೊಸ ಸ್ಥಾನಗಳು, ಹೊಣೆಗಳು

ಕಾಶ್ಮೀರದ ಕದನದ ನಂತರ ತಿಮ್ಮಯ್ಯನವರು ಜನರಲ್‌ ಕಾರಿಯಪ್ಪನವರೊಂದಿಗೆ ಸೇನಾಧಿಕಾರಿಗಳ ಕಾಮನ್‌ವೆಲ್ತ್ ಅಧಿವೇಶನಕ್ಕೆ ಇಂಗ್ಲೆಂಡಿಗೆ ತೆರಳಿದರು. ಬ್ರಿಟಿಷ್‌ ಸೇನಾಧಿಕಾರಿಗಳು ಭಾರತ ಸೇನೆಯ ಪರಿಸ್ಥಿತಿಯನ್ನು ವಿಚಾರಿಸಿದಾಗ ಹೆಮ್ಮೆಯಿಂದ ತಿಮ್ಮಯ್ಯ ಅದು ಬ್ರಿಟಿಷರ ಕಾಲದಲ್ಲಿ ಇದ್ದುದಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ ಎಂದರು.

ತಿಮ್ಮಯ್ಯನವರು ಡೆಹರಾಡೂನಿನಲ್ಲಿ ಸೈನಿಕರಿಗೆ ಶಿಕ್ಷಣ ಕೊಡುವ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ‘ಕಮಾಂಡೆಂಟ್‌’ ಆದರು. ಸೈನ್ಯಾಧಿಕಾರಿಗಳ ತರಬೇತನ್ನು ಉನ್ನತ ಮಟ್ಟಕ್ಕೇರಿಸಿದರು. ಡೆಹರಾಡೂನ್‌ ಟ್ರೈನಿಂಗ್‌ ಕಾಲೇಜ್‌ ಎಲ್ಲಾ ವಿಧಗಳಲ್ಲೂ ಸ್ಯಂಡ್‌ ಹರ್ಸ್ಟ ಮಾದರಿಯಲ್ಲಿ ರೂಪಿತಗೊಂಡಿತು. ಸೈನ್ಯಕ್ಕೆ ಯುವಕರನ್ನು ಆರಿಸುವಾಗ ಅವರ ವಯಸ್ಸಿನಲ್ಲಿ ತಾನು ಹೇಗಿದ್ದೆ ಎಂಬ ಭಾವೆನಯನ್ನಿಟ್ಟೇ ಅವರು ಯುವಕರಿಗೆ ಸಹಾನುಭೂತಿಯನ್ನು ತೋರಿಸಿ ಆರಿಸುತ್ತಿದ್ದರು.

೧೯೫೩ರಲ್ಲಿ ಲೆಫ್ಟಿನೆಂಟ್‌ ಜನರಲ್‌ ಆಗಿ ಅವರು ಪಶ್ಚಿಮ ಕಮಾಂಡಿನ ನಾಯಕರಾದರು. ಈ ಅಧಿಕಾರದಲ್ಲಿ ಅವರು ಎರಡು ಬದಲಾವಣೆಗಳನ್ನು ಮಾಡಿದರು. ಇಷ್ಟರವರೆಗೆ ಸೈನ್ಯದಲ್ಲಿ ಅಧಿಕಾರಿಗಳು ಎಲ್ಲಾ ಅಪ್ಪಣೆಗಳನ್ನು ಇಂಗ್ಲೀಷಿನಲ್ಲೇ ಕೊಡುತ್ತಿದ್ದರು. ಸೈನಿಕರಿಗೆ ಇವು ಅರ್ಥವಾಗುತ್ತಿರಲಿಲ್ಲ. ತಿಮ್ಮಯ್ಯನವರು ಇನ್ನು ಮುಂದೆ ಅಪ್ಪಣೆಯನ್ನು ಹಿಂದುಸ್ಥಾನಿಯಲ್ಲೇ ಕೊಡಬೇಕೆಂದು ಆಜ್ಞಾಪಿಸಿದರು. ಎರಡನೆಯದಾಗಿ ಸೈನ್ಯ ವಿಭಾಗಗಳ ಧ್ವಜಗಳು ಬ್ರಿಟಿಷ್‌ ರಾಜರ ಚಿಹ್ನೆಗಳನ್ನು ಹೊಂದಿದ್ದವು. ತಿಮ್ಮಯ್ಯ ಮುಂದೆ ಭಾರತ ರಾಷ್ಟ್ರಧ್ಯಕ್ಷರ ಬಾವುಟ ಸಂಕೇತವನ್ನು ಹಾರಿಸಬೇಕೆಂದು ಆಜ್ಞಾಪಿಸಿದರು. ಅವರು ಭಾರತೀಯ ಸೇನೆಯನ್ನು ಪೂರ್ಣವಾಗಿ ಭಾರತೀಯಗೊಳಿಸಿದರು.

ಕೊರಿಯಾದಲ್ಲಿ

ಎರಡನೇ ಮಹಾಯುದ್ಧದ ಅನಂತರ ಕೊರಯಾದಲ್ಲಿ ಕಮ್ಯುನಿಸ್ಟರಿಗೂ ಡೆಮೊಕ್ರಾಟಿಕ್‌ ಪಕ್ಷಕ್ಕೂ ಯುದ್ಧವಾಯಿತು. ಉತ್ತರ ಕೊರಿಯಾಕ್ಕೆ ರಷ್ಯಾ ಚೀನಾಗಳ ಸಹಾಯ, ದಕ್ಷಿಣ ಕೊರಿಯಾಕ್ಕೆ ಅಮೆರಿಕಾ ಮತ್ತಿತರ ಹದಿನೈದು ರಾಷ್ಟ್ರಗಳ ಬೆಂಬಲ. ಹದಿನೈದು ತಿಂಗಳ ನಂತರ ಒಂದು ಬಗೆಯ ರಾಜಿ ಏರ್ಪಾಡು ರೂಪಿಸಲ್ಪಟ್ಟಿತು. ಈ ಯುದ್ಧದಲ್ಲಿ ಎರಡು ಪಕ್ಷಗಳೂ ಸಾವಿರಾರು ಮಂದಿ ಜನರನ್ನೂ ಸೈನಿಕರನ್ನೂ ಹಿಡಿದಿದ್ದವು. ಇವರ ಬಿಡುಗಡೆಯು ಒಂದು ಸಮಸ್ಯೆಯಾಗಿ ಪರಿಣಮಿಸಿತು. ಸೆರೆಯಲ್ಲಿದ್ದ ಸಾವಿರಾರು ಜನರು ತಮ್ಮ ರಾಜ್ಯಗಳಿಗೆ ಹಿಂತಿರುಗುವುದಿಲ್ಲವೆಂದರು. ಈ ಸಮಸ್ಯೆಯನ್ನು ಪರಿಹರಿಸಲು ಐದು ತಟಸ್ಥ ರಾಷ್ಟ್ರಗಳ ಒಂದು ಸಮಿತಿಯನ್ನು ವಿಶ್ವಸಂಸ್ಥೆ ನೇಮಿಸಿತು. ಭಾರತಕ್ಕೆ ಅಧ್ಯಕ್ಷ ಸ್ಥಾನ. ಭಾರತ ಸರ್ಕಾರವು ತಿಮ್ಮಯ್ಯನವರನ್ನು ಇದರ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಯುದ್ಧಬಂದಿಗಳ ಸಮಸ್ಯೆ ತುಂಬ ಕಷ್ಟದ ಸಮಸ್ಯೆಯಾಗಿತ್ತು. ಸಾವಿರಾರು ಮಂದಿ ಯುದ್ಧಬಂದಿಗಳ ಅಭಿಪ್ರಾಯ ತಿಳಿದುಕೊಳ್ಳಬೇಕು. ಅವರು ಸ್ವತಂತ್ರವಾಗಿ ಅಭಿಪ್ರಾಯ ಹೇಳಲು ಅವಕಾಶವಿಲ್ಲ. ಸೆರೆಮನೆಯಲ್ಲಿ ಅವರ ಮೇಲೆ ಬಲಾತ್ಕಾರ ನಡೆಯುತ್ತಿದೆ ಹೀಗೆ ಆಕ್ಷೇಪಣೆಗಳು. ಎರಡು ಪಕ್ಷಗಳವರೂ ಹಟ ಹಿಡಿಯುತ್ತಿದ್ದರು. ಎಷ್ಟೋಬಾರಿ ಸಹಕರಿಸುತ್ತಿರಲಿಲ್ಲ. ಜನರಲ್‌ ತಿಮ್ಮಯ್ಯ ಮತ್ತು ಸಂಗಡಿಗರು ತಾಳ್ಮೆ ಮತ್ತು ಸಾಹಸದಿಂದ ಈ ಕೆಲಸವನ್ನು ಕೈಗೊಂಡರು. ತಿಮ್ಮಯ್ಯನವರು ಯಾರ ಪಕ್ಷವನ್ನೂ ವಹಿಸದೆ ಕೆಲಸ ಮಾಡಿದರು. ತಮ್ಮ ದೇಶವು ಇಟ್ಟ ಭರವಸೆಯನ್ನು ಸಾರ್ಥಕ ಮಾಡಿದರು. ಬಿಡಿಸಲು ಸಾಧ್ಯವಿಲ್ಲ ಎನ್ನುವಂತಹ ಸಮಸ್ಯೆಗಳನ್ನು ಎದುರಿಸಿ ಆರು ತಿಂಗಳಲ್ಲಿ ಕೆಲಸವನ್ನು ಮುಗಿಸಿದರು. ಅಮೆರಿಕವೂ ಕಮ್ಯುನಿಸ್ಟರೂ ತಿಮ್ಮಯ್ಯನವರ ಸಾಹಸವನ್ನು ಮೆಚ್ಚಿದರು. ಅಮೆರಿಕನ್ನರು ತಿಮ್ಮಯ್ಯನವರನ್ನು ‘ಕಬ್ಬಿಣದ ತೀರ್ಪುಗಾರ’ ನೆಂದು ಕರೆದರು. ರಾಜಾಜಿಯವರು ಅವರನ್ನು ಮದರಾಸಿನಲ್ಲಿ ಸ್ವಾಗತಿಸುತ್ತಾ ಅವರು ‘ಸೈನಿಕ ಋಷಿ’ ಗಳೆಂದು ಕರೆದರು. ಭಾರತ ಸರ್ಕಾರವು ತಿಮ್ಮಯ್ಯನವರ ಅಮೋಘ ಸೇವೆಯನ್ನು ಶ್ಲಾಘಿಸಿ ಅವರಿಗೆ ‘ಪದ್ಮಭೂಷಣ’ ಪ್ರಶಸ್ತಿಯನ್ನು ಕೊಟ್ಟಿತು.

ಮತ್ತೆ ಭಾರತದಲ್ಲಿ

ತಿಮ್ಮಯ್ಯನವರು ದಕ್ಷಿಣ ಕಮಾಂಡಿಗೆ ವರ್ಗವಾದರು. ೧೯೫೫ರ ಮೇ ತಿಂಗಳಲ್ಲಿ ಅವರು ಪೂನಾದಲ್ಲಿ ತಮ್ಮ ಹುದ್ದೆಗೆ ಸೇರಿದರು. ಅಷ್ಟರಲ್ಲೇ ಅವರಿಗೆ ಪಾಕಿಸ್ತಾನಿಗಳ ತೊಂದರೆಯು ಕಾದಿತ್ತು. ಸೌರಾಷ್ಟ್ರದಲ್ಲಿ ಚೌಡ್‌ಬೆಟ್‌ ಎಂಬ ಸ್ಥಳವನ್ನು ಪಾಕಿಸ್ತಾನಿಗಳು ಆಕ್ರಮಿಸಿಕೊಂಡರು. ತಿಮ್ಮಯ್ಯ ಅವರನ್ನಲ್ಲಿಂದ ಓಡಿಸಿದರು. ಶತ್ರುಗಳು ತಯಾರಿಸಿ ಬಿಸಿಯಾಗಿಟ್ಟಿದ್ದ ಅಡಿಗೆಯನ್ನು ಅವರ ಸೈನಿಕರು ಉಂಡು ಹಿಂತಿರುಗಿದರು.

೧೯೫೬ರಲ್ಲಿ ತಿಮ್ಮಯ್ಯನವರನ್ನು ಪೂರ್ವ ಕಮಾಂಡಿಗೆ ವರ್ಗ ಮಾಡಿದರು. ಪೂರ್ವದಲ್ಲಿ ನಾಗಾಪ್ರದೇಶದ ಕೆಲವರು ತಮಗೆ ಪ್ರತ್ಯೇಕ ದೇಶ ಬೇಕೆಂದು ಗಲಭೆ ಮಾಡತೊಡಗಿದರು. ತಿಮ್ಮಯ್ಯ ಆ ಗಲಭೆಯನ್ನಡಗಿಸಿದರು. ನಾಗಾ ಜನರು ಅವರ ಪಾತ್ರವನ್ನು ಹೊಗಳಿ ಒಂದು ದರ್ಬಾರನ್ನು ನಡೆಸಿ ಅವರನ್ನು ತಮ್ಮ ವೀರನೆಂದು ಕರೆದು ಅವರಿಗೆ ಒಬ್ಬ ನಾಗಾಯೋಧನ ಉಡುಪನ್ನು ಉಡುಗೊರೆಯಾಗಿ ಕೊಟ್ಟರು.

ಭಾರತದ ಪ್ರಧಾನ ದಂಡನಾಯಕರು

೧೯೫೭ ನೇ ಇಸವಿಯ ಮೇ ೮ ರಂದು ತಿಮ್ಮಯ್ಯನವರು ಜನರಲ್‌ ಶ್ರೀನಾಗೇಶರಿಂದ ಭಾರತದ ಪ್ರಧಾನ ದಂಡನಾಯಕರಾಗಿ ಅಧಿಕಾರವನ್ನು ವಹಿಸಿಕೊಂಡರು. ತಿಮ್ಮಯ್ಯ ಹೇಳಿದ್ದಾರೆ: “ನನ್ನ ಮೂವತ್ತೊಂದು ವರ್ಷ ಸೇವೆಯಲ್ಲಿ ಆ ದಿನ ಮಹತ್ತಾದುದು. ನಾನು ಬರ್ಮಾದಲ್ಲಿ ಒಂದು ಬ್ರಿಗೇಡಿನ ನಾಯಕತ್ವವನ್ನು ವಹಿಸಿದಾಗಲೂ ಇಷ್ಟು ಸಂತೋಷಪಟ್ಟಿದ್ದೆ. ಈ ಎರಡು ಜವಾಬ್ದಾರಿಗಳೂ ಮಹತ್ತರವಾದುದೇ. ಆದರೆ ಮೊದಲಿಗಿಂತ ಈಗ ಭಾರ ಕಡಿಮೆಯಾಗಿದೆ. ಏಕೆಂದರೆ ಈಗ ಜವಾಬ್ದಾರಿಯನ್ನು ಹೊರಲು ನನಗೆ ತುಂಬಾ ಸಹಾಯಕರಿದ್ದಾರೆ. ಇಂದು ಸೈನ್ಯಕ್ಕೆ ಆಗಾಧ ಶಕ್ತಿ ಇದೆ, ಅದು ಇಡೀ ಮಾನವಕುಲವನ್ನೇ ಅಳಿಸಿ ಹಾಕಬಲ್ಲದು. ಆದುದರಿಂದ ಸೈನಿಕ ತನ್ನ ಹೊಣೆಯನ್ನು ಅರ್ಥಮಾಡಿಕೊಳ್ಳಬೇಕು. ಅವನು ಪಂಗಡ ಅಥವಾ ಜಾತೀಯತೆಯಿಂದ ದೂರವಿರಬೇಕು, ರಾಜಕೀಯ ಜಗಳಗಳಿಂದ ದೂರವಿರಬೇಕು, ರಾಷ್ಟ್ರದ ಪ್ರಜೆಗಾಗಿ ತನ್ನ ಕರ್ತವ್ಯವನ್ನು ನಡೆಸುವುದನ್ನು ಕಲಿಯಬೇಕು”- ಇದು ಜನರಲರ ಆದರ್ಶ.

ತಿಮ್ಮಯ್ಯನವರು ಸೇನಾನಾಯಕರಾದುದು ಭಾರತ ಜನಕ್ಕೆ ಹೆಮ್ಮೆಯ ಸಂಗತಿಯಾಯಿತು. ಕರ್ನಾಟಕವು ತನ್ನ ಎರಡನೆಯ ಜನರಲನಿಗೆ ಹಾರವನ್ನರ್ಪಿಸಿತು.

ಭಾರತದ ತರುಣರು ದೃಢಕಾಯಕರಾಗಬೇಕು, ಅವರು ಆಟಗಳಲ್ಲಿ ಭಾಗವಹಿಸಬೇಕು, ದೇಹಕ್ಕೆ ಬಲ ನೀಡುವ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ತಿಮ್ಮಯ್ಯನವರ ಅಭಿಪ್ರಾಯ. ತಿಮ್ಮಯ್ಯನರೇ ವಿದ್ಯಾರ್ಥಿಯಾಗಿದ್ದಾಗ ಹಾಕಿ, ಫುಟ್‌ಬಾಲ್‌ ಮತ್ತು ಟೆನಿಸ್‌ ಆಟಗಳಲ್ಲಿ ಪರಿಣತರಾಗಿದ್ದರು. ೧೯೬೦ರಲ್ಲಿ ಭಾರತ ಸರ್ಕಾರ ತಿಮ್ಮಯ್ಯನವರನ್ನು ಭಾರತದ ‘ಸ್ಫೋರ್ಟ್ಸ್ ಕೌನ್ಸಿಲ್‌’ನ ಅಧ್ಯಕ್ಷರನ್ನಾಗಿ ನೇಮಿಸಿತು. ಭಾರತದ ತರುಣರು ಪರ್ವತಾರೋಹಣದಲ್ಲಿ ಭಾಗವಹಿಸಬೇಕೆಂದು ತಿಮ್ಮಯ್ಯನವರು ಅದಕ್ಕಾಗಿ ಎವರೆಸ್ಟ್‌ ಶಿಖರವನ್ನು ಹತ್ತಿದ ಕರ್ನಲ್ ಹಂಟ್‌ ಅವರ ಸಲಹೆಗಳನ್ನು ಪಡೆದುಕೊಂಡರು.

ಆಫ್ರಿಕಾದ ಇಥಿಯೋಪಿಯಾ ದೇಶವು ತನ್ನ ಸೈನಿಕರಿಗೆ ಶಿಕ್ಷಣ ಕೊಡಲು ಭಾರತದ ಸೈನ್ಯದ ಅಧಿಕಾರಿಗಳನ್ನು ಕಳುಹಿಸಲು ಪ್ರಾರ್ಥಿಸಿತ್ತು. ಬೇರೆ ದೇಶದ ಸೈನ್ಯಕ್ಕೆ ಭಾರತದ ಅಧಿಕಾರಿಗಳು ಶಿಕ್ಷಣ ಕೊಟ್ಟಿದ್ದು ಇದೇ ಮೊದಲು. ಜನರಲ್‌ ತಿಮ್ಮಯ್ಯ ಇಥಿಯೋಪಿಯನ್‌ ಮಿಲಿಟರಿ ಅಕಾಡೆಮಿಯ ಸಮಾರಂಭದಲ್ಲಿ ಭಾರತ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದರು. ಇಥಿಯೋಪಿಯಾದ ಚಕ್ರವರ್ತಿಗಳು ಜನರಲರಿಗೆ ತಮ್ಮ ದೇಶದ ಉನ್ನತ ಬಿರುದನ್ನು ಇತ್ತು ಸನ್ಮಾನಿಸಿದರು. ೧೯೬೦ರಲ್ಲಿ ನೇಪಾಳದ ರಾಜರು ತಿಮ್ಮಯ್ಯನವರನ್ನು ಆಹ್ವಾನಿಸಿ ಅವರನ್ನು ಆ ದೇಶದ ಗೌರವ ಸೇನಾನಿಯಾಗಿ ನೇಮಿಸಿದರು. (ಈ ಗೌರವವು ಜನರಲ್‌ ಕಾರಿಯಪ್ಪನವರಿಗೆ ಮಾತ್ರ ಸಿಕ್ಕಿತ್ತು). ಜನರಲರು ರಷ್ಯಾ ದೇಶವನ್ನು ಸಂದರ್ಶಿಸಿ ಯೋಧರ ಆಯ್ಕೆ, ಶಿಕ್ಷಣ, ಅಧಿಕಾರಿ, ಯೋಧರೊಳಗಿನ ಸಂಬಂಧಗಳನ್ನು ಅಧ್ಯಯನ ಮಾಡಿದರು.

ಕುಮಾವೂನ್‌ ರೆಜಿಮೆಂಟಿನಲ್ಲಿ ಇಂದಿಗೂ ತಿಮ್ಮಯ್ಯನವರ ಉಡುಪುಗಳೂ, ಬಹುಮಾನಗಳೂ, ಮೆಡಲುಗಳೂ, ಚಿತ್ರಗಳೂ ಪ್ರದರ್ಶಿತವಾಗಿವೆ.

ಜನರಲರು ಇಡೀ ಸೈನ್ಯದ ವಿಷಯಕ್ಕೆ ಎಷ್ಟು ಗಮನ ಕೊಡುತ್ತಿದ್ದರೋ ಅಷ್ಟೇ ಗಮನವನ್ನು ಸೈನ್ಯಕ್ಕೆ ಸೇರಿದ ಯೋಧರ ಮತ್ತು ಇತರರ ಕೌಟುಂಬಿಕ ಜೀವನಕ್ಕೂ ಕೊಡುತ್ತಿದ್ದರು. ಉತ್ತರ ಭಾರತದಲ್ಲಿ ತಮಗೆ ಸಾಧ್ಯವಿದ್ದಾಗ ಸೈನಿಕರ ಕುಟುಂಬಗಳಿಗೆ ಭೇಟಿಯಿತ್ತು ಅವರ ಯೋಗಕ್ಷೇಮಗಳನ್ನು ತಿಳಿದುಕೊಳ್ಳುತ್ತಿದ್ದರು. ಹಾಗೆಯೇ ಪ್ರವಾಸ ಬಂದಿದ್ದಾಗ ಸೈನಿಕರು, ಅವರ ಮನೆಯವರು ತಿಮ್ಮಯ್ಯನವರನ್ನು ಸುಲಭವಾಗಿ ಸಂದರ್ಶಿಸಿ ತಮ್ಮ ಕಷ್ಟತೊಂದರೆಗಳನ್ನು ವಿವರಿಸಿಕೊಳ್ಳಬಹುದಾಗಿತ್ತು. ಅವರ ಕಷ್ಟಗಳ ಕಥೆಯನ್ನು ಸಹಾನುಭೂತಿಯಿಂದ ಕೇಳಿ ತಮ್ಮಿಂದಾದ ಸಹಾಯ ಮಾಡುತ್ತಿದ್ದರು.

ನಿವೃತ್ತರಾಗಿ

ಜನರಲ್‌ ತಿಮ್ಮಯ್ಯನವರು ದೇಶಕ್ಕೆ ಅಮೋಘ ಸೇವೆಯನ್ನು ಸಲ್ಲಿಸಿ ೧೯೬೧ ರಲ್ಲಿ ಸೇನೆಯಿಂಧ ನಿವೃತ್ತರಾದರು. ಆದರೆ ಉದ್ಯಮ ಕಾಫೀ ಬೆಳೆಗಾರ ಕುಟುಂಬದಲ್ಲಿ ಜನಿಸಿ ಬೆಳೆದಿದ್ದ ಜನರಲರನ್ನು ತೋಟಗಾರರು ಬಿಡುವಂತಿರಲಿಲ್ಲ. ದಕ್ಷಿಣ ಭಾರತದ ಕಾಫೀ ತೋಟಗಾರರ ಸಂಘವು ಅವರನ್ನು ಸನ್ಮಾನಿಸಿ ಆ ಉನ್ನತ ಸಂಘದ ಉಪಾಧ್ಯಕ್ಷರನ್ನಾಗಿ ಆರಿಸಿಕೊಂಡಿತು. ತಮ್ಮ ವಿದ್ಯಾಭ್ಯಾಸ ಪ್ರಾರಂಭಿಸಿದ್ದ ಕೂನೂರಿಗೆ ಮರಳು ಜನರಲರು ತೋಟಗಾರರಿಗೆ ಉತ್ತಮ ಸಲಹೆಗಾರರಾದರು.

೧೯೬೨ ಸ್ವತಂತ್ರ ಭಾರತ ಚರಿತ್ರೆಯಲ್ಲಿ ಕಪ್ಪು ವರ್ಷ. ಭಾರತದ ಸೈನ್ಯದ ಯೋಧರು ವೀರರು, ದೇಶ ಪ್ರೇಮಿಗಳು. ಆದರೆ ೧೯೬೨ರ ಚಳಿಗಾಲದಲ್ಲಿ ಚೀನಾದ ಸೈನ್ಯ ನುಗ್ಗಿದಾಗ, ನಮ್ಮ ಸಿಪಾಯಿಗಳಿಗೆ ತಕ್ಕ ಬೆಚ್ಚನೆಯ ಉಡುಪಿರಲಿಲ್ಲ. ಅಗತ್ಯವಾದ ಶಸ್ತ್ರಾಸ್ತ್ರಗಳಿರಲಿಲ್ಲ. ಭಾರತದ ಸೈನ್ಯ ಹಿಮ್ಮೆಟ್ಟಬೇಕಾಯಿತು. ಅನಂತರ ಭಾರತ ಸರ್ಕಾರ ಒಂದು ರಕ್ಷಣಾ ಸಮಿತಿಯನ್ನು ನೇಮಿಸಿತು. ತಿಮ್ಮಯ್ಯನವರೂ ಸದಸ್ಯರಾಗಿದ್ದರು.

ಕೊನೆಯುಸಿರು ಸೈಪ್ರಸ್ ದ್ವೀಪದಲ್ಲಿ

ಗ್ರೀಕರೂ ತುರ್ಕಿಯವರೂ ವಾಸವಿರುವ ಸೈಪ್ರಸ್‌ ದ್ವೀಪವು ೧೯೬೦ರಲ್ಲಿ ಸ್ವಾತಂತ್ಯ್ರ ಪಡೆದರೂ ಈ ಎರಡು ಜನಾಂಗಗಳವರಲ್ಲಿ ವಿಶ್ವಾಸವಿರಲಿಲ್ಲ. ವಿಶ್ವಸಂಸ್ಥೆಯು ಈ ದ್ವೀಪದಲ್ಲಿ ಶಾಂತಿಯನ್ನು ಪಾಲಿಸಲು ತನ್ನ ಸೇನಾ ಆಯೋಗವನ್ನು ೧೯೬೪ರಲ್ಲಿ ಕಳುಹಿಸಿತು. ಜನರಲ್ ತಿಮ್ಮಯ್ಯನವರು ೧೯೬೪ನೇ ಜುಲೈನಲ್ಲಿ ವಿಶ್ವಸಂಸ್ಥೆಯ ಸೇನೆಯ ಸೇನಾನಿಯಾಗಿ ನೇಮಕಗೊಂಡರು. ಇಲ್ಲಿ ಯಾವ ಮಾತನ್ನಾಡಿದರೂ ಯಾವ ಕೆಲಸ ಮಾಡಿದರೂ ಒಂದಲ್ಲ ಒಂದು ಪಕ್ಷ ತಪ್ಪು ಅರ್ಥ ಕೊಡುತ್ತಿತ್ತು. ಕೊರಿಯಾದಲ್ಲಿ ನಿರ್ವಹಿಸಿದ ಜವಾಬ್ದಾರಿಗಿಂತಲೂ ಮಿಗಿಲಾದ ಹೊಣೆಯು ಜನರಲರಿಗೆ ಸೈಪ್ರಸ್‌ನಲ್ಲಿ ಕಾದಿತ್ತು. ಆದರೆ ಅದಕ್ಕೆ ತಕ್ಕ ಸಾಮರ್ಥ್ಯವೂ ಕಾರ್ಯನಿಷ್ಠೆಯೂ ಶಕ್ತಿಯೂ ತಿಮ್ಮಯ್ಯನವರಿಗಿತ್ತು. ಗ್ರೀಕರೂ ತುರ್ಕಿಯವರೂ ಅವರಲ್ಲಿ ನಂಬಿಕೆಯಿಟ್ಟರು.

ಜೀವನವನ್ನೆಲ್ಲಾ ಸೇವೆಯಲ್ಲಿಯೇ ಸವೆಸಿದ ಜನರಲರಿಗೆ ವಿರಾಮವು ಅಪರೂಪವಾಗಿತ್ತು. ತಮ್ಮ ಆರೋಗ್ಯ ಕೆಟ್ಟರೂ, ಹಲವರು ಟೀಕೆ ಮಾಡುತ್ತಿದ್ದರೂ ತಿಮ್ಮಯ್ಯನವರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಲೇ ಇದ್ದರು. ೧೯೬೫ರ ಡಿಸೆಂಬರ್ ೧೮ನೇ ದಿನಾಂಕ ಅವರಿಗೆ ಹೃದಯಾಘಾತವಾಯಿತು. ಕೆಲವೇ ನಿಮಿಷಗಳಲ್ಲಿ ನಿಧನರಾದರು.

ಈ ವರ್ತಮಾನವು ಇಡೀ ಭಾರತವನ್ನೇ ದುಃಖದಲ್ಲಿ ಮುಳುಗಿಸಿತು. ಅಂತರರಾಷ್ಟ್ರ ಸೈನ್ಯಗಳು ದಿವಂಗತ ಜನರಲರಿಗೆ ತಮ್ಮ ದೇಶಗಳ ಮರ್ಯಾದೆಗಳನ್ನರ್ಪಿಸಿದವು. ಸೈಪ್ರಸ್‌ ಅಧ್ಯಕ್ಷ ಮಕರಿಯಾಸರೂ ಅವರ ಸಹವರ್ತಿಗಳೂ ಪಾರ್ಥಿವ ಶರೀರಕ್ಕೆ ತಮ್ಮ ದೇಶದ ಪರವಾಗಿ ಹಾರಗಳನ್ನು ಹಾಕಿದರು. ಶರೀರವನ್ನು ಭಾರತ ಮತ್ತು ವಿಶ್ವಸಂಸ್ಥೆಯ ಧ್ವಜಗಳಿಂದ ಅಲಂಕರಿಸಿದ್ದರು. ವಿಶ್ವಸಂಸ್ಥೆಯ ವಿಮಾನವೊಂದು ತಿಮ್ಮಯ್ಯನವರ ದೇಹವನ್ನು ಭಾರತಕ್ಕೆ ತಂದಿತು. ವಿಮಾನ ನಿಂತಲ್ಲೆಲ್ಲಾ ಆಯಾ ದೇಶದವರು ಮರ್ಯಾದೆ ಸಲ್ಲಿಸಿದರು. ಮುಂಬಯಿಯಲ್ಲಿಯೂ ಬೆಂಗಳೂರಿನಲ್ಲಿಯೂ ತಿಮ್ಮಯ್ಯನವರ ದೇಹಕ್ಕೆ ಭಾರತೀಯ ಸೈನ್ಯ ಗೌರವವನ್ನು ಸಲ್ಲಿಸಿತು. ಬೆಂಗಳೂರಿನಲ್ಲಿ ಹಿಂದು ಧರ್ಮಕ್ಕನುಗುಣವಾಗಿ ಅವರ ಶರೀರವನ್ನು ಸಮಾಧಿ ಮಾಡುವಾಗ ಹದಿನೇಳು ಗುಂಡುಗಳನ್ನು ಹಾರಿಸಿ ಗೌರವ ಸೂಚಿಸಲಾಯಿತು.

ಸೈಪ್ರಸ್‌ ದೇಶವು ೧೯೬೬ ಜೂನ್‌ ೬ ರಂದು ತಿಮ್ಮಯ್ಯನವರ ನೆನಪಿಗಾಗಿ ಅವರ ಚಿತ್ರವಿದ್ದ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.

ಸಾಹಸಿ

ಸಾಹಸದ ಜೀವನ ತಿಮ್ಮಯ್ಯನವರದು. ಬಾಲ್ಯದಿಂದಲೂ ದಿಟ್ಟ ಚೇತನ ಅವರದು. ಸೈನ್ಯದಲ್ಲಿ ಅವರ ಸಾಹಸ ಗಾದೆಯ ಮಾತಾಗಿತ್ತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಬರ್ಮಾದಲ್ಲಿ ಜಪಾನಿನ ಸೈನ್ಯ ಒಂದು ಗುಡ್ಡದ ಮೇಲೆ ಠಾಣೆ ಹಾಕಿತ್ತು. ಅದನ್ನು ವಶಮಾಡಿಕೊಳ್ಳಬೇಕೆಂದು ತಿಮ್ಮಯ್ಯನವರ ಯೋಚನೆ. ಕಂದುಬಣ್ಣದ ಭಾರತೀಯ ಸೈನ್ಯಾಧಿಕಾರಿ ಇದನ್ನು ಸಾಧಿಸಿದರೆ ಬಿಳಿಯ ಅಧಿಕಾರಿಗಳಿಗೆ ಅಪಮಾನ, ಅಲ್ಲವೆ? ಬ್ರಿಟಿಷ್‌ ಅಧಿಕಾರಿಗಳೇ ಬ್ರಿಟಿಷ್‌ ಸೈನಿಕರನ್ನು ಕರೆದೊಯ್ದು ಪ್ರಯತ್ನಿಸಿದರು. ಇಪ್ಪತ್ತೆರಡು ಮಂದಿ ಸೈನಿಕರು ಸತ್ತರು, ಪ್ರಯತ್ನ ವಿಫಲವಾಯಿತು. ಆಗ ಬ್ರಿಟಿಷ್‌ ಅಧಿಕಾರಿಗಳು ತಿಮ್ಮಯ್ಯನವರಿಗೆ ಹೊಣೆಯನ್ನು ಒಪ್ಪಿಸಿದರು. ಬೆಳಗಿನ ಜಾವದಲ್ಲಿ ಮತ್ತೆ ದಾಳಿಯಾಗುತ್ತದೆ ಎಂದು ಜಪಾನೀಯರ ನಿರೀಕ್ಷಣೆ. ಇದನ್ನು ತಿಮ್ಮಯ್ಯ ಅರ್ಥಮಾಡಿಕೊಂಡರು. ಭಾರತದ ಕಮಾವೂನ್‌ ಯೋಧರನ್ನು ರಾತ್ರಿಯೇ ಕಳುಹಿಸಿದರು. ರೈಫಲ್‌ಗಳನ್ನು ಉಪಯೋಗಿಸದೆ ತಮ್ಮ ಕತ್ತಿಗಳನ್ನೇ ಬಳಸುವಂತೆ ತಮ್ಮ ಸೈನಿಕರಿಗೆ ಹೇಳಿ, ಅವರಿಗೆ ಅಗತ್ಯವಾದ ಸೂಚನೆಗಳನ್ನು ಕೊಟ್ಟು ರಾತ್ರಿಯ ನಿಶ್ಯಬ್ದದಲ್ಲಿ ಅವರನ್ನು ಕಳುಹಿಸಿಕೊಟ್ಟರು. ವಿಜಯದ ವಾರ್ತೆಯನ್ನು ನಿರೀಕ್ಷಿಸುತ್ತ ಕೈಯಲ್ಲಿ ಗಡಿಯಾರವನ್ನು ಹಿಡಿದು ಕಾತರದಿಂದ, ಆತಂಕದಿಂದ ಕಾದರು ತಿಮ್ಮಯ್ಯ. ಒಂದು ಮರವನ್ನು ಹತ್ತಿ ವೀಕ್ಷಿಸುತ್ತ ಕುಳಿತರು. ಇದ್ದಕ್ಕಿದ್ದಂತೆ ನೂರಾರು ಕಂಠಗಳಿಂದ ‘ಹನುಮಾನ್‌ ಕೀ ಜೈ’ ಎಂಬ ಘೋಷ ಆಕಾಶವನ್ನು ಮುಟ್ಟಿತು. ಕುಮಾವೂನ್‌ ಯೋಧರು ಗುಡ್ಡದ ಮೇಲಿದ್ದರು, ನೂರು ಮಂದಿ ಜಪಾನೀಯರ ಶವಗಳು ನೆಲದ ಮೇಲೆ ಬಿದ್ದಿದ್ದವು. ೧೯೪೭ರಲ್ಲಿ ಪಾಕಿಸ್ತಾನದ ಸೈನಿಕರು, ಗುಡ್ಡಗಾಡು ಜನರು ಕಾಶ್ಮೀರವನ್ನು ಹೊಕ್ಕಾಗ, ಬೆಟ್ಟ ಗುಡ್ಡಗಳ ಮಧ್ಯೆ ಹಿಮದಲ್ಲಿ ಆಮ್ಲಜನಕವಿಲ್ಲದೆ ವಿಮಾನಗಳ ಚಾಲಕರು, ಯೋಧರು ಹೋಗುವುದು ಅಸಾಧ್ಯ ಎಂದು ಯುದ್ಧಶಾಸ್ತ್ರ ಪ್ರವೀಣರೆಲ್ಲ ಹೇಳುತ್ತಿದ್ದಾಗ, ತಿಮ್ಮಯ್ಯನವರು ತಾವೇ ವಿಮಾನದಲ್ಲಿ ಕುಳಿತು ಅಪಾಯಗಳ ಮಧ್ಯೆ ಸಾಗಿಹೋದರು.

ಜವಾನರ ಸೇನಾನಿ

ತಿಮ್ಮಯ್ಯನವರೆಂದರೆ ಸೈನಿಕರಿಗೆ ಪ್ರಾಣ. ಇದಕ್ಕೆ ಕಾರಣ ಅವರು ಎಂದೂ ತಾವು ಹಿರಿಯ ಅಧಿಕಾರಿ ಎಂದು ದೂರ ಉಳಿಯಲಿಲ್ಲ. ತಮ್ಮ ಅನುಕೂಲಗಳನ್ನೇ ನೋಡಿಕೊಂಡು ಸಾಮಾನ್ಯ ಸೈನಿಕರನ್ನು ಮರೆಯಲಿಲ್ಲ. ಅವರು ತಮ್ಮ ತುಕಡಿಯೊಡನೆ ಮದರಾಸಿನಿಂದ ಸಿಂಗಪುರಕ್ಕೆ ಹೋಗಬೇಕಾಯಿತು. ತಮ್ಮ ಸೈನಿಕರೊಂದಿಗೆ ಹಡಗಿನ ಮೇಲ್ಭಾಗದಲ್ಲಿ ಮಲಗಿಕೊಳ್ಳಲು ನಿರ್ಧರಿಸಿದರು ತಿಮ್ಮಯ್ಯ-ಬಿಳಿಯ ಬ್ರಿಟಿಷ್‌ ಅಧಿಕಾರಿಗಳಿಗೆ ಆಶ್ಚರ್ಯವಾಯಿತು, ಕೋಪ ಬಂದಿತು. ಆದರೂ ತಿಮ್ಮಯ್ಯ ತಮ್ಮ ಯೋಧರೊಂದಿಗೆ ಮಲಗಿ ರಾತ್ರಿ ಕಳೆದರು.

ಎರಡನೆಯ ಮಹಾಯುದ್ಧದಲ್ಲಿ ಭಾರತದ ಸೈನಿಕರು ಪರಾಕ್ರಮದಿಂದ ಹೋರಾಡಿದರು. ಆದರೆ, ಅವರ ರಕ್ತ, ಪ್ರಾಣಗಳನ್ನು ಬೇಡಿದ ಬ್ರಿಟಿಷ್‌ ಅಧಿಕಾರಿಗಳು ತಾವು ಮೇಲಿನವರು ಎನ್ನುವಂತೆ ನಡೆದುಕೊಳ್ಳುತ್ತಿದ್ದರು. ಬ್ರಿಟಿಷ್‌ ಸೈನಿಕರು ಜಪಾನೀ ಯುವತಿಯರೊಂದಿಗೆ ಓಡಾಡುತ್ತಿದ್ದರು. ಯಾರೂ ಅವರನ್ನು ಪ್ರಶ್ನಿಸಲಿಲ್ಲ. ಆದರೆ ಮೂವರು ಗೂರ್ಖಾ ಸೈನಿಕರು ಜಪಾನೀ ಯುವತಿಯರೊಂದಿಗೆ ಇದ್ದರೆಂದು ಅವರ ವಿಚಾರಣೆಯಾಯಿತು. ವಿಚಾರಣೆ ಮಾಡುವಾಗ ತಿಮ್ಮಯ್ಯನವರನ್ನು ಸೇರಿಸಿಕೊಳ್ಳಲಿಲ್ಲ. ಆದರೆ ಶಿಕ್ಷೆ ಕೊಟ್ಟಾಗ, ಅಪ್ಪಣೆಯ ಪತ್ರವನ್ನು ಅವರು ಸಹಿ ಮಾಡಬೇಕಾಯಿತು. ತಿಮ್ಮಯ್ಯನವರು ನಿರಾಕರಿಸಿ, ತಮ್ಮ ಎದುರಿಗೆ ಮತ್ತೆ ವಿಚಾರಣೆಯಾಗಬೇಕು ಎಂದರು.

ಮತ್ತೊಂದು ಬಾರಿ, ಬ್ರಿಟಿಷ್‌ ಮತ್ತು ಆಸ್ಟ್ರೇಲಿಯದ ಅಧಿಕಾರಿಗಳು ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರು ನೂರು ಮಂದಿ ಗೂರ್ಖರ ಮುಷ್ಕರ.

ತಿಮ್ಮಯ್ಯನವರು ತಾವೇ ಅವರ ಶಿಬಿರಕ್ಕೆ ಹೋದರು. ಸೈನಿಕರು, ಅಧಿಕಾರಿಗಳು ಎಲ್ಲರ ಮುಖಗಳೂ ಕೋಪದಿಂದ ಊದಿದ್ದವು. ಎಲ್ಲರ ತುಟಿಗಳು ಹೊಲೆದಿದ್ದವು. ಯಾರೂ ಮಾತನಾಡಲೊಲ್ಲರು. ತಿಮ್ಮಯ್ಯನವರಲ್ಲಿ ಅವರಿಗಿನ್ನೂ ಸಂಶಯ. ತಿಮ್ಮಯ್ಯ ಹಿರಿಯ ಅಧಿಕಾರಿಯಂತೆ ಮಾತನಾಡಲಿಲ್ಲ. ಅಣ್ಣನಂತೆ ಮಾತನಾಡಿದರು. ಆ ತುಕಡಿಯ ಹಿಂದಿನ ಸಾಹಸವನ್ನೂ ಕೀರ್ತಿಯನ್ನೂ ನೆನಪು ಮಾಡಿಕೊಟ್ಟರು. ಅವರ ಈಗಿನ ಅವಿಧೇಯತೆಯಿಂದ ಗಂಭೀರ ಪರಿಣಾಮವಾಗುತ್ತದೆ ಎಂದರು. ಎಲ್ಲರೊಡನೆ ಸಿಗರೇಟುಗಳನ್ನು ಹಂಚಿಕೊಂಡರು. ಪಾನೀಯಗಳನ್ನು ಹಂಚಿಕೊಂಡರು. “ನಿಮ್ಮ ಕಷ್ಟಗಳೇನು? ಸಂಕೋಚವಿಲ್ಲದೆ ಹೇಳಿ” ಎಂದರು. ಕ್ರಮೇಣ ಸೈನಿಕರ ಬಾಯಿಗಳು ತೆರೆದವು. ಆಕ್ರೋಶದಿಂದ ಆಕ್ಷೇಪಣೆಗಳ ಸುರಿಮಳೆ ಮಾಡಿದರು. ತಿಮ್ಮಯ್ಯನವರು ಉತ್ತರ ಕೊಟ್ಟರು. ಅಸಮಾಧಾನದ ಕಾರ್ಮೋಡಗಳು ಚದುರಿ ಸ್ನೇಹದ ಹೂಬಿಸಿಲು ಹರಡಿತು.

 

‘ನಿಮ್ಮ ಕಷ್ಟಗಳೇನು? ಸಂಕೋಚವಿಲ್ಲದೇ ಹೇಳಿ’

ತಿಮ್ಮಯ್ಯ ಬಹು ಸ್ನೇಹಪರರು. ಮದುವೆ ಮೊದಲಾದ ಸಮಾರಂಭಗಳಿಗೆ ಬಂದಾಗ ಎಲ್ಲರೊಡನೆ ಕುಳಿತುಕೊಳ್ಳುವರು, ಮಾತನಾಡುವರು. ಸ್ನೇಹಿತರೊಡನೆ, ಬಂಧುಗಳೊಡನೆ ನಿರಾಡಂಬರವಾಗಿ ಬೇರೆಯವರು. ಅಧಿಕಾರಸ್ಥಾನದಿಂದ ಮಾತ್ರವಲ್ಲ, ಸಾಹಸದಲ್ಲಿ, ತಮ್ಮೊಡನೆ ಕೆಲಸ ಮಾಡುವವರನ್ನು ನಡೆಸಿಕೊಳ್ಳುವ ಔದಾರ್ಯದಲ್ಲಿ, ಸರಳತೆಯಲ್ಲಿ, ಯೋಧರ ಯೋಗಕ್ಷೇಮದ ಚಿಂತನೆಯಲ್ಲಿ, ದೇಶಪ್ರೇಮದಲ್ಲಿ ಬಹುದೊಡ್ಡ ವ್ಯಕ್ತಿ ತಿಮ್ಮಯ್ಯನವರು