ಎಂಥ ಹುಚ್ಚು ಜನರು ಇವರು
ಕೊಚ್ಚೆಯನೇ ಕಾಂಬರು !
ಕೊಚ್ಚೆಯುಂಡು ದಡದಿ ಬೆಳೆದ
ಹಚ್ಚಹಸುರ ಕಾಣರು !
ಹಚ್ಚಹಸಿರ ಬಣ್ಣಿಸಿದರೆ ಅದು ಕಲ್ಪನೆ ಎಂಬರು
ನಾರುತಿರುವ ಕೊಚ್ಚೆ ಮಾತ್ರ ಪರಮ ಸತ್ಯವೆಂಬರು !

ಎಂಥ ಮರುಳು ಜನರು ಇವರು
ಬಡತನವನೆ ಕಾಂಬರು !
ಬಡವನೆದೆಯೊಳಿನ್ನು ತುಡಿವ
ಭರವಸೆಯನೆ ಕಾಣರು !
ಬಡವರ ನೆಪದಲ್ಲಿ ಇವರೆ ಬರಿದೆ ಹುಯ್ಯಲಿಡುವರು
ದಿಟದ ಬಡವರೀಕೂಗಿನೊಳೆಲ್ಲೊ ನರಳುತಿರುವರು !

ಎಂಥ ಪೆದ್ದ ಜನರು ಇವರು
ದಿವದ ಬೆಳಕ ಕಾಣರು !
ಮನೆಯ ಮುಂದೆ ಹರಿದರೂ
ಕಣ್ಣ ಮುಂದೆ ಕುಣಿದರೂ
ಎದೆಗೆ ಬಿರಡೆಯಿಡುವರು !
ಅದೂ ಸತ್ಯ ಇದೂ ಸತ್ಯ ಎಂಬ ದೃಷ್ಟಿಯಿಲ್ಲದೆ
ಬಾಳು ಬೆಳೆಯಬಲ್ಲುದೆ ?

ಎಂಥ ನಿಸ್ಸತ್ವ ಜನರು
ವಿಫಲತೆಯನೆ ಕಾಂಬರು !
ವಿಫಲತೆಯೊಳು ಸಫಲತೆ ಚಿಗು-
ರಿಡುವುದನೇ ಕಾಣರು !
ಅಳಿವಿನಲ್ಲು ಉಳಿವು ಮೊಳೆವ ಚೋದ್ಯವನ್ನು ಈ ಜಗ
ನೂರು ಚೈತ್ರದಲ್ಲಿ ಮಾಡಿ ತೋರಿದರೂ ಉಬ್ಬೆಗ !

ಬಿಸಿಲನುಂಡು ಬೆಳದಿಂಗಳ
ಕೊಡುವ ಚಂದ್ರನಂದದಿ,
ನೋವ ನುಂಗಿ ನಗೆಯನೀವ
ಆತ್ಮಶಕ್ತಿ ಬರುವುದೆ ?
ಅಡಿ ನೆಲದಲಿ ಕಣ್ ಮುಗಿಲಲಿ ರೆಕ್ಕೆಯೊಳಗೆ ವಿಶ್ವವ
ತಬ್ಬುವಂಥ ಗರುಡಶಕ್ತಿ ಬರುವವರೆಗು ರೌರವ !