Categories
e-ದಿನ

ಜನವರಿ-03

ಪ್ರಮುಖಘಟನಾವಳಿಗಳು:

1749: ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಡೆನ್ಮಾರ್ಕಿನ ‘ಬರ್ಲಿಂಗ್ಸ್ಕೆ’ ಪತ್ರಿಕೆಯ ಪ್ರಥಮ ಸಂಚಿಕೆ ಪ್ರಕಟಗೊಂಡಿತು.

1777: ಅಮೆರಿಕಾದ ಜನರಲ್ ಜಾರ್ಜ್ ವಾಷಿಂಗ್ಟನ್ ನೇತೃತ್ವದ ಸೇನೆ ಪ್ರಿನ್ಸ್ಟನ್ ಕದನದಲ್ಲಿ ಬ್ರಿಟಿಷ್ ಜನರಲ್ ಲಾರ್ಡ್ ಕಾರ್ನವಾಲೀಸ್ ಸೈನ್ಯಕ್ಕೆ ಸೋಲುಣಿಸಿತು.

1870: ಅಮೇರಿಕಾದ  ನ್ಯೂಯಾರ್ಕ್ ನಗರದಲ್ಲಿನ ಪ್ರಸಿದ್ಧ ತೂಗು ಸೇತುವೆ ‘ಬ್ರೂಕ್ಲಿನ್ ಬ್ರಿಡ್ಜ್’ ನಿರ್ಮಾಣ ಆರಂಭಗೊಂಡಿತು.  ಮ್ಯಾನ್ಹಟನ್ ಪ್ರಾಂತ್ಯದಿಂದ  ‘ಈಸ್ಟ್ ರಿವರ್’ ನದಿಯ ಮೇಲೆ ಬ್ರೂಕ್ಲಿನ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಿರುವ  ಈ ಸೇತುವೆಯನ್ನು ಕೇಬಲ್ ಸ್ಟೇಯ್ಡ್ ಸಸ್ಪೆನ್ಷನ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ.  ಇದನ್ನು  1883 ಮೇ 24 ರಂದು ಸಂಚಾರಕ್ಕಾಗಿ ತೆರೆಯಲಾಯಿತು.  1825 ಮೀಟರ್ ಉದ್ದ, 26 ಮೀಟರ್ ಅಗಲ  ಹಾಗೂ 41 ಮೀಟರ್ ಗರಿಷ್ಟ ಆಳವನ್ನು ಹೊಂದಿರುವ  ಈ ಸೇತುವೆ  1903ರವರೆಗೆ  ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು.

1880: ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ದ ಮೊದಲ ಸಂಚಿಕೆ ಮುಂಬೈನಲ್ಲಿ ಪ್ರಕಟಗೊಂಡಿತು. ಪ್ರಾರಂಭದಲ್ಲಿ ಇದು ಟೈಮ್ಸ್ ಆಫ್ ಇಂಡಿಯಾ ಸಮೂಹದ ಸಾಪ್ತಾಹಿಕ ಪುರವಣಿಯಾಗಿ  ‘ಟೈಮ್ಸ್ ಆಫ್ ಇಂಡಿಯಾ ಓವರ್ ಲ್ಯಾಂಡ್ ವೀಕ್ಲಿ ಎಡಿಷನ್’ ಎಂಬ  ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. 1929ರಲ್ಲಿ ‘ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ’ ಎಂದು ಹೆಸರು ಬದಲಿಸಿಕೊಂಡಿತು.

1888: ಲಾಸ್ ಏಂಜೆಲಿಸ್ ನಗರದ ಹ್ಯಾಮಿಲ್ಟನ್ ಪ್ರದೇಶದಲ್ಲಿರುವ  ಲಿಕ್  ವೀಕ್ಷಣಾಲಯದಲ್ಲಿ 91 ಸೆಂಟಿ ಮೀಟರ್ ವ್ಯಾಸದ  ರಿಫ್ರಾಕ್ಟಿಂಗ್ ಟೆಲಿಸ್ಕೋಪ್ ಅನ್ನು ಪ್ರಥಮಬಾರಿಗೆ ಬಳಸಲಾಯಿತು.  ಅಂದಿನ ಕಾಲದಲ್ಲಿ ಇದು  ವಿಶ್ವದಲ್ಲೇ ಅತ್ಯಂತ  ದೊಡ್ಡ ದೂರದರ್ಶಕ ಉಪಕರಣವೆಂಬ ಕೀರ್ತಿಗೆ ಪಾತ್ರವಾಗಿತ್ತು.

1911: 7.7 ರಿಕ್ಟರ್ ಪ್ರಮಾಣದ  ಭೂಕಂಪವು ರಷ್ಯಾದ ಟರ್ಕೆಸ್ಥಾನದ ಅಲ್ಮೇಟಿ ನಗರವನ್ನು ಧ್ವಂಸಮಾಡಿತು.

1925: ಇಟಲಿಯ ಸಂಸತ್ತನ್ನು ವಿಸರ್ಜಿಸಿ ತನ್ನನ್ನು ಸರ್ವಾಧಿಕಾರಿ  ಎಂದು ಘೋಷಿಸಿಕೊಂಡ.

1947: ಯು.ಎಸ್. ಕಾಂಗ್ರೆಸ್ ಅಧಿವೇಶನದ  ಕಾರ್ಯಕಲಾಪವನ್ನು  ಪ್ರಥಮ ಬಾರಿಗೆ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಯಿತು.

1956: ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಗೋಪುರದ ಮೇಲ್ಬಾಗವು ಅಗ್ನಿ ಅನಾಹುತಕ್ಕೀಡಾಗಿ ಹಾನಿಗೊಂಡಿತು.

1957: ಸ್ವಿಟ್ಜರ್ಲ್ಯಾಂಡ್ದೇಶದ ಹ್ಯಾಮಿಲ್ಟನ್ ವಾಚ್ ಕಂಪೆನಿಯು ವಿಶ್ವದ ಪ್ರಥಮ ಎಲೆಕ್ಟ್ರಿಕ್ ಕೈಗಡಿಯಾರ ‘ಎಲೆಕ್ಟ್ರಿಕ್ 500’ ಅನ್ನು ಬಿಡುಗಡೆ ಮಾಡಿತು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಖ್ಯಾತ ವಿಜ್ಞಾನಿ ಪ್ರೊ. ಚಿಂತಾಮಣಿ ನಾಗೇಶ ರಾಮಚಂದ್ರರಾವ್ (ಸಿ. ಎನ್. ಆರ್ ರಾವ್) ಅವರು ಮೊತ್ತ ಮೊದಲ ಭಾರತ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಹೈದರಾಬಾದಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾವ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

2008: ಖ್ಯಾತ ಇಂಗ್ಲಿಷ್ ಲೇಖಕಿ ಕನ್ನಡತಿ ಮಾಲತಿ ರಾವ್ ಅವರನ್ನು 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅವರ ‘ಡಿಸಾರ್ಡರ್ಲಿ ವುಮೆನ್’ ಕಾದಂಬರಿಗೆ ಈ ಪ್ರಶಸ್ತಿ ದೊರಕಿತು.

ಪ್ರಮುಖಜನನ/ಮರಣ:

ಕ್ರಿಸ್ತ ಪೂರ್ವ 106: ರೋಮನ್ ದಾರ್ಶನಿಕ, ರಾಜಕಾರಣಿ, ಶ್ರೇಷ್ಠ ವಾಗ್ಮಿ, ನ್ಯಾಯಶಾಸ್ತ್ರ ಮತ್ತು  ಸಂವಿಧಾನ ನಿಪುಣ ಮಾರ್ಕಸ್ ಟುಲಿಯಸ್ ಸಿಸೆರೋ ಅವರು ರೋಮ್ ನಗರದಿಂದ 100 ಕಿಲೋಮೀಟರ್ ದೂರದಲ್ಲಿರುವ ಅರ್ಪಿನುಂ ಎಂಬಲ್ಲಿ ಜನಿಸಿದರು.

1760: ಬ್ರಿಟಿಷರ ವಿರುದ್ಧ ಹೋರಾಡಿದ ಪಾಳೆಯಗಾರ ವೀರಪಾಂಡ್ಯ ಕಟ್ಟಾಬೊಮ್ಮನ್ ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಪಂಚಲನ್ಕುರಿಚಿ ಎಂಬಲ್ಲಿ ಜನಿಸಿದರು.  ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸಾರ್ವಭೌಮತ್ವವನ್ನು ಒಪ್ಪದೆ ಅವರ ವಿರುದ್ಧ ಹೋರಾಡಿದರು.  ಬ್ರಿಟಿಷ್ ಆಡಳಿತವು  ಇವರನ್ನು 16 ಅಕ್ಟೋಬರ್ 1799ರಂದು  ಸಾರ್ವಜನಿಕವಾಗಿ ತೂತ್ತುಕುಡಿ ಜಿಲ್ಲೆಯ ಕಯತ್ತಾರ್ ಎಂಬಲ್ಲಿ ನೇಣುಗಂಬಕ್ಕೇರಿಸಿತು. ಅವರ ಪ್ರಾಣಾರ್ಪಣೆಯ 200ನೇ ವರ್ಷದ ಸ್ಮರಣೆಯಾಗಿ   ಅಕ್ಟೋಬರ್ 16, 1999ರಂದು  ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ತಮಿಳುನಾಡಿನ ವಿಜಯನಾರಾಯಣಂ ಎಂಬಲ್ಲಿ ಇರುವ  ಭಾರತೀಯ ನೌಕಾದಳದ ಸಂಪರ್ಕ ಕೇಂದ್ರಕ್ಕೆ  ಐ.ಎನ್.ಎಸ್. ಕಟ್ಟಾಬೊಮ್ಮನ್ ಎಂದು ಹೆಸರಿಡಲಾಗಿದೆ.

1831: ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆ, ಆಧುನಿಕ ಶಿಕ್ಷಣ ಮಾತೆ ಎಂದು ಪ್ರಸಿದ್ಧರಾದ ಸಾವಿತ್ರಿಬಾಯಿ ಫುಲೆ ಅವರು  ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ ಜನಿಸಿದರು.  ತಮ್ಮ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ  ಅನೇಕ ಶಾಲೆಗಳನ್ನು ಸ್ಥಾಪಿಸಿ, ಹೆಣ್ಣುಮಕ್ಕಳನ್ನು  ಮನೆ ಮನೆಗೆ ಹೋಗಿ  ಶಿಕ್ಷಣಶಾಲೆಗೆ ಕರೆತಂದರು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಇದ್ದ ವಿರೋಧಗಳಿಗೂ ಎದೆಗುಂದದೆ ಸಹಸ್ರಾರು  ಮಕ್ಕಳಿಗೆ  ವಿದ್ಯಾಭ್ಯಾಸ ಧಾರೆ ಎರೆದರು.  ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ್ದಕ್ಕಾಗಿ ಜ್ಯೋತಿಬಾ ಫುಲೆ ಅವರನ್ನು  ಬ್ರಿಟಿಷ್ ಸರ್ಕಾರ ಗೌರವಿಸಿದ ಸಮಾರಂಭದಲ್ಲೇ,  “ಈ ಕೀರ್ತಿ ನಿನಗೆ ಸೇರಬೇಕು” ಎಂದು ನುಡಿದು  ಅದನ್ನು ಅವರು ತಮ್ಮ ಪತ್ನಿ ಸಾವಿತ್ರಿಬಾಯಿ ಫುಲೆ ಅವರಿಗೆ  ಗೌರವದಿಂದ ನೀಡಿದ್ದರು.  ಸಾವಿತ್ರಿಬಾಯಿ ಫುಲೆ ಅವರು ತೀವ್ರ ಪ್ಲೇಗ್ ಕಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 10 ಮಾರ್ಚ್ 1897ರಲ್ಲಿ ಸಾವನ್ನಪ್ಪಿದರು.

1861: ಟೆನಿಸ್ ಕ್ರೀಡೆಯಲ್ಲಿ ಮಹಾನ್ ಸಾಧನೆ ಮಾಡಿದ  ಇಂಗ್ಲಿಷ್ ಅವಳಿ ಜವಳಿ ಸಹೋದರರಾದ ವಿಲಿಯಂ ರೇನ್ ಶಾ (1861-1904) ಮತ್ತು ಅರ್ನೆಸ್ಟ್ ರೇನ್ ಶಾ (1861-1899) ಹುಟ್ಟಿದ ದಿನ. ಈ ಅವಳಿ ಜವಳಿ ಸಹೋದರರು 1880ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ನಿನಲ್ಲಿ ಒಟ್ಟಾಗಿ ಟೆನಿಸ್ ಆಟಕ್ಕೆ ಪ್ರವೇಶ ಪಡೆದರು. ವಿಲಿಯಂ ಅವರು ವಿಂಬಲ್ಡನ್ ಸಿಂಗಲ್ಸ್ ಪ್ರಶಸ್ತಿಯನ್ನು  7 ಬಾರಿ (1881-86 ಹಾಗೂ 1889ರಲ್ಲಿ) ಪಡೆದುಕೊಂಡರು. ತನ್ನ ಸಹೋದರನನ್ನೇ ಮೂರು ಬಾರಿ ಫೈನಲ್ಸ್ ನಲ್ಲಿ ಪರಾಭವಗೊಳಿಸಿದರು. ಅರ್ನೆಸ್ಟ್ 1888ರಲ್ಲಿ ಚಾಂಪಿಯನ್ ಶಿಪ್ ಗೆದ್ದರು. ಇವರಿಬ್ಬರೂ ಒಟ್ಟಾಗಿ  ಬ್ರಿಟಿಷ್ ಡಬಲ್ಸ್ ಪ್ರಶಸ್ತಿನ್ನು ಏಳು ಬಾರಿ ಗೆದ್ದುಕೊಂಡರು. 1888ರಲ್ಲಿ ವಿಲಿಯಂ ಬ್ರಿಟಿಷ್ ಲಾನ್ ಟೆನಿಸ್ ಅಸೋಸಿಯೇಶನ್ನಿನ ಮೊತ್ತ ಮೊದಲ ಬ್ರಿಟಿಷ್ ಅಧ್ಯಕ್ಷರಾಗಿ ಆಯ್ಕೆಯಾದರು.

1883: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ಜನಿಸಿದ ದಿನ. 1945ರಿಂದ 1951ರ ಅವಧಿಯಲ್ಲಿ ಬ್ರಿಟಿಷ್ ಪ್ರಧಾನಿಯಾಗಿದ್ದ ಇವರು ಭಾರತದ ಸ್ವಾತಂತ್ರ್ಯವನ್ನು ಅನುಮೋದಿಸಿದರು.

1884: ಕನ್ನಡ ನವೋದಯ ಕಾರ್ಯಪ್ರವರ್ತಕ, ಕನ್ನಡದ ಕಣ್ವ, ಕರ್ನಾಟಕದ ಅಚಾರ್ಯಪುರುಷ ಎಂದು ಖ್ಯಾತ ನಾಮರಾದ ಪ್ರೊಫೆಸರ್ ಬಿ.ಎಂ. ಶ್ರೀಕಂಠಯ್ಯನವರು ತುರುವೇಕೆರೆಯಲ್ಲಿ ಜನಿಸಿದರು.  ಕಳೆದ ಶತಮಾನದಲ್ಲಿ ಸಾಮಾಜಿಕ ಬದುಕಿನಲ್ಲಿ ಮತ್ತು ಸಾಹಿತ್ಯ ಲೋಕದಲ್ಲಿ ಕನ್ನಡವನ್ನು  ಉಳಿಸಿ ಬೆಳೆಸಿ ಪೋಷಿಸುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರಲ್ಲಿ ಆಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಪ್ರಮುಖರಾಗಿದ್ದಾರೆ. ಬಿ.ಎಂ.ಶ್ರೀ ಅವರು ಇಂಗ್ಲೀಷ್ ಅಧ್ಯಾಪಕರಾಗಿದ್ದುಕೊಂಡು ಕನ್ನಡ ಮತ್ತು  ಸಂಸ್ಕೃತ ಭಾಷೆಗಳಲ್ಲಿ ಗಾಢ ಪಾಂಡಿತ್ಯ ಪಡೆದಿದ್ದರು. ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ವಿಯರ್ ಸಾಹೇಬರು ವಿದ್ಯಾರ್ಥಿಗಳಿಗೆ ಆಧುನಿಕ ವಿಮರ್ಶನ ವಿಧಾನದಲ್ಲಿ ಬೋಧನೆ ಮಾಡಲು ಬಿ.ಎಂ. ಶ್ರೀಕಂಠಯ್ಯನವರನ್ನು ಇಂಗ್ಲೀಷ್ ಮತ್ತು ಕನ್ನಡ ಅಧ್ಯಾಪಕ ಎಂದು 1909ರಲ್ಲಿ ನೇಮಿಸಿದರು.  ನೇಮಕವಾದ ಎರಡು ವರ್ಷಗಳಲ್ಲಿ ಇವರ ಕನ್ನಡದ ಒಲವು, ಒಲ್ಮೆ ಇವುಗಳ ಕೀರ್ತಿ ಧಾರವಾಡದವರೆಗೂ ಹಬ್ಬಿತು.  1911ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘದಲ್ಲಿ ಬಿ.ಎಂ.ಶ್ರೀ ತಮ್ಮ ಮೊತ್ತಮೊದಲನೆಯ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಯುಗಪ್ರವರ್ತಕ ಭಾಷಣವನ್ನು ಮಾಡಿದರು.  1928ರಲ್ಲಿ ಕಲಬುರ್ಗಿ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು ಸೀಮೆಯಲ್ಲಿ ಬಿ.ಎಂ.ಶ್ರೀಯವರೂ ಕರ್ನಾಟಕ ಏಕೀಕರಣ ಚಳುವಳಿಯ ಪ್ರವರ್ತಕರಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದಾಗ ಅವರು ಮೊತ್ತಮೊದಲು ಮಾಡಿದ ಕೆಲಸ ಎಂದರೆ ಕನ್ನಡದ ಬಾವುಟವನ್ನು ಹಾರಿಸಿದ್ದು;  ತಾವು ರೂಪಿಸಿದ ಕನ್ನಡದ ಬಾವುಟದ ಕಲ್ಪನೆಗೆ ಕವನರೂಪವನ್ನು ಕೊಟ್ಟರು;  ಪ್ರಾಚೀನ-ಅರ್ವಾಚೀನ ಕನ್ನಡ ಕವಿಗಳು ಕಂಡ ಕರ್ನಾಟಕವನ್ನು ವರ್ಣಿಸುವ ಕವನಗಳ ಸಂಕಲನವೊಂದನ್ನು ‘ಕನ್ನಡ ಬಾವುಟ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು;  ಕನ್ನಡ ಬಾವುಟವನ್ನು ಹಿಡಿದು ಕನ್ನಡ ನಾಡನ್ನೆಲ್ಲ ಸುತ್ತಿ ಕರ್ನಾಟಕ ಏಕೀಕರಣದ ಹೋರಾಟಕ್ಕೆ ಕನ್ನಡ ಜನಮನವನ್ನು ಸಿದ್ಧಗೊಳಿಸಿದರು. ಮೈಸೂರು ಮಹಾರಾಜರಿಂದ ಅವರಿಗೆ ರಾಜ ಸೇವಾಸಕ್ತ ಬಿರುದು ಸಂದಿತು. ಗ್ರಂಥ ಸಮರ್ಪಣೆ ಪರಂಪರೆಯ ಮೊದಲ ಗ್ರಂಥ ‘ಸಂಭಾವನೆ’ ಅವರಿಗೆ ಸಮರ್ಪಿತಗೊಂಡಿತು.

1892: ಮಹಾನ್ ವಿದ್ವಾಂಸರೂ, ಸಾಹಿತಿಗಳೂ ಆದ  ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ಜನಿಸಿದರು.  ಸಂಸ್ಕೃತದಲ್ಲಿ ಕಾಶಿ ಜಂಗವಾಡಿಮಠದ ಪಂಡಿತ ಮತ್ತು ಸಾಹಿತ್ಯಾಚಾರ್ಯ ಪದವಿಗಳನ್ನೂ, ಕಲ್ಕತ್ತೆಯಲ್ಲಿ ವ್ಯಾಕರಣತೀರ್ಥ ಪದವಿಯನ್ನೂ ಪಡೆದ ಚಂದ್ರಶೇಖರ ಶಾಸ್ತ್ರಿಗಳು ಚಿತ್ರದುರ್ಗ, ಯಾದಗಿರಿಗಳಲ್ಲಿ ಸಂಸ್ಕೃತ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು.  ಶಾಸ್ತ್ರಿಗಳು ಕನ್ನಡದಲ್ಲಿ ಹಲವಾರು ಪ್ರಮುಖ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ನೂರಾರು ಸಂಶೋಧನಾ ಮತ್ತು ಪಾಂಡಿತ್ಯಪೂರ್ಣ ಲೇಖನಗಳನ್ನು ನಾಡಿನ ಶ್ರೇಷ್ಠಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಧಾರವಾಡದಲ್ಲಿ ನಡೆದ 25ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಕರ್ನಾಟಕ, ಕನ್ನಡ ಸಾಹಿತ್ಯ ಇವುಗಳನ್ನು ಕುರಿತು ಅವರು ವ್ಯಕ್ತಪಡಿಸಿದ ಚಿಂತನೆಗಳು ಅಮೋಘವಾಗಿವೆ. 1968ರಲ್ಲಿ ಇವರ ‘ಬಸವರತ್ನಾಕರ’ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1983ರಲ್ಲಿ ಕರ್ನಾಟಕ ರಾಜ್ಯದ ರಾಜ್ಯ ಪ್ರಶಸ್ತಿ, 1966ರಲ್ಲಿ ಸಂಶೋಧಕರಿಗಾಗಿ ಇರುವ ಚಿದಾನಂದ ಪ್ರಶಸ್ತಿಗಳು  ಶಾಸ್ತ್ರಿಗಳಿಗೆ ಸಂದ ಪ್ರಮುಖ ಪ್ರಶಸ್ತಿಗಳಾಗಿವೆ.  ಅಕ್ಟೋಬರ್ 24, 1997ರ ವರ್ಷದಲ್ಲಿ  ಮಾಗಳ ಗ್ರಾಮದಲ್ಲಿ ನಿಧನರಾದರು.

1918: ಪ್ರಾಧ್ಯಾಪಕ, ಸಾಹಿತಿ  ಪ್ರೊ. ಜಿ. ವರದರಾಜರಾವ್ ಅವರು ಬೆಂಗಳೂರಿನಲ್ಲಿ ಜನಿಸಿದರು.  ‘ಕುಮಾರ ರಾಮನ ಸಾಂಗತ್ಯಗಳು’ ಜಿ. ವರದರಾಜರಾಯರಿಗೆ ಡಾಕ್ಟರೇಟ್‌ ತಂದು ಕೊಟ್ಟ ಮಹಾ ಪ್ರಬಂಧ.  ಹರಿದಾಸ ಸಾಹಿತ್ಯದಲ್ಲಿ ಅಪಾರ ಸಾಹಿತ್ಯ ಕೃಷಿ ನಡೆಸಿರುವ  ಇವರ  ‘ಓಬವ್ವ’ ೩೦೦ ಸಾಲುಗಳ ಮಿತಿಯ ಕಥನ ಕವನ ಪ್ರಸಂಗಕ್ಕೆ  ಬಿ.ಎಂ.ಶ್ರೀಯವರ ರಜತ ಮಹೋತ್ಸವ ಚಿನ್ನದ ಪದಕ ಸಂದಿತ್ತು.  ನವೆಂಬರ್ 13, 1987ರಲ್ಲಿ ನಿಧನರಾದರು.

1921: ಪ್ರಸಿದ್ಧ ಹಿಂದೀ ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ಚಿತ್ರಕಥೆಗಾರ ಚೇತನ್ ಆನಂದ್,  ಈಗಿನ ಪಾಕಿಸ್ತಾನದ ಲಾಹೋರಿನಲ್ಲಿ ಜನಿಸಿದರು.  1946ರ ವರ್ಷದಲ್ಲಿ ಇವರ ಪ್ರಥಮ ಚಿತ್ರ ‘ನೀಚಾ ನಗರ್’ ಕೇನ್ಸ್ ಚಲನಚಿತ್ರೋತ್ಸವದಲ್ಲಿ “ಪಾಲ್ಮೆ ಡಿ’ಓರ್” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.  1949ರಲ್ಲಿ ಇವರು ತಮ್ಮ ಕಿರಿಯ ಸಹೋದರ ಪ್ರಖ್ಯಾತ ನಟ ದೇವಾನಂದ್ ಅವರ ಜೊತೆಗೂಡಿ ನವಕೇತನ್ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಅವರು ತಮ್ಮದೇ ಆದ ಹಿಮಾಲಯನ್ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿದರು.   17 ಚಲನಚಿತ್ರಗಳು ಮತ್ತು ರಾಷ್ಟ್ರೀಯ ದೂರದರ್ಶನದಲ್ಲಿ ಜನಪ್ರಿಯಗೊಂಡ  ‘ಪರಮ ವೀರ ಚಕ್ರ’ ಎಂಬ ಯೋಧರ ಸಾಹಸದ ಕಥೆಗಳನ್ನು ಪ್ರಸ್ತುತಪಡಿಸಿದ್ದರು. ಕೇನ್ಸ್ ಪ್ರಶಸ್ತಿಯೇ ಅಲ್ಲದೆ 1965ರ ವರ್ಷದಲ್ಲಿ ಅವರ ‘ಹಕೀಕತ್’ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡನೇ ಶ್ರೇಷ್ಠ ಚಿತ್ರ ಪ್ರಶಸ್ತಿ, ‘ಕುದ್ರತ್’ ಚಿತ್ರದ ಉತ್ತಮ ಚಿತ್ರಕತೆಗೆ ಫಿಲಂಫೇರ್ ಪ್ರಶಸ್ತಿಗಳೂ ಸಂದಿದ್ದವು.  ಜುಲೈ 6, 1997ರಲ್ಲಿ ನಿಧನರಾದರು.

1952: ಪ್ರಸಿದ್ಧ ನಾಟ್ಯ ಕಲಾವಿದೆ, ನಾಟ್ಯಗುರು ವನಮಾಲ ಕುಲಕರ್ಣಿ ಅವರು ಬಳ್ಳಾರಿಯಲ್ಲಿ ಜನಿಸಿದರು. ನೂರಾರು ಶಿಷ್ಯರನ್ನು ತಯಾರು ಮಾಡಿರುವುದರ ಜೊತೆಗೆ  ತಮ್ಮ ನೂರಾರು ನೃತ್ಯ ಪ್ರದರ್ಶನಗಳಿಂದ ಪ್ರಖ್ಯಾತರಾಗಿರುವ ವನಮಾಲ ಕುಲಕರ್ಣಿ ಅವರಿಗೆ  ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

2002: ಭಾರತೀಯ ಬಾಹ್ಯಾಕಾಶ ಯುಗದಲ್ಲಿ, ಫ್ಲೂಯಿಡ್ ಡೈನಾಮಿಕ್ಸ್ ಸಂಶೋಧನೆಯ ಪಿತಾಮಹರೆಂದು ಪ್ರಖ್ಯಾತರಾಗಿರುವ ಡಾ.  ಸತೀಶ್ ಧವನ್ ಅವರು ನಿಧನರಾದರು.  ಭಾರತೀಯ ಸ್ಪೇಸ್ ಕಮಿಷನ್ನಿನ ಅಧ್ಯಕ್ಷರಾಗಿ ಮತ್ತು ಭಾರತೀಯ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಗಳಾಗಿ ಅಧಿಕಾರ ನಿರ್ವಹಿಸಿದ ಸತೀಶ್ ಧವನ್ ತಮ್ಮ ನಿರ್ದೇಶನದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಪ್ರತಿಮ ಮುನ್ನಡೆ ಒದಗಿಸಿಕೊಟ್ಟರು. ಅವರ ಗೌರವಾರ್ಥ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರವನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವೆಂದು ಹೆಸರಿಸಲಾಗಿದೆ.  ಸತೀಶ್ ಧವನ್ನರಿಗೆ ಭಾರತದ ಪದ್ಮಭೂಷಣ ಪ್ರಶಸ್ತಿ, ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿಗಳಲ್ಲದೆ, ಭಾರತೀಯ ವಿಜ್ಞಾನ ಮಂದಿರದ ಪ್ರತಿಷ್ಟಿತ ಅಲ್ಯುಮ್ನಸ್ ಗೌರವ, ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಲ್ಯುಮ್ನಿ ಗೌರವ ಮುಂತಾದ ಅನೇಕ ಅಂತರರಾಷ್ಟ್ರೀಯ ಮಟ್ಟದ ಗೌರವಗಳು ಅವರಿಗೆ ಸಂದಿದ್ದವು.