Categories
e-ದಿನ

ಜನವರಿ-04

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 46: ಜೂಲಿಯಸ್‌ ಸೀಸರನ ವಿಜಯ :ಜೂಲಿಯಸ್ ಸೀಸರನು ಟೈಟಸ್ ಲೇಬಿನಸನನ್ನು ರುಸ್ಪಿನ್  ಕದನದಲ್ಲಿ  ಸೋಲಿಸಿದನು.

1847: ಸಾಮ್ಯುಯಲ್ ಕೊಲ್ಟನು ತನ್ನ ಪ್ರಥಮ ರಿವಾಲ್ವರ್ ಪಿಸ್ತೂಲನ್ನು ಅಮೆರಿಕ ಸರ್ಕಾರಕ್ಕೆ  ಮಾರಾಟ ಮಾಡಿದನು.

1853: ಅಪಹರಣಕ್ಕೊಳಗಾಗಿ ಜೀತದಾಳಾಗಿ ಮಾರಾಟಗೊಂಡಿದ್ದ ಸೋಲೋಮನ್ ನಾರ್ಥಪ್ ತನ್ನ ಸ್ವಾತಂತ್ರ್ಯವನ್ನು ಮರಳಿ ಗಳಿಸಿಕೊಂಡನು.  ಮುಂದೆ ಆತನ ನಿಜಜೀವನ ಸ್ಮೃತಿಯಾದ  ‘ಟ್ವೆಲ್ವ್ ಇಯರ್ಸ್ ಎ ಸ್ಲೇವ್’ ಬಹು  ಮಾರಾಟಗೊಂಡ ಕೃತಿ ಎನಿಸಿತು.

1865: ಅಂತರರಾಷ್ಟ್ರೀಯ ಪ್ರಸಿದ್ಧ  ಷೇರು ವಿನಿಮಯ ಕೇಂದ್ರವಾದ ‘ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೆಂಜ್’ ತನ್ನ ಪ್ರಥಮ ಸ್ವಂತ ಕೇಂದ್ರ ಕಚೇರಿಯನ್ನು ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟ್ ಬಳಿಯಲ್ಲಿ ಸ್ಥಾಪಿಸಿತು.

1903: ಕೋನಿ ಐಲ್ಯಾಂಡಿನ ಲೂನಾ ಪಾರ್ಕ್ ಮಾಲೀಕರು ಟಾಪ್ಸಿ  ಎಂಬ ಆನೆಯನ್ನು ವಿಷವುಣಿಸಿ  ವಿದ್ಯುತ್  ಸ್ಪರ್ಶಕ್ಕೀಡು ಮಾಡಿ ಕೊಂದುಹಾಕಿದರು.  ಎಡಿಸನ್ ಚಿತ್ರ ಸಂಸ್ಥೆಯು ‘ಎಲೆಕ್ಟ್ರೋಕ್ಯೂಟಿಂಗ್ ಆಫ್ ಎಲಿಫೆಂಟ್’ ಎಂಬ ಹೆಸರಿನಲ್ಲಿ ಟಾಪ್ಸಿಯ ಕೊಲ್ಲುವಿಕೆಯನ್ನು ಚಿತ್ರೀಕರಿಸಿತು.

1912: ಬ್ರಿಟಿಷ್ ಸಾಮ್ರಾಜ್ಯ ಆಳ್ವಿಕೆಯ ಪ್ರದೇಶಗಳಲ್ಲಿ ರಾಯಲ್ ಚಾರ್ಟರ್ ಆದೇಶದ ಮೂಲಕ ‘ದಿ ಸ್ಕೌಟ್ ಅಸೋಸಿಯೇಷನ್’ ಸಂಘಟನೆಗೆ ಚಾಲನೆ ನೀಡಲಾಯಿತು.

1948: ಬರ್ಮಾ (ಈಗಿನ ಮಯನ್ಮಾರ್) ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಗಳಿಸಿಕೊಂಡಿತು.

1958: ಕೆಲಸ ಮುಗಿಸಿ ಧರೆಗೆ ಬಿದ್ದ ಸ್ಪುಟ್ನಿಕ್: ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಕೃತಕ ಉಪಗ್ರಹವಾದ ರಷ್ಯದ ‘ಸ್ಪುಟ್ನಿಕ್’  92 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಉರಿದು ಬಿತ್ತು.

1959: ‘ಲೂನಾ 1’ ಚಂದ್ರನ ಆವರಣವನ್ನು ತಲುಪಿದ ಮೊದಲ ಗಗನನೌಕೆ ಎನಿಸಿತು.

1972: ರೋಸ್ ಹೀಲ್ಬ್ರಾನ್ ಅವರು ಇಂಗ್ಲೆಂಡ್ ಮತ್ತು ವೇಲ್ಸಿನ  ಕೇಂದ್ರ ಕ್ರಿಮಿನಲ್ ನ್ಯಾಯಾಲಯವಾದ ‘ಓಲ್ಡ್ ಬೆಯ್ಲಿ’ಯಲ್ಲಿ ಆಸೀನರಾದ ಪ್ರಥಮ ಮಹಿಳಾ ನ್ಯಾಯಾಧೀಶರಾದರು.

2001: ಭಾರತದ ಹಗುರ ಯುದ್ಧ ವಿಮಾನವು (ಟಿ.ಡಿ 1) ಬೆಂಗಳೂರಿನಲ್ಲಿ ತನ್ನ ಚೊಚ್ಚಲ ಹಾರಾಟ ನಡೆಸಿತು. ಇದರೊಂದಿಗೆ ಸ್ವಂತ ಸೂಪರ್ ಸಾನಿಕ್ ವಿಮಾನವನ್ನು ವಿನ್ಯಾಸಗೊಳಿಸಿದ ವಿಶೇಷ ರಾಷ್ಟ್ರಗಳ ಕೂಟಕ್ಕೆ ಭಾರತವೂ ಸೇರ್ಪಡೆಗೊಂಡಿತು.

2004: ‘ನಾಸಾ’ದ ಗಗನನೌಕೆ ‘ಸ್ಪಿರಿಟ್’ ಯಶಸ್ವಿಯಾಗಿ ಮಂಗಳಗ್ರಹದ ಮೇಲಿಳಿಯಿತು. 2009ರಲ್ಲಿ ಈ ನೌಕೆ ಮಂಗಳನ ಸಡಿಲ ಮಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿತಾದರೂ 2010 ಮಾರ್ಚ್ ವರೆಗೆ ಹಲವು ಮಹತ್ವಪೂರ್ಣ ದಾಖಲೆಗಳನ್ನು ಕಳುಹಿಸಿಕೊಟ್ಟಿತ್ತು. ತಾನು ಮೊದಲು ಇಳಿದತಾಣದಿಂದ  8 ಕಿಮೀ ಪ್ರಯಾಣಿಸಿದ್ದ ಸ್ಪಿರಿಟ್ ಆ ಪ್ರದೇಶದ ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟಿತ್ತು.

2007: ಕಾರವಾರದ ಐ ಎನ್ ಎಸ್ ನೌಕಾನೆಲೆಯಲ್ಲಿ ‘ಐ ಎನ್ ಎಸ್ ಶಾರ್ದೂಲ’ ಎಂಬ ಅಪ್ಪಟ ಭಾರತೀಯ ತಾಂತ್ರಿಕತೆಯಲ್ಲಿ ನಿರ್ಮಾಣವಾದ   ಪ್ರಥಮ ಹಡಗನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು  ರಾಷ್ಟ್ರಕ್ಕೆ ಸಮರ್ಪಿಸಿದರು. ಯುದ್ಧ ಸಮಯ ಮಾತ್ರವೇ ಅಲ್ಲದೆ, ಚಂಡಮಾರುತ, ಸುನಾಮಿ, ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಜೀವಗಳ ರಕ್ಷಣೆಗಾಗಿ ಬಳಸಬಹುದಾದಂತಹ  ಸಾಮರ್ಥ್ಯವನ್ನು ಈ ನೌಕೆ  ಮೈಗೂಡಿಸಿಕೊಂಡಿದೆ.

2008: ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಸ್ವಿಟ್ಜರ್ಲೆಂಡಿನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರ ಮೇಲೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ (ಐಟಿಎಫ್) ಎರಡು ವರ್ಷಗಳ ನಿಷೇಧ ಹೇರಿತು. ಅವರು  2007  ವರ್ಷದ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ ನಿಷೇಧಿತ ಕೊಕೇನ್ ಸೇವಿಸಿ ಸಿಕ್ಕಿ ಬಿದ್ದಿದ್ದರು.  ಮುಂದೆ 2013ರ ವರ್ಷದಲ್ಲಿ ಪುನಃ ಟೆನಿಸ್ ಅಂಕಣಕ್ಕೆ ಹಿಂದಿರುಗಿದ ಹಿಂಗಿಸ್ ಅವರು ಭಾರತದ ಸಾನಿಯಾ ಮಿರ್ಜಾ ಅವರ ಜೊತೆಗೂಡಿ 3  ಗ್ರಾಂಡ್ ಸ್ಲಾಮ್ ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನೂ,   ಲಿಯಾಂಡರ್ ಪೇಸ್ ಅವರ ಜೊತೆಗೂಡಿ ನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನೂ ಒಳಗೊಂಡ ಹಲವಾರು ಮಹತ್ವದ ಸಾಧನೆಗಳನ್ನೂ ಮಾಡುತ್ತಾ ಮುಂದುವರೆದಿದ್ದಾರೆ

2008: ಖ್ಯಾತ ಪರಿಸರವಾದಿ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಉಲ್ಲಾಸ್ ಕಾರಂತ್ ಅವರಿಗೆ  ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ‘ಫೆಲೊ’ ಗೌರವ ಸಂದಿತು.

2008: 2007-08ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ 7895 ಹುದ್ದೆಗಳ ಪೈಕಿ ಎಲ್ಲ ಜಿಲ್ಲೆಗಳಲ್ಲಿ ಶೇ1 ಮೀಸಲಾತಿಯಂತೆ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. 2007ರ ಜುಲೈ 30ರ ಅಧಿಸೂಚನೆಯಂತೆ ಅಂಗವಿಕಲ ಅಧಿನಿಯಮದ ಪ್ರಕಾರ ಶಿಕ್ಷಕರ ಹುದ್ದೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಬೇಕು. ಈ ಮೀಸಲಾತಿಯಲ್ಲಿ ಶೇ 1ರಷ್ಟನ್ನು ಅಂಧರಿಗೆ ಇಡಬೇಕು  ಎಂಬ ನಿಯಮವಿದೆ.

ಪ್ರಮುಖಜನನ/ಮರಣ:

1642: ಭೌತ ವಿಜ್ಞಾನಿ ಐಸಾಕ್‌ ನ್ಯೂಟನ್‌ ಜನನ

1809: ಅಂಧರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸಿದ ‘ಬ್ರೈಲ್’ ವ್ಯವಸ್ಥೆಯ  ಹರಿಕಾರ, ಫ್ರೆಂಚ್ ಶಿಕ್ಷಣತಜ್ಞ ಲೂಯಿ ಬ್ರೈಲ್ ಅವರು ಜನವರಿ 4, 1809ರ ವರ್ಷದಲ್ಲಿ ಫ್ರಾನ್ಸಿನ  ಕೋಪುವ್ ರೇ ಎಂಬಲ್ಲಿ ಜನಿಸಿದರು. ಲೂಯಿ ಬ್ರೈಲ್‌ ಜನಿಸಿದ ಮೂರು ವರ್ಷ  ನಂತರ ಆಕಸ್ಮಿಕವಾಗಿ ಅವರ ಕಣ್ಣಿಗೆ ಕಬ್ಬಿಣದ ದಬ್ಬಳ ತಾಗಿ ಒಂದು ಕಣ್ಣು ಕಳೆದು ಹೋಯ್ತು.  ಮುಂದೆ ಅದು ಉಂಟುಮಾಡಿದ  ಅಂಟುರೋಗದಿಂದ ಎರಡನೇ ಕಣ್ಣೂ ಶಕ್ತಿ ಹೀನವಾಯ್ತು.  ತನ್ನ ದೃಷ್ಟಿಹೀನತೆಯಲ್ಲೇ  ಕ್ರಿಯಾಶೀಲನಾಗಿ ಬದುಕುವುದನ್ನು ಲೂಯಿ ಬ್ರೈಲ್ ಅಭ್ಯಾಸ ಮಾಡಿಕೊಂಡರು.  ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ ನೀಡಿದ ವಿದ್ಯಾರ್ಥಿ ದೆಸೆಯಿಂದ  ಶಿಕ್ಷಣದಲ್ಲಿ ಅವರು  ಉತ್ತಮವಾದ ಸಾಧನೆ ಮಾಡುತ್ತಾ ಬಂದರು.  ವಿದ್ಯಾರ್ಥಿಯಾಗಿರುವಾಗಲೇ ಕಣ್ಣಿಲ್ಲದವರು ಸಮರ್ಥವಾಗಿ ಓದು ಬರೆಯುವ ವ್ಯವಸ್ಥೆ ನಿರ್ಮಿಸುವತ್ತ ಅವರು  ತಮ್ಮ ಪ್ರಯತ್ನಗಳನ್ನು ಪ್ರಾರಂಭಿಸಿದರು.  ಈ ಹಾದಿಯಲ್ಲಿ ಇವರನ್ನು ಚಾರ್ಲ್ಸ್ ಬಾರ್ಬಿಯರ್ ಅವರು ಸೈನ್ಯಕ್ಕೆ ಉಪಯೋಗಿಸಲು ಸೃಷ್ಟಿಸಿದ್ದ  ಸೂಚ್ಯಬರಹ ಮಾದರಿ (ಕ್ರಿಪ್ಟೋಗ್ರಫಿ) ಪ್ರೇರೇಪಿಸಿತು. ಈ ಪ್ರೇರಣೆಯಿಂದ ಅಂಧರಿಗೆ ಓದಿ ಬರೆಯಲು ಸಹಾಯಕವಾಗುವ ತಮ್ಮದೇ ಆದ ವ್ಯವಸ್ಥೆಯನ್ನೇ ಲೂಯಿ ಬ್ರೈಲ್ ಹುಟ್ಟುಹಾಕಿದರು.  ಈ ವ್ಯವಸ್ಥೆಯನ್ನು 1824ರ ವರ್ಷದಲ್ಲಿ ತಜ್ಞರ ಮುಂದೆ ಪ್ರಸ್ತುತಪಡಿಸಿದರು.  ಪ್ರಾರಂಭದಲ್ಲಿ  ಶಿಕ್ಷಕರಾಗಿ ಮತ್ತು ಸಂಗೀತಗಾರರಾಗಿ ತಮ್ಮ ಬದುಕನ್ನು ರೂಪಿಸ ಹೊರಟಿದ್ದ  ಲೂಯಿ ಬ್ರೈಲ್ ಮುಂದೆ ತಮ್ಮ ಬಹುತೇಕ ಜೀವನವನ್ನು ತಾವು ನಿರ್ಮಿಸಿದ ವ್ಯವಸ್ಥೆಯ  ಉನ್ನತೀಕರಣ ಮತ್ತು ಬಳಕೆಗೆ ತರುವ ಕಾರ್ಯಕ್ಕೆ ವಿನಿಯೋಗಿಸಿದರು.   ಲೂಯಿ ಬ್ರೈಲ್ ಜನವರಿ 6, 1852ರ ವರ್ಷದಲ್ಲಿ ಪ್ಯಾರಿಸ್ ನಗರದಲ್ಲಿ ನಿಧನರಾದರು.  ಅವರು ನಿಧನಾನಂತರದ ಹಲವು ವರ್ಷಗಳು ಕಳೆದರೂ ಬ್ರೈಲ್ ವ್ಯವಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಉಪಯೋಗಗೊಂಡಿರಲಿಲ್ಲ.  ಕಾಲಕ್ರಮೇಣದಲ್ಲಿ ವಿಶ್ವದಾದ್ಯಂತ  ಬಹುತೇಕ ಬಾಷೆಗಳವರು  ಇದನ್ನು  ಕ್ರಾಂತಿಕಾರಕ  ಸಂಶೋಧನೆಯಾಗಿ ಮನಗಂಡು, ಇದರ ಉಪಯೋಗವನ್ನು  ಪಡೆಯುತ್ತಿದ್ದಾರೆ.

1889: ಸರ್ವೋಚ್ಚನ್ಯಾಯಾಲಯದ  ಮುಖ್ಯ ನ್ಯಾಯಾಧೀಶರ ಸ್ಥಾನವನ್ನು ಅಲಂಕರಿಸಿದ ಎರಡನೇ ಮಹನೀಯರಾದ   ಕಾನೂನು ತಜ್ಞ ಮತ್ತು ಸಂಸ್ಕೃತ ವಿದ್ವಾಂಸರಾದ ಎಂ. ಪತಂಜಲ ಶಾಸ್ತ್ರಿ ಅವರು ಈಗಿನ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಗೆ ಸೇರಿರುವ ಮದನಕೊಲ್ಲತ್ತೂರ್ ಎಂಬಲ್ಲಿ ಜನಿಸಿದರು.  ನವೆಂಬರ್ 1951ರಿಂದ ಜನವರಿ 1954ರ ಅವಧಿಯಲ್ಲಿ ಸರ್ವೋಚ್ಚನ್ಯಾಯಾಲಯದ  ಮುಖ್ಯ ನ್ಯಾಯಾಧೀಶರಾಗಿದ್ದ ಶಾಸ್ತ್ರಿಗಳು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ವಿದ್ವತ್ ಮಂಡಳಿಯ ಸದಸ್ಯರಾಗಿಯೂ, ತಿರುಪತಿಯ ಕೇಂದ್ರೀಯ ಸಂಸ್ಕೃತ ವಿದ್ಯಾಲಯದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸದಸ್ಯರಾಗಿದ್ದರಲ್ಲದೆ, ಮದ್ರಾಸಿನ ಲೆಜೆಸ್ಲೇಟೀವ್ ಕೌನ್ಸಿಲ್ ಸದಸ್ಯರೂ ಆಗಿದ್ದರು.  ದೆಹಲಿ ವಿಶ್ವವಿದ್ಯಾಲಯದ ಗೌರವ ಕುಲಪತಿಗಳ ಸ್ಥಾನವನ್ನೂ ಅವರು ಅಲಂಕರಿಸಿದ್ದರು.  ಮಾರ್ಚ್ 16, 1963ರಲ್ಲಿ ನಿಧನರಾದರು.

1890: ಪ್ರಸಿದ್ಧ ಡಿಸಿ – ಕಾಮಿಕ್ಸ್ ಪ್ರಕಟಣಾ ಸಂಸ್ಥೆಯ ಸಂಸ್ಥಾಪಕ  ಮಾಲ್ಕಂ ವೀಲರ್ – ನಿಕಲ್ಸನ್ ಅವರು ಅಮೆರಿಕದ ಟೆನ್ನೆಸ್ಸೆ ಪ್ರದೇಶದ  ಗ್ರೀನ್ವಿಲ್ಲೇ ಎಂಬಲ್ಲಿ ಜನಿಸಿದರು.  ಪಲ್ಪ್ ಮ್ಯಾಗಜೈನ್ ಬರಹಗಾರರಾಗಿ ಪ್ರಸಿದ್ಧ ಅಮೆರಿಕನ್ ಕಾಮಿಕ್ ಬುಕ್ ಹುಟ್ಟಿಗೆ ಕಾರಣರಾಗಿ ಕಾಮಿಕ್ ಲೋಕದಲ್ಲಿ ಹಳೆಯ ಚಾರಿತ್ರಿಕ – ಪೌರಾಣಿಕ ವಿಷಯಗಳನ್ನು ಅವಲಂಬಿಸದೆ, ಹೊಸ ಹೊಸ  ರೀತಿಯ ಕಾಮಿಕ್ ಪಾತ್ರಗಳ ಲೋಕವನ್ನು ಸೃಷ್ಟಿಸಿದರು.  ಮುಂದೆ   ಪ್ರತಿಷ್ಟಿತ  ಡಿಸಿ – ಕಾಮಿಕ್ಸ್ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸಿದರು.  ಡಿಸಿ ಎಂಬುದು ‘ಡಿಟೆಕ್ಟಿವ್ ಕಾಮಿಕ್ಸ್’ ಎಂಬ  ಚಿಂತನೆಯಿಂದ ಮೂಡಿ,  ಪ್ರಸಿದ್ಧ  ಕಾಮಿಕ್ ಲೋಕದ ಸೃಷ್ಟಿಗಳಾದ ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ , ವಂಡರ್ ವುಮನ್, ಗ್ರೀನ್ ಲ್ಯಾಂಟರ್ನ್, ದಿ ಫ್ಲ್ಯಾಶ್  ಮುಂತಾದ ಅಸಂಖ್ಯಾತ ಸೃಷ್ಟಿಗಳು ಈ ಸಂಸ್ಥೆಯಿಂದ ಮೂಡಿಬಂದಿವೆ.  ಮಾಲ್ಕಂ ವೀಲರ್ – ನಿಕಲ್ಸನ್ ಅವರು 1965ರ ವರ್ಷದಲ್ಲಿ ನಿಧನರಾದರು

1896 : ಕನ್ನಡದ ಖ್ಯಾತ ಸಾಹಿತಿ ಶಂಕರ ಬಾಳ ದೀಕ್ಷಿತ ಜೋಶಿ  (ಶಂ.ಬಾ. ಜೋಶಿ) ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು ಎಂಬಲ್ಲಿ ಜನಿಸಿದರು.  ಹಲವು ಪತ್ರಿಕೆಗಳಿಗೆ ಲೇಖನ, ಕರ್ಮವೀರದ ಸಂಪಾದಕತ್ವ ಮುಂತಾದ ಕೆಲಸಗಳನ್ನು ನಿರ್ವಹಿಸಿದರು.  ಕರ್ನಾಟಕ ಇತಿಹಾಸ, ಕನ್ನಡ ಭಾಷಾ ಶಾಸ್ತ್ರ, ಜಾನಪದ ಸಾಹಿತ್ಯ, ಧಾರ್ಮಿಕ ಗ್ರಂಥಗಳ ಜೊತೆಗೆ ಹಲವಾರು ಗ್ರಂಥಗಳ ಅನುವಾದವನ್ನೂ ನಿರ್ವಹಿಸಿದರು.  ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಕನ್ನಡದ ನೆಲೆ, ಕಂನುಡಿಯ ಹುಟ್ಟು, ಮಕ್ಕಳ ಒಡಪುಗಳು, ಸೌಂದರ್ಯ ವಿಚಾರ, ಸಾತತ್ಯ ಮತ್ತು ಸತ್ಯ, ಭಗವದ್ ಗೀತೆ, ಶಿವರಹಸ್ಯ, ಹಾಲುಮತ ದರ್ಶನ, ಋಗ್ವೇದ ಸಾರ- ನಾಗಪ್ರತಿಮಾ ವಿಚಾರ, ಬುಧನ ಜಾತಕ ಇತ್ಯಾದಿ ಕೃತಿಗಳನ್ನು ರಚಿಸಿದರು. 1981ರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಅವರಿಗೆ ಸಂದಿದ್ದವು.  ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.

1925: ಸ್ವಾತಂತ್ಯ್ರಹೋರಾಟಗಾರ, ಗಾಂಧಿವಾದಿ, ಪ್ರಕೃತಿ ಚಿಕಿತ್ಸಾ ಪರಿಣತ, ದಕ್ಷ ತಂತ್ರಜ್ಞ, ಸಮಾಜಸೇವಕ, ಪತ್ರಕರ್ತ, ಸಾಹಿತಿ  ಡಾ. ಹೊ. ಶ್ರೀನಿವಾಸಯ್ಯ ಅವರು ಬೆಂಗಳೂರಿನಲ್ಲಿ ಜನಿಸಿದರು.  ತಂತ್ರಜ್ಞರಾಗಿ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿದ್ದಲ್ಲದೆ ‘ಪ್ರಕೃತಿ ಜೀವನ ಟ್ರಸ್ಟ್’ ಆರಂಭಿಸಿ ಪ್ರಕೃತಿ ಚಿಕಿತ್ಸಾ ವಿಷಯದ ಬಗ್ಗೆ ವಿಫುಲ ಕಾರ್ಯಕೈಗೊಂಡರು.  ಆರೋಗ್ಯವೇ ಭಾಗ್ಯ, ಆರೋಗ್ಯಶಾಸ್ತ್ರ ಪರಿಚಯ, ಪ್ರಕೃತಿದತ್ತ ಆರೋಗ್ಯ, ಯೋಗ ನಿದ್ರೆ ಮುಂತಾದವು ಅವರ ಆರೋಗ್ಯ ಕುರಿತಾದ ಕೃತಿಗಳು.  ಮಕ್ಕಳಿಗಾಗಿ ‘ಕನ್ನಡದ ಕಣ್ವ ಬಿ.ಎಂ.ಶ್ರೀ’, ‘ಪ್ರಕೃತಿ ಚಿಕಿತ್ಸಾ ತಜ್ಞ ಲಕ್ಷ್ಮಣ ಶರ್ಮ’, ‘ಡಾ. ಎನ್‌.ಎಸ್‌. ಹರ್ಡಿಕರ್’ ಮುಂತಾದವು ಜೀವನ ಚರಿತ್ರೆಗಳು; ‘ಶ್ರೀಲಂಕಾ’, ‘ಸಿಂಹಳದಲ್ಲಿ ಶಶಿ’, ‘ಶಶಿಕಂಡಜರ್ಮನಿ’, ‘ನಾ ಕಂಡ ಜರ್ಮನಿ’, ‘ಜಯಶ್ರೀ ಕಂಡ ಜಗತ್ತು’ ಮುಂತಾದವು  ಪ್ರವಾಸ ಕೃತಿಗಳು.  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ, ಕರ್ನಾಟಕ ಸರಕಾರದ ಪತಂಜಲಿ ಸುವರ್ಣ ಪದಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಯೋಗ ಕೇಂದ್ರದಿಂದ ಯೋಗಶ್ರೀ ಪ್ರಶಸ್ತಿ, ದೆಹಲಿಯ ಪ್ರಕೃತಿ ಚಿಕಿತ್ಸಾ ಕೇಂದ್ರದಿಂದ ಗೌರವ ಡಾಕ್ಟರೇಟ್‌ ಮುಂತಾದ ಗೌರವಗಳು  ಅವರಿಗೆ ಸಂದಿವೆ.

1931: ಹಿಂದೀ ಚಲನಚಿತ್ರಗಳಲ್ಲಿ ತಾಯಿ ಪಾತ್ರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ಪ್ರಸಿದ್ಧರಾದ  ನಿರೂಪರಾಯ್ ಅವರು ‘ಕೋಕಿಲ ಕಿಶೋರಚಂದ್ರ ಬುಲ್ಸಾರ’ ಎಂಬ ಹೆಸರಿನಿಂದ ಗುಜರಾಥಿನ ವಲ್ಸಾದ್ ಎಂಬಲ್ಲಿ ಜನಿಸಿದರು. ಎಪ್ಪತ್ತರ ದಶಕದಲ್ಲಿ ಮುನಿಮ್ಜಿ, ಛಾಯಾ, ಶೆಹನಾಯ್ ಚಿತ್ರಗಳಲ್ಲಿನ ಶ್ರೇಷ್ಠ ಅಭಿನಯಕ್ಕಾಗಿ  ಫಿಲಂ ಫೇರ್ ಪ್ರಶಸ್ತಿ, ಬೆಂಗಾಲ್ ಚಿತ್ರ ವಿಮರ್ಶಕರ ಪ್ರಶಸ್ತಿ ಅಲ್ಲದೆ,   ಫಿಲಂ ಫೇರ್ ಜೀವಮಾನ ಪ್ರಶಸ್ತಿಗಳು ಅವರಿಗೆ ಸಂದಿವೆ.

1884: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದ್ರ ಸೇನ್ ಅವರು ತಮ್ಮ 45ನೇ ವಯಸ್ಸಿನಲ್ಲಿ ನಿಧನರಾದರು.

1960: ನೊಬೆಲ್ ವಿಜೇತ ಫ್ರೆಂಚ್ ಸಾಹಿತಿ ಆಲ್ಬರ್ಟ್ ಕಾಮು ಅವರು ಕಾರು ಅಪಘಾತದಲ್ಲಿ ನಿಧನರಾದರು.  ತಮ್ಮ ಬರಹಗಳಲ್ಲಿ ನಿರಾಕರಣ ವಾದವನ್ನು ವಿರೋಧಿಸುತ್ತಲೇ  ಬದುಕಿನಲ್ಲಿ ಸ್ವಾತಂತ್ರ್ಯದ ಕುರಿತಾಗಿ ಪ್ರತಿಪಾದಿಸಿ ಬರೆದ ಕಾಮು  ಕಾದಂಬರಿ, ಕಥೆ, ನಾಟಕ, ಚಿಂತನೆಗಳು, ಪ್ರಬಂಧಗಳು ಹೀಗೆ ವೈವಿಧ್ಯಮಯ ಎಲ್ಲ ರೀತಿಯ ಬರಹಗಳನ್ನೂ ಮೂಡಿಸಿದ್ದಾರೆ.

1965: ಟಿ. ಎಸ್. ಎಲಿಯೆಟ್ ಎಂದೇ ಖ್ಯಾತರಾದ ನೋಬಲ್ ಪ್ರಶಸ್ತಿ ವಿಜೇತ ಕವಿ, ನಾಟಕಕಾರ, ವಿಮರ್ಶಕ ಥಾಮಸ್ ಸ್ಟೀಯರ್ನ್ಸ್ ಲಂಡನ್ನಿನ ಕೆನ್ಸಿಂಗ್ಟನ್ ಎಂಬಲ್ಲಿ  ನಿಧನರಾದರು.  ಮೂಲತಃ ಅಮೆರಿಕದವರಾದ ಅವರು ನಂತರದಲ್ಲಿ ಇಂಗ್ಲೆಂಡಿನಲ್ಲಿ ನೆಲೆಸಿದರು. 1915ರಲ್ಲಿ ಅವರು ರಚಿಸಿದ  ‘ದಿ ಲವ್ ಸಾಂಗ್ ಆಫ್ ಜೆ. ಆಲ್ಫ್ರೆಡ್ ಪ್ರುಫ್ರಾಕ್’ ಎಂಬ ಕವಿತೆ ನವ್ಯತೆಯ ಮಾಸ್ಟರ್ ಪೀಸ್ ಎನಿಸಿ ಪ್ರಖ್ಯಾತಗೊಂಡಿತು.  ಮುಂದೆ ದಿ ವೆಸ್ಟ್ ಲ್ಯಾಂಡ್, ದಿ ಹಾಲೋ ಮೆನ್, ಆಶ್ ವೆಡ್ನೆಸ್ಡೇ, ಫೋರ್ ಕ್ವಾರ್ಟೆಟ್ಸ್  ಮುಂತಾದ ಅನೇಕ ಪ್ರಖ್ಯಾತ ಕವಿತೆಗಳೂ, ಪ್ರಸಿದ್ಧ ನಾಟಕವಾದ ‘ಮರ್ಡರ್ ಇನ್ ಕ್ಯಾಥೆಡ್ರಲ್’ ಸೇರಿದಂತೆ 7 ನಾಟಕಗಳೂ ಪ್ರಕಟಗೊಂಡವು.    ಆಧುನಿಕ  ಕಾವ್ಯಕ್ಕೆ ಅವರು ನೀಡಿದ ಕೊಡುಗೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು

1994: ಭಾರತೀಯ ಚಲನಚಿತ್ರಗಳಲ್ಲಿ ಪ್ರಖ್ಯಾತ ಗೀತೆಗಳ ಹೊಳೆಯನ್ನೇ ಹರಿಸಿದ  ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರು ನಿಧನರಾದರು.

2016: ನ್ಯಾಯವಾದಿ, ರಾಜಕಾರಣಿ ಮತ್ತು ಸರ್ವೋಚ್ಚ ನ್ಯಾಯಾಲಯದ  38ನೇ ಮುಖ್ಯ ನ್ಯಾಯಾಧೀಶರಾಗಿದ್ದ ಎಸ್. ಹೆಚ್. ಕಪಾಡಿಯ ಅವರು ನಿಧನರಾದರು.