Categories
e-ದಿನ

ಜನವರಿ-05

ಪ್ರಮುಖ ದಿನಾಚರಣೆಗಳು:

ಹರ್ಬಿನ್ ಅಂತರರಾಷ್ಟ್ರೀಯ ಮಂಜುಗಡ್ಡೆ ಮತ್ತು ಮಂಜಿನ ಶಿಲ್ಪಗಳ ಹಬ್ಬ:

ಈ ಹಬ್ಬವು ಚೀನಾದ ಹರ್ಬಿನ್ ಎಂಬಲ್ಲಿ ಚಳಿಗಾಲದ ಸಮಯದಲ್ಲಿ ಆಚರಿಸುವ ಹಬ್ಬವಾಗಿ ಆರಂಭಗೊಂಡಿತು. ಹಿಮ ಪ್ರದೇಶಗಳಲ್ಲಿ ಮಂಜುಗಡ್ಡೆ ಮತ್ತು ಗಟ್ಟಿಯಾದ ಹಿಮ(ಸ್ನೋ)ದಿಂದ ಶಿಲ್ಪಗಳನ್ನು ಮಾಡಿ ಕಲಾತ್ಮಕವಾಗಿ ಆಚರಿಸುವ ಈ ಹಬ್ಬವು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡಾ ಖ್ಯಾತಿಗೊಂಡಿದ್ದು, ವಿಶ್ವದ ವಿವಿಧ ಚಳಿ ಪ್ರದೇಶಗಳ ಜನರೂ ಈ ಆಚರಣೆಯನ್ನು ಸಂಭ್ರಮಿಸತೊಡಗಿದ್ದಾರೆ.

ಜೋಮಾ ಶಿಂಜಿ:

ಜಪಾನಿನ ಕಾಮಕುರ ಪ್ರದೇಶಗಳಲ್ಲಿನ ಪ್ರಸಿದ್ಧ ಕಾಮಕುರ ಜನಪದೀಯ ಹಬ್ಬಗಳಲ್ಲೊಂದು. ದುಷ್ಟಶಕ್ತಿಗಳ ನಿಗ್ರಹದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ ಬಿಲ್ಲುಗಾರರು ಕೃತಕ ದುಷ್ಟಶಕ್ತಿಗಳ ಸಂಕೇತಗಳ ಮೇಲೆ ಬಾಣ ಬಿಡುತ್ತಾರೆ.

ಅಮೆರಿಕದ ರಾಷ್ಟ್ರೀಯ ಪಕ್ಷಿ ದಿನ:

ಈ ದಿನದಂದು ಅಮೆರಿಕದ ಪಕ್ಷಿ ಪ್ರೇಮಿಗಳು ಪಕ್ಷಿ ವೀಕ್ಷಣೆ, ಪಕ್ಷಿಗಳ ಕುರಿತ ಜ್ಞಾನಸಂಪಾದನೆ, ಪಕ್ಷಿಗಳ ಪ್ರೇಮಭಿವ್ಯಕ್ತಿಯ ಆಟಗಳು, ಪಕ್ಷಿಗಳನ್ನು ದತ್ತು ತೆಗೆದುಕೊಳ್ಳುವಿಕೆ ಮುಂತಾದ ಆಚರಣೆಗಳ ಮೂಲಕ ಸಂಭ್ರಮಿಸುತ್ತಾರೆ.

ಪ್ರಮುಖಘಟನಾವಳಿಗಳು:

1066: ಇಂಗ್ಲೆಂಡಿನ ಆಂಗ್ಲೋ ಸಾಕ್ಸರ್ ದೊರೆಗಳಲ್ಲಿ ಕೊನೆಯವನಾದ ಎಡ್ವರ್ಡ್ ದಿ ಕನ್ಫೆಸರ್ ಸಂತಾನವಿಲ್ಲದೆ ನಿಧನನಾದ. ಇದು ಫ್ರಾನ್ಸಿನ ಮೂಲದ ನಾರ್ಮನರು ಇಂಗ್ಲೆಂಡನ್ನು ಆಕ್ರಮಿಸುವುದಕ್ಕೆ ಎಡೆ ಮಾಡಿಕೊಟ್ಟಿತು.

1914: ಫೋರ್ಡ್ ಮೋಟಾರ್ ಸಂಸ್ಥೆಯು ಮೊಟ್ಟಮೊದಲ ಬಾರಿಗೆ 8 ಗಂಟೆಗಳ ಕಾರ್ಮಿಕ ದಿನ ಮತ್ತು ಕನಿಷ್ಠ ವೇತನ ಯೋಜನೆಯನ್ನು ಜಾರಿಗೆ ತಂದಿತು. ಇದರಿಂದ ಕಾರ್ಮಿಕನಿಗೆ ಅನಿರ್ದಿಷ್ಟ ಅವಧಿಗಳ ಕೆಲಸ ತಪ್ಪಿತಲ್ಲದೆ, ದಿನಕ್ಕೆ ಕಡೇಪಕ್ಷ 5 ಡಾಲರ್ ಸಂಭಳ ಖಚಿತವಾಗಿ ದೊರೆಯುವಂತಾಯ್ತು.

1919: ‘ನಾಝಿ’ ಪಕ್ಷಕ್ಕೆ ಪ್ರಾರಂಭ ಒದಗಿಸಿದ ಜರ್ಮನ್ ವರ್ಕರ್ಸ್ ಪಾರ್ಟಿ ಸ್ಥಾಪನೆಗೊಂಡಿತು. ಆಂಟನ್ ಡ್ರೆಕ್ಸಲರ್ ಎಂಬಾತ ಇದನ್ನು ಸ್ಥಾಪಿಸಿದ. ಇದರ ಪ್ರಾರಂಭಿಕ ವರ್ಷದಲ್ಲಿ ಒಂದು ಸಭೆಗೆ ಹಾಜರಾಗಿದ್ದ ಅಡಾಲ್ಫ್ ಹಿಟ್ಲರ್ ತನ್ನ ವಾಕ್ಚಾತುರ್ಯದಿಂದ ಈ ಸಂಘಟನೆಯ ಮೇಲೆ ಹಿಡಿತ ಸಾಧಿಸಿದ. 1920­-21ರ ಅವಧಿಯಲ್ಲಿ ಪಕ್ಷದ ಎಲ್ಲ ನಾಯಕರನ್ನೂ ಉಚ್ಛಾಟಿಸಿದ ಹಿಟ್ಲರ್ ಇದಕ್ಕೆ ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ ಎಂಬ ಹೊಸ ಹೆಸರನ್ನಿಟ್ಟ.

1925: ನೆಲ್ಲಿ ಟಯ್ಲೋ ರಾಸ್ ಅವರು ಅಮೆರಿಕದಲ್ಲಿನ ಪ್ರಥಮ ಮಹಿಳಾ ಗೌರ್ನರ್ ಎನಿಸಿದರು.

1933: ಸ್ಯಾನ್ ಫ್ರಾನ್ಸಿಸ್ಕೋದ ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣ ಆರಂಭಗೊಂಡಿತು. ಈ ಸೇತುವೆ 20ನೇ ಶತಮಾನದ ಎಂಜಿನಿಯರಿಂಗ್‌ ಅದ್ಭುತ ಎಂದೇ ಬಣ್ಣಿತಗೊಂಡಿದೆ. ಜಗತ್ತಿನ ಮೊದಲ ತೂಗು ಸೇತುವೆ ಎಂಬ ಖ್ಯಾತಿ ಗೋಲ್ಡನ್‌ ಗೇಟ್‌ ಬ್ರಿಡ್ಜ್ 1937ರಿಂದ ಸಂಚಾರಕ್ಕೆ ತೆರೆದಿದೆ. 1.7 ಮೈಲಿ ಉದ್ದದ ಈ ಸೇತುವೆ ಸ್ಯಾನ್‌ಫ್ರಾನ್ಸಿಸ್ಕೋ ಉತ್ತರ ತುದಿಯನ್ನು ಮರೀನ್‌ ಕೌಂಟಿಯ ಸಸಲಿಟೋಗೆ ಸೇರಿಸುತ್ತದೆ. ಸ್ಯಾನ್‌ಫ್ರಾಸ್ಸಿಸ್ಕೊ ಕೊಲ್ಲಿಯ ಮೇಲಿರುವ ಈ ತೂಗು ಸೇತುವೆ ಎರಡು ಗೋಪುರಗಳ ಆಧಾರದ ಮೇಲೆ ನಿಂತುಕೊಂಡಿದೆ. ಗೋಪುರದ ತುದಿಯಿಂದ ಇಳಿಬಿಡಲಾದ ಎರಡು ಉಕ್ಕಿನ ಕೇಬಲ್‌ಗ‌ಳು ಸೇತುವೆಯ ಭಾರವನ್ನು ತಡೆದುಕೊಳ್ಳುತ್ತದೆ. ಉಕ್ಕಿನ ಕೇಬಲ್‌ಗ‌ಳ ಒಳಗೆ ಸುಮಾರು 88 ಸಾವಿರ ಮೈಲಿ ಉದ್ದದ ವೈರ್‌ಗಳನ್ನು ಬಳಸಲಾಗಿದೆ. ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಗೋಪುರಗಳು ನೀರಿನಿಂದ 726 ಅಡಿ ಎತ್ತರವಾಗಿವೆ. ಈ ಎರಡು ಗೋಪುರಗಳ ಮಧ್ಯೆ 4200 ಅಡಿ ಅಂತರವಿದೆ. ಈ ಸೇತುವೆಯ ನಿರ್ಮಾಣಕ್ಕೆ 88 ಸಾವಿರ ಟನ್‌ ಉಕ್ಕು ಬಳಕೆಯಾಗಿದ್ದು ಸಿಮೆಂಟ್‌ ಕಾಂಕ್ರೀಟನ್ನೂ ಬಳಸಲಾಗಿದೆ. ಸೇತುವೆ ಒಟ್ಟು 887,000 ಟನ್‌ ಭಾರವಿದೆ. ಜೋಸೆಫ್ ಬೈರ್ಮನ್‌ ಸ್ಟ್ರಾಸ್‌ ಎಂಬಾತ ಸೇತುವೆ ನಿರ್ಮಾಣದ ಮುಖ್ಯ ಎಂಜಿನಿಯರ್‌ ಆಗಿದ್ದರು.

1950: ಸ್ವರ್ಡೋವಿಸ್ಕ್ ವಿಮಾನ ದುರಂತದಲ್ಲಿ ಸೋವಿಯತ್ ಒಕ್ಕೂಟದ ರಾಷ್ಟ್ರೀಯ ಐಸ್ ಹಾಕಿ ತಂಡದ ಎಲ್ಲ ಹನ್ನೊಂದು ಆಟಗಾರರೂ ಒಳಗೊಂಡಂತೆ 19 ಜನ ನಿಧನರಾದರು.

1970: ಚೀನಾದ ಯುನ್ನಾನ್ ಪ್ರಾಂತ್ಯದ ಟೊಂಗೈನಲ್ಲಿ ಉಂಟಾದ 7.1 ಪ್ರಮಾಣದ ಭೂಕಂಪದಲ್ಲಿ 10,000 ದಿಂದ 15,621 ಜನರು ಮೃತರಾಗಿ 26,783 ಜನರು ಗಾಯಗೊಂಡರು.

1972: ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಗಗನ ನೌಕೆಗಳ ನಿರ್ಮಾಣಕ್ಕೆ ಆದೇಶ ಹೊರಡಿಸಿದರು.

1993: ಕೆನಡಾದ ಎಂ.ವಿ. ಬ್ರಯೇರ್ ಎಂಬ ತೈಲ ನೌಕೆಯು ತನ್ನ ಚಾಲನಾ ಶಕ್ತಿಯನ್ನು ಕಳೆದುಕೊಂಡು ಸ್ಕಾಟ್ಲೆಂಡಿನ ಶೆಟ್ಲೆಂಡ್ ದ್ವೀಪದಲ್ಲಿ ಕೆಲ ಸಮಯ ಗಾಳಿಯ ರಭಸಕ್ಕೆ ತೇಲುತ್ತಿದ್ದು, ನಂತರದಲ್ಲಿ ತಾನು ಹೊತ್ತಿದ್ದ 85000 ಟನ್ ತೈಲ ಸೋರಿಕೆಯಾಗಿ ಬೆಂಕಿಗೆ ಸ್ಫೋಟಗೊಂಡಿತು.

2005: ಸೌರವ್ಯೂಹದಲ್ಲಿನ ಎರಡನೇ ದೊಡ್ಡ ಕುಬ್ಜ ಗ್ರಹವಾದ ಈರಿಸ್ ಅನ್ನು ಮೈಖೇಲ್ ಇ. ಬ್ರೌನ್, ಛಾಡ್ ಟ್ರುಜಿಲ್ಲೋ ಮತ್ತು ಡೇವಿಡ್ ಎಲ್. ರಬಿನೌವಿಟ್ಜ್ ಒಳಗೊಂಡ ತಂಡವು ಪತ್ತೆಹಚ್ಚಿತು. ಈ ವಿಜ್ಞಾನಿಗಳು ಅಕ್ಟೋಬರ್ 21, 2003ರಂದು ಕ್ಯಾಲಿಫೋರ್ನಿಯಾದ ಪಲೋಮಾರ್ ವೀಕ್ಷಣಾಲಯದಲ್ಲಿ ತೆಗೆದ ಚಿತ್ರಗಳನ್ನು ಉಪಯೋಗಿಸಿ ಇದನ್ನು ಸಾಧಿಸಿದರು.

2014: ಸ್ವದೇಶಿ ನಿರ್ಮಿತ ಭಾರತದ ಪ್ರಥಮ ಕ್ರಯೋಜೆನಿಕ್ ಎಂಜಿನ್ ಚಾಲಿತ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡಿತು. ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಜಿ ಸ್ಯಾಟ್ 14’ ಸಂವಹನ ಉಪಗ್ರಹ ಹೊತ್ತ ಜಿಎಸ್‌ಎಲ್‌ವಿ-ಡಿ5 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಯಲ್ಲಿ ಮಹತ್ವದ ಮೈಲುಗಲ್ಲೆನಿಸಿತು.

ಪ್ರಮುಖಜನನ/ಮರಣ:

1846: ಜರ್ಮನಿಯ ಪ್ರಸಿದ್ಧ ನೊಬೆಲ್ ಪ್ರಶಸ್ತಿ ವಿಜೇತ ತತ್ವಜ್ಞಾನಿ ಮತ್ತು ಲೇಖಕ ರುಡಾಲ್ಫ್ ಕ್ರಿಸ್ತೋಫ್ ಯೂಕೆನ್ ಅವರು ಜರ್ಮನಿಯ ಹ್ಯಾನೋವರ್ ಪ್ರದೇಶದ ಔರಿಚ್ ಎಂಬಲ್ಲಿ ಜನಿಸಿದರು.

1855: ಜಗತ್ಪ್ರಸಿದ್ಧ ಗಿಲ್ಲೆಟ್ ಕಂಪೆನಿಯನ್ನು ಹುಟ್ಟುಹಾಕಿದ ಅಮೆರಿಕದ ವ್ಯಾಪಾರಿ ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರು ವಿಸ್ಕಾನ್ಸಿನ್ ಪ್ರದೇಶದ ಫಾಂಡ್ ಡು ಲ್ಯಾಕ್ ಎಂಬಲ್ಲಿ ಜನಿಸಿದರು. ರೇಜರ್ ಮತ್ತು ಬ್ಲೇಡ್ ಬ್ಯುಸಿನೆಸ್ ಮಾಡೆಲ್ ಅನ್ನು ಸಂಶೋಧಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕಡಿಮೆ ತೂಕವುಳ್ಳ ಉಪಯೋಗಿಸಿ ಎಸೆಯಬಹುದಾದ ರೇಜರುಗಳನ್ನು ಗಿಲೆಟ್ ಮಾರುಕಟ್ಟೆಗೆ ತಂದು ಯಶಸ್ವಿಯಾದರು. 1932, ಜುಲೈ 9ರಂದು ನಿಧನರಾದರು.

1869: ‘ಗಳಗನಾಥ’ ಎಂಬ ಹೆಸರಿನಿಂದ ಪ್ರಖ್ಯಾತರಾದ ವೆಂಕಟೇಶ ತಿರಕೋ ಕುಲಕರ್ಣಿ ಅವರು ಧಾರವಾಡ ಜಿಲ್ಲೆಯ ಹಾವೇರಿ ತಾಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ಜನಿಸಿದರು. ಶಿಕ್ಷಕರಾಗಿ ಎರಡು ದಶಕಗಳು ಕೆಲಸ ಮಾಡಿ, ಪ್ರಸಿದ್ಧ ‘ಸದ್ಭೋಧ ಪತ್ರಿಕೆ’ ಎಂಬ ಮಾಸಪತ್ರಿಕೆ ಪ್ರಾರಂಭಿಸಿದರು. ಒಂದು ಶಾಲೆಯನ್ನೂ ನಿರ್ಮಿಸಿದ್ದರು. 1942, ಏಪ್ರಿಲ್ 22ರಂದು ನಿಧನರಾದ ಗಳಗನಾಥರು 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಚರಿತ್ರೆಗಳು ಹಾಗು 8 ಪ್ರಬಂಧಗಳನ್ನು ರಚಿಸಿದ್ದಾರೆ. ಆ ಕಾಲದ ಬಹುತೇಕ ಗಣ್ಯ ಬರಹಗಾರರು ಅವರನ್ನು ಗುರುಗಳೆಂಬ ಪೂಜ್ಯಭಾವದಿಂದ ಕಾಣುತ್ತಿದ್ದರು.

1893: ‘ಆಟೋಬಯಾಗ್ರಫಿ ಆಫ್ ಎ ಯೋಗಿ’ ಎಂಬ ಪ್ರಸಿದ್ಧ ಗ್ರಂಥರಚನೆಕಾರ, ಪಾಶ್ಚಿಮಾತ್ಯ ದೇಶಿರಿಗರಲ್ಲಿ ಧ್ಯಾನ ಮತ್ತು ಕ್ರಿಯಾ ಯೋಗವನ್ನು ಪ್ರಸಿದ್ಧಿ ಪಡಿಸಿದ ಪರಮಹಂಸ ಯೋಗಾನಂದ ಅವರು ಉತ್ತರಪ್ರದೇಶದ ಗೋರಕಪುರದಲ್ಲಿ ಜನಿಸಿದರು. ವಿಶ್ವದ ವಿವಿದೆಡೆಗಳಲ್ಲಿ ಧ್ಯಾನ ಬೋಧನಾ ಕೇಂದ್ರಗಳನ್ನು ಸ್ಥಾಪಿಸಿ ಬಹಳಷ್ಟು ಶಿಷ್ಯರನ್ನು ಹೊಂದಿದ್ದ ಅವರು 1952, ಮಾರ್ಚ್ 7ರಂದು ನಿಧನರಾದರು.

1895: ಪ್ರಸಿದ್ಧ ವಾಹನ ತಂತ್ರಜ್ಞ ಆಲ್ಬರ್ಟ್ ಮಸ್ಸಿಮಿನೋ ಅವರು ಇಟಲಿಯ ಟ್ಯುರಿನ್ ಎಂಬಲ್ಲಿ ಜನಿಸಿದರು. ಫಿಯೆಟ್, ಆಲ್ಫಾ ರೋಮಿಯೋ, ಸ್ಟೆಬಿಲಿಮೆಂಟಿ ಫೆರಿನೊ ಮುಂತಾದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ನಂತರದಲ್ಲಿ ಅವರು ಅವರು ಸ್ಕುಡೆರಿಯಾ ಫೆರಾರಿ, ಮಸೆರಾಟಿ ಮುಂತಾದ ಸಂಸ್ಥೆಗಳ ಪ್ರಸಿದ್ಧ ಕಾರುಗಳ ನಿರ್ಮಾಣದಲ್ಲಿ ಪ್ರಮುಖ ತಂತ್ರಜ್ಞರಾಗಿದ್ದರು. 1975ರ ವರ್ಷದಲ್ಲಿ ನಿಧನರಾದರು.

1917 : ಕನ್ನಡ ಸಾಹಿತ್ಯಲೋಕದ ಒಂದು ವಿಸ್ಮಯ ಎಂದು ಪ್ರಸಿದ್ಧರಾದ ಎಂ.ಕೆ. ಇಂದಿರಾ ಅವರು ತೀರ್ಥಹಳ್ಳಿಯಲ್ಲಿ ಜನಿಸಿದರು. ಕೇವಲ 2ನೇ ತರಗತಿ ಓದಿದರೂ, 48 ಕಾದಂಬರಿಗಳನ್ನೂ, 15 ಸಣ್ಣಕಥಾ ಸಂಕಲನಗಳನ್ನೂ ಮತ್ತು ಆತ್ಮಚರಿತ್ರೆಯನ್ನೂ ಬರೆದ ಅವರ ‘ತುಂಗಭದ್ರ’, ‘ಸದಾನಂದ’, ‘ನವರತ್ನ’, ‘ಫಣಿಯಮ್ಮ’ – ಈ ನಾಲ್ಕು ಕೃತಿಗಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವು. ಚಲನಚಿತ್ರವಾದ ‘ಫಣಿಯಮ್ಮ’ ರಾಷ್ಟ್ರ ಪ್ರಶಸ್ತಿ ಗಳಿಸಿತು. ‘ಗೆಜ್ಜೆಪೂಜೆ’ ಮತ್ತೊಂದು ಮಹತ್ವದ ಚಿತ್ರವಾಯಿತು. 1994, ಮಾರ್ಚ್ 15ರಂದು ನಿಧನರಾದರು. ತೇಜಸ್ವಿ ನಿರಂಜನ ಅವರು ಮೂಡಿಸಿದ ‘ಫಣಿಯಮ್ಮ’ ಕೃತಿಯ ಇಂಗ್ಲಿಷ್ ಅನುವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿತು.

1941: ಟೈಗರ್ ಪಟೌಡಿ ಎಂದೇ ಪ್ರಸಿದ್ಧರಾದ ಭಾರತೀಯ ಕ್ರಿಕೆಟ್ ಆಟಗಾರ ಮನ್ಸೂರ್ ಆಲಿ ಖಾನ್ ಪಟೌಡಿ ಭೋಪಾಲ್ನಲ್ಲಿ ಜನಿಸಿದರು. 21ನೇ ವಯಸ್ಸಿನಲ್ಲೇ ನಾಯಕತ್ವ ವಹಿಸಿ, ಭಾರತೀಯ ಕ್ರಿಕೆಟ್ಟಿನ ಅತ್ಯಂತ ಕಿರಿಯ ಕ್ಯಾಪ್ಟನ್ ಎಂಬ ದಾಖಲೆ ಅವರದ್ದಾಗಿದೆ. ನಾಯಕತ್ವ, ಬ್ಯಾಟಿಂಗ್ ಮತ್ತು ಕ್ಷೇತ್ರರಕ್ಷಣೆಗಳಲ್ಲಿ ಅವರು ದಕ್ಷರೆನಿಸಿದ್ದ ಅವರು 2011, ಸೆಪ್ಟೆಂಬರ್ 22 ರಂದು ನಿಧನರಾದರು. ರಾಜ ಮನೆತನಕ್ಕೆ ಸೇರಿದ್ದ ಇವರು 1952-71 ಅವಧಿಯಲ್ಲಿ ‘ನವಾಬ್ ಆಫ್ ಪಟೌಡಿ’ ಎನಿಸಿದ್ದರು.

1952:  ಭಾರತ ಮತ್ತು ಇಂಗ್ಲೆಂಡ್ ಎರಡೂ ಕ್ರಿಕೆಟ್ ತಂಡಗಳ ಪರವಾಗಿ ಆಡಿದ ಇಫ್ತಿಕರ್ ಆಲಿ ಪಟೌಡಿ ಅವರು ನವದೆಹಲಿಯಲ್ಲಿ ನಿಧನರಾದರು. ಪಟೌಡಿ ಮನೆತನದ 8ನೇ ನವಾಬರಾಗಿದ್ದ ಇವರು 1946ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನೂ ವಹಿಸಿದ್ದರು.

2006: ಟಿ.ಕೆ. ರಾವ್ ಎಂದೇ ಪತ್ರಿಕೆ ಹಾಗೂ ಕಲಾ ವಲಯದಲ್ಲಿ ಪರಿಚಿತರಾಗಿದ್ದ ಚಿತ್ರ ಕಲಾವಿದ ತಾಡ ಕೃಷ್ಣರಾವ್ ಬೆಂಗಳೂರಿನಲ್ಲಿ ನಿಧನರಾದರು. ಕನ್ನಡ ಪ್ರಭ, ಉದಯವಾಣಿ, ತರಂಗ, ತುಷಾರ, ಕರ್ಮವೀರ, ಕಸ್ತೂರಿ, ಸಂಯುಕ್ತ ಕರ್ನಾಟಕ, ಕಾಮಧೇನು ಮುಂತಾದ ಪತ್ರಿಕೆಗಳಲ್ಲಿ ಕಲಾವಿದರಾಗಿ ದುಡಿದಿದ್ದ ರಾವ್ ಬರಹಗಾರ ಮತ್ತು ರಂಗನಟರಾಗಿಯೂ ಸೇವೆ ಸಲ್ಲಿಸಿದ್ದರು. 1999ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರನ್ನು ಪ್ರಶಸ್ತಿ ನೀಡಿ ಗೌರವಿಸಿತ್ತು.

2006: ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ವಜ್ರಮುನಿ ಬೆಂಗಳೂರಿನಲ್ಲಿ ನಿಧನರಾದರು. ವೃತ್ತಿ ರಂಗಭೂಮಿ ಕಲಾವಿದರಾಗಿದ್ದ ಅವರು ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದರು. ಹಲವು ಚಿತ್ರಗಳ ನಿರ್ಮಾಪಕರೂ ಆಗಿದ್ದ ವಜ್ರಮುನಿ ಅವರಿಗೆ ಉತ್ತಮ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮತ್ತು ಉತ್ತಮ ಚಲನಚಿತ್ರ ಸಾಧಕರಿಗೆ ನೀಡುಲಾಗುತ್ತಿರುವ ಡಾ. ವಿಷ್ಣುವರ್ಧನ್ ಪ್ರಶಸ್ತಿಗಳು ಸಂದಿದ್ದವು.

2007: ತೆಹ್ರಿ ಅಧಿಪತ್ಯದ ಆರನೆಯ ಹಾಗೂ ಕೊನೆಯ ದೊರೆ ಮನವೇಂದ್ರ ಶಹಾ ನವದೆಹಲಿಯಲ್ಲಿ ನಿಧನರಾದರು. ಬದರಿನಾಥ ದೇವಾಲಯದ ಸಂರಕಕ್ಷಿಸಿದ್ದಕ್ಕಾಗಿ ‘ಬೊಳಂದ ಬದ್ರಿ’ ಎಂದೇ ಜನಪ್ರಿಯರಾಗಿದ್ದ ಶಹಾ ಅವರು ಗಢವಾಲ್ ಕ್ಷೇತ್ರದಿಂದ ಲೋಕಸಭೆಗೆ ಎಂಟು ಸಲ ಗೆದ್ದು ದಾಖಲೆ ನಿರ್ಮಿಸಿದ್ದರು. 1948ರಲ್ಲಿ ಗೃಹ ಸಚಿವ ವಲ್ಲಭ ಭಾಯಿ ಪಟೇಲ್ ಅವರು ಭಾರತದೊಂದಿಗೆ ವಿಲೀನಗೊಳ್ಳುವ ಒಪ್ಪಂದಕ್ಕೆ ಸಹಿ ಹಾಕುವಂತೆ ಕರೆ ಕಳುಹಿಸಿದಾಗ ವಿಲೀನ ಒಪ್ಪಂದಕ್ಕೆ ವಿಳಂಬವಿಲ್ಲದೆ ಸಹಿ ಹಾಕಿದ ಭಾರತೀಯ ದೊರೆಗಳಲ್ಲಿ ಶಹಾ ಮೊದಲ ಸಾಲಿನವರಾಗಿದ್ದರು.