Categories
e-ದಿನ

ಜನವರಿ-06

ಪ್ರಮುಖಘಟನಾವಳಿಗಳು:

1838: ಅಮೇರಿಕಾದ ಆಲ್ಫ್ರೆಡ್ ವೈಲ್ ಅವರು ಚುಕ್ಕೆ(.) ಮತ್ತು ಪುಟ್ಟ ಅಡ್ಡಗೆರೆ(-) ಸಂಜ್ಞೆಗಳನ್ನು ಬಳಸಿ ‘ಟೆಲಿಗ್ರಾಫ್’ ಎಂದು ಪ್ರಸಿದ್ಧವಾದ ತಂತಿ ಸಂದೇಶ ವ್ಯವಸ್ಥೆಯನ್ನು ನಿರೂಪಿಸಿದರು. ಇದು ಮುಂದೆ ಬಳಕೆಗೆ ಬಂದ ‘ಮೋರ್ಸ್ ಕೋಡ್’ ಸಂಜ್ಞೆಗಳಿಗೆ ಪೀಠಿಕೆಯಾಯ್ತು.

1839: ಕಳೆದ ಮುನ್ನೂರು ವರ್ಷಗಳಲ್ಲೇ ಅತ್ಯಂತ ಭೀಕರವಾದ ಚಂಡಮಾರುತವು ಐರ್ಲ್ಯಾಂಡ್ ದೇಶವನ್ನು ಅಪ್ಪಳಿಸಿ ಡಬ್ಲಿನ್ ನಗರದ ಶೇಕಡಾ ಇಪ್ಪತ್ತಕ್ಕೂ ಹೆಚ್ಚು ಜನವಸತಿ ನಾಶಗೊಂಡವು.

1907: ಶಿಶುವಿಹಾರ (ಮಾಂಟೆಸ್ಸರಿ) ವ್ಯವಸ್ಥೆಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದ ಮಾರಿಯಾ ಮಾಂಟೆಸ್ಸರಿ ಅವರು, ಕಾರ್ಮಿಕರ ಮಕ್ಕಳ ಪಾಲನೆಯನ್ನು ದಿನದ ವೇಳೆಯಲ್ಲಿ ನೋಡಿಕೊಳ್ಳುವ ಪ್ರಥಮ ಶಿಶುವಿಹಾರ ಮತ್ತು ಅಂಗನವಾಡಿ ಕೇಂದ್ರವನ್ನು ಇಟಲಿಯ ರೋಮ್ ನಗರದಲ್ಲಿ ಸ್ಥಾಪಿಸಿದರು.

1912: ಜರ್ಮನಿಯ ಜಿಯೋಫಿಸಿಸ್ಟ್ ಆಲ್ಫ್ರೆಡ್ ವೆಗೆನರ್ ಅವರು ಪ್ರಥಮ ಬಾರಿಗೆ ಕಾಂಟಿನೆಂಟಲ್ ಡ್ರಿಫ್ಟ್ ಸಿದ್ಧಾಂತವನ್ನು ನಿರೂಪಿಸಿದರು. ಭೂಮಿಯ ಮೇಲಿರುವ ವಿವಿಧ ಖಂಡಗಳ ಚಲನೆ ಒಂದಕ್ಕೊಂದು ಪೂರಕವಾಗಿರುವುದರಿಂದ ಅವು ಸಮುದ್ರದ ಮೇಲ್ದೆರೆಯಲ್ಲಿ (ocean bed) ತೇಲುತ್ತಿರುವಂತೆ ಭಾಸವಾಗುತ್ತದೆ ಎಂಬುದನ್ನು ಅವರು ತೋರಿಸಿಕೊಟ್ಟರು.

1929: ಮದರ್ (ಸಂತ) ತೆರೇಸಾ ಎಂದು ಪ್ರಖ್ಯಾತರಾದ ಅಲ್ಬೇನಿಯಾದ ಆಗ್ನೆಸೇ ಗೋನ್‌ಕ್ಸೆ ಬೋಜಕ್ಸಿಯು ಅವರು ಭಾರತದಲ್ಲಿ ಬಡತನ ಮತ್ತು ರೋಗಗಳಿಂದ ನೊಂದ ಜನರ ಸೇವೆ ಮಾಡುವ ಉದ್ದೇಶದಿಂದ ಕಲ್ಕಾತ್ತಾಗೆ ಆಗಮಿಸಿದರು.

1930: ಪ್ರಥಮ ಡೀಸೆಲ್ ಇಂಜಿನ್ ಚಾಲಿತ ವಾಹನವು ಅಮೇರಿಕಾದ ಇಂಡಿಯಾನಾಪೊಲಿಸ್ ನಗರದಿಂದ ನ್ಯೂಯಾರ್ಕಿನವರೆಗೆ ತನ್ನ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿತು.

1931: ಮಹಾನ್ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಅವರು ತಮ್ಮ ಸಂಶೋಧನೆಗಳ ಸ್ವಾಮ್ಯದ ಕೊನೆಯ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿದರು.

1941: ಅಮೇರಿಕಾದ ಅಧ್ಯಕ್ಷರಾದ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರು ಸ್ಟೇಟ್ ಆಫ್ ದಿ ಯೂನಿಯನ್ ವೇದಿಕೆಯಲ್ಲಿ ‘ಫೋರ್ ಫ್ರೀಡಮ್ಸ್’ ಭಾಷಣದಲ್ಲಿ ಮಾತನಾಡುವ ಸ್ವಾತಂತ್ರ್ಯ, ಪೂಜಿಸುವ ಸ್ವಾತಂತ್ರ್ಯ, ಬಯಕೆಗಳಿಂದ ಸ್ವಾತಂತ್ರ್ಯ ಮತ್ತು ಭಯದಿಂದ ಸ್ವಾತಂತ್ರ್ಯ ಎಂಬ ನಾಲ್ಕು ರೀತಿಯ ಸ್ವಾತಂತ್ರ್ಯಗಳನ್ನು ತಮ್ಮ ಐತಿಹಾಸಿಕ ಉಪನ್ಯಾಸದಲ್ಲಿ ಪ್ರಸ್ತಾಪಿಸಿದರು.

1947: ಪ್ಯಾನ್ ಅಮೇರಿಕನ್ ಏರ್ಲೈನ್ಸ್, ವಿಶ್ವದಾದ್ಯಂತ ಎಲ್ಲೆಡೆಯ ಪಯಣಕ್ಕೂ ಟಿಕೆಟ್ ವ್ಯವಸ್ಥೆ ಪ್ರಾರಂಭಿಸಿದ ಪ್ರಥಮ ವಿಮಾನಯಾನ ಸಂಸ್ಥೆ ಎನಿಸಿತು.

1947: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಭಾರತದ ವಿಭಜನೆಯನ್ನು 99-52 ಮತಗಳ ಅಂತರದಲ್ಲಿ ಅಂಗೀಕರಿಸಿತು.

1951: ಕೊರಿಯಾ ಯುದ್ಧದಲ್ಲಿ ಸುಮಾರು 1300 ದಕ್ಷಿಣ ಕೊರಿಯಾ ಕಮ್ಮ್ಯೂನಿಸಂ ಪರ ಸಹಾನುಭೂತಿ ಉಳ್ಳವರನ್ನು ನಿರ್ದಯವಾಗಿ ಕೊಲ್ಲಲಾಯಿತು. ಜಗತ್ತಿನ ಚರಿತ್ರೆಯಲ್ಲಿ ಗಂಘ್ವಾ ನರಮೇಧ ಎಂದೆನಿಸಿದೆ.

1989: 1984ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಹತ್ಯೆಗೈದ ಪ್ರಕರಣದಲ್ಲಿ ನೇರ ಆರೋಪಿಗಳಾಗಿದ್ದ ಸತ್ವಂತ್ ಸಿಂಗ್ ಮತ್ತು ಈ ಹತ್ಯೆ ಯೋಜನೆಯ ರೂವಾರಿಯಾಗಿದ್ದ ಕೇಹರ್ ಸಿಂಗ್ ಅನ್ನು ಗಲ್ಲಿಗೇರಿಸಲಾಯಿತು.

2006: ಭಾರತೀಯ ಮೂಲದ ಕೃಷಿಕ ಎಲಿಯಾಹು ಬೆಜಾಲೆಲ್ ಅವರು ಇಸ್ರೇಲಿನ ಪ್ರತಿಷ್ಠಿತ ಪ್ರವಾಸಿ ಭಾರತೀಯ ಪ್ರಶಸ್ತಿಗೆ ಆಯ್ಕೆಯಾದರು. 1955ರಲ್ಲಿ ಕೇರಳದ ಚೆಂದಮಂಗಳಂ ಗ್ರಾಮದಿಂದ ಇಸ್ರೇಲಿಗೆ ಬಂದು ಅಲ್ಲಿ ಅವರು ರೈತರಾಗಿ ಗಣನೀಯ ಸೇವೆ ಸಲ್ಲಿಸಿದರು. ಇಸ್ರೇಲಿನ ನೆಗಿವ್ ಮರುಭೂಮಿಯಲ್ಲಿ ತಾವು ಮಾಡಿದ ಕೃಷಿಸಾಧನೆಗಾಗಿ, 1964ರಲ್ಲಿ ಶ್ರೇಷ್ಠ ರಫ್ತುದಾರ ಪ್ರಶಸ್ತಿಯನ್ನು ಸಹಾ ಅಲ್ಲಿನ ಪ್ರಧಾನಿ ಲೆವಿ ಎಸ್ಕೋಲ ಅವರಿಂದ ಸ್ವೀಕರಿಸಿದ್ದರು.

2006: ಚಿತ್ರನಟ ವಿಷ್ಣುವರ್ಧನ್ ಸೇರಿದಂತೆ ನಾಲ್ವರು ಗಣ್ಯರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಬೆಂಗಳೂರಿನಲ್ಲಿ ನಡೆದ 41ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ವಿಷ್ಣುವರ್ಧನ್, ಕೊಲಾಜ್ ಕಲಾವಿದ ವಿ. ಬಾಲು, ನೃತ್ಯ ಕಲಾವಿದೆ ಮಾಯಾರಾವ್ ಹಾಗೂ ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ ಅವರುಗಳಿಗೆ ಡಾಕ್ಟರೇಟ್ ಪ್ರದಾನ ಮಾಡಿದರು.

2009: ಕರ್ನಾಟಕ ಸರ್ಕಾರ ರಚಿಸಿದ ‘ರಾಜ್ಯ ಕಾನೂನು ಆಯೋಗಕ್ಕೆ’ ಪ್ರಥಮ ಅಧ್ಯಕ್ಷರನ್ನಾಗಿ ಕೇರಳ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಅವರನ್ನು ನೇಮಿಸಲು ಸರ್ಕಾರ ನಿರ್ಧರಿಸಿತು. ಈ ಆಯೋಗವು ಜನಸಾಮಾನ್ಯರಿಗೆ ತ್ವರಿತ ನ್ಯಾಯ ನೀಡಲು ಹಾಗೂ ಸುಧಾರಣೆ ತರಲು ಇರುವ ನ್ಯೂನತೆಗಳ ಅಧ್ಯಯನ ಕೈಗೊಳ್ಳಲು ರಚಿಸಲಾಗಿದೆ.

2009: ಕಾನೂನು ವಿಶ್ವವಿದ್ಯಾಲಯದಲ್ಲಿ ವಿಶೇಷಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಜೆ.ಎಸ್. ಪಾಟೀಲ್ ಅವರನ್ನು ಪ್ರಥಮ ಕುಲಪತಿಗಳಾಗಿ ಕರ್ನಾಟಕ ಸರ್ಕಾರವು ನೇಮಿಸಿತು.

ಪ್ರಮುಖಜನನ/ಮರಣ:

1785: ಇಟಲಿ, ಫ್ರಾನ್ಸ್, ಜರ್ಮನಿ ಮುಂತಾದೆಡೆಗಳಲ್ಲಿ ಆಳವಾಗಿ ಇತಿಹಾಸ ಮತ್ತು ಇತಿಹಾಸಕ್ಕೆ ಅಗತ್ಯವಾದ ಭಾಷಾಜ್ಞಾನವನ್ನು ಗಳಿಸಿ, ಅಮೂಲ್ಯ ಚರಿತ್ರಾರ್ಹ ವಿಷಯಗಳನ್ನು ಸಂಪಾದಿಸಿ ಪ್ರಕಟಿಸಿದ ಗ್ರೀಕ್ ಇತಿಹಾಸಜ್ಞ ಅಂಡ್ರಿಯಾಸ್ ಮೌಸ್ಟಾಕ್ಸಿಡಿಸ್ ಅವರು ಜನಿಸಿದರು.

1819: ಪ್ರಸಿದ್ಧ ವರ್ಣಚಿತ್ರಗಾರ ಬಲ್ದಾಸ್ಸಾರೆ ವೆರಾಸ್ಸಿ ಜನಿಸಿದರು. ಮಿಲನ್ ನಗರದಲ್ಲಿರುವ ರಿಸೋರ್ಜಿಮೆಂಟೋ ಮ್ಯೂಸಿಯಂನಲ್ಲಿರುವ, ಇವರ ‘ಎಪಿಸೋಡ್ ಫ್ರಮ್ ಫೈವ್ ಡೇಸ್’ ಎಂಬ ಇಂಗ್ಲಿಷ್ ಅರ್ಥದ ಕೃತಿ ಪ್ರಸಿದ್ಧಿ ಪಡೆದಿದೆ.

1832: ಪ್ರಸಿದ್ಧ ಫ್ರೆಂಚ್ ವರ್ಣಚಿತ್ರ ಕಲೆಗಾರ, ಮುದ್ರಣಕಾರ, ಗ್ರಂಥಕಾರ ಮತ್ತು ಶಿಲ್ಪಿಯಾಗಿದ್ದ, ಗುಸ್ತಾವೆ ಡೋರ್ ಅವರು ಫ್ರಾನ್ಸಿನ ಸ್ಟ್ರಾಸ್ ಬೌರ್ಗ್ ಎಂಬಲ್ಲಿ ಜನಿಸಿದರು. ಅವರ ಮರಗೆತ್ತನೆಗಳು ಪ್ರಖ್ಯಾತವಾಗಿವೆ. ಫ್ರಾನ್ಸ್ ಸರ್ಕಾರ ಅವರನ್ನು “ಚೆವಲಿಯರ್ ಡಿ ಲಾ ಲೆಜಿಯನ್ ಡಿ’ಹನ್ನಿಯೂರ್” ಎಂಬ ಶ್ರೇಷ್ಠ ಗೌರವ ನೀಡಿ ಸಮ್ಮಾನಿಸಿತ್ತು.

1897: ವಿಶ್ವವಿಖ್ಯಾತ ಶಿಲ್ಪಿ ರಂಜಾಳ ಗೋಪಾಲ ಶೆಣೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ರಂಜಾಳದಲ್ಲಿ ಜನಿಸಿದರು. ಕುಂಚ, ಬಣ್ಣಗಳ ಜೊತೆ ಆಟವಾಡುತ್ತಾ ಬೆಳೆದ ಇವರು ‘ರಂಜಾಳ ಶ್ರೀಮದ್ ಭುವನೇಂದ್ರ ಶಿಲ್ಪ ಕಲಾ ಶಾಲೆ’ ಸ್ಥಾಪಿಸಿ ಉಳಿ, ಸುತ್ತಿಗೆ, ಚಾಣ ಹಿಡಿದರು. ಕಾರ್ಕಳದ ವೆಂಕಟ್ರಮಣ ದೇವಾಲಯದ ಗರುಡ ಮಂಟಪದ ನಾಲ್ಕು ಕಂಬಗಳ ಕಲಾ ವೈಖರಿ ಅವರಿಗೆ ಮೊದಲ ಕೀರ್ತಿ ತಂದ ಶಿಲ್ಪ. ಧರ್ಮಸ್ಥಳಕ್ಕಾಗಿ ನಿರ್ಮಿಸಿಕೊಟ್ಟ 39 ಅಡಿಯ ಬಾಹುಬಲಿ, ಉತ್ತರ ಪ್ರದೇಶದ ಫಿರೋಜ್ ನಗರಕ್ಕೆ ನಿರ್ಮಿಸಿಕೊಟ್ಟ ಬಾಹುಬಲಿ, ಜಪಾನಿನ ತ್ಸುಬೇಸಾ ಬೌದ್ಧ ಮಂದಿರಕ್ಕಾಗಿ ನಿರ್ಮಿಸಿಕೊಟ್ಟ 67 ಅಡಿಗಳ ಬುದ್ಧ ಮೂರ್ತಿ, ಜಪಾನಿನ ನಾಲಾ ಯಾತ್ರಾಸ್ಥಳಕ್ಕಾಗಿ ನಿರ್ಮಿಸಿದ ಮಲಗಿರುವ ಬುದ್ಧ, ಮುಂಬೈಗಾಗಿ ನಿರ್ಮಿಸಿದ ರಾಮ-ಲಕ್ಷ್ಮಣ ಇತ್ಯಾದಿ ಶಿಲ್ಪಗಳು ವಿಶ್ವದಾದ್ಯಂತ ಅವರ ಕೀರ್ತಿಯನ್ನು ಪಸರಿಸಿವೆ. ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಧರ್ಮಸ್ಥಳದ ಹೆಗ್ಗಡೆಯವರಿಂದ ಬಂಗಾರದ ಕಡಗ, ಶಿಲ್ಪ ವಿಶಾರದ ಬಿರುದು, ಕಾಶೀ ಮಠದಿಂದ ‘ಶಿಲ್ಪ ಸಾಮ್ರಾಜ್ಯ ಚಕ್ರವರ್ತಿ’ ಬಿರುದು, ಭಾರತ ಸರಕಾರದ ಮಾಸ್ಟರ್ ಕ್ರಾಫ್ಟ್‌ಸ್‌ಮನ್ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಹಲವಾರು ಗೌರವಗಳು ಅವರಿಗೆ ಸಂದಿದ್ದವು.

1910: ಕರ್ನಾಟಕ ಸಂಗೀತದ ಮಹಾನ್ ಕಲಾವಿದರಲ್ಲಿ ಒಬ್ಬರಾದ ಜಿ. ಎನ್. ಬಾಲಸುಬ್ರಮಣ್ಯಂ ಅವರು ತಂಜಾವೂರು ಜಿಲ್ಲೆಯ, ಮಾಯಾವರಂ ಬಳಿಯ ಗುಡಲೂರು ಎಂಬಲ್ಲಿ ಜನಿಸಿದರು. ಮಹಾನ್ ಸಂಗೀತಕಾರರಾಗಿ, ಅನೇಕ ಶ್ರೇಷ್ಠ ಶಿಷ್ಯರನ್ನು ತಯಾರು ಮಾಡಿದ ಗುರುವಾಗಿ, ವಾಗ್ಗೆಯಕಾರರಾಗಿ, ಚಲನಚಿತ್ರ ಕಲಾವಿದರಾಗಿ, ಆಕಾಶವಾಣಿ ಕಾರ್ಯಕ್ರಮ ಸಂಯೋಜಕರಾಗಿ ಹೀಗೆ ವಿವಿಧ ರೀತಿಯಲ್ಲಿ ಅವರು ಸಂಗೀತ ಸೇವೆ ಸಲ್ಲಿಸಿದ್ದಾರೆ. 1965ರ ವರ್ಷದಲ್ಲಿ ನಿಧನರಾದ ಇವರು ಸಂಗೀತ ಲೋಕದಲ್ಲಿ ‘ಜಿ.ಎನ್.ಬಿ’ ಎಂದೇ ಪ್ರಸಿದ್ಧರು.

1929: ತ್ರಿವೇಣಿ ಅವರ ಸಮಕಾಲೀನರಾದ ಕಥೆ, ಕಾದಂಬರಿಗಾರ್ತಿ ಎಂ.ಕೆ. ಜಯಲಕ್ಷ್ಮಿ ಅವರು ತ್ರಿವೇಣಿ ಅವರಂತೆಯೇ ಅಲ್ಪಾಯುಷಿ. ಜೀವಿಸಿದ್ದ ಮೂವತ್ತೈದು ವರ್ಷಗಳಲ್ಲಿ ಹದಿನಾರು ಕಾದಂಬರಿ, ಹಲವಾರು ಕಥೆಗಳನ್ನು ಬರೆದರು. ಸ್ತ್ರೀ ಶೋಷಣೆಯ ವಿರುದ್ಧ ಬಂಡಾಯದ ದನಿಯನ್ನು ದಾಖಲಿಸಿರುವುದರ ಜೊತೆಗೆ, ಅವೈಜ್ಞಾನಿಕವಾದ ಮೂಢನಂಬಿಕೆಗಳಿಗಿಂತ ನೀತಿ, ಧರ್ಮ, ಆದರ್ಶಗಳನ್ನೇ ಮೈಗೂಡಿಸಿಕೊಂಡು ಬಾಳುವೆ ಮಾಡುವ ಮಹಿಳಾ ಪಾತ್ರಗಳ ಆರೋಗ್ಯಕರ ಕಾದಂಬರಿಗಳತ್ತ ಜಯಲಕ್ಷ್ಮಿ ಗಮನ ಹರಿಸಿದ್ದಾರೆ. ಇವರ ಬಹುತೇಕ ಕಾದಂಬರಿಗಳು ಬಹುಮುದ್ರಣಗಳನ್ನು ಕಂಡು ಜನಪ್ರಿಯವಾಗಿವೆ. ‘ಸಂಸಾರದಲ್ಲಿ ಸಮರ’ ಕಾದಂಬರಿಗೆ 1962ರಲ್ಲಿ ಮೈಸೂರು ಸರಕಾರದ ಪ್ರಶಸ್ತಿ ದೊರೆತಿತ್ತು.

1933: ಕವಿ, ಪ್ರಾಧ್ಯಾಪಕ ಪಂಚಾಕ್ಷರಿ ಹಿರೇಮಠ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಎಂಬಲ್ಲಿ ಜನಿಸಿದರು. ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 33 ವರ್ಷ ಸೇವೆ ಜೊತೆಗೆ ಮುರುಘಾ ಮಠದ ಮೂಲಕ ಸಂಶೋಧನೆ, ಸಮಗ್ರ ವಚನ ಸಾಹಿತ್ಯ ಸಂಸ್ಕರಣೆ ಮತ್ತು ಪ್ರಕಟಣೆ ಹೊಣೆ ನಿರ್ವಹಿಸಿದರು. ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ, ಜೀವನಚರಿತ್ರೆ, ವಿಚಾರ ಸಾಹಿತ್ಯ, ಪ್ರವಾಸಕಥನ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ 80 ಕೃತಿ ಪ್ರಕಟಿಸಿದ್ದಾರೆ. ಪ್ರಕಾಶಕರಾಗಿ ಅನೇಕ ವಿದ್ವಾಂಸರ ಕೃತಿಗಳಿಗೆ ಬೆಳಕು ನೀಡಿದ್ದಾರೆ. ಸೋವಿಯತ್‌ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.

1944: ಪ್ರಸಿದ್ಧ ಶರೀರ ಶಾಸ್ತ್ರಜ್ಞ ರಾಲ್ಫ್ ಸಿನ್ಕರ್ನ್ಗೆಲ್ ಅವರು ಸ್ವಿಡ್ಜರ್ಲ್ಯಾಂಡ್ ದೇಶದ ರೀಹೇನ್ ಎಂಬಲ್ಲಿ ಜನಿಸಿದರು. ಜ್ಯೂರಿಚ್ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಇಮ್ಯುನಾಲಜಿ ಪ್ರಾಧ್ಯಾಪಕರಾದ ಇವರಿಗೆ, ದೇಹದಲ್ಲಿರುವ ಇಮ್ಯೂನ್ ವ್ಯವಸ್ಥೆ ಹೇಗೆ ದೋಷಯುಕ್ತ ಕಣಗಳನ್ನು ಪತ್ತೆಹಚ್ಚುತ್ತದೆ ಎಂಬ ಸಂಶೋಧನೆಗಾಗಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಸಂದಿದೆ.

1959: ಭಾರತಕ್ಕೆ ಮೊದಲ ಬಾರಿಗೆ ಒಂದು ದಿನದ ಕ್ರಿಕೆಟ್ ವಿಶ್ವಕಪ್ ಗೆಲುವು ತಂದು ಕೊಟ್ಟ, ವಿಶ್ವದ ಮಹಾನ್ ಸರ್ವಾಂಗೀಣ (ಆಲ್ರೌಂಡ್) ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾದ ‘ಕಪಿಲ್ ದೇವ್ ರಾಮ್ ಲಾಲ್ ನಿಖಂಜ್’ ಅವರು ಚಂಡೀಗಢದಲ್ಲಿ ಜನಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ವಿಕೆಟ್ ಮತ್ತು 5000ಕ್ಕೂ ಹೆಚ್ಚು ರನ್ ಮಿಶ್ರ ಸಾಧನೆಗಳನ್ನು ಮಾಡಿರುವ ಏಕೈಕ ಕ್ರಿಕೆಟ್ಟಿಗರಾಗಿರುವ ವಿಶ್ವದಾಖಲೆ ಇವರದ್ದಾಗಿದೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ವಿಸ್ಡೆನ್ ಶತಮಾನದ ಭಾರತೀಯ ಆಟಗಾರ, ಐ.ಸಿ.ಸಿ ಕ್ರಿಕೆಟ್ ಹಾಲ್ ಆಫ್ ಫೇಮ್ ಮುಂತಾದ ಅನೇಕ ಪ್ರತಿಷ್ಟಿತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳು ಇವರಿಗೆ ಸಂದಿವೆ.

1967: ವಿಶ್ವಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕರಾದ ಎ. ಆರ್. ರಹಮಾನ್ ಅವರು ಚೆನ್ನೈನಲ್ಲಿ ಜನಿಸಿದರು. ಭಾರತದ ವಿವಿಧ ಭಾಷಾ ಚಲನಚಿತ್ರಗಳಲ್ಲಿ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳಲ್ಲೂ, ಆಲ್ಬಂಗಳಲ್ಲೂ ಸಂಗೀತ ನೀಡಿ ಆಸ್ಕರ್, ಗ್ರಾಮಿ, ಬಾಫ್ಟಾ ಪ್ರಶಸ್ತಿಗಳೂ ಸೇರಿದಂತೆ ಹಲವಾರು ಮಹತ್ವದ ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನೂ, ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿಗಳನ್ನೂ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

1537: ರೋಮ್ನಲ್ಲಿರುವ ‘ಪಲಾಸ್ಸೋ ಮಸ್ಸಿಮೋ ಅಲ್ಲೇ ಕೊಲೋನ್ನೆ’ ಅಂತಹ ಶ್ರೇಷ್ಠ ಕಟ್ಟಡಗಳ ವಿನ್ಯಾಸಕ ಮತ್ತು ವರ್ಣ ಚಿತ್ರಕಾರ ಬಲ್ದಾಸ್ಸಾರೆ ಪೆರುಜ್ಜಿ ನಿಧನರಾದರು.

1646: ಜರ್ಮನಿಯ ಪ್ರಸಿದ್ಧ ಆಗಸ್ಬರ್ಗ್ ಟೌನ್ ಹಾಲ್ ಅಂತಹ ಕಟ್ಟಡದ ವಿನ್ಯಾಸಕ ಎಲಿಯಾಸ್ ಹಾಲ್ ನಿಧನರಾದರು.

1840: ಬ್ರಿಟಿಷ್ ಲೇಖಕಿ ಮತ್ತು ನಾಟಕಕಾರ್ತಿ ಫ್ರಾನ್ಸಿಸ್ ಬುರ್ನೀ ಇಂಗ್ಲೆಂಡಿನ ಬಾತ್ ಎಂಬಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ಅವರ ‘ಎವೆಲಿನ’, ‘ಸೆಸಿಲಿಯ’, ‘ಕ್ಯಾಮಿಲ್ಲ’, ‘ದಿ ವಾಂಡರರ್’ ಕಾದಂಬರಿಗಳು, ಹಲವರು ನಾಟಕಗಳು ಮತ್ತು ವಿವಿಧ ನಿಯತಕಾಲಿಕಗಳಲ್ಲಿ ಬರಹಗಳು ಇವೆಲ್ಲಾ, ಓದುಗರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ.

1885: ‘ಆಧುನಿಕ ಹಿಂದಿ’ಯ ಜನಕ ಎಂದೇ ಪರಿಗಣಿತರಾಗಿದ್ದ ಭಾರತೀಯ ಕವಿ, ನಾಟಕಕಾರ, ವಿಮರ್ಶಕ, ಪತ್ರಕರ್ತ `ಭರತೇಂದು’ ಹರೀಶ್ ಚಂದ್ರ ಅವರು ತಮ್ಮ 35ನೇ ವಯಸ್ಸಿನಲ್ಲಿ ವಾರಣಾಸಿಯಲ್ಲಿ ನಿಧನರಾದರು.

1919: ಅಮೆರಿಕದ 26ನೇ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್, ತಮ್ಮ 60ನೇ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು.

1942: ಬೆಲ್ಜಿಯನ್ ವ್ಯಾಪಾರಿ ಹಾಗೂ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ 3ನೇ ಅಧ್ಯಕ್ಷರಾಗಿದ್ದ ಹೆನ್ರಿ ಡಿ ಬೈಲೆಟ್ ಲಾತೂರ್, ಬೆಲ್ಜಿಯಂ ದೇಶದ ಬ್ರಸೆಲ್ಸ್ ಎಂಬಲ್ಲಿ ಜನಿಸಿದರು.

2007: ದಿಢೀರ್ ನೂಡಲ್ ಶೋಧಿಸಿದ ‘ನೂಡಲ್ ದೊರೆ’ ಜಪಾನಿನ ಮೊಮೊಫುಕು ಅಂಡೊ, ತಮ್ಮ 96ನೆಯ ವಯಸ್ಸಿನಲ್ಲಿ ಟೋಕಿಯೋದಲ್ಲಿ ನಿಧನರಾದರು. ದ್ವಿತೀಯ ಮಹಾಯುದ್ಧದ ನಂತರ ಉದ್ಭವಿಸಿದ ಆಹಾರ ಕೊರತೆಯ ದಿನಗಳಲ್ಲಿ, ಜನರು ಕಾಳಸಂತೆಯಲ್ಲಿ ರೇಮನ್ಸ್ ನೂಡಲ್ಸ್ ಖರೀದಿಗೆ ಉದ್ದನೆಯ ಸಾಲಿನಲ್ಲಿ ನಿಲ್ಲುವುದನ್ನು ಕಂಡು ಅಂಡೊ ‘ದಿಢೀರ್ ನೂಡಲ್ ತಯಾರಿಕೆ’ ವಿಧಾನ ಕಂಡು ಹಿಡಿದರು. ಗಗನಯಾನಿಗಳಿಗೆಂದೇ ವಿಶೇಷವಾಗಿ ಸಿದ್ಧ ಪಡಿಸಿದ್ದ ಕಪ್ ನೂಡಲ್ಸ್ ಪ್ರಚಾರ ಉತ್ತೇಜಿಸಲು 2005ರಲ್ಲಿ ಅವರು ಟೆಲಿವಿಷನ್ ಕಾರ್ಯಕ್ರಮದಲ್ಲೂ ಪಾಲ್ಗೊಂಡ್ದಿದರು.

2008: ಕಾಲಿಲ್ಲದ ಲಕ್ಷಾಂತರ ಮಂದಿಗೆ ಕೃತಕ ಕಾಲಿನ ಭಾಗ್ಯ ಒದಗಲು ಕಾರಣರಾದ ಜೈಪುರ ಕೃತಕ ಕಾಲಿನ ಸಂಶೋಧಕ ಹಾಗೂ ಖ್ಯಾತ ಮೂಳೆ ತಜ್ಞ ಡಾ. ಪ್ರಮೋದ್ ಕರಣ್ ಸೇಥಿ ನಿಧನರಾದರು. ಮ್ಯಾಗ್ಸೆಸೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಡಾ. ಸೇಥಿ 1969ರಲ್ಲಿ ಜೈಪುರ ಕೃತಕ ಕಾಲು ಸಂಶೋಧಿಸಿದ್ದರು.

2017: ಹಿರಿಯ ನಟ ಓಂಪುರಿ ನಿಧನ: ಕಲಾತ್ಮಕ ಚಿತ್ರಗಳಲ್ಲಿ ತಮ್ಮ ವೈಶಿಷ್ಟ್ಯಪೂರ್ಣ ಅಭಿನಯದಿಂದ ಜಗತ್ತಿನ ರಸಿಕರ ಮನಗೆದ್ದ ಪ್ರತಿಭಾವಂತ ನಟ.