Categories
e-ದಿನ

ಜನವರಿ-08

ಪ್ರಮುಖಘಟನಾವಳಿಗಳು:

1697: ಧರ್ಮನಿಂದೆ(blasphemy­)ಗಾಗಿ ಎಡಿನ್ ಬರ್ಗ್ ವಿದ್ಯಾರ್ಥಿ ಥಾಮಸ್ ಅಜ್ಕೆನ್ ಹೆಡ್ ಎಂಬಾತ  ಮರಣದಂಡನೆಗೆ ಗುರಿಯಾದ.  ಇದು ಬ್ರಿಟನ್ನಿನಲ್ಲಿ ಧರ್ಮನಿಂದನೆಗೆ ಉಂಟಾದ ಮರಣ ದಂಡನೆಗಳಲ್ಲಿ ಕಡೆಯದಾಗಿದೆ.

1790: ಜಾರ್ಜ್ ವಾಷಿಂಗ್ಟನ್ ಅವರು ಒಕ್ಕೂಟದ ಪ್ರಥಮ ರಾಜ್ಯದ ಭಾಷಣವನ್ನು ನ್ಯೂಯಾರ್ಕ್ ನಗರದಲ್ಲಿ ನೆರವೇರಿಸಿದರು.

1815: ನ್ಯೂ ಆರ್ಲಿಯಾನ್ಸ್ ಯುದ್ಧದಲ್ಲಿ  ಆಂಡ್ರಿಯಾ ಜಾಕ್ಸನ್ ನೇತೃತ್ವದ  ಅಮೆರಿಕ ಪಡೆಗಳು  ಬ್ರಿಟಿಷ್ ಪಡೆಗಳ ಮೇಲೆ ವಿಜಯ ಸಾಧಿಸಿದವು.

1835: ಅಮೆರಿಕದ ರಾಷ್ಟ್ರೀಯ ಸಾಲವು ಶೂನ್ಯವಾಗಿದ್ದ ಏಕೈಕ ಸಮಯವಾಗಿತ್ತು.

1867: ವಾಷಿಂಗ್ಟನ್ ಒಳಗೊಂಡ ಕೊಲಂಬಿಯಾ ಪ್ರಾಂತ್ಯದಲ್ಲಿ ಆಫ್ರಿಕನ್ ಅಮೆರಿಕನ್ನರಿಗೆ ಮತದಾನದ ಹಕ್ಕನ್ನು ನೀಡಲಾಯಿತು.

1889: ಹರ್ಮನ್ ಹೊಲೆರಿತ್ ಅವರಿಗೆ, ಅವರು ಅಭಿವೃದ್ದಿ ಪಡಿಸಿದ ಪಂಚ್ ಕಾರ್ಡ್ ಕ್ಯಾಲ್ಕ್ಯುಲೇಟರಿಗೆ, ‘ಆರ್ಟ್ ಆಫ್ ಅಪ್ಲೆಯಿಂಗ್ ಸ್ಟಾಟಿಸ್ಟಿಕ್ಸ್’ಗಾಗಿನ ಪೇಟೆಂಟ್ ನೀಡಲಾಯಿತು. ಹರ್ಮನ್ ಹೊಲೆರಿತ್ ಅವರು ಅಭಿವೃದ್ಧಿ ಪಡಿಸಿದ ಈ  ಪಂಚಿಂಗ್ ಕಾರ್ಡ್ ಟಾಬ್ಯುಲೇಟಿಂಗ್ ವ್ಯವಸ್ಥೆ, ಸೆಮಿ ಆಟೋಮ್ಯಾಟಿಕ್ ಡಾಟಾ ಪ್ರೋಸೆಸಿಂಗ್ ವ್ಯವಸ್ಥೆಗಳಿಗೆ  ನಾಂದಿ ಹಾಡಿತು. ಈ ವ್ಯವಸ್ಥೆ ಸುಮಾರು ಒಂದು ಶತಮಾನದ ಅವಧಿಯವರೆಗೆ ಪ್ರಚಲಿತದಲ್ಲಿತ್ತು.

1904: ಚಿಕಾಗೋ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿರುವ ಬ್ಲಾಕ್ ಸ್ಟೋನ್ ಗ್ರಂಥಾಲಯ ಕಟ್ಟಡವು ಲೋಕಾರ್ಪಣೆಗೊಂಡಿತು.  ಚಿಕಾಗೋದ ಅಧ್ಯಕ್ಷರಾಗಿದ್ದ ತಿಮೋಥಿ ಬೀಚ್ ಬ್ಲಾಕ್ ಸ್ಟೋನ್ ಅವರ ಹೆಸರನ್ನು ಈ ಕಟ್ಟಡಕ್ಕೆ ನೀಡಲಾಗಿದೆ.  ಸೋಲನ್ ಎಸ್. ಬೆಮಾನ್ ಅವರು ಈ ಕಟ್ಟಡದ ವಿನ್ಯಾಸಕಾರರಾಗಿದ್ದರು.

1940: ಎರಡನೇ ವಿಶ್ವ ಮಹಾಯುದ್ದದ ಪರಿಣಾಮವಾಗಿ ‘ಫುಡ್ ರೇಷನ್’ ಮಾಡುವ ಅನಿವಾರ್ಯತೆಗೆ ಒಳಗಾದ ಬ್ರಿಟನ್, ಆಹಾರ ಪದಾರ್ಥಗಳ ಪಡಿತರ ವ್ಯವಸ್ಥೆ ಜಾರಿಮಾಡಿತು.

1983: ಅಮೆರಿಕದಲ್ಲೇ ಮೊದಲಬಾರಿಗೆ, ವಾಷಿಂಗ್ಟನ್ ನಗರದಲ್ಲಿರುವ  ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್ನಲ್ಲಿ ಲಿಯನಾರ್ಡೊ ಡಾ-ವಿಂಚಿ ಅವರ ‘ಮೊನಾ ಲಿಸಾ’ ಕೃತಿಯನ್ನು ಪದರ್ಶಿಸಲಾಯಿತು.

1964: ಅಮೆರಿಕದ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು  ದೇಶದಲ್ಲಿನ ಬಡತನವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ‘ಬಡತನದ ವಿರುದ್ಧ ಯುದ್ಧ’ ಎಂಬ ಕಾಯಿದೆಯನ್ನು ಪ್ರಸ್ತಾಪಿಸಿದರು.

1971: ಅಂತರರಾಷ್ಟ್ರೀಯ ಒತ್ತಡಗಳ ಮೇರೆಗೆ ಪಾಕಿಸ್ತಾನದ ಅಧ್ಯಕ್ಷ ಜುಲ್ಫಿಕರ್ ಅಲಿ ಭುಟ್ಟೋ ಅವರು,  ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಸೆರೆಮನೆಯಲ್ಲಿದ್ದ ಷೇಕ್ ಮುಜೀಬುರ್ ರೆಹಮಾನ್ ಅವರನ್ನು  ಬಿಡುಗಡೆಗೊಳಿಸಿದರು.

1973: ಸೋವಿಯತ್ ಯೂನಿಯನ್ನಿನ  ಬಾಹ್ಯಾಕಾಶ ನೌಕೆ ‘ಲೂನಾ 21’ರ ಬಾಹ್ಯಾಕಾಶ ಯಾತ್ರೆ ಪ್ರಾರಂಭಗೊಂಡಿತು

1981: ಫ್ರಾನ್ಸಿನ ಟ್ರಾನ್ಸ್-ಎನ್-ಪ್ರಾವಿನ್ಸಿನಲ್ಲಿ, ಸ್ಥಳೀಯ ರೈತನೊಬ್ಬ, ತಾನು ಕಂಡ ‘UFO ಎಂದು ವಿಜ್ಞಾನ ಪ್ರಪಂಚ ಹೇಳುವ, ಗುರುತುಹಿಡಿಯಲಾಗದ’  ಆಕಾಶ ಕಾಯದ ಕುರಿತಾಗಿ ಸುದೀರ್ಘ ಮಾಹಿತಿ ನೀಡಿದ. ಇದು ಇದುವರೆವಿಗೂ ಲಭ್ಯವಿರುವ ಯಾವುದೇ UFO ನೋಟದ ವರದಿಗಳಿಗಿಂತ ಹೆಚ್ಚು   ಪರಿಪೂರ್ಣವಾದ್ದು ಮತ್ತು  ಕೂಲಂಕಷವಾಗಿ ದಾಖಲಿಸಿರುವಂತದ್ದು ಎಂದು ಹೇಳಲಾಗಿದೆ.

1994: ರಷ್ಯಾದ ಗಗನಯಾತ್ರಿ ವಲೇರಿ ಪಾಲ್ವಕೊವ್ ಅವರು ಸೊಯುಜ್ ಟಿಎಮ್ – 18ರಲ್ಲಿ, ಬಾಹ್ಯಾಕಾಶದಲ್ಲಿ ನಿರ್ಮಿಸಲಾಗಿರುವ  ‘ಮಿರ್’ ಕೇಂದ್ರಕ್ಕೆ ಹೊರಟರು.  ಅಲ್ಲಿ ಅವರು ಒಟ್ಟು 437 ದಿನಗಳು ವಾಸ್ತವ್ಯಹೂಡಿದ ದಾಖಲೆ ನಿರ್ಮಿಸಿದ್ದಾರೆ’.

1998: ಬಾರತದಾದ್ಯಂತ ಇರುವ ‘ನಗೆ ಕೂಟಗಳು’ ಪ್ರಥಮ ಬಾರಿಗೆ ‘ಜಾಗತಿಕ ನಗೆ ದಿನ’ವನ್ನು ಮುಂಬೈನಲ್ಲಿ  ಆಚರಿಸಿದವು.  ಭಾರತದಾದ್ಯಂತದ ನಗೆ ಕೂಟಗಳ ಸುಮಾರು 10,000 ಮಂದಿ ಸದಸ್ಯರು ರೇಸ್ಕೋರ್ಸ್ ಮೈದಾನದಲ್ಲಿ ಸಮಾವೇಶಗೊಂಡು ಒಟ್ಟಾಗಿ ಗಹಗಹಿಸಿ  ನಕ್ಕರು.  ಈ ನಂತರದಲ್ಲಿ  ಪ್ರತಿವರ್ಷದ ಜನವರಿ ತಿಂಗಳ ಎರಡನೇ ಭಾನುವಾರವನ್ನು  ‘ಜಾಗತಿಕ ನಗೆ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

2006: ಖ್ಯಾತ ಮರಾಠಿ ಸಾಹಿತಿ ವಿಂದಾ ಕರಂಡೀಕರ್ ಅವರನ್ನು  2003ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಹೆಚ್ಚು ಪ್ರಾಯೋಗಿಕ ಹಾಗೂ ಸಮಗ್ರವಾಗಿ ಸಾಹಿತ್ಯ ಕೃಷಿ ಮಾಡಿದ ಮರಾಠಿ ಸಾಹಿತಿಗಳಲ್ಲಿ ಕರಂಡೀಕರ್ ಒಬ್ಬ ಪ್ರಮುಖರೆನಿಸಿದ್ದಾರೆ.

2006: ದೆಹಲಿಯಲ್ಲಿ ಉಷ್ಣಾಂಶ 0.2 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಳಿದು 70 ವರ್ಷಗಳ ಅವಧಿಯಲ್ಲೇ ಅತ್ಯಂತ ಹೆಚ್ಚಿನ  ಚಳಿ ದಾಖಲಾಯಿತು.

ಪ್ರಮುಖಜನನ/ಮರಣ:

1638: ಪ್ರಸಿದ್ಧ ವರ್ಣಚಿತ್ರಕಲೆಗಾರ್ತಿ ಎಲಿಜೆಬೆತ್ ಸಿರಾನಿ ಎಂಬಾಕೆ ಇಟಲಿಯ ಬೊಲೋಗ್ನ ಎಂಬಲ್ಲಿ ಜನಿಸಿದರು.  ವರ್ಣಕಲೆಗಾರ್ತಿ ಮತ್ತು ಚಿತ್ರಗಳನ್ನು ಅಚ್ಚುಮಾಡುವ ಕಲಾವಿದೆಯಾಗಿದ್ದ ಆಕೆ ತಾನಿದ್ದ ಬೊಲೋಗ್ನ ಪ್ರಾಂತ್ಯದಲ್ಲಿ ಅತ್ಯಂತ ಪ್ರಸಿದ್ಧಳಾಗಿದ್ದು ಇತರ ಮಹಿಳಾ ಕಲಾವಿದರಿಗಾಗಿ ಆಕಾಡೆಮಿಯನ್ನು ಸ್ಥಾಪಿಸಿದ್ದರು.  ಅಮೆರಿಕದಲ್ಲಿರುವ ‘ವರ್ಜಿನ್ ಅಂಡ್ ಚೈಲ್ಡ್’, ಬೊಲೋಗ್ನದಲ್ಲಿರುವ ‘ಪೋರ್ಟಿಯಾ ವೂಂಡಿಗ್ ಹರ್ ಥೈ’,  ರಷ್ಯಾದಲ್ಲಿರುವ  ‘ಸೆಲ್ಫ್ ಪೋರ್ಟ್ರೈಟ್’ ಮುಂತಾದ ಅವರ ಅನೇಕ ಚಿತ್ರಗಳು ವಿಶ್ವದೆಲ್ಲ  ಕಲಾಪ್ರೇಮಿಗಳ ಕಣ್ಮನ ತಣಿಸುವಂತದ್ದಾಗಿವೆ. ಇನ್ನೂ 27 ವಯಸ್ಸಿನಲ್ಲಿರುವಾಗಲೇ ಸಂದೇಹಾಸ್ಪದ ರೀತಿಯಲ್ಲಿ ಇವರ ಸಾವು ಸಂಭವಿಸಿತು.

1680: ಪ್ರಸಿದ್ಧ ವರ್ಣಚಿತ್ರಗಾರ ಸೆಬಾಸ್ಟಿಯಾನೋ ಕೊಂಕ ‘ಕಿಂಗ್ಡಂ ಆಫ್ ನೇಪಲ್ಸ್’ನ ಗಯೇಟ ಎಂಬಲ್ಲಿ ಜನಿಸಿದರು.  ಮುಂದೆ ರೋಮ್ ನಗರದಲ್ಲಿ ವಾಸ್ತವ್ಯ ಹೂಡಿದ ಅವರು, ಅನೇಕ ಪ್ರಸಿದ್ಧ ಚಿತ್ರಗಳನ್ನಲ್ಲದೆ ವರ್ಣಚಿತ್ರ  ಕಲೆಗಾರರಿಗೆ ಉಪಯುಕ್ತವಾದ ಕೈಪಿಡಿಯನ್ನೂ ತಯಾರಿಸಿದರು.

1867: ಎಮಿಲಿ ಗ್ರೀನ್ ಬಾಲ್ಚ್ ಅವರು ಅಮೆರಿಕದ ಬೋಸ್ಟನ್ ನಗರದಲ್ಲಿ ಜನಿಸಿದರು.  ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದ ಅವರನ್ನು ಸಮಾಜದ ನೋವಿನ ಸಂಗತಿಗಳಾದ ಬಡತನ, ವಲಸೆ, ಬಾಲಕಾರ್ಮಿಕರು ಮುಂತಾದ ವಿಚಾರಗಳು ಕಾಡಿದ್ದವು. ಈ ಕುರಿತು ಅವರು ಮಹತ್ವದ ಕೃತಿಗಳನ್ನು ರಚಿಸಿದ್ದರು.   ಮೊದಲ ಮಹಾಯುದ್ದದ ಸಂದರ್ಭದಲ್ಲಿ  ಶಾಂತಿಗಾಗಿ ಚಳುವಳಿ ಕೈಗೊಂಡ ಆಕೆ ಸ್ವಿಡ್ಜರ್ಲ್ಯಾಂಡ್ ಮೂಲದ ‘ವುಮೆನ್ಸ್ ಇಂಟರ್ನ್ಯಾಷನಲ್ ಲೀಗ್ ಫಾರ್ ಪೀಸ್ ಅಂಡ್ ಫ್ರೀಡಂ’(WLPF) ಸಂಘಟನೆಯ ಕೇಂದ್ರ ನಾಯಕಿಯಾದರು.  1961ರ ವರ್ಷದಲ್ಲಿ ನಿಧನರಾದ ಇವರಿಗೆ 1946ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿತ್ತು.

1894: ವೃತ್ತಿಯಿಂದ ದೈಹಿಕ ಶಿಕ್ಷಣ ತಜ್ಞರೂ,  ಪ್ರವೃತ್ತಿಯಿಂದ ಸಾಹಿತಿಗಳೂ ಆದ ಕೆ.ವಿ.ಅಯ್ಯರ್ ಅವರು ಕೋಲಾರ ಜಿಲ್ಲೆಯ ದೇವಸಮುದ್ರದಲ್ಲಿ ಜನಿಸಿದರು.  ಶಾಂತಲಾ, ರೂಪದರ್ಶಿ, ಲೀನಾ ಕಾದಂಬರಿಗಳು;  ‘ಸಮುದ್ಯತಾ’ ಕಥಾಸಂಕಲನ;  ದೈಹಿಕ ಶಿಕ್ಷಣ ಕುರಿತು ‘Chemical change in Physical Figure’, ‘Physic and Figure’,  ‘Surya Namaskar’,  ‘Perfect Strength’,  ‘How to obtain strength’ ಮುಂತಾದವು ಅವರ ಪ್ರಸಿದ್ಧ ಕೃತಿಗಳು. 1980ರಲ್ಲಿ ನಿಧನರಾದ ಇವರಿಗೆ,   ಕರ್ನಾಟಕ ಸಾಹಿತ್ಯ ಅಕಾಡೆಮಿಯು 1979ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತ್ತು.

1933: ‘ಶ್ರೀಮಖ’, ‘ಹೋಶ್ರೀ’, ‘ಶ್ರೀಶ’ ಮುಂತಾದ ಕಾವ್ಯನಾಮಗಳಿಂದ ಕಥೆ, ಕವನ ಕಾದಂಬರಿಗಳನ್ನು ಬರೆದ ಶ್ರೀನಿವಾಸ ಉಡುಪರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಲ್ಲುಂಡೆಯಲ್ಲಿ ಜನಿಸಿದರು. ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಇವರ ‘ಒಲಿದು ಬಂದವಳು’ ಕಾದಂಬರಿಗೆ 1967ರಲ್ಲಿ  ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಂದಿತ್ತು.  2000ದ ವರ್ಷ  ಮಾರ್ಚ್ 9 ರಂದು ನಿಧನರಾದರು.

1903: ಖ್ಯಾತ ಸಾಹಿತಿ ಎಲ್. ಗುಂಡಪ್ಪ ಅವರು ಜನಿಸಿದರು.  ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಗುಂಡಪ್ಪನವರು ಕುಮಾರವ್ಯಾಸನ ಕರ್ಣಾಟ ಕಥಾಮಂಜರಿ ಗದ್ಯಾನುವಾದವೇ ಅಲ್ಲದೆ, ತಮಿಳಿನ ಪ್ರಸಿದ್ಧ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದನೆಯಲ್ಲಿ ಹಾಗು ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ಕನ್ನಡ ನಿಘಂಟು ಸಂಪಾದನೆಯಲ್ಲಿ ದುಡಿದಿದ್ದಾರೆ. ಇವರ ‘ಪತ್ರಿಕಾ ನಿಘಂಟು’ ಒಂದು ಉಪಯುಕ್ತ ಗ್ರಂಥ. ಮಕ್ಕಳ ಸಾಹಿತ್ಯ, ವ್ಯಾಕರಣ ಮತ್ತಿತರ ಬರಹಗಳನ್ನೂ ಮಾಡಿದ್ದ ಇವರಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ಮತ್ತು 1975ರ ವರ್ಷದ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಸಂದಿದ್ದವು.

1909: ಪ್ರಮುಖ ಬಂಗಾಳಿ ಸಾಹಿತಿ, ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳಾ ಸಾಹಿತಿ ಆಶಾಪೂರ್ಣ ದೇವಿ ಅವರು ಕಲ್ಕತ್ತಾದ ಪೊತೋಲ್ ದಂಗ ಎಂಬಲ್ಲಿ ಜನಿಸಿದರು.  ‘ಪ್ರಥಮ್ ಪ್ರೊತಿಶ್ರುತಿ’, ‘ಸುಬರ್ನೋಲತಾ’, ‘ಬಕುಲಕಥಾ’ ಮುಂತಾದವು ಇವರ ಪ್ರಸಿದ್ಧ ಕೃತಿಗಳಾಗಿವೆ.  1995 ಜುಲೈ 13ರಂದು ನಿಧನರಾದ ಇವರಿಗೆ ಜ್ಞಾನಪೀಠ ಪ್ರಶಸ್ತಿಯೇ ಅಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಪದ್ಮಶ್ರೀ ಮತ್ತು ಅನೇಕ ವಿಶ್ವವಿದ್ಯಾಲಯಗಳ ಡಿ.ಲಿಟ್ ಗೌರವಗಳು ಅರ್ಪಿತವಾಗಿದ್ದವು.

1925: ಹಿಂದೀ ಭಾಷಾ ಸಾಹಿತ್ಯದಲ್ಲಿ ‘ನಯಿ ಕಹಾನಿ’ ಯುಗದ ಪ್ರಮುಖರಾದ ಮೋಹನ್ ರಾಕೇಶ್ ಅವರು ಅಮೃತಸರದಲ್ಲಿ ಜನಿಸಿದರು.  ಕಾದಂಬರಿ, ಕತೆ, ಪ್ರಾವಾಸಿ ಸಾಹಿತ್ಯ, ವಿಮರ್ಶೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಅವರ ಸಾಹಿತ್ಯ ಮೂಡಿಬಂದಿದೆ.  1972ರ ವರ್ಷದಲ್ಲಿ ನಿಧನರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯು 1968 ವರ್ಷದ  ಪ್ರಶಸ್ತಿ ನೀಡಿ ಗೌರವಿಸಿತ್ತು.

1926: ಮಹಾನ್ ಒಡಿಸ್ಸಿ ನೃತ್ಯ ಕಲಾವಿದರಾದ ಕೇಳೂಚರಣ್ ಮೊಹಾಪಾತ್ರ ಒರಿಸ್ಸಾದ ಪುರಿ ಸಂಸ್ಥಾನದ ರಘುರಾಜಪುರ ಎಂಬಲ್ಲಿ ಜನಿಸಿದರು.  ಜೀವನದಲ್ಲಿನ ವಿವಿಧ ಆಯಾಮಗಳಲ್ಲಿ ಬೀಡಿ ಕಟ್ಟುವ ಕೂಲಿ ಕೆಲಸದಿಂದ ಮೊದಲ್ಗೊಂಡು ವಿಶ್ವಪ್ರಸಿದ್ಧ ಕಲಾವಿದರಾಗಿ ಬೆಳೆದು ನಿಂತ ಕೇಳೂಚರಣ ಮಹಾಪಾತ್ರರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಸಂಗೀತ ನೃತ್ಯ ಅಕಾಡೆಮಿ ಗೌರವ, ಕಾಳಿದಾಸ ಸಮ್ಮಾನದಂತಹ ಮಹಾನ್ ಗೌರವಗಳು ಅರಸಿಬಂದಿದ್ದವು.

1936: ಕನ್ನಡದ ಹಿರಿಯ ವಿಮರ್ಶಕ, ಸಂಸ್ಕೃತಿ ಚಿಂತಕ ಸಾಹಿತಿ ಪ್ರೊ. ಸಿ.ಎನ್. ರಾಮಚಂದ್ರನ್ ಅವರು ಜನಿಸಿದರು.  ಸೋಮಾಲಿಯಾ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿ 1996ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ನಿವೃತ್ತರಾದರು. ಕನ್ನಡದಲ್ಲಿ 16 ಹಾಗೂ ಇಂಗ್ಲೀಷಿನಲ್ಲಿ 10 ಕೃತಿಗಳನ್ನು ರಚನೆ ಮಾಡಿದ್ದಾರೆ. ವಿಮರ್ಶೆಯ ಕನ್ನಡದ ಪ್ರಸಿದ್ಧ ಕೃತಿಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದಾರೆ. ಅವರ ‘ಆಖ್ಯಾನ-ವ್ಯಾಖ್ಯಾನ’ ಕೃತಿಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ’ನೆರಳುಗಳ ಬೆನ್ನುಹತ್ತಿ’ ಅವರ ಆತ್ಮಕಥನವಾಗಿದೆ.

1953: ಪ್ರಸಿದ್ಧ ರಂಗಕಲಾವಿದ, ಮಹಾಬೋಧಿ ಸಂಸ್ಥೆಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ  ಕಲಾಗಂಗೋತ್ರಿ ತಂಡದ ಸ್ಥಾಪಕರಾದ ಬಿ.ವಿ. ರಾಜಾರಾಂ ಈ ದಿನ  ಜನಿಸಿದರು. ನಾಟಕಗಳ ಅಭಿನಯ ಮತ್ತು  ನಿರ್ದೇಶನಕ್ಕೆ ಹೆಸರಾದ ಇವರು ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

1961: ಅಮೇರಿಕದ ಸ್ಪ್ರಿಂಟರ್ ಕ್ಯಾಲ್ವಿನ್ ಸ್ಮಿತ್ ಅಮೆರಿಕದ ಮಿಸಿಸಿಪಿಯ ಬೋಲ್ಟನ್ ಎಂಬಲ್ಲಿ ಜನಿಸಿದರು.  1983 ಮತ್ತು 1987ರಲ್ಲಿ 200 ಮೀಟರ್ ಓಟದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಇವರು,  100 ಮೀಟರ್ ಓಟವನ್ನು 9.93 ಸೆಕೆಂಡುಗಳಲ್ಲಿ ಕ್ರಮಿಸಿ ಓಟ ಕೆಲಕಾಲ ವಿಶ್ವದಾಖಲೆಯಾಗಿತ್ತು.

1337: ಇಟಾಲಿಯನ್ ವರ್ಣಚಿತ್ರಕಾರ ಮತ್ತು ವಿನ್ಯಾಸಕಾರ ಗಿಯಾಟೋ ಅವರು ಇಟಲಿಯ ಫ್ಲಾರೆನ್ಸ್ ನಗರದಲ್ಲಿ ನಿಧನರಾದರು.  ಕಲೆಯ ಚರಿತ್ರೆಯಲ್ಲಿ  ‘ರೆನೆಯಸಾನ್ಸ್’ ಎನ್ನುವ ನವೋದಯ ಕಾಲದ ಪ್ರಮುಖ ಕಲಾವಿದರಾದ ಇವರು ಸ್ಕ್ರೊವೇಗ್ನಿ ಚಾಪೆಲ್, ಫ್ಲಾರೆನ್ಸ್ ಕ್ಯಾಥೆಡ್ರಲ್, ಗಿಯಾಟೋ ಕ್ಯಾಂಪೆನೈಲ್ ಮುಂತಾದ ವಿನ್ಯಾಸಗಳಿಗೆ ಹಾಗೂ ಕ್ರಿಸ್ತನ ಬದುಕನ್ನು ನಿರೂಪಿಸುವ  ಸರಣಿ ಚಿತ್ರಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.

1570: ಫ್ರೆಂಚ್ ನವೋದಯದ ಕಾಲದ ಪ್ರಮುಖ ಶಿಲ್ಪಿ, ವಿನ್ಯಾಸಕಾರ ಮತ್ತು ಬರಹಗಾರ ಫಿಲ್ಬರ್ಟ್ ಡೆಲೋರ್ಮೆ ಪ್ಯಾರಿಸ್ ನಗರದಲ್ಲಿ ನಿಧನರಾದರು.   ಚಟಿಯೂ ಡಿ’ಅನೆಟ್ ಎಂಬ ಅವರ ವಿನ್ಯಾಸ ವಿಶ್ವಪ್ರಸಿದ್ಧಿ ಪಡೆದಿದೆ.

1642: ವಿಜ್ಞಾನ ಕ್ರಾಂತಿಯ ಮಹಾಪುರುಷರಲ್ಲಿ ಪ್ರಮುಖರಾದ  ಭೌತಶಾಸ್ತ್ರಜ್ಞಗಣಿತಜ್ಙಖಗೋಳ ಶಾಸ್ತ್ರಜ್ಞ ಮತ್ತು ತತ್ವಶಾಸ್ತ್ರಜ್ಞ ಗೆಲಿಲಿಯೋ ಗೆಲೆಲಿ ಅವರು ಇಟಲಿಯ ಗ್ರಾಂಡ್ ಡಚ್ಚಿ ಆಫ್ ಟಸ್ಕನಿ ಬಳಿಯ ಅರ್ಸೆಟ್ರಿ ಎಂಬಲ್ಲಿ ನಿಧನರಾದರು.  ಖಗೋಳ ಅನ್ವೇಷಣೆಗಳಿಗೆ   ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟವರಾಗಿದ್ದಾರೆ

1941: ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ ಅವರು ಕೀನ್ಯಾದ ನಯ್ಯೇರಿ ಎಂಬಲ್ಲಿ ನಿಧನರಾದರು. ಇವರು   ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು. ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತಾದ ತಮ್ಮ  ಚಿಂತನೆಗಳನ್ನು,  ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ನಡೆಸಿದ ಸ್ಥಳೀಯ ಹುಡುಗರ ಕ್ಯಾಂಪ್  ಮೂಲಕ 1907ರ ವರ್ಷದಲ್ಲಿ ಕಾರ್ಯರೂಪಕ್ಕೆ ತಂದರು.  ಇದು ಮುಂದೆ ಸ್ಕೌಟ್ ಚಳುವಳಿಯಾಗಿ ರೂಪುಗೊಂಡಿತು.  1908ರಲ್ಲಿ  ‘ಸ್ಕೌಟಿಂಗ್ ಫಾರ್ ಬಾಯ್ಸ್’ ಎಂಬ ಪುಸ್ತಕವನ್ನು ಬರೆದರು

1958: ಕಟ್ಟಡಗಳ ನಿರ್ಮಾಣದಲ್ಲಿ ಮಹಿಳೆಯರು ಅಪರೂಪವಾಗಿದ್ದ ಕಾಲದಲ್ಲಿ ಪ್ರಸಿದ್ಧ ಕಟ್ಟಡ ವಿನ್ಯಾಸಕಾರರಾಗಿದ್ದ ಮೇರಿ ಎಲಿಜಬೆತ್ ಕೊಲ್ಟರ್ ನಿಧನರಾದರು.  ಗ್ರಾಂಡ್ ಕ್ಯಾನ್ಯನ್ ನ್ಯಾಷನಲ್ ಪಾರ್ಕ್, ಹೋಪಿ ಹೌಸ್, ಹರ್ಮಿಟ್ಸ್ ರೆಸ್ಟ್, ಲುಕ್ ಔಟ್ ಸ್ಟುಡಿಯೋ, ಡೆಸರ್ಟ್ ವ್ಯೂ ವಾಚ್ ಟವರ್ ಮುಂತಾದ ಅನೇಕ ಪ್ರಸಿದ್ಧ  ವಿನ್ಯಾಸಗಳಿಗೆ ಇವರು ಹೆಸರಾಗಿದ್ದಾರೆ.

1997: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕದ ಜೈವಿಕ ವಿಜ್ಞಾನಿ ಮೆಲ್ವಿನ್ ಕ್ಯಾಲ್ವಿನ್ ಅವರು  ಕ್ಯಾಲಿಫೋರ್ನಿಯಾದ  ಬರ್ಕ್ಲಿ ಎಂಬಲ್ಲಿ ನಿಧನರಾದರು.  ಜೀವ ರಸಾಯನಶಾಸ್ತ್ರ, ದ್ಯುತಿ ಸಂಶ್ಲೇಷಣಾ ಕ್ರಿಯೆಗಳಲ್ಲಿನ ಜೈವಿಕ ಸಂಶ್ಲೇಷಣೆಗಳನ್ನು ಸ್ಪುಟಗೊಳಿಸಿದವರೆಂದು ಇವರು ಪ್ರಸಿದ್ಧಿ ಪಡೆದಿದ್ದಾರೆ.

1998: ‘ಬಬಲ್ ಗಮ್’ ಕಂಡುಹಿಡಿದ ಅಮೆರಿಕನ್ ವರ್ತಕ ವಾಲ್ಟೇರ್ ಇ. ಡೀಮರ್,  ಪೆನ್ಸಿಲ್ವೇನಿಯಾದ ಲ್ಯಾನ್ಕಾಸ್ಟರ್ ಎಂಬಲ್ಲಿ 93ನೇ ವಯಸ್ಸಿನಲ್ಲಿ ನಿಧನರಾದರು. ಫ್ಲೀರ್ ಚ್ಯುಯಿಂಗ್ ಗಮ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ತಮ್ಮ ಬಿಡುವಿನ ವೇಳೆಯಲ್ಲಿ ಗಮ್ ಖಾದ್ಯಗಳ ಜೊತೆಗೆ ಸಂಶೋಧನಾತ್ಮಕವಾಗಿ ಆಟವಾಡುತ್ತಿದ್ದರು.  ಹೀಗೆ ಆಟವಾಡುತ್ತಿದ್ದ ಅವರಿಗೆ, 1928ರ ಒಂದು ದಿನದಲ್ಲಿ  ಬಬಲ್ ಗಮ್ ಅನ್ನು ಕಂಡು ಹಿಡಿಯುವುದು ಸಾಧ್ಯವಾಯಿತು.

2002: ಆಸ್ಟ್ರೇಲಿಯಾದಲ್ಲಿ ಜನಿಸಿದ ರಷ್ಯಾದ ಭೌತವಿಜ್ಞಾನಿ ಅಲೆಗ್ಸಾಂಡರ್ ಪ್ರೊಖೋರೋವ್ ಮಾಸ್ಕೋದಲ್ಲಿ ನಿಧನರಾದರು.  ಲೇಸರ್ಸ್ ಮತ್ತು ಮಾಸರ್ಸ್ ಕುರಿತಾದ ಮಹತ್ವದ ಸಂಶೋಧನೆಗಳಿಗಾಗಿ ಇವರಿಗೆ 1964ರಲ್ಲಿ ಭೌತಶಾಸ್ತ್ರದಲ್ಲಿನ ನೊಬೆಲ್ ಪ್ರಶಸ್ತಿ ಸಂದಿತ್ತು.