ದಿನಾಚರಣೆಗಳು:
ಅನಿವಾಸಿ ಭಾರತೀಯರ ದಿನ
ಅನಿವಾಸಿ ಭಾರತೀಯರು ಭಾರತದ ಅಭಿವೃದ್ಧಿಗೆ ನೀಡಿರುವ ಕೊಡುಗೆಯ ಗೌರವಾರ್ಥವಾಗಿ ಈ ದಿನವನ್ನು ‘ಅನಿವಾಸಿ ಭಾರತೀಯರ ದಿನ’ ಎಂದು ಆಚರಿಸಲಾಗುತ್ತಿದೆ. ಈ ದಿನ ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 1915ರ ವರ್ಷದಲ್ಲಿ ಹಿಂದಿರುಗಿದ ದಿನಕ್ಕೆ ಹೊಂದಿಕೊಂಡ ಮಹತ್ವವನ್ನೂ ಒಳಗೊಂಡಿದೆ.
ಪ್ರಮುಖಘಟನಾವಳಿಗಳು:
475: ಬೈಜಾಂಟೈನ್ ಚಕ್ರವರ್ತಿ ಜೆನೋಗೆ ಅವನ ರಾಜಧಾನಿಯಾದ ಕಾನ್ ಸ್ಟಾಂಟಿನೋಪಲ್ ತೊರೆಯುವುದು ಅನಿವಾರ್ಯವಾಗಿ, ಆತನ ಸೈನ್ಯಾಧಿಕಾರಿಯಾಗಿದ್ದ ಬ್ಯಾಸಿಲಿಸ್ಕಸ್ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸಿದ
1760: ಬರಾರಿ ಘಾಟ್ ಯುದ್ಧದಲ್ಲಿ ಅಹ್ಮದ್ ಷಾ ದುರಾನಿ ಮರಾಠರನ್ನು ಸೋಲಿಸಿದ
1793: ಜೀನ್ ಪಿಯೆರೆ ಬ್ಲಾನ್ಚರ್ಡ್ ಬಲೂನಿನಲ್ಲಿ ಹಾರಾಟ ನಡೆಸಿದ ಪ್ರಥಮ ಅಮೆರಿಕನೆನಿಸಿದ.
1799: ನೆಪೋಲಿಯನ್ ಯುದ್ದಗಳಲ್ಲಿ ಗ್ರೇಟ್ ಬ್ರಿಟನ್ನಿನ ಸಿದ್ಧತೆಗಳಿಗೆ ಹಣ ಕ್ರೋಡೀಕರಿಸಲು, ಪ್ರಧಾನಿ ‘ವಿಲಿಯಂ ಪಿಟ್ ದಿ ಯಂಗರ್’ ಅವರು ಪೌಂಡ್ ಒಂದಕ್ಕೆ ಎರಡು ಶಿಲ್ಲಾಂಗ್ ಆದಾಯ ತೆರಿಗೆ ಜಾರಿಗೆ ತಂದರು.
1816: ಸರ್ ಹಂಫ್ರಿ ಡವಿ ಅವರು ತಾವು ಸಿದ್ಧಪಡಿಸಿದ ಸೇಫ್ಟಿ ಲ್ಯಾಂಪ್ ಅನ್ನು, ಹೆಬರ್ನ್ ಕೊಲೈರಿ ಗಣಿ ಕಾರ್ಮಿಕರ ಉಪಯೋಗದಲ್ಲಿ ಪ್ರಯೋಗ ನಡೆಸಿದರು.
1822: ಪೋರ್ಚುಗೀಸ್ ರಾಜಕುಮಾರ ಬ್ರೆಜಿಲ್ಲಿನ ಮೊದಲನೇ ಪೆಡ್ರೋ, ತನ್ನ ಮೇಲೆ ದೊರೆ ಆರನೇ ಜೋವೋ ವಿಧಿಸಿದ ಗಡೀಪಾರು ಆಜ್ಞೆಯನ್ನು ಲೆಕ್ಕಿಸದೆ, ಬ್ರೆಜಿಲ್ ದೇಶದಲ್ಲೇ ಉಳಿದ. ಈ ಘಟನೆ ಬ್ರೆಜಿಲ್ ದೇಶದ ಸ್ವಾತಂತ್ರ್ಯ ಚಳುವಳಿಯ ಪ್ರಾರಂಭವೆನಿಸಿತು.
1839: ಪ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಡಾಗ್ಯುಯೆರಿಯೋಟೈಪ್ ಛಾಯಾಚಿತ್ರ ಸಂಸ್ಕರಣೆಯ ಪೂರ್ಣ ವಿವರಣೆಗಳನ್ನು ಪ್ರಕಟಪಡಿಸಿತು. ಖ್ಯಾತ ಖಗೋಳ ತಜ್ಞ ಹಾಗೂ ಭೌತತಜ್ಞ ‘ಡಿ.ಎಫ್.ಜೆ. ಆರಗೊ’ ಈ ವಿವರಗಳನ್ನು ಪ್ರಕಟಿಸಿದರು. ಫ್ರಾನ್ಸಿನ ಜೋಸೆಫ್ ನೀಸೆಫೋರ್ ನೀಪೆಸ್ ಅವರು 1926-27ರಲ್ಲಿ ಮೊತ್ತ ಮೊದಲ ಫೊಟೋಗ್ರಾಫ್ ತಯಾರಿಸಿದ್ದರೂ ಅದು ಕಡಿಮೆ ಗುಣಮಟ್ಟದ್ದಾಗಿತ್ತು. ಆ ಸಂಸ್ಕರಣಾ ವಿಧಾನದಲ್ಲಿ ಒಂದು ಚಿತ್ರವನ್ನು ಕಾಣಲು 8 ಗಂಟೆ ಬೇಕಾಗುತ್ತಿತ್ತು. ಲೂಯಿ ಡ್ಯಾಗುಯೆರೆ ಅಭಿವೃದ್ಧಿ ಪಡಿಸಿದ ಡಾಗ್ಯುಯೆರಿಯೋಟೈಪ್ ಸಂಸ್ಕರಣಾ ವಿಧಾನದಲ್ಲಿ ಚಿತ್ರಗಳನ್ನು ಕೇವಲ 20-30 ನಿಮಿಷಗಳಲ್ಲಿ ಕಾಣುವುದು ಸಾಧ್ಯವಾಯಿತು.
1894: ನ್ಯೂ ಇಂಗ್ಲೆಂಡ್ ಟೆಲಿಫೋನ್ ಮತ್ತು ಟೆಲಿಗ್ರಾಫ್ ಸಂಸ್ಥೆಯು ಪ್ರಥಮ ಬ್ಯಾಟರಿ ಚಾಲಿತ ಸ್ವಿಚ್ ಬೋರ್ಡ್ ಅನ್ನು ಮಸ್ಸಚುಸೆಟ್ಸ್ ಪ್ರದೇಶದ ಲೆಕ್ಸಿಂಗ್ಟನ್ ಕೇಂದ್ರದಲ್ಲಿ ಅಳವಡಿಸಲಾಯಿತು.
1909: ದಕ್ಷಿಣ ಧ್ರುವಕ್ಕೆ ಕೈಗೊಂಡ ‘ನಿಮ್ರೋಡ್ ಎಕ್ಸ್ಪೆಡಿಶನ್’ ಸಾಹಸ ಯಾತ್ರೆಯಲ್ಲಿ, ತಂಡದ ನಾಯಕರಾದ ಅರ್ನೆಸ್ಟ್ ಶಾಕಲ್ಟನ್ ಅವರು ದಕ್ಷಿಣ ಧ್ರುವದಿಂದ 97 ನಾಟಿಕಲ್ ಮೈಲು ದೂರದಲ್ಲಿ (ಅಂದರೆ 180 ಕಿಲೋಮೀಟರ್ ದೂರದಲ್ಲಿ) ಬ್ರಿಟಿಷ್ ಧ್ವಜವನ್ನು ಏರಿಸಿದರು. ಅಂದಿನ ದಿನಗಳವರೆಗೆ ಅದು ದಕ್ಷಿಣ ಧ್ರುವದಲ್ಲಿ ಕೈಗೊಂಡ ಗರಿಷ್ಟ ದೂರದ ಕ್ರಮಿಕೆಯಾಗಿತ್ತು.
1916: ಒಂದನೇ ವಿಶ್ವ ಮಹಾಯುದ್ಧದಲ್ಲಿ, ತನ್ನ ವಿರೋಧಿ ಪಡೆಗಳನ್ನು ಸಂಪೂರ್ಣವಾಗಿ ಕಾಲ್ತೆಗೆಯುವಂತೆ ಮಾಡಿದ ಒಟ್ಟಾಮನ್ ಸಾಮ್ರಾಜ್ಯವು ಪೂರ್ಣ ವಿಜಯ ಸಾಧಿಸಿತು. ಇದರೊಂದಿಗೆ ‘ದಿ ಬ್ಯಾಟಲ್ ಆಫ್ ಗಲ್ಲಿಪೊಲಿ’ ಮುಕ್ತಾಯಗೊಂಡಿತು.
1917: ‘ಬ್ಯಾಟಲ್ ಆಫ್ ರಫ’ ಕದನವು ಈಜಿಪ್ಟ್ ಗಡಿಪ್ರದೇಶದಲ್ಲಿ ಪ್ಯಾಲೆಸ್ಟೈನ್ ಜೊತೆಗೆ ನಡೆಯಿತು.
1918: ಅಮೇರಿಕನ್ ಇಂಡಿಯನ್ನರ ಕೊನೆಯ ಯುದ್ಧವಾದ ಬ್ಯಾಟಲ್ ಆಫ್ ಬೇರ್ ವ್ಯಾಲಿ ನಡೆಯಿತು.
1923: ಸ್ಪೇನ್ ದೇಶದ ಜುವಾನ್ ಡಿ ಲಾ ಸಿಯೆರ್ವಾ ಅವರು ಆಟೋಜೈರೊ ವಿಮಾನ ನಿರ್ಮಿಸಿದರು. ವಿಮಾನವು ಹೆಚ್ಚಿನ ಎತ್ತರದಲ್ಲಿ ಹಾರಲು, ಮೇಲೇರಲು ಮತ್ತು ಕೆಳಗಿಳಿಯಲು ಸಹಾಯಕವಾಗುವಂತೆ ಸ್ವಯಂಚಾಲಿತ ರೋಟರ್ ಅನ್ನು ಈ ನಿರ್ಮಾಣದಲ್ಲಿ ಅಳವಡಿಸಿದ್ದರು. ಈ ರೋಟರ್ ತನ್ನ ಚಲನೆಯನ್ನು ತಿರುಗುವ ಪ್ರೊಪೆಲರ್ ಮೂಲಕ ಪಡೆದುಕೊಳ್ಳುವ ವ್ಯವಸ್ಥೆ ಈ ನಿರ್ಮಾಣದಲ್ಲಿತ್ತು .
1941: ಎರಡನೇ ಮಹಾಯುದ್ಧದಲ್ಲಿ ಮೊದಲ ಏವ್ರೋ ಲ್ಯಾನ್ಕ್ಯಾಸ್ಟರ್ ವಿಮಾನವನ್ನು ಬಳಸಲಾಯ್ತು. ಇದು ಬ್ರಿಟಿಷ್ ರಾಯಲ್ ಏರ್ ಫೋರ್ಸಿಗಾಗಿ ಏವ್ರೋ ತಯಾರಿಸಿದ ನಾಲ್ಕು ಇಂಜಿನ್ ಯುಕ್ತ ಬಾಂಬ್ ಮಳೆ ಸುರಿಸುವ ದೈತ್ಯ ವಿಮಾನವಾಗಿತ್ತು.
1957: ಸ್ಯೂಯೇಜ್ ಕಾಲುವೆಯನ್ನು ಈಜಿಪ್ಟ್ ಸಾಮ್ರಾಜ್ಯದಿಂದ ಹಿಂದೆ ಪಡೆಯಲು ವಿಫಲರಾಗಿದ್ದಕ್ಕಾಗಿ ಬ್ರಿಟಿಷ್ ಪ್ರಧಾನಿ ಸರ್ ಆಂತೋನಿ ಈಡೆನ್ ಅವರು ತಮ್ಮ ರಾಜಿನಾಮೆ ಸಲ್ಲಿಸಿದರು.
1915: ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಕಾನೂನುಭಂಗ ಚಳವಳಿ ನಡೆಸಿದ ಬಳಿಕ ಮುಂಬೈಗೆ ಹಿಂದಿರುಗಿದರು. ಅಪೋಲೊ ಬಂದರಿಗೆ ಅವರಿದ್ದ ಹಡಗು ಬಂದಾಗ, ಅವರನ್ನು ಎದುರುಗೊಳ್ಳಲು ವೈಸ್ರಾಯ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ಹಾಜರಿದ್ದರು.
1982: ಡಾ. ಎಸ್. ಝಡ್. ಖಾಸಿಂ ಅವರ ನೇತೃತ್ವದಲ್ಲಿ ದಕ್ಷಿಣ ಧ್ರುವದ ಅಂಟಾರ್ಕ್ಟಿಕಾ ಕಡೆಗೆ ಭಾರತದ ಮೊದಲ ಸಂಶೋಧನಾ ತಂಡವು ತನ್ನ ಪಯಣ ಕೈಗೊಂಡಿತು.
1992: 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಜಿ. ಎಸ್. ಶಿವರುದ್ರಪ್ಪನವರ ಸಮ್ಮೆಳನಾಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಆರಂಭಗೊಂಡಿತು.
2006: ಅರುಂಧತಿ ರಾಯ್ ಅವರ ರಾಜಕೀಯ ಪ್ರಬಂಧಗಳ ಸಂಕಲನವಾದ ‘ದಿ ಅಲ್ಜೀಬ್ರಾ ಆಫ್ ಇನ್ಫಿನೈಟ್ ಜಸ್ಟೀಸ್’ ಕೃತಿಯನ್ನು 2005ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಗ್ಲಿಷ್ ಸಾಹಿತ್ಯ ಪ್ರಶಸ್ತಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಆಪಲ್ ಸಂಸ್ಥೆಯ ಮುಖ್ಯಸ್ಥರಾದ ಸ್ಟೀವ್ ಜಾಬ್ಸ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಮ್ಯಾಕ್ ವರ್ಲ್ಡ್ ಕೀ ನೋಟ್ ಭಾಷಣದಲ್ಲಿ ಐಫೋನ್ ಪರಿಚಯಿಸಿದರು.
2007: ರೂಪಾ ಬಜ್ವಾ ಅವರ ‘ಸ್ಯಾರಿ ಶಾಪ್’ ಇಂಗ್ಲಿಷ್ ಕೃತಿಯನ್ನು, ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರನ್ನು ಗಲ್ಲಿಗೇರಿಸಿದ ಸಂದರ್ಭದ 27 ಸೆಕೆಂಡುಗಳ ಅವಧಿಯ ಸ್ಪಷ್ಟ ವಿಡಿಯೋ ಚಿತ್ರವೊಂದು ಅಂತರಜಾಲದಲ್ಲಿ ಪ್ರಸಾರಗೊಂಡಿತು. ಸದ್ದಾಮ್ ಅವರ ಕೊರಳಲ್ಲಿ ಆಗಿರುವ ಗಾಯ ಈ ವಿಡಿಯೋದಲ್ಲಿ ಎದ್ದು ಕಾಣುವಂತಿದ್ದು, ಸದ್ದಾಮ್ ಅವರನ್ನು ನೇಣಿಗೇರಿಸುವುದನ್ನು ಗುಪ್ತವಾಗಿ ಚಿತ್ರೀಕರಣ ಮಾಡಿದ ಎರಡನೆಯ ಸಾರ್ವಜನಿಕ ಬಹಿರಂಗ ಪುರಾವೆ ಇದಾಗಿದೆ. ಕ್ಯಾಮರಾ ಒಳಗೊಂಡ ಮೊಬೈಲಿನಿಂದ ಈ ಚಿತ್ರಿಕರಣ ಮಾಡಲಾಗಿದ್ದು, ಸದ್ದಾಮ್ ಅವರನ್ನು ನೇಣು ಹಾಕಿದ ಬಳಿಕ, ಕೆಳಕ್ಕೆ ಇಳಿಸಿ ಕಬ್ಬಿಣದ ಮಂಚದ ಮೇಲೆ ಮಲಗಿಸುವವರೆಗಿನ ಪೂರ್ಣ ಚಿತ್ರಣ ಇದರಲ್ಲಿದೆ.
2008: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಎ-ಸ್ಟಾರ್, ಸ್ಪ್ಲಾಷ್ ಮತ್ತು ಕಿಜಾಶಿ ಪರಿಕಲ್ಪನೆಯ ಕಾರುಗಳನ್ನು ಇಂದು ಮಾರುಕಟ್ಟೆಯಲ್ಲಿ ಪ್ರದರ್ಶಿಸಿತು. ಪ್ರಗತಿ ಮೈದಾನದಲ್ಲಿ ಆಟೋ ಎಕ್ಸ್ಪೋ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕಾರುಗಳ ಪರಿಕಲ್ಪನೆಯನ್ನು ವಿವರಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶೊಂಜಿ ನಕಾನಿಶಿ ಅವರು, ಈ ಮೂರೂ ಕಾರುಗಳು ಸಂಪೂರ್ಣವಾಗಿ ಭಾರತದಲ್ಲೇ ತಯಾರಾಗಲಿವೆ ಎಂದು ತಿಳಿಸಿದರು. ‘ಎ ಸ್ಟಾರ್’ ಕಾರಿನ ಕಲ್ಪನೆಯನ್ನು ಮೊತ್ತ ಮೊದಲ ಬಾರಿಗೆ ಭಾರತ ಮತ್ತು ಜಪಾನ್ ತಂತ್ರಜ್ಞರು ಜಂಟಿಯಾಗಿ ಸಿದ್ದಪಡಿಸಿದ್ದು, ಬೆಂಗಳೂರಿನ ಭಾರತ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದ ಸೌರವ್ ಮತ್ತು ರಾಜೇಶ್ ಎಂಬ ಇಬ್ಬರು ಯುವಕರು ಇದನ್ನು ವಿನ್ಯಾಸಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ .
2009: ಕಂದಾಯ ನಿವೇಶನ ಮತ್ತು ಅವುಗಳಲ್ಲಿ ನಿರ್ಮಿಸಿದ ಮನೆಗಳನ್ನು ನೋಂದಣಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. 2008ರ ಡಿಸೆಂಬರ್ 31ರವರೆಗೆ ನಿರ್ಮಾಣವಾದ ಮನೆ ಮತ್ತು ನಿವೇಶನಗಳಿಗೆ ಸರ್ಕಾರದ ಈ ನಿರ್ಧಾರ ಅನ್ವಯವಾಗುತ್ತದೆ ಎಂದು ಸಂಪುಟದ ಸಭೆಯ ನಂತರ ಸಚಿವೆ ಶೋಭಾ ಕರಂದ್ಲಾಜೆ ಪ್ರಕಟಿಸಿದರು.
2009: ಸತ್ಯಂ ಕಂಪ್ಯೂಟರಿನ ವ್ಯವಹಾರಗಳಲ್ಲಿ ಅನೇಕ ಅಕ್ರಮಗಳು ನಡೆದಿವೆ ಎಂಬ ವಿಚಾರದಲ್ಲಿನ ತನಿಖೆ ಹಿನ್ನೆಲೆಯಲ್ಲಿ, ಆ ಸಂಸ್ಥೆಗೆ ತಪ್ಪೊಪ್ಪಿಗೆ ಪತ್ರ ಬರೆದು ಅಲ್ಲಿನ ಮುಖ್ಯಸ್ಥ ಪದವಿಗೆ ರಾಜೀನಾಮೆ ಸಲ್ಲಿಸಿದ್ದ ರಾಮಲಿಂಗ ರಾಜು ಅವರು ಪೊಲೀಸರಿಗೆ ಶರಣಾದರು.
ಪ್ರಮುಖಜನನ/ಮರಣ:
1475: ಇಟಲಿಯ ವಿದ್ವಾಂಸ ಮತ್ತು ಬರಹಗಾರ ಪಿಯೆಟ್ರೊ ಕ್ರಿನಿಟಸ್ ಜನಿಸಿದರು. ಅವರು 1504ರಲ್ಲಿ ಪ್ರಕಟಿಸಿದ ‘ಕಾಮನ್ ಪ್ಲೇಸ್ ಬುಕ್’ (De honesta discipline) ಕೃತಿಯಿಂದ ಪ್ರಸಿದ್ಧರಾಗಿದ್ದಾರೆ. ನಾಸ್ಟ್ರಾಡಮಸ್ ಕೃತಿಗೆ ಇದು ಮೂಲಾಧಾರ ಕೃತಿಯಾಗಿದೆ.
1728: ಇಂಗ್ಲಿಷ್ ಇತಿಹಾಸಜ್ಞ, ಕವಿ ಮತ್ತು ವಿಮರ್ಶಕ ಥಾಮಸ್ ವಾರ್ಟನ್, ಇಂಗ್ಲೆಂಡಿನ ಹ್ಯಾಂಪಷೈರಿನ ಬಾಸಿಂಗ್ಸ್ಟೋಕ್ ಎಂಬಲ್ಲಿ ಜನಿಸಿದರು. ‘ಟು ದಿ ರಿವರ್ ಲೋಡನ್’ ಎಂಬ ಅವರ ಸಾನೆಟ್ ವಿಶ್ವಪ್ರಖ್ಯಾತವಾಗಿದೆ.
1818: ಫ್ರೆಂಚ್ ಶಿಲ್ಪಿ ಮತ್ತು ಛಾಯಾಗ್ರಾಹಕ ಆನ್ಟೋಯಿನ್ ಸಾಮ್ಯುಯೆಲ್ ಆಡಂ ಸಾಲೊಮನ್ ಫ್ರಾನ್ಸಿನ ಸಿಯೆನ್-ಎಟ್-ಮರ್ನೆ ಎಂಬಲ್ಲಿನ, ಲಾ ಫೆರ್ಟೆ ಎಂಬಲ್ಲಿ ಜನಿಸಿದರು. ವಿದ್ಯಾರ್ಥಿ ವೇತನ ಪಡೆದು ಸ್ವಿಟ್ಜರ್ಲ್ಯಾಂಡ್ ಮತ್ತು ಇಂಗ್ಲೆಂಡಿನಲ್ಲಿ ಶಿಲ್ಪಶಾಸ್ತ್ರ ಅಭ್ಯಾಸ ಮಾಡಿದ ಅವರ ಪ್ರಸಿದ್ಧ ಕೃತಿಗಳಲ್ಲಿ ವಿಕ್ಟರ್ ಕಸಿನ್, ಓಡಿಲಾನ್ ಬ್ಯಾರಟ್, ಪಿಯೆರೆ-ಜೀನ್ ಡಿ ಬೆರಾಂಗರ್, ಅಲ್ಫೋನ್ಸ್ ಡಿ ಲಮಾರ್ಟೈನ್, ಜಿಯಾಚಿನೋ ರೋಸ್ಸಿನಿ,ಮತ್ತು ಮೇರೀ ಆಂಟೋನೆಟ್ ಮುಂತಾದವು ಸೇರಿವೆ.
1822: ಪ್ರಖ್ಯಾತ ವಿನ್ಯಾಸಕಾರ ಕರೋಲ್ ಬೆನೆಶ್ ಜೆಕೊಸ್ಲವಾಕಿಯಾದ ಜಗೆರ್ನಡರೋಫ್ ಎಂಬಲ್ಲಿ ಜನಿಸಿದರು. ಪೆಲೆಸ್ ಕಾಸಲ್, ಸೈಂಟ್ ಜೋಸೆಫ್ ಕೆಥೆಡ್ರಲ್, ಬ್ರನ್ಕೊವೆನೆಸ್ಕ್ ಆಸ್ಪತ್ರೆ ನಿರ್ಮಾಣಗಳೇ ಅಲ್ಲದೆ ಟಿಸ್ಮಿನ ಮೊನಾಸ್ಟ್ರಿ ಮತ್ತು ಬಿಸಿಟ್ರಿಟ ಮೊನಾಸ್ಟ್ರಿಗಳ ಪುನರ್ನಿರ್ಮಾಣ ಕಾರ್ಯಗಳಲ್ಲೂ ಅವರ ಕಲಾತ್ಮಕ ವಿನ್ಯಾಸದ ಸೊಬಗು ಪ್ರಸಿದ್ಧಿಗೊಂಡಿದೆ.
1870: ಬ್ಯಾಸ್ಕ್ಯುಲ್ ಬ್ರಿಡ್ಜ್ ವಿನ್ಯಾಸದಲ್ಲಿ ಕ್ರಾಂತಿ ತಂದ ಅಮೇರಿಕಾದ ಜೋಸೆಫ್ ಸ್ಟ್ರಾಸ್ ಅವರು ಒಹಿಯೋ ಪ್ರಾಂತ್ಯದ ಸಿನ್ ಸಿನ್ನಾಟಿ ಎಂಬಲ್ಲಿ ಜನಿಸಿದರು. ಸಮುದ್ರ ಅಥವಾ ನದಿಗಳ ಮೇಲಿನ ಸೇತುವೆಗಳು, ಹಡಗು ಅಥವಾ ದೋಣಿಗಳಿಗೆ ಸಂಚಾರಕ್ಕೆ ಅನುವುಮಾಡಿಕೊಡಲು, ಮೇಲೆ ಏರುವುದು ಮತ್ತು ಇಳಿಯುವುದು ಬ್ಯಾಸ್ಕುಲ್ ಬ್ರಿಡ್ಜ್ ತಂತ್ರಜ್ಞಾನದ ವಿಶೇಷ. ಜೋಸೆಫ್ ಸ್ಟ್ರಾಸ್ ಅವರು ಪ್ರಸಿದ್ಧ ಗೋಲ್ಡನ್ ಗೇಟ್ ಬ್ರಿಡ್ಜಿನ ಪ್ರಧಾನ ವಿನ್ಯಾಸಕಾರರಾಗಿದ್ದರು.
1889: ಹಿಂದೀ ಸಾಹಿತಿ ವೃಂದಾವನಲಾಲ್ ವರ್ಮ ಅವರು ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಜನಿಸಿದರು. ಸಾಹಿತ್ಯಕ, ಸಾಮಾಜಿಕ ಕಾದಂಬರಿಗಳು ಹಾಗೂ ನಾಟಕಗಳಿಗೆ ಅವರು ಪ್ರಸಿದ್ಧರಾಗಿದ್ದರು. 1969ರಲ್ಲಿ ನಿಧನರಾದ ಇವರಿಗೆ ಪದ್ಮಭೂಷಣ ಪ್ರಶಸ್ತಿ, ಆಗ್ರಾ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಸೋವಿಯತ್ ನೆಹರೂ ಪ್ರಶಸ್ತಿ ಹಾಗೂ ಝಾನ್ಸಿ ಕಿ ರಾಣಿ ಕೃತಿಗೆ ಸರ್ಕಾರದ ಬಹುಮಾನ ಮುಂತಾದ ಅನೇಕ ಗೌರವಗಳು ದೊರೆತಿದ್ದವು.
1901: ಚಿಕ್ ಯಂಗ್ ಅವರು ಚಿಕಾಗೋದ ಇಲಿನಾಯ್ಸ್ ಎಂಬಲ್ಲಿ ಜನಿಸಿದರು. ಅವರ ಕಾಮಿಕ್ ಸರಣಿ ‘ಬ್ಲಾಂಡಿ’ ವಿಶ್ವಪ್ರಸಿದ್ಧಿ ಪಡೆದಿತ್ತು. 1973ರ ವರ್ಷದಲ್ಲಿ ನಿಧನರಾದರು.
1912: ಪ್ರಸಿದ್ಧ ಇಂಗ್ಲಿಷ್ ವಿನ್ಯಾಸಕಾರರಾದ ರಾಲ್ಫ್ ಟಬ್ಸ್ ಜನಿಸಿದರು. ಅನೇಕ ಸುಂದರ ಕಟ್ಟಡ ವಿನ್ಯಾಸಗಳಿಗೆ ಹೆಸರಾಗಿರುವ ಅವರ ನಿರ್ಮಾಣಗಳಲ್ಲಿ ‘ಡೋಮ್ ಆಫ್ ಡಿಸ್ಕವರಿ’ ಅತ್ಯಂತ ಪ್ರಸಿದ್ಧವಾಗಿದೆ.
1913: ಅಮೆರಿಕದ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಜನಿಸಿದ ದಿನ. 1969-74ರ ಅವಧಿಯಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೊದಲ ಅಮೆರಿಕನ್ ಅಧ್ಯಕ್ಷರೆನಿಸಿದ್ದಾರೆ.
1922: ಭಾರತೀಯ ಮೂಲಸ್ಥ, ಅಮೆರಿಕದ ಪ್ರಜೆಯಾದ ಹರ ಗೋವಿಂದ ಖೊರಾನ ಅವರು ಈಗಿನ ಪಾಕಿಸ್ತಾನದ ಭಾಗವಾಗಿರುವ ಬ್ರಿಟಿಷ್ ಭಾರತದ ರಾಯಪುರದಲ್ಲಿ ಜನಿಸಿದರು. ‘ಕೊಎಂಸೈಮ್ ಎ’ ಎಂಬ ರಾಸಾಯನಿಕ ವಸ್ತುಗಳನ್ನು ತಯಾರು ಮಾಡಿದ್ದು ಹರಗೋವಿಂದ ಖೊರಾನ ಅವರ ಒಂದು ದೊಡ್ಡ ಸಂಶೋಧನೆ. ಇದಲ್ಲದೆ ಜೀವಗಳ ಉತ್ಪತ್ತಿಯಲ್ಲಿ ಬಹುಮುಖ್ಯ ಪಾತ್ರವಹಿಸುವ ಕೃತಕ ವಂಶವಾಹಿಯನ್ನು (ಜೀನ್ ಅನ್ನು) ಹರಗೋವಿಂದ ಖೊರಾನ ಮತ್ತು ಅವರ ತಂಡದವರು ಪ್ರಯೋಗಾಲಯದಲ್ಲಿ ತಯಾರು ಮಾಡಿ ಜಗತ್ತಿನ ಶ್ಲಾಘನೆಗೆ ಪಾತ್ರರಾದರು. 1968ರ ವರ್ಷದಲ್ಲಿ ಮಾರ್ಷಲ್ ಡಬ್ಲ್ಯೂ. ನಿರೆನ್‌ಬರ್ಗ್ ಮತ್ತು ರಾಬರ್ಟ್ ಡಬ್ಲ್ಯೂ. ಹಾಲಿ ಅವರುಗಳ ಜತೆ ಖೊರಾನ ಅವರಿಗೆ ಔಷಧ ವಿಜ್ಞಾನ ಕ್ಷೇತ್ರದಲ್ಲಿನ ನೊಬೆಲ್ ಪುರಸ್ಕಾರ ಸಂದಿದೆ.
1927: ‘ಚಿಪ್ಕೋ’ ಪರಿಸರ ಸಂರಕ್ಷಣಾ ಚಳುವಳಿಯ ಹರಿಕಾರ, ಮಹಾತ್ಮ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳ ಪ್ರತಿಪಾದಕ, ಸುಂದರಲಾಲ್ ಬಹುಗುಣ ಅವರು ಉತ್ತರಖಾಂಡದ, ತೆಹ್ರಿ ಘರ್ವಾಲ್ ಪ್ರದೇಶದ ಮರೋದ ಗ್ರಾಮದಲ್ಲಿ ಜನಿಸಿದರು. 1970ರಲ್ಲಿ ಚಿಪ್ಕೋ ಚಳುವಳಿಯ ಸದಸ್ಯರಾಗಿ, ನಂತರದಲ್ಲಿ ತೆಹ್ರಿ ಬೃಹತ್ ಆಣೆಕಟ್ಟಿನ ವಿರುದ್ಧ ಹೀಗೆ ಅವರು ನಿರಂತರವಾಗಿ ಹಿಮಾಲಯದಲ್ಲಿನ ಕಾಡುಗಳ ಸಂರಕ್ಷಣೆಗೆ ಟೊಂಕಕಟ್ಟಿ ಹೋರಾಟ ನಡೆಸಿದರು. ಅನೇಕ ಗ್ರಂಥಗಳನ್ನೂ ರಚಿಸಿರುವ ಇವರಿಗೆ ಪದ್ಮಶ್ರೀ, ರೈಟ್ ಲೈವ್ಲಿ ಹುಡ್, ಜಮ್ನಾಲಾಲ್ ಬಜಾಜ್ ಪ್ರಶಸ್ತಿ, ಐ.ಐ.ಟಿ. ರೂರ್ಕೆಲಾದಿಂದ ಡಾಕ್ಟರ್ ಆಫ್ ಸೋಶಿಯಲ್ ಸೈನ್ಸಸ್ ಪದವಿ ಮತ್ತು ಪದ್ಮವಿಭೂಷಣ ಗೌರವಗಳು ಸಂದಿವೆ.
1952: ಭಾರತದ ಪ್ರಸಿದ್ಧ ಅರ್ಥ ಶಾಸ್ತ್ರಜ್ಞರಾದ ಕೌಶಿಕ್ ಬಸು ಕೋಲ್ಕೊತ್ತಾದಲ್ಲಿ ಜನಿಸಿದರು. ಅವರು ವಿಶ್ವಬ್ಯಾಂಕಿನ ಹಿರಿಯ ಉಪಾಧ್ಯಕ್ಷ ಮತ್ತು ಪ್ರಧಾನ ಅರ್ಥಶಾಸ್ತ್ರಜ್ಞ ಸ್ಥಾನವನ್ನು ಅಲಂಕರಿಸಿದ್ದರು. 2012ರ ವರೆಗೆ ಅವರು, ಭಾರತ ಸರ್ಕಾರದ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಪದ್ಮಭೂಷಣ ಪ್ರಶಸ್ತಿಯೇ ಅಲ್ಲದೆ ವಿಶ್ವದ ಪ್ರಸಿದ್ಧ ಸಂಸ್ಥೆಗಳ ಪ್ರಶಸ್ತಿ ಗೌರವಗಳೂ ಅವರನ್ನರಸಿ ಬಂದಿವೆ.
1953: ಮೃದಂಗ, ತಬಲಾ, ಢೋಲಕ್, ಡೋಲ್ಕಿ, ಖೋಲ್, ಖಂಜಿರ ಮತ್ತಿತರ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ಖ್ಯಾತಿ ಪಡೆದಿರುವ ಎಸ್. ಬಾಲಸುಬ್ರಹ್ಮಣ್ಯ ಬೆಂಗಳೂರಿನಲ್ಲಿ ಜನಿಸಿದರು. ಎಲ್ಲ ಪ್ರಮುಖ ಸಿನಿಮಾ ಸಂಗೀತ ಗಾಯಕರು, ಸುಗಮ ಸಂಗೀತ ಗಾಯಕರು ಮತ್ತು ಸಂಗೀತ ನಿರ್ದೇಶಕರೊಡನೆ ವಾದ್ಯ ನೀಡಿರುವ ಇವರಿಗೆ ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ , ಕರ್ನಾಟಕ ಕಲಾಶ್ರೀ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
1959: ಗ್ವಾಟೆಮಲನ್ ಅಂತರ್ಯುದ್ಧದ ಸಮಯದಲ್ಲಿ ಮತ್ತು ನಂತರದಲ್ಲಿ ಅಲ್ಲಿನ ಸ್ತ್ರೀ ಸಂರಕ್ಷಣೆ ಮತ್ತು ಮಾನವ ಹಕ್ಕುಗಳಿಗೆ ಹೋರಾಡಿದ ‘ರಿಗೋಬೆರ್ಟಾ ಮೆಂಚು ತುಮ್’, ಆ ದೇಶದ ಕ್ವಿಂಛೆ ಬಳಿಯ ಲಾಜ್ ಚಿಮೆಲ್ ಎಂಬಲ್ಲಿ ಜನಿಸಿದರು. 1992ರಲ್ಲಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.
1998: ಜಪಾನಿನ ರಸಾಯನ ಶಾಸ್ತ್ರಜ್ಞ ಕೆನಿಚಿ ಫುಕುಯಿ ಅವರು ಕ್ಯೋಟೋದಲ್ಲಿ ನಿಧನರಾದರು. ಮೆಕಾನಿಸಂಸ್ ಆಫ್ ಕೆಮಿಕಲ್ ರಿಯಾಕ್ಷನ್ಸ್ ಎಂಬ ಅವರ ಸಂಶೋಧನೆಗಳಿಗೆ 1981ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು.
1998: ಮಾರ್ಷಿಯಲ್ ಆರ್ಟ್ನಲ್ಲಿ ಪ್ರಸಿದ್ಧಿ ಪಡೆದ ಇಸ್ರೇಲಿನ ಇಮಿ ಲಿಚ್ ಟೆನ್ ಫೆಲ್ಡ್ ಅವರು ಆಸ್ಟ್ರಿಯಾ-ಹಂಗೆರಿಯಲ್ಲಿ ಜನಿಸಿದರು. ಇವರು ಮಾರ್ಷಿಯಲ್ ಆರ್ಟ್ನಲ್ಲಿ ‘ಕ್ರಾವ್ ಮಗ’ ಎಂಬ ಸ್ವಯಂ ರಕ್ಷಣಾ ಪದ್ಧತಿಯನ್ನು ರೂಪಿಸಿ ಪ್ರಸಿದ್ಧಿ ಪಡಿಸಿದ್ದರು.
2006: ಕೇರಳದ ಮಂಗಳಂ ಪ್ರಕಾಶನದ ಮಂಗಳ ಸಾಪ್ತಾಹಿಕದ ಮುಖ್ಯಸಂಪಾದಕ, ಪ್ರಕಾಶನ ಸಂಸ್ಥೆಯ ಮುಖ್ಯಸಂಪಾದಕ ಎಂ.ಸಿ. ವರ್ಗೀಸ್ ಅವರು, ಕೊಟ್ಟಾಯಮ್ಮಿನಲ್ಲಿ ನಿಧನರಾದರು. ಮಂಗಳ ಮಲಯಾಳಂ ದಿನಪತ್ರಿಕೆಯಲ್ಲದೆ, ಕನ್ನಡದ ಮಂಗಳ ವಾರಪತ್ರಿಕೆ, ಬಾಲ ಮಂಗಳ ಮತ್ತು ಗಿಳಿವಿಂಡು ವರ್ಗೀಸ್ ಅವರ ಅವರ ಒಡೆತನದ ಪ್ರಸಿದ್ಧ ಪತ್ರಿಕೆಗಳು.
2007: ಹಿರಿಯ ಪತ್ರಕರ್ತ ಮತ್ತು ಖ್ಯಾತ ಕಥೆಗಾರರಾದ ಜಿ.ಎಸ್. ಸದಾಶಿವ ಬೆಂಗಳೂರಿನಲ್ಲಿ ನಿಧನರಾದರು. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಸುಧಾ ವಾರಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ‘ಕನ್ನಡಪ್ರಭ’ದ ಕಾರ್ಯ ನಿರ್ವಾಹಕ ಸಂಪಾದಕರಾಗಿ ಸಹಾ ಸೇವೆ ಸಲ್ಲಿಸಿದ್ದರು. ಅನೇಕ ಕಥೆ, ಅನುವಾದ, ಮಕ್ಕಳ ಸಾಹಿತ್ಯ, ಸಂಪಾದನೆ ಮುಂತಾದವುಗಳಲ್ಲಿ ಕೃಷಿ ಮಾಡಿದ್ದ ಸದಾಶಿವ ಅವರು ಆಕ್ರಮಣ, ಮೂರು ದಾರಿಗಳು, ಆಕ್ಸಿಡೆಂಟ್ ಮತ್ತು ಮೌನಿ ಚಿತ್ರಗಳಿಗೆ ಚಿತ್ರಕತೆ ಮತ್ತು ಸಂಭಾಷಣೆಗಳನ್ನೂ ಬರೆದಿದ್ದರು.
2013: ಅಮೇರಿಕಾದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಜೇಮ್ಸ್ ಎಂ. ಬುಚಾನನ್ ವರ್ಜೀನಿಯಾದ ಬ್ಲಾಕ್ಸ್ ಬರ್ಗ್ ಎಂಬಲ್ಲಿ ನಿಧನರಾದರು. ಅವರು ತಮ್ಮ ‘ಪಬ್ಲಿಕ್ ಚಾಯ್ಸ್ ಥಿಯರಿ’ ಪ್ರತಿಪಾದನೆಗೆ ಪ್ರಸಿದ್ಧರಾಗಿದ್ದರು.
2014: ಅಮೇರಿಕಾದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ‘ಡೇಲ್ ಟಿ. ಮಾರ್ಟೆನ್ಸೆನ್’ ಅವರು, ಇಲಿನಾಯ್ಸ್ ಪ್ರದೇಶದ ವಿಲ್ಮೆಟ್ಟೆ ಎಂಬಲ್ಲಿ ನಿಧನರಾದರು. ಅವರು ‘ಸರ್ಚ್ ಅಂಡ್ ಮ್ಯಾಚಿಂಗ್ ಥಿಯರಿ ಆಫ್ ಫ್ರಿಕ್ಷನಲ್ ಅನ್ ಎಂಪ್ಲಾಯ್ಮೆಂಟ್’ ಎಂಬ ಸಂಶೋಧನೆಗೆ ಪ್ರಸಿದ್ಧಿ ಪಡೆದಿದ್ದರು.