Categories
e-ದಿನ

ಜನವರಿ-15

ದಿನಾಚರಣೆ
ಭಾರತದಲ್ಲಿ ಮಕರ ಸಂಕ್ರಾಂತಿ, ಮಾಘಿ, ಮಾಘೇ, ಪೊಂಗಲ್, ಉತ್ತರಾಯಣ ಹೀಗೆ ವಿವಿಧ ರೀತಿಯ ಸಂಭ್ರಮ
ಭಾರತದ ಎಲ್ಲ ಭಾಗಗಳಲ್ಲೂ ಸುಗ್ಗಿ ಸಂಭ್ರಮ ಅಥವಾ ಹೊಲಗದ್ದೆಗಳಲ್ಲಿ ಬೆಳಯ ಕಟಾವು ಸಂಭ್ರಮ, ಪರಿಸರಕ್ಕೆ ಕೃತಜ್ಞತೆ, ವಿವಿಧ ರೀತಿಯ ಸಂಸ್ಕೃತಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಭಾವಗಳನ್ನು ಹೊಸೆದುಕೊಂಡಿರುವ ವಿಶಿಷ್ಟ ಆಚರಣೆ ಸಂಕ್ರಾಂತಿ. ಒಂದು ದಿನದಿಂದ ಮೂರು ನಾಲ್ಕು ದಿನಗಳವರೆಗೆ ಈ ಹಬ್ಬ ವಿಧ ವಿಧಗಳಲ್ಲಿ ಹಲವು ಹೆಸರುಗಳಲ್ಲಿ ನಡೆಯುತ್ತವೆ.
ಅಸ್ಸಾಂನಲ್ಲಿ ಮಾಘ್ ಬಿಹು;
ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದಲ್ಲಿ ಮಾಘಿ;
ಭಾರತದ ಹಲವು ಕಡೆಗಳಲ್ಲಿ ಮಕರ ಸಂಕ್ರಾಂತಿ;
ಭೋಗೀ ಹಬ್ಬ;
ಎಳ್ಳು ಬೆಲ್ಲ ಹಬ್ಬ;
ನೇಪಾಳದಲ್ಲಿ ಮಾಘೇ ಸಂಕ್ರಾಂತಿ;ತಮಿಳು ನಾಡಿನಲ್ಲಿ ಥೈ ಪೊಂಗಲ್ ಹಬ್ಬ;
ಸುಗ್ಗೀ ಹಬ್ಬ
ಉತ್ತರಖಾಂಡ್, ಗುಜರಾತ್ ಮತ್ತು ರಾಜಾಸ್ಥಾನದಲ್ಲಿ ಉತ್ತರಾಯಣ
ಇತ್ಯಾದಿ, ಇತ್ಯಾದಿ,

ವಿಕಿಪೀಡಿಯಾ ದಿನ
ಅಂತರಜಾಲ ವಿಶ್ವಕೋಶಗಳಲ್ಲಿ ಪ್ರಮುಖವಾದ ವಿಕಿಪೀಡಿಯಾ 2001ರ ವರ್ಷದ ಜನವರಿ 15ರಂದು ಸಾರ್ವತ್ರಿಕವಾಗಿ ಲಭ್ಯವಾಯ್ತು. ಇದಕ್ಕೆ ಒಂದೈದು ದಿನ ಇದು ನ್ಯುಪೀಡಿಯಾ ಎಂಬ ಹೆಸರಿನಲ್ಲಿ ಅಂತರಜಾಲದಲ್ಲಿತ್ತು. ವಿಶ್ವದಲ್ಲಿ ಯಾರು ಬೇಕಾದರೂ ಜ್ಞಾನವನ್ನು ಸೇರಿಸಬಹುದಾದ ಮುಕ್ತ ವಿಶ್ವಕೋಶವಾಗಿರುವ ವಿಕಿಪೀಡಿಯಾ, ಇದುವರೆವಿಗೂ 295 ಭಾಷೆಗಳಲ್ಲಿ ಲಭ್ಯವಿದ್ದು ಅವುಗಳಲ್ಲಿ 284 ಕ್ರಿಯಾಶೀಲವಾಗಿವೆ. ವಿಕಿಪೀಡಿಯಯಾದಲ್ಲಿ ಲೇಖನ ಸೇರಿಸುವ ವಿಕಿಪೀಡಿಯನ್ನರು ವಿವಿಧೆಡೆಗಳಲ್ಲಿ ಹಾಗೂ ಅಂತರಜಾಲ ಸಂಪರ್ಕ ಮುಖೇನ ಒಂದಾಗಿ ಸೇರಿ ಈ ದಿನವನ್ನು ಹಲವು ರೀತಿಗಳಲ್ಲಿ ಸಂಭ್ರಮಿಸುತ್ತಾರೆ.

ಭಾರತೀಯ ಸೇನಾ ದಿನ

ಭಾರತದ ಸೇನಾ ದಿನವನ್ನು ಪ್ರತಿ ವರ್ಷ ಜನವರಿ 15ರಂದು ಆಚರಿಸಲಾಗುತ್ತದೆ. 1949ರ ಈ ದಿನದಂದು, ನಮ್ಮ ಕೊಡಗಿನವರಾದ ಫೀಲ್ಡ್ ಮಾರ್ಷಲ್ ಕೊಡನಂದೇರಾ ಮಾದಪ್ಪ ಕಾರ್ಯಪ್ಪ ಅವರು, ಸ್ವತಂತ್ರ ಭಾರತೀಯ ಸೇನೆಯ ಮೊಟ್ಟಮೊದಲ ಕಮಾಂಡ್ ಇನ್ ಚೀಫ್ ಆಗಿ ನಿಯುಕ್ತರಾದರು. ಭಾರತೀಯ ಸೈನಿಕರಲ್ಲಿ ಸ್ಫೂರ್ತಿ ತುಂಬುವ ಈ ಆಚರಣೆ, ಎಲ್ಲ ಪ್ರತೀಕೂಲ ಪರಿಸ್ಥಿತಿ ಮತ್ತು ಸವಾಲುಗಳ ನಡುವೆಯೂ, ದೇಶದ ರಕ್ಷಣೆಗಾಗಿ ಹಗಲಿರುಳೂ ಶ್ರಮಿಸುವ ಭಾರತೀಯ ಸೇನೆಯ ಸಮರ್ಪಣಾ ಮನೋಭಾವದ ಕುರಿತು ದೇಶಿಗರು ಚಿಂತಿಸುವ ಕ್ಷಣವೂ ಆಗಿದೆ. ಸೇನಾ ಕೇಂದ್ರ ಕಚೇರಿಗಳಲ್ಲಿ ಹಾಗೂ ರಾಷ್ಟ್ರದ ರಾಜಧಾನಿಯಲ್ಲಿ ಈ ಆಚರಣೆಯ ಪ್ರತೀಕವಾದ ಸೇನಾ ಕವಾಯತು ಪ್ರದರ್ಶನಗಳು ನಡೆಯುತ್ತವೆ.

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 69: ಓಥೋ ಕಾರ್ಯಾಚರಣೆ ನಡೆಸಿ ರೋಮ್ ಅಧಿಪತ್ಯದ ಆಡಳಿತವನ್ನು ಆಕ್ರಮಿಸಿಕೊಂಡು ತನ್ನನ್ನು ಚಕ್ರಾಧಿಪತಿ ಎಂದು ಘೋಷಿಸಿಕೊಂಡ.  ಆದರೆ, ಕೇವಲ ಮೂರು ತಿಂಗಳು ಮಾತ್ರಾ ಅಧಿಕಾರ ನಡೆಸಿ ಆತ್ಮಹತ್ಯೆ ಮಾಡಕೊಂಡ

1559: ಮೊದಲನೇ  ಎಲಿಜಬೆತ್ ಅವರು ಇಂಗ್ಲೆಂಡ್ ಮತ್ತು ವೆಸ್ಟ್ ಮಿನಿಸ್ಟರ್ ಅಬ್ಬೆಯ ರಾಣಿಯಾದರು.

1759: ಪ್ರಸಿದ್ಧ ಬ್ರಿಟಿಷ್ ವಸ್ತುಸಂಗ್ರಹಾಲಯವು ‘ಮಾಂಟಗೋ ಹೌಸ್’ನಲ್ಲಿ ಪ್ರಾರಂಭಗೊಂಡಿತು.  ಈ ಸಂಗ್ರಹಾಲಯದಲ್ಲಿ ಪ್ರಸಕ್ತದಲ್ಲಿ  80 ಲಕ್ಷಕ್ಕೂ ಹೆಚ್ಚು ವಸ್ತುಗಳಿವೆ.

1782: ಅಮೇರಿಕದ ಕಾಂಗ್ರೆಸ್ ಮುಂದೆ, ಆರ್ಥಿಕ ಸೂಪರಿಂಟೆಂಡೆಂಟರಾದ ರಾಬರ್ಟ್ ಮೋರಿಸ್ ಅವರು ರಾಷ್ಟ್ರೀಯ ಮಟ್ಟದಲ್ಲಿ ನಾಣ್ಯಗಳನ್ನು ತಯಾರಿಸುವ  ಮಿಂಟ್ ವ್ಯವಸ್ಥೆಯನ್ನು ನಿರ್ಮಿಸಿ ನಾಣ್ಯಗಳನ್ನು ತಯಾರಿಸುವ ಪ್ರಸ್ತಾಪವನ್ನು ಮುಂದಿರಿಸಿದರು.

1870: ರಾಜಕೀಯದ ಕುರಿತಾದ ಪ್ರಥಮ ವ್ಯಂಗ್ಯಚಿತ್ರ ಮೂಡಿಬಂತು.  “ಎ ಲೈವ್ ಜಕಾಸ್ ಕಿಕ್ಕಿಂಗ್ ಡೆಡ್ ಲಯನ್” ಎಂಬ ಥಾಮಸ್ ನಾಸ್ಟ್ ಅವರು ಮೂಡಿಸಿದ ವ್ಯಂಗ್ಯಚಿತ್ರವು ಹಾರ್ಪರ್ಸ್ ವೀಕ್ಲಿ ಪತ್ರಿಕೆಯಲ್ಲಿ  ಪ್ರಕಟಗೊಂಡಿತು.  ಈ ವ್ಯಂಗ್ಯ ಚಿತ್ರವು ಡೆಮೊಕ್ರಾಟಿಕ್ ಪಕ್ಷವನ್ನು ಕತ್ತೆಯಂತೆ ಬಿಂಬಿಸಿತ್ತು.

1889: ಪೆಂಬರ್ಟನ್ ಮೆಡಿಸನ್ ಎಂಬ ಹೆಸರಿನಲ್ಲಿ ‘ದಿ ಕೋಕಾ-ಕೋಲಾ ಕಂಪೆನಿ’ಯು ಅಟ್ಲಾಂಟ ನಗರದಲ್ಲಿ ಪ್ರಾರಂಭಗೊಂಡಿತು.

1908: ಆಲ್ಫಾ ಕಪ್ಪ ಅಲ್ಫಾ ಸೊರಾರಿಟಿ ಎಂಬ ಗ್ರೀಕ್ ಆಕ್ಷರದ ಸಂಸ್ಥೆ  ಆಫ್ರಿಕನ್ ಅಮೆರಿಕನ್ ಮಹಿಳೆಯರ ಕಾಲೇಜಿನಲ್ಲಿ ಆರಂಭಗೊಂಡಿತು.

1910: ಅಂದಿನ ದಿನದಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ ಆಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿದ್ದ, 325 ಅಡಿ ಎತ್ತರದ ‘ಬಫೆಲೋ ಬಿಲ್ ಡ್ಯಾಮ್’, ಅಮೇರಿಕಾದ  ವ್ಯೋಮಿಂಗ್ ಬಳಿಯ ಪಾರ್ಕ್ ಕೌಂಟಿ ಎಂಬಲ್ಲಿ ಪೂರ್ಣಗೊಂಡಿತು.

1934: ನೇಪಾಳ ಮತ್ತು ಬಿಹಾರದ ಪ್ರಾಂತ್ಯಗಳನ್ನು ಜರ್ಜರಿಸಿದ 8 ಪ್ರಮಾಣದ ಭೂಕಂಪದಲ್ಲಿ 6,000 ದಿಂದ 10,700 ಜನರು ಸಾವಿಗೀಡಾದರು.

1936: ಪೂರ್ಣವಾಗಿ ಗಾಜಿನಿಂದಾವೃತವಾದ ಕಟ್ಟಡವನ್ನು ‘ಓವೆನ್ಸ್ – ಇಲ್ಲಿನಾಯ್ಸ್ ಗ್ಲಾಸ್ ಕಂಪೆನಿ’ಗಾಗಿ ಒಹಿಯೋದ ಟೊಲೇಡೋ ಎಂಬಲ್ಲಿ ನಿರ್ಮಿಸಲಾಯಿತು.

1943: ‘ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್’ ಸಂಸ್ಥೆಯ ಪ್ರಧಾನ ಕಚೇರಿಯಾದ ‘ಪೆಂಟಾಗನ್’, ವರ್ಜೀನಾಯಾದ ಅರ್ಲಿಂಗ್ಟನ್ ಎಂಬಲ್ಲಿ ಕಾರ್ಯಾರಂಭ ಮಾಡಿತು.

1949: ಜನರಲ್ ಕೆ.ಎಂ. ಕಾರಿಯಪ್ಪ ಅವರು ಭಾರತದ ಪ್ರಪ್ರಥಮ ಸೇನಾ ದಂಡನಾಯಕರಾಗಿ ಸರ್ ರಾಯ್ ಬೌಚರ್ ಅವರಿಂದ ಅಧಿಕಾರ ವಹಿಸಿಕೊಂಡರು. 1986ರ ವರ್ಷದಲ್ಲಿ ಇವರಿಗೆ  ‘ಫೀಲ್ಡ್ ಮಾರ್ಷಲ್’ ಗೌರವವನ್ನು ದೇಶ ಸಮರ್ಪಿಸಿತು.

1969: ಸೋವಿಯತ್ ಯೂನಿಯನ್ ‘ಸೋಯುಜ್ 5’ ಬಾಹ್ಯಾಕಾಶ  ನೌಕೆಯನ್ನು ಉಡಾಯಿಸಿತು.

1973: ಶಾಂತಿಪೂರ್ವಕ ಮಾತುಕತೆಗಳಲ್ಲಿ ಕಂಡುಬಂದ ಪ್ರಗತಿಯ ಹಿನ್ನೆಲೆಯಲ್ಲಿ, ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಉತ್ತರ ವಿಯೆಟ್ನಾಮ್ ನಲ್ಲಿ ನಡೆಸುತ್ತಿರುವ ಆಕ್ರಾಮಕ  ಕಾರ್ಯಾಚರಣೆಗೆ ತಾತ್ಕಾಲಿಕ ತಡೆಯನ್ನು ಘೋಷಿಸಿದರು.

1986: ಇಂಡಿಯನ್ ಏರ್ಲೈನ್ಸ್ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ  ಕೂಡಿದ  ಮೊಟ್ಟ ಮೊದಲ ವಾಣಿಜ್ಯ ಪ್ರಯಾಣಿಕರ ವಿಮಾನ ಹಾರಾಟ ನಡೆಸಿತು. ಕ್ಯಾಪ್ಟನ್ ಸೌದಾಮಿನಿ ದೇಶಮುಖ್ ಮತ್ತು ಸಹ ಪೈಲಟ್ ನಿವೇದಿತಾ ಭಾಸಿನ್ ಅವರುಗಳು,  ಇಬ್ಬರು ಗಗನಸಖಿಯರ ನೆರವಿನೊಂದಿಗೆ ಐಸಿ 258 ವಿಮಾನವನ್ನು ಸಿಲ್ಚಾರ್ನಿಂದ ಕೋಲ್ಕತ್ತಾ ಹಾರಿಸಿದರು.

1991: ವಿಶ್ವಸಂಸ್ಥೆಯು ಇರಾಖಿಕೆ,  ಕುವೈತಿನಿಂದ ಸೇನೆಯನ್ನು ಹಿಂತೆಗೆದುಕೊಳ್ಳಲು ನೀಡಿದ್ದ ಗಡುವು ಅಂತ್ಯಗೊಂಡಿತು.  ಇದು ‘ಆಪರೇಶನ್ ಡೆಸರ್ಟ್ ಸ್ಟಾರಂ ಕಾರ್ಯಾಚರಣೆ’ ಸಿದ್ಧತೆಗೆ ಇಂಬುಗೊಟ್ಟಿತು.

2001: ವಿಕಿಪೀಡಿಯಾವು ಅಂತರಜಾಲದಲ್ಲಿ ಸ್ಥಾಪಿತಗೊಂಡಿತು.

2005: ಯೂರೋಪಿನಲ್ಲಿನ ಹಲವು ದೇಶಗಳ ಸಹಕಾರದಲ್ಲಿ ಮೂಡಿರುವ  ‘ಯೂರೋಪಿಯನ್ ಸ್ಪೇಸ್ ಏಜೆನ್ಸಿ’ (ESA), ಚಂದ್ರನ ಮೇಲೆ  ಸುತ್ತಿಸಿದ ‘ಸ್ಮಾರ್ಟ್-1’ ಕಕ್ಷಾಗಾಮಿಯು, ಅಲ್ಲಿ ಕ್ಯಾಲ್ಸಿಯಂ, ಅಲ್ಯೂಮಿನಿಯಂ, ಸಿಲಿಕಾನ್, ಕಬ್ಬಿಣ ಮತ್ತಿತರ ಅಂಶಗಳನ್ನು ಪತ್ತೆಹಚ್ಚಿರುವುದಾಗಿ ವರದಿಮಾಡಿದೆ.

2008: ಹಾಕಿ ತಂಡದ ಮಾಜಿ ನಾಯಕ ಹಾಗೂ ಒಲಿಂಪಿಯನ್ ವಿರೇನ್ ರಸ್ಕಿನ ಅವರು ಅಂತಾರಾಷ್ಟ್ರೀಯ ಹಾಕಿಗೆ  ವಿದಾಯವನ್ನು, ಮುಂಬೈನಲ್ಲಿ ಪ್ರಕಟಿಸಿದರು.

2008: ಮಹಾರಾಷ್ಟ್ರದ ದಾಬೋಲ್ ಮತ್ತು ಬೆಂಗಳೂರು ನಡುವಣ ಅನಿಲ ಸರಬರಾಜು ಕೊಳವೆ ಮಾರ್ಗ ಸ್ಥಾಪಿಸುವ ಪ್ರಸ್ತಾವಕ್ಕೆ ರಾಷ್ಟ್ರದ ಪ್ರಮುಖ ಅನಿಲ ಸರಬರಾಜು ಸಂಸ್ಥೆಯಾದ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ (ಗೇಲ್ ಇಂಡಿಯಾ)ದ ನಿರ್ದೇಶಕ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು.

2008: ನೇಪಾಳದ ಈಶಾನ್ಯ ಪ್ರದೇಶದಲ್ಲಿರುವ ಲುಕ್ಲಾ ವಿಮಾನ ನಿಲ್ದಾಣಕ್ಕೆ,  ಮೊಟ್ಟ ಮೊದಲು ಮೌಂಟ್ ಎವರೆಸ್ಟ್ ಏರಿದ  ತೇನ್ಸಿಂಗ್ ಮತ್ತು ಹಿಲರಿ ಗೌರವಾರ್ಥ ‘ಹಿಲರಿ ತೇನ್ ಸಿಂಗ್ ವಿಮಾನ ನಿಲ್ದಾಣ’ ಎಂದು ಅಲ್ಲಿನ  ಸರ್ಕಾರ ಮರು ನಾಮಕರಣ ಮಾಡಿತು.

2009: ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಮಹಾ ನಿರ್ದೇಶಕರಾಗಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಕೆ.ಎನ್. ಶ್ರೀವಾತ್ಸವ  ನೇಮಕಗೊಂಡರು.

2009: ಆರ್ಥಿಕ ಹಿಂಜರಿಕೆ ಪರಿಣಾಮ ಮುಂದುವರೆದು, ಕೆನಡಾ ಮೂಲದ ದೂರಸಂಪರ್ಕ ಸಾಧನ ಮತ್ತು ಮೂಲ ಸೌಕರ್ಯ ಸೇವಾ ಸಂಸ್ಥೆಯಾದ   ‘ನಾರ್ಟೆಲ್ ನೆಟ್‌ವರ್ಕ್ಸ್ ಕಾರ್ಪೊರೇಷನ್ ‘ ಬಹುತೇಕವಾಗಿ  ದಿವಾಳಿಯಾಯಿತು.

ಪ್ರಮುಖಜನನ/ಮರಣ:

1754: ಪ್ರಾಣಿ ದಯಾ ಸಂಘವಾದ ‘ರಾಯಲ್ ಸೊಸೈಟಿ ಫಾರ್ ದಿ ಪ್ರಿವೆನ್ಷನ್ ಆಫ್ ಕ್ರೂಯಲ್ಟಿ ಟು ಅನಿಮಲ್ಸ್’ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ರಿಚರ್ಡ್ ಮಾರ್ಟಿನ್ ಅವರು ಐರ್ಲೆಂಡ್ ದೇಶದಲ್ಲಿ ಜನಿಸಿದರು.  ಕಿಂಗ್ ನಾಲ್ಕನೇ ಜಾರ್ಜ್ ಅವರು ಮಾರ್ಟಿನ್ ಅವರಿಗಿದ್ದ  ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಅವರಿಗಿದ್ದ ಸಹಾನುಭೂತಿಯ ಗುಣವನ್ನು  ಗೌರವಿಸಿ ‘ಹ್ಯೂಮಾನಿಟಿ ಡಿಕ್’ ಎಂದು ಸಂಭೋದಿಸುತ್ತಿದ್ದರು.  ರಾಜಕಾರಣಿಯಾಗಿದ್ದ ರಿಚರ್ಡ್ ಮಾರ್ಟಿನ್ 1822ರ ವರ್ಷದಲ್ಲಿ ಕ್ರೂಯಲ್ ಟ್ರೀಟ್ಮೆಂಟ್ ಆಫ್ ಕ್ಯಾಟಲ್ ಆಕ್ಟ್ ಕಾನೂನು ಜಾರಿಗೊಳಿಸುವುದರಲ್ಲಿ ಯಶಸ್ವಿಯಾದರು.

1856: ಆಧುನಿಕ ಕನ್ನಡದ ಪ್ರಥಮ  ನಾಟಕಕಾರ, ಕೀರ್ತನಕಾರರೆಂದು ಮಾನ್ಯರಾದ ಶಾಂತಕವಿಗಳ ನಿಜನಾಮ ಸಕ್ಕರಿ ಬಾಳಾಚಾರ್ಯ.  ಅವರು ಧಾರವಾಡ ಜಿಲ್ಲೆಯ ಸಾತೇನಹಳ್ಳಿಯಲ್ಲಿ ಜನಿಸಿದರು.  ನಾಟಕ ಕಂಪೆನಿಗಳಿಗೆ ಹಲವಾರು ನಾಟಕಗಳನ್ನು ಬರೆದಿದ್ದ ಇವರು, ಕಾವ್ಯವನ್ನೂ ಸಂಸ್ಕೃತ  ಅನುವಾದಗಳನ್ನೂ, ಹಲವಾರು ಕನ್ನಡ ಗೀತೆಗಳನ್ನೂ,  ಲಾವಣಿಗಳನ್ನೂ, ಹಾಸ್ಯ ಪ್ರಬಂಧಗಳನ್ನು  ರಚಿಸಿದ್ದಾರೆ. 1920ರಲ್ಲಿ ಈ ಲೋಕದಿಂದ ದೂರವಾದ ತಮ್ಮ ಗುರು ಶಾಂತಕವಿಗಳಗಳ ಬಗ್ಗೆ ಕವಿ ಬೇಂದ್ರೆಯವರು ‘ಶಾಂತಕವಿಗಳ ವಿಶ್ರಾಂತಿ’ ಎಂಬ ಪ್ರಸಿದ್ಧ ಕವಿತೆ ಬರೆದಿದ್ದಾರೆ.

1866: ನೊಬೆಲ್ ಶಾಂತಿ ಪುರಸ್ಕೃತ  ಆರ್ಚ್ ಬಿಷಪ್, ಇತಿಹಾಸಜ್ಞ ಮತ್ತು ಶಿಕ್ಷಕ ನಾಥನ್ ಸೋಡೆರ್ ಬ್ಲಾಂ ಅವರು, ಸ್ವೀಡನ್ನಿನ ಉಪ್ಪಸಲ ಎಂಬಲ್ಲಿ ಜನಿಸಿದರು.  ಮೊದಲನೇ ವಿಶ್ವ ಮಹಾಯುದ್ಧದಲ್ಲಿ ಶಾಂತಿಗಾಗಿ ಶ್ರಮಿಸಲು ಎಲ್ಲ ಕ್ರೈಸ್ತ ನಾಯಕರಿಗೂ ಅವರು ಕರೆಕೊಟ್ಟಿದ್ದರು.

1895: ಪ್ರಶಸ್ತಿ ವಿಜೇತ ರಸಾಯನ ಶಾಸ್ತ್ರಜ್ಞ ಆರ್ಟರಿ ಇಲ್ಮಾರಿ ವಿರ್ಟನೇನ್ ಅವರು ಫಿನ್ಲ್ಯಾಂಡ್ ದೇಶದಲ್ಲಿ ಜನಿಸಿದರು.  ಅವರು ಎ.ಐ.ವಿ. ಸೈಲೇಜ್ ಅನ್ನು ಕಂಡು ಹಿಡಿದರು.  ಇದು ಹಾಲಿನ ಉತ್ಪನ್ನವನ್ನು ಹೆಚ್ಚಿಸಿತಲ್ಲದೆ,  ಬೆಣ್ಣೆಯನ್ನು ಕೆಡದಂತೆ ಸಂರಕ್ಷಿಸುವುದಕ್ಕೆ ಸಹಾಯಕವಾಯಿತು.   ಎ.ಐ.ವಿ ಸಾಲ್ಟ್ ಕಂಡುಹಿಡಿದದ್ದು, ಫಿನ್ಲ್ಯಾಂಡಿನ ಬೆಣ್ಣೆ ರಫ್ತನ್ನು ಅಪಾರವಾಗಿ ಹೆಚ್ಚಿಸಿತು.

1906: ಸೂಪರ್ ಟ್ಯಾಂಕರುಗಳ ಪಡೆಯನ್ನು ನಿರ್ಮಿಸಿದ ಗ್ರೀಕ್ ಶಿಪ್ಪಿಂಗ್ ಉದ್ಯಮಿಯಾದ ಅರಿಸ್ಟಾಟಲ್ ಒನಾಸಿಸ್ ಅವರು, ಈಗಿನ ಟರ್ಕಿಗೆ ಸೇರಿದ ಇಸ್ಮಿರ್ ಪ್ರದೇಶದ ಕರತಾಸ್ ಎಂಬಲ್ಲಿ ಜನಿಸಿದರು.  ಮುಂದೆ ಅರ್ಜೆಂಟಿನಾಗೆ ಬಂದ ಅವರು  ಅತ್ಯಂತ ಶ್ರೀಮಂತ ಉದ್ಯಮಿಯಾದರು.  ಇವರು ಅಮೆರಿಕಾದ ಅಧ್ಯಕ್ಷ ಕೆನಡಿ ಅವರ ವಿಧವಾ ಪತ್ನಿ ಜಾಕೆಲಿನ್ ಕೆನಡಿ ಅವರನ್ನು ವಿವಾಹವಾದರು.

1908: ಥಿಯೋರೇಟಿಕಲ್ ಭೌತಶಾಸ್ತ್ರಜ್ಞರಾದ ಎಡ್ವರ್ಡ್ ಟೆಲ್ಲರ್ ಅವರು  ಹಂಗೇರಿಯಲ್ಲಿ ಜನಿಸಿದರು.  ಮುಂದೆ ಅಮೆರಿಕ ನಿವಾಸಿಯಾದ ಅವರು ನ್ಯೂಕ್ಲಿಯರ್ ಮತ್ತು ಮಾಲೆಕ್ಯುಲರ್ ಫ್ರಿಸಿಕ್ಸ್, ಸ್ಪೆಕ್ಟ್ರೋಸ್ಕೊಪಿ ಮತ್ತು ಸರ್ಫೇಸ್ ಫಿಸಿಕ್ಸ್ ಕ್ಷೇತ್ರದಲ್ಲಿ ಅಪಾರ ಕೊಡುಗೆಗಳನ್ನಿತ್ತರು.    ‘ಹೈಡ್ರೋಜನ್ ಬಾಂಬ್ ಜನಕ’ ಎಂದು ಹೆಸರಾಗಿದ್ದ  ಇವರು 1945ರಲ್ಲಿನಿರ್ಮಿಸಲಾದ ಜಗತ್ತಿನ ಮೊತ್ತ ಮೊದಲ ಪರಮಾಣು ಬಾಂಬ್ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರಲ್ಲದೆ, ಜಗತ್ತಿನ ಮೊತ್ತ ಮೊದಲ ಹೈಡ್ರೋಜನ್ ಬಾಂಬ್ ನಿರ್ಮಿಸುವಲ್ಲೂ ಪಾತ್ರವಹಿಸಿದ್ದರು.

1920: ರುದ್ರಯ್ಯ ಚಂದ್ರಯ್ಯ ಹಿರೇಮಠ ಅವರು ಗದಗದ ಬಳಿ ಇರುವ ಕುರುಡಗಿ ಎಂಬಲ್ಲಿ ಜನಿಸಿದರು.  ಭಿಕ್ಷಾಟನೆ, ಬಾಲ ಕಾರ್ಮಿಕತನದಲ್ಲಿ ಬೆಳೆದರೂ, ಓದಿನ ಆಸಕ್ತಿ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದ ಎತ್ತರದವರೆಗೂ ಏರಿಸಿತು.  ಮಹತ್ವದ ಸಾಹಿತಿಗಳಾಗಿದ್ದ ಅವರಿಗೆ ಕನ್ನಡ ನಾಡು 59ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ನೀಡಿತು.  ತೆಲುಗು,  ತಮಿಳು, ಮಲಯಾಳಂ, ಕನ್ನಡ ಭಾಷೆಗಳ ಕುರಿತು ದ್ರಾವಿಡ ಭಾಷಾ ಜ್ಞಾನ ಕೇಂದ್ರದ ನಿರ್ದೇಶಕರಾಗಿ ಸಹಾ ಅವರು ಸೇವೆ ಸಲ್ಲಿಸಿದ್ದರು.

1929: ಅಮೆರಿಕಾದಲ್ಲಿ ನಾಗರಿಕ ಹಕ್ಕುಗಳ ಚಳವಳಿಯನ್ನು ಹುಟ್ಟು ಹಾಕಿದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್  ಅವರು ಜನಿಸಿದರು. 1963ರ ವರ್ಷದಲ್ಲಿ ವಾಷಿಂಗ್ಟನ್ ಮಾರ್ಚ್ ನೇತೃತ್ವ ವಹಿಸಿದ್ದ ಮಾರ್ಟಿನ್ ಲೂಥರ್ ಕಿಂಗ್ ಆ ಸಮಯದಲ್ಲಿ ಮಾಡಿದ ‘I have a dream – ನನ್ನದೊಂದು ಕನಸಿದೆ’ ಭಾಷಣ ವಿಶ್ವಪ್ರಖ್ಯಾತಿಗಳಿಸಿತು.

1934: ಕರ್ನಾಟಕದ 13ನೇ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಅವರು, ಆಂಧ್ರಪ್ರದೇಶದ ಚೆಬ್ರೋಲು ಎಂಬಲ್ಲಿ ಜನಿಸಿದರು.  2013ರ ವರ್ಷದಲ್ಲಿ ಬೆಂಗಳೂರಿನಲ್ಲಿ ನಿಧನರಾದ ಇವರು,  1990ರ ವರ್ಷದಲ್ಲಿನ  ಕಿರು ಅವಧಿಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಆಯುಕ್ತರಾಗಿಯೂ ಕೆಲಸ ಮಾಡಿದ್ದರು.

1988: ಐರಿಷ್  ರಾಜಕಾರಣಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ  ಸೀನ್ ಮ್ಯಾಕ್ ಬ್ರೈಡ್ ಅವರು ಐರ್ಲ್ಯಾಂಡಿನ ಡಬ್ಲಿನ್ ನಗರದಲ್ಲಿ ನಿಧನರಾದರು.  ಇವರು  ವಿಶ್ವ ಸಂಸ್ಥೆ, ಕೌನ್ಸಿಲ್ ಆಫ್ ಯೂರೋಪ್ ಮತ್ತು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಮುಂತಾದ ಮಹತ್ವದ ಸಂಸ್ಥೆಗಳ ಸಂಸ್ಥಾಪನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು.

1988: 1964ರಲ್ಲಿ ಪ್ರಧಾನಿ ನೆಹರೂ ನಿಧನರಾದ ಸಂದರ್ಭ  ಮತ್ತು 1966ರಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ನಿಧನರಾದ ಸಂದರ್ಭಗಳಲ್ಲಿ ಎರಡು ಬಾರಿ ಭಾರತದ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಗುಲ್ಜಾರಿ ಲಾಲ್ ನಂದಾ ನಿಧನರಾದರು. ಕೇಂದ್ರ ಮಂತ್ರಿಗಳಾಗಿ ಹಾಗೂ ಭಾರತದ ಯೋಜನಾ ಆಯೋಗದ ಅಧ್ಯಕ್ಷರಾಗಿ ಸಹಾ ಇವರು ಕಾರ್ಯ ನಿರ್ವಹಿಸಿದ್ದರು.   1997 ವರ್ಷದಲ್ಲಿ ಅವರಿಗೆ ‘ಭಾರತರತ್ನ’ ಗೌರವವನ್ನು ಸಲ್ಲಿಸಲಾಗಿತ್ತು.

2006: ತೈಲ ಸಮೃದ್ಧ ಕುವೈತ್ ರಾಷ್ಟ್ರವನ್ನು ಸುಮಾರು 30 ವರ್ಷಗಳ ಕಾಲ ಆಳಿದ ದೊರೆ ಶೇಖ್ ಜಬರ್ ಅಲ್ ಸಭಾ ನಿಧನರಾದರು.

2009: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಲನಚಿತ್ರ  ನಿರ್ದೇಶಕ ತಪನ್ ಸಿನ್ಹಾ  ಕೋಲ್ಕತದಲ್ಲಿ  ನಿಧನರಾದರು.  ಅಮೆರಿಕದ ಚಿತ್ರಗಳು ಹಾಗೂ ನಿರ್ದೇಶಕರಿಂದ ಸ್ಫೂರ್ತಿ ಪಡೆದಿದ್ದ ಸಿನ್ಹಾ ತಂತ್ರಜ್ಞರಾಗಿ ಚಿತ್ರರಂಗ ಪ್ರವೇಶಿಸಿದರು. ಅವರು ನಿರ್ದೇಶಿಸಿದ 41 ಚಿತ್ರಗಳಲ್ಲಿ 19 ಚಿತ್ರಗಳು  ರಾಷ್ಟ್ರೀಯ ಪ್ರಶಸ್ತಿ ಗಳಿಸಿದ್ದವು. ಪ್ರತಿಷ್ಟಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಅಂತಾರಾಷ್ಟ್ರೀಯ ವಿಮರ್ಶಕರ ಶ್ಲಾಘನೆಗೂ ಪಾತ್ರವಾಗಿದ್ದವು.