Categories
e-ದಿನ

ಜನವರಿ-16

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 27: ಜೂಲಿಯಸ್ ಸೀಸರನಿಗೆ  ರೋಮನ್ ಸೆನೆಟ್ ‘ಅಗಸ್ಟಸ್’ ಬಿರುದನ್ನು ನೀಡಿತು.  ಇದರಿಂದಾಗಿ  ರೋಮನ್ ಚಕ್ರಾಧಿಪತ್ಯಕ್ಕೆ ನಾಂದಿ ಹಾಡಿದಂತಾಯಿತು.

1362: ‘ನಾರ್ತ್ ಸೀ’ ಸಮುದ್ರದಲ್ಲಿ ಉಂಟಾದ ಚಂಡಮಾರುತದ ಅಲೆಯಲ್ಲಿ ಇಂಗ್ಲೆಂಡಿನ ಪೂರ್ವ ತೀರವನ್ನು ಧ್ವಂಸಮಾಡಿತಲ್ಲದೆ, ಸ್ಟ್ರಾಂಡ್ ದ್ವೀಪದ ರಂಗ್ ಹೋಲ್ಟಿನಲ್ಲಿದ್ದ ಜರ್ಮನಿ ನಗರವನ್ನು ನಾಶಮಾಡಿತು

1547: ರಷ್ಯಾದ ತ್ಸಾರ್ ದೊರೆಯಾಗಿ ಇವಾನ್ ಎಂಬಾತನ ಸಿಂಹಾಸನಾರೋಹಣ ನಡೆಯಿತು. ‘ತ್ಸಾರ್’ (Czar) ಎಂಬುದಾಗಿ ಹೆಸರು ಇಟ್ಟುಕೊಂಡ ಮೊದಲ ರಷ್ಯಾದ ಆಡಳಿತಗಾರ ಈತ.

1707: ಸ್ಕಾಟಿಷ್ ಪಾರ್ಲಿಮೆಂಟು ‘ಆಕ್ಟ್ ಆಫ್ ಯೂನಿಯನ್’ ಅನ್ನು ಅಂಗೀಕರಿಸಿತು.  ಇದರಿಂದಾಗಿ ಗ್ರೇಟ್ ಬ್ರಿಟನ್ ಸೃಷ್ಟಿಗೆ ಹಾದಿಯಾಯಿತು.

1761: ಬ್ರಿಟಿಷ್ ಸೇನೆ ಫ್ರೆಂಚರಿಂದ ಪಾಂಡಿಚೇರಿಯನ್ನು ವಶಪಡಿಸಿಕೊಂಡಿತು.

1786: ವರ್ಜೀನಿಯಾವು ಥಾಮಸ್ ಜೆಫರ್ಸನ್ ಸೃಷ್ಟಿಸಿದ  ಧಾರ್ಮಿಕ ಸ್ವಾತಂತ್ರ್ಯ ಕಾಯಿದೆಯನ್ನು ಅಳವಡಿಸಿಕೊಂಡಿತು.

1920: ಪ್ರಥಮ ವಿಶ್ವಮಹಾಯುದ್ಧದ ನಂತರ ಮುಂದೆ ಅಂತಹ ಯುದ್ಧಗಳು ನಡೆಯದಂತೆ ತಡೆಯಲು ಹಲವಾರು ರಾಷ್ಟ್ರಗಳು ಒಟ್ಟಿಗೆ ಸೇರಿ ಲೀಗ್ ಆಫ್ ನೇಷನ್ಸ್ ಸ್ಥಾಪಿಸಿದವು.  ಇದರ ಮೊದಲ ಸಭೆ ಪ್ಯಾರಿಸ್ಸಿನಲ್ಲಿ ನಡೆಯಿತು.  ಮುಂದೆ ಎರಡನೇ ಮಹಾಯುದ್ಧ ನಡೆದು ಲೀಗ್ ಆಫ್ ನೇಷನ್ಸ್ ಉದ್ದೇಶ ವಿಫಲವಾದ ಹಿನ್ನೆಲೆಯಲ್ಲಿ, ಎರಡನೇ ಮಹಾಯುದ್ಧದ ನಂತರದಲ್ಲಿ ಇದು ತನ್ನ ಅಸ್ತಿತ್ವವನ್ನು ಕಳೆದುಕೊಂಡು, ವಿಶ್ವಸಂಸ್ಥೆ ಹುಟ್ಟಿಕೊಂಡಿತು.

1936: ಅಮೆರಿಕಾದ ರೇಸ್ ಟ್ರ್ಯಾಕಿನಲ್ಲಿ ಮೊತ್ತ ಮೊದಲ ಫೊಟೋ ಫಿನಿಶ್ ಕ್ಯಾಮರಾವನ್ನು ಅಳವಡಿಸಲಾಯಿತು. ಫ್ಲಾರಿಡಾದಲ್ಲಿ ಕುದುರೆಗಳ ಓಟ ಗಮನಿಸಿಲು `ಎಲೆಕ್ಟ್ರಿಕ್ ಕಣ್ಣು’ ಬಳಸಲಾಯಿತು.

1945: ಅಡಾಲ್ಫ್ ಹಿಟ್ಲರನು ನೆಲಮಾಳಿಗೆಯಾದ  ಫುಹ್ರೇರ್ ಬಂಕರ್ ಅನ್ನು ಪ್ರವೇಶಿಸಿದನು.

1955: ಪುಣೆಯ ಖಡಕವಾಸ್ಲಾದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಆರಂಭಗೊಂಡಿತು. ಇದಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಅವರು 1949 ಅಕ್ಟೋಬರ್ 6ರಂದು ಶಿಲಾನ್ಯಾಸ ನೆರವೇರಿಸಿದ್ದರು.

1964: ಸಂಗೀತ ಪ್ರಧಾನ ಇಂಗ್ಲಿಷ್ ಹಾಸ್ಯ ನಾಟಕ ‘ಹಲೋ ಡಾಲಿ’ ಬ್ರಾಡ್ವೇ ರಂಗಮಂದಿರದಲ್ಲಿ ಪ್ರಾರಂಭಗೊಂಡಿತು.  ಇದು 2844 ಪ್ರದರ್ಶನಗಳನ್ನು ಕಂಡಿತ್ತು.

1969: ಸೋವಿಯತ್ ಬಾಹ್ಯಾಕಾಶ ವಾಹನಗಳಾದ ಸೋಯುಜ್ 4 ಮತ್ತು ಸೋಯುಜ್ 5, ಒಂದರಿಂದ ಮತ್ತೊಂದಕ್ಕೆ  ಮನುಷ್ಯರನ್ನು ಪ್ರವೇಶಿಸುವುದನ್ನು ಅನುವು ಮಾಡಿಕೊಟ್ಟವು.  ಬಾಹ್ಯಾಕಾಶ ಕಕ್ಷೆಯಲ್ಲಿ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಗಗನ ನಡಿಗೆಯ ಮೂಲಕ ಪ್ರವೇಶ ನಡೆದದ್ದು ಇದೊಂದೇ ಬಾರಿ.

1979: ಇರಾನಿನ ಶಹಾ ಮೊಹಮ್ಮದ್ ರೇಝಾ ಶಹಾ ಪಹ್ಲವಿ ಅವರು ಇರಾನ್ ತ್ಯಜಿಸಿ ತಮ್ಮ ಕುಟುಂಬದೊಂದಿಗೆ ಈಜಿಪ್ಟಿಗೆ ವಲಸೆ ಹೋದರು.   ಆಯಾತುಲ್ಲಾ  ಖೊಮೇನಿ ಇರಾನಿನ ಆಡಳಿತವನ್ನು ತಮ್ಮ  ವಶಕ್ಕೆ ತೆಗೆದುಕೊಂಡರು.

1992: ಮೆಕ್ಸಿಕೋದಲ್ಲಿ ಇ.ಐ. ಸಲ್ವಾಡಾರ್ ಮತ್ತು ವಿರೋಧಿ ತಂಡಗಳ ನಡುವೆ ಚಾಪುಲ್ಟೆಪೆಕ್ ಶಾಂತಿ ಒಪ್ಪಂದ ಏರ್ಪಟ್ಟು, 12 ವರ್ಷಗಳ ಸುದೀರ್ಘ ಕಾಲದವರೆಗೆ 75000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ  ಸಾಲ್ವಡೊರಾನ್ ಆಂತರಿಕ  ಕ್ರಾಂತಿ ಹೋರಾಟ ಮುಕ್ತಾಯ ಕಂಡಿತು.

1997: ಕಾರ್ಮಿಕ ಧುರೀಣ ದತ್ತಾ ಸಾಮಂತ್ ಅವರನ್ನು ಮುಂಬೈಯಲ್ಲಿ ಗುಂಡಿಕ್ಕಿ ಕೊಲೆಗೈಯಲಾಯಿತು.

2003: ಮಿಷನ್ ಎಸ್.ಟಿ.ಎಸ್ – 107ನ್ನು ಹೊತ್ತ  ಕೊಲಂಬಿಯಾ ತನ್ನ ಕೊನೆಯ ಗಗನಯಾನವನ್ನು ಕೈಗೊಂಡಿತು.  ಇದಾದ 16 ದಿನಗಳ ನಂತರದಲ್ಲಿ ಕೊಲಂಬಿಯಾವು ತನ್ನ ಮುಂದಿನ ಮರುಪ್ರವೇಶದಲ್ಲಿ ವಿಭಜನೆಗೊಂಡಿತು.

2006: ಮಿಷೆಲ್ ಬಾಸೆಲೆಟ್ ಚಿಲಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು. ಚಿಲಿಯ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇವರು ದಕ್ಷಿಣ ಅಮೆರಿಕದ ರಾಷ್ಟ್ರಗಳಲ್ಲಿ ಅಧ್ಯಕ್ಷ ಸ್ಥಾನವೊಂದಕ್ಕೆ ಆಯ್ಕೆಯಾಗಿರುವ ಎರಡನೆಯ ಮಹಿಳೆ.

2007: ವರ್ಲ್ಡ್ ಎಕನಾಮಿಕ್ ಫೋರಂ ಪ್ರಕಟಿಸಿದ 2007 ಸಾಲಿನ ಜಾಗತಿಕ ಯುವ ನಾಯಕರ ಪಟ್ಟಿಯಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ, ಜನಾಗ್ರಹ ಸಂಸ್ಥೆಯ ಸಂಸ್ಥಾಪಕ ರಮೇಶ ರಾಮನಾಥನ್, ಸಂಸದರಾದ ಓಮರ್ ಅಬ್ದುಲ್ಲ, ಜ್ಯೋತಿರಾದಿತ್ಯ ಸಿಂಧಿಯಾ, ನವೀನ್ ಜಿಂದಾಲ್,  ಅರವಿಂದ್ ಕೇಜ್ರಿವಾಲ ಸ್ಥಾನ ಪಡೆದರು.

2007: ಲಂಡನ್ನಿನ ಚಾನೆಲ್ 4ರ ರಿಯಾಲಿಟಿ ಶೋ  ‘ಬಿಗ್ ಬ್ರದರ್’ ನಲ್ಲಿ ಅವಕಾಶ ಪಡೆದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು, “ತಾನು  ಭಾರತೀಯಳೆಂಬ ಕಾರಣಕ್ಕಾಗಿ ಇತರ ಸ್ಪರ್ಧಿಗಳಿಂದ ಜನಾಂಗೀಯ ನಿಂದೆ ಹಾಗೂ ಅವಹೇಳನಕ್ಕೆ ಗುರಿಯಾಗಬೇಕಾಯಿತೆಂದು”  ಕಣ್ಣೀರಿಟ್ಟರು. ಕಾರ್ಯಕ್ರಮದ ನಿರ್ಮಾಪಕರು ಈ ಪ್ರಕರಣದ ತನಿಖೆಗೆ ಆದೇಶಿಸಿದರು.

2007: ದ ಟೈಮ್ಸ್ ಆಫ್ ಇಂಡಿಯಾ ದೈನಿಕದ ಕನ್ನಡ ಆವೃತ್ತಿ ‘ದ ಟೈಮ್ಸ್ ಆಫ್ ಇಂಡಿಯಾ ಕನ್ನಡ’ ಮಾರುಕಟ್ಟೆ ಪ್ರವೇಶಿಸಿತು.

2008: ಚೀನಾದ ಸಿಸಿಟಿವಿ-9 ವಾಹಿನಿಗೆ ಭಾರತದಲ್ಲಿ ಡೌನ್ ಲೋಡ್ ಮಾಡಲು ಅನುಮತಿ ನೀಡಲಾಯಿತು. ಇದರಂತೆ ಝೀ ಟಿವಿ ಪ್ರಸಾರಕ್ಕೆ ಚೀನಾ ಒಪ್ಪಿದೆ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮೂಲಗಳು ತಿಳಿಸಿದವು.

2009: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳು ಗ್ರಾಮಸ್ಥರ ದಾಖಲೆಗಳನ್ನು ಕಡ್ಡಾಯವಾಗಿ ಹೊಂದುವುದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಬೇಕು ಹಾಗೂ ಎಲ್ಲಾ ನಾಗರಿಕರಿಗೂ ಗುರುತಿನ ಚೀಟಿ ವಿತರಿಸಬೇಕು ಎಂದು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ದೇಶದ ಎಲ್ಲಾ ನಾಗರಿಕರ ನೋಂದಣಿ ಮಾಡಲು ಹಾಗೂ ಗುರುತಿನ ಚೀಟಿ ವಿತರಿಸಲು ರಾಷ್ಟ್ರೀಯ ನೋಂದಣಿ ಪ್ರಾಧಿಕಾರವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ಪಿ. ಸದಾಶಿವಂ ಮತ್ತು ಜೆ. ಪಂಚಾಲ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

2009: ಕನ್ನಡ ಸಾಹಿತ್ಯದ ಸೃಜನೇತರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಅವರನ್ನು 2008ನೇ ಸಾಲಿನ ‘ಪಂಪ ಪ್ರಶಸ್ತಿ’ಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿತು.

ಪ್ರಮುಖಜನನ/ಮರಣ:

1920: ಪ್ರಸಿದ್ಧ ನ್ಯಾಯವಾದಿ, ಗ್ರಂಥಕರ್ತ, ಆರ್ಥಿಕ ತಜ್ಞ, ಭಾಷಣಕಾರ  ನಾನಿ ಪಾಲ್ಖೀವಾಲ ಮುಂಬೈನಲ್ಲಿ ಜನಿಸಿದರು.  ‘ಸಾಂವಿಧಾನಿಕ ತಿದ್ದುಪಡಿಗಳನ್ನು ನ್ಯಾಯಾಂಗವು ಪ್ರಶ್ನಿಸುವಂತಿಲ್ಲ’  ಎಂಬ ಸರ್ಕಾರದ ವಾದವನ್ನು ಸುಪ್ರೀಂಕೋರ್ಟಿನಲ್ಲಿ ಹಲವು ಕಾಲಗಳವರೆಗೆ ಹೋರಾಡಿ “ಪಾರ್ಲಿಮೆಂಟಿನಲ್ಲಿ ತಿದ್ದುಪಡಿಗಳನ್ನು ಮಾಡಬಹುದೇ ಹೊರತು ಆ ತಿದ್ದುಪಡಿಗಳು ಸಂವಿಧಾನದ ಮೂಲಭೂತ ಅಡಿಪಾಯಗಳನ್ನು ಧ್ವಂಸಗೊಳಿಸಲು ಅಧಿಕಾರವಿಲ್ಲ” ಎಂಬ ಪ್ರಸಿದ್ಧ ತೀರ್ಪು ಬರಲು ಪಾಲ್ಖೀವಾಲ ಕಾರಣರಾದರು.

1923: ಲಾಭದ ಉದ್ದೇಶವಿಲ್ಲದೆ ಸ್ಥಾಪನೆಗೊಂಡ ನ್ಯೂಯಾರ್ಕಿನ ಪ್ರಸಿದ್ಧ  ರೌಂಡ್ ಎಬೌಟ್ ರಂಗಮಂದಿರ ಸ್ಥಾಪಕರಲ್ಲೊಬ್ಬರಾದ  ಅಮೆರಿಕನ್ ರಂಗ ತಜ್ಞ ಜೆನೆ ಫೀಸ್ಟ್ ಜನಿಸಿದರು.

1946: ಸೂತ್ರಧಾರ ನಾಟಕ ತಂಡದ ಸ್ಥಾಪಕರಲ್ಲೊಬ್ಬರಾದ  ‘ಸೂತ್ರಧಾರ ರಾಮಯ್ಯ’ ಅವರು ಕನಕಪುರ ತಾಲ್ಲೂಕಿನ ದೊಡ್ಡ ಆಲನಹಳ್ಳಿಯಲ್ಲಿ ಜನಿಸಿದರು. ಸೂತ್ರಧಾರ ನಾಟಕ ತಂಡವನ್ನು ಕಟ್ಟಿದ್ದಲ್ಲದೆ, ಕಲಾವಿದರಾಗಿ ಹಾಗೂ  ಸೂತ್ರಧಾರ ವಾರ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿರುವ ಇವರಿಗೆ ಕರ್ನಾಟಕ ನಾಟಕ ಅಕಾಡಮಿಯಿಂದ 2000 ವರ್ಷದ ಪ್ರಶಸ್ತಿ ಸಂದಿದೆ.

1901: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ  ಪುಣೆಯಲ್ಲಿ ನಿಧನರಾದರು.

1938: ಪ್ರಖ್ಯಾತ ಬಂಗಾಳಿ ಕಾದಂಬರಿಕಾರ ಮತ್ತು ಕಥೆಗಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರು ಕೋಲ್ಕತ್ತಾದಲ್ಲಿ ನಿಧನರಾದರು.

1989: ಖ್ಯಾತ ಮಲಯಾಳಂ ಚಲನಚಿತ್ರ ನಟ ಪ್ರೇಮ್ ನಜೀರ್ ನಿಧನರಾದರು. ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನ ಪಾತ್ರವಹಿಸಿ ದಾಖಲೆ ನಿರ್ಮಿಸಿದ್ದರು. ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.