Categories
e-ದಿನ

ಜನವರಿ-17

ಪ್ರಮುಖಘಟನಾವಳಿಗಳು:

395: ಚಕ್ರವರ್ತಿ ಒಂದನೇ ಥಿಯೋಡೋಸಿಯಸ್ ನಿಧನನಾದಂತೆ, ರೋಮನ್ ಚಕ್ರಾಧಿಪತ್ಯವು ಇಬ್ಬಾಗಗೊಂಡಿತು.  ಅರ್ಕಾಡಿಯಸ್ ಪೂರ್ವ ರೋಮನ್ ಚಕ್ರವರ್ತಿಯಾಗಿ ಮತ್ತು ಹೊನೋರಿಯಾಸ್ ಪಶ್ಚಿಮ ರೋಮನ್ ಚಕ್ರವರ್ತಿಯಾದರು.

1524: ಜಿಯೋವನ್ನಿ ಡ ವೆರಜ್ಜಾನೋ ಪಸಿಫಿಕ್ ಸಾಗರಕ್ಕೆ ಸಮುದ್ರಮಾರ್ಗವನ್ನು ಅರಸುತ್ತಾ ಪೋರ್ಚುಗೀಸರ ವಸಾಹತುವಾದ ಮಡಿಯೇರಾದಿಂದ  ಪಶ್ಚಿಮದ ಕಡೆಗೆ ಪಯಣವನ್ನಾರಂಭಿಸಿದರು.

1773: ಮೊಟ್ಟ ಮೊದಲ ಅಂಟಾರ್ಟಿಕಾ ಸರ್ಕಲ್ಲಿನ ದಕ್ಷಿಣದೆಡೆಗಿನ  ಸಾಹಸ ಯಾತ್ರೆ ಕ್ಯಾಪ್ಟನ್ ಜೇಮ್ಸ್ ಕುಕ್ ನೇತೃತ್ವದಲ್ಲಿ ಪ್ರಾರಂಭಗೊಂಡಿತು.

1811: ಮೆಕ್ಸಿಕನ್ ಸ್ವಾತಂತ್ರ್ಯ ಯುದ್ಧದಲ್ಲಿ ಕೇವಲ 6000 ಸೈನಿಕರ ಸ್ಪಾನಿಷ್ ಪಡೆ 1 ಲಕ್ಷ ಮೆಕ್ಸಿಕನ್ ಕ್ರಾಂತಿಕಾರಿ ಪಡೆಯನ್ನು ಸೋಲಿಸಿತು.

1904: ಅಂಟನ್ ಚೆಕಾವ್ ಅವರ  ‘ದಿ ಚೆರ್ರಿ ಆರ್ಚರ್ಡ್’  ಮಾಸ್ಕೋ ಆರ್ಟ್ ಥಿಯೇಟರಿನಲ್ಲಿ ತನ್ನ ಪ್ರಥಮ ಪ್ರದರ್ಶನವನ್ನು ನೀಡಿತು.

1912: ಇಂಗ್ಲೆಂಡಿನ ಕ್ಯಾಪ್ಟನ್ ರಾಬರ್ಟ್ ಫಾಲ್ಕನ್ ಸ್ಕಾಟ್ ಅವರು, ದಕ್ಷಿಣ ಧ್ರುವ ತಲುಪಿದರು. ರೋಲ್ಡ್ ಅಮಂಡ್ಸನ್ ಅವರು  ಈ ಸಾಧೆನಯನ್ನು ಮಾಡಿದ ಒಂದು ತಿಂಗಳ ನಂತರ ರಾಬರ್ಟ್ ಫಾಲ್ಕನ್ ಸ್ಕಾಟ್ ಈ ಸಾಧನೆಯನ್ನು ಮಾಡಿದರು.

1917: ಅಮೆರಿಕವು ಡೆನ್ಮಾರ್ಕಿಗೆ, ವರ್ಜಿನ್ ಐಲೆಂಡಿಗೆ ಬೆಲೆಯಾಗಿ 25 ಮಿಲಿಯನ್ ಡಾಲರ್ ನೀಡಿತು

1929: ಇ.ಸಿ. ಸೆಗರ್ ಅವರ ಕಾರ್ಟೂನ್ ಸೃಷ್ಟಿಯಾದ  ‘ಪೊಪಾಯ್ ದಿ ಸೈಲರ್ ಮ್ಯಾನ್’ ಮೊದಲ ಬಾರಿಗೆ ‘ತಿಂಬಲ್ ಥಿಯೇಟರ್ ಕಾಮಿಕ್ ಸ್ಟ್ರಿಪ್’ನಲ್ಲಿ ಮೂಡಿಬಂತು.

1946: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ  ಪ್ರಥಮ ಅಧಿವೇಶನವನ್ನು ನಡೆಸಿತು.

1950: ಹನ್ನೊಂದು ಜನರ ಕಳ್ಳರ ಗುಂಪೊಂದು, ಬೋಸ್ಟನ್ನಿನಲ್ಲಿ ಸಶಸ್ತ್ರಕಾವಲಿದ್ದ ಬ್ರಿಂಕ್ ಕಟ್ಟಡದಲ್ಲಿ ಸುಮಾರು 2.8 ಮಿಲಿಯನ್ ದರೋಡೆಯನ್ನು ಅತ್ಯಂತ ಚಾಕಚಕ್ಯತೆಯಿಂದ  ಸುಳಿವುಗಳೇ ಸಿಗದ ಹಾಗೆ ನಡೆಸಿತು.  ಇದು ಶತಮಾನದ  ದೊಡ್ಡ ಕಳ್ಳತನದ ಘಟನೆ ಎನಿಸಿತ್ತು.

1941: ಭಾರತ ಸ್ವಾತಂತ್ರ್ಯ ಹೋರಾಟದ ಮಹತ್ವದ ನಾಯಕರಾದ ಸುಭಾಶ್ ಚಂದ್ರ ಬೋಸ್ ಅವರು  ಕೋಲ್ಕತ್ತಾದಿಂದ ತಲೆಮರೆಸಿಕೊಂಡರು.  ನಂತರ ಅವರು ಕಂಡದ್ದು ಮಾಸ್ಕೋದಲ್ಲಿ.

1991: ಕುವೈತಿನಿಂದ, ಅದನ್ನು ಆಕ್ರಮಿಸಿದ್ದ  ಇರಾಕ್ ಅನ್ನು ಹೊರಗಟ್ಟುವುದಕ್ಕಾಗಿ ‘ಆಪರೇಷನ್ ಡೆಸರ್ಟ್ ಸ್ಟಾರಂ’ ಆರಂಭಗೊಂಡಿತು.

1992: ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದ ಜಪಾನಿನ ಪ್ರಧಾನಿ ಕಿಯಿಚಿ ಮಿಯಾಜವಾ ಅವರು ಎರಡನೇ ವಿಶ್ವಮಹಾಯುದ್ಧದಲ್ಲಿ, ಕೊರಿಯಾದ ಹೆಣ್ಣು ಮಕ್ಕಳನ್ನು ಲೈಂಗಿಕ ಜೀತಕ್ಕೆ ಒಡ್ಡಿದ ಘಟನೆಗಾಗಿ ಕ್ಷಮೆ ಯಾಚಿಸಿದರು.

2006: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು  (ಬಿ.ಎಂ.ಟಿ.ಸಿ), ಬೆಂಗಳೂರು ನಗರ ಸಂಚಾರಕ್ಕಾಗಿ ಐಶಾರಾಮಿ ವೋಲ್ವೋ ಬಸ್ ಸೇವೆಯನ್ನು ಪ್ರಾರಂಭಿಸಿತು.

2006: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣದ ಮುಖ್ಯ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಆತನ ಇಬ್ಬರು ಸಹಚರರಿಗೆ ಮುಂಬೈ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು.

2007: ಭಾರತವು ಅಮೆರಿಕದಿಂದ ಖರೀದಿಸಿದ ಮೊತ್ತ ಮೊದಲ ಯುದ್ಧ ನೌಕೆಯಾದ  ‘ಯು ಎಸ್ ಎಸ್ ಟ್ರೆಂಟೋನ್’ ಅನ್ನು ಅಮೆರಿಕದ ವರ್ಜೀನಿಯಾದಲ್ಲಿನ ನೋರ್ ಫೆಕ್ ನೌಕಾನೆಲೆಯಲ್ಲಿ ಭಾರತದ ನೌಕಾಪಡೆಗೆ ಹಸ್ತಾಂತರಿಸಲಾಯಿತು. 17,000 ಟನ್ ತೂಕದ ಈ ಬೃಹತ್ ನೌಕೆಗೆ ‘ಐ ಎನ್ ಎಸ್ ಜಲಾಶ್ವ’ ಎಂದು ನಾಮಕರಣ ಮಾಡಲಾಯಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬ್ರಿಟನ್ನಿನ ಚಾನೆಲ್ 4 ರಿಯಾಲಿಟಿ ಶೋ ‘ಸೆಲೆಬ್ರಿಟಿ ಬಿಗ್ ಬ್ರದರ್’ ಕಾರ್ಯಕ್ರಮದಲ್ಲಿ, ಸಹ ಸ್ಪರ್ಧಿಗಳು ಜನಾಂಗೀಯ ನಿಂದನೆ ಮಾಡಿದ ಘಟನೆಗೆ, ವಿಶ್ವವ್ಯಾಪಿ ಪ್ರತಿಭಟನೆ ವ್ಯಕ್ತವಾಯಿತು.

2007: ಕರ್ನಾಟಕ  ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಬೃಹತ್ ಬೆಂಗಳೂರು ಮಹಾನಗರ’ ಕುರಿತ ಅಧಿಸೂಚನೆಗೆ  ರಾಜ್ಯಪಾಲ ಟಿ.ಎನ್. ಚತುರ್ವೇದಿ ಸಹಿ ಮಾಡಿದರು.

2007: ದುರಂತವನ್ನು ಸೂಚಿಸುವುದಕ್ಕಾಗಿ ಪರಮಾಣು ವಿಜ್ಞಾನಿಗಳ ಸಂಘಟನೆ ಸ್ಥಾಪಿಸಿರುವ ‘ಡೂಮ್ಸ್ ಡೇ ಗಡಿಯಾರ’ವು ತನ್ನ  ಸಮಯವನ್ನು  ಮಧ್ಯರಾತ್ರಿ ಹನ್ನೆರಡಕ್ಕೆ ಮುಂಚಿನ ಐದು ನಿಮಿಷಕ್ಕೆ ಸರಿಸಿದೆ.  ಮಧ್ಯರಾತ್ರಿ ಹನ್ನೆರಡಕ್ಕೆ  ಎಷ್ಟು ಹತ್ತಿರದಲ್ಲಿ ನಿಮಿಷದ ಮುಳ್ಳು ಇದೆ,ಯೋ ಅಷ್ಟು ಹತ್ತಿರದಲ್ಲಿ ವಿಶ್ವಕ್ಕೆ ದುರಂತ ಕಾದಿದೆ ಎಂಬ ಸೂಚನೆ ‘ಡೂಮ್ಸ್ ಡೇ ಗಡಿಯಾರ’ದಲ್ಲಿದೆ.

2008: 1970ರ ಅವಧಿಯಲ್ಲಿ, ತಾವು ಭಾರತದಲ್ಲಿ ರಾಜಕೀಯ ಕೃಪಾಶ್ರಯ ಪಡೆದಿದ್ದ ಸಂದರ್ಭದಲ್ಲಿ, ತಮ್ಮ ಪಕ್ಷದ ರಾಜಕೀಯ ಚಟುವಟಿಕೆಗಳಿಗೆ ಅಗತ್ಯವಾಗಿದ್ದ  ಹಣವನ್ನು ಹೊಂದಿಸಿಕೊಳ್ಳುವ ಸಲುವಾಗಿ, ತಾವು ನಕಲಿ ನೋಟುಗಳ ಮುದ್ರಣ ಜಾಲ ಹರಡಿದ್ದನ್ನು ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು, ಕಂಟಿಪುರ ಟೆಲಿವಿಷನ್ನಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಒಪ್ಪಿಕೊಂಡರು. ನೇಪಾಳ ವಿಮಾನಯಾನಕ್ಕೆ ಸೇರಿದ ಪ್ರಯಾಣಿಕರ ವಿಮಾನ ಅಪಹರಣದ ರೂವಾರಿ ಕೂಡ ತಾವೇ ಎಂದು ಕೂಡಾ ಈ ಸಂದರ್ಭದಲ್ಲಿ   ಬಹಿರಂಗಪಡಿಸಿದರು.

2008: ಪ್ರತಿವರ್ಷ ಒಂದು ಲಕ್ಷ ಅಂಗವಿಕಲರಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಒದಗಿಲು ಕೇಂದ್ರ ಸರ್ಕಾರವು 1800 ಕೋಟಿ ರೂಪಾಯಿಗಳ ಪ್ರೋತ್ಸಾಹಕರ ಯೋಜನೆಯನ್ನು ಜಾರಿಗೊಳಿಸಿತು. ಸರ್ಕಾರಿ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

2008: ಆಸ್ಟ್ರೇಲಿಯ ವಿರುದ್ಧ, ಪರ್ತಿನಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಆಂಡ್ರ್ಯೂ ಸೈಮಂಡ್ಸ್ ಅವರ ವಿಕೆಟ್ ಪಡೆದ  ಅನಿಲ್ ಕುಂಬ್ಳೆ,  600 ವಿಕೆಟ್ ಪಡೆದ ವಿಶ್ವದ ಮೂರನೆಯ ಹಾಗೂ ಭಾರತದ ಪ್ರಪ್ರಥಮ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2009: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರೊ. ವೆಂಕಟಾಚಲ ಶಾಸ್ತ್ರಿ  ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದರು.

2009: ಮಂಗಳೂರಿನ ಶಕ್ತಿನಗರದಲ್ಲಿ ನಿರ್ಮಾಣಗೊಂಡಿರುವ ವಿಶ್ವ ಕೊಂಕಣಿ ಕೇಂದ್ರವನ್ನು ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಉದ್ಘಾಟಿಸಿದರು. ಈ ಕೇಂದ್ರಕ್ಕೆ ‘ಪಿ.ದಯಾನಂದ ಪೈ ಮತ್ತು ಪಿ. ಸತೀಶ್ ಪೈ ವಿಶ್ವ ಕೊಂಕಣಿ ಕೇಂದ್ರ’ ಎಂದು ಹೆಸರಿಡಲಾಯಿತು.

ಪ್ರಮುಖಜನನ/ಮರಣ:

1501: ಜರ್ಮನ್ ಭೌತಶಾಸ್ತ್ರಜ್ಞ ಮತ್ತು ಸಸ್ಯಶಾಸ್ತ್ರಜ್ಞರಾದ ಲೆಯೋನ್ ಹಾರ್ಟ್ ಫಚಸ್ ಜನಿಸಿದರು.  ಅವರು ಸಸ್ಯಗಳ ಉಪಯೋಗಗಳನ್ನು ತಿಳಿಸಿಕೊಡುವ ಸಚಿತ್ರಗ್ರಂಥ  ‘ಹರ್ಬಲ್ ಬುಕ್’ ಪ್ರಕಟಿಸಿ ಪ್ರಸಿದ್ಧರಾಗಿದ್ದರು.

1706: ವಿಜ್ಞಾನಿಯಾಗಿ, ಲೇಖಕರಾಗಿ, ರಾಜಕಾರಣಿಯಾಗಿ, ಅಮೆರಿಕದ ಸ್ವಾತಂತ್ರ್ಯ ಸೇನಾನಿಯಾಗಿ,  ಸಂಗೀತಗಾರರಾಗಿ, ವಿಜ್ಞಾನಿಯಾಗಿ ಹೀಗೆ ಬಹುಮುಖಿಯಾಗಿ ಹೆಸರಾದ ಬೆಂಜಮಿನ್ ಫ್ರಾಂಕ್ಲಿನ್ ಅವರು ಬೋಸ್ಟನ್ ನಗರದಲ್ಲಿ ಜನಿಸಿದರು.  ಅಮೆರಿಕದ ಪ್ರಥಮ ಪೋಸ್ಟ್ ಜನರಲ್ ಆಗಿದ್ದ  ಇವರಿಗೆ ಮಿಂಚೆಂಬುದು ವಿದ್ಯುತ್ ಸಂಬಂಧವಾದ ವಿದ್ಯಮಾನವಾಗಿ ಅರಿವಾಯಿತು.  ಅದನ್ನು ಲೋಕಕ್ಕೆ ತೋರಿಸಿಕೊಟ್ಟರಲ್ಲದೆ ಮಿಂಚುಕೋಲು, ಫ್ರಾಂಕ್ಲಿನ್ ಸ್ಟೌವ್, ಓಡೋಮೀಟರ್, ಬೈಫೋಕಲ್ ಕನ್ನಡಕದ ಗಾಜು ಹೀಗೆ ಅನೇಕ ವಸ್ತುಗಳ  ಜನಕರಾದರು.

1863: ರಷ್ಯಾದ ರಂಗಕರ್ಮಿ, ನಟ, ನಿರ್ದೇಶಕ ಕೊನ್ ಸ್ಟಾಂಟಿನ್ ಸೆರ್ಗಿಯೆವಿಚ್ ಸ್ಟಾನಿಸ್ಲಾವ್ ಸ್ಕಿ ಮಾಸ್ಕೋದಲ್ಲಿ ಜನಿಸಿದರು.  ತಮ್ಮದೇ ಆದ ಹೊಸ ನಟನಾ ತರಬೇತಿ, ಸಿದ್ಧತೆ ಮತ್ತು ತಾಲೀಮುಗಳಿಗೆ ಹೆಸರಾಗಿದ್ದ ಇವರು ಹಾಕಿಕೊಟ್ಟ ಪಂಕ್ತಿ   ‘ಸ್ಟಾನಿಸ್ಲಾವ್ ಸ್ಕಿ ಸಿಸ್ಟಮ್’ ಎಂಬ ಹೆಸರಿನಿಂದ ಪ್ರಸಿದ್ಧಗೊಂಡಿದೆ.

1867: ಅಮೆರಿಕದ ಚಲನಚಿತ್ರ ನಿರ್ಮಾಪಕ ಹಾಗೂ ಅತ್ಯಂತ ಪ್ರತಿಷ್ಟಿತ  ಚಲನಚಿತ್ರ ನಿರ್ಮಾಣ ಮತ್ತು ಮನರಂಜನಾ ಕಾರ್ಯಕ್ರಮ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಸ್ಟುಡಿಯೋ  ಸಂಸ್ಥಾಪಕರಲ್ಲಿ ಒಬ್ಬರಾದ  ಕಾರ್ಲ್ ಲಯೇಮ್ಲೆ ಅವರು ಜರ್ಮನಿ ದೇಶದಲ್ಲಿ ಜನಿಸಿದರು.  ಅವರು 400 ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಣಗಳಲ್ಲಿ ಭಾಗಿಯಾಗಿದ್ದರು.

1886: ಅಮೆರಿಕದ ಪಸಿದ್ಧ ವಿಮಾನ ಹಾರಾಟಗಾರ ಮತ್ತು ವಿಮಾನ ಕಾರ್ಖಾನೆಯ ಸ್ಥಾಪಕ ಗ್ಲೆನ್ ಮಾರ್ಟಿನ್  ಜನಿಸಿದರು.  ಅವರು ಸ್ಥಾಪಿಸಿದ ಮಾರ್ಟಿನ್ ಕಂಪೆನಿ, ಹಲವಾರು ಸಂಸ್ಥೆಗಳ ವಿಲೀನದೊಂದಿಗೆ ಇಂದು ಲಾಕ್ ಹೀಡ್ ಮಾರ್ಟಿನ್ ಕಂಪೆನಿ ಎಂಬ ದೊಡ್ಡ ಉದ್ಯಮವಾಗಿದೆ.

1888: ಭಾರತೀಯ ದಾರ್ಶನಿಕ ಮತ್ತು ಆಧುನಿಕ ಹಿಂದೀ ಪ್ರಾರಂಭಿಕ ಬರಹಗಾರರಲ್ಲಿ  ಪ್ರಮುಖರೆನಿಸಿರುವ  ಬಾಬು ಗುಲಾಬ್ ರೈ ಉತ್ತರದೇಶದ ಎಟಾವಾಹ್ ಎಂಬಲ್ಲಿ ಜನಿಸಿದರು.  ಇವರ ಗೌರವಾರ್ಥ ಭಾರತ ಸರ್ಕಾರವು 2002 ವರ್ಷದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿತು.

1905: ಭಾರತದ ಖ್ಯಾತ ಗಣಿತ ತಜ್ಞ ದತ್ತಾತ್ರೇಯ ರಾಮಚಂದ್ರ ಕಾಪ್ರೇಕರ್  ಜನಿಸಿದರು. ‘6174′ ಸಂಖ್ಯೆಗಾಗಿ ವಿಶ್ವಖ್ಯಾತಿ ಪಡೆದಿರುವ ಇವರ ಗೌರವಾರ್ಥ ಈ ಸಂಖ್ಯೆಯನ್ನು ‘ಕಾಪ್ರೇಕರ್ ಕಾನ್ ಸ್ಟಾಂಟ್’ ಎಂದೇ ಹೆಸರಿಸಲಾಗಿದೆ.

1911: ಚಿಕಾಗೋ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಪ್ರಮುಖ ನೇತಾರರಾಗಿದ್ದ ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ಜಾರ್ಜ್ ಸ್ಟಿಗ್ಲರ್ ಜನಿಸಿದರು.  ಎಕನಾಮಿಕ್ಸ್ ಅನ್ನು ‘ಇಂಪೀರಿಯಲ್ ಸೈನ್ಸ್’ ಎಂದು ಪ್ರತಿಪಾದಿಸಿದ್ದ ಅವರಿಗೆ 1982ರ ವರ್ಷದಲ್ಲಿ ನೊಬೆಲ್ ಅರ್ಥಶಾಸ್ತ್ರ ಪುರಸ್ಕಾರ ಸಂದಿತ್ತು.

1917: ತಮಿಳು ನಾಡಿನ ಮುಖ್ಯಮಂತ್ರಿ ಹಾಗೂ ಪ್ರಸಿದ್ಧ ಚಲನಚಿತ್ರ ನಾಯಕನಟರಾಗಿದ್ದ  ಮರುಡು ಗೋಪಾಲನ್ ರಾಮಚಂದ್ರನ್ ಶೀಲಂಕಾದ ಕ್ಯಾಂಡಿಯಲ್ಲಿ ಜನಿಸಿದರು.  ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ  ಪ್ರಥಮ ಚಿತ್ರನಟರಾದ ಇವರು, 1972ರಲ್ಲಿ  ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು. 1987ರ ವರ್ಷದಲ್ಲಿ ನಿಧನರಾದ ಇವರಿಗೆ ಮರಣೋತ್ತರವಾಗಿ 1988ರಲ್ಲಿ ‘ಭಾರತ ರತ್ನ’ ಪಶಸ್ತಿಯನ್ನು ಅರ್ಪಿಸಲಾಯಿತು.

1942: ಕ್ಯಾಷಿಯಸ್ ಕ್ಲೇ ಎಂದು ಹೆಸರು  ಬದಲಿಸಿಕೊಂಡ ಮಹಮ್ಮದ್ ಅಲಿ, ಅಮೇರಿಕಾದ ಕೆಂಟಕಿಯ ಲೌಸಿವಿಲ್ಲೆ ಎಂಬಲ್ಲಿ ಜನಿಸಿದರು.  ತಮ್ಮ ವೃತ್ತಿ ಜೀವನದಲ್ಲಿ ಮೂರು ಬಾರಿ ವಿಶ್ವ ಬಾಕ್ಸಿಂಗ್ ಹೆವಿವೈಟ್ ಚಾಂಪಿಯನ್ ಆಗಿದ್ದ ಇವರು, ತಾವಾಡಿದ್ದ 61 ಪಂದ್ಯಗಳಲ್ಲಿ 56ರಲ್ಲಿ ಜಯಿಸಿ ದಾಖಲೆ ನಿರ್ಮಿಸಿದ್ದರು.  2016ರ ವರ್ಷದಲ್ಲಿ ನಿಧನರಾದ ಇಅವರು ಟ್ರೆವರ್ ಬೆರ್ಬಿಕ್ ಅವರ ವಿರುದ್ಧ ಸೋಲುಂಡ ಬಳಿಕ 1981ರ ವರ್ಷದಲ್ಲಿ  ಬಾಕ್ಸಿಂಗಿಗೆ ವಿದಾಯ ಹೇಳಿದ್ದರು.

1945: ಕವಿ, ಜನಪ್ರಿಯ ಚಿತ್ರ ಸಾಹಿತಿ ಮತ್ತು  ಗೀತರಚನಕಾರರಾದ ಜಾವೇದ್ ಅಖ್ತರ್  ಗ್ವಾಲಿಯರ್ನಲ್ಲಿ ಜನಿಸಿದರು.  ಸಲೀಂ ಖಾನ್ ಅವರೊಂದಿಗೆ ‘ಸಲೀಂ-ಜಾವೇದ್’ ಜೋಡಿ ಎಂದು ಹೆಸರಾಗಿ 1971-82 ಅವಧಿಯಲ್ಲಿ ಇವರು ಅನೇಕ ಪ್ರಸಿದ್ಧ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ, ಗೀತೆ ರಚಿಸಿದ್ದರು.  ಮುಂದೆ ಏಕಾಂಗಿಯಾಗಿ ಮುಂದುವರೆದ ಇವರು, ಇದೇ ಕೆಲಸವನ್ನು  ನಿರಂತರವಾಗಿ ಮುಂದುವರೆಸಿದ್ದಾರೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ, ಪದ್ಮಶ್ರೀ, ಪದ್ಮಭೂಷಣ ಮತ್ತು ಹದಿಮೂರು ಬಾರಿ ಫಿಲಂ ಫೇರ್ ಪ್ರಶಸ್ತಿಗಳು ಇವರಿಗೆ ಸಂದಿವೆ.

1954: ರಾಷ್ಟ್ರ ಮಟ್ಟದ ಖ್ಯಾತಿಯ ತಬಲಾ ವಾದಕ ಪಂಡಿತ ಪಂಡಿತ್  ರಘುನಾಥ ನಾಕೋಡ್ ಅವರು ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳು ಅವರಿಗೆ ಸಂದಿವೆ.

395: ಜರ್ಮನ್ ಚಕ್ರವರ್ತಿ ಥಿಯೋಡೋಸಿಯಸ್ ನಿಧನರಾದರು.

1951: ಅಸ್ಸಾಮಿ ಕವಿ, ನಾಟಕಕಾರ ಮತ್ತು ನಿರ್ದೇಶಕ ಜ್ಯೋತಿ ಪ್ರಸಾದ್ ಆಗರವಾಲ ತೆಜಪುರದಲ್ಲಿ  ನಿಧನರಾದರು.  ಪ್ರಸಿದ್ಧ ಕವಿ, ನಾಟಕಕಾರ, ಕಲಾವಿದರಾಗಿದ್ದ ಇವರು ಅಸ್ಸಾಮಿನಲ್ಲಿ ‘ಜ್ಯೋಮತಿ’ ಎಂಬ ಚಲನಚಿತ್ರ ನಿರ್ಮಿಸುವುದರೊಂದಿಗೆ ‘ಅಸ್ಸಾಮಿ ಸಿನಿಮಾ ಜನಕ’ ಎಂದೂ ಖ್ಯಾತರಾಗಿದ್ದರು.  ಅವರ ನಿಧನದ ದಿನವನ್ನು ಆಸ್ಸಮಿನಲ್ಲಿ ‘ಶಿಲ್ಪಿ ದಿವಸ್’ ಎಂದು ಆಚರಿಸಲಾಗುತ್ತಿದೆ.

1964: ಮುಂಬೈನಲ್ಲಿ ಜನಿಸಿ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಸಿದ್ದರಾಗಿದ್ದ ಟಿ. ಎಚ್. ವೈಟ್ ಅವರು, ಗ್ರೀಸ್ ದೇಶದ ಅಥೆನ್ಸ್ ಬಳಿಯ ಪಿರೆಯಸ್ ಎಂಬಲ್ಲಿ ನಿಧನರಾದರು.  ಅವರ ಕಾದಂಬರಿ ಸರಣಿಗಳು  ಆರ್ಥೂರಿಯನ್ ನಾವೆಲ್ಸ್ ಎಂದು ಪ್ರಸಿದ್ಧವಾಗಿವೆ.  ‘ದಿ ಒನ್ಸ್ ಅಂಡ್ ದಿ ಫ್ಯೂಚರ್ ಕಿಂಗ್’, ‘ದಿ ಸ್ವೋರ್ಡ್ ಇನ್ ದಿ ಸ್ಟೋನ್’ ಮುಂತಾದ ಕಾದಂಬರಿಗಳು ಪ್ರಸಿದ್ಧವಾಗಿವೆ.

1997: ಪ್ಲೂಟೋವನ್ನು ಅನ್ವೇಷಿಸಿದ ಅಮೆರಿಕದ ಭೌತವಿಜ್ಞಾನಿ  ಕ್ಲೈಡ್ ಟೋಂಬಾಗ್ ನ್ಯೂ ಮೆಕ್ಸಿಕೋದಲ್ಲಿ ನಿಧನರಾದರು.  1930ರಲ್ಲಿ ಅವರು ಪ್ಲೂಟೋ ಅನ್ವೇಷಿಸಿದರು.  ಆ ಸಂದರ್ಭದಲ್ಲಿ ಪ್ಲೂಟೋವನ್ನು ಒಂದು ಗ್ರಹವಾಗಿ  ಪರಿಗಣಿಸಲಾಗಿತ್ತು. ಮುಂದೆ ಅದನ್ನು ಕುಬ್ಜ ಗ್ರಹ ಎಂದು ಪರಿಗಣಿಸಲಾಗುತ್ತಿದೆ.

2002: ಸ್ಪಾನಿಷ್ ಸಾಹಿತಿ ಕಾಮಿಲೋ ಜೋಸ್ ಸೆಲ ಅವರು ಸ್ಪೇನ್ ದೇಶದಲ್ಲಿ ಜನಿಸಿದರು.  ಅವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು.  ‘ದಿ ಫ್ಯಾಮಿಲಿ ಆಫ್ ಪಾಸ್ಕುಯಲ್ ಡುರಾಟೆ’, ‘ದಿ ಹೈವ್ಸ್’ ಅವರ ಪ್ರಸಿದ್ಧ ಕೃತಿಗಳು.

2007: ಅಂಕಣಕಾರ, ಪುಲಿಟ್ಜರ್ ಪ್ರಶಸ್ತಿ ವಿಜೇತ,  ವಿಡಂಬನಾತ್ಮಕ ಲೇಖನಗಳ ಕೃತಿಕಾರ ಆರ್ಟ್ ಬಕ್ ವಾಲ್ಡ್ ಅವರು ವಾಷಿಂಗ್ಟನ್ನಿನಲ್ಲಿ ನಿಧನರಾಧರು.

2009: ಸುಗಮ ಸಂಗೀತ ಗಾಯಕ, ಸಂಗೀತ ಸಂಯೋಜಕ ಹಾಗೂ  ನಟ  ರಾಜು ಅನಂತಸ್ವಾಮಿ ಬೆಂಗಳೂರಿನಲ್ಲಿ ನಿಧನರಾದರು.

2016: ‘ಗೀತಪ್ರಿಯ’ ಎಂಬ ಹೆಸರಿನಿಂದ ಪ್ರಸಿದ್ಧರಾದ  ಕನ್ನಡ ಚಿತ್ರರಂಗದ ಗೀತರಚಕಾರರೂ ಮತ್ತು ನಿರ್ದೇಶಕರೂ ಆದ ಲಕ್ಷ್ಮಣರಾವ್ ಮೋಹಿತೆ ನಿಧನರಾದರು.  ಇವರ ಮಣ್ಣಿನ ಮಗ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ.  ಇದಲ್ಲದೆ  ಹೊಂಬಿಸಿಲು, ಬೆಸುಗೆ, ಬೆಳುವಲದ ಮಡಿಲಲ್ಲಿ ಮುಂತಾದ  ನೆನಪಿನಲ್ಲಿ ಉಳಿಯುವ ಚಿತ್ರಗಳೂ ಸೇರಿದಂತೆ  32 ಚಿತ್ರಗಳನ್ನು ನಿರ್ದೇಶಿಸಿ ನೂರಾರು  ಗೀತೆಗಳನ್ನು ರಚಿಸಿದ ಗೀತಪ್ರಿಯರ ರಚನೆ  ಮಹ್ಮಮ್ಮದ್ ರಫಿ ಹಾಡಿದ  ‘ನೀನೆಲ್ಲಿ ನಡೆವೆ ದೂರ’ ಇಂದಿಗೂ ಜನಪ್ರಿಯ.