Categories
e-ದಿನ

ಜನವರಿ-18

ಪ್ರಮುಖಘಟನಾವಳಿಗಳು:

1591: ಸಿಯಾಮಿನ ರಾಜ ನರೇಸುವಾನ್ ಬರ್ಮಾದ ರಾಜಕುಮಾರ ಮಿಂಗಿ ಸ್ವಾನನನ್ನು ದ್ವಂದ್ವ ಯುದ್ಧದಲ್ಲಿ ಕೊಂದು ಹಾಕಿದ.  ಈ ದಿನವನ್ನು ರಾಯಲ್ ಥಾಯ್ ಆರ್ಮ್ಡ್ ಫೋರ್ಸಸ್ ಡೇ ಎಂದು ಆಚರಿಸಲಾಗುತ್ತದೆ

1778: ಜೇಮ್ಸ್ ಕುಕ್ ಹವಾಯಿ ದ್ವೀಪವನ್ನು ಅನ್ವೇಷಿಸಿದ ಮೊದಲ ಯೂರೋಪಿಗನೆನಿಸಿದ.  ಆತ ಇದನ್ನು ಸ್ಯಾಂಡ್ವಿಚ್ ಐಲ್ಯಾಂಡ್ ಎಂದು ಹೆಸರಿಸಿದ್ದ.

1788: 736 ಖೈದಿಗಳನ್ನು ಹೊತ್ತ ಗ್ರೇಟ್ ಬ್ರಿಟನ್ನಿನ ಮೊದಲ ಹಡಗು ಆಸ್ಟ್ರೇಲಿಯಾದ ‘ಬೊಟಾನಿ ಬೇ’ ಸಮುದ್ರ ತೀರಕ್ಕೆ ಬಂದಿಳಿಯಿತು.

1886: ಆಧುನಿಕ ಹಾಕಿ ಕ್ರೀಡೆಗೆ ಜನ್ಮಕೊಟ್ಟ ‘ದಿ ಹಾಕಿ ಅಸೋಸಿಯೇಶನ್’ ಇಂಗ್ಲೆಂಡಿನಲ್ಲಿ ಆರಂಭಗೊಂಡಿತು.

1896: ಎಚ್. ಎಲ್. ಸ್ಮಿತ್ ಮೊದಲ ಬಾರಿಗೆ ಎಕ್ಸ್ ರೇ ಯಂತ್ರವನ್ನು ಉತ್ತರ ಕೆರೋಲಿನಾದಲ್ಲಿ ಪ್ರದರ್ಶಿಸಿದ

1903: ಮೆಸಾಚುಸೆಟ್ಸ್ ಪ್ರದೇಶದ ವೆಲ್ ಫ್ಲೀಟ್ ಎಂಬಲ್ಲಿಂದ  ಮೊದಲ ಟ್ರಾನ್ಸ್ ಅಟ್ಲಾಂಟಿಕ್ ರೇಡಿಯೋ ಪ್ರಸರಣ  ಅಮೆರಿಕದಲ್ಲಿ ಭಿತ್ತರಗೊಂಡಿತು.

1911: ಮೊತ್ತ ಮೊದಲ ಬಾರಿಗೆ ಹಡಗಿನ ಮೇಲೆ  ವಿಮಾನವೊಂದು  ಬಂದಿಳಿಯಿತು. ಪೈಲಟ್ ಇ.ಬಿ. ಎಲಿ ಅವರು ಸಾನ್ ಫ್ರಾನ್ಸಿಸ್ಕೊ ಬಂದರಿನಲ್ಲಿ ತಂಗಿದ್ದ  ಎಸ್. ಪೆನ್ಸಿಲ್ವೇನಿಯಾ ಹಡಗಿನ ಮೇಲೆ  ತಮ್ಮ ವಿಮಾನವನ್ನು ಇಳಿಸಿದರು.

1915: ಪಶ್ಚಿಮ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಹೆಚ್ಚುಗೊಳಿಸುವ ನಿಟ್ಟಿನಲ್ಲಿ ಜಪಾನ್ ತನ್ನ 21 ಆಗ್ರಹಪೂರ್ವಕ ಬೇಡಿಕೆಗಳನ್ನು ಚೀನಾದ ಮುಂದಿಟ್ಟಿತು.

1919: ಮೊದಲ ಜಾಗತಿಕ ಸಮರದಿಂದ ಉದ್ಭವಿಸಿದ ಸಮಸ್ಯೆಗಳ ನಿವಾರಣೆಗಾಗಿ ಪ್ಯಾರಿಸ್ ಶಾಂತಿ ಸಮ್ಮೇಳನವನ್ನು, ವರ್ಸೈಲ್ಸಿನಲ್ಲಿ  ಆಯೋಜಿಸಲಾಯಿತು. ಸಮರದಲ್ಲಿ ಪರಾಭವಗೊಂಡ ಜರ್ಮನಿಗೆ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಲಾಯಿತು. ಸಮ್ಮೇಳನದಲ್ಲಿ ವಿಜಯ ಸಾಧಿಸಿದ ನಾಲ್ಕು ಪ್ರಮುಖ ರಾಷ್ಟ್ರಗಳಾದ ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಅಮೆರಿಕ ಪ್ರಮುಖ ಪಾತ್ರ ವಹಿಸಿದವು.

1950: ಪ್ರಧಾನಿ ಜವಾಹರಲಾಲ್ ನೆಹರೂ ಅವರು “ಭಾರತವು ಜಾತ್ಯತೀತ ರಾಷ್ಟ್ರ” ಎಂದು ಘೋಷಿಸಿದರು.

1958: 40ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ವಿ.ಕೃ. ಗೋಕಾಕ್ ಅವರ ಸಮ್ಮೆಳನಾಧ್ಯಕ್ಷತೆಯಲ್ಲಿ ಬಳ್ಳಾರಿಯಲ್ಲಿ ಆರಂಭಗೊಂಡಿತು.

1976: ಲೆಬೆನಾನಿನ  ಕ್ರಿಶ್ಚಿಯನ್ ಉಗ್ರಗಾಮಿಗಳು ಬೀರತ್ತಿನ ಕರಾಂಟಿನದಲ್ಲಿ 1000ಕ್ಕೂ ಹೆಚ್ಚು ಜನರನ್ನು ಕೊಂದುಹಾಕಿದರು.

1977: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಂಧನದಲ್ಲಿರಿಸಿದ್ದ,  ರಾಜಕೀಯ ನಾಯಕರುಗಳಾದ ಮೊರಾರ್ಜಿ ದೇಸಾಯಿ ಮತ್ತಿತರರನ್ನು ಬಿಡುಗಡೆ ಮಾಡಲಾಯಿತು.

1977: ವಿಜ್ಞಾನಿಗಳು ಮೊದಲಬಾರಿಗೆ,   ಮಾರಣಾಂತಿಕವಾಗಿದ್ದ ಅದುವರೆವಿಗೂ ಪತ್ತೆಯಾಗದಿದ್ದ ಲೆಜನಿಯರ್ಸ್ ಸಾಂಕ್ರಾಮಿಕ   ರೋಗಕ್ಕೆ ಕಾರಣವಾಗಿದ್ದ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದರು.  ಫಿಲೆಡೆಲ್ಫಿಯಾದಲ್ಲಿ 1976ರಲ್ಲಿ ಹಲವಾರು ಜನ ರೋಗಕ್ಕೆ ಒಳಗಾಗಿ ಸತ್ತ ಸಂದರ್ಭದಲ್ಲಿ,  ಆ ರೋಗ ಲೆಜನ್ನೆಯರ್ಸ್ ಎಂಬ ಹೆಸರನ್ನು ಪಡೆದುಕೊಂಡಿತ್ತು.  ಅದನ್ನು ಕುರಿತು ಕೂಲಂಕಷವಾಗಿ ಅಧ್ಯಯನ ನಡೆಸಿದ ವಿಜ್ಞಾನಿಗಳು ಅದು ಯಾವ  ಬ್ಯಾಕ್ಟೀರಿಯಾದಿಂದ  ಆದದ್ದು ಎಂಬುದನ್ನು ಗುರುತಿಸಿ ಅದಕ್ಕೆ ಲೆಜಿಯನ್ನೆಲ್ಲಾ ಎಂದು ಹೆಸರಿಸಿದರು.  ಈ ಬ್ಯಾಕ್ಟೀರಿಯಾ ಉಂಟುಮಾಡಿದ ಕಾಯಿಲೆಗೆ  ಲೆಜಿಯನ್ನೆಲ್ಲಾ ಪ್ನಿಯಮೋಫಿಲಾ ಎಂದು ಹೆಸರಿಸಿದರು.

1993: ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ದಿನವನ್ನು ಮೊಟ್ಟ ಮೊದಲ ಬಾರಿಗೆ ಅಮೆರಿಕದ ಎಲ್ಲಾ 50 ರಾಜ್ಯಗಳಲ್ಲೂ ಆಚರಿಸಲಾಯಿತು.

2005: ವಿಶ್ವದ ಅತಿ ದೊಡ್ಡ ವ್ಯಾಪಾರಿ ಜೆಟ್ ವಿಮಾನವಾದ ‘ಏರ್ ಬಸ್ ಎ380’ ಫ್ರಾನ್ಸಿನ ಟೂಲೌಸ್ ಎಂಬಲ್ಲಿ ನಡೆದ ಸಮಾರಂಭದಲ್ಲಿ  ಅನಾವರಣಗೊಂಡಿತು.

2006: ಧರ್ಮಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದ ಜಾತ್ಯತೀತ ಜನತಾದಳವು ಬಿಜೆಪಿ ಜೊತೆಗೂಡಿ ಪರ್ಯಾಯ ಸರ್ಕಾರ ರಚನೆಗೆ ಮುಂದಾಯಿತು. ಜನವರಿ 26ರ ಒಳಗೆ ಬಹುಮತ ಸಾಬೀತುಪಡಿಸಬೇಕೆಂದು  ರಾಜ್ಯಪಾಲರು ಮುಖ್ಯಮಂತ್ರಿಗಳಾದ  ಧರ್ಮಸಿಂಗ್ ಅವರಿಗೆ ಸೂಚನೆ ನೀಡಿದರು.

2007: ಪ್ರತಿ ಕುಟುಂಬದಲ್ಲಿ ಬ್ಯಾಂಕ್ ಖಾತೆ ಹೊಂದಿರುವ ಕರ್ನಾಟಕದ ಮೊದಲ ಜಿಲ್ಲೆ ಎಂಬ ಎಂಬ ಖ್ಯಾತಿಗೆ ಗುಲ್ಬರ್ಗ ಪಾತ್ರವಾಯಿತು. ಇದು ಈ ಹೆಗ್ಗಳಿಕೆ  ಹೊಂದಿರುವ ದೇಶದ ಎರಡನೇ ಜಿಲ್ಲೆ ಎನಿಸಿತು.

2008: ಉಡುಪಿಯ ಏಳು ಮಠಗಳ ಯತಿಗಳ ಅನುಪಸ್ಥಿತಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಮಾಡಿದ   ಹೊಸ ಇತಿಹಾಸ ನಿರ್ಮಿಸಿದರು. ಪೀಠಾರೋಹಣದ ಜೊತೆಗೆ ಪರ್ಯಾಯದ ಮೊದಲ ದಿನವೇ ಶ್ರೀಕೃಷ್ಣ ದೇವರ ಪೂಜೆ ನೆರವೇರಿಸಿದ ಹೊಸ ಸಂಪ್ರದಾಯಕ್ಕೂ ನಾಂದಿ ಹಾಡಿದರು.

2009: ಗಂಡೋರಿ ನಾಲಾ ನೀರಾವರಿ ಯೋಜನೆ ಆರಂಭಗೊಂಡಿತು. ಯೋಜನೆಯ ಎಡದಂಡೆ ಕಾಲುವೆಯ 66 ಕಿಮೀವರೆಗೂ ನೀರು ಹರಿಸಲಾಯಿತು.  ಹೀಗಾಗಿ ಇದು  ಗುಲ್ಬರ್ಗ ನೀರಾವರಿ ಯೋಜನಾ ವಲಯದಲ್ಲಿಯೇ ಅತಿ ಹೆಚ್ಚು ಉದ್ದದವರೆಗೆ ನೀರು ಹರಿಸಿದ ಕಾಲುವೆ ಎಂಬ ಖ್ಯಾತಿ ಪಡೆಯಿತು.

2009: ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಮತ್ತು ಈಗಾಗಲೇ ಇರುವ ಮೂರು ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಸುಗ್ರೀವಾಜ್ಞೆ ಹೊರಡಿಸಿದರು. ಕೇಂದ್ರೀಯ ವಿಶ್ವವಿದ್ಯಾಲಯಗಳ ಮಸೂದೆ 2008ನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಸಂಸತ್ತಿನ ಕಳೆದ ಅಧಿವೇಶನದಲ್ಲಿ ಈ ಮಸೂದೆ ಅಂಗೀಕಾರವಾಗದ ಕಾರಣ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು. ರಾಷ್ಟ್ರಪತಿಗಳ ಈ ಸುಗ್ರೀವಾಜ್ಞೆ ಪ್ರಕಾರ, ಸಚಿವಾಲಯವು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕಕ್ಕೆ ಕ್ರಮ ಕೈಗೊಂಡಿತು.

2017: ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರ ಆರಾಧನಾ ಮಹೋತ್ಸವವು ಜನವರಿ 13 ರಿಂದ ಪ್ರಾರಂಭಗೊಂಡು ಅವರು ಸ್ವರ್ಗಸ್ಥರಾದ ಈ ದಿನದ ಆಚರಣೆಯವರೆಗೆ ನಡೆದಿದೆ.  ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಸಂಗೀತಗಾರರು ತಿರುವಯ್ಯಾರಿನಲ್ಲಿ ಬಂದು ಸೇರಿ ಕಛೇರಿ ನಡೆಸಿದರಲ್ಲದೆ, ಆರಾಧನೆಯ ಕೊನೆಯ ದಿನವಾದ ಇಂದು  ಒಟ್ಟಾಗಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡಿದ್ದಾರೆ. ಪುಷ್ಯ ಬಹಳ ಪಂಚಮಿ ದಿನದಂದು ತ್ಯಾಗರಾಜರು ಸಮಾಧಿಸ್ಥರಾದ  ದಿನಕ್ಕೆ ಹೊಂದಿಕೊಂಡಂತೆ ಈ ಆಚರಣೆ ಪ್ರತೀವರ್ಷವೂ ನಡೆಯುತ್ತಿದೆ.

ಪ್ರಮುಖಜನನ/ಮರಣ:

1842: ಭಾರತೀಯ ನ್ಯಾಯಾಧೀಶ, ಇತಿಹಾಸಕಾರ, ಸಮಾಜ ಹಾಗೂ ಆರ್ಥಿಕ ಸುಧಾರಕ ಮಹದೇವ ಗೋವಿಂದ ರಾನಡೆ  ಅವರು  ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ ಎಂಬಲ್ಲಿ ಜನಿಸಿದರು ಇವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಸಂಸ್ಥಾಪಕ  ಸದಸ್ಯರಲ್ಲಿ ಒಬ್ಬರಾಗಿದ್ದರು. ಬ್ರಿಟಿಷರೊಂದಿಗೆ ಶಾಂತಿಯಿಂದ ವ್ಯವಹರಿಸಿ ಭಾರತೀಯ ಸಮಾಜವನ್ನು ಸುಧಾರಿಸುವ  ಮನೋಧರ್ಮ ಹೊಂದಿದ್ದ ರಾನಡೆ ಅವರು, ಸಮಾಜ ಸುಧಾರಣಾ  ಕಾರ್ಯಗಳಿಗಾಗಿ ಹಲವಾರು ಸಂಘಟನೆಗಳನ್ನು ಸ್ಥಾಪಿಸಿದ್ದರಲ್ಲದೆ, ಇಂದುಪ್ರಕಾಶ ಎಂಬ ಸಮಾಜ ಮುಖೀ ಪತ್ರಿಕೆಯನ್ನೂ ಹೊರಡಿಸುತ್ತಿದ್ದರು.

1954: ಅಲೆಗ್ಸಾಂಡರ್ ಗ್ರಹಾಂಬೆಲ್ ಅವರ ಸಹಾಯಕನಾಗಿ ಟೆಲಿಫೋನ್ ಕಂಡುಹಿಡಿಯುವುದರಲ್ಲಿ ದುಡಿದಿದ್ದ ಥಾಮಸ್ ಎ. ವಾಟ್ಸನ್, ಅಮೆರಿಕದ ಮೆಸ್ಸಚುಸೆಟ್ಸ್ ಪ್ರದೇಶದಲ್ಲಿ ಜನಿಸಿದರು.  ಗ್ರಹಾಂ ಬೆಲ್ ಅವರು ಮೊಟ್ಟ ಮೊದಲ ಬಾರಿಗೆ ಟೆಲಿಫೋನ್ ಮಾಡಿದ್ದು ಪಕ್ಕದ ಕೊಠಡಿಯಲ್ಲಿದ್ದ ‘ಥಾಮಸ್ ವಾಟ್ಸನ್’ ಅವರಿಗೆ.

1892:  ಖ್ಯಾತ ಹಾಲಿವುಡ್ ನಟ ಅಲಿವರ್ ಹಾರ್ಡಿ ಜನಿಸಿದರು.    ಸ್ಟಾನ್ ಲಾರೆಲ್ ಅವರೊಂದಿಗೆ  ‘ಲಾರೆಲ್ ಅಂಡ್ ಹಾರ್ಡಿ’ ಹಾಸ್ಯ ಜೋಡಿಯಾಗಿ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು.

1921: ಹಾಸ್ಯನಾಟಕಕಾರ ದಾಶರಥಿ ದೀಕ್ಷಿತ್‌ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು.  ನಗೆಬರಹಗಾರ, ಕಾದಂಬರಿಕಾರ, ನಟ, ಸೂತ್ರದ ಬೊಂಬೆಯಾಟಗಾರ, ಹೀಗೆ ನಾನಾ ಪ್ರಕಾರಗಳಲ್ಲಿ  ಪ್ರೇಕ್ಷಕರನ್ನು ನಗೆಲೋಕಕ್ಕೆ ಕರೆದೊಯ್ಯುತ್ತಿದ್ದ ದೀಕ್ಷಿತರು 1986ರ ವರ್ಷದಲ್ಲಿ ನಿಧನರಾದರು.

1921: ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ಯೋಚಿರು ನಂಬು, ಜಪಾನಿನ ಟೋಕಿಯೋದಲ್ಲಿ ಜನಿಸಿದರು.  ಮುಂದೆ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಥಿಯೋರೆಟಿಕಲ್ ಭೌತವಿಜ್ಞಾನದಲ್ಲಿ ಅವರು ಪ್ರಸಿದ್ಧಿ ಪಡೆದರು.

1927: ಪ್ರಸಿದ್ಧ ವೀಣಾವಾದಕರಾದ ಸುಂದರಂ ಬಾಲಚಂದರ್ ತಮಿಳುನಾಡಿನ ಮೈಲಾಪುರದಲ್ಲಿ ಜನಿಸಿದರು.  ಪ್ರಾರಂಭಿಕ ವರ್ಷಗಳಲ್ಲಿ ಸಿನಿಮಾ ನಟರಾಗಿ, ಗಾಯಕರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಹಾ ದುಡಿದಿದ್ದ ಅವರು, ಮುಂದೆ ಹೆಚ್ಚು ವೀಣಾವಾದನದಲ್ಲೇ ತಮ್ಮನ್ನು ತಲ್ಲೀನಗೊಳಿಸಿಕೊಂಡರು.  ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1937: ಉತ್ತರ ಐರ್ಲ್ಯಾಂಡಿನಲ್ಲಿ ಸೋಷಿಯಲ್ ಡೆಮೋಕ್ರಾಟಿಕ್ ಅಂಡ್ ಲೇಬರ್ ಪಾರ್ಟಿ ಸ್ಥಾಪಿಸಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಜಾನ್ ಹ್ಯೂಮೆ  ಅವರು, ಡೆರ್ರಿ ಎಂಬಲ್ಲಿ ಜನಿಸಿದರು.

1957: ಭಾರತೀಯ ಈಜುಗಾರ್ತಿ, ಸೌಂದರ್ಯ ರಾಣಿ, ನಟಿ, ರೂಪದರ್ಶಿ, ರಾಜಕಾರಣಿ  ನಫೀಸಾ ಅಲಿ ಮುಂಬೈನಲ್ಲಿ ಜನಿಸಿದರು.  ಅನೇಕ ಚಲನಚಿತ್ರಗಳಲ್ಲಿ ನಟಿಸಿರುವ ಅವರು  1972-74 ಅವಧಿಯಲ್ಲಿ ಅವರು ಈಜುಗಾರಿಕೆಯ ಚಾಂಪಿಯನ್ ಆಗಿದ್ದರು.  1976ರಲ್ಲಿ   ಮಿಸ್ ಇಂಡಿಯಾ ಸ್ಪರ್ಧೆ ವಿಜೇತಯಾಗಿದ್ದ ಅವರು 1977ರ ವರ್ಷದಲ್ಲಿ ಮಿಸ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.

1936: ಇಂಗ್ಲಿಷ್ ಸಣ್ಣ ಕಥೆಗಾರ, ಕವಿ, ಕಾದಂಬರಿಕಾರ ರುಡ್ ಯಾರ್ಡ್ ಕಿಪ್ಲಿಂಗ್ ತಮ್ಮ 71ನೇ ವಯಸಿನಲ್ಲಿ ಇಂಗ್ಲೆಂಡಿನ ಬುರ್ ವಾಶ್ನಲ್ಲಿ ನಿಧನರಾದರು. ಭಾರತದಲ್ಲಿ ಜನಿಸಿ ಭಾರತದ ವಾತಾವರಣದ ಮಹತ್ವದ ಪ್ರಾಕೃತಿಕ  ಕಥಾನಕಗಳನ್ನು ಸೃಷ್ಟಿಸಿ ಪ್ರಸಿದ್ಧರಾಗಿದ್ದ ಅವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.  ‘ಜಂಗಲ್ ಬುಕ್’ ಅವರ ಅತ್ಯಂತ ಜನಪ್ರಿಯ ಕೃತಿ.

1947: ಭಾರತೀಯ ಗಾಯಕ, ನಟ ಕುಂದನ್ ಲಾಲ್ ಸೈಗಲ್, ತಮ್ಮ 42ನೇ ವಯಸಿನಲ್ಲಿ ಜಲಂಧರಿನಲ್ಲಿ ನಿಧನರಾದರು. ‘ದೇವದಾಸ್’ ಚಿತ್ರದ ಮೂಲಕ ಅವರು ಅಪಾರ ಖ್ಯಾತಿ ಗಳಿಸಿದ್ದರು.

1995: ಜರ್ಮನಿಯ ನೊಬೆಲ್ ಪುರಸ್ಕೃತ ಜೈವಿಕ ವಿಜ್ಞಾನಿ ಅಡೋಲ್ಫ್ ಬ್ಯುಟೆನಾನ್  ಮ್ಯೂನಿಚ್ ನಗರದಲ್ಲಿ ನಿಧನರಾದರು.

1996: ತೆಲುಗು ಚಿತ್ರನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಹೈದರಾಬಾದಿನಲ್ಲಿ ನಿಧನರಾದರು.  ಚಲನಚಿತ್ರಗಳಲ್ಲಿ ಅಭಿನಯ ಮತ್ತು ನಿರ್ಮಾಣಕ್ಕೆ ಹಲವು ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2003: ಹಿಂದಿಯ ಪ್ರಖ್ಯಾತ ಕವಿ, ಬರಹಗಾರ ಹರಿವಂಶರಾಯ್ ಬಚ್ಚನ್ ಮುಂಬೈನಲ್ಲಿ ನಿಧನರಾದರು.  ಸರಸ್ವತಿ ಸಮ್ಮಾನ್ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

2007: ಜಗತ್ತಿನ ಹಿರಿಯಜ್ಜಿ ಎಂದೇ ಹೆಸರಾದ ಕೆನಡಾದ ಜೂಲಿ ವಿನ್ ಫರ್ಡ್ ಬರ್ಟ್ರೆಂಡ್ ತಮ್ಮ 115ನೇ ವಯಸ್ಸಿನಲ್ಲಿ ನಿಧನರಾದರು. ಜಗತ್ತಿನ ಹಿರಿಯಾಕೆ  ಎಂಬ ಖ್ಯಾತಿ ಪಡೆದಿದ್ದ ಇವರು  ಗಿನ್ನೆಸ್ ದಾಖಲೆಯ ಪುಸ್ತಕಕ್ಕೂ ಸೇರಿದ್ದರು. ನಿದ್ದೆಯಲ್ಲಿಯೇ ಸಾವಿಗೆ ಸರಿದ ಇವರು  1891ರ ಸೆಪ್ಟೆಂಬರ್ 16ರಂದು ಕ್ಯೂಬಿಕ್ನಲ್ಲಿ ಜನಿಸಿದ್ದರು.

2007: ಖ್ಯಾತ ಪತ್ರಿಕೋದ್ಯಮಿ ಲಲಿತ್ ಮೋಹನ್ ಥಾಪರ್ ನವದೆಹಲಿಯಲ್ಲಿ ನಿಧನರಾದರು. ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥರಾಗಿದ್ದ ಥಾಪರ್ 1991ರಲ್ಲಿ ದಿ ಪಯೋನೀರ್ ಪತ್ರಿಕೆಯ ಮಾಲೀಕರಾದರು. 1998ರಲ್ಲಿ ಈ ಪತ್ರಿಕೆಯನ್ನು ಬೇರೆ  ಆಡಳಿತಕ್ಕೆ ಹಸ್ತಾಂತರಿದರು.

2008: ಚೆಸ್ ವಿಶ್ವ ಚಾಂಪಿಯನ್ ಪಟ್ಟ ಧರಿಸಿದ ಅಮೆರಿಕದ ಮೊತ್ತಮೊದಲ ಸ್ಪರ್ಧಿ  ಬಾಬ್ಬಿ ಫಿಷರ್ ಐರ್ಲ್ಯಾಂಡಿನ ರೆಜಾವಿಕ್ ನಗರದಲ್ಲಿ ನಿಧನರಾದರು. 1972ರಲ್ಲಿ ಅವರು ರಷ್ಯಾದ ಬೋರಿಸ್ ಸ್ಪಾಸ್ಕಿ ವಿರುದ್ಧ ಗೆಲುವು ಪಡೆದು, ವಿಶ್ವ ಚಾಂಪಿಯನ್ ಸಾಧನೆ ಮಾಡಿದ ಅಮೆರಿಕದ ಮೊದಲ ಸ್ಪರ್ಧಿ ಎಂಬ ಹೆಸರು ಪಡೆದಿದ್ದರು.