ದಿನಾಚರಣೆ:
ಕೊಕ್ಬೊರೊಕ್ ದಿನ
ತ್ರಿಪುರಾ ರಾಜ್ಯದಲ್ಲಿ ಅಲ್ಲಿನ ಅಧಿಕೃತ ಭಾಷೆಯಾದ ‘ಕೊಕ್ಬೊರೊಕ್’ ಅಭಿವೃದ್ಧಿ ಪೂರಕವಾಗಿ ಪ್ರತಿವರ್ಷದ ಜನವರಿ 19 ದಿನವನ್ನು ಕೊಕ್ಬೊರೊಕ್ ದಿನವನ್ನಾಗಿ ಆಚರಿಸಲಾಗುತ್ತಿದೆ. 1979ರ ವರ್ಷದಿಂದ ಜಾರಿಯಲ್ಲಿರುವ ಈ ದಿನಾಚರಣೆಯನ್ನು ಅನೇಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸಲಾಗುತ್ತಿದೆ.
ಪ್ರಮುಖಘಟನಾವಳಿಗಳು:
1607: ಫಿಲಿಪ್ಪೈನ್ಸ್ ದೇಶದಲ್ಲಿನ ಸಾನ್ ಸಾನ್ ಅಗಸ್ಟಿನ್ ಚರ್ಚ್ ನಿರ್ಮಾಣ ಪೂರ್ಣಗೊಂಡಿತು. ಇಂದಿಗೂ ಇದು ಆ ದೇಶದ ಅತ್ಯಂತ ಹಳೆಯ ಚರ್ಚ್ ಆಗಿ ಶೋಭಿಸುತ್ತಿದೆ.
1736: ಪ್ರಸಿದ್ಧ ಸ್ಕಾಟಿಷ್ ಸಂಶೋಧಕ ಜೇಮ್ಸ್ ವಾಟ್ ಜನಿಸಿದರು. ಇವರು ಸಂಶೋಧಿಸಿದ ಹಬೆ ಯಂತ್ರ (ಸ್ಟೀಮ್ ಇಂಜಿನ್) ಕೈಗಾರಿಕಾ ಕ್ರಾಂತಿಗೆ ಸಂದ ಮಹತ್ವದ ಕೊಡುಗೆಯಾಗಿದೆ.
1839: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು, ಕೆಂಪು ಸಮುದ್ರಕ್ಕೆ ಪೂರ್ವ ದಿಕ್ಕಿನಿಂದ ಮಾರ್ಗ ಹೊಂದಿರುವ ಯೆಮೆನ್ ದೇಶದ ಏಡನ್ ಬಂದರು ನಗರವನ್ನು ವಶಪಡಿಸಿಕೊಂಡಿತು.
1883: ಥಾಮಸ್ ಆಲ್ವಾ ಎಡಿಸನ್ ಅವರು ನಿರ್ಮಿಸಿದ ಪ್ರಥಮ ನಗರ ವಿದ್ಯುದ್ದೀಕರಣ ವ್ಯವಸ್ಥೆಯು ನ್ಯೂ ಜೆರ್ಸಿಯ ರೋಸೆಲ್ಲೇ ಎಂಬಲ್ಲಿ ಪ್ರಾರಂಭಗೊಂಡಿತು. ಎತ್ತರದ ಕಂಬಗಳ ಮೇಲೆ ವೈರ್ ವ್ಯವಸ್ಥೆಯ ಮೂಲಕ ಈ ವ್ಯವಸ್ಥೆಯನ್ನು ರೂಪಿಸಲಾಯಿತು.
1915: ಫ್ರಾನ್ಸಿನ ಜಾರ್ಜಸ್ ಕ್ಲಾಡ್ ಅವರು ಜಾಹೀರಾತುಗಳಲ್ಲಿ ಬಳಕೆಯಲ್ಲಿರುವ ನಿಯಾನ್ ಡಿಸ್ಚಾರ್ಜ್ ಟ್ಯೂಬಿಗೆ ಪೇಟೆಂಟ್ ಪಡೆದರು.
1920: ಅಮೆರಿಕದ ಸೆನೆಟ್, ಲೀಗ್ ಆಫ್ ನೇಷನ್ಸ್ ಕೂಟವನ್ನು ಸೇರುವುದಕ್ಕೆ ವಿರುದ್ಧವಾಗಿ ಮತ ನೀಡಿತು.
1931: ಲಂಡನ್ನಿನಲ್ಲಿ ಪ್ರಥಮ ದುಂಡುಮೇಜಿನ ಪರಿಷತ್ತು ಮುಕ್ತಾಯಗೊಂಡಿತು.
1937: ಲಾಸ್ ಏಂಜೆಲಿಸ್ ನಗರದಿಂದ ನ್ಯೂಯಾರ್ಕಿಗೆ 7 ಗಂಟೆ 28 ನಿಮಿಷ, 25 ಸೆಕೆಂಡುಗಳಲ್ಲಿ ತಮ್ಮ ಮಾನೋ ಪ್ಲೇನನ್ನು ಹಾರಿಸುವ ಮೂಲಕ ಲಕ್ಷಾಧೀಶ ಹೊವರ್ಡ್ ಹಗ್ಸ್ ಅವರು ವಿಮಾನ ಹಾರಾಟ ಚರಿತ್ರೆಯಲ್ಲಿ ದಾಖಲೆ ಮೂಡಿಸಿದರು.
1940: ಪ್ರಥಮ ಬಾರಿಗೆ ಅಡಾಲ್ಫ್ ಹಿಟ್ಲರ್ ಮತ್ತು ಆತನ ನಾಜಿ ಪಕ್ಷವನ್ನು ಅಪಹಾಸ್ಯಗೈದು ಚಿತ್ರಿಸಲಾದ ‘You Nazty Spy!’ ತನ್ನ ಪ್ರಥಮ ಪ್ರದರ್ಶನವನ್ನು ಕಂಡಿತು.
1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ಸೋವಿಯತ್ ಪಡೆಗಳು ಲೋಡ್ಸ್ ಘೆಟ್ಟೋ ಅನ್ನು ನಾಜಿ ಪಡೆಗಳಿಂದ ಮುಕ್ತಗೊಳಿಸಿತು. ನಾಜಿಗಳು ಆಕ್ರಮಿಸಿದ್ದ ಈ ಪ್ರದೇಶದಲ್ಲಿ 1940ರಲ್ಲಿ ಇದ್ದ 2 ಲಕ್ಷ ಮೂಲನಿವಾಸಿಗಳಲ್ಲಿ, ಕೇವಲ 900ಕ್ಕಿಂತ ಕಡಿಮೆ ಜನ ಮಾತ್ರ ಬದುಕುಳಿದಿದ್ದರು.
1960: ಜಪಾನ್ ಮತ್ತು ಅಮೆರಿಕ ದೇಶಗಳು ಪಾರಸ್ಪರಿಕ ಸಂರಕ್ಷಣಾ ಒಪ್ಪಂದ ‘ಯು.ಎಸ್ – ಜಪಾನ್ ಮ್ಯೂಟುಯಲ್ ಸೆಕ್ಯೂರಿಟಿ ಟ್ರೀಟಿ’ಗೆ ಸಹಿ ಮಾಡಿದವು.
1983: ಆಪಲ್ ಇನ್ಕಾರ್ಪೋರೇಶನ್ ಸಂಸ್ಥೆಯು ಬಳಕೆದಾರ ಸ್ನೇಹಮುಖೀ ವ್ಯವಸ್ಥೆಯಾದ ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಮತ್ತು ‘ಮೌಸ್’ ಉಳ್ಳ ‘ಆಪಲ್ ಲೀಸಾ’ ಎಂಬ ಪರ್ಸನಲ್ ಕಂಪ್ಯೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತು. ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ಜಾರಿಯಾಗುವುದಕ್ಕೆ ಮುಂಚಿನ ಕಂಪ್ಯೂಟರ್ಗಳನ್ನು ಉಪಯೋಗಿಸುವ ಬಳಕೆದಾರನಿಗೆ, ಕಂಪ್ಯೂಟರ್ ಜೊತೆಗಿನ ನಿಯಮಿತ ಸಂವಾದ ವ್ಯವಸ್ಥೆಯ ಮೂಲ ಜ್ಞಾನ ಮತ್ತು ರೂಢಿ ಅತ್ಯಗತ್ಯವಾಗಿತ್ತು. ‘ಗ್ರಾಫಿಕಲ್ ಯೂಸರ್ ಇಂಟರ್ಫೇಸ್’ ವ್ಯವಸ್ಥೆಯಲ್ಲಿ ಬಳಕೆದಾರ ತನ್ನ ಮುಂದೆ ಕಂಪ್ಯೂಟರ್ ಪರದೆಯಲ್ಲಿ ಕಾಣುವ ಯಾವುದೇ ವ್ಯವಸ್ಥೆಯನ್ನಾಗಲೀ ಮೌಸ್ ಬಳಕೆ ಮತ್ತು ಸುಲಭ ಕೀ ಬೋರ್ಡ್ ಅಕ್ಷರಗಳನ್ನು ಸ್ಪರ್ಶಿಸುವುದರ ಮೂಲಕ ಹಾಗೂ ಕೆಲವೊಮ್ಮೆ ಪರದೆಯಲ್ಲೇ ಬೆರಳಾಡಿಸುವುದರ ಮೂಲಕ ಚಾಲ್ತಿಗೊಳಿಸುವುದು ಸುಲಭ ಸಾಧ್ಯವಾಗಿದೆ.
1986: ಕಂಪ್ಯೂಟರ್ ಲೋಕದಲ್ಲಿ ‘ಐ.ಬಿ.ಎಮ್ ಪಿ.ಸಿ’ಗಳಲ್ಲಿ ಉಪದ್ರವ ಕೊಡುವ ‘ಬ್ರೈನ್’ ಎಂಬ ಕಂಪ್ಯೂಟರ್ ವಿಷಕಣವು (ವೈರಸ್) ಬಿಡುಗಡೆಗೊಂಡಿತು. ಕಂಪ್ಯೂಟರಿನ ಮೂಲ ಚಾಲನಾ ವ್ಯವಸ್ಥೆಯಲ್ಲಿ ಸ್ಪುರಣಗೊಳ್ಳುವ ಈ ವೈರಸ್ (boot sector virus) ಅನ್ನು ಪಾಕಿಸ್ತಾನದ ಲಾಹೋರಿನ ನಿವಾಸಿಗಳಾದ ಫರೂಕ್ ಅಲ್ವಿ ಸಹೋದರರು ತಯಾರಿಸಿದರು. ತಾವು ಸಿದ್ಧಪಡಿಸಿದ್ದ ಸಾಫ್ಟ್ವೇರ್ ಅನ್ನು ಯಾರೂ ಅನಧಿಕೃತವಾಗಿ ಪ್ರತಿಮಾಡಿಕೊಳ್ಳಬಾರದೆಂಬ ಉದ್ದೇಶ ಅವರ ಈ ವಿಷಕಣದ ಉತ್ಪತ್ತಿಗೆ ಕಾರಣ ಎಂಬುದು ಅವರ ಅಂಬೋಣವಂತೆ.
1997: 30 ವರ್ಷಗಳ ನಂತರ ಹೆಬ್ರೋನ್ ನಗರಕ್ಕೆ ಆಗಮಿಸಿದ ಪ್ಯಾಲೆಸ್ಟೈನಿನ ನಾಯಕ ಯಾಸೀರ್ ಅರಾಫತ್ ಅವರು, ಇಸ್ರೇಲ್ ತನ್ನ ವಶಕ್ಕೆ ತೆಗೆದುಕೊಂಡಿದ್ದ ವೆಸ್ಟ್ ಬ್ಯಾಂಕ್ ನಗರವನ್ನು ಹಿಂದಿರುಗಿಸಿದ ಸಂದರ್ಭದಲ್ಲಿ ಆಯೋಜಿಸಿದ್ದ ಸಂಭ್ರಮ ಸಮಾರಂಭದಲ್ಲಿ ಭಾಗವಹಿಸಿದರು.
1999: ಜನರಲ್ ಎಲೆಕ್ಟ್ರಿಕ್ ಕಂಪೆನಿಯ ಉಪಸಂಸ್ಥೆಯಾಗಿದ್ದ, ರಕ್ಷಣಾ ವ್ಯವಸ್ಥೆಯ ಘಟಕವನ್ನು ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆ ತನ್ನ ವಶಕ್ಕೆ ತೆಗೆದುಕೊಳ್ಳಲು ಒಪ್ಪಿತು. ಮುಂದೆ ಇದೇದೇ ವರ್ಷದ ನವೆಂಬರನಲ್ಲಿ ಇದನ್ನು ಬಿ.ಎ.ಇ. ಸಿಸ್ಟಮ್ಸ್ ಎಂಬ ಹೆಸರಿನೊಂದಿಗೆ ನಡೆಸತೊಡಗಿತು.
2000: ಫಕ್ರುದ್ದೀನ್ ತಾಕುಲ್ಲಾ ಅವರು ರಾಜಧಾನಿ ಎಕ್ಸ್ ಪ್ರೆಸ್ ಮೂಲಕ ಮುಂಬೈಯಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಪ್ರಯಾಣಕ್ಕೆ ಅವರು ಬಳಸಿದ್ದು 26 ವರ್ಷಗಳ ಹಿಂದೆ 1973ರ ಜುಲೈ 15ರಂದು ಖರೀದಿಸಿದ್ದ ಟಿಕೆಟನ್ನು! ಭಾರತೀಯ ರೈಲ್ವೆಯು ಒದಗಿಸಿದ್ದ ‘ಮಿತಿ ರಹಿತ ಬುಕ್ಕಿಂಗ್’ ಸವಲತ್ತನ್ನು ಬಳಸಿಕೊಂಡು, ಭಾರತದ 50ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವಂತೆ ಅವರು ಈ ಟಿಕೆಟನ್ನು ಖರೀದಿಸಿದ್ದರು. ರೈಲ್ವೆ ಇಲಾಖೆಯು ಮುಂದೆ ಈ ಸವಲತ್ತುನ್ನು ಹಿಂತೆಗೆದುಕೊಂಡಿತು.
2007: “ಮೋನಾಲಿಸಾ 1542ರ ಜುಲೈ 15ರಂದು ಮೃತರಾಗಿದ್ದು, ಆಕೆ ತಮ್ಮ ಅಂತಿಮ ದಿನಗಳನ್ನು ಕಳೆದ ಸೆಂಟ್ರಲ್ ಫ್ಲಾರೆನ್ಸಿನಲ್ಲಿ ಅವರ ಸಮಾಧಿ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ದಾಖಲೆ ಫ್ಲಾರೆನ್ಸಿನ ಇಗರ್ಜಿಯೊಂದರಲ್ಲಿ ಲಭಿಸಿದೆ” ಎಂದು ಮೋನಾಲಿಸಾ ಕುರಿತು ವಿಶೇಷ ಅಧ್ಯಯನ ನಡೆಸಿದ ಗಿಯಾಸುಪ್ಪೆ ಪಲ್ಲಾಂಟಿ ಹೇಳಿದ್ದಾರೆ.
2017: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಹಿರಿಯ ವಿದ್ವಾಂಸ ಡಾ. ಟಿ. ವಿ. ವೆಂಕಟಾಚಲಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಯಿತು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕ ನೀಡಲಾಗುತ್ತಿರುವ ಈ ಪ್ರಶಸ್ತಿಯು ಏಳು ಲಕ್ಷದ ಒಂದು ರೂ. ನಗದು, ಪ್ರಶಸ್ತಿ ಫಲಕ, ಶಾಲು ಹಾಗೂ ಫಲತಾಂಬೂಲವನ್ನು ಒಳಗೊಂಡಿದೆ.
ಪ್ರಮುಖಜನನ/ಮರಣ:
1739: ಇಟಲಿಯ ಪ್ರಸಿದ್ಧ ಕಟ್ಟಡ ವಿನ್ಯಾಸಕಾರ ‘ಜೋಸೆಫ್ ಬೊನಾಮಿ ದಿ ಎಲ್ಡರ್’ ಅವರು ರೋಮ್ ನಗರದಲ್ಲಿ ಜನಿಸಿದರು. ಅವರ ವಿನ್ಯಾಸಗಳಾದ ‘ಲಾಂಗ್ ಫೋರ್ಡ್ ಹಾಲ್’ ಮತ್ತು ‘ಬ್ಯಾರೆಲ್ಲ್ಸ್ ಹಾಲ್’ ಪ್ರಸಿದ್ಧವಾಗಿವೆ.
1871: ಬಲ್ಗೇರಿಯಾದ ಶಿಕ್ಷಣ ತಜ್ಞ ಮತ್ತು ಚಳುವಳಿ ನಾಯಕ ಡೇಂ ಗ್ರೂಯೇವ್ ಅವರು ಸ್ಮಿಲೇವೋ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರು ‘ಇಂಟರ್ನಲ್ ಮೆಕೆಡೋನಿಯನ್ ರೆವಲ್ಯೂಷನರಿ ಆರ್ಗನೈಸೇಷನ್’ ಸಂಸ್ಥಾಪಿಸಿದ ಪ್ರಮುಖರಲ್ಲಿ ಒಬ್ಬರು.
1886: ಹಿಂದೂಸ್ಥಾನಿ ಸಂಗೀತ ಕಲಾವಿದ, ಗುರು ಸವಾಯಿ ಗಂಧರ್ವರು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು. ಪಂಡಿತ್ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಅಂತಹವರಿಗೆ ಗುರುಗಳಾಗಿದ್ದ ಸವಾಯಿ ಗಂಧರ್ವರಿಗೆ ಹೈದರಬಾದ್ ಕರ್ನಾಟಕ ಮಂಡಳಿಯ ಮಾನಪತ್ರ, ಧರಪುರದ ಮಹಾರಾಜರ ಚಿನ್ನದ ಪದಕ, 1938ರಲ್ಲಿ ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ, 1939ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿದ ಸುವರ್ಣಪದಕ ಮಂತಾದ ಅನೇಕ ಗೌರವಗಳು ಸಂದಿದ್ದವು. 1952, ಸೆಪ್ಟೆಂಬರ್ 12ರಂದು ನಿಧನರಾದರು.
1912: ರಷ್ಯಾದ ಪ್ರಸಿದ್ಧ ಗಣಿತಜ್ಞ ಮತ್ತು ಅರ್ಥಶಾಸ್ತ್ರಜ್ಞ ಲೆನಾಯ್ಡ್ ಕಾಂಟೋರ್ರ್ವಿಚ್ ಅವರು ಅಂದಿನ ರಷ್ಯಾ ಚಕ್ರಾಧಿಪತ್ಯದಲ್ಲಿದ್ದ ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ ಜನಿಸಿದರು. ಲೀನಿಯರ್ ಪ್ರೊಗ್ರಾಮಿಂಗ್ ಜನಕರೆಂದು ಇವರು ಪ್ರಸಿದ್ಧರಾಗಿದ್ದಾರೆ. ಸಂಪನ್ಮೂಲಗಳ ಸಮರ್ಪಕ ಹಂಚಿಕೆಯ ವಿಧಿ ವಿಧಾನಗಳ ಕುರಿತಾಗಿ ಮಹತ್ವದ ಚಿಂತನೆಗಳನ್ನು ಪ್ರಸ್ತುತಪಡಿಸಿದ್ದ ಇವರಿಗೆ 1975ರ ವರ್ಷದಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಸಂದಿತ್ತು.
1944: ಅಮೆರಿಕದ ಕಟ್ಟಡ ವಿನ್ಯಾಸಕ ಮತ್ತು ಶಿಕ್ಷಣ ತಜ್ಞ ಥಾಮ್ ಮೇಯ್ನ್ ಅವರು ಕನೆಕ್ಟಿಕಟ್ ಬಳಿಯ ವಾಟರ್ ಬರಿ ಎಂಬಲ್ಲಿ ಜನಿಸಿದರು. ಇವರ ವಿನ್ಯಾಸಗಳಾದ ಸಾನ್ ಫ್ರಾನ್ಸಿಸ್ಕೋ ಫೆಡರಲ್ ಕಟ್ಟಡ ಮತ್ತು ಫೇರೇ ಟವರ್ ಪ್ರಖ್ಯಾತವಾಗಿವೆ.
1984: ಭಾರತೀಯ ಕಾರ್ ರೇಸ್ ಪಟು ಕರುಣ್ ಚಂದೋಕ್ ಅವರು ಚೆನ್ನೈ ನಗರದಲ್ಲಿ ಜನಿಸಿದರು. ಕಾರ್ ರೇಸ್ ಪಟುವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಾಲ್ಗೊಂಡು , ಏಷ್ಯಾ ವಲಯದಲ್ಲಿ ಹಲವು ಪ್ರಶಸ್ತಿಗಳನ್ನೂ ಗಳಿಸಿರುವ ಅವರು, ವೀಕ್ಷಕ ವಿವರಣೆಗಾರರಾಗಿ, ತಂತ್ರಜ್ಞರಾಗಿ ಮತ್ತು ಕಾರ್ ರೇಸ್ ವರದಿಗಾರರಾಗಿ ಸಹಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಮಾಡಿದ್ದಾರೆ.
1905: ವಿದ್ವಾಂಸ ಮತ್ತು ಧಾರ್ಮಿಕ ಸುಧಾರಕರಾಗಿದ್ದ ಮಹರ್ಷಿ ದೇಬೇಂದ್ರನಾಥ ಠಾಗೂರ್, ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು. ವಿಶ್ವಕವಿ ಎಂದೆನಿಸಿರುವ ರಬೀಂದ್ರನಾಥ ಠಾಗೂರ್ ಇವರ ಪುತ್ರರು.
1967: ಮಹಾನ್ ಸಂಗೀತ ವಿದ್ವಾಂಸ, ಪಿಟೀಲಿನಲ್ಲಿ ಏಳು ತಂತಿಗಳ ಬಳಕೆಯಿಂದ ಸುಸ್ವರ ಹೊಮ್ಮಿಸಿ ಪ್ರಖ್ಯಾತರಾದ ಪಿಟೀಲು ಚೌಡಯ್ಯನವರು ಮೈಸೂರಿನಲ್ಲಿ ನಿಧನರಾದರು. ಅವರು ವಾಣಿ ಎಂಬ ಚಲನಚಿತ್ರವನ್ನೂ ನಿರ್ಮಿಸಿ ಅದರಲ್ಲಿ ಪಾತ್ರವಹಿಸಿದ್ದರು.
1990: ಆಧ್ಯಾತ್ಮಿಕ ಗುರು ಓಶೋ ಎಂದು ಪ್ರಸಿದ್ಧರಾಗಿದ್ದ ರಜನೀಶ್ ಅವರು, ತಮ್ಮ 58ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬೋಧನೆಗಳು, ಗ್ರಂಥಗಳು ಮತ್ತು ನಿರ್ಮಿಸಿದ ವೈವಿಧ್ಯಪೂರ್ಣ ಆಧ್ಯಾತ್ಮಿಕ ಶಿಬಿರಗಳ ಮೂಲಕ ಪ್ರಸಿದ್ಧರಾಗಿದ್ದಾರೆ.