ಪ್ರಮುಖಘಟನಾವಳಿಗಳು:
1265: ಮೊದಲ ಇಂಗ್ಲಿಷ್ ಪಾರ್ಲಿಮೆಂಟು ‘ಲಾರ್ಡ್ಸ್’ ಎಂದು ಕರೆಯಲ್ಪಡುವ ಕೇಂದ್ರ ಪ್ರತಿನಿಧಿಗಳನ್ನು ಮಾತ್ರವಲ್ಲದೆ, ಎಲ್ಲಾ ಪ್ರಮುಖ ಪಟ್ಟಣಗಳ ಪ್ರತಿನಿಧಿಗಳನ್ನೂ ಒಳಗೊಂಡು ತನ್ನ ಮೊದಲ ಸಭೆಯನ್ನು ಪ್ಯಾಲೇಸ್ ಆಫ್ ವೆಸ್ಟ್ ಮಿನಿಸ್ಟರಿನಲ್ಲಿ ನಡೆಸಿತು. ಇದು ‘ಹೌಸಸ್ ಆಫ್ ಪಾರ್ಲಿಮೆಂಟ್’ ಹೆಸರಿನಿಂದ ಕರೆಯಲ್ಪಡುತ್ತಿದೆ.
1818: ಕೋಲ್ಕತದ ಗಹ್ರನ್ ಹಟ್ಟಾದಲ್ಲಿ ಹಿಂದು ಕಾಲೇಜ್ ಸ್ಥಾಪನೆಯಾಯಿತು. ರಾಜಾ ರಾಮ್ ಮೋಹನ್ ರಾಯ್ ಅವರು ಈ ಸಂಸ್ಥೆಯಲ್ಲಿನ ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಲೇಜು 1855ರ ಏಪ್ರಿಲ್ 15ರಂದು ಮುಚ್ಚಿತು. ಅದೇ ವರ್ಷ ಜೂನ್ 15ರಂದು ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು. ಮುಂದೆ ಈ ಕಾಲೇಜು ಇರುವ ಗಹ್ರನ್ ಹಟ್ಟಾ ಹೆಸರು ಕೂಡಾ 304, ಚಿತ್ಪುರ್ ರಸ್ತೆ ಎಂದು ಬದಲಾಯಿತು.
1841: ಹಾಂಕಾಂಗ್ ದ್ವೀಪವನ್ನು ಬ್ರಿಟಿಷರು ಆಕ್ರಮಿಸಿದರು.
1887: ಪರ್ಲ್ ಹಾರ್ಬರ್ ಅನ್ನು ಸೈನ್ಯದ ನೌಕಾನೆಲೆ ಆಗಿಸಲು ಅಮೆರಿಕದ ಸೆನೆಟ್ ಅಂಗೀಕಾರ ನೀಡಿತು.
1892: ಕೆನಡಾದ ವೈದ್ಯ ಜೇಮ್ಸ್ ನೈಸ್ಮಿತ್ ರೂಪಿಸಿದ ‘ಬಾಸ್ಕೆಟ್ ಬಾಲ್’ ಆಟವನ್ನು ಮೊತ್ತ ಮೊದಲ ಬಾರಿಗೆ ಮೆಸಾಚ್ಯುಸೆಟ್ಸ್ ಸ್ಪ್ರಿಂಗ್ ಫೀಲ್ಡಿನ ‘ವೈ.ಎಂ.ಸಿ.ಎ’ನಲ್ಲಿ ಆಡಲಾಯಿತು.
1920: ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್ (ACLU) ಸ್ಥಾಪನೆಗೊಂಡಿತು. ಸಂವಿಧಾನವು ನೀಡಿರುವ ಸ್ವಾತಂತ್ರ್ಯತೆ ಮತ್ತು ಹಕ್ಕುಗಳನ್ನು ಎಲ್ಲರಿಗೂ ಸಿಗುವಂತೆ ಕಾಪಾಡುವುದು ಈ ಸಂಘಟನೆಯ ಉದ್ದೇಶವಾಗಿತ್ತು. ಇದರ ಪ್ರಮುಖ ಕಚೇರಿ ನ್ಯೂಯಾರ್ಕ್ ನಗರದಲ್ಲಿದೆ.
1929: ಪ್ರಥಮಬಾರಿಗೆ ಹೊರಾಂಗಣದಲ್ಲಿ ಚಿತ್ರಿಸಿ, ಪೂರ್ಣಪ್ರಮಾಣದ ಸಂಭಾಷಣೆ ಅಳವಡಿತಗೊಂಡ ‘ಇನ್ ಓಲ್ಡ್ ಅರಿಸೋನಾ’ ಚಿತ್ರವು ಬಿಡುಗಡೆಗೊಂಡಿತು.
1945: ಎರಡನೇ ವಿಶ್ವಮಹಾಯುದ್ಧದ ಅಂತ್ಯದ ಸಂದರ್ಭದಲ್ಲಿ, ಪೂರ್ವ ಪ್ರಸ್ಸಿಯಾದಿಂದ 18 ಲಕ್ಷ ಜರ್ಮನರ ಸ್ಥಳಾಂತರ ಪ್ರಾರಂಭ. ಸೋವಿಯತ್ ರಷ್ಯಾದ ‘ರೆಡ್ ಆರ್ಮಿ’ಯ ಮುಂದುವರಿಕೆಯ ಭೀತಿಯಿಂದ, ಜನ ತಾವೇ ತಾವಾಗಿ ಈ ಪ್ರಾಂತ್ಯದಿಂದ ಹೊರ ಹೋಗತೊಡಗಿದರು. ಈ ಸ್ಥಳಾಂತರ ಎರಡು ತಿಂಗಳ ಸಮಯವನ್ನು ತೆಗೆದುಕೊಂಡಿತು.
1948: ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಭಾರತ ಮತ್ತು ಪಾಕಿಸ್ತಾನದ ಕುರಿತಾದ 39ನೇ ನಿರ್ಣಯವನ್ನು ಅಂಗೀಕರಿಸಿತು. ಈ ಎರಡೂ ದೇಶಗಳೂ, ಕಾಶ್ಮೀರದ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ಸಹಾಯ ಮಾಡುವುದು ಈ ನಿರ್ಣಯದ ಆಶಯವಾಗಿತ್ತು.
1957: ಟ್ರಾಂಬೆಯ ಪರಮಾಣು ಇಂಧನ ಸಂಸ್ಥೆಯು ಔಪಚಾರಿಕವಾಗಿ ಉದ್ಘಾಟನೆಗೊಂಡಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಈ ಸಂಸ್ಥೆಗೆ 1967ರ ವರ್ಷದಲ್ಲಿ ಬಾಬಾ ಪರಮಾಣು ಸಂಶೋಧನಾ ಕೇಂದ್ರ ಎಂದು ಹೆಸರನ್ನಿರಿಸಲಾಯಿತು.
1958: ಬಳ್ಳಾರಿಯಲ್ಲಿ ಡಾ. ವಿ.ಕೃ. ಗೋಕಾಕ್ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಮೂರುದಿನದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.
1972: 1971ರ ವರ್ಷದಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದ, ಭಾರತದೊಂದಿಗಿನ ಯುದ್ಧದಲ್ಲಿ ಸೋಲನ್ನನುಭವಿಸಿದ ಕೆಲವೇ ವಾರಗಳಲ್ಲಿ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳ ಯೋಜನೆಯನ್ನು ಪ್ರಾರಂಭಿಸಿತು.
1972: ಮೇಘಾಲಯವು ರಾಜ್ಯವಾಯಿತು, ಮತ್ತು ಅರುಣಾಚಲ ಪ್ರದೇಶವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು. ಮುಂದೆ 1987ರಲ್ಲಿ ಅರುಣಾಚಲ ಪ್ರದೇಶವೂ ರಾಜ್ಯವಾಯಿತು.
1986: ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ದಿನವನ್ನು ಪ್ರಪ್ರಥಮ ಬಾರಿಗೆ ಫೆಡರಲ್ ರಜಾ ದಿನವನ್ನಾಗಿ ಆಚರಿಸಲಾಯಿತು.
2006: ಭಾರತ ಮತ್ತು ಪಾಕಿಸ್ತಾನದ ನಡುವಣ ಜನಸಂಪರ್ಕ ಅಭಿವೃದ್ಧಿಯ ಯತ್ನವಾಗಿ ಉಭಯರಾಷ್ಟ್ರಗಳ ನಡುವೆ ಮೂರನೇ ಬಸ್ ಸಂಚಾರಕ್ಕೆ ಚಾಲನೆ ನೀಡಲಾಯಿತು. ಈ ಬಸ್ ಸಂಚಾರವು ಲಾಹೋರ್ ಮತ್ತು ಅಮೃತಸರಗಳ ನಡುವೆ ಏರ್ಪಟ್ಟಿತು.
2006: ಕೊಂಕಣ ರೈಲ್ವೆಯು ಅಭಿವೃದ್ಧಿ ಪಡಿಸಿದ ಅಪಘಾತ ನಿಯಂತ್ರಣ ಸಾಧನಾ ರಕ್ಷಾ ಕವಚಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪೇಟೆಂಟ್ ಲಭಿಸಿತು. ಈ ರಕ್ಷಾ ಕವಚದ ಪೇಟೆಂಟಿಗಾಗಿ ಕೊಂಕಣ ರೈಲ್ವೆಯು ಅಮೆರಿಕ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಅರ್ಜಿ ಸಲ್ಲಿಸಿತು.
2007: ಮೂರು ಜನರ ತಂಡವೊಂದು ಕೇವಲ ಹಿಮದಲ್ಲಿ ಚಲಿಸಲು ಉಪಯೋಗಿಸುವ ‘ಸ್ಕಿಸ್ ಮತ್ತು ಕೈಟ್’ಗಳನ್ನು ಬಳಸಿಕೊಂಡು, 1958ರ ನಂತರದಲ್ಲಿ ಇದೇ ಮೊದಲಬಾರಿಗೆ ಪಯಣಕ್ಕೆ ಲಭ್ಯವಿಲ್ಲದ ಹಾಗಿದ್ದ 1759 ಕಿಲೋಮೀಟರುಗಳ ದಕ್ಷಿಣ ಧ್ರುವದಲ್ಲಿ ಟ್ರೆಕಿಂಗ್ ನಡೆಸಿತು. ಯಾವುದೇ ಯಾಂತ್ರಿಕ ವಸ್ತುಗಳ ಬಳಕೆಯಿಲ್ಲದೆ ದಕ್ಷಿಣ ಧ್ರುವಕ್ಕೆ ಕೈಗೊಂಡ ಯಾತ್ರೆಗಳಲ್ಲಿ ಇದೇ ಪ್ರಥಮದ್ದಾಗಿದೆ.
2007: ಅತ್ಯಂತ ಹಳೆಯದಾದ, 1903ರಲ್ಲಿ ತಯಾರಾದ ಸುಸ್ಥಿತಿಯಲ್ಲಿರುವ ಫೋರ್ಡ್ ಕಾರು ಫೋನಿಕ್ಸಿನಲ್ಲಿ ನಡೆದ ಹರಾಜಿನಲ್ಲಿ 630,000 ಅಮೆರಿಕ ಡಾಲರುಗಳಿಗೆ ಮಾರಾಟವಾಯಿತು. ಅಮೆರಿಕದಲ್ಲಿ ಫೋರ್ಡ್ ಕಂಪೆನಿ ಮಾರಾಟ ಮಾಡಿದ ಮೊದಲ ಮೂರು ಕಾರುಗಳಲ್ಲಿ ಇದೂ ಒಂದು. ಹೂಸ್ಟನ್ನಿನ ಖ್ಯಾತ ವಕೀಲ ಜಾನ್ ಓ ಕ್ವಿನ್ ಈ ಕಾರಿನ ನೂತನ ಒಡೆಯರಾದರು.
2008: ಮಲೇಷಿಯಾ ಸರ್ಕಾರವು ಹಿಂದೂಗಳ ಹಬ್ಬವಾದ ‘ತೈಪೂಸಂ’ ಅನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಿತು.
2009: ಬರಾಕ್ ಒಬಾಮ ಅವರು ವಾಷಿಂಗ್ಟನ್ನಿನಲ್ಲಿ ಅಮೆರಿಕ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸ್ವಲ್ಪ ಮೊದಲು ಉಪಾಧ್ಯಕ್ಷ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ, ಆಫ್ರಿಕನ್ ಮೂಲದ ಅಮೆರಿಕನ್ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನವನ್ನು ಪ್ರವೇಶಿಸಿದರು. ಕೊರೆಯುವ ಚಳಿಯಲ್ಲೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ 20 ಲಕ್ಷಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದರು.
ಪ್ರಮುಖಜನನ/ಮರಣ:
1873: ನೊಬೆಲ್ ಪುರಸ್ಕೃತ ಡ್ಯಾನಿಶ್ ಸಾಹಿತಿ ಜೋಹಾನ್ನೆಸ್ ವಿ. ಜೆನ್ಸೆನ್ ಅವರು ಡೆನ್ಮಾರ್ಕಿನ, ಜುಟ್ಲ್ಯಾಂಡ್ ಬಳಿಯ ಫರ್ಸೋ ಎಂಬಲ್ಲಿ ಜನಿಸಿದರು. ಡ್ಯಾನಿಶ್ ಮತ್ತು ಇಂಗ್ಲಿಷ್ ಬಾಷೆಗಳಲ್ಲಿ ಸಾಹಿತ್ಯ ರಚಿಸಿರುವ ಅವರಿಗೆ 1944ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.
1894: ಅಮೆರಿಕದ ವ್ಯಂಗ್ಯಚಿತ್ರಕಾರ ಹೆರಾಲ್ಡ್ ಗ್ರೇ ಅವರು ಇಲಿನಾಯ್ಸ್ ಪ್ರದೇಶದ ಕನ್ಕಕೀ ಎಂಬಲ್ಲಿ ಜನಿಸಿದರು. ‘ಲಿಟಲ್ ಆರ್ಫನ್ ಅನಿ’ ಅವರ ಪ್ರಸಿದ್ಧ ಸೃಷ್ಟಿ.
1931: ಅಮೆರಿಕದ ಭೌತವಿಜ್ಞಾನಿ ಮತ್ತು ಶಿಕ್ಷಕ ನ್ಯೂ ಯಾರ್ಕ್ ನಗರದ ರೈ ಎಂಬಲ್ಲಿ ಜನಿಸಿದರು. ‘ಸೂಪರ್ ಫ್ಲೂಯಿಡಿಟಿ ಇನ್ ಹೀಲಿಯಂ – 3’ ಕುರಿತ ಸಂಸೋಧನೆಗಾಗಿ ಇವರಿಗೆ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.
1923:ಸುಬ್ಬಣ್ಣ ರಂಗನಾಥ ಎಕ್ಕುಂಡಿ ಅವರು ರಾಣೆಬೆನ್ನೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಕರಾಗಿ ವೃತ್ತಿ ನಡೆಸಿ, ಮಹತ್ವದ ಕವಿ ಎನಿಸಿದ್ದ ಅವರಿಗೆ 1970ರಲ್ಲಿ ಸೋವಿಯತ್ ಲ್ಯಾಂಡ್ ಪ್ರಶಸ್ತಿ, 1982 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1992ರಲ್ಲಿ ‘ಬಕುಳದ ಹೂಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದವು. 1984ರಲ್ಲಿ ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸು.ರಂ. ಎಕ್ಕುಂಡಿಯವರು 20 ಆಗಸ್ಟ್ 1995ರಲ್ಲಿ ನಿಧನರಾದರು.
1934: ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯ ಶಿಲ್ಪಿಯವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಜನಿಸಿದರು. ಎಲ್ಲ ವಿಧದ ಶಿಲ್ಪಗಳಲ್ಲಿ ನಿಷ್ಣಾತರಾದ ಇವರಿಗೆ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಶಿಲ್ಪಕಲೆಯ ಸರ್ವಶ್ರೇಷ್ಠ ಜಕಣಾಚಾರಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
1936: ಚಂದ್ರಶೇಖರ ಐತಾಳರು ಉಡುಪಿ ತಾಲ್ಲೂಕಿನ ಗುಂಡ್ಮಿಯಲ್ಲಿ ಜನಿಸಿದರು. ಮೂಲತಃ ಕವಿಯಾದ ಇವರು, ಇತಿಹಾಸ ಬರಹ, ಪ್ರವಾಸ ಕಥನ, ವಿಮರ್ಶೆ, ಅನುವಾದ, ಜನಪದ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. ಬಿ.ಎಂ.ಶ್ರೀ. ಸುವರ್ಣ ಪದಕ, ‘ಸೌಂದರ್ಯದ ಸಾನಿಧ್ಯದಲ್ಲಿ’ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ, ‘ಕೈಲಿಯ ಕರೆದ ನೊರೆಹಾಲು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಮದ್ದುಂಟೆ ಜನನ ಮರಣಕ್ಕೆ’ ಕೃತಿಗೆ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ, ‘ಸೀಯಾಳ’ ಕೃತಿಗೆ ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
1964: ಲೇಖಕ, ಪತ್ರಕರ್ತ, ವರದಿಗಾರರಾದ ಫರೀದ್ ಜಕಾರಿಯ ಅವರು ಭಾರತದಲ್ಲಿ ಜನಿಸಿದರು. ಸಿ.ಎನ್.ಎನ್. ವಾಹಿನಿಯ ‘ಫರೀದ್ ಜಕಾರಿಯ ಜಿ.ಪಿ.ಎಸ್’ ಕಾರ್ಯಕ್ರಮದ ಆಯೋಜಕರಾದ ಅವರು ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಅಂಕಣಕಾರರೂ ಆಗಿದ್ದಾರೆ. ನ್ಯೂಸ್ ವೀಕ್, ಟೈಮ್ ಮುಂತಾದ ಪತ್ರಿಕೆಗಳಲ್ಲಿ ಸಂಪಾದಕೀಯವನ್ನೂ ನಡೆಸಿದ್ದ ಅವರ ಹಲವಾರು ಪ್ರಕಟಿತ ಪುಸ್ತಕಗಳೆಲ್ಲಾ ಅಪಾರ ಮಾರಾಟ ಕಂಡಿವೆ.
1982: ಫೇಸ್ಬುಕ್ ಸಂಸ್ಥೆಯಿಂದ ನೇಮಕಗೊಂಡ ಪ್ರಥಮ ಭಾರತೀಯರೆಂಬ ಪ್ರಖ್ಯಾತಿಗೆ ಪಾತ್ರರಾದ ಸಾಫ್ಟ್ವೇರ್ ತಂತ್ರಜ್ಞೆ ರುಚಿ ಸಂಗ್ವಿ ಪುಣೆಯಲ್ಲಿ ಜನಿಸಿದರು. ಫೇಸ್ಬುಕ್ಕಿನ ಪ್ರಾರಂಭದ ದಿನಗಳ ಪ್ರಮುಖ ತಂತ್ರಜ್ಞರಾಗಿದ್ದ ರುಚಿ ಅವರು, ಫೆಸ್ಬುಕ್ಕಿನ ಮೂಲ ವ್ಯವಸ್ಥೆ ಮತ್ತು ಸುದ್ಧಿ ಪ್ರಸ್ತುತಿಯ ಮೇಲ್ವಿಚಾರಕರಾಗಿ ಪ್ರಮುಖ ಕೆಲಸ ಮಾಡಿದ್ದರು. ಫೆಸ್ಬುಕ್ ವ್ಯವಸ್ಥೆ ಹಾಗೂ ಕಾರ್ಯಯೋಜನೆಗಳ ಪ್ರಮುಖರ ತಂಡದಲ್ಲಿದ್ದ ಅವರು ಇಂದು, ಪ್ರಖ್ಯಾತಗೊಂಡಿರುವ ಫೇಸ್ಬುಕ್ ನ್ಯೂಸ್ ಫೀಡ್ ಯೋಜನೆಯನ್ನು ವಿನ್ಯಾಸಗೊಳಿಸಿದ ಪ್ರಮುಖರಲ್ಲೊಬ್ಬರಾಗಿದ್ದಾರೆ. 2011ರಲ್ಲಿ ಅವರು ತಮ್ಮದೇ ಆದ ಕೋವ್ ಸಂಸ್ಥೆ ಸ್ಥಾಪಿಸಿದರು. ಮುಂದೆ ಆ ಸಂಸ್ಥೆ ಡ್ರಾಪ್ ಬಾಕ್ಸ್ ಸಂಸ್ಥೆಗೆ ಮಾರಾಟಗೊಂಡಿತು.
1837: ಪ್ರಸಿದ್ಧ ಬ್ರಿಟಿಷ್ ಕಟ್ಟಡ ವಿನ್ಯಾಸಕ ಜಾನ್ ಸೋನೆ ನಿಧನರಾದರು. ಅವರು ‘ಬ್ಯಾಂಕ್ ಆಫ್ ಇಂಗ್ಲೆಂಡ್’ ಕಟ್ಟಡದ ವಿನ್ಯಾಸಕಾರರಾಗಿ ಪ್ರಸಿದ್ಧರಾಗಿದ್ದರು.
1901: ಬೆಲ್ಜಿಯಂ ತಂತ್ರಜ್ಞ ಜೆನೋಬ್ ಗ್ರಾಮೆ ನಿಧನರಾದರು. ಅವರು ಎಲೆಕ್ಟ್ರಿಕ್ ವ್ಯವಸ್ಥೆಗೆ ಪರ್ಯಾಯವಾಗಿ ತಾತ್ಕಾಲಿಕ ವಿದ್ಯುತ್ ಒದಗಿಸುವ ಡೈನಮೋದಂತಹ ಗ್ರಾಮೆ ಯಂತ್ರವನ್ನು ಸೃಷ್ಟಿಸಿದ್ದರು. ಈ ಯಂತ್ರ ಅಂದಿನ ದಿನಗಳವರೆಗೆ ಇದ್ದ ಡೈನಮೋಗಳಿಗಿಂತ ಸುಗಮವಾಗಿ ಹೆಚ್ಚಿನ ವೋಲ್ಟೇಜ್ ಹರಿಸುವಂತಹ ಸಾಮರ್ಥ್ಯ ಹೊಂದಿತ್ತು.
1949: ಭಾರತೀಯ ನ್ಯಾಯವಾದಿ, ಮುತ್ಸದ್ಧಿ ಸರ್ ತೇಜ್ ಬಹಾದುರ್ ಸಪ್ರು ತಮ್ಮ 73ನೇ ವಯಸ್ಸಿನಲ್ಲಿ ಅಲಹಾಬಾದಿನಲ್ಲಿ ನಿಧನರಾದರು. ಭಾರತೀಯ ಸಂವಿಧಾನ ಕರಡು ಪ್ರತಿ ತಯಾರಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
1982: ಕುಖ್ಯಾತ ಕೊಲೆಗಾರರಾದ ಬಿಲ್ಲಾ ಮತ್ತು ರಂಗ ಅವರನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.
1988: ‘ಗಡಿನಾಡ ಗಾಂಧಿ’ ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ ಆಫ್ಘಾನಿಸ್ಥಾನದ ಪೇಷಾವರದಲ್ಲಿ ನಿಧನರಾದರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು ‘ಖುದಾಯಿ ಖಿದ್ಮತ್ಗಾರ್’ ನ (ರೆಡ್ ಶರ್ಟ್ ಮೂವ್ ಮೆಂಟ್) ಸ್ಥಾಪಕರಾಗಿದ್ದರು. ಭಾರತ ಸರ್ಕಾರವು ಅವರಿಗೆ 1987 ವರ್ಷದಲ್ಲಿ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತ್ತು.
2005: ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದ ಚಿತ್ರನಟಿ ಪರ್ವೀನ್ ಬಾಬಿ ಅವರು ಮುಂಬೈನಲ್ಲಿ ನಿಧನರಾದರು.
2009: ‘ಚಿಂಗಾರಿ’ ಹಾಗೂ ‘ಚಿನಕುರುಳಿ’ ಖ್ಯಾತಿಯ ಹಿರಿಯ ವ್ಯಂಗ್ಯಚಿತ್ರಕಾರ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಜಿ.ವೈ.ಹುಬ್ಳೀಕರ್ ನಿಧನರಾದರು. ಅವರು ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಪ್ರತಿದಿನ ‘ಚಿನಕುರುಳಿ’ ವ್ಯಂಗ್ಯಚಿತ್ರವನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಹುಬ್ಳೀಕರ್ ಅವರಿಗೆ ಸಂದಿದ್ದವು.