Categories
e-ದಿನ

ಜನವರಿ-21

ಪ್ರಮುಖಘಟನಾವಳಿಗಳು:

1749: ಇಟಲಿಯ ವೆರೋನಾದ ‘ಟಿಯಾಟ್ರೋ ಫಿಲರ್  ಮೊನಿಕೋ’ ಯೂರೋಪ್ ಖಂಡದಲ್ಲೇ ಪ್ರಸಿದ್ಧ ‘ಅಪೇರಾ ಹೌಸ್’ ಎಂಬ   ಪ್ರಸಿದ್ಧಿ ಪಡೆದಿದೆ. 1716ರಲ್ಲಿ ಪ್ರಥಮಬಾರಿಗೆ ನಿರ್ಮಾಣವಾಗಿದ್ದ ಇದು 1749ರ ಜನವರಿ 21ರಂದು ಬೆಂಕಿಗೆ ನಾಶವಾಯ್ತು.  ಮುಂದೆ ಫೆಬ್ರುವರಿ 23,  1945ರಲ್ಲಿ  ವಿಶ್ವಮಹಾ ಯುದ್ಧದ ಸಂದರ್ಭದಲ್ಲಿ ಆಂಗ್ಲೋ ಅಮೇರಿಕನ್ ಬಾಂಬ್ ದಾಳಿಗೆ ಕುಸಿದು ಬಿದ್ದ ಈ ಕಟ್ಟಡವನ್ನು ಹಿಂದಿನ ಸಾಂಸ್ಕೃತಿಕ ಕುರುಹಿನಂತೆ 1975ರ ವರ್ಷದಲ್ಲಿ ಪುನರ್ನಿರ್ಮಿಸಲಾಗಿದೆ.

1789: ಅಮೇರಿಕಾದ ಪ್ರಥಮ ಕಾದಂಬರಿ ವಿಲಿಯಮ್ ಹಿಲ್ ಬ್ರೌನ್ ಅವರ  ‘ದಿ ಪವರ್ ಆಫ್ ಸಿಂಪಥಿ’ ಅಥವಾ ‘ಟ್ರಿಯಂಪ್ ಆಫ್ ನೇಚರ್ ಫೌಂಡೆಡ್ ಇನ್ ಟ್ರೂಥ್’ ಬೋಸ್ಟನ್ ನಗರದಲ್ಲಿ ಮುದ್ರಣಗೊಂಡಿತು.

1793: ಹದಿನಾರನೇ ಲೂಯಿಯನ್ನು ಪ್ಯಾರಿಸ್ಸಿನಲ್ಲಿ ಗಿಲೊಟಿನ್ ಯಂತ್ರದ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು.

1952: ಮುಂಬೈನ ಪ್ರಸಿದ್ಧ ಜಹಾಂಗೀರ್ ಆರ್ಟ್ ಗ್ಯಾಲರಿ ಉದ್ಘಾಟನೆಗೊಂಡಿತು. ಸರ್ ಗೋಸ್ವಾಜೀ ಜಹಾಂಗೀರ್ ಅವರು 7,04,112 ರೂಪಾಯಿಗಳನ್ನು ದೇಣಿಗೆ ನೀಡಿದ ಕಾರಣ ಈ ಆರ್ಟ್ ಗ್ಯಾಲರಿಗೆ ಅವರ ಹೆಸರನ್ನೇ ಇಡಲಾಯಿತು. ತಮ್ಮ ಮೃತಪುತ್ರ ಜಹಾಂಗೀರ್ ನೆನಪಿಗಾಗಿ ಈ ದೇಣಿಗೆಯನ್ನು ಗೋಸ್ವಾಜೀ ನೀಡಿದರು.

1954: ಅಮೇರಿಕದ ಪ್ರಥಮ ಅಣ್ವಸ್ತ್ರ ಸುಸಜ್ಜಿತ  (ನ್ಯೂಕ್ಲಿಯರ್ ಎನೇಬಲ್ಡ್)  ಜಲಾಂತರ್ಗಾಮಿ ನೌಕೆಯಾದ  ‘ಯು.ಎಸ್.ಎಸ್. ನೌಟಿಲಸ್’ ಅನ್ನು  ಕನೆಕ್ಟಿಕಟ್ ಬಳಿಯ ಗ್ರೋಟನ್ ಎಂಬಲ್ಲಿ ಬಿಡುಗಡೆಗೊಳಿಸಲಾಯಿತು.

1960: ‘ಲಿಟಲ್ ಜೋ 1 ಬಿ’ ಎಂಬ ಬಾಹ್ಯಾಕಾಶ ನೌಕೆ ವರ್ಜೀನಿಯಾದ ವಾಲಪ್ಸ್ ದ್ವೀಪದಿಂದ  ಬುಧ ಗ್ರಹಕ್ಕೆ ಪಯಣ ಹೊರಟಿತು.  ಇದರಲ್ಲಿ ಪಯಣ ಕೈಗೊಂಡಾಕೆ ಮಿಸ್ ಸ್ಯಾಮ್ ಎಂಬ ಕೋತಿ.

1972: ಮಣಿಪುರ, ಮಿಜೋರಂ ಮತ್ತು ತ್ರಿಪುರಾ ಪೂರ್ಣ ಪ್ರಮಾಣದ ರಾಜ್ಯಗಳಾದವು.

2008: ಭಾರತೀಯ ಇಸ್ರೋ ಸಂಸ್ಥೆ, ಇಸ್ರೇಲಿನ ‘ಬೇಹುಗಾರಿಕೆ’ ಉಪಗ್ರಹವೊಂದನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಕ್ಷೆಗೆ ತಲುಪಿಸಿತು.  ವಾಣಿಜ್ಯ ಉದ್ದೇಶದ ಉಪಗ್ರಹ ಉಡಾವಣೆಯಲ್ಲಿ ಇದು ಭಾರತದ ಪ್ರಮುಖ ಹೆಜ್ಜೆ ಎನಿಸಿತು.  ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ‘ಪಿಎಸ್ಎಲ್ವಿ- ಸಿ10’ ಉಪಗ್ರಹ ಉಡಾವಣಾವಾಹನವು,  300 ಕೆ.ಜಿ. ತೂಕದ ಇಸ್ರೇಲಿನ ಟೆಕ್ಸಾರ್ (ಪೋಲಾರಿಸ್) ಉಪಗ್ರಹವನ್ನು, ಉಡಾವಣೆಯಾದ 19.75 ನಿಮಿಷಗಳಲ್ಲಿ  ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಿತು. ಮೋಡ ಹಾಗೂ ಮಂಜು ಮುಸುಕಿದ ವಾತಾವರಣದ ಮಧ್ಯೆಯೂ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ‘ಟೆಕ್ಸಾರ್’ ಉಪಗ್ರಹಕ್ಕೆ ಇದ್ದು, ಅದು ಹಗಲು ಮತ್ತು  ರಾತ್ರಿಗಳಲ್ಲಿ  ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯವುಳ್ಳದ್ದಾಗಿದೆ.

ಪ್ರಮುಖಜನನ/ಮರಣ:

1884: ಅಮೆರಿಕದ ಬರಹಗಾರ ಮತ್ತು ‘ಅಮೆರಿಕನ್ ಸಿವಿಲ್ ಲಿಬರ್ಟಿಸ್ ಯೂನಿಯನ್’ ಸ್ಥಾಪಕ ರೋಜರ್ ನಾಶ್ ಬಾಲ್ಡ್ವಿನ್ ಅವರು ಮಸ್ಸಚುಸೆಟ್ಸ್ ಪ್ರಾಂತ್ಯದ ವೆಲ್ಲೆಸ್ಲಿ ಎಂಬಲ್ಲಿ ಜನಿಸಿದರು.

1912: ಜರ್ಮನ್ ಅಮೇರಿಕನ್ನರಾದ ಕೊನ್ರಾಡ್ ಎಮಿಲ್ ಬ್ಲಾಚ್ ಅವರು ಜರ್ಮನಿಯ ಸಾಮ್ರಾಜ್ಯದ ಭಾಗವಾಗಿದ್ದ ಪ್ರಸ್ಸಿಯಾದ ಸಿಲೇಸಿಯಾದಲ್ಲಿ ಜನಿಸಿದರು.  ಮುಂದೆ ಅಮೆರಿಕದಲ್ಲಿ ನೆಲೆಸಿದ ಇವರು  ಜೈವಿಕ ತಂತ್ರಜ್ಞಾನ ವಿಜ್ಞಾನಿಯಾಗಿ ಮಹತ್ವದ ಸಾಧನೆಗೈದರು. ಕೊಲೆಸ್ಟ್ರಾಲ್ ಮತ್ತು ಫ್ಯಾಟಿ ಆಸಿಡ್ ಮೆಟಬಾಲಿಸಂ ನಿಯಂತ್ರಣದಲ್ಲಿನ ಇವರ ಸಂಶೋಧನೆಗಾಗಿ  2000ದ ವರ್ಷದಲ್ಲಿ ಫಿಸಿಯಾಲಜಿ ಅಥವ ಮೆಡಿಸನ್ ಕ್ಷೇತ್ರದಲ್ಲಿನ ನೊಬೆಲ್ ಪುರಸ್ಕಾರ ಸಂದಿತು.

1921: ಕನ್ನಡಿಗರಲ್ಲಿ ವೈಜ್ಞಾನಿಕ ಮನೋಭಾವವನ್ನು ಹುಟ್ಟಿಸುವಂತಹ ಮಹತ್ವದ ಬರಹಗಳನ್ನು ಮಾಡಿರುವ ಲಕ್ಷ್ಮಣರಾವ್ ಅವರು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು.  ಅಧ್ಯಾಪನವಷ್ಟೇ ಅಲ್ಲದೆ ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕೆಂಬ ದೃಷ್ಟಿಯಿಂದ ಪ್ರಾರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಂಸ್ಥಾಪಕರಲ್ಲಿ ಒಬ್ಬರಾಗಿ ಅದರ  ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಮತ್ತು ವಿಜ್ಞಾನ ಪರಿಷತ್ತು ನಡೆಸುವ ವಾರ್ಷಿಕ ಜನಪ್ರಿಯ ವಿಜ್ಞಾನ ಲೇಖಕರ ಕಾರ್ಯ ಶಿಬಿರಗಳ ಸಂಘಟಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನದಲ್ಲಿ 35 ಕೃತಿಗಳನ್ನು ಪ್ರಕಟಿಸಿರುವ ಇವರಿಗೆ ಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಲಿಯ ರಾಷ್ಟ್ರೀಯ ಪುರಸ್ಕಾರ ಮತ್ತು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿಯಿಂದ 4 ಬಾರಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1924: ಹಿರಿಯ ಆರ್ಥಿಕ ತಜ್ಞ ಮತ್ತು ರಾಜಕಾರಣಿ ಮಧು ದಂಡವತೆ ಅಹ್ಮದ್ ನಗರದಲ್ಲಿ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಅವರು  ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಬಳಕೆಯ ಪ್ರಕ್ರಿಯೆಗೆ  ನಾಂದಿ ಹಾಡಿದ ವ್ಯಕ್ತಿ. ವಿ.ಪಿ. ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಇವರು 1990ರಲ್ಲಿ ಹಾಗೂ 1996ರಿಂದ 1998ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 2005ರ ನವೆಂಬರ್ 12ರಂದು ನಿಧನರಾದರು.

1924: ಅಮೆರಿಕದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ, ನಿರ್ವಾಹಕ ಮತ್ತು ಉದ್ಯಮಿ ಮೊರಿಸ್ ಮೈಕ್ ಮೆಡವಾಯ್ ಜನಿಸಿದರು.  ಪ್ರಖ್ಯಾತ ಅಂತರರಾಷ್ಟ್ರೀಯ ಚಿತ್ರ ಸಂಸ್ಥೆಗಳಾದ ಒರಾಯನ್ ಪಿಕ್ಚರ್ಸ್, ಟ್ರೈಸ್ಟಾರ್ ಪಿಕ್ಚರ್ಸ್, ಯುನೈಟೆಡ್ ಆರ್ಟಿಸ್ಟ್ಸ್, ಮತ್ತು ಫೀನಿಕ್ಸ್ ಪಿಕ್ಚರ್ಸ್ ಮುಂತಾದ ಸಂಸ್ಥೆಗಳಲ್ಲಿ  ಅವರ ಪ್ರಮುಖ ಪಾತ್ರವಿತ್ತು.

1942: ಪ್ರಸಿದ್ಧ ಕ್ಲಾರಿಯೋನೇಟ್ ವಾದಕ ನರಸಿಂಹಲು ವಡವಾಟಿಯವರು  ರಾಯಚೂರು ಜಿಲ್ಲೆಯ ವಡವಾಟಿ ಎಂಬಲ್ಲಿ ಜನಿಸಿದರು.  ಪಂಡಿತ ಸಿದ್ಧರಾಮ ಜಂಬಲದಿನ್ನಿಯವರಿಂದ ಹಿಂದೂಸ್ತಾನಿ ಸಂಗೀತ ಕಲಿತ ಇವರು ಸತತ ಸಾಧನೆಯಿಂದ ಕ್ಲಾರಿಯೋನೇಟ್ ವಾದ್ಯದಲ್ಲಿ  ಹೊಸ ಹೊಸ ಪ್ರಯೋಗಗಳನ್ನು ನಡೆಸಿದರು. ವಿಶ್ವದಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ  ಕರ್ನಾಟಕ ಸಂಗೀತ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಮುಂತಾದ ಅನೇಕ ಗೌರವಗಳು ಸಂದಿವೆ.

1953: ಬಿಲ್ ಗೇಟ್ಸ್ ಅವರೊಂದಿಗೂಡಿ ಪ್ರಸಿದ್ಧ ಮೈಕ್ರೋಸಾಫ್ಟ್ ಸಂಸ್ಥೆಗೆ ಪ್ರಾರಂಭ ನೀಡಿದ  ಪಾಲ್ ಅಲೆನ್ ಅವರು ವಾಷಿಂಗ್ಟನ್ ರಾಜ್ಯದ ಸೀಟಲ್ನಲ್ಲಿ ಜನಿಸಿದರು.  ಮುಂದೆ ಅವರು ವಲ್ಕನ್ ಇನ್ಕಾರ್ಪೋರೇಷನ್ ಸಂಸ್ಥೆಯನ್ನು ಸ್ಥಾಪಿಸಿ ಅದರ  ಪ್ರಮುಖ ಅಧಿಕಾರಿಗಳಾಗಿದ್ದಾರೆ.  ಅನೇಕ ಕ್ರೀಡಾ ತಂಡಗಳ ಅಧಿಪತ್ಯವನ್ನು  ಹೊಂದಿರುವ ಅವರು  ಅಲೆನ್ ಇನ್ಸ್ಟಿಟ್ಯೂಟ್ ಆಫ್ ಬ್ರೈನ್ ಸೈನ್ಸ್, ಇನ್ಸ್ಟಿಟ್ಯೂಟ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಇನ್ಸ್ಟಿಟ್ಯೂಟ್ ಆಫ್ ಸೆಲ್ ಸೈನ್ಸ್, ವಲ್ಕನ್ ಏರೋಸ್ಪೇಸ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿ ವಿಶ್ವದ ನಲವತ್ತು ಪ್ರಮುಖ ಶ್ರೀಮಂತರಲ್ಲಿ ಒಬ್ಬರೆನಿಸಿ ಸಾಕಷ್ಟು ಸಮಾಜ ಸೇವೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ.

1893: ಪ್ರಖ್ಯಾತ ಹಿಂದೀ ಭಾಷಾ ಸಾಹಿತಿಗಳಾದ ಆಚಾರ್ಯ ಶಿವಪೂಜನ್ ಸಹಾಯ್ ಅವರು ಪಾಟ್ನಾದಲ್ಲಿ ನಿಧನರಾದರು.  ‘ಶಿವಪೂಜನ್ ರಚನಾವಳಿ’ ಅವರ ಪಸಿದ್ಧ ಕೃತಿ.  1960ರ ವರ್ಷದಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.

1924: ಪ್ರಸಿದ್ಧ ಕ್ರಾಂತಿಕಾರಿ, ಸೋವಿಯತ್ ಯೂನಿಯನ್ ಶಿಲ್ಪಿ, ನಿರ್ಮಾಪಕ ಹಾಗೂ ಮೊದಲ ಮುಖ್ಯಸ್ಥ ವ್ಲಾಡಿಮೀರ್ ಇಲಿಚ್ ಲೆನಿನ್ ತಮ್ಮ 53ನೇ ವಯಸ್ಸಿನಲ್ಲಿ ಮಾಸ್ಕೋ ಸಮೀಪದ ಗೋರ್ಕಿಯಲ್ಲಿ  ನಿಧನರಾದರು.

1926: ಇಟಲಿಯ ಪ್ರಸಿದ್ಧ ವೈದ್ಯ ಮತ್ತು ಜೀವ ವಿಜ್ಞಾನಿ  ಕ್ಯಾಮಿಲ್ಲೋ ಗೊಲ್ಗಿ ಇಟಲಿಯ ಕಾರ್ಟೆನೋ ಎಂಬಲ್ಲಿ ಜನಿಸಿದರು. ಗೊಲ್ಗಿ ಅಪಾರಟಸ್, ಗೊಲ್ಗಿ ಟೆನ್ಡನ್ ಮುಂತಾದ ಅನೇಕ ಅನೇಕ ಅನಾಟಮಿ ಮತ್ತು ಫಿಸಿಯಾಲಜಿಯ ಕುರಿತಾದ ತತ್ವಗಳಿಗೆ ಅವರ ಹೆಸರು ಪ್ರಖ್ಯಾತವಾಗಿವೆ.  ತಮ್ಮ ಕಾಲದ ಶ್ರೇಷ್ಠ ನರರೋಗ ತಜ್ಞ ಮತ್ತು ಜೀವವಿಜ್ಞಾನಿ ಎಂದು ಹೆಸರಾಗಿದ್ದ ಇವರಿಗೆ ನೊಬೆಲ್ ವೈದ್ಯಕೀಯ ಶಾಸ್ತ್ರದ ಪಾರಿತೋಷಕ ಸಂದಿತ್ತು.

1945: ಭಾರತದ ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಟೋಕಿಯೋದಲ್ಲಿ ನಿಧನರಾದರು. ದೆಹಲಿ, ಉತ್ತರ ಪ್ರದೇಶ ಮತ್ತು ಪಂಜಾಬುಗಳಲ್ಲಿ ರಾಸ್ ಬಿಹಾರಿ ಬೋಸರು ಹಲವಾರು ಕ್ರಾಂತಿಕಾರಿಗಳೊಡನೆ  ಬ್ರಿಟಿಷರ ವಿರುದ್ಧ ಭೂಗತ ಚಟುವಟಿಕೆಗಳಲ್ಲಿ ನಿರತರಾಗಿದ್ದರು.  ಲಾರ್ಡ್ ಹಾರ್ಡಿಂಜನ ಸಭೆಯ  ಸಂದರ್ಭದಲ್ಲಿ ಬಾಂಬ್ ಎಸೆದಿದ್ದ ಇವರು ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನಿಗೆ ತೆರಳಿದರು.  ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪನೆ ಮಾಡಿದ ಇವರು ಮುಂದೆ ಅದರ ನಾಯಕತ್ವವನ್ನು ಸುಭಾಷ್ ಚಂದ್ರಬೋಸರಿಗೆ ವಹಿಸಿದ್ದರು.

1950: ಬ್ರಿಟಿಷ್ ಆಡಳಿತದ ಭಾರತದಲ್ಲಿನ ಬಿಹಾರದ  ಪೂರ್ವ ಚಂಪಾರನ್ ಪ್ರದೇಶದಲ್ಲಿ ಜನಿಸಿದ್ದ  ಜಾರ್ಜ್ ಆರ್ವೆಲ್ ಅವರು ಲಂಡನ್ನಿನಲ್ಲಿ ನಿಧನರಾದರು.  ಎನಿಮಲ್ ಫಾರ್ಮ್, ನೈನ್ಟೀನ್ ಎಯ್ಟಿ ಫೋರ್ ಮುಂತಾದ ಪ್ರಸಿದ್ಧ ಕೃತಿಗಳನ್ನೂ ಒಳಗೊಂಡಂತೆ ಅವರು ಅನೇಕ  ಕೃತಿಗಳಿಗೆ ಹೆಸರಾಗಿದ್ದಾರೆ.

2006: ಸರ್ಬಿಯಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುಮಾರು 2 ದಶಕಗಳ ಕಾಲ ಹೋರಾಟ ನಡೆಸಿ ಯಶಸ್ಸು ಪಡೆದ ಗಾಂಧೀವಾದಿ, ಕೊಸಾವೊ ಅಧ್ಯಕ್ಷ ಇಬ್ರಾಹಿಂ ರುಗ್ವೊ ಸರ್ಬಿಯಾದ ಪ್ರಿಸ್ಟಿನಾದಲ್ಲಿ ನಿಧನರಾದರು.

2010: ರಂಗಭೂಮಿಯಲ್ಲಿ ಮಹತ್ವದ ಸಾಧನೆ ಮಾಡಿ, ಸಿನಿಮಾ ರಂಗದಲ್ಲೂ ಪ್ರಸಿದ್ಧರಾಗಿದ್ದ ಚಿಂದೋಡಿ ಲೀಲಾ ಅವರು ಬೆಂಗಳೂರಿನಲ್ಲಿ ನಿಧನರಾದರು. ರಂಗಕ್ಷೇತ್ರದಲ್ಲಿನ ಅವರ ಸಾಧನೆಗಾಗಿ   ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸರ್ಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿಗಳೂ ಸೇರಿದಂತೆ ಅನೇಕ  ಪುರಸ್ಕಾರಗಳು ಚಿಂದೋಡಿ ಲೀಲಾ ಅವರಿಗೆ ಸಂದಿದ್ದವು. ಹಲವು ವರ್ಷಗಳ ಕಾಲ ನಾಟಕ ಅಕಾಡೆಮಿಯನ್ನೂ ನಡೆಸಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಸಹಾ ಚಿಂದೋಡಿ ಲೀಲಾ ಕಾರ್ಯ ನಿರ್ವಹಿಸಿದ್ದರು.  ಕರ್ನಾಟಕದ ವಿವಿದೆಡೆಗಳಲ್ಲಿ ಮೂಡಿದ ಶಾಶ್ವತ ರಂಗಭೂಮಿಗಳಿಗೆ ಲೀಲಾ ಪ್ರಮುಖ ಕಾರಣಕರ್ತರಾದರು.

2016: ಪ್ರಖ್ಯಾತ ನೃತ್ಯ ಕಲಾವಿದೆ ಮೃಣಾಲಿನಿ ಸಾರಾಭಾಯಿ ತಮ್ಮ 97ನೇ ವಯಸ್ಸಿನಲ್ಲಿ ಅಹಮದಾಬಾದಿನಲ್ಲಿ ನಿಧನರಾದರು.  ಭಾರತದ ಶಾಸ್ತ್ರೀಯ ನೃತ್ಯಕಲೆಯನ್ನು ಜಗತ್ತಿಗೆ ಪರಿಚಯಿಸಿ, ಅದರ ಮಹತ್ವನನ್ನು ಸಾರಿದ ಇವರು  1949ರಲ್ಲಿ ಅಹಮ್ಮದಾಬಾದಿನಲ್ಲಿ ದರ್ಪಣಂ ಎಂಬ ಕಲಾಕೇಂದ್ರವನ್ನು ಸ್ಥಾಪಿಸಿದ್ದರು.  1992ರಲ್ಲಿ ಇವರಿಗೆ ಪದ್ಮಭೂಷಣ ಪ್ರಶಸ್ತಿ ಸಂದಿತ್ತು.