Categories
e-ದಿನ

ಜನವರಿ-24

ಪ್ರಮುಖಘಟನಾವಳಿಗಳು:

41: ವಿಲಕ್ಷಣ ನಡೆ  ಮತ್ತು ಅಂಕೆಯಿಲ್ಲದಂತೆ  ಎಲ್ಲದಕ್ಕೂ ಕರುಬುವ ಕೆಟ್ಟ ನಡತೆಯ ರೋಮನ್ ಚಕ್ರವರ್ತಿ ಕಲಿಗುಲನನ್ನು ಆತನ ಭದ್ರತಾ ಸೇನಾಪಡೆಯವರೇ  ಕೊಂದುಹಾಕಿ, ಆತನ ಚಿಕ್ಕಪ್ಪನಾದ ಕ್ಲಾಡಿಯಸ್ ಅನ್ನು ಚಕ್ರವರ್ತಿಯೆಂದು ಘೋಷಿಸಿದರು.

1739: ಪೇಶ್ವೆ ದೊರೆ ಚಿಮ್ನಜಿ ಅಪ್ಪ ಅವರು ಪೋರ್ಚುಗೀಸ್ ಪಡೆಗೆ ಸೋಲುಣಿಸಿ ತಾರಾಪುರದ ಕೋಟೆಯನ್ನು ವಶಪಡಿಸಿಕೊಂಡರು.

1835: ಬ್ರೆಜಿಲ್ ದೇಶದ ಸಾಲ್ವಡಾರ್ ಡ ಬಹಿಯಾದಲ್ಲಿನ ಗುಲಾಮರು ಬಂಡಾಯವೆದ್ದರು. ಇದು ಮುಂದಿನ 50 ವರ್ಷಗಳಲ್ಲಿ ಅಲ್ಲಿ ಗುಲಾಮಗಿರಿ ಪೂರ್ಣವಾಗಿ ಅಂತ್ಯಗೊಳ್ಳಲು ಪ್ರಾರಂಭ ನೀಡಿತು.

1848: ಜೇಮ್ಸ್ ಡಬ್ಲ್ಯೂ ಮಾರ್ಷಲ್ ಎಂಬುವರು ಕ್ಯಾಲಿಫೋರ್ನಿಯಾದ  ಸಕ್ರಮೆಂಟೋ ಬಳಿಯ ಸಟ್ಟರ್ಸ್ ಮಿಲ್  ಎಂಬಲ್ಲಿ ಚಿನ್ನದ ಗಣಿಯನ್ನು ಪತ್ತೆ ಹಚ್ಚಿದರು.

1857: ಕಲ್ಕತ್ತಾ ವಿಶ್ವವಿದ್ಯಾಲಯವು ಪ್ರಾರಂಭಗೊಂಡಿತು.  ಇದು ದಕ್ಷಿಣ ಏಶ್ಯಾದಲ್ಲೇ  ಪ್ರಥಮ ಪೂರ್ಣ ಪ್ರಮಾಣದ ಸುಸಜ್ಜಿತ  ವಿಶ್ವವಿದ್ಯಾಲಯವಾಗಿ ಆರಂಭಗೊಂಡ  ಕೀರ್ತಿಗೆ ಪಾತ್ರವಾಗಿದೆ.

1908: ಸ್ಕೌಟ್ ಚಳುವಳಿಯ ಸ್ಥಾಪನೆಗೆ ಪ್ರಸಿದ್ಧರಾದ ರಾಬರ್ಟ್ ಬಾಡೆನ್ ಪೋವೆಲ್  ಅವರು ಪ್ರಥಮ ಬಾಯ್ಸ್ ಸ್ಕೌಟ್ ಸಂಘಟನೆಯನ್ನು ಇಂಗ್ಲೆಂಡಿನಲ್ಲಿ  ಆರಂಭಿಸಿದರು.

1939: ಚಿಲಿ ದೇಶದ ಚರಿತ್ರೆಯಲ್ಲೇ ಅತ್ಯಂತ ಭೀಕರವಾದ ಭೂಕಂಪದಲ್ಲಿ ಸುಮಾರು 28,000 ಜನರು ನಿಧನರಾದರು.

1946: ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನವು ವಿಶ್ವ ಸಂಸ್ಥೆಯ ಅಣು ಶಕ್ತಿ ಆಯೋಗವನ್ನು ರಚಿಸುವ ನಿರ್ಧಾರ ಕೈಗೊಂಡಿತು.

1972: ಜಪಾನಿನ ಸಾರ್ಜೆಂಟ್ ಶಿಯೋಚಿ ಯೊಕಾಯ್ ಎಂಬಾತ ಎರಡನೇ ವಿಶ್ವ ಮಹಾಯುದ್ಧ ಕೊನೆಗೊಂಡಾಗಿನಿಂದ  (ಸುಮಾರು 27 ವರ್ಷ)  ಕಾಡಿನಲ್ಲಿ ತಲೆಮರೆಸಿಕೊಂಡಿದ್ದದ್ದು ಪತ್ತೆಯಾಯಿತು.

1978: ನ್ಯೂಕ್ಲಿಯರ್ ರಿಯಾಕ್ಟರ್ ಹೊತ್ತಿದ್ದ ಸೋವಿಯತ್ ಉಪಗ್ರಹವಾದ ‘ಕಾಸ್ಮೋಸ್ 954’, ಭೂಮಿಯ ಕಕ್ಷೆಯಲ್ಲಿ ಉರಿದುಹೋಗಿ, ಕೆನಡಾದ ವಾಯುವ್ಯ ಪ್ರಾಂತ್ಯಗಳಲ್ಲಿ ರೇಡಿಯೋ ಆಕ್ಟಿವ್ ಅವಶೇಷಗಳನ್ನು ಚೆಲ್ಲಿತು.  ಇವುಗಳಲ್ಲಿ ಕೇವಲ ಶೇಕಡಾ ಒಂದರಷ್ಟು ಮಾತ್ರವನ್ನೇ ಪುನಃಶೇಖರಿಸಿಕೊಳ್ಳಲು ಸಾಧ್ಯವಾಯಿತು.

1950: ರವೀಂದ್ರನಾಥ ಠಾಗೂರ್ ಅವರು ರಚಿಸಿದ ‘ಜನ ಗಣ ಮನ’ ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು.

1950:  ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಭಾರತದ ಪ್ರಥಮ ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಲಾಯಿತು.

1966:  ಇಂದಿರಾ ಗಾಂಧಿಯವರು ಭಾರತದ ಮೂರನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1966: ಏರ್ ಇಂಡಿಯಾ ಬೋಯಿಂಗ್ 707 ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ 144 ಮಂದಿ ಅಸು ನೀಗಿದರು. ಭಾರತದ ಖ್ಯಾತ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಬಾಬಾ ಅವರು ಈ ಅಪಘಾತದಲ್ಲಿ ಅಸುನೀಗಿದರು.

1984:  ಆಪಲ್ ಕಂಪ್ಯೂಟರ್ ಸಂಸ್ಥೆ ಅಮೇರಿಕಾದಲ್ಲಿ  ಮೆಕಿನ್ ತೋಶ್ ಪರ್ಸನಲ್ ಕಂಪ್ಯೂಟರ್ ಮಾರಾಟವನ್ನು ಆರಂಭಿಸಿತು.

1986: ಎರಡನೇ ವೋಯೇಜರ್  ಯುರೇನಸ್ ಉಪಗ್ರಹಕ್ಕೆ 81,500 ಕಿಲೋಮೀಟರ್ ಸಮೀಪದಲ್ಲಿ ಹಾದು ಹೋಯ್ತು.

1990: ಜಪಾನ್ ದೇಶವು ಚಂದ್ರನಲ್ಲಿಗೆ ಹಿತೇನ್ ಎಂಬ ಬಾಹ್ಯಾಕಾಶ ಶೋಧನಾ ವಾಹನವನ್ನು  ಕಳುಹಿಸಿತು.  ಚಂದ್ರನಲ್ಲಿ ಇಲ್ಲಿಯವರೆಗೆ  ಸೋವಿಯತ್ ಯೂನಿಯನ್ ಮತ್ತು  ಅಮೆರಿಕ ಮಾತ್ರಾ ಇಂತಹ ಶೋಧವನ್ನು ಕೈಗೊಂಡಿದ್ದವು.

2007: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಬ್ಬಿಗೆರೆಯಲ್ಲಿ ನಿರ್ಮಿಸಿರುವ 500 ಕೆ.ವಿ. ಸಾಮರ್ಥ್ಯದ ದೇಶದ ಮೊತ್ತ ಮೊದಲ ಬಯೋಮಾಸ್ ಗ್ಯಾಸಿಫೈಯರ್ ಘಟಕವನ್ನು ಇಂದು ಉದ್ಘಾಟಿಸಲಾಯಿತು.

2007: ಕನ್ನಡವೂ ಸೇರಿದಂತೆ ಏಳು ಭಾಷೆಗಳ ಪ್ರತ್ಯೇಕ ಸಾಫ್ಟ್ವೇರ್ ಸಾಧನ ಮತ್ತು ಅಕ್ಷರವಿನ್ಯಾಸ (ಫಾಂಟ್)ಗಳ ಸಿಡಿಗಳನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಬಿಡುಗಡೆ ಮಾಡಿತು. ಕನ್ನಡ, ಉರ್ದು, ಪಂಜಾಬಿ, ಮರಾಠಿ, ಮಲೆಯಾಳಂ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳ ಫಾಂಟ್ಸ್, ಮತ್ತು  ಈ-ಮೈಲ್ಗೆ ನೆರವಾಗುವ ಮೆಜೆಂಜರ್ ಬ್ರೌಸರ್, ಲಿಪಿ ಸಂಸ್ಕಾರಕ, ಸ್ಪೆಲ್ ಚೆಕ್ ಮತ್ತು  ಬಹುಭಾಷಾ ಶಬ್ಧಕೋಶದ ಸಿಡಿಯನ್ನು ಸಿ-ಡಾಕ್ ವಿವಿಧ ತಜ್ಞರ ನೆರವಿನಿಂದ ತಯಾರಿಸಿದೆ.

2008: ‘ಹೆವೆನ್ ಸೆಂಟ್ ಬ್ರಾಂಡಿ’ ಎಂಬುದು ಜಗತ್ತಿನ ಅತ್ಯಂತ ಪುಟ್ಟ ನಾಯಿ. ಈ ಪುಟ್ಟ ಹೆಣ್ಣು ನಾಯಿಯ ಹೆಸರು ಚಿಚೌಹುವಾ. ಬೊಗಳಲು ಬಾರದ ಈ ನಾಯಿಯ ಕಾಲುಗಳು ಲಾಲಿ ಪಪ್ಪನ್ನು ಹೋಲುತ್ತವೆ. ಮೂಗಿನಿಂದ ಬಾಲದವರೆಗೆ ಅಳೆದರೆ, ಅದರ ಉದ್ದ ಆರು ಅಂಗುಲ. ಒಟ್ಟಾರೆ ತನ್ನ ಆಕಾರವನ್ನೇ ಬಂಡವಾಳವಾಗಿಸಿಕೊಂಡಿರುವ ಈ ಬ್ರಾಂಡಿ ನಾಯಿ, ‘ಉದ್ದದಲ್ಲಿ ಅತಿ ಪುಟ್ಟ ನಾಯಿ’ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿನಿಂದ 2005ರಲ್ಲಿ ಸರ್ಟಿಫಿಕೇಟ್ ಪಡೆದಿತ್ತು ಎಂದು ಲಂಡನ್ನಿನಲ್ಲಿ ಈ ದಿನ ಪ್ರಕಟಿಸಲಾಯಿತು.

2008: ಬೆಂಗಳೂರು ವಿಶ್ವವಿದ್ಯಾಲಯದ  ಸೂಕ್ಷ್ಮ ಜೀವಾಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ  ಡಾ. ಗೀತಾ ಬಾಲಿ ಅವರನ್ನು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ  ನೇಮಕ ಮಾಡಲಾಯಿತು.

2008: ಜಪಾನಿನ ಪರ್ವತಾರೋಹಿ ಸುಮಿಯೊ ತ್ಸುಜುಕಿ ಅವರು  ಹಿಮಹಾವುಗೆ (ಸ್ಕೀ) ಸಹಾಯದಿಂದ  ಹಿಮದ ಮೇಲೆ ಜಾರುತ್ತಾ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಭಾಜನರಾದರು. ಅವರು ನವೆಂಬರ್ 2007ರಿಂದ ಈ ಪಯಣವನ್ನು ಆರಂಭಿಸಿದ್ದರು.

2008: ಆಸ್ಟ್ರೇಲಿಯಾದ ಅತ್ಯಂತ ಹಳೆಯ ಪತ್ರಿಕೆಯಾದ ‘ದಿ ಬುಲೆಟಿನ್’ ತನ್ನ ಕೊನೆಯ ಸಂಚಿಕೆಯನ್ನು ಪ್ರಕಟಿಸಿತು.  ಹೀಗೆ,  ಪತ್ರಿಕೆಯ ಪ್ರಸಾರದಲ್ಲಿ ಕುಸಿತ ಕಂಡ  127ವರ್ಷಗಳಷ್ಟು ಹಳೆಯದಾದ ಈ ಪತ್ರಿಕೆ  ಅಧಿಕೃತವಾಗಿ ಮುಚ್ಚಿಹೋಯಿತು.

2009: 2020ನೇ ವರ್ಷದ ವೇಳೆಗೆ ದೇಶದ ಎಲ್ಲ ಸರ್ಕಾರಿ ಕಚೇರಿಗಳನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಎರಡನೇ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿತು. ಕಂಪ್ಯೂಟರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಪಾಸ್‌ಪೋರ್ಟ್, ವೀಸಾ ಮತ್ತು ಭೂದಾಖಲೆಗಳ ವಿತರಣೆಗೆ ಪ್ರಥಮ ಆದ್ಯತೆ ನೀಡಲಾಯಿತು.

2009: ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯನ್ನು  ಜಾರಿಗೆ ತರಲು  ಅವಕಾಶ ಮಾಡಿಕೊಡುವ ಕರ್ನಾಟಕ ಪೌರನಿಗಮಗಳ ಮಸೂದೆ ತಿದ್ದುಪಡಿಗೆ ಕರ್ನಾಟಕ ವಿಧಾನಪರಿಷತ್ತು ತನ್ನ   ಅಂಗೀಕಾರ ನೀಡಿತು.

ಪ್ರಮುಖಜನನ/ಮರಣ:

1826: ಇಂಗ್ಲೆಂಡಿನ ನ್ಯಾಯಾಲಯದಲ್ಲಿ (ಬಾರ್ನಲ್ಲಿ ) ಪ್ರವೇಶ ಗಳಿಸಿದ ಪ್ರಥಮ ನ್ಯಾಯವಾದಿ ಜ್ಞಾನೇಂದ್ರ ಮೋಹನ್ ಠಾಗೂರ್ ಅವರು ಕಲ್ಕತ್ತಾದಲ್ಲಿ ಜನಿಸಿದರು.  1862ರ ವರ್ಷದಲ್ಲಿ ಕಲ್ಕತ್ತಾ ಉಚ್ಛ ನ್ಯಾಯಾಲಯದಲ್ಲಿ ಬ್ಯಾರಿಸ್ಟರ್ ಆಗಿ ನೊಂದಾಯಿತರಾದ ಇವರು, ಬ್ಯಾರಿಸ್ಟರ್  ಸಾಧನೆ ಮಾಡಿದ ಪ್ರಥಮ ಭಾರತೀಯರೆನಿಸಿದ್ದಾರೆ.

1870: ಮುದ್ದಣ ಹೆಸರಿನಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧರಾದ  ನಂದಳಿಕೆ ಲಕ್ಷ್ಮೀನಾರಣಪ್ಪ ಅವರು ಉಡುಪಿ ಮತ್ತು ಕಾರ್ಕಳ ನಡುವಣ ನಂದಳಿಕೆ ಗ್ರಾಮದಲ್ಲಿ ಜನಿಸಿದರು.  ‘ರತ್ನಾವತೀ ಕಲ್ಯಾಣ’,   ‘ಕುಮಾರ ವಿಜಯ’.  ‘ರಾಮಾಶ್ವಮೇಧ’ ಮುಂತಾದ ಮಹತ್ವದ ಕೃತಿಗಳನ್ನು ರಚಿಸಿದ ಅವರು ಕೇವಲ ತಮ್ಮ  32ನೇ ವಯಸ್ಸಿನಲ್ಲಿ 1901ರ ಫೆಬ್ರವರಿ 16ರಂದು  ನಿಧನರಾದರು. 75 ವರ್ಷಗಳ ನಂತರ, 1976ರಲ್ಲಿ ಅವರ ನೆನಪಿಗಾಗಿ ಮುದ್ದಣ ಪ್ರಶಸ್ತಿ ಗ್ರಂಥ ಪ್ರಕಟಿಸಲಾಯಿತು.

1877: ಕಾವ್ಯವಾಚನದಲ್ಲಿ ಪ್ರಸಿದ್ಧರಾಗಿದ್ದ ವಿದ್ವಾನ್ ಸಂ.ಗೋ. ಬಿಂದೂರಾಯರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕಿನಲ್ಲಿ ಜನಿಸಿದರು. ಕಾವ್ಯವಾಚನವನ್ನು ನಾಡಿನೆಲ್ಲೆಡೆ ನಡಿಸಿದ್ದಲ್ಲದೆ, ಅನೇಕ ಶಿಷ್ಯರನ್ನು ತಯಾರು ಮಾಡಿ ಗಮಕ ಕಲೆಗೆ ಬೆಳವಣಿಗೆಯ ಗತಿಯನ್ನು ಹಾಕಿಕೊಟ್ಟ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ಮುಂಬಯಿಯ ಗಮಕ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು  ಸಂದಿದ್ದವು.

1924: ಭಾರತೀಯ ಪ್ರಥಮ ಮಹಿಳಾ ಸೇನಾನಿ ಮತ್ತು ಮಹಿಳಾ ರಾಯಭಾರಿ ಎಂಬ ಕೀರ್ತಿಗೆ ಪಾತ್ರರಾದ ಚೋನಿರ ಬೆಳ್ಳಿಯಪ್ಪ ಮುತ್ತಮ್ಮ ಅವರು ವಿರಾಜಪೇಟೆಯಲ್ಲಿ ಜನಿಸಿದರು.  ಇವರು  ಭಾರತೀಯ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಥಮ ಮಹಿಳೆ. ಇಂಡಿಯನ್ ಫಾರಿನ್ ಸರ್ವಿಸ್ ಸೇರಿದ ಪ್ರಥಮ ಮಹಿಳೆ ಎಂಬ ಕೀರ್ತಿಯೂ ಇವರದ್ದಾಗಿದೆ.  1970ರ ವರ್ಷದಲ್ಲಿ ಹಂಗೇರಿಯಲ್ಲಿ ಭಾರತದ ರಾಯಭಾರಿಯಾಗಿದ್ದ ಇವರು ಮುಂದೆ ಘಾನಾ ಮತ್ತು   ನೆದರ್ಲ್ಯಾಂಡಿನ ಹೇಗ್’ನಲ್ಲೂ ಭಾರತದ ರಾಯಭಾರಿಗಳಾಗಿದ್ದರು.  2009, ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ನಿಧನರಾದರು.

1935: ಭಾರತೀಯ ಧಾರ್ಮಿಕ ಗುರು ಶಿವಬಾಲಯೋಗಿ ಅವರು ಸತ್ಯರಾಜು ಅಲ್ಲಕ ಎಂಬ ಹೆಸರಿನಿಂದ ಗೋದಾವರಿ ತೀರದ ಆದಿವಾರಪುಪೆಟ ಎಂಬಲ್ಲಿ ಜನಿಸಿದರು.  1994ರಲ್ಲಿ ನಿಧನರಾದ ಇವರ ಆಶ್ರಮಗಳು  ಭಾರತ ಮತ್ತು ಅನೇಕ ವಿದೇಶಗಳಲ್ಲಿ ವ್ಯಾಪಿಸಿವೆ.

1937:  ಬರಹಗಾರ್ತಿ, ಆಕಾಶವಾಣಿಯ ನಿರ್ದೇಶಕಿ ಮತ್ತು ಸಂಶೋಧಕಿ ಡಾ. ಜ್ಯೋತ್ಸ್ನಾ ಕಾಮತ್ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು.  ಕರ್ನಾಟಕ ಸರ್ಕಾರದ  ‘ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಶಿಕ್ಷಣ ಪರಂಪರೆ’ ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಪುರಸ್ಕಾರ, ‘ಕಿಟ್ಟಲ್ ಪುರಸ್ಕಾರ’,   ಕರ್ಣಾಟಕ ಇತಿಹಾಸ ಕಾಂಗ್ರೆಸ್ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿವೆ.  ತಮ್ಮ ಪತಿ ಕೃಷ್ಣಾನಂದ ಕಾಮತ್,  ಪುತ್ರ ವಿಕಾಸ್ ಕಾಮತ್ ಅವರೊಂದಿಗೆ ಇವರು ಸ್ಥಾಪಿಸಿರುವ www.kamat.com ಸಾಂಸ್ಕೃತಿಕ ತಾಣ ಪ್ರಸಿದ್ಧವಾಗಿದೆ.

1941:  ಪ್ರಖ್ಯಾತ ರಸಾಯನ ಶಾಸ್ತ್ರ  ವಿಜ್ಞಾನಿ  ಡಾನ್ ಶೆಚ್ ಮ್ಯಾನ್ ಈಗಿನ ಇಸ್ರೇಲಿನ ಭಾಗವಾಗಿರುವ ಟೆಲ್ ಅವಿವ್ ಎಂಬಲ್ಲಿ ಜನಿಸಿದರು.  ‘ಕ್ವಾಸಿ ಕ್ರಿಸ್ಟಲ್ಸ್’ ವಿಷಯದಲ್ಲಿನ ಇವರ ಸಂಶೋಧನೆಗಾಗಿ 2011 ವರ್ಷದ ನೊಬೆಲ್ ರಸಾಯನ ಶಾಸ್ತ್ರದ ಪುರಸ್ಕಾರ ಸಂದಿದೆ.

1943: ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಸುಭಾಷ್ ಘೈ ನಾಗಪುರದಲ್ಲಿ ಜನಿಸಿದರು.  ಅನೇಕ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಅವರ ‘ಇಕ್ಬಾಲ್’ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಂದಿತ್ತು.

1955:  ವಿಜ್ಞಾನದ ಸ್ನಾತಕೋತ್ತರ ಪದವೀಧರರಾದರೂ ಸಾಹಿತ್ಯದಲ್ಲಿ ಮಹತ್ವದ ಸಾಧನೆ ಮಾಡಿರುವ ಜಯಂತ ಕಾಯ್ಕಿಣಿ ಗೋಕರ್ಣದಲ್ಲಿ ಜನಿಸಿದರು.  ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು  ಚಲನಚಿತ್ರಗಳಲ್ಲಿ ಗೀತ ರಚನಕಾರರಾಗಿ ಮತ್ತು  ಚಿತ್ರಕಥೆಗಾರರಾಗಿ ಸಹಾ ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.   ಚಲನಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಸಹಾ ದುಡಿದಿರುವ ಇವರು  ಕಿರುತೆರೆಯಲ್ಲೂ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು  ನಿರ್ವಹಿಸಿದ್ದಾರೆ.

1895:  ಬ್ರಿಟಿಷ್ ರಾಜಕಾರಣಿ ಲಾರ್ಡ್ ರಾಂಡೋಲ್ಫ್ ಚರ್ಚಿಲ್  ತಮ್ಮ 37ನೇ ವಯಸಿನಲ್ಲಿ ನಿಧನರಾದರು. ಬ್ರಿಟಿಷ್ ರಾಜಕಾರಣಿಯಾದ ಇವರು ಹೌಸ್ ಆಫ್ ಕಾಮನ್ಸ್  ನಾಯಕರೂ, ಚಾನ್ಸಲರ್ ಆಫ್ ಎಕ್ಸ್ ಚೆಕರ್ ಆಗಿಯೂ ಖ್ಯಾತಿ ಗಳಿಸಿದ್ದರು. ಇವರ ಪುತ್ರ ವಿನ್ಸ್ಟನ್ ಚರ್ಚಿಲ್ ಬ್ರಿಟಿಷ್ ಪಧಾನಿಯಾಗಿ ವಿಶ್ವನಾಯಕರಾಗಿ ಪ್ರಸಿದ್ಧರಾಗಿದ್ದರು.

1965: ಎರಡನೇ ಮಹಾಯುದ್ಧ ಕಾಲದಲ್ಲಿ  ಬ್ರಿಟಿಷ್ ಪ್ರಧಾನಿಯಾಗಿ  ಗೆಲುವು ಸಾಧಿಸಿದ ಬ್ರಿಟಿಷ್ ಪ್ರಧಾನಿ  ವಿನ್ಸ್ಟನ್ ಚರ್ಚಿಲ್ ನಿಧನರಾದರು.  ಅವರಿಗೆ  ನೊಬೆಲ್ ಶಾಂತಿ ಪುರಸ್ಕಾರ ಸಂದಿತ್ತು.

1966: ಭಾರತದ ಪ್ರಸಿದ್ಧ ಅಣುವಿಜ್ಞಾನಿ ಹೋಮಿ ಜೆ ಭಾಭಾ ಅವರು ತಾವು ಪಯಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 707 ವಿಮಾನವು ಸ್ವಿಟ್ಜರ್ ಲ್ಯಾಂಡಿನ ಆಲ್ಫ್ ನಲ್ಲಿ ಅಪಘಾತಕ್ಕೆ ಈಡಾಗಿ ನಿಧನರಾದರು.

2007: ಹಿರಿಯ ಪತ್ರಕರ್ತ ವೈ.ಕೆ. ರಾಜಗೋಪಾಲ್ ಅವರು ಬೆಂಗಳೂರಿನ ಅನಾಥಾಶ್ರಮವೊಂದರಲ್ಲಿ  ನಿಧನರಾದರು.  ಸ್ವಾತಂತ್ರ್ಯಾ ನಂತರ ಮೈಸೂರು ಸಂಸ್ಥಾನದಲ್ಲಿ ಜನಪರ ಸರ್ಕಾರ ಸ್ಥಾಪನೆಯ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಮುಂದೆ  ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮುಖ್ಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದು  ‘ಮದರ್ ಲ್ಯಾಂಡ್’, ‘ಇನ್ಫಾ’ ಸುದ್ದಿ ಸಂಸ್ಥೆಗಳಲ್ಲೂ ಸೇವೆ ಸಲ್ಲಿಸಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾಜನ್ ವರದಿಯ ಶಿಫಾರಸುಗಳನ್ನು ‘ಸ್ಕೂಪ್’ ಮಾಡಿದ ಕೀರ್ತಿ ಇವರದಾಗಿತ್ತು.