Categories
e-ದಿನ

ಜನವರಿ-26

 

 

ದಿನಾಚರಣೆಗಳು:

ಭಾರತದ ಗಣತಂತ್ರ ದಿನ

1950ರಲ್ಲಿ ಈ ದಿನದಂದು ಭಾರತದ ಸಂವಿಧಾನವು ಜಾರಿಗೆ ಬರುವುದರೊಂದಿಗೆ ಭಾರತವು ಸಾರ್ವಭೌಮ ಪ್ರಜಾತಾಂತ್ರಿಕ ಗಣರಾಜ್ಯವಾಯಿತು. ಸಿಂಹವುಳ್ಳ  ಸಾಮ್ರಾಟ ಅಶೋಕನ ಲಾಂಛನ ದೇಶದ ರಾಷ್ಟ್ರೀಯ ಲಾಂಛನವಾಯ್ತು. 1947ರ ಆಗಸ್ಟ್ 15ರಿಂದಲೇ ಜಾರಿಗೆ ಬರುವಂತೆ ಪರಮ ವೀರ ಚಕ್ರ, ಮಹಾ ವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳನ್ನು ಸ್ಥಾಪಿಸಲಾಯಿತು. ಭಾರತದ ಪ್ರಥಮ ರಾಷ್ಟ್ರಪತಿಗಳಾಗಿ ಬಾಬು ರಾಜೇಂದ್ರ ಪ್ರಸಾದ್ ಅವರು ಪ್ರಮಾಣವಚನ ಸ್ವೀಕರಿಸಿದರು. ದೇಶದ ಪ್ರಜೆಗಳಿಗೆ  ಸುಭದ್ರತೆಯ ಭರವಸೆ ನೀಡುವ ಸೇನಾ ಶಕ್ತಿಯ ಪ್ರದರ್ಶನ ಮತ್ತು ದೇಶದ ಬಹುಸಂಸ್ಕೃತೀಯ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಥಬ್ಧಚಿತ್ರಗಳ ಮೆರವಣಿಗೆಯೊಂದಿಗೆ ಪ್ರತಿವರ್ಷ ದೆಹಲಿಯಲ್ಲಿ ಈ ದಿನದಂದು  ನಡೆಯುವ  ಗಣರಾಜ್ಯೋತ್ಸವ ಪೆರೇಡಿನಲ್ಲಿ ಭಾರತದ ರಾಷ್ಟ್ರಪತಿಗಳು ಸೇನೆಯಿಂದ ಗೌರವವಂದನೆ ಸ್ವೀಕರಿಸುತ್ತಾರೆ.

ಜನವರಿ 26 ಆಸ್ಟ್ರೇಲಿಯಾದ ಅಧಿಕೃತ ರಾಷ್ಟ್ರೀಯ ದಿನವಾಗಿದೆ.  1788ನೇ ವರ್ಷದಲ್ಲಿ ನ್ಯೂ ಸೌತ್ ವೇಲ್ಸ್ ನಗರದ ಜಾಕ್ಸನ್ ಬಂದರಿಗೆ ಮೊದಲ ಬ್ರಿಟಿಷ್ ಹಡಗುಗಳು ಈ ದಿನದಲ್ಲಿ ಬಂದಿಳಿದವು.  ಆ ಸಂದರ್ಭದಲ್ಲಿ ಗರ್ವನರ್ ಆರ್ಥರ್ ಫಿಲಿಪ್, ಸಿಡ್ನಿ ಕಡಲಿನ ದಂಡೆಯಲ್ಲಿ ಗ್ರೇಟ್ ಬ್ರಿಟನ್ನಿನ ಧ್ವಜಾರೋಹಣ ಮಾಡಿದ ಸಂದರ್ಭಕ್ಕೆ ಈ ಆಚರಣೆ ಹೊಂದಿಕೊಂಡಿದೆ.  ಇಂದಿನ ವರ್ಷಗಳಲ್ಲಿ  ಆಸ್ಟ್ರೇಲಿಯಾದ  ಸಾಂಸ್ಕೃತಿಕ, ಐತಿಹಾಸಿಕ ಮತ್ತು  ಮಹತ್ವದ ಸಾಧನೆಗಳನ್ನು ಸಂಭ್ರಮಿಸುವ ಉತ್ಸವವನ್ನಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

1500: ವಿನ್ಸೆಂಟ್ ಯಾನೆಸ್ ಪಿನ್ಜನ್, ಬ್ರೆಜಿಲ್ ನೆಲದಲ್ಲಿ ಕಾಲಿಟ್ಟ ಪ್ರಥಮ ಐರೋಪ್ಯರೆನಿಸಿದರು.

1531: ಲಿಸ್ಬನ್ನಿನಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುಮಾರು ಮೂವತ್ತು ಸಾವಿರ ಜನ ಅಸುನೀಗಿದರು.

1565: ವಿಜಯನಗರ ಸಾಮ್ರಾಜ್ಯ ಮತ್ತು ದಕ್ಷಿಣದ ಸುಲ್ತಾನರುಗಳ ನಡುವೆ ತಾಳೀಕೋಟೆ ಯುದ್ಧ  ನಡೆಯಿತು.  ತಾಳೀಕೋಟೆ ಈಗಿನ  ಬಿಜಾಪುರದಿಂದ 80 ಕಿ.ಮೀ ದೂರದಲ್ಲಿರುವ ಕರ್ನಾಟಕದ ಒಂದು ಐತಿಹಾಸಿಕ ಸ್ಥಳ. ಈ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವುದರೊಂದಿಗೆ, ದಕ್ಷಿಣ ಭಾರತದ ಕೊಟ್ಟ ಕೊನೆಯ ಹಿಂದೂ ಸಾಮ್ರಾಜ್ಯವು ಕೊನೆಗೊಂಡಿತು.

1838: ಟೆನ್ನೆಸ್ಸೆ ಅಮೆರಿಕದಲ್ಲಿ ಪ್ರಥಮ ಬಾರಿಗೆ ಮಧ್ಯಪಾನ ನಿರೋಧ ಕಾಯಿದೆ ಜಾರಿಗೊಳಿಸಿದ

1905: ವಜ್ರಗಳಲ್ಲೇ ಅತ್ಯಂತ ದೊಡ್ಡದಾದ ಕುಲಿನನ್ ವಜ್ರವು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದ ಬಳಿಯ ಪ್ರೀಮಿಯರ್ ಗಣಿಯಲ್ಲಿ ಪತ್ತೆಯಾಯಿತು.  ಈ ದಿನಕ್ಕೆ ಮೂರು ವರ್ಷಗಳ ಹಿಂದೆ  ಈ ಗಣಿಯನ್ನು ಪತ್ತೆ ಹಚ್ಚಿದ್ದ ಸರ್ ಥಾಮಸ್ ಕುಲಿನನ್ ಅವರ ಹೆಸರೇ ಈ ವಜ್ರದ ಹೆಸರಾಗಿದೆ.  ಈ ವಜ್ರ   3,106.75 ಕ್ಯಾರಟ್  (0.621350 ಕೆ.ಜಿ) ತೂಗುತ್ತದೆ.

1911: ಗ್ಲೆನ್ ಹೆಚ್. ಕರ್ಟಿಸ್ ಅವರು  ಅಮೆರಿಕದ ಮೊದಲ  ಸೀಪ್ಲೇನ್ ಹಾರಿಸಿದರು.

1926: ಸ್ಕಾಟಿಷ್ ತಂತ್ರಜ್ಞರಾದ  ಜಾನ್ ಲೋಗಿ ಬೈರ್ಡ್ ಅವರು ಮೊದಲಬಾರಿಗೆ  ದೂರದರ್ಶನ ಯಂತ್ರವನ್ನು ಪದರ್ಶಿಸಿದರು.

1930: ಭಾರತದ ರಾಷ್ಟ್ರೀಯ ಕಾಂಗ್ರೆಸ್ಸು ಬ್ರಿಟಿಷರಿಂದ ಪೂರ್ಣ ಸ್ವಾತಂತ್ಯ್ರವನ್ನು ಪಡೆಯುವ ಧ್ಯೇಯವಾದ  ‘ಪೂರ್ಣ ಸ್ವರಾಜ್’ಅನ್ನು  ಘೋಷಿಸಿತು. ಅದು ಮುಂದೆ 17 ವರ್ಷಗಳ ನಂತರದಲ್ಲಿ  ಸಾರ್ಥ್ಯಕ್ಯಗೊಂಡಿತು.

1942: ಎರಡನೇ ವಿಶ್ವಮಹಾಯುದ್ಧದಲ್ಲಿ  ಪಾಲ್ಗೊಳ್ಳಲು ಅಮೆರಿಕನ್ ಪಡೆಗಳು ಯೂರೋಪಿನ  ಉತ್ತರ ಐರ್ಲ್ಯಾಂಡ್ ತಲುಪಿದವು.

1949: ಕ್ಯಾಲಿಫೋರ್ನಿಯಾದ ಪಲೋಮಾರ್ ವೀಕ್ಷಣಾಲಯದಲ್ಲಿನ ‘ಹಲೆ ಟೆಲಿಸ್ಕೊಪ್’ ಮುಖಾಂತರವಾಗಿ ಎಡ್ವಿನ್ ಹಬ್ಬಲ್ ಕಡೆಗೆ  ಪ್ರಥಮ ಬೆಳಕನ್ನು ಕಾಣಲಾಯಿತು.  ಇದರಿಂದಾಗಿ 1976ರ ಅವಧಿಯಲ್ಲಿ ಬಿಟಿಎ-6 ಟೆಲಿಸ್ಕೋಪ್ ಆವಿಷ್ಕಾರ ಬರುವವರೆಗೆ, ಇದು ಅತ್ಯಂತ ಬೃಹತ್ ನೋಟ ಸಾಧ್ಯತೆಯ ‘ಲಾರ್ಜೆಸ್ಟ್ ಅಪೇರ್ಚರ್ ಆಪ್ಟಿಕಲ್ ಟೆಲಿಸ್ಕೋಪ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

1950: ಭಾರತದ ಸಂವಿಧಾನವು ಆಚರಣೆಗೆ ಬಂದು ಭಾರತವು ಗಣತಂತ್ರ ರಾಷ್ಟ್ರವಾಯಿತು.  ಬಾಬು ರಾಜೇಂದ್ರ ಪ್ರಸಾದ್ ಭಾರತದ ಪ್ರಥಮ ರಾಷ್ಟ್ರಪತಿಗಳಾದರು. ಈ ದಿನವನ್ನು ಗಣತಂತ್ರ ದಿನವನ್ನಾಗಿ  ಆಚರಿಸಲಾಗುತ್ತಿದೆ.

1952: ಈಜಿಪ್ಟಿನಲ್ಲಿ ದಂಗೆಕೋರರು,  ಬ್ರಿಟಿಷರು ಮತ್ತು  ಈಜಿಪ್ಟಿನ ಶ್ರೀಮಂತ  ವರ್ಗದವರನ್ನು ಗುರಿಯಿಟ್ಟುಕೊಂಡು ಇಡೀ ಕೈರೋದ ಮಧ್ಯ ಭಾಗದ ವಾಣಿಜ್ಯ ಜಿಲ್ಲೆಯನ್ನು ಬೆಂಕಿಯಲ್ಲಿ ಹತ್ತಿ ಉರಿಯುವಂತೆ ಮಾಡಿದರು.  ಇದು ಈಜಿಪ್ಟಿನ ‘ಬ್ಲಾಕ್ ಸಾಟರ್ಡೇ’ ಎನಿಸಿದೆ.

1962: ನಾಸಾದ ರೇಂಜರ್ 3, ಚಂದ್ರನನ್ನು ಅಧ್ಯಯನ ಮಾಡಲು ಉಡ್ಡಯನಗೊಂಡಿತು.  ಆದರೆ ಅದು 22,000 ಮೈಲುಗಳ ಅಂತರದಲ್ಲಿ ಚಂದ್ರನನ್ನು ತಲುಪಲು ವಿಫಲಗೊಂಡಿತು.

1965: ಹಿಂದಿ ಭಾಷೆಯನ್ನೂ ಭಾರತದ ಅಧಿಕೃತ ರಾಷ್ಟ್ರಭಾಷೆ ಎಂದು ಪರಿಗಣಿಸಲಾಯಿತು.

2001: ಗುಜರಾತಿನಲ್ಲಿ 7.7 ಎಂ.ಡಬ್ಲ್ಯೂ ಪ್ರಮಾಣದ  ಭೀಕರ ಭೂಕಂಪನವಾಗಿ 13,085 ರಿಂದ 20,023 ಸಾವುಗಳು ಸಂಭವಿಸಿ 1,66,800 ಮಂದಿ ಗಾಯಗೊಂಡರು.

2007: ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಒತ್ತಡ ಭಯವನ್ನು ತಗ್ಗಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ‘ಸಾಕ್ಷಾತ್’ ಎಂಬ ಆನ್ ಲೈನ್ ಸಂವಾದ ಶಿಕ್ಷಣ ಯೋಜನೆಯನ್ನು ಆರಂಭಿಸಿತು. ಈ ಸೌಲಭ್ಯವನ್ನು 2006ರ ಅಕ್ಟೋಬರ್ 30ರಂದು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಕ್ಕೆ ಸಮರ್ಪಿಸಿದ್ದರು.

2007: ಬೆಂಗಳೂರು ನಗರದ  ಕರ್ನಾಟಕ ಸಾಬೂನು ಕಾರ್ಖಾನೆ ಮುಂಭಾಗದಲ್ಲಿರುವ ಶ್ರೀ  ಜಯಚಾಮರೆಜೇಂದ್ರ  ಒಡೆಯರ್ ವೃತ್ತದಲ್ಲಿ ಸ್ವಾತಂತ್ರ್ಯ ಯೋಧೆ ರಾಣಿ ಅಬ್ಬಕ್ಕೆ ದೇವಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

2008:  ಇನ್ಫೋಸಿಸ್ ಸಂಸ್ಥಾಪಕರಾದ  ಎನ್. ಆರ್. ನಾರಾಯಣ ಮೂರ್ತಿ ಅವರಿಗೆ ಫ್ರಾನ್ಸ್ ಸರ್ಕಾರವು ತನ್ನ ದೇಶದ  ಅತಿ ದೊಡ್ಡ ನಾಗರಿಕ ಗೌರವವಾದ `ಆಫೀಸರ್ ಆಫ್ ದಿ ಲೆಜನ್ ಆಫ್ ಆನರ್’ ಪ್ರಶಸ್ತಿ ನೀಡಿ ಗೌರವಿಸಿತು.

2008: ಅಡಿಲೇಡಿನಲ್ಲಿ ಹಿಂದಿನ ದಿನ ತಾನೇ  ಅತಿ ಹೆಚ್ಚು (414) ವಿಕೆಟ್ ಪತನದ ವಿಶ್ವದಾಖಲೆ ನಿರ್ಮಿಸಿದ್ದ ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್,  ಈ ದಿನ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.

2009: ಸುಮಾರು 5,500 ವರ್ಷಗಳಿಗೂ ಹಳೆಯದಾದ ನವಶಿಲಾಯುಗಕ್ಕೆ ಸೇರಿದ್ದ ಮಾನವ ನಿರ್ಮಿತ ಗುಹೆ ಮತ್ತು ಮಡಿಕೆ ಮಾಡುವ ಸ್ಥಳಗಳನ್ನು ಪತ್ತೆ ಹಚ್ಚಿರುವುದಾಗಿ ಚೀನೀ ಪ್ರಾಕ್ತನ ತಜ್ಞರು ಪ್ರಕಟಿಸಿದರು. ವಾಯವ್ಯ ಚೀನಾದ ಶಾಂನ್ಷಿ ಪ್ರಾಂತ್ಯದ ನದೀ ತೀರದ  ಕಡಿದಾದ ಪ್ರದೇಶದಲ್ಲಿ 17 ಗುಹಾಂತರ ಮನೆಗಳು ಕಂಡು ಬಂದಿವೆ ಎಂದು ಪ್ರಾಚ್ಯಶಾಸ್ತ್ರಜ್ಞ ವಾಂಗ್ ವೇಲಿನ್ ಹೇಳಿದರು.  ಕ್ರಿ.ಪೂ. 3500 ಮತ್ತು 3000ರ ಅವಧಿಯಲ್ಲಿ ಈ ಮನೆಗಳು ನಿರ್ಮಾಣಗೊಂಡಿವೆ ಎಂದು ಈ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

2009: ಮುಂಬೈ ನಗರದ ಮೇಲೆ  ನವೆಂಬರ್  26ರ  ಉಗ್ರರ ದಾಳಿಯಲ್ಲಿ ಹುತಾತ್ಮರಾದ ಬೆಂಗಳೂರಿನ ಎನ್‌ಎಸ್‌ಜಿ ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ  ಮಹಾರಾಷ್ಟ್ರ ಪೊಲೀಸ್ ದಳದ  ಹೇಮಂತ ಕರ್ಕರೆ, ಅಶೋಕ ಕಮ್ತೆ, ವಿಜಯ ಸಾಲಸ್ಕರ್, ತುಕಾರಾಮ್ ಓಂಬಳೆ,  ಹವಿಲ್ದಾರ್ ಗಜೇಂದರ್ ಸಿಂಗ್ ಮುಂತಾದವರು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಷ್ಟ್ರಕ್ಕಾಗಿ ಬಲಿದಾನ ಮಾಡಿದ 11 ಮಂದಿ ಭದ್ರತಾ ಸಿಬ್ಬಂದಿಯನ್ನು ರಾಷ್ಟ್ರವು ಗಣರಾಜ್ಯೋತ್ಸವ ಸಂದರ್ಭದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವದಿಂದ ಸ್ಮರಿಸಿತು. ರಾಜಧಾನಿಯಲ್ಲಿ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಬಟಾಲಾ ಹೌಸಿನಲ್ಲಿ ಭಯೋತ್ಪಾದಕರ ಜೊತೆಗಿನ ಕಾಳಗದಲ್ಲಿ ಮೃತರಾದ ದೆಹಲಿ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಚಂದ್ ಅವರಿಗೂ ಮರಣೋತ್ತರ ಪ್ರಶಸ್ತಿ ಗೌರವ ಸಲ್ಲಿಸಲಾಯಿತು.

2017: ಕರ್ನಾಟಕದ ಪ್ರಖ್ಯಾತ ವಿಜ್ಞಾನಿ ಪ್ರೊ. ಯು. ಆರ್. ರಾವ್ ಅವರಿಗೆ ಪದ್ಮವಿಭೂಷಣ, ನಿಘಂಟು ವಿದ್ವಾಂಸರಾದ ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ, ಚಲನಚಿತ್ರ ಕಲಾವಿದೆ ಭಾರತಿ ವಿಷ್ಣುವರ್ಧನ್, ಜನಪದ ಕಲಾವಿದೆ ಮತ್ತು ಸಮಾಜ ಸುಧಾರಕಿ ಸುಕ್ರಿ ಬೊಮ್ಮಗೌಡ, ತೂಗು ಸೇತುವೆಗಾಗಿ ಪ್ರಸಿದ್ಧರಾದ ಗಿರೀಶ್ ಭಾರದ್ವಾಜ್, ಒಲಿಂಪಿಕ್ಸ್ ಪದಕ ವಿಜೇತ ಗಿರೀಶ್ ಭಾರದ್ವಾಜ್, ಅಂಧರ ಕ್ರಿಕೆಟ್ ನಾಯಕ ಶೇಖರ್ ನಾಯಕ್ ಅವರುಗಳನ್ನೂ ಒಳಗೊಂಡಂತೆ 7 ಪದ್ಮವಿಭೂಷಣ, 7 ಪದ್ಮಭೂಷಣ ಮತ್ತು 75 ಪದ್ಮಶ್ರೀ ಪ್ರಶಸ್ತಿಗಳನ್ನು ಭಾರತ ಸರ್ಕಾರ ಪ್ರಕಟಿಸಿದೆ. ಪದ್ಮಭೂಷಣ ಪ್ರಶಸ್ತಿ ನಾಮಾಂಕಿತ ಗಣ್ಯರಲ್ಲಿ ಪ್ರಖ್ಯಾತ ಗಾಯಕ ಕೆ. ಜೆ. ಏಸುದಾಸ್ ಹಾಗೂ ಪದ್ಮಶ್ರೀ ಗಣ್ಯರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದ್ದಾರೆ.

ಪ್ರಮುಖಜನನ/ಮರಣ:

1904: ಐರ್ಲ್ಯಾಂಡಿನಲ್ಲಿನ ಒಬ್ಬ ಪ್ರಾಂತೀಯ ರಾಜಕಾರಣಿಯಾದರೂ ವಿಶ್ವಸಂಸ್ಥೆ, ಕೌನ್ಸಿಲ್ ಆಫ್ ಯೂರೋಪ್, ಆಮ್ನೆಸ್ಟಿ ಇಂಟರ್ನ್ಯಾಷನಲ್ ಮುಂತಾದ ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳ  ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ  ಸೀನ್ ಮೆಕ್ಬ್ರೈಡ್ ಅವರು ಪ್ರಾನ್ಸಿನ ಪ್ಯಾರಿಸ್ ನಗರದಲ್ಲಿ ಜನಿಸಿದರು.  ಅವರಿಗೆ 1974ರ ವರ್ಷದ ನೊಬೆಲ್ ಶಾಂತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

1911: ಪ್ರಸಿದ್ಧ ಭೌತವಿಜ್ಞಾನಿ ಪಾಲಿಕರ್ರ್ಪ ಕುಶ್ಚ್ ಜರ್ಮನಿಯಲ್ಲಿ ಜನಿಸಿದರು.  ಮುಂದೆ ಅಮೇರಿಕಾದ ಪ್ರಜೆಯಾದ ಅವರು ‘ಮ್ಯಾಗ್ನೆಟಿಕ್ ಮೂವ್ಮೆಂಟ್ ಆಫ್ ದಿ ಎಲೆಕ್ಟ್ರಾನ್’ ಅನ್ನು  ಅತ್ಯಂತ ಖಚಿತವಾಗಿ  ಪ್ರಸ್ತುತಪಡಿಸಿದ್ದಕ್ಕಾಗಿ  1955ರ ವರ್ಷದ ನೊಬೆಲ್ ಪುರಸ್ಕಾರ ಪಡೆದರು

1915: ಕನ್ನಡದ ಪ್ರೇಮಕವಿ ಎಂದೇ ಪ್ರಖ್ಯಾತರಾದ ಡಾ. ಕೆ. ಎಸ್. ನರಸಿಂಹಸ್ವಾಮಿ ಅವರು  ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.  ಮೈಸೂರು ಮಲ್ಲಿಗೆಗೆ ದೇವರಾಜಬಹದ್ದೂರ್ ಬಹುಮಾನ, ಶಿಲಾಲತೆಗೆ ಮೈಸೂರು ರಾಜ್ಯದ ಸಂಸ್ಕೃತಿ ಪ್ರಸಾರ ಶಾಖೆಯ ಬಹುಮಾನ, ತೆರೆದ ಬಾಗಿಲು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ‘ದುಂಡು ಮಲ್ಲಿಗೆ’ ಕವನ ಸಂಗ್ರಹಕ್ಕೆ ಪಂಪ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ, ಕೇರಳದ ಕವಿ ಕುಮಾರನ್ ಆಶಾನ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಇವರು ಡಿಸೆಂಬರ್ 2003ರಲ್ಲಿ ನಿಧನರಾದರು.

1920: ಗುಡಿಕಾರ ಚಿತ್ರಕಲೆಯಲ್ಲಿ ಅಪೂರ್ವ ಸಾಧನೆ ಮಾಡಿದ ಜಡೆ ಮಂಜುನಾಥಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜನಿಸಿದರು. ಅಖಿಲ ಭಾರತ ಲಲಿತ ಕಲಾ ಅಕಾಡೆಮಿಯಿಂದ ಚಿನ್ನದ ಪದಕ, ಧರ್ಮಸ್ಥಳದ ವಸ್ತು ಪ್ರದರ್ಶನದಿಂದ ಚಿನ್ನದ ಪದಕ,  ರಾಜ್ಯ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1921: ಜಪಾನಿನ ಪ್ರಖ್ಯಾತ ಉದ್ಯಮಿ,  ವಿಶ್ವ ಪ್ರಸಿದ್ಧ ‘ಸೋನಿ’ ಸಂಸ್ಥೆಯ ಸ್ಥಾಪಕರಾದ ಅಕಿಯೋ ಮೊರಿಟಾ ಅವರು  ಐಚಿ ಬಳಿಯ ನಗೋಯ್ ಎಂಬಲ್ಲಿ ಜನಿಸಿದರು.  ಮ್ಯಾಗ್ನೆಟಿಕ್ ಟೇಪ್ ಉದ್ಯಮ, ಪಾಕೆಟ್ ರೇಡಿಯೋ ಮುಂತಾದ ಅನೇಕ ಮಹತ್ವದ  ವಸ್ತುಗಳ ನಿರ್ಮಾಣವನ್ನು ಪ್ರಾರಂಭಿಸಿದ ಕೀರ್ತಿ ಇವರದ್ದಾಗಿದೆ.

1967: ಪ್ರಸಿದ್ಧ ಇಂಟರ್ನೆಟ್ ಮೂವಿ ಡಾಟಾಬೇಸ್ (IMDb) ಸಂಸ್ಥೆಯ ಸ್ಥಾಪಕ ಕಾಲ್ ನೀಧಾಮ್ ಇಂಗ್ಲೆಂಡಿನ ಡೆಂಟೆನ್ ಎಂಬಲ್ಲಿ ಜನಿಸಿದರು.  ಮುಂದೆ ಈ ಸಂಸ್ಥೆಯನ್ನು 1998ರಲ್ಲಿ ಅಮೆಜಾನ್ ಸಂಸ್ಥೆ ತನ್ನ ಪರಿಧಿಯೊಳಗೆ ಸೇರಿಸಿಕೊಂಡಿತು.

1556: ಮೆಟ್ಟಿಲುಗಳ ಮೇಲಿಂದ ಉರುಳಿ ಬಿದ್ದು ಗಾಯಗೊಂಡ ಚಕ್ರವರ್ತಿ ಹ್ಯುಮಾಯುನ್ ಸಾವಿಗೀಡಾದ.

1831: ಕಿತ್ತೂರು ರಾಣಿ ಚೆನ್ನಮ್ಮನಿಗೆ ಬೆಂಬಲವಾಗಿ ಗೊರಿಲ್ಲಾ ಯುದ್ಧದ ರೂವಾರಿಯಾಗಿ   ಬ್ರಿಟಿಷರಿಗೆ ಸಿಂಹ ಸ್ವಪ್ನನಾಗಿ ಹೋರಾಡಿದ ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು  ನೇಣುಗಂಬಕ್ಕೇರಿಸಿ ಕೊಂದರು.

1891: ಪೆಟ್ರೋಲಿಯಂ ಮತ್ತು ಗ್ಯಾಸಿನ ಸಹಾಯದಿಂದ  ಚಲಿಸುವ  ಇಂಟರ್ನಲ್ ಕಂಬಶನ್ ಇಂಜಿನ್  ನಿರ್ಮಿಸಿ  ಆಧುನಿಕ  ಕಂಬಶನ್ ಇಂಜಿನ್ನುಗಳಿಗೆ ಪಂಕ್ತಿ ಹಾಕಿಕೊಟ್ಟ  ನಿಕೊಲಸ್ ಓಟ್ಟೋ ಜರ್ಮನಿಯ ಕೊಲೇನ್ ಎಂಬಲ್ಲಿ ನಿಧನರಾದರು.

2006: ಖ್ಯಾತ ಭಾರತೀಯ ವಿಜ್ಞಾನಿ ಡಾ. ವಿ.ಪಿ. ನಾರಾಯಣನ್ ನಂಬಿಯಾರ್ ತಮಿಳುನಾಡಿದ ಚೆನ್ನೈಯಲ್ಲಿ ನಿಧನರಾದರು.  ಫೊಟೋಗ್ರಫಿಗೆ ಸಂಬಂಧಿಸಿದ ರಸೆಲ್ ಎಫೆಕ್ಟ್ ಮೇಲಿನ ಸಂಶೋಧನೆಗಾಗಿ ಅವರು ವಿಶ್ವದಾದ್ಯಂತ ವಿಜ್ಞಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು. ರಸೆಲ್ ಎಫೆಕ್ಟ್ ಮೇಲೆ ಈ ಹಿಂದೆ ರಸೆಲ್ ಹಾಗೂ ಅಮೆರಿಕ ವಿಜ್ಞಾನಿ ಎಚ್.ಡಿ. ಟೈಮನ್ ಅವರು ಕೈಗೊಂಡಿದ್ದ ಸಂಶೋಧನೆ ಸರಿಯಿಲ್ಲ ಎಂದು ನಾರಾಯಣನ್ ತಮ್ಮ ಪ್ರಯೋಗಗಳ ಮೂಲಕ ಸಾಧಿಸಿ ತೋರಿಸಿದ್ದರು.

2009: ಹಿರಿಯ ಕಲಾವಿದ ಮತ್ತು ಬಿಜಿಎಂ ಕಲಾಶಾಲೆಯ ಸ್ಥಾಪಕ ಬೋಳಾರ್ ಗುಲಾಂ ಮೊಹಮ್ಮದ್ ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೇ ಮುಂತಾದ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿದ್ದವು.  ಇವರು 1953ರಲ್ಲಿ ಸ್ಥಾಪಿಸಿದ ಬಿಜಿಎಂ ಕಲಾಶಾಲೆ ಸಹಸ್ರಾರು ಕಲಾವಿದರು ರೂಪುಗೊಳ್ಳಲು ಕಾರಣವಾಗಿದೆ.

2013: ಅಂತರರಾಷ್ಟ್ರೀಯ ಖ್ಯಾತಿಯ  ಭಾರತೀಯ ಭೌತವಿಜ್ಞಾನಿ  ಪದ್ಮಾಕಾಂತ್ ಶುಕ್ಲಾ  ನವದೆಹಲಿಯಲ್ಲಿ ನಿಧನರಾದರು.