Categories
e-ದಿನ

ಜನವರಿ-28

ಪ್ರಮುಖಘಟನಾವಳಿಗಳು:

1573: ಪೋಲಾಂಡಿನಲ್ಲಿ ಧರ್ಮ ಸ್ವಾತಂತ್ರ್ಯಕ್ಕೆ ಅವಕಾಶವೀಯುವ ವಾರ್ಸಾ ಕನ್ಫೆಡರೇಶನ್  ನಿರ್ಣಯವನ್ನು ಅಂಗೀಕರಿಸಲಾಯಿತು

1724: ಪೀಟರ್ ದಿ ಗ್ರೇಟ್ ಅವರು ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ  ‘ದಿ ರಷ್ಯನ್ ಅಕಾಡೆಮಿ ಆಫ್ ಸೈನ್ಸಸ್’ ಸ್ಥಾಪಿಸಿದರು. ಇದಕ್ಕೆ  1917ರ ವರ್ಷದ ವರೆಗೆ ‘ಸೈಂಟ್ ಪೀಟರ್ಸ್ ಬರ್ಗ್ ಅಕಾಡೆಮಿ ಆಫ್ ಸೈನ್ಸಸ್’ ಎಂಬ ಹೆಸರಿತ್ತು.

1813: ಜೇನ್ ಆಸ್ಟೆನ್ ಅವರ ಪ್ರಸಿದ್ಧ ಕೃತಿ ‘ಪ್ರೈಡ್ ಅಂಡ್ ಪ್ರಿಜಡೈಸ್’ ಕೃತಿ, ಯುನೈಟೆಡ್ ಕಿಂಗ್ಡಂನಲ್ಲಿ ಪ್ರಥಮ ಬಾರಿಗೆ ಪ್ರಕಟಗೊಂಡಿತು.

1820: ರಷ್ಯಾದ ಫ್ಯಾಬಿಯನ್ ಗೊಟ್ಲಿಯೇಬ್ ವಾನ್ ಬೆಲ್ಲಿಂಗ್ ಶೌಸೇನ್ ಮತ್ತು ಮೈಖೈಲ್ ಪೆಟ್ರೋವಿಕ ಲಜ್ಜಾರೇವ್ ನೇತೃತ್ವದ ತಂಡವು ಅಂಟಾರ್ಕ್ಟಿಕ್ ತೀರದ ಬಳಿಯಲ್ಲಿ ಅಂಟಾರ್ಕ್ಟಿಕ್ ಖಂಡದ ಇರವನ್ನು ಪತ್ತೆ ಹಚ್ಚಿತು.

1846: ರಣಜೋಧ್ ಸಿಂಗ್ ಮಜಿಥಿಯ ನೇತೃತ್ವದ  ಸಿಖ್ ಸೈನ್ಯ ಮತ್ತು ಸರ್ ಹ್ಯಾರಿ ಸ್ಮಿತ್ ನೇತೃತ್ವದ  ಬ್ರಿಟಿಷ್ ಪಡೆಗಳ  ನಡುವೆ ಯುದ್ಧ ನಡೆದು  ಸಿಖ್ ಪಡೆ ಸೋಲನುಭವಿಸಿತು

1855: ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ನಡುವಣ ಪನಾಮಾ ಕೆನಾಲ್ ರೈಲ್ವೆ ಸಂಚಾರ ಪ್ರಥಮ ಬಾರಿಗೆ  ಪ್ರಾರಂಭಗೊಂಡಿತು

1896: ಇಂಗ್ಲೆಂಡಿನ  ಕೆಂಟ್ ಪ್ರದೇಶದ ಈಸ್ಟ್ ಪೆಕ್ಹಾಂ ಊರಿನ ವಾಲ್ಟರ್ ಆರ್ನಾಲ್ಡ್ ಎಂಬಾತ ವೇಗವಾಗಿ ಕಾರು  ಓಡಿಸಿದ್ದಕ್ಕೆ ದಂಡನೆಗೆ ಒಳಗಾದ ಪ್ರಥಮ ವ್ಯಕ್ತಿ ಎನಿಸಿದ. ಆಗ ಗಂಟೆಗೆ 2 ಮೈಲು ಮಾತ್ರಾ ಕಾರು  ವೇಗವಾಗಿ  ಓಡಿಸಬಹುದಿತ್ತು.  ಆದರೆ ವಾಲ್ಟರ್ ಗಂಟೆಗೆ 8 ಮೈಲು ವೇಗದಲ್ಲಿ ಗಾಡಿ ಓಡಿಸಿದ.  ಹೀಗಾಗಿ ಆತನಿಗೆ  ಒಂದು ಶಿಲ್ಲಾಂಗ್ ಮತ್ತು ಖರ್ಚನ್ನು ಬರಿಸುವ  ದಂಡನೆ ವಿಧಿಸಲಾಯಿತು.

1902: ಪ್ರಸಿದ್ಧ ಉದ್ಯಮಿ ಆಂಡ್ರ್ಯೂ ಕಾರ್ನಿಗಿ ಅವರ ಹತ್ತು ಮಿಲಿಯನ್ ಡಾಲರ್ ಕೊಡುಗೆಯಿಂದ  ಕಾರ್ನಿಗಿ ಇನ್ಸ್ಟಿಟ್ಯೂಷನ್ ಆಫ್ ವಾಷಿಂಗ್ಟನ್ ಸ್ಥಾಪನೆಗೊಂಡಿತು

1933: ಚೌಧುರಿ ರಹಮತ್ ಅಲಿ ಖಾನ್ ಎಂಬಾತ ಪಾಕಿಸ್ತಾನ ಎಂಬ ಹೆಸರನ್ನು ಪ್ರಸ್ತಾಪಿಸಿದ. ಇದು ಅಂದಿನ ಭಾರತೀಯ ಮುಸ್ಲಿಂ ನಾಯಕರಿಗೆ ಪ್ರಿಯವಾಗಿ, ಮುಂದೆ  ಅದು ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಬೇಡಿಕೆಯ ಚಳುವಳಿಗೆ ನಾಂದಿಯಾಯ್ತು.

1935: ಐಸ್ಲ್ಯಾಂಡ್ ಶಸ್ತ್ರಕ್ರಿಯಾ ಗರ್ಭಪಾತವನ್ನು  ಕಾನೂನುಬದ್ಧಗೊಳಿಸಿದ ಪ್ರಥಮ ರಾಷ್ಟ್ರವೆನಿಸಿತು.

1938: ಜರ್ಮನಿಯ ರುಡಾಲ್ಫ್ ಕರಸ್ಸಿಯೋಲ ಅವರು ‘ಮರ್ಸಿಡಿಸ್ ಬೆನ್ಸ್ ಡಬ್ಲ್ಯೂ195’ ಕಾರಿನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಗಂಟೆಗೆ  432.70 ಕಿಲೋಮೀಟರ್ ವೇಗದಲ್ಲಿ ಚಲಿಸುವುದರ ಮೂಲಕ  ದಾಖಲೆ ಸ್ಥಾಪಿಸಿದರು.

1945: ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಚೀನಾಕ್ಕೆ ಪುನಃತೆರೆದುಕೊಂಡ ಬರ್ಮಾದ ರಸ್ತೆಯ ಮೂಲಕವಾಗಿ  ಅಗತ್ಯವಸ್ತುಗಳ ಸರಬರಾಜು   ಪ್ರಾರಂಭಗೊಂಡವು.

1950: ಭಾರತದ ಸುಪ್ರೀಂಕೋರ್ಟ್ ನವದೆಹಲಿಯಲ್ಲಿ ಅಸ್ತಿತ್ವಕ್ಕೆ ಬಂದಿತು. 1937ರಿಂದ 1950ರವರೆಗೆ 12 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ‘ದಿ ಫೆಡರಲ್ ಕೋರ್ಟ್ ಆಫ್ ಇಂಡಿಯಾ’  ಸ್ಥಳದಲ್ಲೇ ಸುಪ್ರೀಂಕೋರ್ಟ್  ಕಾರ್ಯನಿರ್ವಹಿಸಿತು.

1953: ರಾಷ್ಟ್ರಪತಿಗಳಾದ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಭಾರತದಲ್ಲಿ ಸಂಗೀತ, ನೃತ್ಯ, ನಾಟಕ ಅಭಿವೃದ್ಧಿಗಾಗಿ ನವದೆಹಲಿಯಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯನ್ನು ಉದ್ಘಾಟಿಸಿದರು.

1956: ಅಮೆರಿಕದ ಪ್ರಸಿದ್ಧ ನಟ ಮತ್ತು ಗಾಯಕ ಎಲ್ವಿಸ್ ಪ್ರೆಸ್ಲಿ ಅವರು ಪ್ರಥಮ ಬಾರಿಗೆ ಕಿರುತೆರೆಯಲ್ಲಿ ತಮ್ಮ ಕಾರ್ಯಕ್ರಮವನ್ನು ನೀಡಿದರು.

1958: ಲೆಗೋ ಸಂಸ್ಥೆ ತನ್ನ ಪಸಿದ್ಧ ಇಟ್ಟಿಗೆ ರೂಪದ  ಜೋಡಣಾ ಆಟಿಕೆ ವಿನ್ಯಾಸಕ್ಕೆ  ಪೇಟೆಂಟ್ ಪಡೆಯಿತು.  ಈ ವಿನ್ಯಾಸಗಳು ಇಂದಿನ ದಿನಗಳಲ್ಲಿ ಕೂಡಾ ಅತ್ಯಂತ ಜನಪ್ರಿಯವಾಗಿವೆ.

1986: ನಾಸಾದ ಬಾಹ್ಯಾಕಾಶ ನೌಕೆ  ‘ಚಾಲೆಂಜರ್’ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ಸ್ವಲ್ಪ ಹೊತ್ತಿನಲ್ಲೇ ಸ್ಫೋಟಗೊಂಡಿತು. ಶಾಲಾ ಶಿಕ್ಷಕಿ ಕ್ರಿಸ್ಟಾ ಮೆಕ್ಲಿಫ್ ಸೇರಿದಂತೆ ಅದರಲ್ಲಿದ್ದ ಎಲ್ಲ 7 ಮಂದಿ ಗಗನಯಾನಿಗಳೂ ದುರಂತದಲ್ಲಿ ಸಾವನ್ನಪ್ಪಿದರು.

1988: ಆರ್ ವಿ ಮಾರ್ಗೆಂಟೇಲರ್ ತೀರ್ಮಾನದಲ್ಲಿ ಕೆನಡಾದ ಸುಪ್ರೀಂ ಕೋರ್ಟು ಗರ್ಭಪಾತದ ವಿರುದ್ಧವಿದ್ದ ಎಲ್ಲ ಕಾನೂನುಗಳನ್ನೂ  ರದ್ದುಗೊಳಿಸಿತು.

2006: ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ಜಿಗಿಯುವ ಆಕಾಶ್ ಕ್ಷಿಪಣಿಯನ್ನು ಬಾಲಸೂರ್ ಮಧ್ಯಂತರ ಪರೀಕ್ಷಾ ಕೇಂದ್ರದಲ್ಲಿ ಎರಡು ಬಾರಿ ಪರೀಕ್ಷಣಾರ್ಥವಾಗಿ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

2006: ತಮ್ಮ ಸರ್ಕಾರಕ್ಕೆ ಜನತಾದಳ (ಎಸ್) ಪಕ್ಷವು ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ  ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ರಾಜೀನಾಮೆ ಸಲ್ಲಿಸಿದರು.  ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೂತನ ಸರ್ಕಾರ ರಚನೆಗೆ ಅಧಿಕೃತ ಆಹ್ವಾನಪತ್ರ ನೀಡಿದರು.

2007: ಧರ್ಮಸ್ಥಳದ ರತ್ನ ಮಂಟಪದಲ್ಲಿ ಭಗವಾನ್ ಬಾಹುಬಲಿಯ ಮೂರನೇ ಮಹಾಮಸ್ತಕಾಭಿಷೇಕವನ್ನು ಉದ್ಘಾಟನೆಗೊಂಡಿತು

2007: ಚೀನಾದಲ್ಲಿ ಗಂಟೆಗೆ 250 ಕಿ.ಮೀ. ವೇಗವಾಗಿ ಓಡುವ ಬುಲೆಟ್ ರೈಲುಗಾಡಿಯು ಶಾಂಘಾಯಿ- ಬೀಜಿಂಗ್ ಮಧ್ಯೆ ಸಂಚಾರ ಆರಂಭಿಸಿತು.

2007: ಬ್ರಿಟನ್ನಿನ ‘ಚಾನೆಲ್ 4′ ಟಿವಿ ವಾಹಿನಿ ಪ್ರಸಾರ ಮಾಡುತ್ತಿದ್ದ ‘ಸೆಲೆಬ್ರಿಟಿ ಬಿಗ್ ಬ್ರದರ್’ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಟ್ಟು ಮತಗಳ ಪೈಕಿ ಶೇ 67ರಷ್ಟು ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.  ಅವರಿಗೆ  85 ಲಕ್ಷ ರೂಪಾಯಿಗಳಷ್ಟು (1 ಲಕ್ಷ ಪೌಂಡ್)  ಬಹುಮಾನ ದೊರಕಿತು.

2008: ಭಾರತದ  ಸಾನಿಯಾ ಮಿರ್ಜಾ ಏಷ್ಯಾದ ನಂಬರ್ ಒನ್ ಟೆನಿಸ್ ಆಟಗಾರ್ತಿ ಎನಿಸಿದರು.

2009: ದೇಶದ ಪ್ರತಿಯೊಬ್ಬ ಪ್ರಜೆಗೂ ಶಾಶ್ವತ ಗುರುತಿನ ಚೀಟಿ ನೀಡುವ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಾಧಿಕಾರ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತು.

ಪ್ರಮುಖಜನನ/ಮರಣ:

1809: ಜರ್ಮನಿಯ ಸಂಸ್ಕೃತ ವಿದ್ವಾಂಸ ಥಿಯೋಡೋರ್ ಬೆನ್ ಫೇ ಜನಿಸಿದರು.  ಭಾರತದ ‘ಪಂಚತಂತ್ರ’ ಸಂಗ್ರಹ ಇವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.

1865: ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಬರಹಗಾರ  ಲಾಲಾ ಲಜಪತ ರಾಯ್ ಅವರು ಪಂಜಾಬಿನ ದುಡಿಕೆ ಎಂಬಲ್ಲಿ ಜನಿಸಿದರು.  ಪಂಜಾಬಿನ ಕೇಸರಿ ಎಂದು ಪ್ರಸಿದ್ಧರಾದ ಇವರು  ಸೈಮನ್ ಕಮಿಷನ್ ವಿರುದ್ಧ ನಡೆಸಿದ ಚಳುವಳಿ ಸಂದರ್ಭದಲ್ಲಿ ಪೋಲಿಸ್ ಆಕ್ರಮಣದಲ್ಲಿ ತೀವ್ರವಾಗಿ ಗಾಯಗೊಂಡು ನಿಧನರಾದರು.

1899: ಭಾರತದ ಮೊತ್ತ ಮೊದಲ ಸೇನಾದಂಡನಾಯಕರಾದ  ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರಿಯಪ್ಪ ಅವರು ಕೊಡಗಿನ ಶನಿವಾರಸಂತೆಯಲ್ಲಿ  ಜನಿಸಿದರು.ಎರಡೂ ವಿಶ್ವ ಮಹಾಯುದ್ಧಗಳಲ್ಲಿ ಪಾಲ್ಗೊಂಡಿದ್ದು ನಂತರದಲ್ಲಿ ಭಾರತದ ಸೇನೆಯ ಮಹಾದಂಡನಾಯಕರಾಗಿ ಹಾಗೂ  ಹಲವು ದೇಶಗಳಿಗೆ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದ ಇವರಿಗೆ  ಅಮೆರಿಕಾದ ಅಧ್ಯಕ್ಷ ಟ್ರೂಮನ್ ಅವರು ಕಾರಿಯಪ್ಪನವರಿಗೆ ‘ಆರ್ಡರ್ ಆಫ್ ದಿ ಚೀಫ್ ಕಮಾಂಡರ್ ಆಫ್ ದಿ ಲೆಜನ್ ಆಫ್ ಮೆರಿಟ್’ ಪ್ರಶಸ್ತಿ ನೀಡಿ ಗೌರವಿಸಿದ್ದರು. ಭಾರತ ಸರ್ಕಾರ ಅವರಿಗೆ ಫೀಲ್ಡ್ ಮಾರ್ಷಲ್ ಗೌರವವನ್ನು ಅರ್ಪಿಸಿತು. ತೊಂಬತ್ತನಾಲ್ಕು ವರ್ಷಗಳ ಶುದ್ಧ ಜೀವನವನ್ನು ನಡೆಸಿದ ಕಾರಿಯಪ್ಪನವರು ಮೇ 15, 1993ರಂದು ಬೆಂಗಳೂರಿನಲ್ಲಿ ನಿಧನರಾದರು

1922: ಅಮೆರಿಕದ ಜೈವಿಕ ವಿಜ್ಞಾನಿ ರಾಬರ್ಟ್ ಡಬ್ಲ್ಯೂ ಹಾಲಿ ಇಲಿನಾಯ್ಸ್ ಪ್ರದೇಶದ ಉರ್ಬಾನಾ ಎಂಬಲ್ಲಿ ಜನಿಸಿದರು.  ಅವರಿಗೆ 1968ರ ವರ್ಷದಲ್ಲಿ  ‘ಟ್ರಾನ್ಸ್ಫರ್ ಆರ್.ಎನ್.ಎ, ಲಿಂಕಿಂಗ್ ಡಿ.ಎನ್.ಎ ಅಂಡ್ ಪ್ರೊಟೀನ್ ಸಿಂಥೆಸಿಸ್’ ಕಾರ್ಯಕ್ಕಾಗಿ ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕಾರ ಸಂದಿತು.

1925: ರಾಜಾರಾಮಣ್ಣನವರು ತುಮಕೂರಿನಲ್ಲಿ ಜನಿಸಿದರು.  ಭಾರತದ ಮೊದಲನೆ ಅಣು ಬಾಂಬ್ ಕಾರ್ಯಕ್ರಮದ ಹರಿಕಾರರಾಗಿದ್ದ ರಾಜಾರಾಮಣ್ಣನವರು 1974ರಲ್ಲಿ ‘ರಾಜಾಸ್ಥಾನದ ಪೊಕ್ರಾನ್’ನಲ್ಲಿ ಜರುಗಿದ ‘ಭಾರತದ ಪ್ರಥಮ ಪರಮಾಣು ಪರೀಕ್ಷೆ’ಯನ್ನು ಸಮರ್ಥವಾಗಿ ನಿರ್ವಹಿಸಿದರು.  ‘ಹೋಮಿ ಜಹಂಗೀರ್ ಭಾಬಾ’ರವರ ಆಪ್ತ ಶಿಷ್ಯರಾಗಿದ್ದ ಅವರು ‘ಶ್ರೇಷ್ಟ ಪರಮಾಣು ವಿಜ್ಞಾನಿಯಲ್ಲದೆ ‘ನುರಿತ ಪಿಯಾನೋ ವಾದಕ’, ‘ವೇದೊಪನಿಷದ್ ಪಾರಂಗತ’, ‘ಉಪಾಧ್ಯಾಯ’, ‘ದಾರ್ಶನಿಕ’, ‘ರಾಜ್ಯಸಭೆ ಸದಸ್ಯ’, ‘ರಕ್ಷಣಾ ರಾಜ್ಯ ಮಂತ್ರಿ’ ಸಹಾ ಆಗಿದ್ದರು. ಸೆಪ್ಟೆಂಬರ್ 24, 2004ರಂದು ಮುಂಬೈನಲ್ಲಿ ನಿಧನರಾದ ಇವರಿಗೆ ‘ಶಾಂತಿ ಸ್ವರೂಪ ಭಟ್ನಾಗರ್ ಸ್ಮಾರಕ ಪ್ರಶಸ್ತಿ’, ‘ಪದ್ಮಶ್ರೀ’, ‘ಪದ್ಮಭೂಷಣ’, ‘ಪದ್ಮವಿಭೂಷಣ’, ‘ಮೇಘನಾದ್ ಸಹಾ ಪದಕ’, ‘ಓಂ ಪ್ರಕಾಶ್ ಭಾಸಿನ್ ಪ್ರಶಸ್ತಿ’ ಮುಂತಾದ ಅನೇಕ ಗೌರವಗಳು ಸಂದಿದ್ದವು.

1930: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತ ವಿದ್ವಾಂಸ ಮತ್ತು ಗಾಯಕರಾದ ಪಂಡಿತ್ ಜಸರಾಜ್ ಅವರು ಈಗ ಹರ್ಯಾಣಾದಲ್ಲಿರುವ  ಹಿಸಾರ್ ಪಟ್ಟಣದಲ್ಲಿ ಜನಿಸಿದರು.  ಮೆವಾತಿ ಘರಾಣಾದ ಸಂಗೀತಗರರಾದ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನೂ ಒಳಗೊಂಡಂತೆ ಅನೇಕ ಗೌರವಗಳು ಸಂದಿವೆ.

1931: ಕನ್ನಡ ಸಾಹಿತ್ಯಲೋಕದ ಪ್ರಮುಖ ಬರಹಗಾರ, ವಿದ್ವಾಂಸ, ಶಿಕ್ಷಣ ತಜ್ಞ, ಉತ್ತಮ ವಾಗ್ಮಿ ಹಾಗೂ ಆಡಳಿತಗಾರರೆಂದು ಹೆಸರಾಗಿರುವ ಸಾ. ಶಿ. ಮರುಳಯ್ಯನವರು  ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಾಸಲು ಎಂಬ ಗ್ರಾಮದಲ್ಲಿ ಜನಿಸಿದರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಅವರು  ಕನ್ನಡ ಸಾಹಿತ್ಯ ಪರಿಷತ್ತಿನ  ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಫೆಬ್ರವರಿ 2016ರಲ್ಲಿ ನಿಧನರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.

1938: ಪ್ರಖ್ಯಾತ ಜೀವ ವಿಜ್ಞಾನಿ ಥಾಮಸ್ ಲಿಂಡಾಹಿ ಅವರು ಸ್ವೀಡನ್ನಿನ ಸ್ಟಾಲ್ಕ್ ಹೋಮ್ ನಗರದಲ್ಲಿ ಜನಿಸಿದರು.  ಮುಂದೆ ಬ್ರಿಟಿಷ್ ಪ್ರಜೆಯಾಗಿ ಕ್ಯಾನ್ಸರ್ ಕುರಿತಾಗಿ ಮಹತ್ವದ ಸಂಶೋಧನೆ ನಡೆಸಿದ ಅವರಿಗೆ 2015ರ ವರ್ಷದಲ್ಲಿ ರಸಾಯನ ಶಾಸ್ತ್ರದ  ನೊಬೆಲ್ ಪ್ರಶಸ್ತಿ ಸಂದಿತು.

1945: ರಂಗಕರ್ಮಿ ರಾಜಶೇಖರ ಕದಂಬ ಅವರು ಬೆಂಗಳೂರು ಜಿಲ್ಲೆಯ ಗೊಟ್ಟಿಗೆರೆಯಲ್ಲಿ ಜನಿಸಿದರು.  ನಟರಾಗಿ, ಕದಂಬ ರಂಗವೇದಿಕೆ ಸ್ಥಾಪಕರಾಗಿ ಖ್ಯಾತರಾಗಿರುವ ಇವರಿಗೆ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1955: ಪ್ರಸಿದ್ಧ ಉದ್ಯಮಿ ವಿನೋದ್ ಖೋಸ್ಲಾ ನವದೆಹಲಿಯಲ್ಲಿ ಜನಿಸಿದರು.  ಅಮೆರಿಕದಲ್ಲಿ ಇಂಜಿನಿಯರ್ ಮತ್ತು ಉದ್ಯಮಿಯಾಗಿರುವ ಇವರು ವಿಶ್ವಪ್ರಸಿದ್ಧ ಸನ್ ಮೈಕ್ರೋಸಿಸ್ಟಮ್ಸ್ ಸಂಸ್ಥೆಯ  ಸಹ ಸಂಸ್ಥಾಪರಾಗಿ ಮತ್ತು ಅದರ ಪ್ರಾರಂಭಿಕ ಅಧ್ಯಕ್ಷರಾಗಿ ಪ್ರಸಿದ್ಧರು.  ಇದಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹಲವಾರು ಸಂಸ್ಥೆಗಳ ಸ್ಥಾಪಕರಾದ ಇವರು ಭಾರತದಲ್ಲಿನ  ಎಸ್.ಕೆ.ಎಸ್. ಮೈಕ್ರೋ ಫೈನಾನ್ಸ್ ಸಂಸ್ಥೆಯ ಮೂಲಕ ಸಣ್ಣ ಸಾಲ ವ್ಯವಸ್ಥೆಯನ್ನೂ ರೂಪಿಸಿದ್ದಾರೆ.

1976: ದಕ್ಷಿಣ ಭಾರತದ ಕಿರುತೆರೆ ಮತ್ತು ಚಲನಚಿತ್ರ ಕಲಾವಿದೆ ಮಾಳವಿಕಾ ಅವಿನಾಶ್ ಜನಿಸಿದರು.  ಇವರಿಗೆ ತಮಿಳು ನಾಡು ಸರ್ಕಾರದಿಂದ  ಉತ್ತಮ ನಟಿ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿಗಳು ಸಂದಿವೆ.

1939: ಇಪ್ಪತ್ತನೆ ಶತಮಾನದ ಮಹತ್ವದ ಕವಿಗಳಲ್ಲಿ ಒಬ್ಬರೆಂದು ಹೆಸರಾಗಿರುವ ಡಬ್ಯೂ. ಬಿ. ಈಟ್ಸ್ ಅವರು ಐರ್ಲ್ಯಾಂಡಿನ ಮೆಂಟನ್ ಎಂಬಲ್ಲಿ ಜನಿಸಿದರು.  ಐರಿಷ್ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಮಹತ್ವದ ಸಾಹಿತ್ಯ ಸೃಷ್ಟಿ ಮಾಡಿದ್ದ ಇವರಿಗೆ 1923ರ ವರ್ಷದಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.  ರಬೀಂದ್ರ ನಾಥ ಠಾಗೂರ್ ಅವರ ಗೀತಾಂಜಲಿ ಕೃತಿಗೆ  ಇವರು ಮುನ್ನುಡಿ ಬರೆದಿದ್ದರು.

1996: ರಷ್ಯನ್ ಮೂಲದ  ಅಮೆರಿಕನ್ ಸಾಹಿತಿ ಜೋಸೆಫ್ ಬ್ರಾಡ್ಸ್ಕಿ ಅವರು ನ್ಯೂಯಾರ್ಕ್ ನಗರದಲ್ಲಿ  ನಿಧನರಾದರು.  ರಷ್ಯಾದಿಂದ ಹೊರಹಾಕಲ್ಪಟ್ಟು ಅಮೆರಿಕದಲ್ಲಿ ಬಂದು ನೆಲೆಸಿ ಸಾಹಿತ್ಯ ಸಾಧನೆ ಮಾಡಿದ ಇವರಿಗೆ 1987ರಲ್ಲಿ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1996: ಅಮೆರಿಕದ ಪ್ರಸಿದ್ಧ  ಕಾಮಿಕ್ ಬರಹಗಾರ  ಜೆರ್ರಿ ಸೀಗಲ್ ಅವರು ಲಾಸ್ ಏಂಜಲಿಸ್ ನಗರದಲ್ಲಿ ನಿಧನರಾದರು.  ವಿಶ್ವಪ್ರಸಿದ್ಧ  ‘ಸೂಪರ್ಮ್ಯಾನ್’ ಕಾಮಿಕ್ ಅನ್ನು ಇವರು ಜೋಸೆಫ್ ಶಸ್ಟರ್ ಅವರ ಜೊತೆಗೂಡಿ ಸೃಷ್ಟಿಸಿದ್ದರು.

2007: ಖ್ಯಾತ ಹಿಂದಿ ಸಾಹಿತಿ, ಪತ್ರಕರ್ತ, ಚಲನಚಿತ್ರ ಚಿತ್ರಕಥಾ ಸಾಹಿತಿ ಕಮಲೇಶ್ವರ್ ಫರೀದಾಬಾದಿನಲ್ಲಿ ನಿಧನರಾದರು.  ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಪದ್ಮಭೂಷಣ ಹಾಗೂ ಇನ್ನಿತರ ಪುರಸ್ಕಾರ ಪಡೆದಿದ್ದ ಇವರು  30ಕ್ಕೂ ಹೆಚ್ಚು ಕೃತಿಗಳನ್ನೂ ರಚಿಸಿದ್ದು  ನೂರಕ್ಕೂ ಹೆಚ್ಚು ಚಲನಚಿತ್ರಗಳಿಗೆ  ಚಿತ್ರಕಥೆ ಸಂಭಾಷಣೆ ರಚಿಸಿದ್ದರು.  ಪ್ರಸಿದ್ಧ ಚಿತ್ರಗಳಾದ ಆಂಧಿ, ಮೌಸಮ್, ಚೋಟಿ ಸಿ ಬಾತ್, ರಂಗ್ ಬಿರಂಗಿ ಇವುಗಳಲ್ಲಿ ಸೇರಿವೆ.

2007: ಪ್ರಸಿದ್ಧ ಚಲನಚಿತ್ರ ಸಂಗೀತ ನಿರ್ದೇಶಕ ಓ.ಪಿ. ನಯ್ಯರ್ ಮುಂಬೈನಲ್ಲಿ  ನಿಧನರಾದರು.  ಅವರು ಗೀತ ರಚನಕಾರರಾಗಿ, ನಿರ್ಮಾಪಕರಾಗಿ ಸಹಾ ಚಲನಚಿತ್ರ ರಂಗದಲ್ಲಿ ಕೆಲಸ ಮಾಡಿದ್ದರು.

2015: ಫ್ರೆಂಚ್ ರಸಾಯನ ಶಾಸ್ತ್ರಜ್ಞ ವೈವೆಸ್ ಚೌವಿನ್ ಫ್ರಾನ್ಸಿನ ಟವರ್ಸ್ ಎಂಬಲ್ಲಿ ನಿಧನರಾದರು.  2005ರ ವರ್ಷದಲ್ಲಿ ಇವರಿಗೆ ‘ಮೆಟಾಥಿಸಿಸ್’ ಕುರಿತಾದ ಸಂಶೋಧನೆಗಾಗಿ ರಸಾಯನ ಶಾಸ್ತ್ರಜ್ಞರಿಗೆ ಸಲ್ಲುವ ನೊಬೆಲ್  ಪುರಸ್ಕಾರ ಸಂದಿತು.