Categories
e-ದಿನ

ಜನವರಿ-29

ಪ್ರಮುಖಘಟನಾವಳಿಗಳು:

1780: ಜೇಮ್ಸ್ ಆಗಸ್ಟಸ್ ಹಿಕ್ಕಿ  ಅವರು ಕೋಲ್ಕತದಲ್ಲಿ  ಭಾರತದ ಮೊತ್ತ ಮೊದಲ ಪತ್ರಿಕೆ ಇಂಗ್ಲಿಷಿನ  ‘ಹಿಕ್ಕೀಸ್ ಬೆಂಗಾಲ್ ಗಝೆಟ್’ ಅಥವಾ ‘ಕಲ್ಕತ್ತಾ ಜನರಲ್ ಅಡ್ವರ್ ಟೈಸರ್’ ಪ್ರಕಟಿಸಿದರು. ಈ ಪತ್ರಿಕೆಯಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.

1819: ಬ್ರಿಟನ್ನಿನ ಸ್ಟಾಂಫೋರ್ಡ್ ರಾಫಲ್ಸ್ ಸಿಂಗಪುರ ದ್ವೀಪದಲ್ಲಿ ಕಾಲಿಟ್ಟರು

1856: ರಾಣಿ ವಿಕ್ಟೋರಿಯಾ ಅವರು  ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವವಾಗಿರುವ ‘ವಿಕ್ಟೋರಿಯಾ ಕ್ರಾಸ್’ ಸ್ಥಾಪಿಸಿದರು.

1886: ಕಾರ್ಲ್ ಬೆಂಜ್ ಅವರು  1885ರಲ್ಲಿ ನಿರ್ಮಿಸಿದ ತಮ್ಮ ಗ್ಯಾಸೋಲಿನ್ ಚಾಲಿತ  ಕಾರಿಗೆ ಪೇಟೆಂಟ್ ಪಡೆದರು.

1996: ಫ್ರಾನ್ಸಿನ ಅಧ್ಯಕ್ಷರಾದ  ಜಾಕೆಸ್ ಚಿರಾಕ್ ಅವರು  ತಮ್ಮ ದೇಶದ ಅಣ್ವಸ್ತ್ರ ಪ್ರಯೋಗಗಳಿಗೆ ನಿರ್ಣಾಯಕವಾದ  ಅಂತ್ಯವನ್ನು ಘೋಷಿಸಿದರು

2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು ಕರಾಚಿಯಲ್ಲಿ ನಡೆದ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಅವರು ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.

2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಐದನೆಯ ಬಾರಿ ಜಯಗಳಿಸಿದ ಭಾರತದ ವಿಶ್ವನಾಥನ್ ಆನಂದ್  ವಿಶ್ವದಾಖಲೆ ನಿರ್ಮಿಸಿದರು.

2006: ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ  42.7  ಮೀಟರ್ ಎತ್ತರದ  ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ  ಸಾಹಿತಿ ನಾ.ಡಿಸೋಜಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯವು ಅತ್ಯುನ್ನತ ದೇಶಿಕೋತ್ತಮ ಪದವಿಯನ್ನು ಪ್ರದಾನ ಮಾಡಿತು.

2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು.

ಪ್ರಮುಖಜನನ/ಮರಣ:

1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ ಇಂಗ್ಲೆಂಡಿನ ಡರ್ಬಿಶೈರ್ ಎಂಬಲ್ಲಿ  ಜನಿಸಿದ.  ಭಾರತದ ಮೊದಲನೇ  ಸ್ವಾತಂತ್ರ್ಯ ಸಂಗ್ರಾಮದ ವೇಳೆ ಈತ  ಬ್ರಿಟಿಷ್ ಸೇನೆಯನ್ನು ನಡೆಸಿದ  ಈತ, 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ.

1820: ಬ್ರಿಟನ್ನಿನ ದೊರೆ ಮೂರನೇ ಜಾರ್ಜ್ ತನ್ನ 81ನೇ ವಯಸ್ಸಿನಲ್ಲಿ ವಿಂಡ್ಸರ್ ಕ್ಯಾಸಲ್ ಎಂಬಲ್ಲಿ  ನಿಧನನಾದ.  59 ವರ್ಷಗಳ ಸುದೀರ್ಘ ಕಾಲ ಈತ ಬ್ರಿಟನ್ನನ್ನು ಆಳಿದ.

1866: ಫ್ರಾನ್ಸಿನ ಕಲಾ ಇತಿಹಾಸಜ್ಞ, ನಾಟಕಕಾರ ಮತ್ತು ಪ್ರಬಂಧಕಾರ ರೋಮೈನ್ ರೋಲ್ಲ್ಯಾಂಡ್ ನೀವೇರೇ ಬಳಿಯ ಕ್ಲಾಮೆಸಿ ಎಂಬಲ್ಲಿ ಜನಿಸಿದರು.  1915ರ ವರ್ಷದಲ್ಲಿ ಇವರಿಗೆ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು. ಇವರು  ಮಹಾತ್ಮಾ ಗಾಂಧೀ ಮತ್ತು ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ ರಚಿಸಿದ್ದರು.

1926: ಭೌತವಿಜ್ಞಾನಿ ಅಬ್ದಸ್ ಸಲಾಂ ಅವರು ಸ್ವತಂತ್ರಪೂರ್ವ ಭಾರತದಲ್ಲಿ, ಈಗ ಪಾಕಿಸ್ತಾನದ ಭಾಗವಾಗಿರುವ ಪಂಜಾಬಿನ ಝಾಂಗ್ ಎಂಬಲ್ಲಿ ಜನಿಸಿದರು.  ‘ಎಲೆಕ್ಟ್ರೋವೀಕ್ ಯೂನಿಫಿಕೇಶನ್ ಥಿಯರಿ ಸಂಶೋಧೆಗಾಗಿ 1979ರ ವರ್ಷದ ನೊಬೆಲ್ ಪುರಸ್ಕಾರ ಪಡೆದರು.  ಇವರು ನೊಬೆಲ್ ಪುರಸ್ಕಾರ ಪಡೆದ ಪ್ರಥಮ ಪಾಕಿಸ್ತಾನಿ ಪ್ರಜೆಯಾಗಿದ್ದಾರೆ.

1936: ತೆಲುಗಿನ  ಕವಿ, ಚಿತ್ರಕಥೆಗಾರ, ಮತ್ತು ಖ್ಯಾತ ಗೀತರಚನಕಾರ ವೇಟುರಿ ಸುಂದರರಾಮ ಮೂರ್ತಿ ಅವರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆಡಕಲ್ಲೆಪಲ್ಲಿ ಎಂಬ ಹಳ್ಳಿಯಲ್ಲಿ ಜನಿಸಿದರು.  2010ರ ವರ್ಷದಲ್ಲಿ ನಿಧನರಾದ ಇವರು ತಮ್ಮ ನಾಲ್ಕು ದಶಕಗಳ ಚಿತ್ರರಂಗದ ಜೀವನದಲ್ಲಿ ಸಹಸ್ರಾರು ಗೀತೆಗಳನ್ನು ರಚಿಸಿ, ರಾಷ್ಟ್ರಪ್ರಶಸ್ತಿಯನ್ನೂ ಒಳಗೊಂಡಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

1947: ಅಮೆರಿಕದ ಜೀವಶಾಸ್ತ್ರಜ್ಞೆ ಲಿಂಡಾ ಬಿ. ಬಕ್ ಅವರು ವಾಷಿಂಗ್ಟನ್ ಪ್ರದೇಶದ ಸೀಟಲ್ನಲ್ಲಿ ಜನಿಸಿದರು.  ಒಲ್’ಫ್ಯಾಕ್ಟರಿ ಸಿಸ್ಟಮ್ ಕುರಿತಾದ ಕಾರ್ಯಕ್ಕೆ ಈಕೆ 2004 ವರ್ಷದ ಜೀವವಿಜ್ಞಾನ ಕ್ಷೇತ್ರದ ನೊಬೆಲ್ ಪುರಸ್ಕಾರ ಸ್ವೀಕರಿಸಿದ್ದರು.

1954: ಅಮೆರಿಕದ ಪ್ರಸಿದ್ಧ ಕಿರುತೆರೆ ಕಾರ್ಯಕ್ರಮ ನಿರೂಪಕಿ, ಅಭಿನೇತ್ರಿ ಮತ್ತು  ನಿರ್ಮಾಪಕಿ ಓಪ್ರಾ ವಿನ್ಫ್ರೆ ಅವರು ಮಿಸಿಸಿಪಿಯ ಕೊಸಿಯುಸ್ಕೋ ಎಂಬಲ್ಲಿ ಜನಿಸಿದರು.  ಅವರು ಹಾರ್ಪೋ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮುಖ್ಯಸ್ಥೆಯಾಗಿದ್ದಾರೆ.

1955: ಖ್ಯಾತ ಭರತನಾಟ್ಯ ಮತ್ತು ಕೂಚಿಪುಡಿ  ಕಲಾವಿದೆ ಪ್ರತಿಭಾ ಪ್ರಹ್ಲಾದ್ ಬೆಂಗಳೂರಿನಲ್ಲಿ ಜನಿಸಿದರು. ಕಳೆದ 3 ದಶಕಗಳಲ್ಲಿ ವಿಶ್ವದಾದ್ಯಂತ 2000ಕ್ಕೂ ಕಾರ್ಯಕ್ರಮಗಳನ್ನು ನೀಡಿರುವ ಇವರಿಗೆ  ಕರ್ನಾಟಕ ಕಲಾಶ್ರೀ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

1970: ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತೀಯರೊಬ್ಬರು ಪ್ರಥಮ ಬಾರಿಗೆ ವೈಯಕ್ತಿಕವಾದ ರಜತ ಪದಕ ಗೆಲ್ಲುವ ಮೂಲಕ ಹೊಸ ಚರಿತ್ರೆಯನ್ನು ಬರೆದವರು ಶೂಟರ್ ರಾಜ್ಯವರ್ಧನ ಸಿಂಗ್ ರಾಥೋರ್.   ಅವರು ರಾಜಾಸ್ಥಾನದ ಜೈಸಲ್ಮೇರ್ ಪಟ್ಟಣದಲ್ಲಿ  ಜನಿಸಿದರು.

1934: ಜರ್ಮನಿಯ ರಸಾಯನ ಶಾಸ್ತ್ರಜ್ಞ ಮತ್ತು ತಂತ್ರಜ್ಞ ಫ್ರಿಟ್ಜ್ ಹೇಬರ್ ಅವರು ಸ್ವಿಟ್ಜರ್ಲ್ಯಾಂಡ್ ದೇಶದ ಬಾಸೆಲ್ ಎಂಬಲ್ಲಿ ನಿಧನರಾದರು.   ಹೇಬರ್-ಬೋಷ್ ಪ್ರೋಸೆಸ್ ಸಂಶೋಧನೆಗಾಗಿ ಅವರಿಗೆ ರಸಾಯನ ಶಾಸ್ತ್ರ ವಿಜ್ಞಾನದ ನೊಬೆಲ್ ಪುರಸ್ಕಾರ ಸಂದಿತು.

2003: ಪ್ರಸಿದ್ಧ ಚಿತ್ರ ನಟಿ, ನಿರ್ಮಾಪಕಿ  ಪಂಡರೀಬಾಯಿ ಚೆನ್ನೈನಲ್ಲಿ ನಿಧನರಾದರು.  ಕರ್ನಾಟಕದ ಭಟ್ಕಳದಲ್ಲಿ ಜನಿಸಿ ಕನ್ನಡ, ತಮಿಳು, ತೆಲುಗು ಚಿತ್ರರಂಗಗಳಲ್ಲಿ ಸುಮಾರು 6 ದಶಕಗಳ ಕಾಲ ನಟಿಸಿದ್ದ ಇವರಿಗೆ ‘ಬೆಳ್ಳಿ ಮೋಡ’ ಮತ್ತು ‘ನಮ್ಮ ಮಕ್ಕಳು’ ಚಿತ್ರಗಳ ಅಭಿನಯಕ್ಕೆ ರಾಜ್ಯಪ್ರಶಸ್ತಿ ಹಾಗೂ ಚಲನಚಿತ್ರರಂಗದಲ್ಲಿನ ಮಹತ್ವದ ಸೇವೆಗಾಗಿ ಕರ್ನಾಟಕ ಸರ್ಕಾರ ನೀಡುವ ಡಾ. ರಾಜ್ ಕುಮಾರ್ ಪ್ರಶಸ್ತಿ ಸಂದಿತ್ತು .

2004: ಭಾರತದ ಸಿಮ್ಲಾದಲ್ಲಿ ಜನಿಸಿದ ಬ್ರಿಟಿಷ್ ಲೇಖಕಿ ಮೇರಿ ಮಾರ್ಗರೇಟ್ ಕಾಯೆ ಅವರು ಬ್ರಿಟನ್ನಿನ ಲ್ಯಾವನ್ ಹ್ಯಾಮ್ ಎಂಬಲ್ಲಿ  ನಿಧನರಾದರು.  ಅವರ ‘ದಿ ಫಾರ್ ಪೆವಿಲಿಯನ್ಸ್’ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ.