ದಿನಾಚರಣೆ:
ಹುತಾತ್ಮರ ದಿನ
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹಂತಕನ ಗುಂಡಿಗೆ ಬಲಿಯಾದ ಈ ದಿನವನ್ನು ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಮಹನೀಯರಿಗೆ ಗೌರವ ಸಲ್ಲಿಸುವ ‘ಹುತಾತ್ಮರ ದಿನ’ವನ್ನಾಗಿ ಆಚರಿಸಲಾಗುತ್ತಿದೆ. 1948ರ ಜನವರಿ 30ರ ಈ ದಿನದಂದು ಸಂಜೆ 5.10 ಗಂಟೆಗೆ ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಮಂದಿರಕ್ಕೆ ತೆರಳುವ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಅವರು ನಾಥೂರಾಂ ಗೋಡ್ಸೆಯ ಗುಂಡೇಟಿನ ದೆಸೆಯಿಂದ ತಮ್ಮ ಈ ಲೋಕದ ಬದುಕಿಗೆ ವಿದಾಯ ಹೇಳಿದರು.
ಪ್ರಮುಖಘಟನಾವಳಿಗಳು:
1607: ಇಂಗ್ಲೆಂಡಿನ ಬ್ರಿಸ್ಟಲ್ ಕಾಲುವೆ ಮತ್ತು ಸೇವರ್ನ್ ಎಸ್ಟ್ಯುರೆ ಸಮುದ್ರ ತೀರದ 200 ಚದರ ಮೈಲಿ ಪ್ರದೇಶದಲ್ಲಿ ಭೀಕರ ಪ್ರವಾಹ ಉಂಟಾಗಿ ಸುಮಾರು 2000 ಸಾವು ಸಂಭವಿಸಿತು.
1790: ‘ಲೈಫ್ ಬೋಟ್’ ಎಂಬ ಜೀವ ರಕ್ಷಕ ದೋಣಿಯನ್ನು ಟೈನ್ ನದೀ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
1806: ಡೆಲಾವರೆ ನದಿಯ ಮೇಲೆ ನ್ಯೂಜೆರ್ಸಿಯ ಮೊರಿಸ್ವಿಲ್ಲೆ, ಪೆನ್ಸಿಲ್ವೇನಿಯಾ, ಟ್ರೆಂಟನ್ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸಿದ ಮೂಲ ‘ಲೋವರ್ ಟ್ರೆಂಟನ್ ಬ್ರಿಡ್ಜ್’ ಸಂಚಾರಕ್ಕೆ ತೆರೆದುಕೊಂಡಿತು.
1820: ಟ್ರಿನಿಟಿ ಪೆನಿನ್ಸುಲಾ ದೃಷ್ಟಿಸಿದ ಎಡ್ವರ್ಡ್ ಬ್ರಾನ್ಸಿಫೀಲ್ಡ್ ಅವರು ಅಂಟಾರ್ಟಿಕಾ ಅನ್ವೇಷಿಸಿದ ಘೋಷಣೆ ಮಾಡಿದರು.
1826: ಪ್ರಪಂಚದ ಮೊದಲ ಸಸ್ಪೆನ್ಷನ್ ಬ್ರಿಡ್ಜ್ ಎಂದು ಖ್ಯಾತಿಗಳಿಸಿರುವ ಯುನೈಟೆಡ್ ಕಿಂಗ್ಡಂನ ಮೆನಾಯ್ ಸಸ್ಪೆನ್ಷನ್ ಸೇತುವೆ ಸಂಚಾರಕ್ಕೆ ಮುಕ್ತಗೊಂಡಿತು. ಇದು ಐಲ್ ಆಫ್ ಆಂಗ್ಲೆಸೇ ಇಂದ ವೇಲ್ಸಿನ ವಾಯುವ್ಯ ತೀರಕ್ಕೆ ಸಂಪರ್ಕ ಕಲ್ಪಿಸಿದೆ.
1908: ದಕ್ಷಿಣ ಆಫ್ರಿಕಾದಲ್ಲ್ಲಿ ಎರಡು ತಿಂಗಳ ಕಾಲ ಸೆರೆವಾಸಕ್ಕೆ ಒಳಗಾಗಿದ್ದ ಮೋಹನದಾಸ್ ಕರಮಚಂದ್ ಗಾಂಧೀ ಅವರನ್ನು ಜಾನ್ ಸಿ. ಸ್ಮಟ್ಸ್ ಅವರು ಬಿಡುಗಡೆ ಮಾಡಿದರು.
1911: ಯು.ಎಸ್.ಎಸ್. ಟೆರ್ರಿ ಎಂಬ ಯುದ್ಧ ನೌಕೆ ಕ್ಯೂಬಾದ ಹವಾನಾದಲ್ಲಿ ಅಪಘಾತಕ್ಕೆ ಸಿಲುಕಿದ ವಿಮಾನದ ಡೌಗ್ಲಸ್ ಮೆಕ್ಕರ್ಡಿ ಎಂಬುವರ ಪ್ರಾಣ ಉಳಿಸಿತು.
1927: ಸ್ವೀಡನ್ನಿನ ಪ್ರಧಾನಿಯಾಗಿದ್ದ ಉಲೂಫ್ ಪಾಮೆ ಸ್ವೀಡನ್ನಿನ ಸ್ಟಾಕ್ಹೋಮ್ ನಗರದಲ್ಲಿ ಜನಿಸಿದರು. ಸ್ವೀಡನ್ ರಾಷ್ಟ್ರದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಇವರು 1986ರ ವರ್ಷದಲ್ಲಿ ಹತ್ಯೆಗೀಡಾದರು.
1933: ಅಡಾಲ್ಫ್ ಹಿಟ್ಲರ್ ಜರ್ಮನಿಯ ಚಾನ್ಸಲರ್ ಆದ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಎಲ್ಲ ಸಾರ್ವಜನಿಕ ಸಭೆಗಳನ್ನು ನಿಯಂತ್ರಿಸುವ ಹಾಗೂ ಪತ್ರಿಕೆಗಳನ್ನು ನಿಯಂತ್ರಿಸಲು ಬೇಕಾದ ಅಪರಿಮಿತ ಅಧಿಕಾರಗಳನ್ನು ತನ್ನ ಕೈಗೆ ತೆಗೆದುಕೊಂಡ.
1945: ಎರಡನೇ ವಿಶ್ವಮಹಾಯುದ್ಧದಲ್ಲಿ ಸಂತ್ರಸ್ತರಾದ ಜರ್ಮನರನ್ನು ಹೊತ್ತೊಯ್ಯುತ್ತಿದ್ದ ವಿಲ್ಹೆಮ್ ಗಸ್ಟ್ಲೋಫ್ ಎಂಬ ಹಡಗು ಸೋವಿಯತ್ ಸಬ್ಮೆರಿನ್ನಿನ ದಾಳಿಗೀಡಾಗಿ 9500 ಜನ ಮೃತರಾದರು.
1956: ಮೊಂಟಗೋಮೆರಿ ಬಸ್ ಬಹಿಷ್ಕಾರಕ್ಕೆ ಪ್ರತಿಯಾಗಿ ಆಫ್ರಿಕನ್-ಅಮೇರಿಕನ್ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮನೆಯ ಮೇಲೆ ಬಾಂಬ್ ದಾಳಿ ನಡೆಯಿತು.
1972: ಪಾಕಿಸ್ತಾನವು ಕಾಮನ್ ವೆಲ್ತ್ ರಾಷ್ಟ್ರಗಳ ಒಕ್ಕೂಟದಿಂದ ತನ್ನ ಸದಸ್ಯತ್ವವನ್ನು ಹಿಂತೆಗೆದುಕೊಂಡು ಹೊರನಡೆಯಿತು.
1975: ಅಮೇರಿಕಾದ ಮೊದಲ ಸಮುದ್ರ ರಾಷ್ಟ್ರೀಯ ಸಮುದ್ರ ಸಂಗ್ರಹಾಲಯವಾದ ‘ಮಾನಿಟರ್ ನ್ಯಾಷನಲ್ ಮೆರಿನ್ ಸಾಂಕ್ಚುಯರಿ’ ಸ್ಥಾಪನೆಗೊಂಡಿತು.
2006: ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನೀಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ವಿಮಾನಶಾಸ್ತ್ರ ವಿಜ್ಞಾನಿ ಮತ್ತು ಬಾಹ್ಯಾಕಾಶ ಆಯೋಗದ ಸದಸ್ಯ ಪ್ರೊ. ರೊದ್ದಂ. ನರಸಿಂಹ ಆಯ್ಕೆಯಾದರು.
2007: ಕೇಂದ್ರ ಸರ್ಕಾರವು ಏರ್ ಮಾರ್ಷಲ್ ಫಾಲಿ ಹೋಮಿ ಮೇಜರ್ ಅವರನ್ನು ವಾಯುಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.
2008: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಹುತಾತ್ಮರಾದ 60 ವರ್ಷಗಳ ಬಳಿಕ ಅವರ ಚಿತಾಭಸ್ಮವನ್ನು ಒಳಗೊಂಡ ಮತ್ತೊಂದು ಕಲಶವನ್ನು ಮುಂಬೈನ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಗಾಂಧೀಜಿ ಅವರ ಚಿತಾಭಸ್ಮ ಒಳಗೊಂಡ ಕಲಶವನ್ನು 2006ರ ಆಗಸ್ಟಿನಲ್ಲಿ ದುಬೈ ಮೂಲದ ಉದ್ಯಮಿ ಭರತ್ ನಾರಾಯಣ್ ಅವರು ಮುಂಬೈನ ಮಣಿ ಭವನಕ್ಕೆ ಹಸ್ತಾಂತರಿಸಿದ್ದರು.
2009: ವಿಶ್ವದ ಮೂರನೇ ಅತಿದೊಡ್ಡ ಸರಕು-ಸಾಗಣೆ ವಿಮಾನವಾದ ಎಫ್ ಕಾರ್ಗೊ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ವೈಮಾನಿಕ ಪ್ರದರ್ಶನಕ್ಕೆ ಸಾಧನ-ಸರಕುಗಳನ್ನು ಈ ವಿಮಾನ ಹೊತ್ತು ತಂದಿತು. 30 ವಿಶ್ವದಾಖಲೆ ಮಾಡಿರುವ ಈ ವಿಮಾನ, 1,71,219 ಕೆ.ಜಿ. ತೂಕದಷ್ಟು ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಪ್ರಮುಖಜನನ/ಮರಣ:
1785: ಭಾರತದಲ್ಲಿ ಬ್ರಿಟಿಷ್ ಆಡಳಿತಗಾರನಾಗಿದ್ದ ಚಾರ್ಲ್ಸ್ ಥಿಯೋಫಿಲಸ್ ಮೆಟ್ಕಾಫ್ ಕೋಲ್ಕತ್ತದಲ್ಲಿ ಜನಿಸಿದ. ಭಾರತದ ಹಂಗಾಮಿ ಗವರ್ನರ್ ಜನರಲ್ ಆಗಿದ್ದ ಈತ ಪತ್ರಿಕಾ ಸ್ವಾತಂತ್ರ್ಯ ನೀಡುವ ಹಾಗೂ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸಿದ್ದ.
1882: ಅಮೆರಿಕದಲ್ಲಿ ಸತತವಾಗಿ ನಾಲ್ಕು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ 1933ರಿಂದ ತಾವು 1945ರ ವರ್ಷದಲ್ಲಿ ನಿಧನರಾಗುವವರೆವಿಗೂ ಅಧಿಕಾರದಲ್ಲಿದ್ದ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಜನಿಸಿದರು.
1889: ಹಿಂದೀ ಭಾಷಾ ಕವಿ, ನಾಟಕಕಾರ ಮತ್ತು ಕಾದಂಬರಿಕಾರ ಜೈಶಂಕರ್ ಪ್ರಸಾದ್ ವಾರಣಾಸಿಯಲ್ಲಿ ಜನಿಸಿದರು. ಇವರು ಆಧುನಿಕ ಹಿಂದೀ ಸಾಹಿತ್ಯದ ಪ್ರಮುಖ ಪ್ರವರ್ತಕರಲ್ಲಿ ಒಬ್ಬರೆಂದು ಪ್ರಖ್ಯಾತಿ ಪಡೆದಿದ್ದಾರೆ.
1899: ಪ್ರಖ್ಯಾತ ವೈರಸ್ ಶಾಸ್ತ್ರಜ್ಞರಾದ ಮ್ಯಾಕ್ಸ್ ಥೀಲರ್ ಅವರು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಜನಿಸಿದರು. ಮುಂದೆ ಅಮೇರಿಕನ್ ಪ್ರಜೆಯಾದ ಅವರು 1937ರ ವರ್ಷದಲ್ಲಿ ಕಾಮಾಲೆ ರೋಗ ಅಥವಾ ಹಳದಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿದರು. ಈ ಸಾಧನೆಗಾಗಿ ಅವರಿಗೆ 1951ರ ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ವಿಜ್ಞಾನ ಪುರಸ್ಕಾರ ಸಂದಿತು.
1901: ತೈಲವರ್ಣ ಹಾಗೂ ಜಲವರ್ಣ ಚಿತ್ರ ರಚನಯಲ್ಲಿ ಸಿದ್ಧಹಸ್ತರಾಗಿದ್ದ ಮಡಿವಾಳಪ್ಪ ವೀರಪ್ಪ ಮಿಣಜಗಿ ಅವರು ವಿಜಾಪುರದಲ್ಲಿ ಜನಿಸಿದರು.
1926: ‘ಜಿಟಿಎನ್’ ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾಗಿರುವ ವಿಜ್ಞಾನ ಬರಹಗಾರ ಗುಡ್ಲೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ (ಗುತಿನಾ) ಮೈಸೂರಿನಲ್ಲಿ ಜನಿಸಿದರು. ಹಲವೆಡೆಗಳಲ್ಲಿ ಅಧ್ಯಾಪನ ನಡೆಸಿದ ನಂತರ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮುಂತಾದ ಅನೇಕ ಗೌರವಗಳು ಅವರನ್ನು ಅರಸಿಬಂದಿದ್ದವು. ಜೂನ್ 27 2008ರಂದು ಮೈಸೂರಿನಲ್ಲಿ ನಿಧನರಾದ ಇವರು ವಿಜ್ಞಾನದ ಗ್ರಂಥಗಳನ್ನಷ್ಟೇ ಅಲ್ಲದೆ ಸಂಗೀತದ ಕುರಿತಾಗಿಯೂ ವಿದ್ವತ್ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ.
1913: ಭಾರತೀಯ ವರ್ಣಚಿತ್ರ್ರ ಕಲಾವಿದೆ ಅಮೃತಾ ಶೆರ್ಗಿಲ್ ಹಂಗೇರಿ ದೇಶದ ಬುಡಾಪೆಸ್ಟ್ ಎಂಬಲ್ಲಿ ಜನಿಸಿದರು. ಅವರ ತಂದೆ ಪಮ್ಜಾಬಿನವರಾಗಿದ್ದರು ಮತ್ತು ತಾಯಿ ಹಂಗೇರಿ ಮೂಲದವರಾಗಿದ್ದರು. ಇಪ್ಪತ್ತನೆಯ ಶತಮಾನದ ಮಹತ್ವದ ಕಲಾವಿದರಲ್ಲಿ ಒಬ್ಬ ಪ್ರಮುಖರೆಂದು ಪರಿಗಣಿತರಾಗಿರುವ ಇವರು ಬ್ರಿಟಿಷ್ ಭಾರತದ ಭಾಗವಾಗಿದ್ದ ಲಾಹೋರಿನಲ್ಲಿ 1941 ಡಿಸೆಂಬರ್ 5ರಂದು ನಿಧನರಾದರು.
1924: ಸತ್ಯ ನಾರಾಯಣ ಗೋಯೆಂಕಾ ಅವರು ಬ್ರಿಟಿಷ್ ಭಾರತದ ಭಾಗವಾಗಿದ್ದ ಬರ್ಮಾದಲ್ಲಿ ಜನಿಸಿದರು. ವಿಪಾಸನಾ ಬೋಧಕರಾಗಿ ಮಹತ್ವದ ಕೆಲಸ ಮಾಡಿದ್ದ ಅವರು, 2000ದ ವರ್ಷದಲ್ಲಿ ವಿಶ್ವಸಂಸ್ಥೆಯು ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಿದ್ದ ಸರ್ವಧರ್ಮ ಮತ್ತು ಆಧ್ಯಾತ್ಮಿಕ ನಾಯಕರ ಸಹಸ್ರಮಾನದ ಸಮಾರಂಭದಲ್ಲಿ ಆಹ್ವಾನಿತ ಉಪನ್ಯಾಸಕಾರಾಗಿದ್ದರು. ಇವರಿಗೆ ಭಾರತ ಸರ್ಕಾರವು 2012ರ ವರ್ಷದಲ್ಲಿ ಪದ್ಮಭೂಷಣ ಗೌರವವನ್ನು ಅರ್ಪಿಸಿತು. 2013ರ ಸೆಪ್ಟೆಂಬರ್ 29ರಂದು ಮುಂಬೈನಲ್ಲಿ ನಿಧನರಾದರು.
1925: ಕಂಪ್ಯೂಟರ್ ಮೌಸ್ ಕಂಡುಹಿಡಿದ ಡೌಗ್ಲಸ್ ಏಂಜೆಲ್ಬಾರ್ಟ್ ಅವರು ಅಮೆರಿಕದ ಒರಿಗಾನ್ ಬಳಿಯ ಪೋರ್ಟ್ಲ್ಯಾಂಡ್ ಎಂಬಲ್ಲಿ ಜನಿಸಿದರು.
1949: ಪ್ರಸಿದ್ಧ ಭೌತಶಾಸ್ತ್ರಜ್ಞ ಮತ್ತು ಜೀವಶಾಸ್ತ್ರಜ್ಞ ನೊಬೆಲ್ ಪುರಸ್ಕೃತ ಪೀಟರ್ ಅಗ್ರೆ ಅಮೆರಿಕದ ಮಿನ್ನೆಸೋಟ ಬಳಿಯ ನಾರ್ತ್ ಫೀಲ್ಡ್ ಎಂಬಲ್ಲಿ ಜನಿಸಿದರು. ಇವರಿಗೆ ‘ಚಾನೆಲ್ಸ್ ಇನ್ ಸೆಲ್ ಮೆಮ್ಬ್ರಾನ್ಸಸ್’ ಕುರಿತಾದ ಸಂಶೋಧನೆಗಾಗಿ 2003 ವರ್ಷದ ನೊಬೆಲ್ ರಸಾಯನ ಶಾಸ್ತ್ರ ಪುರಸ್ಕಾರ ಸಂದಿತು.
1928: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ಜೋಹಾನೆಸ್ ಫಿಬಿಗರ್ ಅವರು ಡೆನ್ಮಾರ್ಕಿನ ಸಿಲ್ಕೆಬೋರ್ಗ್ ಎಂಬಲ್ಲಿ ಜನಿಸಿದರು. ಪೆಥಲಾಜಿಕಲ್ ಅನಾಟಮಿ ವಿಶೇಷಜ್ಞರಾದ ಅವರಿಗೆ 1926ರ ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು. ಅವರು ಇಲಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಜೀವಕಣಗಳನ್ನು ಗುರುತಿಸಿದ್ದರು.
1948: ರಾಷ್ಟ್ರಪಿತ ಮಹಾತ್ಮ ಗಾಂಧಿಯವರು, ನಾಥೂರಾಮ್ ಗೋಡ್ಸೆಯ ಗುಂಡಿನೇಟಿನಿಂದ ದೆಹಲಿಯಲ್ಲಿ ನಿಧನರಾದರು.
1948: ಅಮೆರಿಕದ ಪೈಲಟ್ ಹಾಗೂ ರೈಟ್ ಕಂಪೆನಿಯ ಸ್ಥಾಪಕ ಸಹೊದರರಲ್ಲಿ ಒಬ್ಬರಾದ ಅರ್ವಿಲ್ಲೇ ರೈಟ್ ಅವರು ಅಮೆರಿಕದ ಡೇಟನ್ ಎಂಬಲ್ಲಿ ನಿಧನರಾದರು. ಇವರು ತಮ್ಮ ಸಹೋದರ ವಿಲ್ಬರ್ಟ್ ರೈಟ್ ಅವರೊಡಗೂಡಿ ವಿಮಾನ ಸಂಶೋಧನೆ, ನಿರ್ಮಾಣ ಮತ್ತು ಹಾರಾಟಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.
1968: ಭಾರತೀಯ ಸ್ವಾತಂತ್ಯ್ರ ಹೋರಾಟಗಾರ, ಕವಿ, ನಾಟಕಕಾರ ಮತ್ತು ಪತ್ರಕರ್ತ ಮಖನಲಾಲ್ ಚತುರ್ವೇದಿ ನಿಧನರಾದರು. ಮಧ್ಯಪ್ರದೇಶದ ಹೊಷಾಂಗಾಬಾದ್ ಜಿಲ್ಲೆಯ ಬೋವಾಯ್ ಹಳ್ಳಿಯವರಾದ ಅವರು ಹಿಂದೀ ಭಾಷೆಯ ಛಾಯಾವಾದ್ ಪರಂಪರೆಯ ಮಹತ್ವದ ಬರಹಗಾರರೆನಿಸಿದವರು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಪ್ರಶಸ್ತಿ ಸಂದಿತ್ತು.
1969: ಬೆಲ್ಜಿಯಂ ದೇಶದ ಸಾಹಿತಿ ಡಾಮಿನಿಕ್ ಪಿಯರೆ ನಿಧನರಾದರು. ಅವರ ಸಾಹಿತ್ಯ ವಿಶ್ವಮಹಾಯುದ್ಧದ ಸಂತ್ರಸ್ತರಿಗೆ ಶಕ್ತಿ ಭರವಸೆ ತುಂಬುವಂತದ್ದಾಗಿತ್ತು. 1958ರ ವರ್ಷದಲ್ಲಿ ಇವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.
1991: ಅಮೇರಿಕಾದ ಭೌತವಿಜ್ಞಾನಿ ಮತ್ತು ತಂತ್ರಜ್ಞಾನಿ ಜಾನ್ ಬರ್ಡೀನ್ ಮೆಸಾಚುಸೆಟ್ಸ್ ಪ್ರಾಂತ್ಯದ ಬೋಸ್ಟನ್ ನಗರದಲ್ಲಿ ನಿಧನರಾದರು. ಎರಡು ಬಾರಿ ಭೌತವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ ಇವರಾಗಿದ್ದಾರೆ. ಟ್ರಾನ್ಸಿಸ್ಟರ್ ಕಂಡು ಹಿಡಿದದ್ದಕ್ಕೆ ಒಮ್ಮೆ ಮತ್ತು ಸೂಪರ್ ಕಂಡಕ್ಟಿವಿಟಿ ಕುರಿತಾದ ಮತ್ತೊಂದು ಸಾಧನೆಗೆ ಇವರಿಗೆ ನೊಬೆಲ್ ಪ್ರಶಸ್ತಿ ಸಂದಿತು.
2008: ಕನ್ನಡದ ಪ್ರಸಿದ್ಧ ಸಾಹಿತಿ ವ್ಯಾಸರಾಯ ಬಲ್ಲಾಳ ಅವರು ಬೆಂಗಳೂರಿನಲ್ಲಿ ನಿಧನರಾದರು. ವಿವಿಧ ರೀತಿಯ ಸಾಹಿತ್ಯ ರಚನೆ ಮಾಡಿರುವ ಉಡುಪಿಯ ನಿಡಂಬೂರು ವ್ಯಾಸರಾಯ ಬಲ್ಲಾಳರು ತಮ್ಮ ಕಾದಂಬರಿಗಳಿಂದ ಹೆಚ್ಚು ಪ್ರಸಿದ್ಧರು. ಬಂಡಾಯ ಕೃತಿಗೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು.
2016: ಭಾರತದ ಸೇನೆಯ ಮಹಾದಂಡನಾಯಕರಾಗಿದ್ದ ಜನರಲ್ ಕೆ. ವಿ. ಕೃಷ್ಣರಾವ್ ಅವರು ನವದೆಹಲಿಯಲ್ಲಿ ನಿಧನರಾದರು. ಆಂಧ್ರಪ್ರದೇಶದವರಾದ ಅವರು 1942ರಲ್ಲಿ ಸೇನೆಗೆ ಸೇರಿದ್ದರು. 1971ರಲ್ಲಿ ತಮ್ಮ ನಾಯಕತ್ವದಲ್ಲಿ ಸಿಲ್ಹಟ್ ಪ್ರದೇಶವನ್ನು ಆಕ್ರಮಿಸಿ ಬಾಂಗ್ಲಾದೇಶ ಸ್ವಾಂತಂತ್ರ್ಯಗೊಳ್ಳಲು ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ಅವರು, 1983ರಲ್ಲಿ ಭಾರತದ ಸಮಸ್ತ ಸೇನೆಯ ಮುಖ್ಯಸ್ಥರಾಗಿ ನಿವೃತ್ತರಾದರು. ನಂತರದಲ್ಲಿ ಹಲವಾರು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಅವರು ಅನೇಕ ಗ್ರಂಥಗಳನ್ನೂ ರಚಿಸಿದ್ದರು.