Categories
e-ದಿನ

ಜನವರಿ-31

ಪ್ರಮುಖಘಟನಾವಳಿಗಳು:

1606: ಸಿಡಿಮದ್ದು ಬಳಸಿ ಹೌಸ್ ಆಫ್ ಲಾರ್ಡ್ಸ್ ಅನ್ನು ಸಿಡಿಸಿ ಆ ಮೂಲಕ ಚಕ್ರವರ್ತಿ ಜೇಮ್ಸ್ ಅನ್ನು ಕೊಲ್ಲುವ ವಿಫಲ ಷಡ್ಯಂತ್ರ ನಡೆಸಿದ ಗೈ ಫಾಕ್ಸ್ ಎಂಬಾತನಿಗೆ ಮರಣದಂಡನೆ ವಿಧಿಸಲಾಯಿತು.

1747: ಮೊದಲ ಗುಹ್ಯ ರೋಗಗಳ ಚಿಕಿತ್ಸಾ ಕೇಂದ್ರ ಲಂಡನ್ ಲಾಕ್  ಆಸ್ಪತ್ರೆಯಲ್ಲಿ ಪ್ರಾರಂಭಗೊಂಡಿತು.

1862: ಅಲ್ವಾನ್ ಗ್ರಹಾಮ್ ಕ್ಲಾರ್ಕ್ ಅವರು ತಮ್ಮ 18.5 ಅಂಗುಲ ದೂರದರ್ಶಕ ಯಂತ್ರ ಉಪಯೋಗಿಸಿ ಸೈರಸ್ ಸಂಗಾತಿಯಾದ  ಬಿಳಿ ಕುಬ್ಜ ಗ್ರಹ ‘ಸೈರಸ್ ಬಿ’ ಅನ್ನು ಗುರುತಿಸಿದರು.  ಈ ದೂರದರ್ಶಕ ಯಂತ್ರ ಈಗಲೂ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದಲ್ಲಿದೆ.

1865: ಅಮೆರಿಕನ್ ಅಂತರ್ಯುದ್ಧ: ಅಮೆರಿಕವು ಗುಲಾಮಗಿರಿಯನ್ನು ನಿರ್ಮೂಲಮಾಡುವ ಹದಿಮೂರನೇ ಸಂವಿಧಾನ ತಿದ್ದುಪಡಿಯನ್ನು ಮಾಡಿ, ಅದನ್ನು ಅಂಗೀಕರಿಸಲು ಎಲ್ಲಾ ರಾಜ್ಯಗಳಿಗೂ ಸಲ್ಲಿಸಿತು.

1918: ಸೋವಿಯತ್ ಒಕ್ಕೂಟದಲ್ಲಿ ಆಗ ಬಳಕೆಯಲ್ಲಿದ್ದ ಜ್ಯೂಲಿಯನ್ ಕ್ಯಾಲೆಂಡರಿನ ಕೊನೆಯ ದಿನ. ಮರುದಿನದಿಂದ ಬಹುತೇಕ ವಿಶ್ವದೆಲ್ಲೆಡೆಯಂತೆ ಅಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆಗೆ ಬಂತು.

1943: ಸ್ಟಾಲಿನ್ ಗಾರ್ಡಿನಲ್ಲಿ ಹಿಟ್ಲರನ ಆದೇಶಗಳನ್ನು ಉಲ್ಲಂಘಿಸಿ, ಫೀಲ್ಡ್ ಮಾರ್ಷಲ್ ಪೌಲಸ್ ಅವರು  ಜರ್ಮನ್ 6ನೇ ಸೇನಾ ತುಕಡಿಯೊಂದಿಗೆ ರಷ್ಯಕ್ಕೆ ಶರಣಾಗತರಾದರು.

1945: ಅಮೆರಿಕದ ಸೈನ್ಯದ ಗುಪ್ತಚರನಾದ ಎಡ್ಡಿ ಸ್ಲೊವಿಕ್ ಅನ್ನು ರಾಜದ್ರೋಹದ ಆಪಾದನೆಯಿಂದ  ಕೊಲ್ಲಲಾಯಿತು. ಅಮೆರಿಕದ ಆಂತರಿಕ ಯುದ್ಧದ ನಂತರದಲ್ಲಿ ಇಂತಹ ಘಟನೆ ನಡೆದದ್ದು ಇದೇ ಮೊದಲು.

1945: ಎರಡನೇ ವಿಶ್ವ ಮಹಾಯುದ್ಧ: ಸ್ಟುಥಾಫ್ ಕಾನ್ಸೆಂಟ್ರೇಷನ್ ಕ್ಯಾಂಪಿನಲ್ಲಿದ್ದ 3000 ನಿವಾಸಿಗಳನ್ನು ಬಲವಂತದಿಂದ ಪಾಲ್ಮಿಕನ್ನಿನಲ್ಲಿ  ಅಲ್ಲಿ ಬಾಲ್ಟಿಕ್ ಸಮುದ್ರದಲ್ಲಿ ನಡೆಯುವಂತೆ ಮಾಡಿ ಹತ್ಯೆ ಮಾಡಲಾಯಿತು.

1950: ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅವರು ಜಲಜನಕದ ಬಾಂಬ್ ಅಭಿವೃದ್ಧಿ ಪಡಿಸುವ ಕಾರ್ಯಕ್ರಮವನ್ನು ಪ್ರಕಟಿಸಿದರು.

1958: ಅಮೆರಿಕಾದ ಮೊದಲ ಉಪಗ್ರಹ ‘ಎಕ್ಸ್ ಪ್ಲೋರರ್-1′   ಕೇಪ್ ಕೆನವರಾಲ್ನಿಂದ ಉಡ್ಡಯನಗೊಂಡಿತು. ಅದು ಯಶಸ್ವಿಯಾಗಿ ವಾನ್ ಅಲೆನ್ ರೇಡಿಯೇಶನ್ ಬೆಲ್ಟ್ ಅನ್ನು ಪತ್ತೆ ಹಚ್ಚಿತು.

1963: ನವಿಲನ್ನು ಭಾರತದ ‘ರಾಷ್ಟ್ರೀಯ ಪಕ್ಷಿ’ ಎಂದು  ಘೋಷಿಸಲಾಯಿತು.

1966: ಸೋವಿಯತ್ ಯೂನಿಯನ್ ಮನುಷ್ಯರಿಲ್ಲದ ಗಗನ ನೌಕೆ ‘ಲೂನಾ 9’ ಅನ್ನು ಉಡಾಯಿಸಿತು

1971: ಆಲನ್ ಶೆಫರ್ಡ್, ಸ್ಟುವರ್ಟ್ ರೂಸಾ ಮತ್ತು ಎಡ್ಗರ್ ಮಿಚೆಲ್  ಅವರನ್ನು ಹೊತ್ತ ‘ಅಪೋಲೋ 14’ ಬಾಹ್ಯಾಕಾಶ ಯಾತ್ರೆ ಪ್ರಾರಂಭಗೊಂಡಿತು.  ಈ ಯಾನವು ಚಂದ್ರನಲ್ಲಿ ಫ್ರಾ ಮಾರೋ ಹೈಲ್ಯಾಂಡ್ಸ್ ಎಂಬಲ್ಲಿನ ಕಾರ್ಯಾಚರಣೆ ಉದ್ದೇಶ ಹೊಂದಿತ್ತು.

2007: ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿವರ್ತನೆಗೆ ಅಹಿಂಸೆ, ಗಾಂಧಿ ತತ್ವಗಳ ಮೂಲಕ ಶ್ರಮಿಸಿದ ದಕ್ಷಿಣ ಆಫ್ರಿಕದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ‘ಗಾಂಧಿ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಪ್ರಶಸ್ತಿಯು 1 ಕೋಟಿ ರೂಪಾಯಿ ನಗದು ಹಣ ಮತ್ತು ಪುರಸ್ಕಾರ ಪತ್ರವನ್ನು ಹೊಂದಿದೆ.

2007: ಕಾವೇರಿ ನದಿ ದಂಡೆಯ ಮೇಲಿರುವ ಟಿ. ನರಸೀಪುರದಲ್ಲಿ ಏಳನೇ ಮಹಾಕುಂಭಮೇಳ  ಆರಂಭಗೊಂಡಿತು.

2008: ಗಣರಾಜ್ಯೋತ್ಸವ ಪೆರೇಡಿನಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ‘ಬೇಲೂರು ಚನ್ನಕೇಶವ ದೇವಾಲಯ’ ಸ್ತಬ್ಧಚಿತ್ರವು ಸಮಗ್ರ ರೂಪದ ಎರಡನೇ ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗಳಿಸಿತು.

2008: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್, ಇತಿಹಾಸ ತಜ್ಞ ಪ್ರೊ. ಬಿ.ಷೇಕ್ ಅಲಿ, ವಿಜ್ಞಾನ ಲೇಖಕ ಪ್ರೊ.ಜಿ.ಟಿ. ನಾರಾಯಣರಾವ್ ಹಾಗೂ ಕಾನೂನು ತಜ್ಞ-ಸ್ವಾತಂತ್ರ್ಯ ಹೋರಾಟಗಾರ ಕೋ. ಚೆನ್ನಬಸಪ್ಪ ಅವರಿಗೆ 8ನೆಯ ಘಟಿಕೋತ್ಸವದಲ್ಲಿ ಗೌರವ ಡಿ.ಲಿಟ್ ಪದವಿ ನೀಡಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನಿರ್ಧರಿಸಿತು.

2009: ಭಾರತದ ಯೂಕಿ ಭಾಂಬ್ರಿ ಅವರು ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಚಾಂಪಿಯನ್‌ಶಿಪ್‌ನ ಜೂನಿಯರ್ ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದರು.

2010: ‘ಅವತಾರ್’ ವಿಶ್ವದಾದ್ಯಂತ  2 ಬಿಲಿಯನ್ ಗಳಿಸಿದ ಪ್ರಥಮ ಚಲನಚಿತ್ರವೆನಿಸಿತು.

ಪ್ರಮುಖಜನನ/ಮರಣ:

1868: ರಸಾಯನ ಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೆರಿಕನ್ನರಾದ ವಿಲಿಯಮ್ ರಿಚರ್ಡ್ಸ್ ಅವರು ಪೆನ್ಸಿಲ್ವೇನಿಯಾದ ಜರ್ಮನ್ ಟೌನ್ ಎಂಬಲ್ಲಿ ಜನಿಸಿದರು.  ಕೆಮಿಕಲ್ ಎಲಿಮೆಂಟ್ಸ್ ಗಳಲ್ಲಿ ಇರುವ ಆಟೋಮಿಕ್ ತೂಕವನ್ನು ಖಚಿತವಾಗಿ ಹೇಳುವ ಮಾದರಿಯನ್ನು ಇವರು ಪ್ರಸ್ತುತಪಡಿಸಿದರು.

1884: ಜರ್ಮನಿಯ ಪ್ರಥಮ ಅಧ್ಯಕ್ಷರಾದ ಥಿಯೋಡರ್ ಹಿಯಸ್ ಜನಿಸಿದರು.

1896: ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಜನಿಸಿದರು. ವಿವಿಧ ಪ್ರಕಾರಗಳಲ್ಲಿ ಮಹತ್ವದ ಸಾಹಿತ್ಯ ಸೇವೆ ಸಲ್ಲಿಸಿರುವ ಬೇಂದ್ರೆಯವರಿಗೆ   ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಶ್ರೀ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ‘ನಾಕು ತಂತಿ’ ಕವನ ಸಂಕಲನಕ್ಕೆ ‘ಜ್ಞಾನಪೀಠ ಪ್ರಶಸ್ತಿ’  ಮುಂತಾದ ಅನೇಕ ಗೌರವಗಳು ಸಂದವು.  ಅಕ್ಟೋಬರ್ 26, 1986ರ ದೀಪಾವಳಿಯಂದು ಕೀರ್ತಿಶೇಷರಾದರು.

1902: ಸ್ವೀಡನ್ನಿನ ರಾಜಕಾರಣಿ, ಸಮಾಜಶಾಸ್ತ್ರಜ್ಞೆ  ಮತ್ತು ವಿಶ್ವಶಾಂತಿ ಕಾರ್ಯಕರ್ತೆ ಆಳ್ವಾ ಮಿರ್ಡಾಲ್ ಉಪ್ಸಲ ಎಂಬಲ್ಲಿ ಜನಿಸಿದರು.   ಇವರಿಗೆ 1982ರ ವರ್ಷದಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಸಂದಿತು.

1927: ಅಮೆರಿಕದ ಪ್ರಸಿದ್ಧ ಚಿತ್ರೋದ್ಯಮಿ ಫಿಲ್ಮೆಶನ್ ಸ್ಟುಡಿಯೊಸ್ ಸ್ಥಾಪಕ ನಾರ್ಮ್ ಪ್ರೆಸ್ಕಾಟ್ ಜನಿಸಿದರು.

1929: ಜರ್ಮನಿಯ ಭೌತವಿಜ್ಞಾನಿ ರುಡೊಲ್ಫ್ ಮೊಸ್ಸಬಾವರ್ ಮ್ಯೂನಿಚ್ನಲ್ಲಿ ಜನಿಸಿದರು.  ಅವರ ‘ರಿಕಾಯಿಲ್’ಲೆಸ್ ನ್ಯೂಕ್ಲಿಯರ್ ರೆಸೋನಾನ್ಸ್ ಫ್ಲೋರೋಸೆನ್ಸ್’ ಸಂಶೋಧನೆಗಾಗಿ 1961 ವರ್ಷದ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿತು.

1935: ಜಪಾನಿನ ಸಾಹಿತಿ ಕೇನ್ಸಬುರೋ ಓಎ ಜನಿಸಿದರು.  ಅವರ  ಕಥೆ, ಕಾದಂಬರಿ ಮತ್ತು ಪ್ರಬಂಧಗಳಲ್ಲಿ ರಾಜಕೀಯ, ಸಾಮಾಜಿಕ,ಆಧ್ಯಾತ್ಮಿಕ ಅಂಶಗಳೇ ಅಲ್ಲದೆ, ಅಣ್ವಸ್ತ್ರ, ಅಣುಶಕ್ತಿ, ಸಾಮರಸ್ಯ ಕಳೆದುಕೊಳ್ಳುತ್ತಿರುವ  ಸಾಮಾಜಿಕ ಬದುಕಿನ ಸ್ಥಿತಿಗತಿಗಳ  ವಿಸ್ತೃತ ಅಧ್ಯಯನವಿದೆ.  ಅವರಿಗೆ 1994ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1923: ಅಮೆರಿಕಾದ ಕಾದಂಬರಿಕಾರ ನಾರ್ಮನ್ ಮೈಲರ್ ನ್ಯೂ ಜೆರ್ಸಿಯ ಲಾಂಗ್ ಬ್ರಾಂಚ್ ಎಂಬಲ್ಲಿ ಜನಿಸಿದರು.  ಕಾದಂಬರಿಯ ಕಲ್ಪನೆ ಹಾಗೂ ವಿಷಯ ಸಮೃದ್ಧಿಯೊಂದಿಗೆ ನೈಜ ಘಟನೆಗಳನ್ನು ನಿರೂಪಿಸುವ ಪತ್ರಿಕೋದ್ಯಮ ವಿಧಾನವನ್ನು ರೂಪಿಸಿದ ಕೀರ್ತಿ ಇವರದ್ದಾಗಿದೆ.

1933: ನೊಬೆಲ್ ಪುರಸ್ಕೃತ ಇಂಗ್ಲಿಷ್ ಸಾಹಿತಿ ಜಾನ್ ಗ್ಯಾಲ್ಸೋವರ್ತಿ ಲಂಡನ್ನಿನಲ್ಲಿ ನಿಧನರಾದರು.  ಅವರ ಫೋರ್ಸೈಟ್ ಸಾಗ ಮತ್ತದರ ಸರಣಿ ಕಥಾನಕಗಳಾದ  ಎ ಮಾಡರ್ನ್ ಕಾಮಿಡಿ ಮತ್ತು ಎಂಡ್ ಆಫ್ ದಿ ಚಾಪ್ಟರ್ ಪ್ರಖ್ಯಾತವಾಗಿದ್ದವು.  ಅವರಿಗೆ 1932ರ ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1954: ಅಮೆರಿಕದ ತಂತ್ರಜ್ಞ, ಎಫ್ ಎಮ್ ರೇಡಿಯೋ ಜನಕ ಎಡ್ವಿನ್ ಹೊವಾರ್ಡ್ ಆರ್ಮ್ ಸ್ಟ್ರಾಂಗ್  ನ್ಯೂಯಾರ್ಕಿನ ಮ್ಯಾನ್ ಹಟನ್ ಎಂಬಲ್ಲಿ ನಿಧನರಾದರು.

1956: ಇಂಗ್ಲಿಷ್ ಬರಹಗಾರ, ಟೆಡ್ಡಿ ಬೇರ್ ವಿನ್ನಿ-ದಿ-ಪೂಹ್ ಸೃಷ್ಟಿಕರ್ತ ಎ.ಎ. ಮಿಲ್ನೆ ಇಂಗ್ಲೆಂಡಿನ ಸಸೆಕ್ಸ್ ಬಳಿಯ ಹ್ಯಾಟ್ಫೀಲ್ಡ್ ಎಂಬಲ್ಲಿ ನಿಧನರಾದರು.

1973: ನಾರ್ವೆಯ ಅರ್ಥಶಾಸ್ತ್ರಜ್ಞ ರಾಗ್ನರ್ ಫ್ರಿಸ್ಚ್ ಓಸ್ಲೋದಲ್ಲಿ ನಿಧನರಾದರು. 1969ರ ವರ್ಷದಲ್ಲಿ ಅವರಿಗೆ  ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಸಂದಿತು.

2005: ಖ್ಯಾತ ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭೌತಶಾಸ್ತ್ರಜ್ಞ ಡಾ. ಎಚ್. ನರಸಿಂಹಯ್ಯ ಬೆಂಗಳೂರಿನಲ್ಲಿ ನಿಧನರಾದರು. ಭೌತಶಾಸ್ತ್ರ ಅಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ,  ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಕರ್ನಾಟಕದಲ್ಲಿನ  ನ್ಯಾಷನಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾಗಿ ತಮ್ಮ  ಸರ್ವಸ್ವವನ್ನೂ ಅದಕ್ಕೆ ಕೊಟ್ಟವರಾಗಿ ಮಹತ್ವದ ಸೇವೆ ಸಲ್ಲಿಸಿದರು. ಅವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಅನೇಕ ವಿಶ್ವವಿದ್ಯಾಲಯಗಳ  ಡಾಕ್ಟರೇಟ್ ಗೌರವವೂ ಒಳಗೊಂಡಂತೆ ಅನೇಕ  ಪ್ರಶಸ್ತಿಗಳು ಸಂದಿದ್ದವು.

2007: ಬ್ರಾಡ್ ವೇ ರಂಗಭೂಮಿ, ಚಲನಚಿತ್ರ ಮತ್ತು ಟೆಲಿವಿಷನ್ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಪ್ರಸಿದ್ಧ ಕಾದಂಬರಿಕಾರ ಸಿಡ್ನಿ ಶೆಲ್ಡನ್  ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2009: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ, ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ದಾಖಲೆ ಸ್ಥಾಪಿಸಿದ್ದ ತಾಯ್ ನಾಗೇಶ್ ನಿಧನರಾದರು. ಅವರು ಹಲವಾರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು.