ಅಂಬಿಗರನ್ನು ಗಂಗೆ ಮಕ್ಕಳು ಅಥವಾ ಗಂಗೆ ಮತದವರೆಂದು ಕರೆಯುತ್ತಾರೆ. ಇತ್ತೀಚೆಗೆ ಹರಿಕಾಂತರನ್ನು ಅಂಬಿಗರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರು ಕನ್ನಡ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಒಳಬಾಂಧವ್ಯ ವಿವಾಹಗಳು ಜರಗುತ್ತವೆ. ತಾಯಿಯ ಸಹೋದರನ ಮಗಳ ಜೊತೆ ಮತ್ತು ತಂದೆಯ ಸಹೋದರಿಯ ಮಗಳ ಜೊತೆ ಮದುವೆಯಾಗಬಹುದು. ವಧುದಕ್ಷಿಣೆ (ತೆರ)ಯನ್ನು ಹಣದ ರೂಪದಲ್ಲಿ ಕೊಡಬೇಕು. ವರದಕ್ಷಿಣೆ ಕೊಡುವುದು ಇವರಲ್ಲಿ ಇತ್ತೀಚಿನ ಪದ್ಧತಿಯಾಗಿದೆ. ವಿವಾಹ ವಿಚ್ಛೇದನೆಗೆ ಅವಕಾಶವಿದೆ. ವಿಧವೆ, ವಿಧುರ ಹಾಗೂ ವಿವಾಹ ವಿಚ್ಛೇದಿತರ ವಿವಾಹಗಳಿಗೆ ಅವಕಾಶವಿದೆ. ಪಿತೃ ಪ್ರಧಾನ ವ್ಯವಸ್ಥೆ ರೀತಿಯಲ್ಲಿ ಹಿರಿ ಮಗ ತಂದೆಯ ನಂತರ ಕುಟುಂಬದ ವಾರಸುದಾರನಾಗುತ್ತಾನೆ.

ಅಂಬಿಗರ ಸಾಂಪ್ರಾದಾಯಿಕ ವೃತ್ತಿ ಮೀನು ಹಿಡಿಯುವುದು. ಮೀನುಗಾರಿಕೆ, ದೋಣಿ ನಡೆಸುವುದು ಹಾಗೂ ಕೃಷಿ ಕಾಮ್ಮಿಕರಾಗಿ ಕೆಲಸಮಾಡುತ್ತಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಕೃಷಿ ಮಾಡುತ್ತಾರೆ. ಕೂಲಿ ಇವರ ಆದಾಯದ ಇನ್ನೊಂದು ಮೂಲ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಮಾಡುತ್ತಿದ್ದಾರೆ. ಇವರು ಹಿಂದೂಗಳಾಗಿದ್ದು ಗಂಗೆ (ಜಲದೇವತೆ)ಯನ್ನು ತಮ್ಮ ಸಮುದಾಯದ ದೈವವಾಗಿ ಆರಾಧಿಸುತ್ತಾರೆ.

ಇವರು ವಿಶೇಷವಾಗಿ ಬಂಡಿಹಬ್ಬ ಹಾಗೂ ಅಳಿಯನ ಹಬ್ಬಗಳನ್ನು ವಿಜೃಂಬಣೆಯಿಂದ ಆಚರಿಸುತ್ತಾರೆ. ಆಧುನಿಕ ಶಿಕ್ಷಣ, ವೈದ್ಯಕೀಯ ಪದ್ಧತಿ ಮತ್ತು ಇತರೆ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಲ್ಲೂ ಇವರು ಹಿಂದುಳಿದಿದ್ದಾರೆ.