ಅಗಸರನ್ನು ಮಡಿವಾಳ, ಧೋಬಿ, ಎಂದು ಕರೆಯುತ್ತಾರೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಈ ಪಂಗಡದವರು ಇದ್ದಾರೆ. ದ್ರಾವೀಡ ಭಾಷಾವರ್ಗಕ್ಕೆ ಸೇರಿದ ಕನ್ನಡ, ತುಳು, ಕೊಡವ, ತೆಲುಗು ಇವರ ಭಾಷೆಗಳಾಗಿವೆ. ಅವರ ಭಾಷೆ ಭೌಗೋಳಿಕ ಪ್ರದೇಶ ಹಾಗೂ ಭಾಷಾ ಸಂದರ್ಭಗಳ ಮೇಲೆ ಅವಲಂಬಿತವಾಗಿದೆ. ಆದರೆ ಹೆಚ್ಚಿನ ಜನರು ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಲಿಂಗಾಯತ ಅಗಸರು ಸಸ್ಯಾಹಾರಿಗಳು, ಉಳಿದವರೆಲ್ಲ ಮಾಂಸಾಹಾರಿಗಳು. ಅಗಸರಲ್ಲಿ ಐದು ಉಪಪಂಗಡಗಳು ಈ ರೀತಿಯಾಗಿವೆ – ವೀರಘಂಟೆ, ಮಡಿವಾಳ, ದಂಡಿನ ಮಡಿವಾಳ, ಲಿಂಗಾಯತ ಅಗಸ, ಬನ್ನ(ಕೊಡವ) ಮತ್ತು ತುಳು ಮಡಿವಾಳ. ಥರ್ಸ್ವನ್ (೧೯೦೯)ಒಂದು ಹೊರಬಾಂಧವ್ಯ ಕುಲವನ್ನು ‘ಅರಿಶಿಣ’ ಎಂದು ಭಿನ್ನವಾಗಿ ಗುರುತಿಸಿದ್ದಾರೆ. ಎಂಥೋವನ್ (೧೯೨೨)ಇವರಲ್ಲಿ ಹತ್ತು ಹೊರಬಾಂಧವ್ಯ ಕುಲದವರನ್ನು ಹೆಸರಿಸಿದ್ದಾರೆ- ಅಂಬರಕರ, ಅದಿಗೋತ್ರಜ, ಭೋಪರಣ, ಧೌತಂಬರ, ಹಲಗ್ರಹ, ಪದತ, ರಾಜ ರೋಮಪಿತ್ರ, ತೆಲುಗುವಾರಿದ. ಇವುಗಳ ಜೊತೆಗೆ ನಂಜುಂಡಯ್ಯ ಮತ್ತು ಐಯ್ಯರ್ (೧೯೨೮) ಹೊರಬಾಂಧವ್ಯದ ಏಳು ಕುಲಗಳನ್ನು ತೆಲಗು ಅಗಸರಲ್ಲಿಯೂ ಹಾಗೂ ಹೊರಬಾಂಧವ್ಯದ ಆರು ಕುಲಗಳನ್ನು ಮಹಾರಾಷ್ಟ್ರದ ಅಗಸರಲ್ಲಿ ಗುರುತಿಸಿದ್ದಾರೆ. ಕೆಲವು ಉಪ ಪಂಗಡಗಳು ಹಾಗೂ ಕುಲಾಧಾರಿತ ಮನೆತನದ ಹೆಸರುಗಳನ್ನು ಹೊಂದಿವೆ. ಅವುಗಳಲ್ಲಿ ಮೂರು ಮನೆತನಗಳನ್ನು ಇವರಲ್ಲಿ ಗುರುತಿಸಲಾಗಿದೆ. ಅವುಗಳೆಂದರೆ ದಂಡಿನಸಿದ್ಧಯ್ಯ, ಕೆಂಪಲಿಂಗಯ್ಯ ಮತ್ತು ಲಕ್ಕಪ್ಪಣ್ಣಯ್ಯ.

ಅಗಸರಲ್ಲಿ ತಂದೆಯ ಸಹೋದರಿಯ ಮಗಳ ಜೊತೆ, ತಾಯಿಯ ಸಹೋದರನ ಮಗಳ ಜೊತೆ ಅಥವಾ ಹಿರಿಯ ಅಕ್ಕನ ಮಗಳ ಜೊತೆ ವಿವಾಹವಾಗಬಹುದು. ವಿಧುರ, ವಿಧವೆಯರ ವಿವಾಹಕ್ಕೆ ಹಾಗೂ ವಿಚ್ಛೇದನೆಗೆ ಅವಕಾಶವಿದೆ. ವಿವಾಹವು ಮದುಮಗಳ ಮನೆಯಲ್ಲಿ ನಡೆಯುತ್ತದೆ. ಧಾರೆ ಮುಹೂರ್ತ, ತಾಳಿ ಕಟ್ಟುವುದು ಸೇರಿ ಎಲ್ಲಾ ವಿಧಿಗಳೂ ಮದುಮಗಳ ಮನೆಯಲ್ಲಿಯೇ ನಡೆಯುತ್ತವೆ. ಗರ್ಭಿಣಿಯರಿಗೆ ಮಗುವನ್ನು ಹೆರಿಗೆಗೆ ಮೊದಲು ಹಾಗೂ ನಂತರದ ಧಾರ್ಮಿಕ ವಿಧಿಗಳನ್ನು ಆಚರಿಸುತ್ತಾರೆ. ಹುಟ್ಟು ಹಾಗೂ ಸಾವಿನ ಸೂತಕವನ್ನು ಮೂರು ಮತ್ತು ಹತ್ತು ದಿನಗಳವರೆಗೆ ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಇವರು ಬಟ್ಟೆ ಒಗೆಯುವವರು. ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ವ್ಯವಸಾಯ ಹಾಗೂ ದಿನಗೂಲಿಯನ್ನು ತಮ್ಮ ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ ಹಾಗೂ ಕೆಲವರು ಡ್ರೈಕ್ಲಿನ್ ಅಂಗಡಿ ನಡೆಸುತ್ತಾರೆ. ತಮ್ಮ ಒಳಜಗಳವನ್ನು ಬಗೆಹರಿಸಿಕೊಳ್ಳಲು ಇವರಿಗೆ ಕುಲಪಂಚಾಯತಿ ಇದೆ. ತಮ್ಮ ಅಭಿವೃದ್ಧಿಗಾಗಿ ಇವರು ಜಾತಿ ಸಂಘಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡ ಇವರಲ್ಲಿ ಕೆಲವರು ಮಾಚಿದೇವನನ್ನು ಸಮುದಾಯದ ದೇವರೆಂದು ಆರಾಧಿಸುತ್ತಾರೆ. ಇವರಿಗೆ ಸಾಮಾನ್ಯವಾಗಿ ಶಿಕ್ಷಣದ ಬಗ್ಗೆ ಆಸಕ್ತಿಯಿದ್ದು, ಆಧುನಿಕ ವೈದ್ಯಕೀಯ ಪದ್ಧತಿಯನ್ನು ಬಳಸಿ, ಕುಟುಂಬ ಕಲ್ಯಾಣ ಯೋಜನೆಯನ್ನು ಒಪ್ಪಿದ್ದಾರೆ. ಇತರೆ ಆಧುನಿಕ ಸಾಮಾಜಿಕ ಸಂಸ್ಥೆ ಹಾಗೂ ಮಾಧ್ಯಮಗಳ ಬಗ್ಗೆ ಇವರಿಗೆ ಹೆಚ್ಚಿನ ಆಸಕ್ತಿಯಿದೆ.

ನೋಡಿ:

Balakrishna A., Ramesh.M and Veerraju.P. 1992. ‘PTC Taste

Sensitivity and Red Green Colour Blindeness among Dhobis’, Man in India, 72(1)

Ramesh, M., A. Balakrishna and P.Veerraju, 1992.

‘Distribution of Blood Groups among Dhobis – A Washerman caste Population of Andhra Pradesh’, Journal of Human Ecology 391-62

Ramesh, M., A.Balakrishna and P.Veeraju, 1993. ‘Sickle cell, Haemogobin and G6PD among Dhobis of Visakhapatnam, Andra Pradesh’, India Anthropromus. 2:17-177

Srinivas M.N., 1953. ‘A Caste Dispute Among the Washermen (Madivala Shetti or A gasa) of Mysore’. The Eastern Anthropologist VIII(3) : 14 – 168