ಅಗೇರರು, ಉಪ್ಪು ತೆಗೆಯುವವರು ಅಥವಾ ತಯಾರಿಸುವವರು ಎಂದು ೧೯೮೩ರಲ್ಲಿ ಪ್ರಕಟವಾಗಿರುವ ಕೆನರಾ ಗೆಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಗಮನಿಸಿದರೆ ಉಪ್ಪು ತೆಗೆಯುವ ವೃತ್ತಿ ಮೂಲದಿಂದಲೇ ಈ ಹೆಸರು ಬಂದಿರಬಹುದು. ಇವರಲ್ಲಿ ಇಂದಿಗೂ ಬಹಳಷ್ಟು ಜನ  ಇದೇ ವೃತ್ತಿಯಲ್ಲಿದ್ದು,  ಈ ವೃತ್ತಿಗಾಗಿಯೇ ಗೋವಾ ಕರಾವಳಿಗೆ ವಲಸೆ ಹೋಗುವುದೂ ಕಂಡುಬರುತ್ತದೆ. ಹೆಚ್ಚಿನವರಿಗೆ ಪಿತ್ರಾರ್ಜಿತ ಆಸ್ತಿ ಇಲ್ಲ, ಇದನ್ನು ಗಮನಿಸಿದಾಗ ಉಪ್ಪು ತೆಗೆಯುವ ಕೆಲಸಕ್ಕಾಗಿಯೇ, ಬೇರೆ ಪ್ರದೇಶಗಳಿಂದ ಇವರು ವಲಸೆ ಬಂದಿರಬಹುದು ಎಂದು ತಿಳಿಯುತ್ತದೆ. ಹಾಜರಾತಿನ ಕರಾವಳಿಯಲ್ಲಿ ಉಪ್ಪು ತೆಗೆಯುವ ಅಗೇರಿಯಾ ಎಂಬ ಸಮುದಾಯಕ್ಕೂ ಇವರಿಗೂ ಸಂಬಂಧವಿರಬಹುದು. ಇವರು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವಾಸಿಸುತ್ತಾರೆ. ಕುಮಟಾ, ಅಂಕೋಲ, ಕಾರವಾರ ತಾಲೂಕುಗಳಲ್ಲಿ ಹೆಚ್ಚಾಗಿ ಇದ್ದಾರೆ. ಇವರು ಕನ್ನಡ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಗುಜರಾತ ಹಾಗೂ ಮಹಾರಾಷ್ಟ್ರಗಳಲ್ಲಿ ಅಗೇರರನ್ನು ಹಿಂದುಳಿದ ಜಾತಿಯವರನ್ನಾಗಿ ಪರಿಗಣಿಸಲಾಗಿದೆ. ಇವರು ತಮ್ಮನ್ನು ಶೂದ್ರ ವರ್ಣದಲ್ಲಿ ಗುರುತಿಸಿಕೊಳ್ಳುತ್ತಾರೆ. ಹೊರಬಾಂಧವ್ಯ ವಿವಾಹ ಸಂಬಂಧಗಳು ಪರಿಚಿತ ಕುಲಭಾಂದವರೊಂದಿಗೆ ಮೊದಲು ಜರುಗುತ್ತಿದ್ದವು, ಆದರೆ ಈಗ ಅವುಗಳಿಗೆ ಅಷ್ಟೊಂದು ಪ್ರಾಧಾನ್ಯತೆಯಿಲ್ಲ. ಸೋದರ ಸಂಬಂಧಿಗಳ ಜೊತೆ ಉದಾಹರಣೆಗೆ – ತಂದೆಯ ಸಹೋದರಿಯ ಮಗಳು ಅಥವಾ ತಾಯಿಯ ಸಹೋದರನ ಮಗಳ ಜೊತೆ ವೈವಾಹಿಕ ಸಂಬಂಧಗಳಿಗೆ ಅವಕಾಶವಿದೆ. ವ್ಯವಸಾಯದ ಕೆಲಸಗಳಲ್ಲಿ ಹೆಂಗಸರು ಸಹಾಯ ಮಾಡುವುದರ ಜೊತೆಗೆ ಕೂಲಿಗಳಾಗಿ ದುಡಿದು ಕುಟುಂಬದ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯದ ಚಟುವಟಿಕೆಗಳಲ್ಲಿ ಹೆಂಗಸರು ಭಾಗಿಗಳಾಗುತ್ತಾರೆ.

ಉಪ್ಪು ತಯಾರಿಸುವುದು ಇವರ ಸಾಂಪ್ರದಾಯಿಕ ವೃತ್ತಿ. ಇತ್ತೀಚೆಗೆ ಇವರು ವ್ಯವಸಾಯದಲ್ಲಿ ಕೂಲಿಗಳಾಗಿ, ಗೇಣಿದಾರರಾಗಿ ದುಡಿಯುತ್ತಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಸರ್ಕಾರಿ ಮತ್ತು ಖಾಸಗಿ ವಲಯದ ಕೆಲಸಗಳಿಗೆ ಇವರು ಹೋಗುತ್ತಿದ್ದಾರೆ. ಗ್ರಾಮದೇವರುಗಳಾದ ಸಣ್ಣಮ್ಮ ಮತ್ತು ಬೀರದೇವರನ್ನು ಪೂಜಿಸುತ್ತಾರೆ. ವೆಂಕಟರಮಣ ಇವರ ಮುಖ್ಯ ಮನೆದೇವರು ಹಾಗೂ ಸಮುದಾಯದ ದೇವರು. ಈ ದೇವರನ್ನು ಮನೆಯ ಮುಂದೆ ಬೆಳೆಸಿದ ತುಳಸಿಗಿಡದ ರೂಪದಲ್ಲಿ ಪೂಜಿಸುತ್ತಾರೆ. ನೆಲ ಹಾಗೂ ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುವುದು ಇವರ ಸಾಂಪ್ರಾದಾಯಕ ಕಲೆ. ಬುಟ್ಟಿಹೆಣೆಯುವುದು ಇವರ ಮುಖ್ಯ ಉಪಕಸುಬು. ಇವರು ತುಳಸಿ ಹಬ್ಬದ ಆಚರಣೆಗಳಲ್ಲಿ ಹಲಗೆ ವಾದ್ಯಗಳನ್ನು ಬಾರಿಸುತ್ತಾರೆ. ಯಕ್ಷಗಾನ ಮತ್ತು ಜಾನಪದ ನೃತ್ಯಗಳಿಗೆ ಪಂಚವಾದ್ಯಗಳ ಸಂಗೀತ ನುಡಿಸುತ್ತಾರೆ. ಗೇಣಿದಾರರಾಗಿ ಮತ್ತು ಕೃಷಿ ಕೂಲಿಗಳಾಗಿ ಇವರ ಸಂಬಂಧ ಬೇರೆ ಸಮುದಾಯದವರಾದ ಸಾರಸ್ವತ ಬ್ರಾಹ್ಮಣರ ಜೊತೆ ಈಗಲೂ ಹಿಂದಿನಂತೆಯೆ ಇದೆ. ಇತ್ತೀಚೆಗೆ ಇವರು ಕ್ರೈಸ್ತ ಧರ್ಮ ಪ್ರಚಾರಕರು ನೀಡುವ ಉಚಿತ ವಿದ್ಯಾಭ್ಯಾಸ ಹಾಗೂ ವೈದ್ಯಕೀಯ ಸೌಲಭ್ಯಗಳ ಮೂಲಕ ಕ್ರೈಸ್ತ ಸಮುದಾಯಗಳ ಸಂಪರ್ಕವನ್ನು ಹೊಂದಿದ್ದಾರೆ. ಮಕ್ಕಳ ಆಧುನಿಕ ವಿದ್ಯಾಭ್ಯಾಸದ ಕಡೆಗೆ ಒಲವಿದ್ದು, ಸಾಮಾನ್ಯವಾಗಿ ಪ್ರೌಢಶಿಕ್ಷಣದ ಮಟ್ಟದವರೆಗೆ ಕಲಿಯುತ್ತಾರೆ. ಅಗೇರರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇತ್ತೀಚೆಗೆ ಇವರಲ್ಲಿ ಶೈಕ್ಷಣಿಕ ಪ್ರಗತಿಯಾಗುತ್ತಿದೆ. “ಉತ್ತರ ಕನ್ನಡ ಜಿಲ್ಲೆ ಅಗೇರ ಸಮಾಜ” ಎಂಬ ಸಂಘಟನೆಯ ಇವರ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ನೋಡಿ:

ರಾಮಕೃಷ್ಣ ಗುಂಡಿ, ೧೯೯೩. ಅಗೇರರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.