ಅಡವಿ ಚೆಂಚರನ್ನು ಚೆಂಚು, ಚೆಂಚು ಕುಲಂ ಚಂಚುವಾಡ, ಅಡವಿ ಚೆಂಚರು, ಚಿಕ್ಕುಚೆಂಡು ಮುಂತಾದ ಹೆಸರಿನಿಂದ ಕರೆಯುತ್ತಾರೆ. ಕೆಂಚಗೆ ಇರುವ ಚೆಂಚರನ್ನು ‘ಕೆ’ಕಾರಕ್ಕೆ ಬದಲಾಗಿ ‘ಚೆ’ಕಾರವನ್ನು ಹಚ್ಚಿ, ಚೆಂಚರು ಎಂದು ಕರೆದಿರಬೇಕು. ಸದಾಕಾಲ ಕಾಡಿನಲ್ಲಿ ವಾಸಿಸುವ ಈ ಸಮುದಾಯದ ಜನರನ್ನು ಅಡವಿಚೆಂಚರು ಎಂದು ರೂಢಿಗತವಾಗಿ ಕರೆದಿರಬಹುದು. ಅಪರಾಧಿ ಬುಡಕಟ್ಟು ಪಟ್ಟಿಯಲ್ಲಿ ಬರುವ ಲಂಬಾಣಿ, ಗಂಟಿಚೋರ, ಚಪ್ಪರಬಂದ ಇತ್ಯಾದಿ ಬುಡಕಟ್ಟು ಸಮುದಾಯಗಳ ಜೊತೆ ಅಡವಿ ಚೆಂಚರನ್ನು ಸಹ ಬ್ರಿಟಿಷರು ಗುರುತಿಸಿ  ಪಟ್ಟಿ ಮಾಡಿದ್ದರು. ಮರೆಗೊಲ್ಲಿ, ಯನಾದಿ, ಇರುಳ, ಚೆಕ್ಕುಚೆಂಚು, ಲಂಬಾಣಿ ಮುಂತಾದ ಅರಣ್ಯವಾಸಿ ಬುಡಕಟ್ಟಿನವರನ್ನು ಚರಿತ್ರೆಕಾರರು ಚೆಂಚರನ್ನು ಅಡವಿ ಚೆಂಚರೆಂದು ಗುರುತಿಸರಬಹುದು.

ಅಡವಿಚೆಂಚರ ಪೂರ್ವಜರು ಮಧ್ಯಭಾರತದ ವಿಂದ್ಯಪರ್ವತದ ಕಾಡುಗಳಲ್ಲಿ ನೆಲೆಸಿ, ಬೇಟೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುತ್ತಿದ್ದರು. ಅವರಲ್ಲಿ ಕೆಲವರು ಗುಜರಾತ, ಮಹಾರಾಷ್ಟ್ರ, ಕರ್ನಾಟಕ ಮುಂತಾದ ಪ್ರದೇಶಗಳಿಗೆ ವಲಸೆ ಬಂದಿರಬಹುದು. ಆಗಿನ ಮುಂಬೈ ಸರ್ಕಾರವು  ೧೯೨೪ರಲ್ಲಿ ಜಾರಿಗೆ ತಂದ ಅಪರಾಧಿ ಬುಡಕಟ್ಟು ಕಾಯ್ದೆ ಪ್ರಕಾರ ಇಪ್ಪತ್ತನಾಲ್ಕು ನೆಲೆಗಳಲ್ಲಿ ಈ ಸಮುದಾಯದ ಜನರನ್ನು ಹಿಡಿದಿಟ್ಟರು. ಈ ನೆಲೆಗಳು ಮುಂಬೈ ಕರ್ನಾಟಕದಲ್ಲಿ ಖಾನಾಪುರ, ಹುಬ್ಬಳ್ಳಿ, ಗದಗ, ಬಾಗಲಕೋಟೆ, ವಿಜಾಪುರ, ಇಂಡಿ ಮುಂತಾದ ಕಡೆ ಇವೆ (ಪ್ರಹ್ಲಾದ್ ಬೆಟಗೇರಿ: ೧೯೯೩).

ಅಡವಿ ಚೆಂಚರು ಧಾರವಾಡ, ವಿಜಾಪುರ, ರಾಯಚೂರು, ಗುಲ್ಬರ್ಗಾ, ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡ ಬಂದರೆ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು ಮತ್ತು ಚಾಮರಾಜ ಜಿಲ್ಲೆಗಳಲ್ಲಿ ವಿರಳವಾಗಿ ಇದ್ದಾರೆ. ಚೆಂಚರು ನಾಲ್ಕು ಪ್ರಮುಖ ಗುಂಪುಗಳಾಗಿ ವಿಂಗಡಣೆ ಹೊಂದಿದ್ದಾರೆ. ಅವುಗಳೆಂದರೆ ತೆಲುಗು ಚೆಂಚರು, ಅಡವಿ ಚೆಂಚರು, ಕೃಷ್ಣಾ ಚೆಂಚರು, ಬೊಂಟಾ ಚೆಂಚರು ಎಂದು ರಿಸ್ಲೆ ದಾಖಲಿಸುತ್ತಾರೆ. ಚೆಂಚರು ಮಾತನಾಡುವ ಭಾಷೆಗೆ ಲಿಪಿ ಇಲ್ಲ. ಮನೆಯಲ್ಲಿ ಮರಾಠಿ ಮಿಶ್ರಿತ ಗುಜರಾತಿ ಭಾಷೆಯನ್ನು ಮಾತನಾಡುತ್ತಾರೆ. ಹೊರಗಡೆ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಇವರು ಮಾತನಾಡುವ ಭಾಷೆಯ ಮೇಲೆ ಲಂಬಾಣಿ ಭಾಷೆಯ ಪ್ರಭಾವ ಹೆಚ್ಚಾಗಿ ಆಗಿರುತ್ತದೆ ಎಂದು ತಜ್ಞರು ಗುರುತಿಸಿದ್ದಾರೆ.

ಮೊದಲ ಬಾರಿಗೆ ಮುಂಬೈ ಸರ್ಕಾರವು ೧೯೨೪ರಲ್ಲಿ ಅಪರಾಧಿ ಬುಡಕಟ್ಟಿನ ಒಂಬತ್ತು ಉಪಜಾತಿಗಳನ್ನು ಸಹ ಗುರುತಿಸಿತ್ತು.  ಅವುಗಳೆಂದರೆ ಪಾರ್ಥಿ, ಪಾನ್ಸೆಪಾರ್ದಿ, ರಾಜಪಾರ್ದಿ, ವಾಗ್ರಿಪಾರ್ದಿ, ತಾಕಣಕರಿ, ಹರಿಣಶಿಕಾರಿ, ಚಿಗರಿ ಬೇಟೆಗಾರರು, ನೀರ ಶಿಕಾರಿ, ಪಾಶೇಕಾರಿ. ಅಡವಿ ಚೆಂಚರಲ್ಲಿ ಮುಖ್ಯವಾಗಿ ಆರು ಬೆಡಗುಗಳಿವೆ. ಅವೆಂದರೆ ವೆಂಪಳಜ್ಯಾ, ಖೋಡಿಯಾರ, ಹರಕ್ತ್ಯಾ, ಕೊರಬಾ, ಇಕೋತ್ತ್ಯಾ ಮತ್ತು ಸಾವುಂಡ್ಯಾ. ಇವುಗಳಲ್ಲಿ ಮೊದಲ ಮೂರು ಬೆಡಗಿನವರು ಅಣ್ಣ ತಮ್ಮಂದಿರ ವಂಶದವರಾಗಿದ್ದರಿಂದ ಹೆಣ್ಣು ಗಂಡು ಕೊಡುಕೊಳ್ಳುವಿಕೆ ನಡೆಯುವುದಿಲ್ಲ. ಬೇರೆ ಬೆಡಗಿನವರು ಅಂದರೆ ಕೊರಬ್ಯಾ, ಇಕೋತ್ತ್ಯಾ, ಸಾವುಂಡ್ಯಾರವರ ಜೊತೆಗೆ ವಿವಾಹ ಸಂಬಂಧವನ್ನು ಬೆಳೆಸುತ್ತಾರೆ.

ಇವರು ಮಹುವಾ ಎಂಬ ಹೂವಿನಿಂದ ಮದ್ಯವನ್ನು ತಯಾರಿಸುತ್ತಿದ್ದರೆಂದು ಥರ್ಸ್ಟನ್(೧೯೦೯) ಗುರುತಿಸಿದ್ದಾರೆ. ಹಿಂದೆ ಅಡವಿ ಚೆಂಚರು ಅರಣ್ಯದ ಉಪಉತ್ಪನ್ನಗಳನ್ನು ಸಂಗ್ರಹಿಸುತ್ತಿದ್ದರು ಎಂದು ಥರ್ಸ್ಟನ್ (೧೯೦೯) ಗುರುತಿಸಿದ್ದಾರೆ. ಚೆಂಚರು ಪೂಜಿಸುವ ‘ಚೆಂಚು ದೇವತೆ’. ನರಸಿಂಹ ದೇವರು ಸುಂದರಿಯಾದ ಚಂಚಿತಾಳನ್ನು ಹೊತ್ತುಕೊಂಡು ಹೋಗಿ ಮದುವೆಯಾದನೆಂದು ನಂಬಿದ್ದಾರೆ. ನರಸಿಂಹದೇವರನ್ನು ಇವರು ‘ಓಬಳೇಸುಡು’ ಎಂದು ಕರೆಯುತ್ತಾರೆ. ಓಬಳೆ ಸುಡುವನ್ನು ಅಳಿಯನನ್ನಾಗಿ ಭಾವಿಸಿ ಚೆಂಚರು ವರ್ಷಕ್ಕೊಮ್ಮೆ ಉಡುಗೊರೆಯನ್ನು ಅಳಿಯನನ್ನಾಗಿ ಭಾವಿಸಿ ಚೆಂಚರು ವರ್ಷಕ್ಕೊಮ್ಮೆ ಉಡುಗೊರೆಯನ್ನು ಕೊಟ್ಟು ಪೂಜೆ ಸಲ್ಲಿಸುತ್ತಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಡವಿ ಚೆಂಚರು ತೀರಾ ಹಿಂದುಳಿದ ಒಂದು ಸಮುದಾಯ ಎಂದು ೧೯೮೭ರಲ್ಲಿ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಿದ ಸಮೀಕ್ಷಾ (ತಿಮ್ಮಯ್ಯ : ೧೯೯೩) ವರದಿಯಿಂದ ತಿಳಿದು ಬರುತ್ತದೆ. ಈ ವರದಿಯಲ್ಲಿ ಇವರನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸುವುದರಿಂದ ಮಾತ್ರ ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸಲು ಸಾಧ್ಯವೆಂದು ಶಿಫಾರಸ್ಸು ಮಾಡಲಾಗಿದೆ.

ನೋಡಿ:

ಪ್ರಹ್ಲಾದ ಬೆಟಗೇರಿ, ೧೯೯೩. ಅಡವಿಚೆಂಚರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

Thimmaiah. G. 1993. Power Politics and Social Justice, Backward Classes in Karnataka, Sage Publications, New Delhi.