ಅಮ್ಮ ಕೊಡವರು, ಕೊಡಗಿನ ಅರ್ಚಕ ಸಮುದಾಯಕ್ಕೆ ಸೇರಿದವರೆಂದು ಮದ್ರಾಸ್ ಪ್ರೆಸಿಡೆನ್ಸಿ ಗೆಜೆಟಿಯರ್‌ನಲ್ಲಿ ಹೇಳಲಾಗಿದೆ. ಅಮ್ಮ ಕೊಡವರು ಕೊಡವರಂತೆಯೇ ಆಚಾರ, ವಿಚಾರ ಉಡುಗೆ ತೊಡುಗೆಗಳನ್ನುಟ್ಟರೂ ಇವರು ಜನಿವಾರ ಹಾಕಿಕೊಳ್ಳುತ್ತಾರೆ. ಇವರು ಪ್ರತಿವರ್ಷವೂ ಜನಿವಾರವನ್ನು ಹಾಕಿಕೊಳ್ಳುವ ಹಬ್ಬವನ್ನು ಆಚರಿಸುತ್ತಾರೆ.

ಕೊಡುವ ಯುವಕನೊಬ್ಬ ಬ್ರಾಹ್ಮಣ ಕನ್ಯೆಯನ್ನು ವಿವಾಹವಾಗಲು ಜನಿವಾರಧರಿಸಿದನಂತೆ. ಇವರಿಗೆ ಜನಿಸಿದ ಮಕ್ಕಳು ತಂದೆ ತಾಯಿ ಜಾತಿಗಳ ಸಾಂಸ್ಕೃತಿಕ ಆಚರಣೆಗಳನ್ನು ರೂಢಿಸಿಕೊಂಡು ಅಮ್ಮಕೊಡವ ಎಂದು ಗುರುತಿಸಿಕೊಂಡರೆಂಬ ದಂತಕಥೆ ಇದೆ. ಅಮ್ಮ ಕೊಡವರ ಹೆಸರುಗಳ ಕೊನೆಯಲ್ಲಿ ಅಮ್ಮ ಎಂದಿರುತ್ತದೆ. ಉದಾಹರಣೆಗೆ ಅಯ್ಯಪ್ಪಮ್ಮ, ಮುತ್ತಣ್ಣಮ್ಮ, ಇತ್ಯಾದಿ. ಅಮ್ಮ ಕೊಡವರು ತಾವು ಬ್ರಾಹ್ಮಣರಿಗೆ ಸಮಾನರೆಂದು ಹೇಳಿಕೊಳ್ಳುತ್ತಾರೆ. ಇವರ ಆಚರಣೆಗಳು ಬ್ರಾಹ್ಮಣೆಯ ಆಚರಣೆಗಳಿಗೆ ಹೋಲುವುದರಿಂದ ಅವರು ಬಹುಶಃ ಬ್ರಹ್ಮ ಕೊಡವ ರಾಗಿದ್ದರೆಂದು ತೋರುತ್ತದೆ. ಬ್ರಹ್ಮ ಕೊಡವ ಎಂಬುದೇ ಕಾಲಕ್ರಮೇಣ ಅಪಭ್ರಂಶವಾಗಿ ಅಮ್ಮ ಕೊಡವ ಆಗಿದೆಯೆಂದು ತಿಳಿದುಬರುತ್ತದೆ(ರಾಮಾನುಜಂ.ಪಿ.ಎಸ್ ೧೯೭೫). ಐಯ್ಯರ್‌ರವರ (೧೯೪೮) ಪ್ರಕಾರ “ಅಮ್ಮ ಕೊಡವ ಎನ್ನುವ ಪದ, ಅಮ್ಮ (ಕಾವೇರಿಯಮ್ಮ) ನ ಸೇವೆಗೆ ಮುಡುಪಾಗಿಟ್ಟುಕೊಂಡವರು ಎನ್ನುವುದರಿಂದ ಬಂದಿದೆ”. ಇವರು ಕೊಡವ ಭಾಷೆಯನ್ನು ಹಾಗೂ ಕನ್ನಡವನ್ನು ಮಾತನಾಡಬಲ್ಲರು. ಈ ಸಮುದಾಯ ದವರಿಗೆ ಮನೆತನದ ಹೆಸರುಗಳಿವೆ.

ಅಮ್ಮ ಕೊಡವರಿಗೂ ಕೊಡಗಿನ ಇತರೆ ಸಮುದಾಯಗಳಿಗೆ ಇರುವಂತೆ ‘ಐನ್‌ಮನೆ’ಗಳಿವೆ. ಐನ್‌ಮನೆಯೆಂದರೆ ಶತಮಾನಗಳಷ್ಟು ಹಳೆಯ ಅವಿಭಕ್ತ ಕುಟುಂಬ. ಇವರು ಕುಟುಂಬದ ಮೂಲಪುರುಷ ‘ಕಾರಣ’ನನ್ನು ಪೂಜಿಸುತ್ತಾರೆ. ಇತ್ತೀಚೆಗೆ ಇವರಲ್ಲಿ ಹೊರಭಾಂದವ್ಯ ವಿವಾಹದ ಜೊತೆಗೆ ವಿರಳವಾಗಿ ಕೊಡವರು ಹಾಗೂ ಕೊಡಗಿನ ಇತರೆ ಸಮುದಾಯಗಳ ಜೊತೆ ವೈವಾಹಿಕ ಸಂಬಂಧಗಳು ನಡೆಯುತ್ತಿವೆ. ಇವರಲ್ಲಿ ಏಕಪತ್ನಿತ್ವ/ಏಕಪತಿತ್ವ ವಿವಾಹಪದ್ಧತಿ ರೂಢಿಯಲ್ಲಿದೆ. ವಿಧುರ, ವಿಧವೆಯರ ಅವಕಾಶವಿದೆ. ಗಂಡು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ದೊರೆಯುತ್ತದೆ. ಹಿರಿಯ ಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಕೆಲಸಗಳಲ್ಲಿ ಭಾಗವಹಿಸಿ, ವ್ಯವಸಾಯದ ಉಸ್ತುವಾರಿ ನೋಡಿಕೊಂಡು, ರಾಜಕೀಯ, ಸಾಮಾಜಿಕ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಹೆರಿಗೆಯ ಮುನ್ನ ಸೀಮಂತ ಕಾರ್ಯವನ್ನು ಗರ್ಭಿಣಿಯಾದ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವು ಹತ್ತು ದಿನಗಳ ಕಾಲ ನಡೆಸಿ ನಂತರ ನಾಮಕರಣವನ್ನು ಹನ್ನೆರಡನೆ ದಿನದಂದು ಮಾಡುತ್ತಾರೆ. ಶವವನ್ನು ಸುಟ್ಟು, ಮೂಳೆಗಳನ್ನು ಕಾವೇರಿ ನದಿಯಲ್ಲಿ ಬಿಡುತ್ತಾರೆ. ಹದಿಮೂರನೆ ದಿನಂದು ತಿಥಿಯನ್ನು ಮಾಡಿ ಹಿರಿಯರ ಪೂಜೆಯನ್ನು ಮಾಡುತ್ತಾರೆ.

ವ್ಯವಸಾಯ ಇವರ ಸಾಂಪ್ರದಾಯಿಕ ಆದಾಯದ ಮೂಲ ವೃತ್ತಿ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಒಂದು ಸ್ಥಳೀಯ ಸಂಘಟನೆಯು ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಮ್ಮ ಕೊಡವರು ಹಿಂದೂಗಳು. ಇವರ ಕೋಮಿನ ದೇವತೆಯೆಂದರೆ ಕಾವೇರಿ, ಜಗಧೇಶ್ವರ ಹಾಗೂ ಭಗವತಿ. ಇತರ ಹಿಂದೂ ದೇವತೆಗಳನ್ನು ಇವರು ಪೂಜಿಸುತ್ತಾರೆ. ಬ್ರಾಹ್ಮಣ ಅರ್ಚಕರು ಇವರ ಧಾರ್ಮಿಕ ವಿಧಿಗಳನ್ನು ನಡೆಸಿಕೊಡು‌ತ್ತಾರೆ. ಹುತ್ತರಿ, ಕಾವೇರಿ ಸಂಕ್ರಮಣ ಹಾಗೂ ಕೈಲ್ ಮುಹೂರ್ತಗಳನ್ನು ಇವರು ಆಚರಿಸುತ್ತಾರೆ. ಇವರು ಗ್ರಾಮದ ಹಬ್ಬಗಳಲ್ಲಿ ಮುಖ್ಯಸ್ಥರಾಗಿ ಹಾಗೂ ಆರಾಧಕರಾಗಿ ಭಾಗವಹಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಇವರಲ್ಲಿ ಒಳ್ಳೆಯ ಆಸಕ್ತಿ ಇದ್ದು ಆಸಕ್ತಿ ಇದ್ದು ಸಾಮಾನ್ಯವಾಗಿ ಮಕ್ಕಳು ಉನ್ನತ ಶಿಕ್ಷಣಪಡೆಯುತ್ತಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನವನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಸಾಮಾಜಿಕ ಬದಲಾವಣೆಯನ್ನು ಇವರು ಹೊಂದುತ್ತಿದ್‌ಆರೆ. ಈ ಸಮುದಾಯದ ಜನಸಂಖ್ಯೆ ಕೊಡಗಿನಲ್ಲಿ ಅತ್ಯಂತ ಕಡಿಮೆ ಇದೆ. ಆರ್ಥಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಕೊಡವರಿಗೆ ಹೊಲಿಸಿದರೆ ಅಮ್ಮಕೊಡವರು ಅತ್ಯಂತ ಹಿಂದುಳಿದಿದ್ದಾರೆ.

ನೋಡಿ :

ಅಮೃತ ಸೋಮೇಶ್ವರ, ೧೯೮೨. ಕೊಡವರು, ಐ.ಬಿ.ಹೆಚ್. ಪಬ್ಲಿಕೇಷನ್, ಬೆಂಗಳೂರು,.

ಗಣಪತಿ ಬಿ.ಡಿ., ೧೯೮೧, ಕೊಡವರ ಜೀವನ ಪ್ರಗತಿಗಳು, ಐ.ಬಿ.ಹೆಚ್. ಪಬ್ಲಿಕೇಷನ್, ಬೆಂಗಳೂರು.

ರಾಮಾನುಜಂ ಪಿ.ಎಸ್., ೧೯೭೫, ಕೊಡವರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ವಿಜಯ. ಟಿ.ಪಿ.೧೯೯೩. ಆಧುನಿಕ ಕೊಡಗು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Dutta Gupta Arabinda, 1978. ‘Occupational Mobility among Some Castes in Ponnampet, A Coorg Village’, Bulletin of the Department of Anthropology. Vol. 27.

Emeneau, Murray Barson, 1938. ‘Kinship and Marriage Among the Coorgs’, Journal of the Royal Asiatic Society of Bengal. 4 : 12-47

Ganesh, M.B., 1985. ‘The Kodava Mopillas : Their life and culture’, M.A. dissertation (unpublished),: University of Mysore, Mysore.

Holland, T.H., 1901. ‘The Coorgs and Yeruavs; and Ethnological Contrast’, Journal of the Asiatic Society of Bengal  70 (3), pp.5-98.

Iyer, L.K. Anantha Krishna, 1948. The Coorg Tribes and Castes, Garden Press, Madras.

Kalam. Mohammed Abdul, 1989. ‘A Study of Family among the Coorgs of South India’, Ph.D.Thesis : University of Madras, Madras

Khan, C.G. Husain., 1977. ‘Okka The Basic Unit of Kodava Social Organization’, The Eastern Anthropologist Vol.30, No.1 :1

Pooncha, Veena, 1995. ‘Redefining Gender Relationships : The Impct of te Colonial State on the Coorg/Kodava norms of Marriage and sexuality’, Contributions to Indian Sociology  29, 1&2, 3-64

Richter, G., 1887. Ethnographic Compendium on the Castes and Tribes Found in the Province of Coorg, : Morning Star Press, Banglore

Saheb, S.Y., R.K. Gulati, C.M. Raju, and M. Sirajuddin, 1981. ‘Ages at First Paternity and Maternity in Kodava and Amma Kodava Population of Karnataka’, Bulletin Department of Anthropology. Vol. 34.

Saheb, S.Y., Edit, 1979. ‘PTC Taste Sensitivity in Kodava Population of Kodagu’, Bulletin of the Anthropological Survey of India, XX VIII (1&2): 67-75.

Saheb, S.Y. R.K. Gulati, Mohan Raju, C., S. M. Sirajuddin and D.B. Sastry, 1981. ‘Demographic Structure of Kodava and Amma Kodava Populations of Kodagu’, Journal of Social Research.

Saheb, S.Y. C. Mohan Raju, S.M. Sirajuddin, D.B. Sastry and R.K. Gulati, 1982. ‘Matrimonial Distance in Kodava and Amma Kodava Population of Kodagu’, Indian Journal of Physical Anthropology & Human Genetics Vol. 8 2&3 10-117.

Saheb, S.Y. R.K. Gulati, S.M. Sirajuddin, C.M. Raju and D.B. Sastry, 1981. ‘Fertility Differentials and Selection Intensiry among Kodava and Ammal Kodava Populations of Kodagu’, Karnataka, Acta. Anthopomise Genetica.

Sirajuddin, S.M., 1980. ‘Anthropometry of Amma Kodava’ (unpublished Report) Anthropological Survey of India, Mysore.

Sing, ‘Inter-Tribal Communication and Social Relations in Coorg District of Karnataka’, Anthropological survey of India, Mysore.

Srinivas, M.N. 1965. Religion and Society Among the Coorgs of South India, Asia Publishing House (Reprint 1952), London.