ಲ್ಲಿಗರು ಬೇಟೆಯನ್ನು ಮೂಲ ವೃತ್ತಿಯನ್ನಾಗಿ ಅವಲಂಬಿಸಿರುವ ಒಂದು ಬುಡಕಟ್ಟು ಸಮುದಾಯ. ಇರುಳಿಗ ಎಂಬ ಪದ ಇಲ್ಲಿ ಗರು ಎಂದು ವಿರೂಪಗೊಂಡಿದೆ (ಹೆಚ್.ವಿ.ನಂಜುಂಡಯ್ಯ ೧೯೩೦). ಇವರಿಗೆ ಕಾಡು ಪೂಜಾರಿಗಳು ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ ಬೆಟ್ಟಗುಡ್ಡ ಕಣಿವೆಗಳಿಂದ ಕೂಡಿದ ಪ್ರದೇಶಗಳಲ್ಲಿ ಇವರು ಕಂಡುಬರುತ್ತಾರೆ. ವಿಶೇಷವಾಗಿ ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ, ಬಂಟರಗುಪ್ಪೆ, ಜೋಡುಗಟ್ಟೆ, ಅಜ್ಜಿನಹಳ್ಳಿ, ಸೊಣ್ಣೇನಹಳ್ಳಿ ಮತ್ತು ಮಾರೇಗೌಡನ ದೊಡ್ಡಿ, ರಾಮನಗರ ತಾಲ್ಲೂಕಿನ ಮಟಕಯ್ಯನದೊಡ್ಡಿ, ಎರೇಹಳ್ಳಿಗುಡ್ಡ, ದಾಸೇಗೌಡನ ದೊಡ್ಡಿ, ದೇವರ ದೊಡ್ಡಿ, ಕಾಡನಕುಪ್ಪೆ, ಮುಂತಾದ ಸ್ಥಳಗಳಲ್ಲಿ ಹೆಚ್ಚಾಗಿ ಇವರು ಕಂಡು ಬರುತ್ತಾರೆ (ಸಿದ್ಧಗಂಗಯ್ಯ ಕೆಂಬಾಳು, ೧೯೯೩).

ಇಲ್ಲಿಗರ ಮಹಿಳೆಯರು

ಇಲ್ಲಿಗರ ಮಹಿಳೆಯರು

ನೀಲಗಿರಿಯ ಇರುಳರು ಥರ್ಸ್ಟನ್ ಹೇಳಿರುವಂತೆ ತಮಿಳು ಮಾತನಾಡಿದರೆ, ಕರ್ನಾಟಕದ ಕಾಡು ಪೂಜಾರಿಗಳು ಅಥವ ಇಲ್ಲಿಗರು ಕನ್ನಡದ ಉಪಭಾಷೆಯಂತಿರುವ ಭಾಷೆಯೊಂದನ್ನು ಮಾತನಾಡುತ್ತಾರೆ. ಇಲ್ಲಿಗ ಎಂದರೆ ಇಲಿಯನ್ನು ಕೊಂದು ತಿನ್ನುವವನು ಎಂದು ಅರ್ಥೈಸಬಹುದಾದರೂ, ಇಲಿಯನ್ನು ತಿನ್ನುವುದರಿಂದಲೇ ಇವರಿಗೆ ಈ ಹೆಸರು ಬಂದಿರುವ ಸಾಧ್ಯತೆಗಳು ಬಹಳ ಕಡಿಮೆ. ಕರ್ನಾಟಕದಲ್ಲಿ ವಡ್ಡರು, ಹಕ್ಕಿಪಿಕ್ಕಿಗಳು ಮುಂತಾದ ಸಮುದಾಯಗಳು ಸಹ ಹೊಲಗದ್ದೆಗಳ ಬದುವಿನಲ್ಲಿ ವಾಸಿಸುವ ‘ತ್ವಾಡ’ ಎಂದು ಕರೆಯುವ ಇಲಿಗಳನ್ನು ಹಿಡಿದು ತಿನ್ನುತ್ತಾರೆ. ಕಾಡು ಪೂಜಾರಿಗಳನ್ನು ಇಲ್ಲಿಗರು ಎಂದರೆ ನಿಂದನೆ ಮಾಡಿದಂತೆ ಎಂದು ಇವರ ಭಾವನೆ. ಕಾಡು ಪೂಜಾರಿ ಎನ್ನುವುದೇ ತಮ್ಮ ಜಾತಿ ಎಂದು ಹೇಳಿಕೊಳ್ಳುತ್ತಾರೆ. ಆದರೂ ಕೂಡ ಇಲ್ಲಿಗರು ಎಂಬ ಹೆಸರು ಹೆಚ್ಚು ಬಳಕೆಯಲ್ಲಿದೆ.

ಇರುಳಿಗರಲ್ಲಿ ಕಟ್ಟಿಮನೆ ವಿಭಾಗೀಕರಣ ಮಾಗಡಿ ಸುತ್ತಮುತ್ತಲಿನಲ್ಲಿ ಕಂಡುಬರುತ್ತದೆ. ಆದ್ದರಿಂದ ಇಲ್ಲಿಗರು ಎಂದು, ಇರುಗಳಿರಲ್ಲಿ ಒಂದು ಉಪಜಾತಿ ಎಂದು ಸಿದ್ಧಲಿಂಗಯ್ಯ ವಾದಿಸುತ್ತಾರೆ (ಸಿದ್ಧಲಿಂಗಯ್ಯ ೧೯೯೩).

ಇಲ್ಲಿಗರಲ್ಲಿ ನಾಡಗೌಡ, ಕಟ್ಟಿಗೌಡ, ಕೋಲಕಾರ ಎಂಬ ಶ್ರೇಣಿಕೃತ ಗುಂಪುಗಳಿವೆ. ಈ ಮೂವರೊಳಗೆ ನಾಡಗೌಡನೇ ಹೆಚ್ಚು ಗೌರವಾಧಿಕಾರಗಳನ್ನು ಹೊಂದಿರುತ್ತಾನೆ. ನಾಡಗೌಡನಿಗೆ ಕಟ್ಟಿಗೌಡ ವಿಧೇಯನಾಗಿರುತ್ತಾನೆ. ಕೋಲಕಾರ ಇಬ್ಬರಿಗೂ ಸೇವಕನಂತೆಕೆಲಸ ಮಾಡುತ್ತಾನೆ. ಇವರಲ್ಲಿ ಮುಖ್ಯವಾಗಿ ಎರಡು ಕುಲಗಳಿವೆ. ಅವೆಂದರೆ ಮುಳ್ಳು ಕುಲದವರು ಹಾಗೂ ದೇಶಭಾಗದ ಕುಲ. ಇಲ್ಲಿಗರು ತಮ್ಮ ಪ್ರದೇಶದ ಲಿಂಗಾಯತ, ದಾಸಪ್ಪ ಅಥವಾ ಶ್ರೀ ವೈಷ್ಣವರನ್ನೂ ಧಾರ್ಮಿಕ ವಿಧಿ ಆಚರಣೆಗೆ ಆಹ್ವಾನಿಸುತ್ತಾರೆ. ಕ್ರಮವಾಗಿ ಮುಳ್ಳು ಕುಲದವರಿಗೆ ಲಿಂಗಾಯತ ಗುರುಗಳು, ದೇಶಭಾಗದವರಿಗೆ ದಾಸಪ್ಪ ಗುರು, ವಿಧವಾ ವಿವಾಹ, ಕೂಡಿಕೆ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ. ಇವರು ಕೃಷಿ ಕೂಲಿಗಳಾಗಿ ಜೊತೆಗೆ ಅರಣ್ಯ ಇಲಾಖೆಯ ಕಾಮಗಾರಿಗಳ ದಿನಗೂಲಿಗಳಾಗಿ ಕೆಲಸಮಾಡುತ್ತಿದ್ದಾರೆ. ಇವರಿಗೆ ಆಧುನಿಕ ಶಿಕ್ಷಣ ಹಾಗೂ ಇತರೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಸೌಲಭ್ಯಗಳು ಇನ್ನು ದೊರೆಯಬೇಕಾಗಿದೆ.

ನೋಡಿ:

ಸಿದ್ಧಲಿಂಗಯ್ಯ ಕೆಂಬಾಳು, ೧೯೯೩. ಇಲ್ಲಿಗರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

Mahato S.N. 1977. Tribal Customary law among The Irulars of Tamil Nadu. Anthropological Survey of Indian, Mysore.

Perialwar R. 1978. A Grammar of Irula Language. Anthropological Survey of India.

Perialwar R.1979. Phonology of Irula with Vocabulary.  Anthropological Survey of India, Culcutta

Reddy K.N., 1985. Irulas of Nilgiris: A Study on Anthroplogical Demography, Anthropological Survey of India, Mysore.

Reddy P. Govinda and A. Chellaperumal., 1996. Certain Aspects of Population Structure of Coimbatore Irulas : A case study in Permual Koil Pathy, Tamilnadu.

Anthropological Survey of India, Mysore.

Saheb, S.Y. and B.A. Bhanu., 1984. Demography of the Irular of Tamilnadu, Anthropological Survey of India, Mysore.

Sathyanarayanan C.R. 1985. Kinship Organization among the Irulas of Coimbatore District,  (Unpublished Report) Anthropological Survey of India, Mysore.