ಡಿಗರಲ್ಲಿ ಇರುವ ಇತರೆ ಹಸರುಗಳೆಂದರೆ ಹಳೇಪೈಕ್, ಈಡಿಗ ಹಾಗೂ ಇಳಿಗ. ನಂಜುಂಡಯ್ಯ ಹಾಗೂ ಐಯ್ಯರ್ (೧೯೩೦) ಹೇಳುವಂತೆ ಈಡಿಗರು ಮೈಸೂರಿಗೆ ಆಂಧ್ರದ ರಾಜಮಂಡ್ರಿ ಹಾಗೂ ಪೆನುಕೊಂಡದಿಂದ ಬಂದವರು. ಈಡಿಗ ಎನ್ನುವ ಹೆಸರು ತೆಲುಗು ಪದ ‘ಈಡ್ಚು’ ಎಂಬ ಶಬ್ದದಿಂದ ಬಂದಿದೆ. ಈಡ್ಚು ಎಂದರೆ ‘ಇಳಿಸು’ ಎಂದರ್ಥ. ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ವಾಸವಾಗಿದ್ದಾರೆ. ಕರ್ನಾಟಕದ ಇತರೆ ಜಿಲ್ಲೆಗಳಲ್ಲಿ ಈ ಸಮುದಾಯವನ್ನು ಗುರುತಿಸಬಹುದು.

ನಂಜುಂಡಯ್ಯ ಮತ್ತು ಐಯ್ಯರ್ ಹೇಳುವಂತೆ (೧೯೩೦). ಇವರಲ್ಲಿ ಎರಡು ಹೊರಬಾಂಧವ್ಯ ಕುಲಗಳಿವೆ. ಅವುಗಳೆಂದರೆ ಮಡ್ಡಿ ಹಾಗೂ ಬೆಲ್ಲದ ಎನ್ನುವವು. ಆದರೆ ಇವರಲ್ಲಿ ಮೂರು ಉಪಜಾತಿಗಳಿವೆ. ಮುದ್ದೆ ಈಡಿಗ, ಸಾಸ್ವೆ ಈಡಿಗ ಹಾಗೂ ಆರ್ಯ ಈಡಿಗ. ಈ ಉಪಜಾತಿಗಳ ವಿಂಗಡನೆ ಅವರ ವೃತ್ತಿಯನ್ನು ಆಧರಿಸಿದೆ. ಅವಿಭಕ್ತ ಕುಟುಂಬಗಳು ಇವರಲ್ಲಿ ಸಾಮಾನ್ಯ. ತಂದೆಯ ಆಸ್ತಿಯನ್ನು ಗಂಡು ಮಕ್ಕಳಿಗೆ ಸಮನಾಗಿ ಹಂಚಲಾಗುತ್ತದೆ. ಹಿರಿಯಮಗ ತಂದೆಯ ನಂತರ ವಾರಸುದಾರನಾಗುತ್ತಾನೆ. ಇವರಲ್ಲಿ ಹೊರಬಾಂಧವ್ಯ ಮದುವೆಗಳು ಪ್ರಚಲಿತದಲ್ಲಿವೆ. ಸಮೀಪದ ರಕ್ತ ಸಂಬಂಧಿಗಳಲ್ಲಿ ಮದುವೆಯಾಗಲು ಪ್ರೋತ್ಸಾಹಿಸುತ್ತಾರೆ. ವಧುದಕ್ಷಿಣೆಯನ್ನು ವಸ್ತುಗಳ ರೂಪದಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನೆಗೆ ಅವಕಾಶವಿದೆ. ವಿಚ್ಛೇದನೆ ನಂತರ ಮಕ್ಕಳು ತಂದೆಯ ಬಳಿ ಉಳಿಯುತ್ತಾರೆ. ವಿಧವೆ, ವಿಧುರರ ಹಾಗೂ ವಿಚ್ಛೇದಿತರಿಗೆ ವಿವಾಹವಾಗಲು ಅವಕಾಶವಿದೆ. ಋತುಮತಿಯಾದಾಗ ‘ಹೊಸಿಗೆ’ ಎಂಬ ಕ್ರಿಯಾ ವಿಧಿಯನ್ನು ಆಚರಿಸುತ್ತಾರೆ. ಸತ್ತವರನ್ನು ಹೂಳುತ್ತಾರೆ. ಸೂತಕವು ಹನ್ನೊಂದು ದಿನ ಇರುತ್ತದೆ.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಈಚಲು ಮರದಿಂದ ಮಧ್ಯ ಸಂಗ್ರಹಿಸುವುದು. ಇವರಲ್ಲಿ ವ್ಯವಸಾಯಗಾರರು ಹಾಗೂ ವ್ಯವಸಾಯದ ಕೂಲಿಕಾರರು ಇದ್ದಾರೆ. “ಆರ್ಯ ಈಡಿಗ ಸಂಘ” ಎಂಬ ಇವರ ಕೋಮಿನ ಸಂಘಟನೆಯು ಈಡಿಗರ ಒಳಿತಿಗಾಗಿ ಶ್ರಮಿಸುತ್ತದೆ. ಇವರು ಪೂಜಿಸುವ ದೇವರನ್ನು ಸೂರಬಂಧೇಶ್ವರಿ ಅಥವಾ ಸುರೆಗುಡಿಗೆ ದೇವರು ಎಂದು ಕರೆಯುತ್ತಾರೆ. ಸಾಕಷ್ಟ ಸಂಖ್ಯೆಯಲ್ಲಿ ಈಡಿಗರು ಕೃಷಿಯೇತರ ವೃತ್ತಿಯಲ್ಲಿ ತೊಡಗಿದ್ದಾರೆ. ರಾಜಕೀಯದಲ್ಲಿ ಪ್ರಬಲ ನಾಯಕರು ಇದ್ದಾರೆ. ಇವರು ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ.