ಪ್ಪಾರರನ್ನು ಉಪ್ಪಲಿಗೆ ಶೆಟ್ಟಿಗಳೆಂದು ಕರೆಯುತ್ತಾರೆ. ಇವರರನ್ನು ಸಾಗರವಂಶದವರು, ಗಾವಂಡಿಗಳು, ಮೇಲು ಸಕ್ಕರೆ ಮತ್ತು ಕೆರೆ ಬದಿಯವರು ಎಂದೂ ಕರೆಯುತ್ತಾರೆ. ಉಪ್ಪಾರರು ಎಂಬ ಪದಕ್ಕೆ ಪರ್ಯಾಯವಾಗಿ ಮೇಲು ಸಕ್ಕರೆಯವರು ಎಂಬ ಗೌರವ ಸೂಚಕ ಪದವನ್ನು ಬಳಸುವ ಪದ್ಧತಿ ಇದೆ. ಈ ಸಮುದಾಯದಲ್ಲಿ ‘ಗಾರೆಉಪ್ಪಾರ’, ‘ಸಾದಾಉಪ್ಪಾರ’, ಕಲ್ಲು ಉಪ್ಪಾರ, ಸುಣ್ಣಾಉಪ್ಪಾರ, ಮೊಳೆಉಪ್ಪಾರ ಮತ್ತು ನಾಮೆಉಪ್ಪಾರ ಎಂಬ ಉಪಪಂಗಡಗಳಿವೆ. ಕೆಲವು ವಿದ್ವಾಂಸರುಗಳು ಪಟ್ಟಿ ಮಾಡಿರುವಂತೆ ಉಪ್ಪಾರರಲ್ಲಿ ಕಲ್ಲು ಉಪ್ಪಾರ, ಮಣ್ಣುಉಪ್ಪಾರ, ತೆಲುಗು ಉಪ್ಪಾರರು, ಎಲೆ ಉಪ್ಪಾರರು ಎಂಬ ಮುಖ್ಯ ವಿಭಾಗಗಳು ಇವೆ. ಮೇಲು ಸಕ್ಕರೆಯವರು, ಸಾಗರದವರು, ಸಾಗರ ವಂಶದವರು ಎಂಬ ಒಳಪಂಗಡಗಳು ಇವೆ. ಕಲ್ಲು ಒಡೆಯುವುದು ಮೊದಲಾದ ಕೆಲಸ ಮಾಡುವ ಕಲ್ಲು ಉಪ್ಪಾರರಿಗೂ, ಮಣ್ಣಿನ ಕೆಲಸ ಮಾಡುವ ಮಣ್ಣ ಉಪ್ಪಾರರಿಗೂ ಮತ್ತು ತೆಲುಗು ಉಪ್ಪಾರರಿಗೂ ಜನಿವಾರವಿಲ್ಲವೆಂದು ಹೇಳುತ್ತಾರೆ. ಉಳಿದವರೆಲ್ಲರಿಗೂ ಮೇಲು ಸಕ್ಕರೆಯವರು, ಸಾಗರದವರು ಎಲೆ ಉಪ್ಪಾರರು ಇವರಿಗೆ ಜನಿವಾರವಿದೆ. ಅಂದರೆ ಜನಿವಾರವಿರುವ ಉಪ್ಪಾರರು ಸಾಮಾಜಿಕ ಶ್ರೇಣೀಕರಣದಲ್ಲಿ ಮೇಲಿನವರು ಎಂಬುದೇ ಇಲ್ಲಿನ ಒಟ್ಟು ವಿಚಾರ ಎಂದು ಹಿರೇಮಠ ಎಸ್.ಎಸ್. (೧೯೯೭) ರವರು ತಿಳಿಸುತ್ತಾರೆ.

ಇವರಲ್ಲಿ ಇತ್ತೀಚೆಗೆ ಕೆಲವರು ‘ಭಗೀರಥ’ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇವರು ಕಂಡುಬರುತ್ತಾರೆ. ಕನ್ನಡವನ್ನು ಮಾತನಾಡುವ ಇವರು ಅದೇ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದಲ್ಲಿ ಸುಮಾರು ನಲವತ್ತಾರು ಬೆಡಗುಗಳನ್ನು ಐಯ್ಯರ್ (೧೯೩೦) ಗುರುತಿಸಿದ್ದಾರೆ. ಅವುಗಳೆಂದರೆ ಅಗಿಲಾ, ಅಲ್ಲೆ ಅಂಡಲಾ, ಆನೆ, ಅರಿಷಿಣ, ಅರಸು, ಬೇಲದ, ಬೆಳ್ಳಿ, ಚಂದು, ಛತ್ತಿ ಚಿಲುಮೆ, ದೊಡ್ಡಿಗೌಡ, ಹೊಂಗೆ, ಹೊನ್ನು, ಹುಲಿವನ, ಜೋಗುಳ, ಕಾಗಳೆ,ಕಗ್ಗಲ್ಲಿ, ಕಾಳಗ, ಕರಗೆ, ಕಠಾರಿ, ಕಸ್ತೂರಿ, ಕೆಂಡ, ಕೊತ್ತುಂಬರಿ, ಮುಚ್ಚಳ, ನೌಗರ, ನರಿ, ನೇರಲೆ, ಸಕ್ಕರೆ, ಸಣ್ಣಕ್ಕಿ, ಸಂಟಚ್ಚೆ, ಸೆಟ್ಟಿ, ತಾಳಗ, ತುಪ್ಪ, ಯಾಲಕ್ಕಿ, ಇತ್ಯಾದಿ.

ಇವರಲ್ಲಿ ಒಳಬಾಂಧವ್ಯ ವಿವಾಹವು ಸಮುದಾಯದ ಮಟ್ಟದಲ್ಲೂ ಮತ್ತು ಹೊರಬಾಂಧವ್ಯ ವಿವಾಹವು ಕುಲದ ಮಟ್ಟದಲ್ಲೂ ರೂಢಿಯಲ್ಲಿದೆ. ಸೋದರತ್ತೆ, ಸೋದರಮಾವ ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿಯಿದೆ. ಪಾರಂಪರಿಕವಾಗಿ ಕಲ್ಲಿನ ಕೆಲಸ, ಕಲ್ಲುಕಟ್ಟುವ ಕೆಲಸ, ಗಾರೆಕೆಲಸ (ಮನೆಕಟ್ಟುವ) ಹಾಗೂ ವ್ಯವಸಾಯವನ್ನು ಅವಲಂಬಿಸಿದ್ದಾರೆ. ಇನ್ನು ಕೆಲವರು ಜೀವನಾಧಾರಕ್ಕಾಗಿ ಶ್ರಮಿಕರಾಗಿ ದುಡಿಯುತ್ತಿದ್ದಾರೆ. ವಿವಾದಗಳನ್ನು ಬಗೆಹರಿಸಲು ಉಪ್ಪಾರರು ಐದು ಚುನಾಯಿತ ನಾಯಕರುಗಳನ್ನು ಸೇರಿದ ‘ಯಜಮಾನರು’ ಎಂಬ ಸಮಿತಿಯನ್ನು ಪ್ರತಿ ಗ್ರಾಮದಲ್ಲಿ ಹೊಂದಿರುತ್ತಾರೆ. ಈ ಸಮುದಾಯವು ರಾಜ್ಯ ಮಟ್ಟದಲ್ಲಿಯು ಸಹ ಸಂಘಟನೆಯನ್ನು ಹೊಂದಿರುತ್ತದೆ. ಉತ್ತರ ಕರ್ನಾಟಕದ ಮೊಳೆ ಉಪ್ಪಾರರು ಲಿಂಗಾಯತೀಕರಣ ಗೊಂಡು ಜಂಗಮ ಅರ್ಚಕರನ್ನು ತಮ್ಮ ಧಾರ್ಮಿಕ ವಿಧಿ ಆಚರಣೆಗೆ ಆಮಂತ್ರಿಸುತ್ತಾರೆ. ಆಧುನಿಕ ಶಿಕ್ಷಣ, ವೈದ್ಯಕೀಯ ಇತರ ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನವನ್ನು ಇವರು ಪಡೆಯುತ್ತಿದ್ದರೆ.

ನೋಡಿ :

ಹಿರೇಮಠ. ಎಸ್.ಎಸ್., ೧೯೯೭. ಉಪ್ಪಾರರು, ಹರಪನಹಳ್ಳಿ ತಾಲೂಕು ಉಪ್ಪಾರರ ನೌಕರರ ಸಂಘ, ಹರಪನಹಳ್ಳಿ.

ರಾಮಪ್ಪ.ಡಿ.ಎಸ್. (ಗೌ.ಸಂ) ೧೯೯೯. ಭಗೀರಥ ಸಂಕಲ್ಪ, ಭಗೀರಥ ಉಪ್ಪಾರ ಧಾರ್ಮಿಕ ಟ್ರಸ್ಟ್, ಬೆಂಗಳೂರು

ರಮೇಶ. ಸ.ಚಿ., ೧೯೯೭. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಾರರು, ಕನ್ನಡ ವಿಶ್ವವಿದ್ಯಾಲಯಕ್ಕೆ ಸಿದ್ಧಪಡಿಸಿದ ಪಿ.ಎಚ್.ಡಿ ಮಹಾಪ್ರಬಂಧ, ಅಪ್ರಕಟಿತ ಕನ್ನಡ ವಿಶ್ವವಿದ್ಯಾಲಯ, ಹಂಪಿ.