ರವ ಎನ್ನುವುದು ಕೊಡಗಿನ ಬುಡಕಟ್ಟು ಸಮುದಾಯವೊಂದರ ಹೆಸರು. ಕೊಡವ ಭಾಷೆಯಲ್ಲಿ “ಎರ” ಎಂದರೆ ಬೇಡು ಎಂದರ್ಥ. ‘ಎರವ’ ಎಂದರೆ ‘ಬೇಡುವವನು’ ಎಂಬ ಅರ್ಥ ಬರುತ್ತದೆ. ಆದುದರಿಂದ ಈ ಸಮುದಾಯಕ್ಕೆ ‘ಎರವರು’ ಎಂದು ಕರೆದಿರಬೇಕು. ಎರವರು ಕೊಡಗಿನಲ್ಲಿ ಗುಲಾಮರಾಗಿದ್ದವರು ಎಂದು ಕೊನ್ನೊರ್ (೧೮೮೦)ಗುರುತಿಸಿದ್ದಾರೆ. ಕೆಲವು ದಾಖಲೆಗಳ ಪ್ರಕಾರ ಎರವರು ಕೇರಳದ ವೈನಾಡಿನಿಂದ ಕೊಡಗಿಗೆ ವಲಸೆ ಬಂದಿರುವರು ಎಂಬುದನ್ನು ಸೂಚಿಸುತ್ತದೆ. ಇತ್ತೀಚೆಗೆ ಕೆಲವು ಸಂಶೋಧಕರು ಇವರನ್ನು ಕೊಡಗಿನ ಮೂಲ ನಿವಾಸಿಗಳು ಎಂದೂ ಗುರುತಿಸಿದ್ದಾರೆ. ಕೃಷ್ಣಯ್ಯ (೧೯೭೪) ಇವರು ಕ್ರಿಸ್ತಶಕೆಯ ಪೂರ್ವದಲ್ಲಿಯೇ ಎರವರು ವೈನಾಡಿನಿಂದ ಕೊಡಗಿಗೆ ಬಂದಿರಬಹುದೆಂದೂ ಊಹಿಸುತ್ತಾರೆ.

ಈ ಸಮುದಾಯದಲ್ಲಿ ಹಲವಾರು ಉಪಪಂಗಡಗಳಿವೆ, ಅವುಗಳಲ್ಲಿ ಪಣಿಯ, ಪಂಜಿರಿ, ಕಾಕ ಮುಂತಾದವುಗಳು. ಆದರೆ, ಈಗ ಕೊಡಗಿನಲ್ಲಿ ಎರಡು ಗುಂಪಿನ ಎರವರು ಮಾತ್ರ ಇರುವರು ಪಣಿಯ ಎರವರು ಮತ್ತು ಪಂಜಿರಿ ಎರವರು.

೧೯೦೧ರ ಜನಗಣತಿ ಎರವರ ‘ಭಾಷೆ’ ಬುಡಕಟ್ಟಿನದೆಂದು, ಮಲಯಾಳಂನ ಉಪಭಾಷೆ ಎಂತಲೂ ಗುರುತಿಸುತ್ತದೆ. ಭಾರತದ ಭಾಷೆ ಪರಿವೀಕ್ಷಣೆ, ಎರವ ಭಾಷೆಯನ್ನು ಮಲಯಾಳಂನ ಉಪಭಾಷೆ ಎಂದು ಪರಿಗಣಿಸುತ್ತದೆ. ಎರವ ಭಾಷೆಯು ಕನ್ನಡ, ಕೊಡವ ಮತ್ತು ಮಲಯಾಳಂ ಭಾಷೆಯ ಸುತ್ತಮುತ್ತಲಿನಲ್ಲಿದೆ. ಆದರೂ ಇದು ತನ್ನದೇ ಆದಂತಹ ವಿಶಿಷ್ಟವಾದ ಭಾಷಾ ರಚನೆಯನ್ನು ಹೊಂದಿದೆ. ಇದು ನೇರವಗಿ ಕನ್ನಡ, ಕೊಡವ, ಮಲೆಯಾಳಂ, ಭಾಷಿಗರಿಗೆ ಅರ್ಥವಾಗುವುದಿಲ್ಲ. ಇದು ದಕ್ಷಿಣ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಪ್ರತ್ಯೇಕವಾದಂತಹ ಭಾಷೆ.

ಪಣಿಯ ಎರವರಲ್ಲಿ ಇಪ್ಪತ್ತೊಂದು ಬೆಡಗುಗಳನ್ನು, ಪಂಜರಿ ಎರವರಲ್ಲಿ ಇಪ್ಪತ್ತೆಂಟು ಬೆಡಗುಗಳನ್ನು ಗುರುತಿಸಬಹುದು. ಒಂದೇ ಬೆಡಗಿನೊಳಗೆ ವಿವಾಹ ಸಾಧ್ಯವಿಲ್ಲ. ಪಣಿಯ ಎರವರು ಮತ್ತು ಪಂಜರಿ ಎರವರ ನಡುವೆ ವಿವಾಹ ಸಂಬಂಧ ಇಲ್ಲ. ಪಣಿಯ ಎರವರಲ್ಲಿನ ಬೆಡಗುಗಳಿಂದರೆ ಪಣಿ ಗಂಡಿಯೆ, ಕುವ್ವಳಿಯೆ, ಇಳಂಗಲಡೆ, ಚುಂಡೆಪಟಿಯ, ಬೊಳ್ಳಿಎಣ್ಣೆ, ಚುಳ್ಯೋಡೆ, ಕೇವಣೆಯ, ಕಲ್ಲೇರಿಯ, ಅಂಜಿಲಿಯೆ, ಕಂಡಟೆ, ಚೆಂಬಂಡಿಯ, ಪಂಜಿಯೊಂಟೆ, ಬೇಂಗೆರಿಯ, ಕಂಬಳಾಳೆ, ಮಂಗಳಿಯೆ, ಕೊತ್ತಳಿಯೆ, ತುವೆರೊಂಬೆ, ಚೊಕ್ಕಂಬತ್ತಿ, ಪೂದಿರೆ, ಅರಿಲೆಯೇ ಮುಂತಾದವರು.

ಎರವರು ತಮ್ಮದೇ ಆದ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಿಕ ಆಡಳಿತವನ್ನು ಹೊಂದಿದ್ದಾರೆ. ಪಣಿಯ ಎರವ ಮತ್ತು ಪಂಜಿರಿ ಎರವ ಕುಟುಂಬ ವ್ಯವಸ್ಥೆ ಸಂಪೂರ್ಣವಾಗಿ ಭಿನ್ನವಾಗಿದೆ. ಪಣಿಯ ಎರವರದು ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಾದರೆ, ಪಂಜರಿ ಎರವರದು ಮಾತೃಪ್ರಧಾನ ಕುಟುಂಬ ವ್ಯವಸ್ಥೆ. ಪಂಜಿರಿ ಎರವರ ಮುಖ್ಯಸ್ಥ ‘ಕಜೌಲಾಡಿ’. ಪಣಿಯ ಎರವರ ಸಂಘಟನೆಯ ಇಬ್ಬರು ಮುಖ್ಯಸ್ಥರೆಂದರೆ ‘ಮೂಫ’ ಮತ್ತು ‘ಚಿಮ್ಮಿ’ ಈ ಮುಖ್ಯಸ್ಥರುಗಳೂ ಮತ್ತು ಹಿರಿಯರು ಸೇರಿದ ಸಮಿತಿಯು ಸಮುದಾಯದ ಬಗೆಗಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ವೈಯಕ್ತಿಕ ಜಗಳಗಳು, ಕುಟುಂಬದ ಕಲಹಗಳೂ ಈ ಸಮಿತಿಯ ಮುಂದೆ ಬರುತ್ತವೆ. ವಿಚಾರಣೆಯ ನಂತರ ದಂಡವನ್ನು ಅಗತ್ಯವಿದ್ದಲ್ಲಿ ವಿಧಿಸಬಹುದು.

ಪಣಿಯ ಎರವರು ಹುಡುಗಿ ವಯಸ್ಸಿಗೆ ಬರುವುದಕ್ಕೆ ಮುಂಚೆ, ಪಂಜಿರಿ ಎರವರು ಹುಡುಗಿ ವಯಸ್ಸಿಗೆ ಬಂದ ನಂತರ ಮದುವೆ ಮಾಡಲು ಇಷ್ಟಪಡುತ್ತಾರೆ. ಎರವರಲ್ಲಿ ನಾಲ್ಕು ರೀತಿಯ ಮದುವೆಗಳನ್ನು ಕಾಣಬಹುದು. ಅವುಗಳೆಂದರೆ ಹೊಂದಾಣಿಕೆ ಮದುವೆ, ಆಯ್ಕೆಯ ಮದುವೆ, ಪಲಾಯನ ಮದುವೆ, ಬಲತ್ಕಾರದ ಮದುವೆ. ಪಣಿಯ ಮತ್ತು ಪಂಜರಿ ಎರವರಲ್ಲಿ ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಎರವರಲ್ಲಿ ವಿವಾಹ ವಿಚ್ಛೇದನಕ್ಕೂ ಅವಕಾಶವಿದೆ. ಗಂಡ ಹೆಂಡತಿಯನ್ನು ಬಿಡುವುದು, ಹೆಂಡತಿ ಗಂಡನನ್ನು ಬಿಡುವುದಕ್ಕಿಂತಲೂ ಸರಳ ಮತ್ತು ಸುಲಭ. ಈ ವಿಷಯಗಳು ಹಿರಿಯರ ಸಮಿತಿ ಮುಂದೆ ಬಂದು, ವಿಚಾರಣೆಗೆ ಒಳಪಡುತ್ತವೆ. ವಿಚ್ಛೇದನ ಸಮಿತಿಯಿಂದಲೇ ತೀರ್ಮಾನವಾಗಬೇಕು. ಆಧುನಿಕ ಸಂಸ್ಥೆಗಳ ಪ್ರಭಾವ ಇತ್ತೀಚಿಗೆ ಈ ಸಮುದಾಯದ ಮೇಲೆ ಉಂಟಾಗುತ್ತಿದೆ ಎಂದು ಹೇಳಬಹುದು. ಇವರ ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದ ಅಗತ್ಯ ಇದೆ.

ನೋಡಿ :

ಹರೀಶ್, ಪಿ.ಎನ್., ೧೯೯೩. ಎರವರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,  ಬೆಂಗಳೂರು.

ಮಲ್ಲಿಕಾರ್ಜುನ, ಭ., ೧೯೯೮. ‘ಎರವರು’, ಎಚ್.ಜಿ.ಲಕ್ಕಪ್ಪಗೌಡ (ಸಂ), ಕರ್ನಾಟಕದ ಬುಡಕಟ್ಟುಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

Census of India, 1981. The Yeravas of Kodagu  Ethnographic Notes and Special Studies on Sheduled Castes and Sheduled Tribes, Series-9, Karnataka, Par-XI Chandra Ramesh and S.K.Bhattacharya, 1983. Tribes in Contemoprary India : The Yaravas of Karnataka  (Unpublished Report) Anthropological Survey of India, Mysore.

Harish P.N., 1992. ‘The Yeravas of Coorg : A Socio Cultural Study, Vol.NM. LIV’. Mysore University Platinum Jublies Special Issue

Holland T.H., 1901. ‘The Coorgs and Yeravas and Ethnological Contrast’, Journal of the Asiatic Society of Bengal.

Krishnayya. D.N., 1974. Kodagina Ithihas, Prasaranga University of Mysore, Mysore.

Mallikarjuna B., 1993. A Descriptive Analysis of Yerava, Central Institute of Indian Languages, Mysore.