ಕ್ಕಲಿಗ ಕರ್ನಾಟಕದ ಒಂದು ಪ್ರಮುಖ ಸಮುದಾಯ. ಒಕ್ಕಲಿಗ ಎಂದರೆ ಸಂಸಾರಿ,ಕುಟುಂಬ ಜೀವಿ, ಬೇಸಾಯಗಾರ ಎಂದರ್ಥ. ಇವರು ಕೃಷಿಕರು. ಒಕ್ಕಲಿಗ ಎಂಬ ಪದ ಕರ್ನಾಟಕದಲ್ಲಿ ಗೌಡರು ಎಂಬ ಸಂಕುಚಿತ ಅರ್ಥಕ್ಕೆ ಒಳಗಾಗಿದೆ. ವಿಶಾಲಾರ್ಥದಲ್ಲಿ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಒಕ್ಕಲಿಗರಿದ್ದಾರೆ. ಒಕ್ಕಲಿಗ ಪದಕ್ಕೆ ‘ಗೌಡ’ ಎಂಬ ಪ್ರತ್ಯಯ ಬಳಕೆಗೆ ಬಂದು ಅದು ಒಂದು ಸಮುದಾಯವಾಗಿ ರೂಪುಗೊಂಡಿದೆ. ಈ ಪದವು ಪ್ರಾಚೀನ ಕಾಲದಿಂದಲೇ ರೂಢಿಯಲ್ಲಿತ್ತೆಂದು ಕೆಲವು ಆದಾರಗಳಿಂದ ತಿಳಿದುಬಂದಿದೆ. ಗೌಡ ಎಂದರೆ ಯಜಮಾನ, ನಾಯಕ, ಒಡೆಯ ಎಂದರ್ಥ. ಗಾವುಡ, ಗೌಡ, ರೆಡ್ಡಿ ಎಂದೂ ಗೌಡರನ್ನು ಕರೆಯುತ್ತಾರೆ. ಆದರೆ ಎಲ್ಲ ಕೃಷಿಕ ಸಮುದಾಯಗಳು ಒಕ್ಕಲಿಗ ಸಮುದಾಯದವರಾಗಿರಬೇಕು ಎಂದೇನಿಲ್ಲ.

ಪ್ರಾಚೀನ ಕಾಲದಲ್ಲಿ ಗೌಡರನ್ನು ಗೌಳರು, ಗೋವಳರು, ವಲ್ಲಭರು ಎಂದು ಕರೆಯುತ್ತಿದ್ದರು. ಗೌಡರು ಮಹಾಭಾರತ ಕಾಲದಲ್ಲಿ ಇದ್ದರೆಂದು ಹೇಳಲಾಗುತ್ತದೆ. ಈ ವಂಶಕ್ಕೆ ಸೇರಿದವರು ಕರ್ನಾಟಕವನ್ನು ಆಳಿದ ಪ್ರಸಿದ್ಧ ರಾಜವಂಶಗಳಾದ ಗಂಗರು, ರಾಷ್ಟ್ರಕೂಟರು ಎಂದು ಹೆಸರು ಪಡೆದರು ಎಂದು ಇತಿಹಾಸತಜ್ಞರು ಗುರುತಿಸುತ್ತಾರೆ. ಒಕ್ಕಲಿಗರಲ್ಲಿ ಹಲವಾರು ಒಳಪಂಗಡಗಳಿವೆ. ಅವುಗಳೆಂದರೆ ಗಂಗಡಿಕಾರ, ಮರಸು, ಮುಸುಕು, ಕುಂಚಟಿಗ, ಹಳ್ಳಿಕಾರ, ನೊಣಬ, ರೆಡ್ಡಿ, ಸರ್ಪ, ಚೋಳ, ಸೆಟ್ಟಿಗಾರ, ಭಂಟರು, ಮಲೆ ಗೌಡರು, ಉಪ್ಪಿನ ಕೊಳಗ, ಮಾಳವ, ಎತ್ತಿನ ಕುಂಚಟಿಗ, ಮಾಣಗ, ತುಳಿವ, ಅಂಗಲೀಕ, ತಂಡಗೌಡ, ಕಾಕಿನಾಟ, ಪಾಂಡರು, ನಾಡವರು, ಒಕ್ಕಲಿಗರೆಡ್ಡಿ, ಬೆಳ್ಳಿ ಒಕ್ಕಲಿಗ, ಗೌಂಡರು, ಹಾಲು ಒಕ್ಕಲಿಗ, ಕಮ್ಮೆನಾಡು, ಹಲೇಒಕ್ಕಲು, ಕಾಮ ಒಕ್ಕಲು, ನಾಮಧಾರಿ, ದಾಸಒಕ್ಕಲು, ದೊಡ್ಡಗಂಟೆ ಇತ್ಯಾದಿ. ಈ ಒಳಪಂಗಡಗಳು ಸಮಕಾಲೀನ ಸಂದರ್ಭದಲ್ಲಿ ಕಂಡುಬರುವುದು ವಿರಳ. ಇವುಗಳನ್ನು ಕೆಲವು ವಿದ್ವಾಂಸರು ಅವರ ಧಾರ್ಮಿಕ ಆಚರಣೆ, ಕಸುಬು ಇತ್ಯಾದಿಗಳನ್ನು ಆಧರಿಸಿ ಉಪಪಂಗಡ ಅಥವಾ ಉಪಜಾತಿಗಳೆಂದು ಗುರುತಿಸಿದ್ದಾರೆ. ಇವುಗಳಲ್ಲಿ ಕೆಲವನ್ನು ಮಾತ್ರ ವಿವರಿಸಲು ಪ್ರಯತ್ನಿಸಲಾಗಿದೆ.

 

ಒಕ್ಕಲಿಗ : ಅರೆಭಾಷೆಗೌಡ

ರೆಭಾಷೆಗೌಡ ಸಮುದಾಯದ ಜನರು ಮುಖ್ಯವಾಗಿ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತಾರೆ. ಇವರು ವಿಜಯನಗರದಿಂದ ದಕ್ಷಿಣ ಕನ್ನಡಕ್ಕೆ ಇಕ್ಕೇರಿ ರಾಜ್ಯದ ಮೂಲಕ (ಶಿವಮೊಗ್ಗ ಜಿಲ್ಲೆ) ವಲಸೆ ಬಂದವರೆಂದು ಹೇಳಿಕೊಳ್ಳುತ್ತಾರೆ. ನಂತರ ೧೮ ಹಾಗೂ  ೧೯ನೇ ಶತಮಾನದ ಮಧ್ಯಾವಧಿಯಲ್ಲಿ ಕೊಡಗಿಗೆ ವಲಸೆ ಬಂದಿರುವುದಾಗಿ ನಂಬಿರುವರು. ಇವರು ಕನ್ನಡದ ಒಂದು ಉಪಭಾಷೆಯಾದ ‘ಅರೆಭಾಷೆ’ಯನ್ನು ತಮ್ಮ ಸಂಬಂಧಿಕರ ನಡುವೆ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ತುಳು ಹಾಗೂ ಕೊಡವ ಭಾಷೆಗಳನ್ನು ಮಾತನಾಡಬಲ್ಲವರಾಗಿದ್ದಾರೆ.

ಅರೆಭಾಷೆಗೌಡರಲ್ಲಿ ಸುಮಾರು ಹದಿನೆಂಟು ಹೊರಬಾಂಧವ್ಯ ಬಳ್ಳಿಗಳಿವೆ – ನಂದರ, ಹೆಮ್ಮೆನ, ಶೆಟ್ಟಿ/ಹುಲಗುಂಡರ, ಕಬರ, ಚಾಲ್ಯರ, ಮೊದಲಿಯಾರ, ಬಂಗಾರ, ಗೌಡರ, ಗೊಲಿ, ಸಾಲೆ, ಬಲಸಣ್ಣ, ಕರಬನ್ನೆ, ಕ್ಪೊಡನ್ನೆ, ನಾಯರ, ಚೆಟ್ಟರ, ಇತ್ಯಾದಿ. ಇವರಲ್ಲಿ ಸೋದರ ಸಂಬಂಧಿ ಮದುವೆಗೆ ಅವಕಾಶವಿದೆ. ಇತ್ತೀಚೆಗೆ ಇವರು ಒಕ್ಕಲಿಗರ ಜೊತೆ ವಿವಾಹ ಸಂಬಂಧವನ್ನು ಬೆಳೆಸುತ್ತಿದ್ದಾರೆ. ವಿಧುರ, ವಿಧವೆಯರ ಹಾಗೂ ವಿವಾಹ ವಿಚ್ಛೇದಿತ ವಿವಾಹಕ್ಕೆ ಅವಕಾಶವಿದೆ. ಸ್ತ್ರೀಯರು ವ್ಯವಸಾಯ, ಪಶುಸಂಗೋಪನೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹಿರಿಯ ಗಂಡುಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಮದುವೆಯ ಮುಖ್ಯ ಆಚರಣೆಗಳಲ್ಲಿ ಎಣ್ಣೆ ಹಾಗೂ ಅರಿಶಿಣಸ್ನಾನ, ದೇವತಾ ಕಾರ್ಯ, ಹಾರ ಬದಲಾಯಿಸಿಕೊಳ್ಳುವುದು,  ಧಾರೆಮುಹೂರ್ತ, ತಾಳಿಕಟ್ಟುವುದು ಇತ್ಯಾದಿ ಇರುತ್ತವೆ. ಶವವನ್ನು ಸುಟ್ಟು ಮೂಳೆಗಳನ್ನು ಕಾವೇರಿ ನದಿಯಲ್ಲಿ ಬಿಡುತ್ತಾರೆ.

ವ್ಯವಸಾಯ ಇವರ ಸಾಂಪ್ರದಾಯಿಕ ವೃತ್ತಿ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವೃತ್ತಿಗಳನ್ನು ಮಾಡುತ್ತಿದ್ದಾರೆ. ಇವರು ವೆಂಕಟೇಶ್ವರ, ಮಂಜುನಾಥ, ಪ್ರಾಂತ್ಯದ ದೇವತೆಗಳಾದ ಭಗವತಿ, ಕಾವೇರಿ ಇತ್ಯಾದಿ ದೇವತೆಗಳನ್ನೂ ಪೂಜಿಸುತ್ತಾರೆ. ಯುಗಾದಿ, ಸಂಕ್ರಮಣ, ಹುತ್ತರಿ ಇತ್ಯಾದಿ ಹಬ್ಬಗಳನ್ನು ಮುಖ್ಯವಾಗಿ ಆಚರಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸ, ಬ್ಯಾಂಕ್ ಹಾಗೂ ಕೆಲವು ಅಭಿವೃದ್ಧಿ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಅರೆಭಾಷೆ ಗೌಡರು ಕೊಡಗರಿಗೆ ಹೋಲಿಸಿದರೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ.

 

ಒಕ್ಕಲಿಗ : ಕುಂಚಟಿಗ

ಕುಂಚಟಿಗರು ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು, ಚಾಮರಾಜನಗರ, ಮೈಸೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಇದ್ದಾರೆ. ಉತ್ತರ  ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿರಳವಾಗಿ ಕಂಡುಬರುತ್ತಾರೆ. ಇದಲ್ಲದೆ ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ, ತಮಿಳುನಾಡಿನ ಕೊಯಮತ್ತೂರು, ಮಧುರೈ, ನೀಲಗಿರಿ ಮುಂತಾದ ಜಿಲ್ಲೆಗಳಲ್ಲಿ ಕುಂಚಟಿಗರಿದ್ದಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರಲ್ಲಿ ಕೆಲವು ಹನ್ನೆರಡನೇ ಶತಮಾನದಲ್ಲಿ ವೀರಶೈವ ಅನುಯಾಯಿಗಳಾಗಿ ಲಿಂಗಾಯತ ಉಪ ಪಂಗಡಗಳಾಗಿ ರೂಪಗೊಂಡಿರುವುದು ತಿಳಿಯುತ್ತದೆ. ಕುಂಚುಟಿಗರು ತಮ್ಮ ಪೂರ್ವಜರ ಹೆಸರಿನಲ್ಲಿ ನಲವತ್ತೆಂಟು ಬೆಡಗುಗಳಾಗಿ ವಿಂಗಡನೆಗೊಂಡಿದ್ದಾರೆ. ಅವುಗಳೆಂದರೆ ಜಾನಕಲ್ಲೋರು, ಉಂಡೇನವರು, ಅರಸನವರು, ಜಲ್ಲೇನವರು, ಹಾವಿನವರು, ರಾಗೇನವರು, ಒಳಕಲ್ಲಿನವರು, ಕರಡೇನವರು, ಗರಿಕೆಯವರು, ಸಾರಂಗದವರು, ಮಾಯೋರರು, ರೊದ್ದದವರು, ಎಲೆಯವರು, ಕಂಬಳಿಯವರು, ಮನನವರು, ಮ್ಯಾಣಿನವರು, ಕಾಗೇನವರು, ಬೆಳ್ಳೆನವರು, ಕಠಾರಿಯವರು, ಅಂಡೆನವರು, ಚೀರಿಗೆಯವರು, ಕೊಗ್ಗೆನವರು, ದಾಸಲೇನವರು, ಕಕ್ಕೇನವರು, ಅಟ್ಟೇನವರು, ಸಾವಂತದವರು, ಮಿಸಲೇನವರು, ಉಳ್ಳೇನವರು, ಜರಿಯವರು, ಗೌಳಿಯವರು, ಬಡನವರು, ರಾಹುತದವರು, ಹುತ್ತದವರು, ಗೂಚೀನವರು, ಎರಡುಕೆರೆಯವರು, ಹಾಲೇನವರು, ಸೊರೇನವರು, ಗುಡಿನವರು, ಬಸಲೇನವರು, ಎಮ್ಮೆನವರು, ಹುಳಿಯರುನವರು, ಯಕ್ರೀನವರು, ಶೆಟ್ಟಿನವರು, ಗೋಣಿನವರು, ಅಲ್ಬೇನವರು ಇತ್ಯಾದಿ (ವೆಂಕಟೇಶ್ ಮೂರ್ತಿ ೧೯೮೮). ಮೇಲ್ಕಂಡ ಬೆಡಗುಗಳು ಅಥವಾ ಕುಲಗಳನ್ನು ವಿಶೇಷವಾಗಿ ವಿವಾಹದ ಸಂದರ್ಭದಲ್ಲಿ ಅವಶ್ಯಕವಾಗಿ ಎಲ್ಲರೂ ನೋಡುತ್ತಾರೆ.

ಇವುಗಳಲ್ಲಿ ಕೆಲವು ಗುಂಪುಗಳನ್ನು ಅಣ್ಣ, ತಮ್ಮಂದಿರಂತೆಯೇ ಪರಿಗಣಿಸುತ್ತಾರೆ. ಹೀಗೆ ಪರಿಗಣಿಸಿದ ಗುಂಪಿನ ಬೆಡಗುಗಳಲ್ಲಿ ವಿವಾಹವಾಗುವುದು ಹಾಗೂ ಒಂದೇ ಬೆಡಗಿನಲ್ಲಿ ವಿವಾಹವಾಗುವುದು ನಿಷಿದ್ಧ. ಈ ಬೆಡಗುಗಳ ಸಹೋದರತ್ವವನ್ನು ವಧುವರರ ತಂದೆಯ ಬೆಡಗುಗಳಿಂದ ನೋಡುವುದಲ್ಲದೆ, ಅವರ ತಾಯಂದಿರ ಬೆಡಗುಗಳಿಗೂ ನೋಡುತ್ತಾರೆ. ವಿಚ್ಛೇದನ ಅಪರೂಪವಾಗಿದ್ದು ವಿಧವಾ ವಿವಾಹವು ಇತ್ತೀಚೆಗೆ ಕಂಡು ಬರುತ್ತದೆ. ವಿಧುರರು ವಿವಾಹವಾಗಬಹುದು. ಭೂಮಾಲೀಕರ ಸಮುದಾಯವಾದ ಕುಂಚಟಿಗರು ವ್ಯವಸಾಯದಲ್ಲಿ ನಿರತರಾಗಿದ್ದಾರೆ. ವ್ಯವಸಾಯದೊಡನೆ ಇವರು ವ್ಯಾಪಾರ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಪ್ರಾಣಿಸಾಕಣಿಕೆ, ಸ್ವಯಂ-ಉದ್ಯೋಗ, ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ.

ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ನೋಡಿಕೊಳ್ಳಲು ರಾಜ್ಯ ಮಟ್ಟದ ಸಂಘಟನೆಗಳನ್ನು ಹೊಂದಿದ್ದಾರೆ. ಇವರು ಮಾರಿ, ಮುದ್ದಮ್ಮ, ಕರಿಯಮ್ಮ, ಚೌಡಮ್ಮ, ಮುನೇಶ್ವರ, ವಿಷ್ಣು ಮತ್ತು ಶಿವನನ್ನು ಪೂಜಿಸುತ್ತಾರೆ. ಈ ಸಮುದಾಯವು ವ್ಯಾಪಾರಿಗಳು, ಆಡಳಿತಗಾರರು, ವೈದ್ಯರು ಹಾಗೂ ರಾಜ್ಯಮಟ್ಟದ ರಾಜಕೀಯ ನಾಯಕರನ್ನು ಹೊಂದಿದೆ. ಆಧುನಿಕ ಶಿಕ್ಷಣ, ವೈದ್ಯಕೀಯ, ಕೃಷಿ, ಇತ್ಯಾದಿ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸಮುದಾಯದ ಜನರು ಹೊಂದಿ, ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

 

ಒಕ್ಕಲಿಗ : ಗಂಗಡಿಕಾರ

ಗಂಗಡಿಕಾರ ಎಂಬುದು ‘ಗಂಗವಾಡಿ’ಯ ಸಂಕ್ಷಿಪ್ತ ರೂಪವಾಗಿದೆ. ಗಂಗಡಿಕಾರ ಶಬ್ದ ನಿಷ್ಪತ್ತಿಯನ್ನು ಹೀಗೆ ಹೇಳಬಹುದು-ಗಂಗರ ರಾಜಧಾನಿ ಯಾದ ಗಂಗವಾಡಿ ಪ್ರದೇಶದಲ್ಲಿ ವಾಸಿಸುವ ಒಕ್ಕಲಿಗ ಸಮುದಾಯದವರು ಗಂಗಡಿಕಾರ ಎಂದು ಕರೆದುಕೊಂಡಿರಬಹುದು. ತಲಕಾಡಿನಲ್ಲಿ ರಾಜ್ಯ ಆಳೀದ ಗಂಗರಸರ ಸಂಕೇತವಾಗಿ ಅಲ್ಲಿನ ಒಕ್ಕಲಿಗ ಸಮುದಾಯದವರು ಗಂಗಡಿಕಾರ ಎಂದೂ ಕರೆದುಕೊಂಡಿರಬಹುದು. ಗಂಗರಸರು ಮೂಲತಃ ಒಕ್ಕಲಿಗರು ಎಂಬುದನ್ನು ಅನೇಕ ಐತಿಹಾಸಿಕ ಆಧಾರಗಳು ಹೇಳುತ್ತವೆ. ಇವರಲ್ಲಿ ಬುಜ್ಜಿನಿಗೆ ಹಾಗೂ  ಪೆಟ್ಟಿಗೆ ಎಂಬ ಎರಡು ಉಪಪಂಗಡಗಳನ್ನು ಗುರುತಿಸಬಹುದು. ಮಂಡ್ಯ, ಹಾಸನ, ಮೈಸೂರು, ಬೆಂಗಳೂರು, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕೇಂದ್ರೀಕೃತವಾಗಿದ್ದಾರೆ. ಈ ಸಮುದಾಯವು ಪಿತೃ ನಡವಳಿಯ ಹೊರಬಾಂಧವ್ಯ ಬೆಡಗುಗಳನ್ನು ಹೊಂದಿದೆ. ಅವುಗಳಲ್ಲಿ ಹದಿಮೂರು ಬೆಡಗುಗಳು ತಿಳಿದು ಬಂದಿವೆ – ಅಳವಿ, ಆನೆ, ಆವಿ, ಬಚ್ಚೆ, ಹಾಲ, ಬೆಳ್ಳೆ, ಚಂದ್ರ, ಚಿನ್ನಾಡ, ಎಮ್ಮೆ, ಗುಡಿ, ಹೊಲೂರು, ಹೂವು ಮತ್ತು ಕಲ್ಲಿ. ಇವರಲ್ಲಿ ಸೋದರತ್ತೆ, ಸೋದರಮಾವ ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿಯಿದೆ. ವಿಚ್ಛೇದನೆ, ಪುನರ್‌ವಿವಾಹಗಳಿಗೆ ಅವಕಾಶವಿದೆ. ಈ ಸಮುದಾಯದ ಜನರು ಆದಿ ಚುಂಚನಗಿರಿ ಮಠಕ್ಕೆ ನಡೆದುಕೊಳ್ಳುತ್ತಾರೆ. ಪಾರಂಪರಿಕವಾಗಿ ಇವರು ಬೇಸಾಯಗಾರರು, ಪ್ರಾಣಿ ಸಾಕಾಣಿಕೆ, ರೇಷ್ಮೆ ಸಾಕಣೆ, ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಸ್ವಯಂ-ಉದ್ಯೋಗ ಮತ್ತು ಶ್ರಮಿಕ ಕೆಲಸ ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ಈ ಸಮುದಾಯವು ‘ಒಕ್ಕಲಿಗರ ಸಂಘ’ ಎಂಬ ರಾಜ್ಯ ಮಟ್ಟದ ಸಂಘಟನೆಯನ್ನು ಹೊಂದಿದೆ. ಗಂಗಡಿಕಾರ ಒಕ್ಕಲಿಗರು ತಮಿಳುನಾಡಿನಲ್ಲಿಯೂ ಕಂಡುಬರುತ್ತಾರೆ. ಮುಖ್ಯವಾಗಿ ನೀಲಗಿರಿ, ಕೊಯಮತ್ತೂರು ಇತರ ಭಾಗಗಳಲ್ಲಿ ಕಂಡುಬರುತ್ತಾರೆ. ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ಅಲ್ಲಿಗೆ ವಲಸೆ ಹೋಗಿರುವವರು ಎಂದು ತಿಳಿಯುತ್ತದೆ. ಈ ಸಮುದಾಯವು ವಿದ್ವಾಂಸರು, ಕಲಾಕಾರರು, ಆಡಳಿತಗಾರರು, ವೃತ್ತಿ ನಿರತರು, ಮತ್ತು ಪ್ರಾದೇಶಿಕ, ರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರುಗಳನ್ನು ಹೊಂದಿದೆ. ಇವರಲ್ಲಿ ಆಧುನಿಕ ಶಿಕ್ಷಣ ಹಾಗೂ ವೈದ್ಯಕೀಯದ ಬಗ್ಗೆ ಆಸಕ್ತಿ ಇದೆ. ಸಾಮಾಜಿಕ ಸಂಸ್ಥೆಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ.

 

ಒಕ್ಕಲಿಗ : ಚೇಳ

ಚೇಳ ಒಕ್ಕಲಿಗರು ಎಂಬ ಹೆಸರು ಬಂದಿರುವ ಹಿನ್ನೆಲೆಯನ್ನು ವಿವರಿಸುತ್ತಾ ಮಾರ್ಕೋನಹಳ್ಳಿ ದೊಡಪ್ಪಗೌಡರು ‘ಒಕ್ಕಲಿಗ’ ಎಂಬ ಗ್ರಂಥದಲ್ಲಿ ವಿವರಣೆ ನೀಡಿದ್ದಾರೆ. ಅವರ ಪ್ರಕಾರ ೧೦ನೆಯ ಶತಮಾನದಲ್ಲಿ ಗಂಗರಸರು ಜೈನಮತವನ್ನು ಸ್ವೀಕರಿಸಿದರು. ಜೈನಮತವನ್ನು ಸ್ವೀಕರಿಸಿದ ಗಂಗರಸರು ಆದಿಚುಂಚನಗಿರಿಯ ಸಂಸ್ಥಾನದ ಮಠಾಧೀಶ್ವರರನ್ನಾಗಿ ಪಾರ್ಶ್ವನಾಥ ಜೈನ ಆಚಾರ್ಯರನ್ನು ನೇಮಿಸಿದರು. ಇದರಿಂದ ಕುಪಿತರಾದ ಅವಧೂತ ಯೋಗಿಗಳ ಶಿಷ್ಯರಾದ ಕೆಲವು ಒಕ್ಕಲಿಗರು ಚೋಳರ ಸಹಾಯ ಪಡೆದು ಗಂಗರಸರನ್ನು ಸೋಲಿಸಿ, ಅವಧೂತ ಯೋಗಿಗಳನ್ನು ಆದಿಚುಂಚನಗಿರಿಯ ಹದಿನೈದನೆ ಗುರುವನ್ನಾಗಿ ಮಾಡಿದರು. ಚೋಳರಸರ ಸಹಾಯಪಡೆದಿದ್ದರಿಂದ ಇವರಿಗೆ ‘ಚೋಳ’ ಅಥವಾ ‘ಚೇಳ’ ಹೆಸರು ಬಂದಿರಬಹುದು ಎಂದು ನಂಬಲಾಗಿದೆ.

ಈ ಸಮುದಾಯದ ಜನರು ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಮಂಡ್ಯ ಮತ್ತು  ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿದ್ದಾರೆ. ಕನ್ನಡ ಭಾಷೆ ಮತ್ತು ಲಿಪಿಯನ್ನು ಬಳಸುತ್ತಾರೆ. ಇವರು ಸೋದರ ಸಂಬಂಧಿ ವಿವಾಹಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ಪಿತೃಪ್ರಧಾನ ನಿಯಮವನ್ನು ಪಾಲಿಸುತ್ತಾರೆ. ವಿಧುರ, ವಿಚ್ಛೇದಿತರಿಗೆ ವಿವಾಹದ ಅವಕಾಶವಿದೆ. ಗಂಡು ಮಕ್ಕಳೆಲ್ಲರಿಗೂ ಆಸ್ತಿಯಲ್ಲಿ ಸಮನಾದ ಹಕ್ಕಿದೆ. ಹಿರಿಯ ಮಗನಿಗೆ ತಂದೆಯ ನಂತರ ಕುಟುಂಬದ ಉತ್ತರಾಧಿಕಾರದ ಹಕ್ಕಿದೆ. ಧಾರ್ಮಿಕ, ಸಾಂಪ್ರದಾಯಿಕ, ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲಿ ಸ್ತ್ರೀಯರು ಮಹತ್ವದ ಪಾತ್ರ ವಹಿಸುತ್ತಾರೆ.

ವ್ಯವಸಾಯ ಚೇಳ ಒಕ್ಕಲಿಗರ ಪ್ರಸ್ತುತ ಮತ್ತು ಪಾರಂಪರಿಕ ವೃತ್ತಿಯಾಗಿದೆ. ಇದರೊಂದಿಗೆ ಇವರು ವ್ಯಾಪಾರ, ಸ್ವಯಂ-ಉದ್ಯೋಗ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಕಾರ್ಮಿಕ, ಕೂಲಿ ಇತ್ಯಾದಿ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಮುಖ್ಯ ದೈವಗಳು ಎಂದರೆ ಭೈರವ, ವೆಂಕಟರಮಣ, ಸೋಮೇಶ್ವರ, ಮಂಜುನಾಥ ಇತ್ಯಾದಿ. ಬ್ರಾಹ್ಮಣರು ಇವರ ಸಾಂಪ್ರದಾಯಿಕ ಧಾರ್ಮಿಕ ವಿಧಿ ವಿಧಾನಗಳನ್ನು ನೆಡೆಸುವ ಪುರೋಹಿತರಾಗಿದ್ದಾರೆ. ಇವರು ನಾಮಧಾರಿ, ಗಂಗಡಿಕಾರ, ಮುಸುಕು ಮುಂತಾದ ಒಕ್ಕಲಿಗರ, ಉಪಪಂಗಡಗಳೊಂದಿಗೆ ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಆಧುನಿಕ ಶಿಕ್ಷಣ, ಆಧುನಿಕ ವೈದ್ಯಕೀಯಗಳಿಗೆ ಪ್ರಾಧಾನ್ಯತೆ, ಸಾಮಾಜಿಕ ಸಂಘಟನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಇವರು ಹೊಂದಿ ಇವುಗಳ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ.

 

ಒಕ್ಕಲಿಗ : ನಾಮಧಾರಿ

ಒಕ್ಕಲಿಗ ಸಮುದಾಯಗಳಲ್ಲಿ ಶಿವನನ್ನು ಆರಾಧಿಸುವಂತೆ, ಶ್ರೀವೈಷ್ಣವ ಪಂಥದವರು ಇದ್ದಾರೆ. ಬೆಂಗಳೂರು ನಿರ್ಮಾಪದ ಮಾಗಡಿ ಕೆಂಪೇಗೌಡರ ವಂಶದವರು ಬೆಂಗಳೂರಿನಲ್ಲಿ ಆಡಳಿತ ಮಾಡುವಾಗ ಶಿವಭಕ್ತರಾಗಿದ್ದರಂತೆ. ಮಾಗಡಿಗೆ ರಾಜಧಾನಿಯನ್ನು ಬದಲಾಯಿಸಿದಾಗ ವಿಷ್ಣುವಿನ ಭಕ್ತರಾಗಿ ಶ್ರೀ ರಂಗನಾಥ ಸ್ವಾಮಿಯನ್ನು ಆರಾಧ್ಯ ದೈವವನ್ನಾಗಿ ಮಾಡಿಕೊಂಡರಂತೆ. ಇದೇ ರೀತಿ ನಾಮಧಾರಿ ಒಕ್ಕಲಿಗರು ತಿರುಪತಿಯ ಶ್ರೀ ವೆಂಕಟೇಶ್ವರನನ್ನು, ಬೇಲೂರಿನ ಶ್ರೀ ಚೆನ್ನಕೇಶವನನ್ನು ಪೂಜಿಸುತ್ತಾರೆ (ವೆಂಕಟೇಶ ಮೂರ್ತಿ: ೧೯೮೮).

‘ನಾಮಧಾರಿ’ ಒಕ್ಕಲಿಗರ ಬಗ್ಗೆ ಒಂದು ಐತಿಹಾಸಿಕ ಕಥೆಯಿದೆ. ಹನ್ನೆರಡನೆಯ ಶತಮಾನದಲ್ಲಿ ಹೊಯ್ಸಳ ಸಾಮ್ರಾಟ ಬಿಟ್ಟಿದೇವನು ಶ್ರೀ ರಾಮಾನುಜಾಚಾರ್ಯರ, ತಪೋಶಕ್ತಿಗೆ ತಲೆಬಾಗಿ ಜೈನ ಧರ್ಮವನ್ನು ಬಿಟ್ಟು ಶ್ರೀ ವೈಷ್ಣವ ಮತವನ್ನು ಸ್ವೀಕರಿಸಿ, ವಿಷ್ಣುವರ್ಧನನೆಂಬ ನಾಮಾಂಕಿತವನ್ನು ಪಡೆದನು. ಆಗ ಇವನು ಶ್ರೀ ಚೆನ್ನಕೇಶವ ಸ್ವಾಮಿಯ ದೇವಾಲಯವನ್ನು ಕಟ್ಟಿಸಿದನು. ಆ ಸಮಯದಲ್ಲಿ ಅನೇಕ ಒಕ್ಕಲಿಗರು ವೈಷ್ಣವರಾಗಿ ಶ್ರೀ ಹರಿಯನ್ನು ಪೂಜಿಸಿದರು. ಇವರು ನಾಮಧಾರಿ ಒಕ್ಕಲಿಗರೆಂದು ಕರೆದುಕೊಂಡರು. ಇಂದು ಒಕ್ಕಲಿಗ ಉಪಪಂಗಡಗಳು ಹರಿಹರರಲ್ಲಿ ಭೇದಭಾವವಿಲ್ಲದೆ ಎಲ್ಲ ದೇವ ದೇವತೆಗಳನ್ನು ಪೂಜಿಸುತ್ತಾರೆ.

‘ನಾಮಧಾರಿ’ಒಕ್ಕಲಿಗರನ್ನು ನಾಮಧಾರಿಗೌಡ ಮತ್ತು ನಾಡವರು ಎಂದೂ ಕರೆಯುತ್ತಾರೆ. ಇವರು ಹೆಗ್ಗಡೆ ಮತ್ತು ಗೌಡ ಎಂಬ ವಿಶೇಷಣೆಗಳನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಾರೆ. ಇವರು ತಮ್ಮ ಹಣೆಯ ಮೇಲೆ ನಾಮವನ್ನು ಧರಿಸುವುದರಿಂದ ಇವರನ್ನು ನಾಮಧಾರಿ ಒಕ್ಕಲಿಗ ಅಥವಾ ಒಕ್ಕಲಿಗ ನಾಮಧಾರಿ ಎಂದು ಕರೆಯುತ್ತಾರೆ. ಇವರು ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ನಾಮಧಾರಿ ಒಕ್ಕಲಿಗ ಸಮುದಾಯದಲ್ಲಿ ಕೆಲವರು ಕೊಡಗಿನ ಅರಸರ ಕಾಲದಲ್ಲಿ, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ವಲಸೆಹೋಗಿ ನೆಲೆಸಿದರು. ಇವರನ್ನು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುಗೌಡರೆಂದು ಕರೆಯುತ್ತಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

‘ನಾಮಧಾರಿ’ ಒಕ್ಕಲಿಗರಲ್ಲಿ ಹೊರಬಾಂಧವ್ಯ ಬೆಡಗುಗಳಿವೆ, ಗಾಂಧಾರ, ತೋಲಾರ, ಕೌತಿಗಿ, ಶೆಟ್ಟಿ, ಇತ್ಯಾದಿ.  ಒಳಬಾಂಧವ್ಯ ವಿವಾಹವು ಕುಲದ ಮಟ್ಟದಲ್ಲಿ ರೂಢಿಯಲ್ಲಿವೆ. ಸೋದರತ್ತೆ, ಸೋದರಮಾವ, ಅಕ್ಕನ ಮಗಳೊಡನೆ ವಿವಾಹವಾಗಬಹುದು. ವರದಕ್ಷಿಣೆಯನ್ನು ನಗದು ಅಥವಾ ವಸ್ತುರೂಪದಲ್ಲಿ ನೀಡವುದು ಪ್ರಚಲಿತದಲ್ಲಿದೆ. ವಿಧವೆ, ವಿಧುರ, ವಿಚ್ಛೇದಿತರ ವಿವಾಹಕ್ಕೆ ಸಮ್ಮತಿ ಇದೆ. ಉತ್ತರಾಧಿಕಾರದ ಹಕ್ಕು ತಂದೆಯ ನಂತರ ಕುಟುಂಬದ ಹಿರಿಯಮಗನಿಗೆ ವರ್ಗಾಯಿಸಲ್ಪಡುತ್ತದೆ. ಗೃಹಕೃತ್ಯಗಳೊಡನೆ ಹೆಣ್ಣು ಮಕ್ಕಳು ಆರ್ಥಿಕ, ಸಾಂಪ್ರದಾಯಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ನಾಮಧಾರಿ ಒಕ್ಕಲಿಗರು ಮಾಂಸಾಹಾರಿಗಳಾದರೂ,ಮೈಸೂರು ಜಿಲ್ಲೆಯಲ್ಲಿ ಕೆಲವರು ಸಸ್ಯಾಹಾರಿಗಳಾಗಿದ್ದಾರೆ. ಕೃಷಿ ನಾಮಧಾರಿ ಒಕ್ಕಲಿಗರ ಪ್ರಮುಖ ಆದಾಯದ ಮೂಲವಾಗಿದೆ. ಸಾಂಪ್ರದಾಯಿಕವಾಗಿ ಇವರು ಕೃಷಿಗಾರರು. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ವ್ಯಾಪಾರ, ಸ್ವಯಂ-ಉದ್ಯೋಗ, ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ಸಾಂಪ್ರದಾಯಿಕ ಜಾತಿ ಪಂಚಾಯಿತಿಯು ಹಿಂದೆ ಇದ್ದರೂ ಇತ್ತೀಚೆಗೆ ಇದು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ.

ಇವರು ತಮ್ಮ ಸಮುದಾಯದ ಸಂಘಟನೆಯಾದ “ನಾಮಧಾರಿ ಗೌಡರ ಸಂಘ”ವನ್ನು ಸಮುದಾಯದ ಅಭಿವೃದ್ಧಿಗಾಗಿ ಹೊಂದಿದ್ದಾರೆ. ಮಾರಮ್ಮ, ಭೂತಗಳು, ಚೌಡಿ ಮತ್ತು ಶ್ರೀ ವೈಷ್ಣವ ತತ್ವದ ದೇವತೆಗಳನ್ನು ಇವರು ಪೂಜಿಸುತ್ತಾರೆ. ಬ್ರಾಹ್ಮಣ ಪುರೋಹಿತರು ವಿವಾಹ ವಿಧಿಗಳನ್ನು ನಡೆಸಿರುತ್ತಾರೆ. ದಾಸಯ್ಯಗಳು ಜನನ, ಮರಣದ ವಿಧಿಗಳನ್ನು ನೆರವೇರಿಸುತ್ತಾರೆ. ವ್ಯಾಪಾರಿಗಳು, ವಿದ್ವಾಂಸರು, ಉನ್ನತ ಹುದ್ದೆಗಳಲ್ಲಿರುವ ಸದಸ್ಯರು, ರಾಜಕೀಯ ನಾಯಕರುಗಳನ್ನು ಈ ಸಮುದಾಯ ಹೊಂದಿದೆ. ಇವರ ಶೈಕ್ಷಣಿಕ ಮಟ್ಟ ಸುಧಾರಿಸಿದೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಅವುಗಳಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

 

ಒಕ್ಕಲಿಗ : ನೊಣಬ

ನೊಣಬ ಎಂಬ ಹೆಸರು ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಆವೃತವಾಗಿದ್ದ ನೊಳಂಬವಾಡಿಯೆಂಬ ಪ್ರಾಚೀನ ಸಾಮ್ರಾಜ್ಯದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಈ ಸಮುದಾಯದ ಜನರು ಹೆಚ್ಚಾಗಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಹೊರಬಾಂಧವ್ಯ ವಿವಾಹ ಬೆಡಗುಗಳಿವೆ. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ತಂದೆಯ ನಂತರ ಹಿರಿಯಮಗನು ಕುಟುಂಬ ಉತ್ತರಾಧಿಕಾರದ ಹಕ್ಕು ಪಡೆಯುತ್ತಾನೆ. ಸ್ತ್ರೀಯರು ಸಾಂಪ್ರದಾಯಿಕ, ಆರ್ಥಿಕ, ಸಾಮಾಜಿಕ ಹಾಗೂ ಗೃಹಕೃತ್ಯಗಳಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಕುಟುಂಬದ ಆದಾಯಕ್ಕೆ ನೆರವಾಗುವುದಲ್ಲದೆ, ಆರ್ಥಿಕ ವಿಷಯಗಳಲ್ಲಿ ನೀರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಸ್ತ್ರೀಯರು ಹೊಂದಿದ್ದಾರೆ.

ನೊಣಬ ಒಕ್ಕಲಿಗರಿಗೆ ಕೃಷಿ ಪ್ರಮುಖ ಆದಾಯದ ಮೂಲವಾಗಿದೆ. ಇವರಲ್ಲಿ ಕೆಲವರು ಬೇರೆಯವರ ಭೂಮಿಯನ್ನು ಗೇಣಿ ಮಾಡುತ್ತಾರೆ. ಹೆಚ್ಚಿನ ಜನ ಕೃಷಿ ಕಾರ್ಮಿಕರಿದ್ದಾರೆ. ಇವರ ಮನೆ ದೇವತೆಗಳು-ರಂಗನಾಥಸ್ವಾಮಿ, ತಿಮ್ಮಪ್ಪ, ಮಾರಮ್ಮ, ಶಿವ, ಲಕ್ಷ್ಮಿ, ನಾರಾಯಣ ಇತ್ಯಾದಿ. ಬ್ರಾಹ್ಮಣ ಹಾಗೂ ದಾಸಪ್ಪಗಳು ಇವರ ಧಾರ್ಮಿಕ-ವಿಶೇಷಜ್ಞರಾಗಿದ್ದಾರೆ.

ನೊಣಬ  ಒಕ್ಕಲಿಗರು ಕುರುಬ ಮತ್ತಿತ್ತರ ಒಕ್ಕಲಿಗ ಉಪ ಪಂಗಡಗಳ ಜೊತೆ, ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಆಧುನಿಕ ಶಿಕ್ಷಣ ಬಗ್ಗೆ ಆಸಕ್ತಿ ಮತ್ತು ಒಲವು ಹೆಚ್ಚಾಗಿದೆ. ಈ ಸಮುದಾಯದ ಜನರು ಸಾಮಾಜಿಕ ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 

ಒಕ್ಕಲಿಗ : ಮುಸುಕು

ಮುಸುಕು ಒಕ್ಕಲಿಗರು ತುಮಕೂರು, ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿದ್ದಾರೆ. ತಮ್ಮ ಮೌಖಿಕ ಪರಂಪರೆಯಲ್ಲಿ ತಮಿಳುನಾಡಿನ ಕಂಚಿಯಿಂದ ಮುನ್ನೂರು ವರ್ಷಗಳಿಗೆ ಮೊದಲೆ ಈಗಿರುವ ಸ್ಥಳಕ್ಕೆ ವಲಸೆ ಬಂದವರೆಂದು ಇವರು ಹೇಳುತ್ತಾರೆ. ಇವರು ಕನ್ನಡ ಭಾಷೆ ಮತ್ತು ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಯಾವುದೇ ರೀತಿಯ ಸಾಮಾಜಿಕ ಶ್ರೇಣಿಗಳಿಲ್ಲ. ಸೋದರ ಸಂಬಂಧಿ ವಿವಾಹಗಳು ಈ ಸಮುದಾಯದಲ್ಲಿ ಹೆಚ್ಚು ನಡೆಯುತ್ತದೆ. ಸ್ತ್ರೀಯರು ಗೃಹಕೃತ್ಯಗಳೊಡನೆ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪಾಲುಗೊಳ್ಳುತ್ತಾರೆ. ಮಹಾಲಯ ಅಮವಾಸ್ಯೆಯೆಂದು ಹಿರಿಯರ ಪೂಜೆ ನಡೆಯುತ್ತದೆ.

ಮುಸುಕು ಒಕ್ಕಲಿಗರ ಪ್ರಧಾನ ವೃತ್ತಿ ಕೃಷಿ. ಇವರು ತಿಮ್ಮಪ್ಪ, ರಂಗನಾಥ ಸ್ವಾಮಿ, ವೀರಭದ್ರಸ್ವಾಮಿ, ಮುತ್ತಿನಮ್ಮ, ಸಂತೆಯಮ್ಮ, ಗದ್ದೆಕೆಂಪಮ್ಮ ಇತ್ಯಾದಿ ಅನೇಕ ಪ್ರಾದೇಶಿಕ ದೈವಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಪುರೋಹಿತ ಇವರ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾನೆ. ಇವರು ಕುರುಬ, ಆಚಾರಿ, ರೆಡ್ಡಿ ಮತ್ತು ಒಕ್ಕಲಿಗ ಉಪ ಪಂಗಡಗಳ ಜೊತೆ ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಈ ಸಮುದಾಯದ ಜನರು ಆಧುನಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಾದೇಶಿಕ ರಾಜಕೀಯ ನಾಯಕರು ಇವರಲ್ಲಿ ಇದ್ದಾರೆ. ಶಿಕ್ಷಣ, ವೈದ್ಯಕೀಯ ಹಾಗೂ ಇತರ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ.

 

ಒಕ್ಕಲಿಗ : ಮೊರಸು

ಮೊರಸು ಒಕ್ಕಲಿಗರು ತಮ್ಮನ್ನು ಬೆರಳು ಕೊಡುವ ಒಕ್ಕಲಿಗರೆಂದು ಕರೆದುಕೊಂಡಿದ್ದಾರೆ. ಎಂ.ವಿ.ಕೃಷ್ಣರಾವ್ ಬರೆದ ಕರ್ನಾಟಕ ಇತಿಹಾಸ ದರ್ಶನದಲ್ಲಿ ಹದಿನಾಲ್ಕನೇ ಶತಮಾನದಲ್ಲಿ ಕಂಚು ಸಂಸ್ಥಾನದ ಯಾನಾಮಂಜಿ ಪುತ್ತೂರಿನಿಂದ ಬಂದ ರಣ ಭೈರೇಗೌಡರು ಹಾಗೂ ಅವರ ಸಹೋದರರು ನಂದಿದುರ್ಗದ ತಪ್ಪಲಲ್ಲಿ, ರಾಮಸ್ವಾಮಿ ಬೆಟ್ಟದ ಬಳಿ ಬಂದು ನೆಲೆಸಿ ಆವಂತಿ ನಾಡನ್ನು ಕಟ್ಟಿದರು. ಮೊದಲಿಗೆ ಅವರಿದ್ದ ಪ್ರದೇಶಕ್ಕೆ ಮೊರಸು ನಾಡೆಂದು ಹೆಸರಿತ್ತು. ಮೊರಸುನಾಡಿನಿಂದ ಬಂದವರಾದ್ದರಿಂದ ಇವರನ್ನು ಮೊರಸು ಒಕ್ಕಲಿಗರೆಂದು ಕರೆದರು ಎಂದು ಉಲ್ಲೇಖಿಸಿದ್ದಾರೆ. ಇವರು ಪ್ರಾರಂಭದಲ್ಲಿ ಭೈರವೇಶ್ವರ ಆರಾಧಕರಾಗಿದ್ದು ನಂತರ ಗಂಗಾಧರೇಶ್ವರನನ್ನು ಪೂಜಿಸಿದರು. ಇವರು ತಮ್ಮ ಹೆಣ್ಣು ಮಕ್ಕಳ ವಿವಾಹಪೂರ್ವದಲ್ಲಿ ಕಿರು ಬೆರಳನ್ನು ಕತ್ತರಿಸಿದ್ದರಂತೆ. ಮಾರಕೋನಹಳ್ಳಿ ದೊಡಪ್ಪಗೌಡರ ‘ಒಕ್ಕಲಿಗ’ ಎಂಬ ಗ್ರಂಥದಲ್ಲಿ ಇದರ ಪೌರಾಣಿಕ ಕಥೆಯನ್ನು ವಿವರಿಸಿ ಮೊರಸು ಒಕ್ಕಲಿಗರು ಬೆರಳುಕೊಡುವುದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.

ಮೊರಸು ಒಕ್ಕಲಿಗರನ್ನು ರೆಡ್ಡಿ-ಒಕ್ಕಲಿಗ ಮೊರಸುಗಳೆಂದೂ ಕರೆಯುತ್ತಾರೆ. ಒಂದು ವಿವರಣೆಯು ಪ್ರಕಾರ ಇವರ ಪೂರ್ವಜರು ತಮಿಳುನಾಡಿನಲ್ಲಿರುವ ಕಂಚಿಯ ಬಳಿಯಲ್ಲಿ ಮೊರಸುನಾಡು ಸ್ಥಳಕ್ಕೆ ಸೇರಿದವರಾಗಿದ್ದರಿಂದ ಇವರಿಗೆ ಮೊಸರುಗಳೆಂಬ ಹೆಸರಿದೆ. ಇವರು ಕೋಲಾರ, ಬೆಂಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡ ಮತ್ತು ತೆಲುಗು ಮಾತನಾಡಿ, ಕನ್ನಡ ಲಿಪಿಯನ್ನು ಉಪಯೋಗಿಸುತ್ತಾರೆ. ಮೊರಸು ಒಕ್ಕಲಿಗರಲ್ಲಿ ಅಯ್ಯರ್‌ರವರ (೧೯೩೧) ಪ್ರಕಾರ ಅನೇಕ ಹೊರಬಾಂಧವ್ಯ ಬೆಡಗುಗಳಿವೆ. ಆನೆ, ಬಾಳೆ, ಗೆಜ್ಜೆ, ಈಚಲು, ಕಗ್ಗಲಿ, ನುಗ್ಗೆ, ಸಾಸಿವೆ ಇತ್ಯಾದಿ. ಹೊರಬಾಂಧವ್ಯ ವಿವಾಹ ಪದ್ಧತಿ ರೂಢಿಯಲ್ಲಿದೆ.

ಈ ಸಮುದಾಯ ಜನರು ಇಂದಿಗೂ ಬೇಸಾಯಗಾರರಾಗಿದ್ದು, ಭೂಮಾಲಿಕರಾಗಿದ್ದಾರೆ. ಸಮುದಾಯದೊಳಗಿನ ವಿವಾದಗಳನ್ನು ಸಾಂಪ್ರದಾಯಿಕ ಸಮೀತಿಯು ತೀರ್ಮಾನಿಸುತ್ತದೆ. ಈ ಸಮುದಾಯವು ರಾಜ್ಯ ಮಟ್ಟದ ಸಂಘಟನೆಯನ್ನು ಹೊಂದಿದೆ. ಸಾಂಪ್ರದಾಯಿಕ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲು ಬ್ರಾಹ್ಮಣರು ಇವರಿಗೆ ಧಾರ್ಮಿಕ ವಿಶೇಷಜ್ಞರಾಗಿದ್ದಾರೆ. ಇವರಲ್ಲಿ ರಾಜಕೀಯ ನಾಯಕರು, ಉನ್ನತ ಹುದ್ದೆಗಳಲ್ಲಿರುವವರು ಮತ್ತು ಆಡಳಿತಗಾರರು ಇತರೆ ವೃತ್ತಿಯಲ್ಲಿರುವವರನ್ನು ಕಾಣಬಹುದು. ಇವರು ಆಧುನಿಕ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಸಂಸ್ಥೆಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದು, ಅವುಗಳ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.

 

ಒಕ್ಕಲಿಗ : ಸರ್ಪ

ರ್ಪ ಒಕ್ಕಲಿಗರು ತುಮಕೂರು, ಹಾಸನ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರಲ್ಲಿ ಶೆಟ್ಟಿ ಮತ್ತು ಲಾಂಡೇರರು ಎಂಬ ಹೊರಬಾಂಧವ್ಯದ ಬೆಡಗುಗಳಿವೆ. ವಧು ದಕ್ಷಿಣೆ ಸ್ಥಾನವನ್ನು ವರದಕ್ಷಿಣೆ ಪಡೆದುಕೊಂಡಿದೆ. ವಿಧುರರ ವಿವಾಹಕ್ಕೆ ಅವಕಾಶವಿದೆ. ತಂದೆಯ ನಂತರ ಹಿರಯ ಮಗನು ಉತ್ತರಾಧಿಕಾರದ ಹಕ್ಕನ್ನು ಪಡೆಯುತ್ತಾನೆ.

ಸಾಂಪ್ರದಾಯಿಕವಾಗಿ ಸರ್ಪ ಒಕ್ಕಲಿಗರು ಕಬ್ಬಿಣವನ್ನು ತೆಗೆಯುತ್ತಿದ್ದರು. ಕೈಗಾರೀಕರಣದಿಂದ ಮಾರುಕಟ್ಟೆಗೆ ಬಂದ ಕಬ್ಬಿಣದ ಕಾರ್ಖಾನೆ ಇವರನ್ನು ವ್ಯವಸಾಯದಕಡೆಗೆ ತಿರುಗುವಂತೆ ಮಾಡಿತು. ಇವರಲ್ಲಿ ಕೆಲವರು ಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ವ್ಯಾಪಾರ, ಸಣ್ಣ ಪ್ರಮಾಣದ ಉದ್ದಿಮೆ, ಸ್ವಯಂ ಉದ್ಯೋಗ ಇತ್ಯಾದಿ ವೃತ್ತಿಗಳಲ್ಲಿ ನಿರತರಾಗಿದ್ದಾರೆ. ಇವರ ಸಾಂಪ್ರದಾಯಿಕ ಜಾತಿ ಪಂಚಾಯಿತಿ ಶಿಥಿಲವಾಗಿದೆ. ಇವರು ಗ್ರಾಮ ಮತ್ತು ಪ್ರಾದೇಶಿಕ ದೈವಗಳ ಜೊತೆಗೆ ಸರ್ಪದೇವನನ್ನು ಪೂಜಿಸುತ್ತಾರೆ. ಧರ್ಮಸ್ಥಳ, ನಂಜನಗೂಡು, ತಿರುಪತಿ ಇತ್ಯಾದಿ ಇವರ ಪವಿತ್ರ ಧಾರ್ಮಿಕ ಕೇಂದ್ರಗಳಾಗಿವೆ.

ಇವರು ಧಾರ್ಮಿಕ ವಿಧಿಗಳನ್ನು ನೆರವೇರಿಸಲು ಬ್ರಾಹ್ಮಣ ಪುರೋಹಿತರನ್ನು ಆಹ್ವಾನಿಸುತ್ತಾರೆ. ಸರ್ಪ ಒಕ್ಕಲಿಗರು ಕುರುಬ, ಉಪ್ಪಾರ, ಕುರುಹಿನಶೆಟ್ಟಿ ಹಾಗೂ ಒಕ್ಕಲಿಗ ಉಪಪಂಗಡಗಳೊಂದಿಗೆ ಸಾಮಾಜಿಕ ಸಂಪರ್ಕ ಹೊಂದಿದ್ದಾರೆ. ಇವರಲ್ಲಿ ಕೆಲವರು ಆಧುನಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಶಿಕ್ಷಣ ಹಾಗೂ ಇತರ ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

 

ಒಕ್ಕಲಿಗ : ಹಳ್ಳಿಕಾರ

‘ಹಳ್ಳಿಕಾರ ಒಕ್ಕಲಿಗರು ಪ್ರಮುಖವಾಗಿ ಕರ್ನಾಟಕದ ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. ಇವರು ‘ಗೌಡ’ ಮತ್ತು ‘ನಾಯಕ’ ವಿಶೇಷಣೆಗಳನ್ನು ಬಳಸುತ್ತಾರೆ. ‘ಹಳ್ಳಿಕಾರ’, ‘ಹಳ್ಳಿಗ’, ಇದು ಒಂದು ಉತ್ತಮ ದನದ ತಳಿಯ ಹೆಸರು. ಇವರು ಈ ತಳಿಯ ದನಗಳ ಸಾಕಾಣಿಕೆಯಲ್ಲಿ ಸಾಂಪ್ರದಾಯಿಕವಾಗಿ ತೊಡಗಿದವರು ಎಂದು ತಿಳಿಯುತ್ತದೆ. ಆದುದ್ದರಿಂದ ಇವರಿಗೆ ಹಳ್ಳಿಕಾರರು ಅಥವಾ ಹಳ್ಳಿಗಾರರು ಎಂಬ ಹೆಸರು ಬಂದಿದೆ (ಅಯ್ಯರ್ ೧೯೩೦).

ಹಳ್ಳಿಕಾರರಲ್ಲಿ-ಕೊಳ್ಳಾಲುಕರು, ಕೆಂಪನುಲ್ಲುಕರು, ಕೊಟ್ಟಿಯಲ್ಲುಲಕರು ಇತ್ಯಾದಿ ಹೊರಬಾಂಧವ್ಯದ ವಿವಾಹ ಬೆಡಗುಗಳು ಇವೆ. ಕೋಮಿನಲ್ಲಿ ಒಳಬಾಂಧವ್ಯ ಮತ್ತು ಬೆಡಗಿನಲ್ಲಿ ಹೊರಬಾಂಧವ್ಯ ವಿವಾಹ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹ ಹೆಚ್ಚಿನ ಆದ್ಯತೆ ಪಡೆದಿದೆ. ವಿಧವೆ, ವಿಧುರ, ವಿಚ್ಛೇದಿತರ, ವಿವಾಹಕ್ಕೆ ಅನುಮತಿ ಇದೆ. ಉತ್ತರಾಧಿಕಾರದ ಹಕ್ಕು ಹಿರಿಯ ಮಗನಿಗೆ ದೊರೆತರೂ ಆಸ್ತಿಯನ್ನು ಗಂಡು ಮಕ್ಕಳೆಲ್ಲರಿಗೂ ಸಮನಾಗಿ ಹಂಚುತ್ತಾರೆ.

ಹಳ್ಳಿಕಾರರ ಸಾಂಪ್ರದಾಯಿಕ ವೃತ್ತಿ ವ್ಯವಸಾಯ ಮತ್ತು ಹೈನುಗಾರಿಕೆ. ಇತ್ತೀಚೆಗೆ ಕೆಲವರು ಸರ್ಕಾರಿ ಹಾಗೂ ಖಾಸಗಿ ವಲಯಗಳ ನೌಕರಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ಇರುವ ‘ಹಳ್ಳಿಕಾರ ಸಂಘ’ವು ಇವರ ಅಭಿವೃದ್ಧಿಗೆ ಶ್ರಮಿಸುತ್ತದೆ. ವೀರಭದ್ರ, ಬೆಟ್ಟದರಾಯ, ಮಾರಮ್ಮ, ಶಿವ, ವಿಷ್ಣು, ಇತ್ಯಾದಿ ದೈವಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣರು ಇವರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಅರ್ಚಕರಾಗಿದ್ದಾರೆ, ಇವರದೇ ಕೋಮಿನ ದಾಸಯ್ಯ ಕೆಲವು ಧಾರ್ಮಿಕ ವಿಧಿಗಳನ್ನು ನಡೆಸು‌ತ್ತಾರೆ. ಧರ್ಮಸ್ಥಳ ಮತ್ತು ತಿರುಪತಿ ಇವರ ಪವಿತ್ರ ಧಾರ್ಮಿಕ ಕೇಂದ್ರಗಳಾಗಿವೆ. ಈ ಸಮುದಾಯದಲ್ಲಿ ಕೆಲವರು ಉನ್ನತ ಹುದ್ದೆಯಲ್ಲಿ ಹಾಗೂ ಸ್ಥಳೀಯ ಮಟ್ಟದ ರಾಜಕೀಯದಲ್ಲಿ ಇದ್ದಾರೆ. ಆಧುನಿಕ ಶಿಕ್ಷಣ, ವೈದ್ಯಕೀಯ, ಸಂಪರ್ಕ ಸಾಧನಗಳ, ಪ್ರಯೋಜನವನ್ನು ಇವರು ಪಡೆಯುತ್ತಿದ್ದಾರೆ.

ನೋಡಿ:

ಮಾರ್ಕೋನಹಳ್ಳಿ ದೊಡ್ಡಪ್ಪಗೌಡಿ, ೧೯೭೮. ಒಕ್ಕಲಿಗರು ಮತ್ತು ಮಠಸಂಪ್ರದಾಯ, ನಭಶ್ರೀ, ಸರಸ್ವತಿಪುರಂ, ಮೈಸೂರು.

ರಾಮಪ್ಪಗೌಡ ಕೆ.ಎಸ್., ೧೯೯೧. ‘ನಾಮಧಾರಿ ಗೌಡರು’, ಒಕ್ಕಲಿಗರ ವರ್ಗ, ತುಂಗಾವರ ವಾರಪತ್ರಿಕೆ

ವೆಂಕಟೇಶಮೂರ್ತಿ ನಂದಿ., ೧೯೮೮. ಒಕ್ಕಲಿಗರ ಇತಿಹಾಸ ದರ್ಶನ, ಲಕ್ಷ್ಮಿಮುದ್ರಣಾಲಯ, ಚಾಮರಾಜಪೇಟೆ, ಬೆಂಗಳೂರು.

Banerjee, Bhavani., 1966. Marriage and Kinship of the Gangadikara Vokkaligas of Mysore, Deccan College Post Graduate and Research Institute, Pune.

Fawcett, Fred., 1886-1889. ‘On The Berulu Koko, a Sub-sect of the Moras Vokkaligaru of the Mysore Province’, Journal of the Anthropological Society, Bombay.  1, pp 449-474