ಕಂಜಾರ ಕಂಜಿರ್ ಭಟ್, ಕಂಜಾರಿ ಹಾಗೂ ಕಣಜೀರ್ ಎಂದೂ ಇವರನ್ನು ಕರೆಯಲಾಗುತ್ತದೆ. ಕೆಲವರು ಇವರನ್ನು ‘ಲೊಲ್ಯರ್’ ಎಂದು ಗುರುತಿಸುತ್ತಾರೆ. ಇವರು ಧಾರವಾಡ, ಬಿಜಾಪುರ, ಬೆಳಗಾಂ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇವರಲ್ಲಿ ಎರಡು ಹೊರಬಾಂಧವ್ಯ ಪಂಗಡಗಳೆಂದರೆ ಬಗಡೆ ಹಾಗೂ ನಾಲಾ. ಬಗಡೆ ಪಂಗಡದಲ್ಲಿ ಬಳ್ಳಿಗಳು – ಮಿನ, ಇಂದ್ರ, ಮಚ್ಚಾರೆ, ಕರಲ, ಘಾಸಿ, ಘಮಂಡಿ, ಭುಡಾರಿಯ, ಪೊಲೆಸಿ, ತಮೈಚೇಕರ್, ರವಲೇಕರ್, ಗವರ್ನರ್ ಹಾಗೂ ನವಲೇಕರ್. ನಾಲಾ ಪಂಗಡಗಳಲ್ಲಿ ಬಳ್ಳಿಗಳೆಂದರೆ – ಬತ್ಲು, ನೆಟ್ಲ, ಗಾಗಡೆ, ಗಾರಿ, ಗುಮನ, ಅಭುವ, ರೌಲ, ಮಲಕೀಯ, ಕಮಲ, ತಿಡ್ಡ, ದುಗರಿ, ಇತ್ಯಾದಿ. ಸಮುದಾಯಕ್ಕೆ ಸಂಬಂಧಿಸಿದಂತೆ ಒಳಬಾಂಧವ್ಯ ವಿವಾಹ ಪದ್ಧತಿ ಹಾಗೂ ಬಳ್ಳಿಗಳಲ್ಲಿ ಹೊರಬಾಂಧವ್ಯ ವಿವಾಹದ ರೀತಿ ಅನುಸರಿಸುತ್ತಾರೆ. ಸತ್ತವನ ಸಹೋದರ ಅತ್ತಿಗೆಯನ್ನು / ನಾದನಿಯನ್ನು ಮದುವೆಯಾಗಬೇಕಾದ ಪದ್ಧತಿಯಿದೆ. ಸೋದರ/ಸೋದರಿ ರಕ್ತ ಸಂಬಂಧಿ ಮದುವೆಗಳಿಗೆ ಮೊದಲು ಅನುಮತಿಯಿರಲಿಲ್ಲ. ಆದರೆ ಇತ್ತೀಚೆಗೆ ರಕ್ತ ಸಂಬಂಧಿ ವಿವಾಹಗಳು ನಡೆಯುತ್ತಿವೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನದ ಸೂತಕವನ್ನು ಒಂದು ತಿಂಗಳು ಮಾಡುತ್ತಾರೆ. ನಾಮಕರಣ, ಓಟಿಭಾನೇಕ, ಜವಳ ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಮಾಡುತ್ತಾರೆ. ಮದುವೆ ಶಾಸ್ತ್ರಗಳಲ್ಲಿ ಅರಿಶಿಣ ಹಚ್ಚುವುದು, ಪುಣ್ಯಸ್ನಾನ, ಮುಖ್ಯವಾದವು, ಶವವನ್ನು ಸುಟ್ಟು, ತಿಥಿಯನ್ನು ಎಂಟನೆಯ ಅಥವಾ ಹತ್ತನೆಯ ದಿನ ಮಾಡುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಗಳು ಚಾಕು ತಯಾರಿಸುವುದು ಹಾಗೂ ಭಿಕ್ಷೆ ಬೇಡುವುದು. ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ಇವರ ಸಮುದಾಯದ ಸಂಘಟನೆಯ ಮುಖ್ಯಸ್ಥನನ್ನೂ “ಹಿಂಗೊ” ಎನ್ನುತ್ತಾರೆ. ಅವನು ಸಮುದಾಯದ ಕೆಲವು ಜಗಳಗಳನ್ನು ಬಗೆಹರಿಸುತ್ತಾನೆ. ಮುಖ್ಯಸ್ಥನೇ ಜೀವನದ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾನೆ. ಆಧುನಿಕ ಶಿಕ್ಷಣ, ಇತ್ಯಾದಿ, ಅಭಿವೃದ್ಧಿ ಪರ ಯೋಜನೆಗಳ ಬಗ್ಗೆ ಇವರಿಗೆ ಆಸಕ್ತಿ ಇದೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.