ಪಲ, ಎಂದರೆ ‘ಕಾವಲುಗಾರ’ ಎಂದು ಅರ್ಥ. ಇವರನ್ನು ‘ಮುಲಕು ನಾಡು’ ಅರಮನೆಯನ್ನು ಕಾಯಲು ಕೊಡಗಿನ ರಾಜರು ಕೇರಳದಿಂದ ಕರೆತಂದರೆಂಬ ಪ್ರತೀತಿಯಿದೆ. ಕೊಡವ ಮತ್ತು ಕನ್ನಡ ಭಾಷೆಯನ್ನು ಇವರು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಮೂರು ಬೆಡಗುಗಳನ್ನು ಗುರುತಿಸಲಾಗುತ್ತದೆ ಅವೆಂದರೆ-ಬೊಲ್ಲಡ, ಅರುಣಟ ಹಾಗೂ ಪಲಕೊಟ. ಇವುಗಳ ನಡುವೆ ವೈವಾಹಿಕ ಸಂಬಂಧಗಳು ನಡೆಯುತ್ತವೆ. ವಧುದಕ್ಷಿಣೆಯನ್ನು ಹಣದ ರೂಪದಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನ ಹಾಗೂ ಮರುವಿವಾಹಗಳಿಗೆ ಅವಕಾಶವಿದೆ. ಗಂಡ ಸತ್ತರ ಅವನ ಸಹೋದರನು ಸತ್ತವನ ಹೆಂಡತಿಯನ್ನು ಮದುವೆಯಾಗುವುದು ರೂಢಿಯಲ್ಲಿದೆ. ಆಸ್ತಿಯನ್ನು ಗಂಡು ಮಕ್ಕಳ ನಡುವೆ ಸಮವಾಗಿ ಹಂಚಲಾಗುತ್ತದೆ. ತಂದೆಯ ನಂತರ ಹಿರಿಯ ಮಗ ಮನೆಯ ವಾರಸುದಾರನಾಗುತ್ತಾನೆ. ಮಗು ಹುಟ್ಟಿದಾಗ ಏಳುದಿನ ಸೂತಕವಿದ್ದು ಎಂಟನೆಯ ದಿನ ನಾಮಕರಣ ನಡೆಯುತ್ತದೆ. ಮದುವೆಯ ಮುಖ್ಯ ಆಚರಣೆಗಳಲ್ಲಿ, ದಂಪತಿಗಳಿಗೆ ಹಿರಿಯರು ಕುಡಿಯಲು ಹಾಲು ಕೊಡುವುದರ ಮೂಲಕ ಆಶೀರ್ವದಿಸುವುದಾಗಿದೆ. ಶವ ಸುಟ್ಟು, ಸೂತಕವನ್ನು ಹತ್ತು ದಿನಗಳ ಕಾಲ ಆಚರಿಸುತ್ತಾರೆ. ಹನ್ನೊಂದನೇ ದಿನ ತಿಥಿ ಮಾಡುತ್ತಾರೆ.

ಇವರಲ್ಲಿ ಕೆಲವರಿಗೆ ಕೃಷಿ ಭೂಮಿಯಿದೆ. ಹೆಚ್ಚಿನವರು ತೋಟಗಳಲ್ಲಿ ಕೂಲಿ ಮಾಡುವರು. ಇವರು ತಮ್ಮ ಸಮುದಾಯದ ದೇವರುಗಳಾದ (ಭೂತಗಳಾದ) ಚೋಲೆ, ಜಮಡಿ, ಕೈಯ್ಯಾಂಜಲಿ, ವಿಷ್ಣುಮೂರ್ತಿ, ಬುಲ್ತು ಅಜ್ಜಪ್ಪ, ಚಾಮುಂಡಿ, ವೀರಭದ್ರ ಹಾಗೂ ಕಾಳಿಯನ್ನು ಪೂಜಿಸುತ್ತಾರೆ. ಪ್ರಾಂತೀಯ ದೇವರುಗಳಾದ ಇಗ್ಗುತಪ್ಪ, ಸೋಮೇಶ್ವರನನ್ನೂ ಪೂಜಿಸುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಅರ್ಚಕರನ್ನಾಗಿ ತಮ್ಮ ಸಮುದಾಯವರನ್ನೇ ಆಮಂತ್ರಿಸುತ್ತಾರೆ. ಜೊತೆಗೆ ಬೇರೆ ಕೋಮುಗಳಿಂದ ಅಂದರೆ ಬ್ರಾಹ್ಮಣ, ಕಣಿಯ ಹಾಗೂ ಪಾಲೆ ಸಮುದಾಯಗಳಿಂದಲೂ ಆಹ್ವಾನಿಸುತ್ತಾರೆ. ಇವರು ಆಚರಿಸುವ ಮುಖ್ಯ ಹಬ್ಬಗಳೆಂದರೆ ಕೊಯ್ಲು ಮುಹೂರ್ತ, ಹುತ್ತರಿ, ಯುಗಾದಿ ಹಾಗೂ ಕಾವೇರಿ ಸಂಕ್ರಮಣ. ಆಧುನಿಕ ಶಿಕ್ಷಣ ಪಡೆದುಕೊಳ್ಳುವಲ್ಲಿ ಇವರು ಹಿಂದುಳಿದ್ದಾರೆ. ಆಧುನಿಕ ವೈದ್ಯಕೀಯ, ಕೆಲವು ಸರಕಾರಿ ಅಭಿವೃದ್ಧಿ ಯೋಜನೆಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರಲ್ಲಿ ಕೆಲವರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಇವರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.