ಬ್ಬಲಿಗರನ್ನು ಗಂಗಕುಲ, ಗಂಗೆಮತ, ಗಂಗೆಮಕ್ಕಳು, ಗಂಗಾ ಪುತ್ರ, ಗೌರಿಮತ, ಅಂಬಿಗ, ಕಬ್ಬಲಿ ಹಾಗೂ ಕಬ್ಬೇರರೆಂದೂ ಕರೆಯಲಾಗುತ್ತದೆ.  ಇವರು ಮೀನುಗಾರ ಸಮುದಾಯಕ್ಕೆ ಸೇರಿದವರಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಮೀನುಗಾರ ಸಮುದಾಯಕ್ಕೆ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆದರೂ, ಬಿಜಾಪುರ ಜಿಲ್ಲೆಯ ಮೀನುಗಾರ ಸಮುದಾಯಕ್ಕೆ ಕಬ್ಬಲಿಗ ಎಂದು ಕರೆಯುತ್ತಾರೆ. ಥರ್ಸ್ಟ್‌‌ನ್ ಹೇಳುವಂತೆ “ಕಬ್ಬೇರರನ್ನು ಎರಡು ಪಂಗಡಗಳಲ್ಲಿ ವಿಂಗಡಿಸಬಹುದು- ಗೌರಿಮಕ್ಕಳು ಹಾಗೂ ಗಂಗೆಮಕ್ಕಳು. ಅಂದರೆ ಕ್ರಮವಾಗಿ ಪಾರ್ವತಿ ಹಾಗೂ ಗಂಗೆಯ (ಜಲದೇವತೆ) ಮಕ್ಕಳು ಎಂದು. ಇವರಲ್ಲಿ ಪರಸ್ಪರ ಮದುವೆಯ ಸಂಬಂಧಗಳಿಲ್ಲ, ಆದರೆ ಜೊತೆಯಲ್ಲಿ ಬದುಕುತ್ತಾರೆ”.

ಎಂಥೋವನ್ (೧೯೨೨) ಇವರಲ್ಲಿ ಹನ್ನೊಂದು ಒಳಬಾಂಧವ್ಯ ಕುಲಗಳನ್ನು ಗುರುತಿಸಿದ್ದಾರೆ. ಇವರಲ್ಲಿ ಹಲವಾರು ಹೊರಬಾಂಧವ್ಯ ಬೆಡಗುಗಳಿವೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ-ಆನೆ ಹಾಗೂ ಗಂಗಾಬಳ್ಳಿ, ಅಗ್ಗದೇವ, ಅಲಗಸಂಧಿ, ಅಂಬಿಸಾನಿ, ಅನಿಗುಂಡಿಯವ, ಅರೆಲದೇವ, ಬೆಳ್ಳನವ, ಬೆಣ್ಣ್ಯವ, ಬಿಲ್ಲುಗಾರ, ಬ್ಯಾಟಿಗಾರ, ಹಗ್ಗದೇವ, ಹಲಸಿಗ, ಹಲ್ಮಣ್ಯವ, ಹರಿಗಾರ, ಮಲ್ಲಶೆಟ್ಟಿ, ಮಸಾಲ, ಮೌಳಿಗ, ನಾಡಗಡ್ಡೆ, ನಾಟ್ಯಗಾರ, ಪಡಿಗಾರ, ಸುಣ್ಣಗಾರ, ತಳವಾರ, ತಪದೇವ, ತೆಪ್ಪಗಾರ, ತೋಳಬಂದಿ, ಇತ್ಯಾದಿ. ಇತ್ತೀಚೆಗೆ ಕಬ್ಬಲಿಗರು ಮುಖ್ಯವಾಗಿ ನಾಲ್ಕು ಬೆಡಗುಗಳಿಗೂ ಗುರುತಿಸಿಕೊಳ್ಳುತ್ತಾರೆ-ವ್ಯಾಸ, ವಾಲ್ಮೀಕಿ, ಅಗಸ್ತ್ಯ ಹಾಗೂ ಕಶ್ಯಪ.

ಮದುವೆಯ ಸಂಬಂಧಗಳು ಸಾಮಾನ್ಯವಾಗಿ ಸೋದರ ಸಂಬಂಧದಲ್ಲಿ ನಡೆಯುತ್ತವೆ. ವಿವಾಹ ವಿಚ್ಛೇದನೆ ಹಾಗೂ ಮರುವಿವಾಹಗಳಿಗೆ ಅವಕಾಶವಿದೆ. ಇವರಲ್ಲಿ  ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನ ಸೂತಕ ಇವರಲ್ಲಿ ಇಪ್ಪತ್ತೊಂದು ದಿನಗಳವರೆಗೆ ಇದ್ದು, ಇಪ್ಪತ್ತೊಂದನೇ ದಿನ ನಾಮಕರಣ ಮಾಡುತ್ತಾರೆ. ಐದನೇ ತಿಂಗಳಲ್ಲಿ ಅಥವಾ ಮೂರು ವರ್ಷದ ಒಳಗೆ ಮುಂಡನ ಕಾರ್ಯ ಆಚರಿಸುತ್ತಾರೆ. ಹೆಣ್ಣು ಮಕ್ಕಳಿಗೆ ‘ಪುಷ್ಪವತಿ’ ಕಾರ್ಯ ಮಾಡುತ್ತಾರೆ. ಮದುವೆ ಕಾರ್ಯ ಸಂಪೂರ್ಣವಾಗಿ ಹೆಣ್ಣಿನ ಮನೆಯಲ್ಲೇ ನಡೆಯುತ್ತದೆ. ಮದುವೆಯ ಕೆಲವು ಆಚರಣೆಗಳೆಂದರೆ – ಅರಿಶಿಣ ಹೆಚ್ಚುವುದು, ತಾಳಿ ಕಟ್ಟುವುದು, ಅಕ್ಷತೆ ಹಾಕುವುದು ಇತ್ಯಾದಿ. ಶವವನ್ನು ಹೂಳುತ್ತಾರೆ, ಹನ್ನೊಂದು ದಿನ ಸೂತಕ ಆಚರಿಸುತ್ತಾರೆ.

ಕಬ್ಬಲಿಗರು ಮುಖ್ಯವಾಗಿ ಭೂ ರಹಿತರು. ಇತ್ತೀಚೆಗೆ ಇವರಲ್ಲಿ ಕೆಲವರು ಆಧುನಿಕ ವೃತ್ತಿಗಳಲ್ಲಿ ತೊಡಗಿದ್ದಾರೆ. ಇವರು ಶಿವ, ಕೃಷ್ಣ ಹಾಗೂ ವೆಂಕಟೇಶ್ವರ ದೇವರುಗಳನ್ನು ಪೂಜಿಸುತ್ತಾರೆ. ಆಧುನಿಕ ವೈದ್ಯಕೀಯ ಪದ್ಧತಿಯ ಬಗ್ಗೆ ಆಸಕ್ತಿಯಿದ್ದು, ಕುಟುಂಬ ಕಲ್ಯಾಣ ಯೋಜನೆಯನ್ನು ಅನುಸರಿಸುತ್ತಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳಿಗೆ ತಮ್ಮನ್ನು ಹೊಂದಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.