ರಕರಮುಂಡರು ಆಂಧ್ರ ಪ್ರದೇಶದಿಂದ ವಲಸೆ ಬಂದು ಬಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಈ ಹೆಸರು ತೆಲುಗು ಪದಗಳಾದ ‘ಕರಕೊಲ್ಲುಡಿ’ ಯಿಂದ ಬಂದಿದೆ ಎಂದು ಹೇಳಬಹುದು. ಹಾಗೆಂದರೆ ‘ವಾಂತಿ ಮಾಡಿಕೊಳ್ಳುವುದು’ ಎಂದರ್ಥ. ಈ ಸಮುದಾಯದ ಜನರು ಸಾಂಪ್ರದಾಯಿಕವಾಗಿ ಭಿಕ್ಷೆ ಬೇಡುವವರಾದ್ದರಿಂದ ಒಂದು ಉಪಾಯ ಮಾಡುತ್ತಿದ್ದರಂತೆ. ಯಾರಾದರೂ ಭಿಕ್ಷೆ ನೀಡದಿದ್ದರೆ, ಅವರ ಮನೆಯ ಮುಂದೆ ವಾಂತಿ ಮಾಡುವವರಂತೆ ನಟಿಸುತ್ತಿದ್ದರಂತೆ. ಆದರೆ ಈ ರೀತಿಯ ಪ್ರವೃತ್ತಿ ಈಗ ಇವರಲ್ಲಿ ಕಂಡುಬರುವುದಿಲ್ಲ. ತೆಲುಗು ಇವರ ಮಾತೃಭಾಷೆಯಾದರೂ, ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರದು ಪಿತೃಪ್ರಧಾನ ಕುಟುಂಬ ವ್ಯವಸ್ಥೆ. ಈ ಸಮುದಾಯವು ಹೊರಬಾಂಧವ್ಯ ಬೆಡಗುಗಳನ್ನು ಹೊಂದಿದೆ-ಶಾರ್ಕಲೌಲ್, ಯಂಡೌ ಗೌಂತಾಲ, ತೆಲಮಕಲೌಲ, ಯರಕಂಟೌಲ, ಇತ್ಯಾದಿ. ಸೋದರ ಸಂಬಂಧದ ವಿವಾಹಕ್ಕೆ ಅವಕಾಶವಿದೆ. ಮದುವೆಗಳು ಸಂಧಾನದ ಮೂಲಕ ಏರ್ಪಡುತ್ತವೆ. ಏಕಪತ್ನಿತ್ವ/ಏಕಪತಿತ್ವ ರೂಢಿಯಲ್ಲಿದೆ. ಸಾಂಪ್ರದಾಯಿಕವಾಗಿ ಇಪ್ಪತ್ತಾರು ರೂಪಾಯಿಗಳನ್ನು ವಧುದಕ್ಷಿಣೆ (ತೆರ)ಯಾಗಿ ಕೊಡಬೇಕು. ವಿವಾಹ ವಿಚ್ಛೇದನೆಗೆ ಸಮಾಜದ ಒಪ್ಪಿಗೆ ಬೇಕು. ವಿಧುರರ ಹಾಗೂ ವಿಚ್ಛೇದಿತರ ವಿವಾಹ ಸಾಧ್ಯವಿದೆ. ಎಲ್ಲಾ ಗಂಡು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ದೊರೆಯುತ್ತದೆ. ಮದುವೆ ಸಮಾರಂಭವನ್ನು ವಧುವಿನ ಗೃಹದಲ್ಲೇ ಮಾಡಿದರೂ, ಮದುವೆಯೂಟವನ್ನು ಗಂಡಿನ ತಂದೆ ತಾಯಿಗಳೂ ಹಾಕಿಸುತ್ತಾರೆ. ಶವವನ್ನು ಹೂಳುತ್ತಾರೆ. ಸಾವಿನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ.

ಸಾಂಪ್ರದಾಯಿಕವಾಗಿ, ಕರಕರಮುಂಡರು ಅಲೆಮಾರಿ ಭಿಕ್ಷುಕರು. ಕಳೆದ ಎರಡು ದಶಕಗಳಿಂದ ಇವರು ಕೆಲವು ಪ್ರದೇಶಗಳಲ್ಲಿ ನೆಲೆಯೂರಿ ಜೀವನ ಪ್ರಾರಂಭಿಸಿದ್ದಾರೆ. ಕೆಲವರು ವ್ಯವಸಾಯದ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಮುತ್ತೂರ ಮಹಾಲಕ್ಷ್ಮಿ ಇವರ ಆರಾಧ್ಯ ದೇವತೆ. ಮೂರು ವರ್ಷಕ್ಕೊಮ್ಮೆ ಜಾತ್ರೆಯನ್ನು ನಡೆಸಿ ದೇವತೆಗೆ ಗೌರವ ಸಲ್ಲಿಸುತ್ತಾರೆ. ಇದರ ಜವಾಬ್ದಾರಿಯನ್ನು ಇದೇ ಕೋಮಿನ ಹಿರಿಯರು ವಹಿಸಿರುತ್ತಾರೆ. ಮದುವೆ ಹಾಗೂ ಸತ್ತಾಗ ನಡೆಸುವ ಧಾರ್ಮಿಕ ಮೇಲ್ವಿಚಾರಣೆಯನ್ನು ಸಮುದಾಯದ ಹಿರಿಯರು ನಡೆಸುತ್ತಾರೆ. ಆಧುನಿಕ ಶಿಕ್ಷಣದಲ್ಲಿ ಇವರು ಹಿಂದುಳಿದಿದ್ದಾರೆ. ಇವರ ಸಾಮಾಜಿಕ-ಆರ್ಥಿಕ, ಜೀವನ ಸುಧಾರಣೆಯಾಗಬೇಕಾಗಿದೆ. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಇವರಿಗೆ ತಲುಪಬೇಕಾಗಿವೆ.