ರೆವೊಕ್ಕಲು ಮಲೆನಾಡಿನ ಬೆಟ್ಟಗುಡ್ಡಗಳ ನಡುವೆ ಇರುವ ಸಮುದಾಯ. ಕೃಷಿಯೋಗ್ಯ ಭೂಮಿಯಲ್ಲಿ ಒಕ್ಕಲುತನ ಮಾಡುತ್ತ ಬಂದಿರುವ ಇವರಿಗೆ ವೊಕ್ಕಲರು ಎಂದು ಹೆಸರು ಬಂದಿರಬಹುದು. ಕರೆ ಎಂಬುದರ ಅರ್ಥ ಹಾಲು ಹಿಂಡುವುದು, ಪಶುಪಾಲನೆಯನ್ನು ಕೈಗೊಂಡಿರುವ ಇವರು ಹಾಲು ಕರೆಯುವುದು ನಿಜವಾದರೂ, ಇದೇ ಇವರ ಮುಖ್ಯ ವೃತ್ತಿಯಲ್ಲ. ಈ ಸಮುದಾಯದಲ್ಲಿ ಯಾರನ್ನೆ ಕೇಳಿದರೂ, ನೀಡುವ ವಿವರಣೆ ಈ ರೀತಿ ಇದೆ. ‘ಕರೆ’ ಒಕ್ಕಲು ಅಂದರೆ ನಿಜವಾದ ಒಕ್ಕಲು ಅಥವಾ ಸತ್ಯವಂತ, ಪ್ರಾಮಾಣಿಕ ಒಕ್ಕಲು. ಶಬ್ದಕೋಶದಲ್ಲಿ ಕರೆ ಎಂದರೆ ನಿಜ ಅಥವಾ ಸತ್ಯ ಎಂಬ ಅರ್ಥವಿದೆ. ಇವರು ‘ಗೌಡ’ ಎನ್ನುವ ವಿಶೇಷಣ ಬಳಸುತ್ತಾರೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡ ಮಾತನಾಡಿ ಕನ್ನಡ ಲಿಪಿ ಬಳಸುತ್ತಾರೆ.

ಕರೆವೊಕ್ಕರಲ್ಲಿ ಬಳಕೆಯಲ್ಲಿರುವ ಬಳ್ಳಿಗಳು ಎಷ್ಟು ಎಂಬುದು ಸರಿಯಾಗಿ ತಿಳಿದಿಲ್ಲ. ಏಕೆಂದರೆ ಈ ಬಳ್ಳಿಯ ಪ್ರಸ್ತಾಪ ಬರುವುದು ಮದುವೆಯ ಸಂದರ್ಭದಲ್ಲಿ ಮಾತ್ರ. ದುರಬಳ್ಳಿ, ಶೆಟ್ಟಿಬಳ್ಳಿ ಇತ್ಯಾದಿಗಳು ಇವೆಯೆಂದು ಹೇಳುತ್ತಾರೆ. ಸಾಮಾನ್ಯವಾಗಿ ಇವರಲ್ಲಿ ಬಳ್ಳಿಯಿಂದ ಹೊರಬಾಂಧವ್ಯದ ವಿವಾಹ ನಡೆಯುತ್ತವೆ. ಸೋದರ ಸಂಬಂಧಿ ವಿವಾಹಗಳೆ ಹೆಚ್ಚು. ಮೊದಲು ಸುಮಾರು ಇಪ್ಪತ್ತು ಚೀಲ ಭತ್ತ ಹಾಗೂ ಐದುನೂರು ರೂಪಾಯಿಗಳವರೆಗಿನ ತೆರ (ವಧುದಕ್ಷಿಣೆ) ಕೊಡಬೇಕಿತ್ತಾದರೂ, ಈಗ ಇದು ವರದಕ್ಷಿಣೆಯಾಗಿ ರೂಪಾಂತರವಾಗಿದೆ. ವಿವಾಹ  ವಿಚ್ಛೇದನೆಗೆ ಅವಕಾಶವಿದೆ. ಹಾಗೆಯೇ ವಿಧವೆ, ವಿಧುರರ ವಿವಾಹಗಳು ನಡೆಯುತ್ತವೆ. ಗಂಡು ಮಕ್ಕಳಿಗೆ ಪ್ರಾಧಾನ್ಯತೆ ಇದೆ. ತಂದೆಯ ನಂತರ ಹಿರಿಯಮಗ ಮನೆಯ ವಾರಸುದಾರನಾಗಿ ಬರುತ್ತಾನೆ. ಹೆಂಗಸರು ವ್ಯವಸಾಯ, ಪಶುಸಂಗೋಪನೆ, ಹಾಗೂ ಇತರೆ ಆರ್ಥಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಗರ್ಭಿಣಿಗೆ ಸೀಮಂತ ಕಾರ್ಯವನ್ನು ಏಳನೇ ತಿಂಗಳಲ್ಲಿ ಆಚರಿಸುತ್ತಾರೆ. ಜನನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ಋತುಮತಿಯಾದಾಗ ‘ಮೈನೆರೆಯುವ’ ಶಾಸ್ತ್ರವನ್ನು ಮಾಡುತ್ತಾರೆ. ಶವವನ್ನು ಸುಡುತ್ತಾರೆ ಇಲ್ಲವೇ ಹೂಳುತ್ತಾರೆ. ಸಾವಿನ ಸೂತಕವು ಮೂರು ದಿನ ಅಥವಾ ಹತ್ತು ದಿನಗಳವರೆಗೆ ಇರುತ್ತದೆ, ಪ್ರತಿ ವರ್ಷವೂ ‘ಹಿರಿಯರ ಪೂಜೆ’ಯನ್ನು ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಕರೆವೊಕ್ಕಲರು ಕೃಷಿ ಹಾಗೂ ಪಶುಸಂಗೋಪನೆ ಮಾಡುತ್ತಾರೆ. ಇತ್ತೀಚೆಗೆ ಕೃಷಿ, ಖಾಸಗಿ ಹಾಗೂ ಸರ್ಕಾರಿ ಇಲಾಖೆಗಳಲ್ಲಿ ನೌಕರಿ, ಸ್ವಯಂ ಉದ್ಯೋಗ ಹಾಗೂ ಕೂಲಿಗಳಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಾಮಾನ್ಯವಾಗಿ ಇವರಲ್ಲಿ ಸೀಮೆಗೆ ಒಬ್ಬನಂತೆ ಗೌಡ ಇರುತ್ತಿದ್ದ. ಅವನಿಗೆ ಸೀಮೆಯಗೌಡ ಎಂದರ ಕರೆಯುಲಾಗುತ್ತದೆ. ಸೀಮೆಗೌಡ ಎಂದರೆ ಮಾಂಡಲಿಕ ಇದ್ದಂತೆ. ಈತನಿಗೆ ಆಡಳಿತದಲ್ಲಿ ಸಲಹೆ ನೀಡಲು ಬುದ್ಧಿವಂತ ಎಂಬ ವ್ಯಕ್ತಿಯು ಇರುತ್ತಿದ್ದ. ಈ ಬುದ್ಧಿವಂತನೆ ಬರಹ ಬಲ್ಲವನಾಗಿದ್ದರಿಂದ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಡುತ್ತಿದ್ದ. ಇದಲ್ಲದೇ ಕೋಲಕಾರ, ಗೌಡನ ಅಪ್ಪಣೆಗಳನ್ನು ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದ. ರಾಜಕೀಯವಾಗಿ ಗೌಡರ ಆಡಳಿತ ಸೀಮೆಗಳು ಸ್ಪಷ್ಟವಾಗಿರುತ್ತಿದ್ದವು. ಒಬ್ಬರು ಇನ್ನೊಬ್ಬರ ಭೌಗೋಳಿಕ ಸೀಮೆಯೊಳಕ್ಕೆ ಹಸ್ತಕ್ಷೇಪ ಮಾಡುವಂತಿರಲಿಲ್ಲ.

ಕರೆವೊಕ್ಕಲು ಜನರಿಗೆ ಮಾರಮ್ಮ ವೆಂಕಟರಮಣ, ಅಣ್ಣ ಬೊಮ್ಮನ ದೇವರು, ಗುತ್ತಿದೇವರು ಹಾಗೂ ವೀರಭದ್ರ ಇದ್ದಾರೆ. ಈ ಕೋಮಿನವರಿಗೆ ಶ್ರೀಮಂತ ಜಾನಪದ ಪರಂಪರೆಯಿದೆ. ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಗಂಡಸರು ಮತ್ತು ಹೆಂಗಸರು ಹಾಡುತ್ತಾರೆ, ಹಲವು ನುಡಿಸುವ ವಾದ್ಯಗಳನ್ನು ಬಳಸುತ್ತಾರೆ. ವಿದ್ಯಾಭ್ಯಾಸಕ್ಕೆ ಅರೆಬರೆಯಾದ ಸಮ್ಮತಿಯಿದೆ. ಇವರಿಗೆ ದೇಶಿ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಗಳೆರಡರ ಬಗ್ಗೆ ಒಲವು ಇದೆ. ಕುಟುಂಬ ಕಲ್ಯಾಣ ಯೋಜನೆಯನ್ನು ಪಾಲಿಸುತ್ತಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ಇವರು ಹಿಂದುಳಿದಿದ್ದಾರೆ.

ನೋಡಿ:

ಹೆಗಡೆ, ಆರ್.ಪಿ., ೧೯೯೮. ‘ಕರೆ ಒಕ್ಕಲು,ಹೆಚ್‌.ಜಿ.ಲಕ್ಕಪ್ಪಗೌಡ ಕರ್ನಾಟಕ ಬುಡಕಟ್ಟುಗಳು‘,  (ಸಂ) ಜಾನಪದ  ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

Salatore. R.N., Encyclopaedia of Indian Culture, Part -2, Sterling Publishers, Pvt. Ltd., New Delhi