ಲಾಲ ಸಮುದಾಯವು ಹಿಂದೂ ಹಾಗೂ ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿದೆ. ಇವರನ್ನು ಕಸಾಯಿ, ಕಟುಕ, ಆರ್ಯ ಅಥವಾ ಆರ್ಯಕಟುಕರು, ಮರಾಠಕಸಾಯಿ, ಹಿಂದೂ ಕಸಾಯಿ ಹಾಗೂ ಕಟಗ ಎಂದೂ ಕರೆಯುತ್ತಾರೆ. ಇವರಲ್ಲಿ ಮೂರು ಉಪಪಂಗಡಗಳಿವೆ. ಅವೆಂದರೆ ಲಡಕಸಾಯಿ, ಸುಲ್ತಾನಿಕಸಾಯಿ ಹಾಗೂ ಮದರಾಸಿಕಸಾಯಿ. ಕಲಾಲರಲ್ಲಿ ಬಳಕೆಯಾಗುವ ಮನೆತನದ ಹೆಸರುಗಳೆಂದರೆ ಭಡನಕರ, ಕೋಟೆಕಾರ, ಭೀಮ್‌ಕರ, ಚಂಬುಕರ, ಕೊಪ್ಪೆಕರ, ಭಾಕಧರ, ಹನುಮಂತಕರ, ದೊಂಗಕರ, ಮನಕರ, ಬಡಿಕಿಕರ, ಘಲಂತವಾಡ ಹಾಗೂ ನಿಜಾಮ್‌ಕರ. ಇವರು ಹಿಂದಿ, ಮರಾಠಿ ಹಾಗೂ ಕನ್ನಡ ಮಾತನಾಡುತ್ತಾರೆ.

ಸುಲ್ತಾನಿಕಸಾಯಿ ಹಾಗೂ ಲಡಕಸಾಯಿ ಉಪಪಂಗಡಗಳು ಮುಸ್ಲಿಂ ಪಂಗಡಗಳಾಗಿದ್ದು, ಮುಸ್ಲಿಂ ಧಾರ್ಮಿಕ ವಿಧಿಗಳನ್ನು ಪಾಲಿಸುತ್ತಾರೆ. ಇವರನ್ನು ಮದರಾಸಿ ಕಸಾಯಿಗಿಂತ ಕೆಳಸ್ತರದವರೆಂದು ಪರಿಗಣಿಸಿದ್ದಾರೆ. ಮದುವೆ, ತಂದೆಯ ಸಹೋದರನ ಮಗಳು, ಅಥವಾ ತಾಯಿಯ ಸಹೋದರಿಯ ಮಗಳೊಂದಿಗೆ ನಡೆಯುತ್ತವೆ. ಸಾಂಪ್ರದಾಯಿಕ ನಿಯಮಗಳ ಪ್ರಕಾರ ವಿಧವೆಯರಿಗೆ ವಿವಾಹವಿಲ್ಲ. ಆದರೆ ವಿಧುರರ ಮರುವಿವಾಹವಾಗಲು ಅವಕಾಶವಿದೆ. ಆಸ್ತಿಯನ್ನು ಗಂಡುಮಕ್ಕಳಲ್ಲಿ ಸಮನಾಗಿ ಹಂಚಲಾದರೂ ಒಂದು ಭಾಗವನ್ನು ಪೋಷಕರಿಗಾಗಿ ಉಳಿಸಿಕೊಳ್ಳಲಾಗುತ್ತದೆ. ಹಿರಿಯಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಮಗುವಿಗೆ ನಾಮಕರಣವನ್ನು ಐದನೇ, ಹದಿನೈದನೇ ಅಥವಾ ನಲವತ್ತನೇ ದಿನದಂದು ಮಾಡುತ್ತಾರೆ. ಮದುವೆಯ ಆಚರಣೆಗಳಲ್ಲಿ ಚೊಂಚಿಕ ರಸ್ಮ, ವೀಳ್ಯಶಾಸ್ತ್ರ, ದೇವತಾಕಾರ್ಯ, ಜನಭಟಕ, ನಿಶುಲನೆಕ, ಚೋಳಿಕರಸ್ಮ, ಹರಚಿಲಕುರಸ್ಮ, ತಾಳಿಕಟ್ಟುವುದು ಹಾಗೂ ಕನ್ಯಾದಾನ ಸೇರಿವೆ. ಶವವನ್ನು ಸಾಮಾನ್ಯವಾಗಿ ಹೂಳಿದರೆ ಕೆಲವೊಂದು ಕಡೆ ಸುಡುವುದರ ಉದಾಹರಣೆಗಳಿವೆ.

ಸಾಂಪ್ರದಾಯಿಕವಾಗಿ ಕಲಾಲರು ಕಟುಕರು ಹಾಗೂ ಮಾಂಸ ಮಾರುವವರು. ಕೋಮಿನ ಮುಖಂಡರು ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಸುಲ್ತಾನಿಕಸಾಯಿ ಹಾಗೂ ಲಡಕಸಾಯಿ ಗುಂಪುಗಳು ಮೊದಲು ಇಸ್ಲಾಂ ಧರ್ಮಪಾಲಿಸುತ್ತಿದ್ದರೆ, ಕೆಲವರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಇವರು ದೇವಸ್ಥಾನ ಹಾಗೂ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸುತ್ತಾರೆ. ಇವರ ಮಕ್ಕಳು ಸಾಮಾನ್ಯವಾಗಿ ಮಾಧ್ಯಮಿಕ ಶಿಕ್ಷಣದ ತನಕ ಓದುತ್ತಾರೆ. ಸರ್ಕಾರದ ನಾಗರೀಕ ಸೇವೆ ಹಾಗೂ ನಾಗರೀಕ ಸೌಲಭ್ಯಗಳನ್ನು ಪಡೆಯಬೇಕಾಗಿದೆ.