ಕಾಡುಗೊಲ್ಲರು ಕರ್ನಾಟಕದಾದ್ಯಂತ ಇದ್ದರೂ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ. ಅದು ಬಿಟ್ಟರೆ ಬಳ್ಳಾರಿ ಮತ್ತು ತುಮಕೂರು ಜಿಲ್ಲೆಗಳಲ್ಲಿಯೂ ಸ್ವಲ್ಪಮಟ್ಟಿಗೆ ಕಂಡುಬರುತ್ತಾರೆ. ಹಾವನೂರು ಆಯೋಗದ ವರದಿಯಂತೆ ಕಾಡುಗೊಲ್ಲರ ಸಂಖ್ಯೆ ಕರ್ನಾಟಕದಾದ್ಯಂತ, ಐವತ್ತು ಸಾವಿರಕ್ಕೂ ಹೆಚ್ಚು ಇರಬಹುದು. ಕರಡಿ ಗೊಲ್ಲರು, ಮಾರನವರ ಗೊಲ್ಲರು, ಅಜ್ಜಿಯವರ ಗೊಲ್ಲರು, ಸನ್ನರ ಗೊಲ್ಲರು, ಕಹಳೆಯ ಗೊಲ್ಲರು, ಕಂಬಿಯವರ ಗೊಲ್ಲರ ಎಂಬ ಬೆಡಗು ಮೂಲ ಹೆಸರುಗಳಲ್ಲಿ ಕರೆಯಲ್ಪಡುವ ಕಾಡುಗೊಲ್ಲರ ಕರ್ನಾಟಕದ ಮೂಲದವರು ಎಂದು ತಿಳಿಯಬಹುದು.

ಗೊಲ್ಲ ಎಂದರೆ ಗೋವುಗಳನ್ನು ಕಾಯುವವನು ಎಂದೂ, ಕಾಡುಗೊಲ್ಲ ಎಂದರೆ ಕಾಡಿನಲ್ಲಿ ವಾಸಿಸುವ ಗೊಲ್ಲನೆಂದೂ ಅರ್ಥವಾಗುತ್ತದೆ. ಕಾಡುಗೊಲ್ಲರನ್ನು ‘ಅಡವಿಗೊಲ್ಲರು’, ‘ಕರಡಿಗೊಲ್ಲರು’, ‘ಕಲ್ಲಿಗೊಲ್ಲರು’, ‘ಕಳ್ಳಿಗೊಲ್ಲರು’ , ‘ಹಟ್ಟಿಗೊಲ್ಲರು’ ಎಂಬ ಹೆಸರುಗಳಿಂದಲೂ ಕರೆಯುವ ವಾಡಿಕೆಯಿದೆ. ಅಡವಿ ಎಂದರೆ ಕಾಡು. ಕಾಡುಗೊಲ್ಲರೆಂದರೆ ಅಡವಿಗೊಲ್ಲರೆಂದೇ ಅರ್ಥವಾಗುತ್ತದೆ. ಕರಡಿಗೊಲ್ಲರು ಎಂಬುದು ಕಾಡುಗೊಲ್ಲರ ಒಂದು ಪ್ರಮುಖವಾದ ಪ್ರಭೇದ. ಆದರೆ ಪಾವುಗಡ, ಕೂಡ್ಲಿಗಿ ತಾಲೂಕುಗಳಲ್ಲಿ, ಕಾಡುಗೊಲ್ಲರನ್ನು ಕರಡಿಗೊಲ್ಲರೆಂದೇ ಕರೆಯುವ ವಾಡಿಕೆ ಇದೆ. ಈ ಪ್ರದೇಶಗಳ ಜನಕ್ಕೆ ‘ಕಾಡುಗೊಲ್ಲರು’ ಎಂಬ ಪದವನ್ನು ಬಳಸಿದರೆ ಅರ್ಥವಾಗುವುದಿಲ್ಲ; ಕರಡಿಗೊಲ್ಲರು ಎಂಬ ಪದವನ್ನು ಬಳಸಿದರೆ ಮಾತ್ರ ಅರ್ಥವಾಗುತ್ತದೆ. ಕಾಡುಗೊಲ್ಲರು ಊರಿನಿಂದ ಹೊರಗೆ ಪ್ರತ್ಯೇಕವಾದ ಹಟ್ಟಿಗಳನ್ನು ಕಟ್ಟಿಕೊಂಡು ವಾಸಮಾಡುವುದರಿಂದ ಇವರನ್ನು ಹಟ್ಟಿಗೊಲ್ಲ ರೆಂದು ಕರೆಯುವ ವಾಡಿಕೆಯೂ ಇದೆ. ಹಟ್ಟಿಗಳ ಸುತ್ತ ಕಳ್ಳಿಯನ್ನು ಹಾಕಿರುವುದರಿಂದ ಕಾಡುಗೊಲ್ಲರನ್ನು ‘ಕಳ್ಳಿಗೊಲ್ಲರು’ ಎಂದು ಕರೆಯುವ ವಾಡಿಕೆ ಇದೆಯೆಂದು ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ಅವರು ತಮ್ಮ The Mysore Tribes and Castes  ಎಂಬ ಪುಸ್ತಕದಲ್ಲಿ ಸೂಚಿಸಿದ್ದಾರೆ. “ಕಾಡುಗೊಲ್ಲರನ್ನು ಕಳ್ಳಿಗೊಲ್ಲರೆಂದೂ ಕರೆಯಲಾಗುತ್ತದೆ. ಅವರ ಹಟ್ಟಿಗಳ ಸುತ್ತಲೂ ಕಳ್ಳಿಯ ಗಿಡಗಳನ್ನು ಬೆಳಸಿರುತ್ತಾರಾದ್ದರಿಂದ ಅವರಿಗೆ ಕಳ್ಳಿಯ ಗೊಲ್ಲರು ಎಂಬ ಹೆಸರು ಬಂದರಿಬೇಕೆಂಬ ಊಹೆ ಸರಿಯಾದುದಲ್ಲ” ಎಂದು ಜೀ.ಶಂ. ಪರಮಶಿವಯ್ಯನವರು ಅಭಿಪ್ರಾಯ ಪಡುತ್ತಾರೆ. ಕಾಡುಗೊಲ್ಲರಿಗೆ ಕಳ್ಳಿಗೊಲ್ಲರು ಎಂಬ ಹೆಸರು ಇರಲಾರದು, ಅದು ಕಲ್ಲಿಗೊಲ್ಲರು ಎಂದು ಇರಬೇಕು ಎಂಬ ಅಭಿಪ್ರಾಯವನ್ನು ಸಮರ್ಥಿಸುತ್ತ ಬಸವರಾಜದೇವರ ರಗಳೆಯ ಕೆಲವು ಸಾಲುಗಳನ್ನು ಉಲ್ಲೇಖಿಸಿದ್ದಾಎ. ಜೀ.ಶಂ.ಪರಮಶಿವಯ್ಯ (೧೯೭೯). “ಹೆಗಲ ಕಂಬಳಿ, ಕಲ್ಲಿ ಹಾಗೂ ಗೋವಳಿಗೋಲು ಇವರ ಮುಖ್ಯ ಸಾಧನಗಳು. ಅನೇಕ ದಿನಗಳ ಕಾಲ ದನದ ಹಿಂಡುಗಳೊಡನೆ ಕಾವಲುಗಳಿಗೆ ಇವರು ಹೋಗುತ್ತಿದ್ದುದರಿಂದ ಕಲ್ಲಿಯನ್ನು ಬುತ್ತಿಯನ್ನು ಕಟ್ಟಿಕೊಂಡು ಹೋಗುತ್ತಿದ್ದುದು ಸಹಜ. ಆದ್ದರಿಂದ ಕಲ್ಲಿಗೊಲ್ಲರು ಎಂಬ ಪದವನ್ನು ಒಪ್ಪಬೇಕಾಗುತ್ತದೆ. ಕಳ್ಳಿಗೊಲ್ಲರು ಎಂಬ ಪದಕ್ಕೆ ಸಂಬಂಧಿಸಿದಂತೆ ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ಕೊಟ್ಟಿರುವ ವಿವರಣೆ ಸೂಕ್ತವಲ್ಲ. ಆದರೆ ಕಾಡುಗೊಲ್ಲರ ಹಟ್ಟಿಗಳ ಸುತ್ತ ಕಳ್ಳಿಯನ್ನು ಬೆಳೆಸುವುದಕ್ಕಿಂತ ಹೆಚ್ಚಾಗಿ ಜಾಲಿ ಮುಳ್ಳು ಅಥವಾ ಬಾರೆ ಮುಳ್ಳು ಹಾಕಿ ಬೇಲಿ ಕಟ್ಟಿರುತ್ತಾರೆ. ಜಾಲಿ ಮುಳ್ಳನ್ನು ಜಾಲಿ ಕಳ್ಳೆ ಎಂದೂ, ಬಾರೆ ಮುಳ್ಳನ್ನು ಬಾರೆ ಕಳ್ಳೆ ಎಂದೂ ಕಾಡುಗೊಲ್ಲರು ಕರೆಯುತ್ತಾರೆ. ಕಾಡುಗೊಲ್ಲರು ತಮ್ಮ ಹಟ್ಟಿಯ ಸುತ್ತ ಹಾಕುವ ಬೇಲಿಗೆ ಕಳ್ಳೆಯನ್ನು ಉಪಯೋಗಿಸಿ, ಉಳಿದೆಲ್ಲರಿಂದಲೂ ಪ್ರತ್ಯೇಕವಾಗಿರುವುದರಿಂದ, ಕಳ್ಳೆ ಹಾಕುವುದರ ಅವರ ಸಂಸ್ಕೃತಿಯ ಒಂದು ಮುಖ್ಯವಾದ ಲಕ್ಷಣವಾದುದರಿಂದ, ಇವರಿಗೆ ಕಳ್ಳಿಗೊಲ್ಲರು ಎಂಬ ಹೆಸರು ಸರಿಹೊಂದುತ್ತದೆ” (ಶಂಕರನಾರಾಯಣ. ತೀ.ನಂ ೧೯೮೨). ಈ ಪದ ಕೆಲವು ಕಡೆಗಳಲ್ಲಿ ಇಂದಿಗೂ ಬಳಕೆಯಲ್ಲಿದೆ. ಕಾಡುಗೊಲ್ಲರ ವೈಶಿಷ್ಟ್ಯವಿರುವುದು ಇವರು ಊರುಗಳಲ್ಲಿ ವಾಸ ಮಾಡದೆ ಕಾಡುಗಳಲ್ಲಿ ವಾಸಮಾಡುವುದರಿಂದ; ಊರುಗಳ ಮುಖವನ್ನೇ ಕಾಣದ ಎಷ್ಟೋ ಜನ ಕಾಡುಗೊಲ್ಲರು ಇಂದಿಗೂ ಇದ್ದಾರೆ.

ಕಾಡುಗೊಲ್ಲರು ತಾವು ಮೂಲತಃ ಯಾದವ ಕುಲಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ. ಶ್ರೀಕೃಷ್ಣ ಗೊಲ್ಲರೊಡನೆ ಬೆಳೆದ ಮತ್ತು ಗೊಲ್ಲಭಾಮೆ ಯರೊಡನೆ ರಾಸಕ್ರೀಡೆಯಾಡಿದ ಎಂಬ ಕಾರಣದಿಂದ ತಾವು ಕೃಷ್ಣನ ಕುಲದವರೆಂದು ಇವರು ಹೇಳಿಕೊಳ್ಳುತ್ತಾರೆ. ಊರುಗೊಲ್ಲರಲ್ಲಿ ಕೆಟ್ಟಿ ಹಟ್ಟಿ ಗೊಲ್ಲರು, ಮದ್ದಿನಗೊಲ್ಲರು, ಪೆದ್ದೇಟಗೊಲ್ಲರು, ಕಂಬಿಗೊಲ್ಲರು ಮೊದಲಾದ ಬಗೆಗಳನ್ನು ಕಾಣಬಹುದು. ಆದರೆ ಕಾಡುಗೊಲ್ಲರು ಈ ಎಲ್ಲ ಬಗೆಯ ಗೊಲ್ಲರಿಂದಲೂ ಬೇರೆಯಾಗಿದ್ದಾರೆ. ಊರುಗೊಲ್ಲರ ಮಾತೃಭಾಷೆ ತೆಲುಗು, ಇವರು ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದ್ದಾರೆ. ಕರ್ನಾಟಕದಲ್ಲಿ ಇವರ ಸಂಖ್ಯೆ ಕಡಿಮೆ ಇದ್ದರೂ ಮನೆಯಲ್ಲಿ ಆಡುವ ಮಾತು ತೆಲುಗು. ಆದರೆ ಕಾಡುಗೊಲ್ಲರ ಮಾತೃಭಾಷೆ ಕನ್ನಡ ಆಂಧ್ರಪ್ರದೇಶದ ಮಡಕಸಿರ, ಕಲ್ಯಾಣದುರ್ಗ ಮತ್ತು ರಾಯದುರ್ಗ ತಾಲ್ಲೂಕುಗಳಲ್ಲಿರುವ ಕಾಡುಗೊಲ್ಲರ ಮನೆಮಾತೂ ಕನ್ನಡ (ಶಂಕರನಾರಾಯಣ ತೀ.ನಂ. ೧೯೮೨). ಕಾಡುಗೊಲ್ಲರು ಊರಿನಿಂದ ದೂರದಲ್ಲಿ ಕಾಡಿನಲ್ಲಿ ವಾಸಿಸುವುದರಿಂದ ಪ್ರತ್ಯೇಕತೆಯನ್ನು ಉಳಿಸಿಕೊಳ್ಳು ಸಾಧ್ಯವಾಗಿದೆ. ಆದರೆ ಊರುಗೊಲ್ಲರು ಊರುಗಳಲ್ಲಿಯೇ ವಾಸಮಾಡುವುದರಿಂದ ಎಲ್ಲಾ ಜಾತಿಯ ಜನರೊಡನೆ ಬೆರೆಯುವುದರಿಂದ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಕಾಡುಗೊಲ್ಲರು

ಕಾಡುಗೊಲ್ಲರು

ಕಾಡುಗೊಲ್ಲರು ಅನಾಗರಿಕತೆಯ ಊರುಗೊಲ್ಲರು ಅವರನ್ನು ತಿರಸ್ಕಾರದಿಂದ ಕಾಣುತ್ತಾರೆ. ಹಾಗೆಯೇ ಊರುಗೊಲ್ಲರು ಊರು ಸೇರಿ ಕುಡಿಯುವ, ಸೇದುವ ಚಟಗಳಿಗೆ ಬಲಿಯಾಗಿ, ಹಾಳಾದರೆಂದು ಕಾಡುಗೊಲ್ಲರು ಅವರನ್ನು ತಿರಸ್ಕಾರದಿಂದ ಕಾಣುತ್ತಾರೆ. ಒಟ್ಟಾರೆ ಹೇಳುವುದಾದರೆ ಊರುಗೊಲ್ಲರುಮತ್ತು ಕಾಡುಗೊಲ್ಲರು ತಾವು ಯಾದವ ಕುಲದವರೆಂದು ಹೇಳಿಕೊಂಡರೂ ಪರಸ್ಪರ ಯಾವ ಸಂಬಂಧವನ್ನೂ ಇಟ್ಟುಕೊಳ್ಳದೆಯೇ ಪ್ರತ್ಯೇಕ ಸಮುದಾಯಗಳಾಗಿ ಬದುಕುತ್ತಿದ್ದಾರೆ.

ಸರ್ಕಾರದಿಂದ ಕಾಡುಗೊಲ್ಲರಿಗೆ ದೊರೆತಿರುವ ಕೆಲವು ವಿಶೇಷ ಸೌಲಭ್ಯಗಳನ್ನು ಊರುಗೊಲ್ಲರು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ. ಕಾಡುಗೊಲ್ಲರು ಅನೈತಿಕ ಸಂಬಂಧ ಹೊಂದಿರುವವರನ್ನು ತಮ್ಮ ಹಟ್ಟಿಯೊಳಕ್ಕೆ ಸೇರಿಸುವುದಿಲ್ಲ. ಹೀಗೆ ಬಹಿಷ್ಕೃತರಾದವರನ್ನು ಕೆಟ್ಟ ಹಟ್ಟಿಗೊ‌ಲ್ಲರು ಎಂದು ಕರೆಯುತ್ತಾರೆ. ಪ್ರತಿಯೊಬ್ಬ ಕಾಡುಗೊಲ್ಲನಿಗೂ ಒಂದು ಹಟ್ಟಿ ಮತ್ತು ಒಂದು ಕಟ್ಟೆ ಇರಬೇಕು. ಹಟ್ಟಿಯಿಂದ ಉಚ್ಛಾಟಿತರಾದವರು ಅನಿವಾರ್ಯವಾಗಿ ಕಟ್ಟೆ ಮನೆಯಿಂದಲೂ ಉಚ್ಛಾಟಿತರಾಗಬೇಕಾಗುತ್ತದೆ. ಹೀಗೆ ಉಚ್ಛಾಟಿತರಾದ ಕೆಟ್ಟಿಹಟ್ಟಿಗೊಲ್ಲರು ಪ್ರತ್ಯೇಕವಾಗಿಯೇ ವಾಸಮಾಡಬೇಕು ಹಟ್ಟಿಯೊಳಕ್ಕೆ ಬರುವಂತಿಲ್ಲ. ಪೆದ್ದೇಟ ಗೊಲ್ಲರು ಆಂಧ್ರದಲ್ಲಿದ್ದಾರೆ ಕಂಚಿಗೊಲ್ಲರು ಕರ್ನಾಟಕದಲ್ಲಿದ್ದಾರೆ. ಕಾಡುಗೊಲ್ಲರಿಗೂ ಇವರಿಗೂ ಯಾವ ಸಂಬಂಧವೂ ಇಲ್ಲ.

ಕಾಡುಗೊಲ್ಲರಲ್ಲಿ ಉಪಪಂಗಡಗಳನ್ನು ಬೆಡಗುಗಳೆಂದು ಕರೆಯುತ್ತಾರೆ. ಚಿತ್ತಮುತ್ತಿ ಚಂದ ಮುತ್ತಿ ಮತ್ತು ರಾಮೇಗೌಡನ ಎಂಬ ಮುಖ್ಯ ಉಪಪಂಗಡಗಳಿವೆ. ಇವುಗಳಲ್ಲಿ ಒಂದೊಂದು ಪಂಗಡದಲ್ಲಿಯೂ ಹಲವಾರು ಬೆಡಗುಗಳಿವೆ. ಆದರೆ ಬೆಡಗುಗಳ ಸಂಖ್ಯೆ ಖಚಿತವಾಗಿ ತಿಳಿದುಬಂದಿಲ್ಲ. ಕ್ಷೇತ್ರಕಾರ್ಯದಲ್ಲಿ ತಿಳಿದುಬಂದಂತೆ ಇತ್ತೀಚೆಗೆ ಕಾಡುಗೊಲ್ಲರು ಬೆಡಗುಗಳಿಗೆ ಹಾಗೂ ಕುಲಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡದೆ ಇರುವುದು ಕಂಡು ಬರುತ್ತದೆ. ಇವರಲ್ಲಿ ಮುಖ್ಯವಾಗಿ ಕಂಡು ಬರುವ ಕುಲಗಳೆಂದರೆ- ಚಿತ್ತಿ ಮುತ್ತಿ, ಚಂದ ಮುತ್ತಿ ಹಾಗೂ ರಾಮೇಗೌಡ ಕುಲದಲ್ಲಿ ಕರಡಿ ಮತ್ತು ಮಾರನವರ ಎಂಬ ಬೆಡಗುಗಳು ಕಂಡುಬರುತ್ತವೆ. ಚಂದಮುತ್ತಿ ಕುಲದವರಲ್ಲಿ ಅಜ್ಜಿ ಯವರ, ಸನ್ನರ, ಸೋಮನವರ, ಬೊಮ್ಮನವರ, ಕೋಣನವರ, ಪೋಲನವರ, ಎಗಡಿನವರ ಇತ್ಯಾದಿ ಬೆಡಗುಗಳು ಕಂಡುಬರುತ್ತವೆ. ರಾಮೇಗೌಡನ ಕುಲದವರಲ್ಲಿ ಆರೇ ನವರ, ಮೇರೆನವರ, ಕಂಬಿಯವರ, ಕಹಳೆಯವರ, ವಡೆಯವರ, ಒನಕೆಯ ವರ, ಬೆಳ್ಳೂರವರ, ಚೀರವರ, ಮಾಸಿನವರ ಇತ್ಯಾದಿ ಬೆಡಗುಗಳು ಕಂಡುಬರುತ್ತವೆ.

ಸಾಂಪ್ರದಾಯಿಕ ಗೊಲ್ಲರ ಹಟ್ಟಿಯ ನಡುವೆ ದೇವಸ್ಥಾನ ಇರುತ್ತದೆ. ಈ ದೇವಸ್ಥಾನವನ್ನು ಬಿದಿರಿನಿಂದ ಮಾಡಿ, ಅದಕ್ಕೆ ಹಂಚಿಹುಲ್ಲು ಅಥವಾ ಬಾದೆಹುಲ್ಲನ್ನು ಹೊದಿಸಿರುತ್ತಾರೆ. ದೇವಸ್ಥಾನ ಗೋಳಾಕಾರವಾಗಿದ್ದು, ಬಾಗಿಲು ಚಿಕ್ಕದಾಗಿದ್ದು, ಪೂರ್ವಾಭಿಮುಖವಾಗಿರುತ್ತದೆ. ಒಳಭಾಗ ಅತ್ಯಂತ ಚಿಕ್ಕದಾಗಿರುತ್ತದೆ. ದೇವಸ್ಥಾನವನ್ನು ‘ಗುಬ್ಬ’ ಎಂದೂ ಕರೆಯುತ್ತಾರೆ. ಈ ಗುಬ್ಬವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬಹುದು. ಕೆಲವು ಪ್ರದೇಶಗಳಲ್ಲಿ ಹೆಂಚಿನ ಅಥವಾ ತಾರಸಿಯ ಕಟ್ಟಡದ ಒಳಗೆ ಗುಬ್ಬವನ್ನ ಇಡುತ್ತಾರೆ.

ಕಳೆದ ಶತಮಾನಗಳಲ್ಲಿ ಕಾಡುಗೊಲ್ಲರು ಅಲೆಮಾರಿಗಳಾಗಿದ್ದರು. ಈಗ ಒಂದು ಕಡೆ ನೆಲೆನಿಂತು, ವ್ಯವಸಾಯದೊಡನೆ ಕುರಿಸಾಕಣೆಯನ್ನು ಪ್ರಧಾನ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕಾಡುಗೊಲ್ಲರು ಸ್ವಾತಂತ್ರ್ಯಪೂರ್ವದಲ್ಲಿ ಬುಡಕಟ್ಟು ಜೀವನ ನಡೆಸುತ್ತಿದ್ದರು. ಆದರೆ ಇವರ ಬುಡಕಟ್ಟು ಆಚರಣೆಗಳಲ್ಲಿ ಸ್ವಲ್ಪ ಮಧ್ಯ ಬದಲಾವಣೆ ಕಂಡುಬರುತ್ತದೆ. ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರು ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿ ಪ್ರಗತಿ ಹೊಂದುತ್ತಿದ್ದಾರೆ.

ನೋಡಿ:

ಪರಮಶಿವಯ್ಯ, ಜೀ.ಶಂ. ೧೯೭೯. ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಶಂಕರನಾರಾಯಣ, ತೀ.ನಂ., ೧೯೮೨. ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು.  ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.