ಕುರುಬ ಎಂಬುದು ಕುರಿಕಾಯುವ ಸಾಂಪ್ರದಾಯಿಕ ವೃತ್ತಿ ಅನುಸರಿಸುವ ಸಮುದಾಯದ ಹೆಸರು. ಮೈಸೂರು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಕುರುಬರನ್ನು ಊರುಕುರುಬ ಮತ್ತು ಕಾಡುಕುರುಬ ಎಂಬುದಾಗಿ ಕರೆಯುತ್ತಾರೆ. ಕಾಡು ಕುರುಬರನ್ನು ಮತ್ತೆ ಬೆಟ್ಟ ಕುರುಬ ಹಾಗೂ ಜೇನುಕುರುಬ ಎಂಬುದಾಗಿ ವಿಭಾಗಿಸಲಾಗಿದೆ. ಥರ್ಸ್ಟನ್ ದೈಹಿಕ ಮಾನವಶಾಸ್ತ್ರದ ಆಧಾರದ ಮೇಲೆ ಕಾಡುಕುರುಬರು, ಊರುಕುರುಬರಿಗಿಂತ ಅಥವಾ ಕುರುಬರಿಗಿಂತ ಭಿನ್ನವಾದವರು ಎಂಬುದಾಗಿ ಅಭಿಪ್ರಾಯಪಡುತ್ತಾರೆ. ಕಾಡುವಾಸಿಗಳಾಗಿದ್ದು ಬೆತ್ತ ಅಥವಾ ಬಿದಿರನ್ನು ಬಳಸಿ ಮೊರ, ಬುಟ್ಟಿ, ಇತ್ಯಾದಿ ವಸ್ತುಗಳನ್ನು ತಯಾರಿಸುವ ಬುಡಕಟ್ಟಿನ ಜನರನ್ನು ಬೆಟ್ಟ, ಬೆತ್ತ ಅಥವಾ ಕಾಡು ಕುರುಬರೆಂಬುದಾಗಿ ಕರೆಯಲಾಗುತ್ತದೆ.

ಜೇನುಕುರುಬ ಮತ್ತು ಕಾಡುಕುರುಬರ ಶಾರೀರಿಕ ಲಕ್ಷಣಗಳಲ್ಲಿ ಹೆಚ್ಚು ವ್ಯತ್ಯಾಸಗಳು ಕಂಡುಬರದಿದ್ದರು, ಭಾಷೆ, ಉಡುಗೆ, ತೊಡುಗೆ, ವೃತ್ತಿ ಹಾಗೂ ಮತ್ತಿತರ ಸಾಂಸ್ಕೃತಿಕ ಅಂಶಗಳಲ್ಲಿ ಈ ಬುಡಕಟ್ಟು ಸಮುದಾಯಗಳ ನಡುವೆ ಹೆಚ್ಚಿನ ಭಿನ್ನತೆ ಇರುವುದನ್ನು ಗುರುತಿಸಬಹುದು. ಕಾಡು ಕುರುಬರನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳಲ್ಲಿ, ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ, ಹುಣಸೂರು, ನಂಜನಗೂಡು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಹೆಚ್ಚಾಗಿ ಕಾಣಬಹುದು. ಕಾಡುಕುರುಬರು ವಾಸಮಾಡುವ ಪ್ರದೇಶವನ್ನು ‘ಹಾಡಿ’ ಎಂಬುದಾಗಿ ಕರೆಯುತ್ತಾರೆ. ಹಾಡಿ, ಪೋಡು, ಮಾಡ ಎಂಬ ಪದಗಳನ್ನು ಗ್ರಾಮ ಎಂಬ ಅರ್ಥ ಬರುವ ರೀತಿಯಲ್ಲಿ ಇವರು ಬಳಸುತ್ತಾರೆ. ಇವರು ಹಾಡಿಗಳನ್ನು ಹೆಚ್ಚಾಗಿ ಒಂದು ತೊರೆಯ ಸಮೀಪದಲ್ಲಿ ಅಥವಾ ನೀರಿನ ಸೌಲಭ್ಯಗಳಿರುವ ಸ್ಥಳದಲ್ಲಿ ನಿರ್ಮಿಸಿಕೊಳ್ಳುತ್ತಾರೆ.

೧೯೦೧ರ ಮೈಸೂರು ಜನಗಣತಿಯಲ್ಲಿ ಕಾಡುಕುರುಬರಲ್ಲಿ ಆನೆ, ಬೇವಿನ ಮತ್ತು ಕೊಳ್ಳಿ ಎಂಬ ಮೂರು ಬೇಡುಗುಗಳ ಉಲ್ಲೇಖವನ್ನು ಕಾಣಬಹುದು. ಕಾಡುಕುರುಬರಲ್ಲಿ ಹಲವಾರು ಬೆಡಗುಗಳನ್ನು ಹರೀಶ್ ಹಾಗೂ ಇನ್ನು ಕೆಲವು ವಿದ್ವಾಂಸರುಗಳು ಈ ಕೆಳಕಂಡಂತೆ ಗುರುತಿಸಿದ್ದಾರೆ. ಅವೆಂದರೆ ಕೊಟಮಕ್ಕ, ಕಿಂದರಿಮಕ್ಕ, ಖಿಂದೀರಮಕ್ಕ, ತೋಪೆಟಿಮಕ್ಕ, ಕೆಮಟಿಮಕ್ಕ, ತಿರುಮಲಮಕ್ಕ, ಕೆಮ್‌ಸಲ್‌ಮಕ್ಕ, ಕುಲಮಂಜಲ, ಶಂಕಿರಲ, ಒಳಕುರ, ಬಲ್ತಮಕ್ಕ, ನಾನ್ಸಿ, ವಕ್ಕೆದಾಳು, ಬಾಳೇಜಿಮಕ್ಕ, ಕೆಂಪ್ಸಿಮಕ್ಕ, ಜೇಡ್ಲ ಇತ್ಯಾದಿ.

ಕಾಡುಕುರುಬರಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗಿ ಕಂಡುಬರುತ್ತವೆ. ಇವರಲ್ಲಿ ಪಿತೃಪ್ರಧಾನ ಕುಟುಂಬ ಇರುತ್ತವೆ. ಕಾಡುಕುರುಬರ ವಿವಾಹ ಪದ್ಧತಿ ಸರಳ. ಇವರಲ್ಲಿ ವಿವಾಹಕ್ಕೆ ಯೋಗ್ಯರಾದ ಹುಡುಗಿಯನ್ನು ಹುಡುಗ ಹೇಳದೆ ಕೇಳದೆ ಕರೆದೊಯ್ಯವ ಪದ್ಧತಿ ಜಾರಿಯಲ್ಲಿತ್ತು ಎಂದು ತಿಳಿದುಬರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಗಳೇ ತಮ್ಮ ಮಕ್ಕಳ ವಿವಾಹವನ್ನು ನಿರ್ಧರಿಸುವ ಪದ್ಧತಿ ಪ್ರಾಮುಖ್ಯತೆ ಪಡೆಯುತ್ತಿದೆ. ಇವರು ಏಕಪತಿತ್ವ/ಏಕಪತ್ನಿತ್ವ ಪದ್ಧತಿಯನ್ನು ಪಾಲಿಸುತ್ತಾರೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರ ಮದುವೆಗೆ ಅವಕಾಶವಿದೆ. ಎಲ್ಲ ಗಂಡುಮಕ್ಕಳು ತಂದೆಯ ಆಸ್ತಿಯಲ್ಲಿ ಸಮಪಾಲು ಹೊಂದಿರುತ್ತಾರೆ. ಹಿರಿಯ ಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಕಾಡುಕುರುಬರ ಸಾಂಪ್ರದಾಯಿಕ ವೃತ್ತಿಯೆಂದರೆ ಬೇಟೆ ಉಳುಮೆ, ವ್ಯವಸಾಯದ ಕೂಲಿ, ಬುಟ್ಟಿ ಹೆಣೆಯುವುದು ಇತ್ಯಾದಿ. ಸರ್ಕಾರದಿಂದ ಕೆಲವರು ಉಳುವ ಭೂಮಿಯನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ ಕೆಲವರು ಆನೆಗಳನ್ನು ಹಿಡಿಯುವ ವೃತ್ತಿಯಲ್ಲಿ ಪಳಗಿದವರು ಇದ್ದಾರೆ. ತಮ್ಮ ಸಮುದಾಯದ ಸಾಂಪ್ರದಾಯಿಕ ಸಂಘಟನೆಯ ಹಿರಿಯನನ್ನು ‘ಯಜಮಾನ’ ನೆಂದು ಕರೆಯುತ್ತಾರೆ. ಮಾಟ-ಮಂತ್ರ, ದೆವ್ವ ಭೂತಗಳಲ್ಲಿ ನಂಬಿಕೆಯಿಟ್ಟಿದ್ದಾರೆ. ಅದರಿಂದ ಕೆಟ್ಟ ಶಕ್ತಿಗಳು ದೂರವಾಗುತ್ತವೆಂದೂ ನಂಬುತ್ತಾರೆ.

ಈ ಬುಡಕಟ್ಟು ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸಮಗ್ರ ಗಿರಿಜನ ಯೋಜನೆಯನ್ನು ವ್ಯವಸ್ಥೆಗೊಳಿಸಿದೆ. ವಿವೇಕಾನಂದ ಯುವಜನ ಚಳುವಳಿ, ಡೀಡ್, ಸಿ.ಎಸ್.ಐ. ಮುಂತಾದ ಸ್ವಯಂ ಸೇವಾ ಸಂಸ್ಥೆಗಳು ಈ ಜನರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ದುಡಿಯುತ್ತಿವೆ. ಈ ಎಲ್ಲ ಸರ್ಕಾರಿ  ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರಯತ್ನಗಳಿಂದ ಇವರಲ್ಲಿ ಶಿಕ್ಷಣ ಮಟ್ಟ, ಆರ್ಥಿಕ ಚಟುವಟಿಕೆ ಹಾಗೂ ಆರೋಗ್ಯ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿನ ಬದಲಾವಣೆ ಕಂಡು ಬಂದಿದೆ.

ನೋಡಿ :

ಲಲಿತ ಎ.ಸಿ., ೧೯೯೩. ಕಾಡುಕುರುಬ ಮತ್ತು ಜೇನುಕುರುಬರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Hayavadana  Rao, C. 1909. “The Kurubas : A Forest Tribe of the Nilgiris’, Anthropos, 4 : 178:181

Iyer L.K. Anantha Krishna., 1929, ‘Kadu Kuruba’, Man in India. Vol. 9(4). 223-229

lyer, L.K. Anantha Krishna., 1948. ‘Kuruba (Betta)’ In The Coorg Tribes and Castes’, Iyer L.A.Krisna : Garden Press, Madras.

Krishnan, M., 1963. ‘Kuruba A Vanishing Tribe’ Bulletin of Institute of Traditional Culture. Parts I and II.

Kandaiah, K.Narayana, and M.K.Umadevi., 1982. Jenunudi-I Central Institute of Indian Languages, Mysore

Kurup, A.M. and B.K.Roy Burman., 1961. ‘Jenukuruba and Kadu (Betta)Kuruba’ Cenus of India., Part V-B (i) (Ethnographic Notes), Manager of Publications, Delhi Misra, P.K., 1970. ‘Economic Development Among the Jenu Kurubas’, Man in India, Vol 50 (1) 78-86

Misra P.K., 1977. ‘The Jenu Kuruba’ In: Primitive Tribe : The First Step. S.Sinha and B.D. Sharma (ed) : Government of India, Ministry of Home affairs, New Delhi

Mutharayappa. R., 1997. ‘Socio-Cultural Factors and Marriages Among Jenukuruba and Kuruba Tribes of Karnataka’, Man in India 77(4) 397-408

Sadasivaiah, H.M., 1967. ‘Kadu Kurubas’. Journal of the Mysore University,  23: 48-54

Velrathapa, K., 1965. ‘The Cultural Trends of Hill Tribe : Kadu Kuruba in Mysore’, Quarterly Journal of the Mithic Society, 53(3-4) : 107-112