ಕಿಳ್ಳೇಕ್ಯಾತ ಎಂಬ ಹೆಸರು ಹೇಗೆ ಬಳಕೆಯಲ್ಲಿ ಬಂದಿತೆಂಬುದು ವಾದಗ್ರಸ್ಥ ವಿಷಯವಾಗಿದ್ದರೂ, ಈ ಜಾತಿಯ ಸಾಂಪ್ರದಾಯಿಕ ವೃತ್ತಿಯ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಚರ್ಮದ ಗೊಂಬೆಗಳ ಆಟ ಆಡಿಸಿ ಗ್ರಾಮೀಣ ಜನತೆಗೆ ಮನರಂಜನೆಯೊಂದಿಗೆ ವೈದಿಕ ಸಂಸ್ಕೃತಿಯ ಕಥಾ ಭಾಗವನ್ನು ಗ್ರಾಮೀಣ ಜನತೆಗೆ ಪ್ರಚುರಪಡಿಸುತ್ತಿದ್ದರು.

ಪ್ರತಿಯೊಂದು ಸಮುದಾಯ ತನ್ನ ಉಗಮದ ಬಗ್ಗೆ ದಂತಕಥೆಗಳನ್ನು ರೂಪಿಸಿಕೊಂಡು ಅತೀ ಪ್ರಾಚೀನ ಕಾಲದಿಂದ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳಲು ಯತ್ನಿಸುವಂತೆ, ಕಿಳ್ಳೇಕ್ಯಾತರು ಇದಕ್ಕೆ ಹೊರತಾಗಿಲ್ಲ. ಸರಸ್ವತಿಯ ಮನರಂಜನೆಗಾಗಿ ಬ್ರಹ್ಮನಿಂದ ಈ ಜಾತಿ ಸೃಷ್ಟಿಯಾಗಿದೆಯೆಂದು ಹೇಳಲಾಗುತ್ತದೆ. ಇವರ ವಂಶಜಳೊಬ್ಬಳು ಮಹಾರಾಷ್ಟ್ರದ ಕಾಳಾಚಾರಿ ಎಂಬವನೊಡನೆ ಸಂಬಂಧ ಹೊಂದಿ. ಏಳು ಜನ ಮಕ್ಕಳನ್ನು ಪಡೆದರು. ಕಾಳಾಚಾರಿಯೆ ಇವರಿಗೆ ತೊಗಲುಗೊಂಬೆ ಮಾಡುವ ಹಾಗೂ ಆಡುವ ವಿದ್ಯೆ ಕಲಿಸಿದನೆಂದು ಹೇಳಲಾಗುತ್ತದೆ. ಆದರೆ ಈ ಕಥೆಯಲ್ಲಿ ಯಾವುದೇ ಸತ್ಯಾಂಶ ಇಲ್ಲವೆಂದು ಕೆಲವು ತಜ್ಞರು ಅಭಿಪ್ರಾಯ. ಕಲಿಯುಗದ ಆರಂಭದಲ್ಲಿ ಗೊಂಬೆ ಕುಣಿಸುವ ವೃತ್ತಿ ದೇವರಿಂದಲೇ ಈ ಜಾತಿಗೆ ನೇಮಕವಾಯಿತೆಂದು, ಆದ್ದರಿಂದ ಕಲಿಕ್ಯಾತ ಎಂಬ ಪದ ಕಿಳ್ಳೇಕ್ಯಾತ ವಾಯಿತೆಂದು ಹೇಳಲಾಗುತ್ತದೆ. ಕೀಳು ಕಥಾ ಎಂಬ ಪದವು ಕ್ರಮೇಣವಾಗಿ ಕಿಳ್ಳೇಕ್ಯಾತವಾಯಿತೆಂದು ಹೇಳಲಾಗುತ್ತದೆ. ಮಹಾರಾಷ್ಟ್ರದಲ್ಲಿ ಈ ಜಾತಿಗೆ ಕಟಬು ಜಾತಿ ಎಂದು ಕರೆಯಲಾಗುತ್ತದೆ. ಕಟಬು ಎನ್ನವುದು ತೊಗಲುಗೊಂಬೆ ಆಟದಲ್ಲಿ ಬರುವ ಒಂದು ವಿದೂಷಕನ ಪಾತ್ರ. ಕಿಳ್ಳಿ ಎಂದರೆ ಚೇಷ್ಟೆ, ತುಂಟ, ಹುಡುಗಾಟಿಕೆ ಎಂದು ಕನ್ನಡ ನಿಘಂಟಿನ ಅರ್ಥ. ಇವರ ಆಟದಲ್ಲಿ ತುಂಟತನದ ಅಶ್ಲೀಲ ಪದಗಳ ಬಳಕೆ ಹೆಚ್ಚು. ಆ ದೃಷ್ಟಿಯಿಂದ ಕಿಳ್ಳಿ ಎಂಬ ಪದವೇ  ಜಾತಿಗೂ ಅನ್ವಯವಾಗಿರಬಹುದು. ಆದರೂ ಮರಾಠಿಯ ಕಟಬು ಹಾಗೂ ಕನ್ನಡದ ಕಿಳ್ಳೇ ಶಬ್ದಗಳಿಂದ ಸಂಬಂಧವೂ ಇನ್ನೂ ಹೆಚ್ಚು ಸಂಶೋಧನೆಗೆ ಒಳಪಡಬೇಕಾದ ವಿಷಯವಾಗಿದೆ. ಸಂಸ್ಕೃತ ಮೂಲದಿಂದಲೇ ಎಲ್ಲ ವಿಷಯದ ಮೂಲವನ್ನು ವಿಶ್ಲೇಷಿಸುವ ಹವ್ಯಾಸ ಇಂದು ಹೆಚ್ಚು ಕಾಣುತ್ತಿದೆ. ಭಾಷಾ ವಿಜ್ಞಾನಿ ಬ್ರೂ ಎಂಬುವರ ಪ್ರಕಾರ ಕೇಲಿಕ್ಯಾತ ಎಂಬ ಸಂಸ್ಕೃತ ಪದ ಅಪಭ್ರಂಶ ರೂಪತಾಳಿ ಕಿಳ್ಳೇಕ್ಯಾತವಾಗಿದೆ. ಕಿಳ್ಳೇಕ್ಯಾತ ಜಾತಿ ಹಾಗೂಆ ಹೆಸರಿನ ವಾದ ವಿವಾದಗಳು ಏನೇ ಇದ್ದರೂ ಕರ್ನಾಟಕದ ಜಾತಿಗಳ ಸಾಮಾಜಿಕ ಸ್ತರವಿನ್ಯಾಸಲದಲ್ಲಿ ಈ ಜಾತಿ ತೀರ ಕೆಳಗಿನ ಸ್ಥಾನವನ್ನು ಹೊಂದಿದೆ.

ತೊಗಲು ಬೊಂಬೆಯಾಟದವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ಅಂಗೂರು ಎಂಬ ಗ್ರಾಮದಲ್ಲಿ ಸಂಪೂರ್ಣವಾಗಿ ಕಿಳ್ಳೇಕ್ಯಾತರೆ ವಾಸಿಸುತ್ತಿದ್ದಾರೆ. ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಇವರನ್ನು ಗೊಂಬೆರಾಮ ಎಂದು ಕರೆಯುತ್ತಾರೆ. ಜೊತೆಗೆ ಚಕ್ಕಳದ ಗೊಂಬೆಯಾಟದವರು, ತೊಲಗು ಬೊಂಬೆಯಾಟದವರು, ಶಿಳ್ಳೇಕ್ಯಾತ, ಚಳ್ಳೇಕ್ಯಾತ ಎಂಬ ಇತರ ಹೆಸರುಗಳು ಕೇಳಿಬರುತ್ತವೆ. ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಗದಗ ಹಾವೇರಿ, ದಾವಣಗೆರೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಇವರನ್ನು ಕಿಳ್ಳೇಕ್ಯಾತ ಎಂದು ಕರೆಯುತ್ತಾರೆ. ಬೆಳಗಾವಿ, ಬಿಜಾಪುರ, ಗುಲ್ಬರ್ಗ, ಬೀದರ ಜಿಲ್ಲೆಗಳಲ್ಲಿ ಇವರನ್ನು ಕಟಬರೆಂದು ಗುರುತಿಸುತ್ತಾರೆ.  ಕಿಳ್ಳೆಕೆತುರು/ಛಾತ್ರಿಗಳೆಂಹೆಸರೂ ಇವರಿಗೆ ಇವೆ – (ಮೊರಬ್, ೧೯೭೭). ಇತರ ಪ್ರದರ್ಶನ ಕಲೆಗೆ ಗೊಂಬೆರಾಮರ ಆಟ, ಕಿಳ್ಳೇಕ್ಯಾತರಾಟ, ತೊಗಲುಬೊಂಬೆಯಾಟ, ಚಕ್ಕಳದ ಬೊಂಬೆಯಾಟ, ಕಟಬರಾಟ ಮೊದಲಾದ ಪ್ರಾದೇಶಿಕ ಹೆಸರುಗಳಿವೆ. ಶ್ರೀ ರಾಮನ ಕಥೆಯನ್ನು ಹಾಡುವುದರಿಂದ ಇವರಿಗೆ ಗೊಂಬರಾಮರು ಎಂಬ ಹೆಸರಾಯಿತು (ರಾಮಚಂದ್ರೇಗೌಡ, ೧೯೯೦). ಕಿಳ್ಳೇಕ್ಯಾತ ಎಂಬುದು ಶಿಳ್ಳೇಕ್ಯಾತ ಎಂಬ ರೂಪದಿಂದ ಬಂದಿರಬಹುದು. ಇವರಿಗೆ ಚಿತ್ರ ಮಾರಾಠರೆಂಬ ಹೆಸರೂ ಇದೆ. ಇವರು ಮೂಲತಃ ಬೇಸಾಯ ವೃತ್ತಿಯವರಾದ್ದರಿಂದ ತಮ್ಮನ್ನು ಮರಾಠ ಒಕ್ಕಲಿಗರೆಂದು ಕರೆದುಕೊಳ್ಳುತ್ತಾರೆ (ಗೋವಿಂದರಾಜು ಟಿ., ೧೯೯೩).

ಕಿಳ್ಳೆಕ್ಯಾತರಲ್ಲಿ ಹಲವು ಬೆಡಗುಗಳು ಇವೆ. ಮೋಹರ್, ನೆಕ್ನಾರ್, ಆಟೋಕ್, ಧೂರ್ವಿಯಾ, ಸಾಸ್ಕಿನ್, ಆವೇಚ್, ಶಿಂಧ್ಯಾ, ಸಾಳ್ವಯ, ಧುಮಾಳ, ಸಿಸನಾಗ್ ಇತ್ಯಾದಿ. ಬೆಡಗುಗಳು ವಿವಾಹ ಸಂಬಂಧ ಮುಂತಾದ ಸಂದರ್ಭಗಳಲ್ಲಿ ಬೆಳಕಿಗೆ ಬರುವುದಂತೂ ಸಹಜ. ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿಂದ ಪಿತೃಪ್ರಧಾನ ಕುಟುಂಬ ವ್ಯವಸ್ಥೆಗೆ ಒಲಿದಂತೆ ಕಂಡುಬರುತ್ತದೆ. ಎಂಥೋವನ್, (೧೯೨೨) ನಮೂದಿಸಿದಂತೆ ಇವರು “ಪಾಂಡವರು ರಾಜ್ಯ ಕಳೆದುಕೊಂಡ ನಂತರ ವನವಾಸದಲ್ಲಿ ಅಲೆದಾಡುವಾಗ ಅವರನ್ನು ಹಿಂಬಾಲಿಸಿದ ಕ್ಷತ್ರಿಯರ ತಲೆಮಾರಿನವರೆಂದು ಹೇಳಿಕೊಳ್ಳುತ್ತಾರೆ”. ಆದರೆ ಇವರ ಜೀವನ ಶೈಲಿಯನ್ನು ಅವಲೋಕಿಸಿದರೆ ಕ್ಷತ್ರಿಯರಲ್ಲವೆಂಬುದು ಕೆಲವರು ಅಭಿಪ್ರಾಯ. ಇವರು ಮಹಾರಾಷ್ಟ್ರದಿಂದ ವಲಸೆ ಬಂದವರೆಂದು ತಿಳಿದುಬರುತ್ತದೆ. ಸಮುದಾಯದ ಜನರು ಬೆಳಗಾವಿ, ಬಿಜಾಪುರ, ಗದಗ, ಹಾವೇರಿ, ಕೊಪ್ಪಳ, ಧಾರವಾಡ, ಚಿತ್ರದುರ್ಗ, ಬಳ್ಳಾರಿ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಮರಾಠಿಯು ಇವರ ಮಾತೃಭಾಷೆಯಾದರೂ ಬೇರೆಯವರೊಂದಿಗೆ ಕನ್ನಡವನ್ನು ಬಳಸುತ್ತಾರೆ. ಗ್ರಾಮ ಮತ್ತು ನಗರಗಳ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಳ್ಳುತ್ತಾರೆ.

ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಮತ್ತು ಬೆಡಗು ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ಕಿಳ್ಳೇಕ್ಯಾತರ ಸಾಂಪ್ರದಾಯಿಕ ವೃತ್ತಿ ತೊಗಲು ಗೊಂಬೆ ಆಟವನ್ನು ಆಡಿಸುವುದು ಹಾಗೂ ಕೌದಿಗಳನ್ನು ಹೊಲಿಯುವುದು ಕೆಲವರಿಗೆ ಜಮೀನು ಇದೆ, ಲೋಹದ ಕೆಲಸ, ಚಿಕ್ಕಪುಟ್ಟ ವ್ಯಾಪಾರ ಇವು ಇತ್ತೀಚೆಗೆ ಅನುಸರಿಸುತ್ತಿರುವ ವೃತ್ತಿಗಳಾಗಿವೆ. ಮನೆ, ಕುಲ ಮತ್ತು ಗ್ರಾಮ ದೇವತೆಗಳು ಹಾಗೂ ಪ್ರಾದೇಶಿಕ  ದೈವವಾದ ಎಲ್ಲಮ್ಮನನ್ನು ಪೂಜಿಸುತ್ತಾರೆ. ವಧು ದಕ್ಷಿಣೆಯನ್ನು ಹಣದ ರೂಪದಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದಿತರು, ವಿಧವೆ, ವಿಧುರರು ಮದುವೆಯಾಗಬಹುದು. ಇವರಲ್ಲಿ ಗಂಡು ಮಗುವಿಗೆ ಹೆಚ್ಚಿನ ಪ್ರಾಶಸ್ತ್ಯ. ಜನನದ ಸೂತಕವನ್ನು ಐದು ದಿನಗಳವರೆಗೆ ಆಚರಿಸಿ, ನಾಮಕರಣವನ್ನು ಮಾಡುತ್ತಾರೆ. ಋತುಮತಿಯಾದಾಗ ‘ಶೋಭ’ ಎಂಬ ಆಚರಣೆ ಮಾಡುತ್ತಾರೆ. ಶವವನ್ನು ಹೂಳಿ, ಸಾವಿನ ಸೂತಕವನ್ನು ಮೂವತ್ತೈದು ದಿನಗಳವರೆಗೆ ಆಚರಿಸುತ್ತಾರೆ. ಇವರಲ್ಲಿ ಬಹುಬಂದಿ ಭೂ ರಹಿತರು. ಅದರ ಜೊತೆಗೆ, ಇವರು ದಿನಗೂಲಿಗಳಾಗಿ, ಮೀನು ಹಿಡಿಯುವುದು, ಹಾಗೂ ಹಾಳಾದ ಪಾತ್ರೆಗಳನ್ನು ಸರಿಪಡಿಸುತ್ತಾ ಜೀವನ ಸಾಗಿಸುತ್ತಾರೆ. ಇವರ ಕೋಮಿನ ದೇವತೆ ‘

ಮೊಸಬ’ ಊರು ಹಾಗೂ ಪ್ರಾಂತ್ಯದ ದೇವರುಗಳು ಬೇರೆ ಇವೆ. ಇವರು ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಉದಾ: ಯುಗಾದಿ, ದೀಪಾವಳಿ, ಇತ್ಯಾದಿ. ಬೊಂಬೆಯಾಟದಲ್ಲಿ ಕಥೆ ಹೇಳುವಾಗ ತಬಲ, ಹಾರ್ಮೋನಿಯಂ, ಇತ್ಯಾದಿ ವಾದ್ಯಗಳನ್ನು ಬಳಸುತ್ತಾರೆ. ಆಧುನಿಕ ವಿದ್ಯಾಭ್ಯಾಸ ಇವರಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಕುಟುಂಬ ಕಲ್ಯಾಣ ಯೋಜನೆಯಲ್ಲಿ ಇವರಿಗೆ ಆಸಕ್ತಿಯಿಲ್ಲ. ಇವರಲ್ಲಿ ಬಹಳಷ್ಟು ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.

ನೋಡಿ:

ಗೋವಿಂದ ರಾಜು, ಟಿ., ೧೯೯೩. ಗೊಂಬೆರಾಮರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು.

ರಾಮಚಂದ್ರಗೌಡ, ಹೆಚ್.ಎಸ್., ೧೯೯೦. ಗೊಂಬೆಯಾಟಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ಮಹೇಶ. ತಿಪ್ಪಶೆಟ್ಟಿ, ೧೯೯೫. ಸಾಮಾಜಿಕ ಆಲೋಚನೆ,  ದಾಳಿಂಬ ಪ್ರಕಾಶನ, ಹುನಗುಂದ.

Morab, S.G, 1977. Killekyatha : Nomadic Folk Artists of Northern Mysore,  Memoire No. 46, Anthropologcial Survey of India, Calcutta

Morab, S.G., 1974. ‘Nomadism Among the Killekyatha and Their Area of the Movement’ , Bulletin of the Department Anthropology, Vol.NO.23, 1&2

Moraab, S.G., 1977. ‘The Killekyatha : Aspects of their Nomadism and Socio-Economic Symbosis with Peasant Communities’, Indian Anthropologsit.

Morab, S.G., 1983. ‘The Killekyatha: A Nomadic Folk Artists of the Karnataka’, Bulletin of the Department of Anthropology Vol.No.32

Morab, S.G., 1980. ‘Sedentarization Among the Nomadic Killekyatha of Karnataka’, Man and Life 5(3&4).

Rao Nanjunda, M.S., 1982. Leather Puppets in homang to Karnataka, Marg Publication.