ಕುಂಬಾರರು ಸಾಂಪ್ರದಾಯಿಕವಾಗಿ ಮಣ್ಣಿನ ಪಾತ್ರೆ ತಯಾರಿಸುವವರಾಗಿದ್ದಾರೆ. ಇವರು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಕಂಡು ಬರುತ್ತಾರೆ. ಇವರನ್ನು ಎರಡು ಉಪಗುಂಪುಗಳಾಗಿ ವಿಭಾಗಿಸಲಾಗಿದೆ. ಅವೆಂಧರೆ ಗುಂಡ ಭಕ್ತ ಹಾಗೂ ವೀರಶೈವ ಕುಂಬಾರ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಉಪಜಾತಿಯಾಗಿ ಕುಂಬಾರರನ್ನು ಗುರುತಿಸಬಹುದು. ತಮ್ಮ ಹೆಸರಿನ ಜೊತೆಗೆ ‘ಸೆಟ್ಟಿ’ ಎನ್ನುವ ಹೆಸರನ್ನು ದಕ್ಷಿಣ ಕರ್ನಾಟಕದಲ್ಲಿ ಕುಂಬಾರರು ಸೇರಿಸಿಕೊಳ್ಳುತ್ತಾರೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ವೃತ್ತಿಯಲ್ಲಿ ತೊಡಗಿರುವ ಕುಂಬಾರ

ವೃತ್ತಿಯಲ್ಲಿ ತೊಡಗಿರುವ ಕುಂಬಾರ

ಇವರಲ್ಲಿ ಹದಿನಾರು ಹೊರಬಾಂಧವ್ಯದ ಬಳ್ಳಿಗಳಿವೆ – ಕಸ್ತೂರಿ, ಸಂಪಿಗೆ, ನಾಗರ, ಕಮಲ, ರಾವಲ, ಇತ್ಯಾದಿ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇದೆ. ಇವರಲ್ಲಿ ರಕ್ತ ಸಂಬಂಧಿಕರ ಹಾಗೂ ಸೋದರಿ ಸಂಬಂಧದ ಮದುವೆಗಳಿಗೆ ಅವಕಾಶವಿದೆ. ವಿವಾಹ ವಿಚ್ಛೇದಿತರಿಗೆ ಹಾಗೂ ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಕುಂಬಾರರು ಗಂಡು ಮಗುವನ್ನು ವಂಶೋದ್ಧಾರಕನೆಂದು ಭಾವಿಸುತ್ತಾರೆ. ಗರ್ಭಿಣಿಗೆ ಏಳನೆಯ ಅಥವಾ ಎಂಟನೆಯ ತಿಂಗಳಲ್ಲಿ ಹೆರಿಗೆಯ ಮುಂಚಿನ ಧಾರ್ಮಿಕ ಕಾರ್ಯವು ನಡೆಯುತ್ತದೆ. ಜನನ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ. ಹನ್ನೊಂದನೇ ದಿನ ನಾಮಕರಣ ಶಾಸ್ತ್ರವನ್ನು ಮಾಡುತ್ತಾರೆ. ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಮುಂಡನ ಕಾರ್ಯವನ್ನು ಮಾಡಿಸುತ್ತಾರೆ. ಋತುಮತಿಯಾದ ಹೆಣ್ಣು ಮಕ್ಕಳಿಗೆ ‘ಸೀರೆ ಉಡುವುದು’ ಎಂಬ ಕ್ರಿಯಾವಿಧಿ ಆಚರಿಸುತ್ತಾರೆ. ಮುಖ್ಯ ಮದುವೆಯ ಆಚರಣೆಗಳೆಂದರೆ, ಹರಿವಾಣತರುವುದು, ಬಾಸಿಂಗ ಕಟ್ಟುವುದು, ಕಂಕಣ ಆರತಿ ಮಾಡುವುದು, ಧಾರೆ, ತಾಳಿಕಟ್ಟುವುದು, ಇತ್ಯಾದಿ. ಶವವನ್ನು ಹೂಳಿ, ಸಾವಿನ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸುತ್ತಾರೆ. ತಿಥಿ ಎಂಬ ಧಾರ್ಮಿಕ ಶಾಸ್ತ್ರವನ್ನು ಹನ್ನೊಂದನೇ ದಿನ ಮಾಡುತ್ತಾರೆ.

ಇವರಲ್ಲಿ ಕೆಲವರು ಇತ್ತೀಚೆಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ಕೆಲವರು ಇಟ್ಟಗೆ ತಯಾರಿಸುವ ಹಾಗೂ ಹೆಂಚಿನ ಕಾರ್ಖಾನೆಗಳನ್ನು ನಡೆಸುತ್ತಿದ್ದಾರೆ. ಈ ಜನರು ಜಿಲ್ಲೆ ಹಾಗೂ ರಾಜ್ಯದ ಮಟ್ಟಗಳಲ್ಲಿ ತಮ್ಮ ಸಂಘಟನೆಗಳನ್ನು ಹೊಂದಿದ್ದಾರೆ. ಅವುಗಳು ಸಮುದಾಯದ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಗಾಗಿ ಶ್ರಮಿಸುತ್ತಿವೆ.

ಕುಂಬಾರೇಶ್ವರ ಇವರ ಸಮುದಾಯದ ದೇವರು, ಮುತ್ಯಾಲಮ್ಮ ಇವರ ಮುಖ್ಯ ಸ್ತ್ರೀ ದೇವತೆ. ಇವರ ಸಮುದಾಯದ ಹಬ್ಬವಾದ ಕುಂಭಾಭಿಷೇಕವನ್ನು ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಮಾಡುತ್ತಾರೆ. ಇವರು ಸಾಂಪ್ರದಾಯಿಕವಾಗಿ ಇತರೆ ಜನಸಮುದಾಯಗಳಿಗೆ ಅವಶ್ಯಕವಾದ ಮಣ್ಣಿನ ಮಡಿಕೆ ಕುಡಿಕೆಗಳನ್ನು ಒದಗಿಸುತ್ತಿದ್ದರು. ಮದುವೆಯಂಥ ಸಮಾರಂಭದಲ್ಲಿ ಹಾಗೂ ಗ್ರಾಮ ದೇವತೆಗಳ ಹಬ್ಬಗಳಲ್ಲಿ ಮಡಿಕೆ ಒದಗಿಸುವ ಪದ್ಧತಿ ‘ಜಾಜಮಾನಿ’ (ಆಯ)ರೀತಿಯಲ್ಲಿ ನಡೆಯುತ್ತಿತು. ಆದರೆ ಈಗ ಇವರ ಸಾಂಪ್ರದಾಯಿಕ ವೃತ್ತಿ ಹಣದ ರೂಪದಲ್ಲಿ ಇರುತ್ತದೆ. ಈ ಸಮುದಾಯದಲ್ಲಿ ವ್ಯಾಪಾರಿಗಳು, ಆಡಳಿತಗಾರರು, ರಾಜಕಾರಣಿಗಳು ಇದ್ದಾರೆ. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ನೋಡಿ:

Sarkar, J, 1973. ‘Occupation and Mobility among the Kumbaras of Mysore City’, Man in India,  53 (1)