ಕುಡಿಯ ಅಥವಾ ಮಲೆಕುಡಿಯನ್ನು ಮಲೆಕುಡಿಯ, ಕುಡಿಯ, ಬಾರಿಕೆಗೌಡ, ಗೌಡ ಎಂಬಿತ್ಯಾದಿ ಹೆಸರುಗಳಲ್ಲಿ ಕರೆಯುವರು. ‘ಮಲೆಕುಡಿ’ ಎಂಬುದು ‘ಮಲೆ’ ಎಂದರೆ ‘ಬೆಟ್ಟ’ ಮತ್ತು ‘ಕುಡಿ’ ಅಂದರೆ ‘ತುದಿ’ ಎಂದು ಅರ್ಥ. ಈ ಪದದ ಅರ್ಥ ಬೆಟ್ಟಗಳ ತುದಿಯಲ್ಲಿ ವಾಸಿಸುವವರೆಂದೂ ಅಥವಾ ‘ಬೆಟ್ಟಗಳ ಮಕ್ಕಳೆಂದೂ’ ಆಗುತ್ತದೆ. ತುಳು ಮಾತನಾಡುವ ಜನರು ಇವರನ್ನು ಇದೇ ಅರ್ಥ ಬರುವ ರೀತಿ ‘ಮಲೆತ್ತಾಯ’ ಎಂದು ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಬೆಳ್ತಂಗಡಿ ಭಾಗಗಳಲ್ಲಿ ಮಲೆಕುಡಿಯರು ವಾಸವಾಗಿದ್ದಾರೆ. ಕುಡಿಯ ಮತ್ತು ಮಲೆಕುಡಿಯರು ಬೇರೆ ಬೇರೆ ಬುಡಕಟ್ಟು ಪಂಗಡದವರೆಂದು, ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆದರೆ ಥರ್ಸ್ಟನ್ ಮತ್ತು ರಂಗಾಚಾರಿಯವರು ಕುಡಿಯ ಮತ್ತು ಮಲೆಕುಡಿಯ ಗುಂಪುಗಳು ಒಂದೇ ಎಂದು ಹೇಳಿದ್ದಾರೆ. ಮಲೆಕುಡಿಯರು ಆಡುವ ಭಾಷೆ ಪ್ರಾಚೀನ ಸ್ವರೂಪದ ತುಳುವಾಗಿರಬೇಕು. ಇವರ ತುಳು ತಮಗೆ ಅರ್ಥವಾಗುವುದಿಲ್ಲವೆಂದು ಇತರೆ ತುಳು ಭಾಷಿಕರೇ ಹೇಳುತ್ತಾರೆ. ಕೇರಳವಾಸಿಗಳೂ ಮಲೆಯಾಳಂ ಭಾಷೆಯನ್ನು ಮಾತನಾಡಿ, ಇತರರೊಂದಿಗೆ ಕನ್ನಡ ಭಾಷೆಯನ್ನು ಮಾತನಾಡಿ, ಕನ್ನಡ ಲಿಪಿಯನ್ನು ಉಪಯೋಗಿಸುತ್ತಾರೆ.

ಮಲೆಕುಡಿಗಳಲ್ಲಿ ‘ಊರುಮಲೆ’ ಮತ್ತು ‘ನಾಡುಮಲೆ’ ಗಳೆಂಬ ಎರಡು ಉಪಪಂಗಡಗಳಿವೆ. ಊರುಮಲೆ ಪಂಗಡಗಳಲ್ಲಿ ಹೊರಬಾಂಧವ್ಯ ವಿವಾಹದ ಹದಿನೆಂಟು ಬೆಡಗುಗಳಿವೆ. ನಾಡುಮಲೆಗಳು ಪುರುಷವಂಶಿಯ ರೀತಿಯಲ್ಲಿ ಮೂರು ಮನೆತನಗಳ ಹೆಸರಿನಿಂದ ಗುರುತಿಸಲ್ಪಟ್ಟಿದ್ದಾರೆ. ಸಾಧಾರಣವಾಗಿ ಈ ಎರಡು ಉಪಪಂಗಡಗಳಲ್ಲಿ ಅಂತರ್ ವಿವಾಹ ಪದ್ಧತಿಯಿಲ್ಲ. ಸೋದರ ಮಾವ ಮತ್ತು ಸೋದರತ್ತೆಯ ಮಗಳೊಂದಿಗೆ ವಿವಾಹ ನಡೆಯುತ್ತದೆ. ‘ಗುರಿಕಾರ’ನ ಸಮ್ಮಖದಲ್ಲಿ ವೈವಾಹಿಕ ವಿಧಿಗಳು ಸಂಪ್ರದಾಯಬದ್ಧವಾಗಿ ನೆರವೇರುತ್ತದೆ.

ಮಲೆಕುಡಿಯರು ಹಿಂದೆ ಬೇಟೆಗಾರರು ಮತ್ತು ಆಹಾರ ಸಂಗ್ರಾಹಕರು ಆಗಿದ್ದರು. ಕೆಲವು ಊರುಮಲೆಗಳು ಸ್ವಂತ ಜಮೀನನ್ನು ಹೊಂದಿದ್ದು ವ್ಯವಸಾಯ ಮಾಡುತ್ತಿದ್ದರೆ, ಉಳಿದವರು ವ್ಯವಸಾಯ ಹಾಗೂ ತೋಟಗಾರಿಕೆಯಲ್ಲಿ ಶ್ರಮಿಕರಾಗಿದ್ದಾರೆ. ನಾಡುಮಲೆ ಗುಂಪಿನಲ್ಲಿ ಕೆಲವೇ ಕುಟುಂಬಗಳು ಸರ್ಕಾರದಿಂದ ಭೂಮಿಯನ್ನು ಪಡೆದು ಬಿದಿರಿನ ಬುಟ್ಟಿ ಮತ್ತು ಚಾಪೆಯನ್ನು ತಯಾರಿಸಿ ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳುತ್ತವೆ. ಊರುಮಲೆಯು ಆಡಳಿತಕ್ಕೆ, ಗುರಿಕಾರನಿದ್ದಾನೆ. ನಾಡುಮಲೆಗಳಲ್ಲಿಯೂ ಆಡಳಿತದಲ್ಲಿ ಇದ್ದ ಮುಖ್ಯಸ್ಥನ ವ್ಯವಸ್ಥೆ ನಿಷ್ಕ್ರಿಯವಾಗಿದೆ.

ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಈ ಸಮುದಾಯವು ಸೇರಲ್ಪಟ್ಟಿದೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಇವರು ಹಿಂದುಳಿದಿದ್ದಾರೆ.

ನೋಡಿ:

ಕಾರಂತ ಎಸ್., ೧೯೬೬. ಕುಡಿಯರ ಕೂಸು,  ಹರ್ಷ ಪ್ರಕಟನಾಲಯ, ಪುತ್ತೂರು, (೩ನೇ ಮುದ್ರಣ)

ಚಿನ್ನಪ್ಪಗೌಡ, ಕೆ. ಮಲೆಕುಡಿಯ ಜನಾಂಗ – ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣೆ

ಬೋರಲಿಂಗಯ್ಯ, ಹಿ.ಚಿ., ೧೯೯೧. ಗಿರಿಜನ ನಾಡಿಗೆ ಪಯಣ,  ರಾಗಿರೊಟ್ಟಿ ಪ್ರಕಾಶನ, ಬೆಂಗಳೂರು

ರಾಮಚಂದ್ರಾಚಾರ್, ಡಿ.ಬಿ., ೧೯೯೩. ಕುಡಿಯುವ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

Das, B.k., 1984. ‘Male Kudiya’ In : Ethnographic Study of Scheduled Tribes,  Director of Census Operations (mimeograph), Banglore

Krishna Iyer, L.k., 1948. ‘Malai Kudi’ – Coorg Tribes and Castes

Morab, S.G., 1978. The Malai Kudi : A Study of the Customary Law of a Hill Tribe in Karnataka Anthropological Survey of India, Mysore