ಕುಡುಬಿಯರು ಗೋವಾದಿಂದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ವಲಸೆ ಬಂದರೆಂದು ಇತಿಹಾಸದಿಂದ ತಿಳಿಯುತ್ತದೆ ಎಂದು ಥರ್ಸ್ಟನ್ (೧೯೦೯) ಅಭಿಪ್ರಾಯಪಟ್ಟಿದ್ದಾರೆ. ಸುಮಾರು ೧೫೦೪ರಿಂದ ೧೫೦೯ರ ಸಮಯದಲ್ಲಿ ಪೋರ್ಚುಗೀಸರು ಗೋವಾ ಆಕ್ರಮಿಸಿಕೊಂಡಾಗ, ಅವರ ದಬ್ಬಾಳಿಕೆ, ಬಲಾತ್ಕಾರದ ಮತಾಂತರಕ್ಕೆ ಬೆದರಿ ಕುಡುಬಿಯರು ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ವಲಸೆ ಬಂದಿದ್ದಾರೆ. ಕೊಂಕಣಿ, ತುಳು  ಹಾಗೂ ಕನ್ನಡವನ್ನು ಮಾತನಾಡುತ್ತಾರೆ. ತುಳುನಾಡಿನ ಕುಡುಬಿಯರಲ್ಲಿ ಬೇರೆಬೇರೆ ಒಳಪಂಗಡಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಕುಡುಬಿಗಳ ಈ ಒಳಪಂಗಡಗಳು ಗೋವಾಕುಡುಂಬಿ, ಕೊಡಿಯಾಲಕುಡುಬಿ, ಅರೆಕುಡುಬಿ,  ಜೋಗಿಕುಡುಬಿ, ನಾಡಕುಡುಬಿ, ಕಾಡಕುಡುಬಿ, ಕುಮ್ರಿಕುಡುಬಿ, ಇತ್ಯಾದಿ.

ಕುಡುಬಿ ದಂಪತಿಗಳು

ಕುಡುಬಿ ದಂಪತಿಗಳು

ಕುಡುಬಿಯರ ಹೋಳಿ ಆಚರಣೆ

ಕುಡುಬಿಯರ ಹೋಳಿ ಆಚರಣೆ

 

ಕುಡುಬಿಯರ ಕುಟುಂಬ

ಕುಡುಬಿಯರ ಕುಟುಂಬ

 

ಒಂದೇ ಒಳಪಂಗಡವನ್ನು ಬೇರೆಬೇರೆ ಸಂದರ್ಭದಲ್ಲಿ, ಬೇರೆಬೇರೆ ಹೆಸರುಗಳಿಂದ ಗುರುತಿಸಿದಂತೆ ಕಂಡುಬರುತ್ತದೆ. ವಾಸ್ತವವಾಗಿ ಕುಡುಬಿಯರಲ್ಲಿ ಹೆಚ್ಚು ಒಳಪಂಗಡಗಳಿಲ್ಲ. ಅವರು ವೃತ್ತಿ, ವಾಸಿಸುವ ಪ್ರದೇಶ, ಆಧುನಿಕತೆಗೆ ತೆರೆದುಕೊಂಡ ರೀತಿ ಇವುಗಳನ್ನು ಗಮನಿಸಿ ಈ ರೀತಿಯ ವರ್ಗೀಕರಣವನ್ನು ಮಾಡಲಾಗಿದೆ. ಗೋವಾಕುಡುಬಿ, ಕಾಡಕುಡುಬಿ, ಕುಮ್ರಿ ಕುಡುಬಿಯರು ಒಂದೇ ಒಳಪಂಗಡವನ್ನು ಸೂಚಿಸುವಂತಿದೆ. ಗೋವಾ ಕುಡುಬಿಯರು ಕಟ್ಟಾ ಸಂಪ್ರದಾಯನಿಷ್ಠರಾಗಿ ಕಾಡಿನ ಮಧ್ಯೆಯೇ ಬದುಕುತ್ತಿರುವರು. ಇವರ ಮೂಲವೃತ್ತಿಯಾದ ಕುಮ್ರಿಬೇಸಾಯವನ್ನು ಮುಂದುವರಿಸಿಕೊಂಡು ಬಂದಿರುವವರು. ಕಾಡಿನಲ್ಲಿಯೇ ಇದ್ದು, ಕುಮ್ರಿಬೇಸಾಯವನ್ನು ಮಾಡಿಕೊಂಡಿರುವ ಗೋವಾಕುಡುಬಿಯಗೆ ಅವರ ವೃತ್ತಿಯಿಂದಾಗಿ ಕಾಡುಕುಡುಬಿ, ಕುಮ್ರಿ ಕುಡುಬಿಗಳೆಂದು ಗುರುತಿಸಲ್ಪಟ್ಟಿರಬೇಕು. ಆದುದರಿಂದ ಗೋವಾಕುಡುಬಿ, ಕಾಡಕುಡುಬಿ, ಕುಮ್ರಿಕುಡುಬಿ ಹೆಸರುಗಳೆಂದು ಕಂಡುಬರುತ್ತದೆ.

ಗೋವಾದಿಂದ ವಲಸೆ ಬಂದ  ಆರಂಭದಲ್ಲಿ ಕಾಡಿನ ಸಂಪರ್ಕವನ್ನು ಬಿಟ್ಟು ತುಳುನಾಡಿನ ಸಮುದ್ರದ ದಡದಲ್ಲಿ ನೆಲೆನಿಂತವರನ್ನು ಕರೆಕುಡುಬಿಯರು ಎಂದು ಕರೆದರು. ಕರೆಕುಡುಬಿಯರು ವ್ಯವಸಾಯವನ್ನು ಪ್ರಧಾನವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ಇವರನ್ನೇ ಕೊಡಿಯಾಲ ಕುಡುಬಿಯರೆಂದೂ ಕರೆಯುತ್ತಾರೆ. ಕೊಡಿಯಾಲ, ಸಮುದ್ರದ ಬದಿಯಲ್ಲಿಯೇ ಇರುವ ಒಂದು ಹಳ್ಳಿ. ಇಲ್ಲಿ ಬಂದು ನೆಲೆಸಿರುವುದರಿಂದ ಸ್ಥಳ ನಾಮವೇ ಅವರ ಒಳಪಂಗಡದ ಹೆಸರೂ ಆಗಿರಬಹುದು. ಒಟ್ಟಿನಲ್ಲಿ ವಲಸೆ ಬಂದ ಆರಂಭದಲ್ಲಿಯೇ ತಮ್ಮ ಕಾಡು  ಜೀವನವನ್ನು ತ್ಯಜಿಸಿ, ಊರಿನಲ್ಲಿ, ಸಮುದ್ರದ ದಡದಲ್ಲಿ ನೆಲೆನಿಂತ ಕುಡುಬಿಯರ ಒಂದು ವರ್ಗವೇ ಕರೆಕುಡುಬಿ, ಕೊಡಿಯಾಲಕುಡುಬಿ ಎಂಬ ಒಳಪಂಗಡಗಳಾಗಿ ರೂಪುಗೊಂಡಿತು. ಈ ಕರೆಕಡುಬಿಯರನ್ನೇ ಅರೆಕುಡುಬಿಯರೆಂದು ಕರೆದಿರುವ ಸಾಧ್ಯತೆಯೂ ಇದೆ. ಸಂಪ್ರದಾಯ ನಿಷ್ಠರಾಗಿ, ಕುಮ್ರಿ ಬೇಸಾಯವನ್ನು ಮಾಡುತ್ತಾ ಕಾಡಿನಲ್ಲಿಯೇ ಬದುಕುತ್ತಿರುವ ಗೋವಾ ಕುಡುಬಿಯರ ದೃಷ್ಟಿಯಲ್ಲಿ ಈ ಕರೆ ಕುಡುಬಿಯರು ಅರೆಕುಡುಬಿಯರೂ ಎಂದು ಪರಿಗಣಿಸಿರಬಹುದು. ನಾಡ ಕುಡುಬಿ ಎಂಬ ಒಳಪಂಗಡ ಕೂಡಾ ಈ ಕೊಡಿಯಾಲ ಕುಡುಬಿಯರನ್ನೇ ಸೂಚಿಸುವಂತಿದೆ. ಕಾಡನ್ನು ಬಿಟ್ಟು ನಾಡಿನಲ್ಲಿ ಬಂದು ನೆಲೆಸಿರುವುದರಿಂದ ನಾಡಕುಡುಬಿಯರೆಂದು ಗುರುತಿಸಿರಬೇಕು. ಆದುದರಿಂದ ಕರೆಕುಡುಬಿ, ಕೊಡಿಯಾಲಕುಡುಬಿ, ಅರೆಕುಡುಬಿ, ನಾಡ ಕುಡುಬಿಯರು ಪ್ರತ್ಯೇಕವಾಗಿರದೆ ಒಂದೇ ಒಳಪಂಗಡಕ್ಕೆ ಬೇರೆ ಬೇರೆ ಸಂದರ್ಭ, ಸ್ಥಳಗಳಲ್ಲಿ ಅನ್ವಯವಾಗುವ ಹೆಸರುಗಳಂತೆ ಕಂಡು ಬರುತ್ತವೆ. ಕುಡುಬಿಯಲ್ಲಿ ಸಾಮಾನ್ಯವಾಗಿ ಅವಿಭಕ್ತ ಕುಟುಂಬ ಪದ್ಧತಿಯನ್ನು ಕಾಣಬಹುದು.

ಕುಟುಂಬವನ್ನು ಕುಡುಬಿ ಭಾಷೆಯಲ್ಲಿ ಒತ್ತುಘರ್ (ಕುಟುಂಬ), ಒಲಿಘರ್ (ದೊಡ್ಡ ಕುಟುಂಬ) ಅಥವಾ ಸಾಗಾಲೆ ಕುಟುಂಬ (ಹತ್ತಿರದ ಸಂಬಂಧಿಗಳ ಕುಟುಂಬ / ಒಂದೇ ಸಂತತಿಗೆ ಸೇರಿದವರು)ಎಂದು ಕರೆಯುತ್ತಾರೆ. ಇತ್ತೀಚೆಗೆ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾವಣೆಯನ್ನು ಹೊಂದುತ್ತಿವೆ. ಕುಡುಬಿಯರಲ್ಲಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆ ಇದ್ದು, ತಂದೆ ನಂತರ ಹಿರಿಯ ಮಗನಿಗೆ ಮನೆಯ ವಾರಸುದಾರಿಕೆ ಬರುತ್ತದೆ.

ಇವರಲ್ಲಿನ ಬಳ್ಳಿಗಳನ್ನು ಕುಲದೇವತೆ, ಪ್ರದೇಶ, ವೃತ್ತಿ ಹಾಗೂ ಕುಟುಂಬದ ಪೂರ್ವಜರಿಗೆ ಸಂಬಂಧದಂತೆ ವರ್ಗೀಕರಿಸಬಹುದು – ಪತ್ಕಾರ್, ದುತ್ಕಾರ್, ತೊಡ್ಕಾರ್, ಮಟ್ಕಾರ್, ಭಳ್ಕಾರ್, ಬಣಕ್ಕರ್, ಪಲ್ಕಾರ್, ಮೊಕ್ಕಾರ್, ದೆಕ್ಕಾರ್, ಭಟ್ಕಾರ್, ಪೊಳ್ಕಾರ್, ಕಡ್ಕಾರ್, ಮೊಲ್ಕಾರ್, ಗಣಕಾರ್, ವಗ್ನಕಾರ್, ಜನಕಾರ್, ರೈಕಾರ್, ಉನ್ಯಕಾರ್, ನೆವಕಾರ್, ಸಂಸಕಾರ್, ಗುಳ್‌ಕಾರ್, ಅಮ್‌ಕಾರ್, ಭರ್ಮಕಾರ‍್ ಹಾಗೂ ಇತ್ಯಾದಿ. ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಹಾಗೂ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿಗಳು ಇವರಲ್ಲಿ ಕಂಡುಬರುತ್ತವೆ. ಮದುವೆಯು ತಂದೆಯ ಸಹೋದರಿಯ ಮಗಳ ಜೊತೆ ಸಾಧ್ಯವಿದೆ. ವಿಚ್ಛೇದನ ಪಡೆಯಲು ಗಂಡು ಮತ್ತು ಹೆಣ್ಣು ಇಬ್ಬರಿಗೂ ಅವಕಾಶವಿದೆ. ವಿಧವೆ, ವಿಧುರ, ವಿಚ್ಛೇದಿತರಿಗೂ ಮದುವೆಯಾಗಲು ಅವಕಾಶವಿದೆ. ಮದುವೆಯ ಶಾಸ್ತ್ರಗಳನ್ನು ‘ರಾಯಬಡಿ’ ಎನ್ನುವ ಇವರ ಸಂಬಂಧಿಗಳು ನಡೆಸಿಕೊಡುತ್ತಾರೆ. ಮದುವೆಯ ಆಚರಣೆಗಳಲ್ಲಿ ನೂಲುಡಿಕೆ, ಧಾರೆನೀರು ಇತ್ಯಾದಿಗಳಿವೆ. ಮದುವೆ ಮತ್ತು ಶೊಭನಗಳೆರಡೂ ಗಂಡಿನ ಮನೆಯಲ್ಲೇ ನಡೆಯುತ್ತದೆ. ಜನನ ಸೂತಕವು ಸುಮಾರು ಹನ್ನೊಂದು ದಿನಗಳವರೆಗೆ ಇರುತ್ತದೆ. ನಾಮಕರಣ ಶಾಸ್ತ್ರವು ಸುಮಾರು ಹನ್ನೊಂದು ದಿನಗಳವರೆಗೆ ಇರುತ್ತದೆ. ನಾಮಕರಣ ಶಾಸ್ತ್ರವು ಮೂರು ತಿಂಗಳ ನಂತರ  ನಡೆಯುತ್ತದೆ. ಇವರು ಶವವನ್ನು ಸುಡುತ್ತಾರೆ, ಸಾವಿನ ಸೂತಕವನ್ನು ಹತ್ತುದಿನಗಳವರೆಗೆ ಆಚರಿಸುತ್ತಾರೆ.

ಕುಡುಬಿಯ ಸಾಂಪ್ರದಾಯಿಕ ವೃತ್ತಿಯೆಂದರೆ ಬೇಟೆಯಾಡುವುದು. ಆದರೆ ಈಗ ಇವರು ವ್ಯವಸಾಯ, ಕೂಲಿ, ಪಶುಸಂಗೋಪನೆ ಮತ್ತು ಚಾಪೆ ಹೆಣೆಯುವುದು ಇತ್ಯಾದಿ ಕೆಲಸದಿಂದ ಹೊಟ್ಟೆ ಹೊರೆಯುತ್ತಾರೆ. ಇವರಲ್ಲಿ ಕುಲ ಪಂಚಾಯತಿ ಎನ್ನುವ ಸಾಂಪ್ರದಾಯಿಕ ಸಂಘಟನೆಯಿದೆ. ಅದು ಸಮುದಾಯದ ಒಳಜಗಳಗಳನ್ನು ಬಗೆಹರಿಸುತ್ತದೆ. “ಗೋವಾ ಕುಡುಬಿ ಸಮಾಜೋದ್ಧಾರ ಸಂಘ”ವೆನ್ನುವ ಸಂಘಟನೆ ಇದೆ. ಅದು ಇವರ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತದೆ.

ಇವರಲ್ಲಿ ಇರುವ ಪುರೋಹಿತರನ್ನು ‘ವಾಡೆಯಬುದ್ಧಿವಂತ’ ಎಂದು ಕರೆಯುತ್ತಾರೆ. ಉಗಾದಿ, ದಸರಾ, ದೀಪಾವಳಿ, ಹೋಳಿ, ಪ್ರಮುಖವಾಗಿ ಆಚರಿಸುವ ಹಬ್ಬಗಳಾಗಿವೆ, ಇತ್ತೀಚೆಗೆ ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದು ಕುಡುಬಿಯರ ಕುಟುಂಬದಲ್ಲಿ ಒಬ್ಬ ಪಾರಂಪರಿಕ ವೈದ್ಯ ತಿಳಿದವರನಿರುತ್ತಾನೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳನ್ನು ಈ ಸಮುದಾಯ ಜನರ ಮೇಲೆ ಅಷ್ಟಾಗಿ ಪ್ರಭಾವವನ್ನು ಬೀರಿಲ್ಲ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಇನ್ನು ಸುಧಾರಣೆಯಾಗಬೇಕಾಗಿದೆ.

ನೋಡಿ:

ಹೆಗಡೆ ಬಿ.ಎಸ್. ೧೯೮೬, ಅತ್ತಿಕುಂಬಿ ವೈಜಯಂತಿ,  ಉತ್ತರ ಕನ್ನಡ ಜಿಲ್ಲಾ ಸಂಸ್ಕೃತ ಸಂಘ, ಮೈಸೂರು

ಅಭಯ್ ಕುಮಾರ್, ಕೌಕ್ರಾಡಿ, ೧೯೯೮, ‘ಕುಡುಬಿಯರು, ಲಕ್ಕಪ್ಪಗೌಡ.ಎಚ್.ಜಿ.ಕರ್ನಾಟಕ ಬುಡಕಟ್ಟುಗಳು'(ಸಂ). ಕರ್ನಾಟಕ ಜಾನಪದ  ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಸುಬ್ರಾಯ ಹೆಗಡೆ, ೧೯೮೪. ಅಟ್ಟೆ ಕುಣಬಿಯರು,  ಐ.ಬಿ.ಹೆಚ್‌.ಪ್ರಕಾಶನ, ಬೆಂಗಳೂರು.

ನಾವಡ. ಎ.ವಿ.೧೯೮೯. ‘ಕುಡುಬಿಯರು’, ಜಾನಪದ ಮಾಲೆ ೧೦,  ರಾಜ್ಯ ಸಂಪನ್ಮೂಲ ಕೇಂದ್ರ ‘ಕರ್ನಾಟಕ ವಯಸ್ಕರ ಶಿಕ್ಷಣ ಸಮಿತಿ’ ಬೆಂಗಳೂರು.

Hegade M. Chandrashekar 1976-77. ‘Kudubi In : Kundadarshan’,  Bhandarkar’s College Magzine, Kundapur

Raghava Rao D.V., 1968, ‘Ritual Activity in Kudmbi Society, Folklore’ 9(4) : 132-139

Krishnayya, 1987, Holi Festival of Kudubis,  Prasaranga RRC No.14, April, Udupi