ಕುರುಹಿನಶೆಟ್ಟಿ ಸಮುದಾಯದ ಮೂಲಪುರುಷ ಒಂದು ಕುರುಹು ಮಾಡಿದ್ದರಿಂದ ಇವರಿಗೆ ಕುರುಹಿನಶೆಟ್ಟಿ ಎಂದು ಕರೆಯುತ್ತಾರೆ. ಕುರುಹಿನ ಶೆಟ್ಟಿಯರಿಗೆ ನೆಯ್ಗಿ, ಥೊಗ್ಟ ಹಾಗೂ ಬಿಳಿಮಗ್ಗ ಎಂದೂ ಕರೆಯುತ್ತಾರೆ. ಇವರು ಕರ್ನಾಟಕ ಮತ್ತು ಆಂಧ್ರಪ್ರದೇಶದ ಇವರನ್ನು ‘’ಕುರುನಿ’ ಎಂದು ಕರೆಯುತ್ತಾರೆ. ಥರ್ಸ್ಟನ್ ೧೯೦೧ರ ಗಣತಿಯನ್ನು ಆಧರಿಸಿ ಹೀಗೆ ಹೇಳುತ್ತಾರೆ. ‘‘ಕುರನಿ ಎನ್ನು ಪದವು ಕುರಿ ಎನ್ನುವ ಪದದ ಹಾಗೂ ‘ವನ್ನಿ’ ಉಣ್ಣೆ ಎನ್ನು ಪದಗಳ ವಿಕೃತ ರೂಪ. ಈ ಸಮುದಾಯದವರು ಸಾಂಪ್ರದಾಯಿಕವಾಗಿ ‘ಉಣ್ಣೆಯಿಂದ ನೇಯುವವರಾಗಿದ್ದರಿಂದ’ ಈ ಹೆಸರು ಪಡೆದಿರಬಹುದು. ‘‘ಈ ಸಮುದಾಯದ ಹೆಸರು ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ‘ಕುರುಹಿನ ಶೆಟ್ಟಿ ವೀರಶೈವ’ ಎಂದಿತ್ತು” ಎಂದು ಥರ್ಸ್ಟನ್ ಹೇಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಉಪಜಾತಿಯಾಗಿ ಕುರುಹಿನ ಶೆಟ್ಟಿಗಳು ಗುರುತಿಸಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ ಇವರು ಬೆಂಗಳೂರು, ಮೈಸೂರು, ಬಳ್ಳಾರಿ, ರಾಯಚೂರು, ಕೊಪ್ಪಳ, ತುಮಕೂರು, ಚಿತ್ರದುರ್ಗ, ಬಿಜಾಪುರ, ಧಾರವಾಡ, ಕೋಲಾರ ಮತ್ತು ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತೆಲುಗು ಮತ್ತು ಕನ್ನಡ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಅರವತ್ತಾರು ಬೆಡಗುಗಳಿವೆ. ಬನ್ನಿ, ಕರ್ರೆ, ಅನಂತ, ಸೂರ್ಯ, ಹಂಚಿ, ನೆಲ್ಲಿ ಇವರ ಬೆಡಗುಗಳಲ್ಲಿ ಕೆಲವು. ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಬೆಡಗುಗಳ ಮಟ್ಟದ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ವಿವಾಹ ವಿಚ್ಛೇದನೆಗೆ ಅವಕಾಶವಿದ್ದರೂ ಅಂಥಹ ಉದಾಹರಣೆಗಳು ಕಡಿಮೆ. ಮದುವೆಯ ಆಚರಣೆಗಳು ವಧುವಿನ ಮನೆಯಲ್ಲಿ ನಡೆಯುತ್ತವೆ. ಗಂಡು ಮಗುವನ್ನು ವಂಶೋದ್ಧಾರಕನೆಂದು ತಿಳಿಯುತ್ತಾರೆ, ತಂದೆ ನಂತರ ಕುಟುಂಬದ ಹಿರಿಯ ಮಗನಿಗೆ ವಾರಸುದಾರಿಗೆ ಬರುತ್ತದೆ. ‘ಸೀಮಂತ’ ಎನ್ನುವ ಕಾರ್ಯವನ್ನು ಗರ್ಭಿಣಿಯಾದ ಐದನೆಯ ಅಥವಾ ಏಳನೆಯ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ನಾಮಕರಣ ಹಾಗು ಜವಳ ಕಾರ್ಯಗಳನ್ನು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಆಚರಿಸುತ್ತಾರೆ. ಶವವವನ್ನು ಹೂಳುವ ಹಾಗೂ ಸುಡುವ ಎರಡೂ ಪದ್ಧತಿಗಳು ಆಚರಣೆಯಲ್ಲಿವೆ. ಸಾವಿನ ಸೂತಕ ಹತ್ತು ದಿನಗಳವರೆಗೆ ಇರುತ್ತದೆ. ಹನ್ನೊಂದನೇ ದಿನ ಧಾರ್ಮಿಕ ಕಾರ್ಯವನ್ನು ಮಾಡುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಬಟ್ಟೆಯನ್ನು ನೇಯುವುದು. ಆದರೆ ಈಗ ಇವರ ಸಾಂಪ್ರಾದಯಿಕ ವೃತ್ತಿ ಇಳಿಮುಖವಾಗಿದೆ. ಜಮೀನು ಇರುವ ಕೆಲವರು ಉಳುಮೆ ಮಾಡುತ್ತಿದ್ದಾರೆ. ಕೆಲವರು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಹಾಗೂ ಸ್ವಯಂ ಉದ್ಯೋಗಗಳನ್ನು ಮಾಡಿಕೊಂಡಿದ್ದಾರೆ. ರಾಜಮಟ್ಟದಲ್ಲಿ “ಕುರುಹಿನ ಶೆಟ್ಟಿ ಸಂಘ” ಎನ್ನು ಸಮುದಾಯ ಸಂಘಟನೆಯಿದೆ. ಈ ಸಂಘಟನೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿಯೂ ಇದೆ. ಇವು ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ದುಡಿಯುತ್ತಿವೆ.

ಇವರಲ್ಲಿ ಕೆಲವರು ಇತ್ತೀಚೆಗೆ ಆಧುನಿಕ ವೃತ್ತಿಗಳಲ್ಲಿ ತೊಡಗಿದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಇವರಿಗೆ ಒಲವಿದೆ. ಆಧುನಿಕ ಅಭಿವೃದ್ಧಿ ಕಾಯ್ಯಕ್ರಮಗಳನ್ನು ಉಪಯೋಗಿಸಿಕೊಳ್ಳುತ್ತಾರೆ.