ಕುಲಾಲರನ್ನು ‘ಮೂಲ್ಯ’ ಎಂದು ಕರೆಯುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಮಾತೃಮೂಲದ ಹೊರಬಾಂಧವ್ಯದ ಬೆಡಗುಗಳಿವೆ – ಬಂಗೇರ, ಸಲಿಯಾನ, ಬಂಗೆನ ಅಥವಾ ಬೆಂಜೆನ, ಉಪ್ಪೆನ, ಅರ್ಚನ ಕುಲಿ, ಇತ್ಯಾದಿ. ಮೂಲ್ಯ, ಹಂಡ, ಬಂಗೇರ ಹಾಗು ಬಜ್ಜನ ಇವರ ಮನೆತನದ ಹೆಸರುಗಳು. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ಇತ್ತೀಚಿಗೆ ಇವರ ವಂಶಪಾರಂಪರ್ಯವು ಗಂಡು ಮಕ್ಕಳತ್ತ ವಾಲುತ್ತಿದೆ. ಹೆಂಗಸರು ಮನೆಯ ಆರ್ತಿ, ಸಮಾಜಿಕ ಹಾಗೂ ಧಾರ್ಮಿಕ ಆಚರಣೆಯಾದ ‘ಬಯಕೆ’ ಕಾರ್ಯವನ್ನು ಬಸುರಿಯ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಜನನ ಸೂತಕವನ್ನು ಹದಿನಾರು ದಿನ ಆಚರಿಸಿ, ನಂತರ ನಾಮಕರಣವನ್ನು ಮಾಡುತ್ತಾರೆ. ಶವವನ್ನು ಸುಟ್ಟು ಮೂಳೆಗಳನ್ನು ನೀರಿನಲ್ಲಿ ಬಿಡುತ್ತಾರೆ. ಸಾವಿನ ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ, ‘ಬೊಜ್ಜ’ ಎಂಬ ತಿಥಿ ಕಾರ್ಯವನ್ನು ಮಾಡುತ್ತಾರೆ.

ಕುಲಾಲರ ಪ್ರಮುಖ ವೃತ್ತಿಗಳು ಎಂದರೆ ವ್ಯವಸಾಯ, ಕೂಲಿ ಕೆಲಸ, ಬೀಡಿ ಸುತ್ತುವುದು ಇತ್ಯಾದಿ. ಸಾಂಪ್ರದಾಯಿಕವಾದ ಜಾತಿಯ ಸಂಘಟನೆ ಇದರಲ್ಲಿದೆ. ಅದು ಒಳಜಗಳಗಳನ್ನು ಬಗೆಹರಿಸುತ್ತದೆ. ತಪ್ಪಿತಸ್ಥರಿಗೆ ದಂಡ ವಿಧಿಸುತ್ತದೆ. “ದಕ್ಷಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ” ಇವರ ಅಭಿವೃದ್ಧಿಗಾಗಿ ಕೆಲಸಮಾಡುತ್ತಿದೆ. ಕುಲಾಲರು ಶಿವ, ಪಾರ್ವತಿ, ಗಣೇಶ, ವಿಷ್ಣು, ವೆಂಕಟರಮಣ ಮತ್ತು ಲಕ್ಷ್ಮಿ ಇತ್ಯಾದಿ ದೇವರುಗಳನ್ನು ಪೂಜಿಸಿ, ಕೆಲವು ಭೂತಗಳನ್ನು ಆರಾಧಿಸುತ್ತಾರೆ. ಬ್ರಾಹ್ಮಣ ಪುರೋಹಿತರು ಮದುವೆಗಳನ್ನು ನಡೆಸಿಕೊಡುತ್ತಾರೆ. ಉಗಾದಿ, ದೀಪಾವಳಿ, ಸಂಕ್ರಾಂತಿ, ಗಣೇಶಚತುರ್ಥಿ ಮತ್ತಿತರ ಹಬ್ಬಗಳನ್ನು ಆಚರಿಸುತ್ತಾರೆ. ಗಂಡಸರು ಹಾಗೂ ಹೆಂಗಸರು ಜಾನಪದ ಹಾಡುಗಳನ್ನು ಹಾಡುತ್ತಾರೆ.

ಭೂತಾರಾಧನೆಯ ಹಬ್ಬಗಳಾದ ಗೊಲಿಗಾಸುಡಿ, ಪಂಜುರ್ಲಿ ಹಾಗೂ ಹಾಲ್ಗುಡಿ ಇತ್ಯಾದಿ ಹಬ್ಬಗಳಲ್ಲಿ ಆಚರಿಸುತ್ತಾರೆ. ಈ ಸಮುದಾಯದಲ್ಲಿ ಕೆಲವರು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳಲ್ಲಿರುವವರು ಹಾಗೂ ರಾಜಕಾರಣಿಗಳು ಇದ್ದಾರೆ. ಆಧುನಿಕ ವಿದ್ಯಾಭ್ಯಾಸಕ್ಕೆ ಹುಡುಗರಿಗೆ ಪ್ರೋತ್ಸಾಹವಿದ್ದರೂ, ಹುಡುಗಿಯರಿಗೆ ಹೆಚ್ಚು ಪ್ರೋತ್ಸಾಹವಿಲ್ಲ. ಆಧುನಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳೆರಡರ ಬಗ್ಗೆ ಒಲವಿದೆ. ಸರಕಾರದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಇಲಾಖೆಯಿಂದ ಆರ್ಥಿಕ ಸಹಾಯಧನ ಪಡೆದು ಕೆಲವರು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಉಪಯೋಗವನ್ನು ಪಡೆದುಕೊಳ್ಳಬೇಕಾಗಿದೆ.