ಕೂಸರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಥರ್ಸ್ಟನ್ (೧೯೦೧)ರ ಪ್ರಕಾರ, ‘ಕೂಸರು ದಕ್ಷಿಣ ಕನ್ನಡದ ಹೊಲೆಯರ ಒಂದು ಉಪಪಂಗಡ’ ಇವರು ತಮ್ಮನ್ನು ಉಪ್ಪಾರರೆಂದು ಕರೆದುಕೊಳ್ಳುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಉಪ್ಪಾರ, ವಡ್ಡ ಮತ್ತು ಮೇರ ಸಮುದಾಯದವರನ್ನು ಕೂಸಾಳರು ಎಂಬುದಾಗಿ ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸಮುದಾಯದ ಜನರಿಗೆ ಸೇರಿದ ಒಂದು ಮಠವಿರುವುದು ತಿಳಿದು ಬರುತ್ತದೆ. ಮೂಲತಃ ಕೂಸಾಳು ಎಂದು ಕರೆಯುವ ಇವರು ಕೃಷಿಕ ಕೂಲಿಕಾರಾಗಿರುವ ಹಾಗೂ ಸುಣ್ಣ ತಯಾರಿಸುವ ಒಂದು ಪುಟ್ಟ ಸಮುದಾಯ. ಆದರೆ ಕೆವಲು ವಿದ್ವಾಂಸರು ಕೂಸ ಎಂಬ ಪ್ರತ್ಯೇಕ ಸಮುದಾಯವಾಗಲಿ, ಉಪ ಪಂಗಡವಾಗಲಿ ಇಲ್ಲವೆಂದು ವಾದಿಸುತ್ತಾರೆ. ನಮ್ಮ ಅಧ್ಯಯನದಲ್ಲಿ ಈ ಸಮುದಾಯ ಅತ್ಯಂತ ವಿರಳವಾದ ಜನಸಂಖ್ಯೆ ಹೊಂದಿರುವದು ತಿಳಿದುಬರುತ್ತದೆ.

ಕೂಸರನ್ನು ಹಲವಾರು ಹೊರಬಾಂಧವ್ಯ ಬಳ್ಳಿಗಳಾಗಿ ವಿಂಗಡಿಸಲಾಗಿದೆ – ಶೆಟ್ಟಿ, ಶಿರನ, ತೋಳರ, ಇತ್ಯಾದಿ. ಸಮುದಾಯದ ಹಂತದಲ್ಲಿ ಒಳಬಾಂಧವ್ಯ ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಮದುವೆ ತಂದೆಯ ಸಹೋದರಿಯ ಮಗಳು ಅಥವಾ ತಾಯಿಯ ಸಹೋದರನ ಮಗಳ ಜೊತೆ ಸಾಧ್ಯವಿದೆ. ಸಹೋದರಿಯ ಮಗನಿಗೆ ಮನೆಯ ವಾರಸುದಾರಿಕೆ ಲಭಿಸುತ್ತದೆ. ಹೆಂಗಸರು ಕುಟುಂಬದ ಆದಾಯಕ್ಕೆ ಸಹಾಯಮಾಡಿ, ಮನೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ.

ಕೂಸರ ಸಾಂಪ್ರದಾಯಿಕ ಹಾಗೂ ಈಗಿನ ವೃತ್ತಿ ವ್ಯವಸಾಯದಲ್ಲಿ ದಿನಗೂಲಿಗಳಾಗಿ ದುಡಿಯುವುದು. ಆಧುನಿಕ ಶಿಕ್ಷಣವನ್ನು ಗಂಡು ಮಕ್ಕಳಿಗೆ ಕೊಡಿಸುವ ಬಗ್ಗೆ ಇವರಿಗೆ ಒಲವಿದೆ. ಆದರೆ ಹೆಣ್ಣು ಮಕ್ಕಲ ಶಿ‌ಕ್ಷಣದ ಬಗ್ಗೆ ಆಕಸ್ತಿ ಇಲ್ಲ. ಆಧುನಿಕ ಸಾಮಾಜಿಕ ವ್ಯವಸ್ಥೆಗಳಿಂದ ದೊರಕುವ ಅಭವೃದ್ಧಿ ಕಾರ್ಯಕ್ರಮಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳು ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.